(ಚಲಂರವರ ತೆಲುಗು ಬರಹ ವಿನಾಯಕ ಚೌತಿಯ ಅನುವಾದ)
ಹುಡುಗ: ಅಪ್ಪ, ನಿಜವಾಗಲೂ ವಿನಾಯಕ ದೇವರೇನಾ?
ಅಪ್ಪ: ಯಾಕಾ ಸಂದೇಹ?
ಹುಡುಗ: ಏನೋ ಆ ಸೊಂಡಿಲು, ಬೊಜ್ಜು ನೋಡುತ್ತಿದ್ದರೆ ನಗು ಬರುತ್ತೆ.
ಅಪ್ಪ: ಹಾಗೆ ನಗಬಾರದು. ಕಥೆ ಗೊತ್ತಲ್ವಾ ನಿನಗೆ, ಆನೆ ತಲೆ ಹೇಗೆ ಬಂತು ಅಂತಾ?
ಹುಡುಗ: ಗೊತ್ತು ಬಿಡು, ಆ ಹಿಟ್ಟಿನ ಬೊಂಬೆ ದೊಡ್ಡದಾಗಿದ್ದು. ದೇವರುಗಳು ಕೂಡ ಬೆಳೆಯುತ್ತಾರಾ?
ಅಪ್ಪ: ಹೌದು.
ಹುಡುಗ: ಎಷ್ಟು ದೊಡ್ಡವರಾಗುತ್ತಾರೆ? ಮುದುಕರಾಗುತ್ತಾರಾ?
(ತಂದೆಗೇ ಸಂದೇಹ ಬಂತು. ಅವನು ಯಾವತ್ತೂ ಅದರ ಬಗ್ಗೆ ಯೋಚಿಸಿರಲಿಲ್ಲ)
ಅಪ್ಪ: ಅವರಿಗೆ ವೃದ್ಧಾಪ್ಯ ಇಲ್ಲ.
ಹುಡುಗ: ಹಾಗಾದರೆ ದೊಡ್ಡವರಾಗಿ ಏನಾಗುತ್ತಾರೆ? ಬರೀ ಎತ್ತರಕ್ಕೆ ಬೆಳೆಯುವುದೇನಾ?...... ಸತ್ತುಹೋಗ್ತಾರಾ?
ಅಪ್ಪ: ಅವರಿಗೆ ಸಾವಿಲ್ಲ.
ಹುಡುಗ: ಬೆಳೆಯಲು ಅವರು ತಿನ್ನಬೇಕಲ್ವಾ. ತಿಂತಾರಾ?
ಅಪ್ಪ: ಅವರೇನೋ ಅಮೃತ ಕುಡಿಯುತ್ತಾರೆ ಅಂತಾರೆ.
ಹುಡುಗ: ಅಮೃತ ಕುಡಿದು ಬೆಳೆಯುತ್ತಾರೆ ಅಂತಾನಾ. ಅಮೃತ ಅಂದರೆ ಬೆಳೆಯುತ್ತಾ? ಅದು ಎಲ್ಲಿ ಸಿಗುತ್ತೆ? ಅದನ್ನು ತಿಂತಾರಾ? ಕುಡಿಯುತ್ತಾರಾ?
ಅಪ್ಪ: ಗೊತ್ತಿಲ್ಲ ಕಣೊ.
ಹುಡುಗ: ಈ ದೇವರ ಸಂಗತಿ ಯಾರಿಗೆ ಗೊತ್ತು? ಹೇಗೆ ಗೊತ್ತು?
ಅಪ್ಪ: ಹಿಂದಿನ ಕಲದ ಋಷಿಗಳು ಪುರಾಣಗಳಲ್ಲಿ ಬರೆದಿದ್ದಾರೆ. ದೇವರು ಅವರಿಗೆ ಹೇಳಿದ್ದಾರೆ.
ಹುಡುಗ: ಏನೂ ತಿನ್ನದಿದ್ದರೆ ಅಷ್ಟು ದೊಡ್ಡ ಬಾಯಿ - ಸೊಂಡಿಲು ಏತಕ್ಕೆ ವಿನಾಯಕನಿಗೆ?
ಅಪ್ಪ: ಸುಮ್ಮನೆ ಆಕಾರಕ್ಕೋಸ್ಕರ.
ಹುಡುಗ: ಈ ಬೊಂಬೆಗಳು ಮಾತ್ರಾನಾ, ನಿಜವಾಗಲೂ ವಿನಾಯಕ ಇದ್ದಾನಾ?
ಅಪ್ಪ: ಇರದೆ ಏನು?
ಹುಡುಗ: ನಾವು ನೈವೇದ್ಯ ಅಂತ ಈ ಉಂಡೆಗಳನ್ನು ಇಟ್ಟರೆ ತಿಂತಾನಾ?
ಅಪ್ಪ: ತಿನ್ನದೇ ಏನು?
ಹುಡುಗ: ಅಮೃತ ಬಿಟ್ಟು ಬೇರೆ ಏನೂ ತಿನ್ನುವುದಿಲ್ಲ ಎಂದೆ?
