Pages

ವ್ಯಕ್ತಿ ಪರಿಚಯ - ಸಸ್ಯವಿಜ್ಞಾನಿ ಬಿ ಜಿ ಎಲ್ ಸ್ವಾಮಿ


ಸಸ್ಯವಿಜ್ಞಾನಿ ಬೆಂಗಳೂರು ಗುಂಡಪ್ಪ ಲಕ್ಮೀನಾರಾಯಣ ಸ್ವಾಮಿಯವರ ಪರಿಚಯವನ್ನು ಮಾಡಿಕೊಡುವ ಒಂದು ಸಣ್ಣ ಪ್ರಯತ್ನವಷ್ಟೆ ಇದು. ಕನ್ನಡದ ಪ್ರಸಿದ್ಧ ಲೇಖಕ "ಮಂಕುತಿಮ್ಮ ಕಗ್ಗ"ವನ್ನು ರಚಿಸಿದ ಡಿ.ವಿ. ಗುಂಡಪ್ಪನವರ ಮಗನಾಗಿ ಸ್ವಾಮಿಯವರು 1918 ಫೆಬ್ರವರಿ 5 ರಂದು  ಜನಿಸಿದರು.ತಾಯಿ ಭಾಗೀರತ್ನಮ್ಮನವರು ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡಿದ್ದರಿಂದ ಇವರು ಅಜ್ಜಿ ಮತ್ತು ಸೋದರತ್ತೆಯ ಮಡಿಲಲ್ಲಿ ಬೆಳೆದರು.
ಇವರಿಗೆ ಬಾಲ್ಯದಲ್ಲಿಯೇ ಪುಸ್ತಕದ ಜೊತೆ ನಂಟು ಪ್ರಾರಂಭವಾಯಿತು. ರಜೆಯ ಸಮಯದಲ್ಲಿ ತಂದೆ ಹಲವಾರು ಪುಸ್ತಕಗಳನ್ನು  ಕೊಟ್ಟು  ಓದಲು ಹೇಳುತ್ತಿದ್ದರು. ನಂತರ ಅದರ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು.ಮತ್ತು ತಂದೆಯನ್ನು ನೋಡಲು ಬರುತ್ತಿದ್ದ ಪ್ರಖ್ಯಾತ ಸಾಹಿತಿಗಳ ಪ್ರಭಾವವು ಇವರ ಮೇಲಿತ್ತು.
ಇವರು " ನ್ಯಾಷನಲ್ ಹೈಸ್ಕೂಲಿನಲ್ಲಿ" ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ, ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ  ಎರಡು ವರ್ಷ ಶಿಕ್ಷಣವನ್ನು ಮುಗಿಸಿದಾಗ ಇವರಿಗೆ ಪ್ರಾಣಿ ವಿಜ್ಞಾನದ ಬಗ್ಗೆ ಆಸಕ್ತಿಯಿತ್ತು.ಆದರೆ ಹಿರಿಯ ವಿದ್ವಾಂಸ ಎ.ಆರ್.ಕೃಷ್ಣಶಾಸ್ತ್ರಿ ಗಳ "ಪ್ರಾಣಿಗೀಣಿ ಕುಯ್ದು ಕೊಂಡು ಏನಯ್ಯ ನೀನು! ಸುಮ್ನೆ ಬಾಟನಿ ತಗೋ, ಹೂವು, ಗಿಡ ಎಲ್ಲಾ ಇರುತ್ತೆ, ಚೆನ್ನಾಗಿರುತ್ತದೆ"  ಎಂಬ ಮಾತಿನಿಂದ ಪ್ರಭಾವಿತರಾಗಿ, ಸಸ್ಯವಿಜ್ಞಾನವನ್ನು ತೆಗೆದುಕೊಂಡು ಸೆಂಟ್ರಲ್ ಕಾಲೇಜಿಗೆ ಸೇರಿದರು. ಇದೇ ಮುಂದೆ ಅವರ ಜೀವನದ ಅವಿಭಾಜ್ಯ ಅಂಗವಾಗಿ ಹೋಯಿತು.