ಅಪ್ಪ: ನಮ್ಮ ನೈವೇದ್ಯ ತಿಂತಾನೆ.
ಹುಡುಗ: ಇಷ್ಟವಿದ್ದರು, ಇಷ್ಟವಿಲ್ಲದಿದ್ದರೂ. ಹೊಟ್ಟೆ ತುಂಬಿದರೂ, ನಾವು ಇಟ್ಟಿದ್ದನ್ನು ತಿನ್ನಲೇಬೇಕಲ್ಲವೆ? ಎಷ್ಟೊಂದು ಉಂಡೆಗಳು, ಎಷ್ಟೊಂದು ಜನ ಇಡ್ತಾರಲ್ವಾ?
ಅಪ್ಪ: ತಿನ್ನುವುದಿಲ್ಲ.
ಹುಡುಗ: ಅದೇನಪ್ಪ. ಈಗ ಹೀಗೆ ಹೇಳ್ತಾ ಇದ್ದೀಯ. ಒಂದೊಂದು ಸಾರಿ ಒಂದೊಂದು ಹೇಳ್ತಾ ಇದ್ದೀಯ?
ಅಪ್ಪ: ಮತ್ತೆ ನೀನು ಕೇಳುವ ಪ್ರಶ್ನೆಗಳು ಹಾಗಿವೆ.
ಹುಡುಗ: ನನಗೆ ಗೊತ್ತಿಲ್ಲ ಅಂತ ತಾನೆ ನಿನ್ನನ್ನು ಕೇಳುವುದು? ನನ್ನ ಪ್ರಶ್ನೆಗಳು ಹೇಗಿವೆ. ಸರಿಯಾಗಿಯೇ ಕೇಳಿದ್ದೇನೆ? ವಿನಾಯಕಾನೇ ತಿಂತಾನಾ? ಮತ್ತೆ ಉಂಡೆಗಳೆಲ್ಲ ಹಾಗೆ ಇರ್ತಾವೆ?
ಅಪ್ಪ: ರುಚಿ ನೋಡುತ್ತಾನೆ.
ಹುಡುಗ: ಉಂಡೆಗಳಿಗೆ ರುಚಿ ಏನಿದೆ? ತಿನ್ನುವವರು ಯರು? ಈ ಬೊಂಬೆಯಾ? ಕೈಲಾಸದಲ್ಲಿರುವ ವಿನಾಯಕಾನಾ? ಈ ಬೊಂಬೆ ತಿಂದರೆ ನಮಗೇನು? ಅದು ನಿಜವಾದ ವಿನಾಯಕ ತಿನ್ನಬೇಕಲ್ಲವೇ?
ಅಪ್ಪ: ನೀನು ಇಲ್ಲಿ ನೈವೇದ್ಯ ಇಟ್ಟರೆ ಅಲ್ಲಿ ವಿನಾಯಕನಿಗೆ ಸೇರುತ್ತದೆ.
ಹುಡುಗ: ಹೇಗೆ ಸೇರುತ್ತದೆ ಅಪ್ಪ? ಎಲ್ಲಾ ಇಂತಹವೇ ಹೇಳ್ತೀಯ?
ಅಪ್ಪ: ಏನೋ ತಲುಪುತ್ತದೆ ಅಂತಾರೆ.
ಹುಡುಗ: ಆ ವಿನಾಯಕನಿಗೆ ಗೊತ್ತಾಗುತ್ತಾ ಯಾರ್ಯಾರು ಎಷ್ಟೆಷ್ಟು ನೈವೇದ್ಯ ಇಡುತ್ತಾರೆ ಅಂತಾ?
ಅಪ್ಪ: ಮೇಲಿಂದ ಎಲ್ಲಾ ನೋಡ್ತಾನೆ.
ಹುಡುಗ: ಸರಿಯಾಗಿ ಹೇಳು ಅಪ್ಪ. ವಿನಾಯಕ ಎಲ್ಲಿದ್ದಾನೆ? ಕೈಲಾಸದಲ್ಲಾ? ಅವನಿಗೆ ಹೊಟ್ಟೆ, ಸೊಂಡಿಲು ಇದೆಯಲ್ಲಾ, ಹೇಗೆ ಇರುತ್ತಾನೆ?
ಅಪ್ಪ: ವಿನಾಯಕ ಅಂತಾ ಗೊತ್ತಾಗಲಿ ಅಂತ ಒಂದು ರೂಪ ಕೊಟ್ಟಿದ್ದಾರೆ. ಅವನಿಗೆ ಶರೀರ ಇಲ್ಲ.
ಹುಡುಗ: ಇಲ್ಲದಿದ್ದರೆ ಉಂಡೆಯನ್ನು ಹೇಗೆ ತಿಂತಾನೆ?
ಅಪ್ಪ: ಏನೋ ಕಣೊ ನನ್ನನ್ನು ಸಾಯಿಸಬೇಡ. ಅದನ್ನು ಇಟ್ಟವರನ್ನು ಕೇಳು.
ಹುಡುಗ: ಯಾರು ಇಟ್ಟವರು?
ಅಪ್ಪ: ಯಾರೋ ದೊಡ್ಡವರು.
ಹುಡುಗ: ಅವರು ಎಲ್ಲಿದ್ದಾರೆ?
ಅಪ್ಪ: ಸತ್ತುಹೋಗಿದ್ದಾರೆ.
ಹುಡುಗ: ಅವರಿಗೆ ಗೊತ್ತು ಅಂತಾ ನಿನಗೆ ಹೇಗೆ ಗೊತ್ತು?
ಅಪ್ಪ: ಏನೋ ಕಣೋ ಎಲ್ಲರೂ ಹಾಗೆ ಹೇಳ್ತಾರೆ.
ಹುಡುಗ: ಕೆಲವರು ಮಾಡುವುದಿಲ್ಲವಲ್ಲ.
ಅಪ್ಪ: ಅವರ ಇಷ್ಟ.
ಹುಡುಗ: ನಮ್ಮ ಇಷ್ಟ ಅಲ್ಲವಾ? ಬೆಳಿಗೆ ಎದ್ದು ಚಳಿಯಲ್ಲ್ಲಿ ತಲೆಗೆ ಸ್ನಾನ ಮಾಡಿಸು ಅಂದಿದ್ದಾರಾ ಆ ದೊಡ್ಡವರು. ಹೇಳಿದ್ದಾರೋ ಇಲ್ಲವೊ ನಿನಗೆ ಹೇಗೆ ಗೊತ್ತು?
ಅಪ್ಪ: ಏನೋ ಎಲ್ಲರೂ. . .
ಹುಡುಗ: ಎಲ್ಲರೂ ಸಿಗರೇಟು ಸುಡುತ್ತಾರಾಲ್ವಾ, ನೀನ್ಯಾಕೆ ಸೇದುವುದಿಲ್ಲ?
ಅಪ್ಪ: ಅವರು ಒಳ್ಳೆಯವರಲ್ಲ.
ಹುಡುಗ: ಸಿಗರೇಟು ಸೇದುವವರು ಒಳ್ಳೆಯವರಲ್ವಾ?
ಅಪ್ಪ: ಅಲ್ಲ.
ಹುಡುಗ: ಚಿಕ್ಕಪ್ಪ್ಪ?
ಅಪ್ಪ: ಒಳ್ಳೆಯವನೇ, ಆದರೆ ಆ ಸಿಗರೇಟು. . .
ಹುಡುಗ: ಸೇದುವವರು ಒಳ್ಳೆಯವರಲ್ಲ ಅಂದೆ?
ಅಪ್ಪ: ಆ.
ಹುಡುಗ: ಸರಿ ತಮ್ಮನಿಗೆ ಹನ್ನೆರಡು ವರ್ಷಗಳಾದಾಗ ಅರಿಶಿನ ಹಚ್ಚಿದ್ದೀರಲ್ಲ, ವಿಘ್ನೇಶ್ವರ ಎಂದಿರಲ್ಲ, ಆ ಮುದ್ದೆ ಕೂಡ ವಿನಾಯಕನಾ?
ಅಪ್ಪ: ಅರಿಶಿನ ಶುಭ ಅದಕ್ಕೆ.
ಹುಡುಗ: ಶುಭ ಅಂದರೆ?
ಅಪ್ಪ: ಒಳ್ಳೆಯದು ಮಾಡುತ್ತೆ.
ಹುಡುಗ: ಯಾರಿಗೆ?
ಅಪ್ಪ: ನಮಗೆ.
ಹುಡುಗ: ಏನು ಒಳ್ಳೆಯದು?
ಅಪ್ಪ: ಎಲ್ಲವೂ.
ಹುಡುಗ: ಏನು ಮಾಡಿದ್ರೆ?
ಅಪ್ಪ: ಅರಿಶಿನ ಉಪಯೋಗಿಸಿದರೆ.
ಹುಡುಗ: ಹೇಗೆ?
ಅಪ್ಪ: ಏನೋ ಕಣೊ ಹೋಗು.
ಹುಡುಗ: ಹಾಗಿದ್ರೆ ನೀನೇಕೆ ಅರಿಶಿನ ಹಚ್ಚಿಕೊಳ್ಳುವುದಿಲ್ಲ?
ಅಪ್ಪ: ಹೆಂಗಸರು. . . .
ಹುಡುಗ: ಏಕೆ ಗಂಡಸರಿಗೆ ಶುಭವಾಗುವುದು ಬೇಡವೇ?
ಅಪ್ಪ: ಅವರಿಗೆ ಬೇರೆ
ಹುಡುಗ: ಬೇರೆ ಏನು?
ಅಪ್ಪ: ಅದು ಹೇಳೋಕಾಗಲ್ಲ ಕಣೊ.
ಹುಡುಗ: ಸರಿ ಶುಭ ಅಂದ್ರೆ?
ಅಪ್ಪ: ಅದರಲ್ಲಿ ವಿನಾಯಕ ಇರ್ತಾನೆ ಅಂತಾ.
ಹುಡುಗ: ಅರಿಶಿನದಲ್ಲಿನಾ?