1939 ರಲ್ಲಿ ಇವರು ಪ್ರಥಮ ಶ್ರೇಣಿಯಲ್ಲಿ ಬಿ.ಎಸ್ಸಿ ಪದವಿ ಮುಗಿಸಿದಾಗ ಆಗಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ರವರು ಕೆಲಸ ಕೊಡಿಸುತ್ತೇನೆ ಎಂದಾಗ ಸ್ವಾಮಿಯವರು ನಿರಾಕರಿಸಿ, "ಟಾಟಾ ವಿಜ್ಞಾನ ಮಂದಿರ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ನಲ್ಲಿ ಒಂದು ವರ್ಷ ಸಂಶೋಧಕರಾಗಿ ಕೆಲಸ ಮಾಡಿದರು. ಆ ಸಂದರ್ಭದಲ್ಲಿ ಅವರ ಹಲವು ಸಂಶೋಧನಾ ಲೇಖನಗಳು ಹೊರಬಂದವು.
  ನಂತರ ತಂದೆ ಕೊಡಿಸಿದ ಸೆಕೆಂಡ್ ಹ್ಯಾಂಡ್ ಮೈಕ್ರೋಸ್ಕೋಪ್, ಮೊದಲಾದ ಸಂಶೋಧನೆಗೆ ಅವಶ್ಯಕವಾಗಿರುವ ಪರಿಕರಗಳನ್ನು ಕೊಂಡು ಸಂಶೋಧನೆಯನ್ನು ಪ್ರಾರಂಭಿಸಿದರು. ಇವರ ಬರಹಗಳು "18 ನಾಗಸಂದ್ರ ರಸ್ತೆ, ಬೆಂಗಳೂರು" ಎಂಬ ವಿಳಾಸದಿಂದ ಪ್ರಕಟಗೊಂಡವು. ಇವರ ಲೇಖನಗಳನ್ನು ಓದಿ ಸಂತೋಷಗೊಂಡ ಪ್ರಸಿದ್ಧ ವಿಜ್ಞಾನಿ ಡಾ.ಪಂಚಾನನ ಮಾಹೇಶ್ವರಿ ಇವರಿಗೆ ವಿದೇಶಿ ವಿಜ್ಞಾನಿಗಳ ಪರಿಚಯ ಮಾಡಿಕೊಟ್ಟರು.
1947 ರಲ್ಲಿ ಇವರ ಸಂಶೋಧನೆಗಳಿಗಾಗಿ ಮೈಸೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ನೀಡಿತು. 1947ರಲ್ಲಿ ಭಾರತ ಸರ್ಕಾರ ಇವರನ್ನು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಿಕೊಟ್ಟಿತು. ಅಲ್ಲಿ ವಿಶ್ವವಿಖ್ಯಾತ ವಿಜ್ಞಾನಿ ಪ್ರೊ.ಇರ್ವಿಂಗ್ ಬೈಲಿರವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ನಡೆಸಿದರು. ಪ್ರೊ.ಬೈಲಿರವರು ತಮ್ಮ
40 ವರ್ಷಗಳ ಅವಧಿಯಲ್ಲಿ ತಾವು ಕಂಡ ಅತ್ಯುತ್ತಮ ವಿದ್ಯಾರ್ಥಿಗಳಲ್ಲಿ ಸ್ವಾಮಿ ಒಬ್ಬರು ಎಂದು ಹೇಳಿದ್ದರಂತೆ.
ಈ ಸಂದರ್ಭದಲ್ಲಿ  ಸ್ವಾಮಿಯವರಿಗೆ ಹೆಸರಾಂತ ಸಸ್ಯವಿಜ್ಞಾನಿಗಳಾದ ಡಾ.ಪಂಚಾನನ ಮಾಹೇಶ್ವರಿ ಮತ್ತು ಬೀರಬಲ್ ಸಾಹನಿಯವರ ಒಡನಾಟವು ದೊರೆಯಿತು. ನಂತರ ಇವರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಸಂಶೋಧನ ವೇತನವನ್ನು ಪಡೆದು ಮದರಾಸು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ವಿಜ್ಞಾನಿಯಾಗಿ ಕೆಲಸ ಮಾಡಿದರು.
ನಂತರ 1953 ರಲ್ಲಿ ತಮ್ಮ ಸಂಶೋಧನೆಗಳನ್ನು ಮುಂದುವರಿಸುವ ಸಲುವಾಗಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇರಿದರು. 1953ರಲ್ಲಿ ಇವರ ವಿವಾಹವು ವಸಂತರವರೊಡನೆ ನಡೆಯಿತು. ಮಡದಿ ಇವರ ಸಂಶೋಧನೆಗಳಿಗೆ ನೆರವಾಗಿ ಪತಿಗೆ ತಮ್ಮ ಬೆಂಬಲವನ್ನು ನೀಡಿದರು.
ಇವರು ಸಸ್ಯವಿಜ್ಞಾನದ ಅಧ್ಯಯನದ ಜೊತೆಗೆ ಅನೇಕ ಸಸ್ಯಗಳನ್ನು ಕಂಡುಹಿಡಿದಿದ್ದಾರೆ ಹಾಗು ಅವುಗಳಿಗೆ ತಮ್ಮ ಗುರುವಾದ ಪ್ರೊ.ಬೈಲಿಯವರ ಹೆಸರು ಮತ್ತು ತಾವು ಗೌರವಿಸುತ್ತಿದ್ದ ಪಂಚಾನನ ಮಾಹೇಶ್ವರಿಯವರ ಹೆಸರುಗಳನ್ನು ಇಟ್ಟಿದ್ದಾರೆ. ಇವರು ವಿದ್ಯಾರ್ಥಿಗಳನ್ನು ಪ್ರತಿ ವರ್ಷವೂ ಅಧ್ಯಯನಕ್ಕಾಗಿ ಅರಣ್ಯಪ್ರದೇಶಗಳಿಗೆ ಪ್ರವಾಸವನ್ನು ಕರೆದುಕೊಂಡು ಹೋಗುತ್ತಿದ್ದರು. ಹಾಗೆ ಹೋದಾಗ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡುವುದರ ಮೂಲಕ ಅವರಲ್ಲಿನ ಉತ್ಸಾಹವನ್ನು ಹೆಚ್ಚಿಸುತ್ತಿದ್ದರು. ಇವರು ಸಸ್ಯವಿಜ್ಞಾನವಲ್ಲದೆ ಬೇರೆ ವಿಷಯಗಳನ್ನು ತಿಳಿಸುತ್ತಿದ್ದರು. "ಬೆಳೆಯುವ, ಕಲಿಯುವ ಕುತೂಹಲವಿರುವ ಎಳೆಯರಿಗೆ ಹೇಳಿಕೊಡಬೇಕಾದದ್ದು ನನ್ನ ಕರ್ತವ್ಯ" ಎನ್ನುತ್ತಿದ್ದರು.
ಇವರು ಸಸ್ಯವಿಜ್ಞಾನ ಕ್ಷೇತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ವಿಶಿಷ್ಟ ರೀತಿಯ ಬರವಣಿಗೆಯ ಮೂಲಕ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ. ತಿಳಿಹಾಸ್ಯ ಹಾಗು ಸರಳ ರೀತಿಯಲ್ಲಿ  ಕೃತಿಗಳನ್ನು ಬರೆದಿದ್ದಾರೆ.
1962 ರಲ್ಲಿ " ಕಾಲೇಜು ರಂಗ" ಕೃತಿಯು ಪ್ರಕಟಣೆಯಾಯಿತು. ಇದರಲ್ಲಿ ಶಿಕ್ಷಣ ಕ್ಷೇತ್ರಗಳಲ್ಲಿ  ನಡೆಯುತ್ತಿದ್ದ ಅವ್ಯವಹಾರಗಳನ್ನು, ಮತ್ತು ಕುಸಿಯುತ್ತಿರುವ ಶಿಕ್ಷಣಮಟ್ಟವನ್ನು ಹಾಸ್ಯದ ಶೈಲಿಯಲ್ಲಿ ಬರೆದಿದಿದ್ದಾರೆ. ಇವರು " ಪ್ರಾಧ್ಯಾಪಕ ಪೀಠದಲ್ಲಿ" ಎಂಬ ಕೃತಿಯಲ್ಲಿ ತಾವು ಕೆಲಸ ಮಾಡುವ ಸಮಯದಲ್ಲಿ ಎದುರಿಸಿದ ತೊಂದರೆಗಳನ್ನು ಹಾಸ್ಯಮಯವಾಗಿ ತಿಳಿಸಿದ್ದಾರೆ.