ಅಪ್ಪ: ಹೌದು.
ಹುಡುಗ: ಅರಿಶಿನದಲ್ಲಿ ಹೇಗೆ ಇರ್ತಾನೆ ಅಪ್ಪ?
ಅಪ್ಪ: ಏನೋ ಗೊತ್ತಿಲ್ಲ ಕಣೊ.
ಹುಡುಗ: ಇನ್ನೂ ಶುಭವೆನ್ನುವುದು ಬೇರೆ ಏನಾದರೂ ಇದೆಯಾ?
ಅಪ್ಪ: ಇವೆ.
ಹುಡುಗ: ಅದರಲ್ಲಿ ಕೂಡ ಇರ್ತಾನಾ?
ಅಪ್ಪ: ಬೇರೆ ದೇವತೆಗಳು ಇರ್ತಾರೆ.
ಹುಡುಗ: ಮಣ್ಣಿನಲ್ಲಿ ವಿನಾಯಕನನ್ನು ಮಾಡ್ತಾರಲ್ಲ, ಮಣ್ಣಿನಲ್ಲೂ ಇರ್ತಾನಾ?
ಅಪ್ಪ: ಹೌದು.
ಹುಡುಗ: ಮಣ್ಣು ಕೂಡ ಶುಭಾನಾ?
ಅಪ್ಪ: ಶುದ್ಧವಾಗಿರುವ ಮಣ್ಣು.
ಹುಡುಗ: ಹಾಗಿದ್ದರೆ ಅರಿಶಿನ ಕೊಂಡುಕೊಳ್ಳುವುದು ಏಕೆ?
ಅಪ್ಪ: ನನಗೆ ಗೊತ್ತಿಲ್ಲ.
ಹುಡುಗ: ನೀನು ಕೊಂಡುಕೊಳ್ತೀಯಾ, ಮತ್ತೆ ಗೊತ್ತಿಲ್ಲ ಅಂತೀಯ. ನನಗೇನಾದರೂ ಗೊತ್ತಿಲ್ಲದೆ ಕೊಂಡುಕೊಂಡರೆ ಸುಮ್ಮನೆ ಇರ್ತೀಯಾ? ನಾನು ಚೆನ್ನಾಗಿದೆ ಅಂದರೂ ಒಪ್ಪಿಕೊಳ್ಳುವುದಿಲ್ಲವಲ್ಲ.
ಅಪ್ಪ: ಚಿಕ್ಕವನು ಅಂತಾ.
ಹುಡುಗ: ದೊಡ್ಡವರು ಗೊತ್ತಿಲ್ಲದೆಯೇ ಎಲ್ಲವನ್ನೂ ಕೊಳ್ತಾರಲ್ಲ. ನೀವೆ ನಮಗೆ ಈ ಬುದ್ಧಿ ಇರದ ಕೆಲಸಗಳನ್ನು ಕಲಿಸುವುದು. ಶುಭವಾಗಿರೋದರಲ್ಲಿ ಮಾತ್ರಾನಾ ವಿನಾಯಕ ಇರುವುದು? ದೇವರು ಎಲ್ಲದರಲ್ಲಿಯೂ ಇರ್ತಾನೆ ಅಂತೀರಾ?
ಅಪ್ಪ: ಇರ್ತಾನೆ.
ಹುಡುಗ: ಮತ್ತೆ ಎಲ್ಲವನ್ನೂ ಪೂಜೆ ಮಾಡುವುದಿಲ್ಲ?
ಅಪ್ಪ: ಏನೋ ಕೆಲವನ್ನು ಮಾತ್ರ ಪೂಜೆಗೆ ಆರಿಸಿಕೊಂಡಿದ್ದಾರೆ.
ಹುಡುಗ: ನಾನು ಬೇರೆಯದನ್ನು ಆರಿಸಿಕೊಂಡರೆ?
ಅಪ್ಪ: ಆರಿಸಿಕೊ.
ಹುಡುಗ: ಹಾಗಿದ್ದರೆ ನಾನು ನನ್ನ ನಾಯಿಮರಿಯನ್ನು ಆರಿಸಿಕೊಳ್ಳುತ್ತೇನೆ.
ಅಪ್ಪ: ಛಿ, ನಾಯಿಮರಿನಾ?
ಹುಡುಗ: ಅದರಲ್ಲಿ ದೇವರಿಲ್ಲವಾ?
ಅಪ್ಪ: ಇದ್ದಾನೆ, ಆದರೆ ಅದು ಗಲೀಜು.
ಹುಡುಗ: ನಾನು ಶುಭ್ರವಾಗಿ ಇಟ್ಟುಕೊಳ್ತೀನಿ. ಮತ್ತೆ ಅಜ್ಜಿ ಎಷ್ಟು ಗಲೀಜು... .
ಅಪ್ಪ: ಹಾಗೆ ಅನ್ನಬಾರದು, ದೊಡ್ಡವರನ್ನು.
ಹುಡುಗ: ಯಾಕೆ ಅನ್ನಬಾರದು? ಅವರು ಅಷ್ಟು ಗಲೀಜಾಗಿರ್ತಾರೆ.. .