1976 ರಲ್ಲಿ ಪ್ರಕಟಗೊಂಡ " ಹಸುರು ಹೊನ್ನು" ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇವರ ಈ ಪುಸ್ತಕವನ್ನು ಓದಿದ ಇವರ ತಂದೆ ಡಿ.ವಿ.ಜಿ ಯವರು " ಕನ್ನಡದಲ್ಲಿ ಇಂಥ ಪುಸ್ತಕಗಳು ಬೇಕು " ಎಂದಿದ್ದರಂತೆ. ಅದೆ ವರ್ಷದಲ್ಲಿ ಇವರಿಗೆ "ಬೀರಬಲ್ ಸಾಹನಿ" ಪ್ರಶಸ್ತಿ ದೊರೆಯಿತು.
ಇವರ "ಸಸ್ಯಜೀವಿ ಪ್ರಾಣಿಜೀವಿ" ಎಂಬ ಕೃತಿಯಿಂದಾರಿಸಿದ ಮಕ್ಕಳಿಗಾಗಿ ಬರೆದ 
" ಗಿಣಿಯ ಹಸಿರು ಎಲೆಯ ಹಸಿರು"  ಲೇಖನದಲ್ಲಿ ವಿಜ್ಞಾನದ ಬರವಣಿಗೆ ಸಾಮಾನ್ಯರಿಗೂ ಅರ್ಥವಾಗುವಂತೆ ಹಾಗೂ ಕುತೂಹಲ ಬೆಳೆಸುವಂತೆ ಇರಬೇಕು ಎಂಬ ಇವರ ಶೈಲಿಗೆ ಉತ್ತಮ ಉದಾಹರಣೆಯಾಗಿದೆ. ನಮ್ಮಲ್ಲಿ ದೊರೆಯುವ ವಿದೇಶಿ ಹಣ್ಣು ತರಕಾರಿಗಳ ಬಗ್ಗೆ “ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ” ಎಂಬ ಪುಸ್ತಕವನ್ನು ಬರೆದರು. ಇವರು ತಮ್ಮ ಕ್ಷೇತ್ರ ಸಸ್ಯಜಗತ್ತಿನೊಡನೆ ಮಾನವ ನಂಟನ್ನು ಕುರಿತು ಹೊಸ ವಿಷಯಗಳನ್ನು ತಿಳಿಯಲು ಶಾಸನಗಳ ಅಧ್ಯಯನವನ್ನು ಕೈಗೊಂಡರು. ಇದರ ಫಲವಾಗಿ ಬಂದುದೇ “ಶಾಸನಗಳಲ್ಲಿ ಗಿಡಮರಗಳು” ಎಂಬ ಕೃತಿ. ಇವುಗಳಲ್ಲದೆ “ಪಂಚಕಲಶ ಗೋಪುರ” ಮೈಸೂರು ಡೈರಿ, ದೌರ್ಗಂಧಿಕಾ ಅಪಹರಣ, ಬೃಹದಾರಣ್ಯಕ, ಸಾಕ್ಷಾತ್ಕಾರದ ದಾರಿಯಲ್ಲಿ, ಸಸ್ಯ ಪುರಾಣ ಮೊದಲಾದವುಗಳು ಇವರ ಪ್ರಮುಖ ಕೃತಿಗಳಾಗಿವೆ. “ತಮಿಳು ತಲೆಗಳ ನಡುವೆ” ಅವರ ಮದ್ರಾಸಿನ ಕಾಲೇಜಿನ ಅನುಭವವನ್ನು ಕುರಿತದ್ದಾಗಿದೆ.