ಅಪ್ಪ: ದೊಡ್ಡವರು.
ಹುಡುಗ: ಆದರೆ
ಅಪ್ಪ: ಅವರನ್ನು ಅನ್ನಬಾರದು.
ಹುಡುಗ: ಯಾಕೆ?
ಅಪ್ಪ: ತಪ್ಪು.
ಹುಡುಗ: ಯಾಕೆ ತಪ್ಪು? ಈ ತಪ್ಪುಗಳೆಲ್ಲ ನಿನಗೆ ಹೇಗೆ ಗೊತ್ತಾಯಿತು ಅಪ್ಪ? ಯಾರು ಮಾಡಿದ್ದು?
ಅಪ್ಪ: ಏನೋ ಕಣೋ. ಅದೆಲ್ಲ ಯಾಕೆ? ವಿನಾಯಕನ ಸಂಗತಿ ಮಾತನಾಡು.
ಹುಡುಗ: ಏನೋ, ಮಾತನಾಡಿದರೆ ಚಿಕ್ಕಮಕ್ಕಳಿಗೆ ಏನೂ ಗೊತ್ತಿಲ್ಲ ಅಂತೀರಾ. ದೊಡ್ಡವರಿಗೇ ಗೊತ್ತಿಲ್ಲ. ನಮಗೆ ಗೊತ್ತಿಲ್ಲ ಅಂತ ಸುಮ್ಮನಾಗ್ತೀವಿ. ನಿಮಗೆ ಗೊತ್ತು ಅಂತ ಹೇಳಿ ನಮ್ಮನ್ನು ದಬಾಯಿಸಿ ಸುಳ್ಳುಗಳನ್ನು ಹೇಳ್ತೀರಾ.
ಅಪ್ಪ: ನಾನು ಏನು ಸುಳ್ಳು ಹೇಳಿದೆ?
ಹುಡುಗ: ಅಮ್ಮ ಹೇಳ್ತಾಳೆ. ನೀನಾದರೂ ಒಂದಕ್ಕಾದರೂ ಸರಿಯಾಗಿ ಉತ್ತರ ಹೇಳಿದ್ಯಾ? ಮತ್ತೆ ವಿನಾಯಕ ಎಲ್ಲದರಲ್ಲೂ ಇದ್ದರೆ, ಮತ್ತೆ ಕೈಲಾಸದಲ್ಲಿದ್ದಾನೆ ಅಂತಾ ಯಾಕಂತಾರೆ?
ಅಪ್ಪ: ಅಲ್ಲಿ, ಇಲ್ಲಿ, ಎಲ್ಲಾ ಕಡೆ ಇರ್ತಾನೆ.
ಹುಡುಗ: ಹಾಗಿದ್ದರೆ ಕೈಲಾಸದಲ್ಲಿ ಇದ್ದಾನೆ ಅನ್ನೋದು ಏತಕ್ಕೆ? ಇಲ್ಲೇ ಇರುವವರನ್ನು?
ಅಪ್ಪ: ಅಲ್ಲಿ ಕಾಣಿಸುತ್ತಾರೇನೋ.
ಹುಡುಗ: ಯಾರಿಗೆ?
ಅಪ್ಪ: ಅಲ್ಲಿ ಋಷಿಗಳಿಗೆ, ದೇವತೆಗಳಿಗೆ.
ಹುಡುಗ: ಅಲ್ಲಿ ಅವರಿಗೆ ಕಾಣಿಸುತ್ತಾರಲ್ಲ?
ಅಪ್ಪ: ಇಲ್ಲಿ ಕಾಣಿಸುವುದಿಲ್ಲ.
ಹುಡುಗ: ಹಾಗಿದ್ದರೆ ಇಲ್ಲಿ ಇದ್ದಾರೆ ಅಂತಾ ನೋಡಿದವರು ಯಾರು?
ಅಪ್ಪ: ನನಗೆ ಗೊತ್ತಿಲ್ಲ ಕಣೊ.
ಹುಡುಗ: ವಿನಾಯಕನಿಗೆ ಹಸಿವು ಇಲ್ಲದಿದ್ದರೆ, ನೈವೇದ್ಯ ಇಡುವುದು ಯಾತಕ್ಕೆ?
ಅಪ್ಪ: ನಮ್ಮ ಭಕ್ತಿ ತೋರಿಸಿಕೊಳ್ಳಲು.
ಹುಡುಗ: ಎಲೆ, ಹೂವು ಸಾಲದಾ? ಹೋಗಲಿ ನನಗೆ ಸಂಡಿಗೆ ಇಷ್ಟ, ಅದನ್ನೇ ಇಟ್ಟರೆ?
ಅಪ್ಪ: ನಿನ್ನ ಇಷ್ಟದಂತಾ?
ಹುಡುಗ: ಮತ್ತೆ ಯಾರ ಇಷ್ಟದಂತೆ?
ಅಪ್ಪ: ವಿನಾಯಕನ ಇಷ್ಟ.
ಹುಡುಗ: ಹಸಿವು ಇಲ್ಲದವನಿಗೆ ಇಷ್ಟವೇನು?
ಅಪ್ಪ: ಅಲ್ಲಾ, ಋಷಿಗಳು ಆ ರೀತಿ ಇಡಿ ಅಂತಾ ಹೇಳಿದ್ದಾರೆ.
ಹುಡುಗ: ಅಂದರೆ ಋಷಿಗಳಿಗೆ ಅವೆಲ್ಲ ಇಷ್ಟ ಅಂತರ್ಥ. ನಾವು ಭಕ್ತಿ ಯಾತಕ್ಕೆ ತೋರಿಸಬೇಕು? ನನಗೇನೂ ಭಕ್ತಿ ಇಲ್ಲವೇ?
ಅಪ್ಪ: ನಮಸ್ಕಾರ ಮಾಡಿ ಪೂಜೆ ಮಾಡಿದರೆ ಭಕ್ತಿ ಇದ್ದಂತೆಯೇ.
ಹುಡುಗ: ದೇವರು ಅಂದುಕೊಳ್ತಾನಾ, ಭಕ್ತಿ ಇದೆ ಅಂತಾ?
ಅಪ್ಪ: ಹೌದು.
ಹುಡುಗ: ದೇವರಿಗೆ ತಿಳಿದುಕೊಳ್ಳಲು ಸಾಧ್ಯವಿಲ್ಲವಾ?
ಅಪ್ಪ: ನಮಸ್ಕಾರ ಹಾಕ್ತಾ ಇದ್ದರೆ ಭಕ್ತಿ ಅದಷ್ಟಕ್ಕೆ ಬರುತ್ತೆ.
ಹುಡುಗ: ಅಣ್ನ ಹೆಡ್ಮಾಷ್ಟರ್‍ಗೆ ದಿನಕ್ಕೆ ಐದು ಬಾರಿ ನಮಸ್ಕರಿಸುತ್ತಾನೆ, ಆದರೆ ಒಂಚೂರು ಭಕ್ತಿ ಇಲ್ಲ ಅವನಿಗೆ. ಇಷ್ಟು ವರ್ಷದಿಂದ ನೀನು ನಮಸ್ಕಾರ ಮಾಡ್ತಾನೆ ಇದ್ದೀಯ, ನಿನಗೇನೂ ಭಕ್ತಿ ಇಲ್ಲವಲ್ಲ ದೇವರ ಮೇಲೆ?
ಅಪ್ಪ: ಇಲ್ಲದೇ ಏನು?
ಹುಡುಗ: ಮತ್ತೆ ಎಷ್ಟೊಂದು ಸಾರಿ ದೇವರನ್ನು ಬೈದುಕೊಂಡಿದ್ದೀಯಾ? ನಿನಗೆ ಸರಿಯಾಗಿ ಸಂಬಳ ಬಾರದೇ ಇದ್ದಾಗ.
ಅಪ್ಪ: ಅದು ನನಗೆ ಬುದ್ದಿ ಇಲ್ಲದೆ.
ಹುಡುಗ: ನೀನು ಬುದ್ಧಿ ಕಡಿಮೆ ಇರುವವನಾ? ಮತ್ತೆ ನನ್ನನ್ನು ಯಾಕೆ ಬುದ್ಧಿ ಇಲ್ಲ ಅಂತಾ ಬೈತೀಯಾ?
ಅಪ್ಪ: ಸುಮ್ಮನೆ ಮಾತಿಗೆ ಹಾಗೆ ಹೇಳಿದೆ. ನಿನಗಿಂತ ಹೆಚ್ಚು ಬುದ್ಧಿ ಇದೆ. ದೇವರ ಮುಂದೆ ಬುದ್ಧಿ ಕಡಿಮೆಯೆ.
ಹುಡುಗ: ಇಷ್ಟು ವರ್ಷ ಪೂಜೆ ಮಾಡಿದೆಯಲ್ಲಾ, ಏನು ಬಂತು?
ಅಪ್ಪ: ನನಗೆ ಗೊತ್ತಿಲ್ಲ. ನಾವು ಮಾಡುವ ಪಾಪಗಳನ್ನು ಕ್ಷಮಿಸುತ್ತಾನೆ. ನಮಗೆ ಒಳ್ಳೆಯದನ್ನು ಮಾಡ್ತಾನೆ, ಈಶ್ವರ.
ಹುಡುಗ: ಪೂಜೆ ಅಂದ್ರೆ ಇಷ್ಟಾನಾ ಈಶ್ವರನಿಗೆ?
ಅಪ್ಪ: ಹೌದು.
ಹುಡುಗ: ತುಂಬಾ ಬಡಾಯಿಯವನಾ, ನಮ್ಮ ಊರು ಛೇರ್ಮನ್ ತರಾ?
ಅಪ್ಪ: ಅಲ್ಲ, ಪೂಜೆ ಮಾಡುವುದು ನಮ್ಮ ಧರ್ಮ.
ಹುಡುಗ: ಯಾಕೆ?