ಇವರು ಕನ್ನಡವಲ್ಲದೆ ತಮಿಳು ಭಾಷೆಯಲ್ಲೂ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. “ಕಲೈ ಕದಿರ್” ಎಂಬ ಮಾಸಪತ್ರಿಕೆಯಲ್ಲಿ ವಿಜ್ಞಾನ ಲೇಖನಗಳನ್ನು ಬರೆಯುತ್ತಿದ್ದರು. ಜ್ಞಾನರಥ, ಬೆಳದಿಂಗಳಲ್ಲಿ ಅರಳಿದ ಮೊಲ್ಲೆ, ನಡೆದಿಹೆ ಬಾಳೌ ಕಾವೇರಿ, ಇವು ಸ್ವಾಮಿಯವರು ತಮಿಳಿನಿಂದ ಕನ್ನಡಕ್ಕೆ ಅನುವಾದಿಸಿದ ಕೃತಿಗಳು. ಅಲ್ಲದೆ ಸುಬ್ರಮಣ್ಯ ಭಾರತಿಯವರ ತಮಿಳು ಕಥೆಗಳನ್ನು ನವತಂತ್ರ ಕಥೆಗಳು ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ.
ಇದಲ್ಲದೆ ಇವರು ಚಿದಂಬರಂ ಅಂಡ್ ನಟರಾಜ್ ಎಂಬ ಇಂಗ್ಲಿಷ್ ಕೃತಿಯನ್ನು ರಚಿಸಿದ್ದಾರೆ. ಸ್ವಾಮಿಯವರಿಗೆ ಇಂಗ್ಲಿಷ್, ತಮಿಳು ಭಾಷೆಗಳೊಂದಿಗೆ ಫ್ರೆಂಚ್, ಜರ್ಮನ್, ಲ್ಯಾಟಿನ್, ಸ್ಪಾನಿಷ್ ಭಾಷೆಗಳೂ ತಿಳಿದಿದ್ದವು. ಇವರು ಬರವಣಿಗೆಯಲ್ಲದೆ ತಮ್ಮ ಹಾಸ್ಯ ಬರಹಕ್ಕೆ ತಕ್ಕಂಥ ವ್ಯಂಗ್ಯ ಚಿತ್ರಗಳನ್ನು ಸ್ವತಃ ಅವರೇ ರಚಿಸಿ, ಚಿತ್ರಕಲಾಕಾರರಾಗಿದ್ದರು. ಸುಧಾರಿತ ಸೌಭದ್ರೆ ಎಂಬ ನಾಟಕದಲ್ಲಿ ಅಭಿನಯಿಸಿದ್ದರು. ಅಭಿನಯವಲ್ಲದೆ ಸಂಗೀತದಲ್ಲೂ ಅಪಾರ ಆಸಕ್ತಿಯನ್ನು ಹೊಂದಿದ್ದರು. ತಾವೇ ರಚಿಸಿದ್ದ ಮೀನಾಕ್ಷಿ ಸೌಗಂಧ ಎನ್ನುವ ರೂಪಕದಲ್ಲಿ  ಹಾಡನ್ನು ಹಾಡಿದ್ದರು.
ಇವರ ವೃತ್ತಿ ಶಿಕ್ಷಣವನ್ನು ಬೋಧಿಸುವುದಾದರೂ ಸಂಗೀತ, ಸಾಹಿತ್ಯ, ನಾಟಕ ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ ಮಹಾನ್ ಚೇತನ 1981ರ ನವೆಂಬರ್ 2 ರಂದು ತೀವ್ರವಾದ ಹೃದಯಾಘಾತದಿಂದ ನಿಧನರಾದರೂ ಅವರ ಬರಹಗಳ ರೂಪದಲ್ಲಿ ಇಂದಿಗೂ ಎಲ್ಲರ ಮನದಲ್ಲಿ ಅಜರಾಮರವಾಗಿ ಉಳಿದಿದ್ದಾರೆ.
   - ವಿಜಯಲಕ್ಷ್ಮಿ  ಎಂ ಎಸ್ 

1 ಕಾಮೆಂಟ್‌:

Rajiv Magal ಹೇಳಿದರು...

ಉತ್ತಮವಾದ ಕೊಡುಗೆ. ಈ ರೀತಿಯ ಪರಿಚಯದ ಲೇಖನಗಳಿಗೆ ನಮ್ಮ ನಾಡಿನಲ್ಲಿ ವ್ಯಕ್ತಿಗಳಿಗೇನೂ ಕೊರತೆಯಿಲ್ಲವಾದರೂ ಪ್ರಯತ್ನಗಳಾಗುತ್ತಿಲ್ಲ. ತಮ್ಮದು ಶ್ಲಾಘನೀಯ. ಶುಭವಾಗಲಿ.