ಅಪ್ಪ: ಮತ್ತೆ ನನ್ನನ್ನು ಹುಟ್ಟಿಸಿಲ್ಲವಾ?
ಹುಡುಗ: ಹುಟ್ಟಿಸಿದರೆ ನನಗೇನು? ಹುಟ್ಟಿಸಬೇಡ ಅಂತ ಹೇಳು.
ಅಪ್ಪ: ಹೋಗಲಿ ಉಸಿರಾಡಲು ಗಾಳಿ, ಕುಡಿಯಲು ನೀರು . ..
ಹುಡುಗ: ಇವೆಲ್ಲ ಇಡದಿದ್ದರೆ ಅವನು ಹುಟ್ಟಿಸಿದವರು ಸತ್ತು ಹೋಗ್ತಾರೆ. ನನಗೋಸ್ಕರ ಇಟ್ಟನಾ? ಅಷ್ಟೊಂದು ಜನ ಪೂಜೆ ಮಾಡ್ತಾ ಇದ್ದರೆ ಅವೆಲ್ಲ ಲೆಕ್ಕ ಇಡ್ತಾ ಕೂತ್ಕೋತಾನಾ ದೇವರು? ಯಾರು ಎಷ್ಟು ನಮಸ್ಕಾರ ಹಾಕಿದರು? ಎಷ್ಟು ಹೂವ ಇಟ್ಟರು ಅಂತಾ?
ಅಪ್ಪ: ದೇವರಿಗೆ ಅವೆಲ್ಲ ಗೊತ್ತಾಗುತ್ತೆ.
ಹುಡುಗ: ಪೂಜೆ ಮಾಡದೆ ಇದ್ದರೆ ಈಶ್ವರನಿಗೆ ಕೋಪ ಬರುತ್ತಾ?
ಅಪ್ಪ: ಹೌದು ನಮ್ಮ ಧರ್ಮ ನಾವು ಮಾಡ್ತಾ ಇಲ್ಲವೆಂದು.
ಹುಡುಗ: ಯಾಕೆ ನಮ್ಮ ಧರ್ಮ? ಪೂಜೆ ಮಾಡುವುದಾ? ಹೋಗಲಿ ಮುಸಲ್ಮಾನರು ವಿನಾಯಕನ ಪೂಜೆ ಮಾಡುವುದಿಲ್ಲವಲ್ಲ, ಅವರ ಮೇಲೆ ಕೋಪಾನಾ?
ಅಪ್ಪ: ಅವರ ದೇವರನ್ನು ಅವರು ಪೂಜಿಸ್ತಾರೆ.
ಹುಡುಗ: ಮತ್ತೆ ವಿನಾಯಕನಿಗೆ ಕೋಪ ಬರೋಲ್ವ?
ಅಪ್ಪ: ಅವರು ಮಾಡಿದರೆ ಇಷ್ಟವಾಗೋಲ್ಲ.
ಹುಡುಗ: ಯಾಕೆ?
ಅಪ್ಪ: ಅವರು ಮುಸಲ್ಮಾನರು ಅದಕ್ಕೆ.
ಹುಡುಗ: ಅವರನ್ನು ಅವರ ದೇವರು ಹುಟ್ಟಿಸಿದನಾ?
ಅಪ್ಪ: (ಅನುಮಾನವಾಗಿ) ಹೌದು.
ಹುಡುಗ: ಹಾಗಿದ್ದರೆ ಅವರನ್ನು ಬೇರೆ ಲೋಕದಲ್ಲಿ ಸೃಷ್ಟಿಸದೆ ನಮ್ಮ ದೇವರ ಲೋಕದಲ್ಲಿ ಯಾಕೆ ಹುಟ್ಟಿಸಿದ್ದು? ಅವರ ದೇವರಿಗೆ ಲೋಕಗಳನ್ನು ಮಾಡುವುದು ಗೊತ್ತಿಲ್ಲವಾ?
ಅಪ್ಪ: (ವಿಧಿ ಇಲ್ಲದೆ) ಎಲ್ಲ ದೇವರುಗಳೂ ಒಂದೇ, ಹೆಸರುಗಳು ಮಾತ್ರ ಬೇರೆ.
ಹುಡುಗ: ಹಾಗಿದ್ದರೆ ನಾನು ಮುಸಲ್ಮಾನರ ದೇವರನ್ನು . .. .
ಅಪ್ಪ: ಸಾಧ್ಯವಿಲ್ಲ. ನೀನು ಮುಸಲ್ಮಾನ ಅಲ್ಲವಲ್ಲ?
ಹುಡುಗ: ಅವನು ಮುಸಲ್ಮಾನ ಹೇಗೆ ಆದ? ದೇವರು ಹೇಳಿದನಾ? ಹೇಗೆ ಗೊತ್ತಾಗುತ್ತೆ?
ಅಪ್ಪ: ಅದು ಒಂದು ಧರ್ಮ.
ಹುಡುಗ: ಧರ್ಮ ಅಂದರೆ?
ಅಪ್ಪ: ಈಗಲೆ ನಿನಗದೆಲ್ಲ ಗೊತ್ತಾಗುವುದಿಲ್ಲ ಕಣೊ.
ಹುಡುಗ: ಇಷ್ಟೊತ್ತಿನವರೆಗೆ ಬಹಳ ದೇವರಿದ್ದಾರೆ ಅಂದೆ. ಈಗ ಒಬ್ಬನೇ ಅಂತೀಯ. ಒಬ್ಬನೇ ಆದ್ರೆ ವಿನಾಯಕ ಇದ್ದಾನಾ, ಇಲ್ಲವಾ?
ಅಪ್ಪ: ಅವೆಲ್ಲ ದೇವರಿಗೆ ಹೆಸರುಗಳು. ಓದು ಬೇಕು ಅಂದ್ರೆ ವಿನಾಯಕ ಅಂತ ಪೂಜೆ ಮಾಡ್ತೀವಿ, ಹಣ ಬೇಕಂದ್ರೆ, ಲಕ್ಷ್ಮಿ ಅಂತಾ. . .
ಹುಡುಗ: ಓದು ಬೇಕು ಅಂದ್ರೆ ಲಕ್ಷ್ಮಿನಾ ಕೇಳಬಾರದಾ?
ಅಪ್ಪ: ಉಹೂ
ಹುಡುಗ: ಮುಸಲ್ಮಾನರು ವಿನಾಯಕನನ್ನು ಪೂಜೆ ಮಾಡುವುದಿಲ್ಲ. ಅವರಿಗೆ ಓದು ಬರುತ್ತದಲ್ವಾ?
ಅಪ್ಪ: ಅವರ ದೇವರು ಕೊಡ್ತಾನೆ.
ಹುಡುಗ: ಅವರಿಗೆ ಎಷ್ಟು ಮಂದಿ ದೇವರು?
ಅಪ್ಪ: ಒಬ್ಬನೆ.
ಹುಡುಗ: ಊಟ ಅವನೇ ಕೊಡ್ತಾನಾ?
ಅಪ್ಪ: ಹೌದು.
ಹುಡುಗ: ನಮ್ಮ Œದೇವರುಗಳೇನಾ ಇಷ್ಟೊಂದು ದೇವರು? ಅವರದೇ ಸುಲಭವಲ್ಲವಾ? ಸುಶೀಲ ಮನೇಲಿ ಪೂಜೇನೇ ಮಾಡೋದಿಲ್ವೆ, ಅವರ ಹತ್ತಿರ ಹಣವಿದೆ?
ಅಪ್ಪ: ಹಿಂದಿನ ಜನ್ಮದಲ್ಲಿ ಮಾಡಿರ್ತಾರೆ.
ಹುಡುಗ: ಮತ್ತೆ ಈಗ ಮಾಡುವ ಪೂಜೆ ಮುಂದಿನ ಜನ್ಮಕ್ಕಾ, ಈ ಜನ್ಮಕ್ಕಾ?
ಅಪ್ಪ: ಎರಡಕ್ಕೂ.
ಹುಡುಗ: ಸುಂದರ ಎಷ್ಟೊಂದು ಪೂಜೆ ಮಾಡ್ತಾನೆ, ಆದರೆ ಅವನಿಗೆ ಓದು ಬರಲ್ವೇ?
ಅಪ್ಪ: ಅದು ಅವನ ಕರ್ಮ.
ಹುಡುಗ: ಕರ್ಮ ಅಂದ್ರೆ?
ಅಪ್ಪ: ನಿನಗೆ ಈಗ ಅರ್ಥವಾಗೋಲ್ಲ
ಹುಡುಗ: ಅವನಿಗೆ ವಿನಾಯಕ ಓದು ಯಾಕೆ ಕೊಡೋಲ್ಲ. ಅವನ ಕರ್ಮ ಆ ರೀತಿ ಇದ್ದರೆ ದೇವರು ಕೊಡುವುದಿಲ್ಲವಾ?
ಅಪ್ಪ: ಮುಂದಿನ ಜನ್ಮದಲ್ಲಿ ಕೊಡ್ತಾನೆ.
ಹುಡುಗ: ಮುಂದಿನ ಜನ್ಮದಲ್ಲಿಯೂ ಅವನ ಕರ್ಮ ಹಾಗೆ ಇದ್ದರೆ?
ಅಪ್ಪ: ನಿನಗೆ ಈಗ ಇದೆಲ್ಲ ಅರ್ಥವಾಗೋಲ್ಲ ಕಣೊ.
ಹುಡುಗ: ನಿನಗೆ ಗೊತ್ತಾ ಹೋಗಲಿ?
ಅಪ್ಪ: (ಸಂದೇಹವಾಗಿ) ಹೌದು.
ಹುಡುಗ: ಹಾಗಿದ್ದರೆ ಹೇಳು. ಗೊತ್ತಾಗುತ್ತೋ ಇಲ್ಲವೋ ನೋಡ್ತೀನಿ.
ಅಪ್ಪ: ನಾನು ಹೇಳೋಕ್ಕಾಗಲ್ಲ, ಇನ್ನು ನೀನು ಹೋಗು.
*****
- ಸುಧಾ ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