Pages

ಸಾಹಿತ್ಯ ಸಂವಾದ - 1



ತಾಯ ಅಳಲು - ಕೆ ಎಸ್ ಗಿರಿಜಾ
                                                                        
ನಿನ್ನ ನಾ ಹಡೆದ ಮೇಲೆ
ನಿನ್ನ ಎಲ್ಲಾ ಬೇಕು ಬೇಡಗಳು
ನನ್ನದಾದವು
ನಿನ್ನ ನೋವು ನಲಿವಿನಲಿ
ಕಂಡೆ ನಾ ಸಂತೋಷವ
ನಿನ್ನ ಆಟ ಪಾಟಗಳಲಿ
ನನ್ನನ್ನೇ ನಾ ಮರೆತೆ
ನಿನ್ನ ತುಂಟಾಟದಲ್ಲಿ
ನನ್ನ ನಾ ಕಂಡುಕಂಡೆ
ನಿನ್ನ ಸೋಲು ಗೆಲುವಿನಲಿ
ನಿನ್ನ ಬೆನ್ನೆಲುಬಾದೆ ನಾ

ನೀ ಬೆಳೆದಂತೆ ಸ್ನೇಹಿತರು ಹತ್ತಿರವಾದರು
ನನ್ನ ಮಾತುಗಳು ಬೈಗುಳವಾದವು
ನನ್ನ ಹಿತನುಡಿಗಳು ಹಿಡಿಸದಾದವು
ನನ್ನ ಕೈ ಅಡುಗೆ ರುಚಿಸದಾಯಿತು
ನನ್ನ ಪ್ರೀತಿ ಸ್ನೇಹ ಬೇಡವಾಯಿತು

ನಾವಿಂದು ಇದ್ದರೂ  ಒಂದೇ ಸೂರಿನಡಿ ನಿರಂತರ
ಮನದಲಿ ಅದೆಷ್ಟು ಅಂತರ
ಹತ್ತಿರವಿದ್ದು ದೂರ ನಿಲ್ಲುವ ಪರಿಯ
ಏನೆಂದು ಹೇಳಲಿ?
ನಾ ಏನೆಂದು ಹೇಳಲಿ?
  
ಮೇಲ್ಕಂಡ ಪದ್ಯಕ್ಕೆ ಉತ್ತರವಾಗಿ  


ನಾ ನಿನ್ನ ಕಂದನೇ - ಸುಧಾ ಜಿ

ಬದಲಾಗಿದ್ದೇನೆ ನಾನೆಂದು
ಅನಿಸುತ್ತಿರುವುದು ನಿನಗೆ ಸಹಜವಮ್ಮ
ನಾ ನಿಜಕ್ಕೂ ಬದಲಾಗಿರುವೆನು.

ಆದರೆ, ಇಂದೂ ನಿನ್ನ
ಪ್ರೀತಿಯ ಕೈತುತ್ತು ಬೇಕು
ಅತ್ತಾಗ ಹೆಗಲು ಬೇಕು
ನಿದ್ರಿಸಲು ಮಡಿಲು ಬೇಕು
ಹೆಪ್ಪಿಟ್ಟ ನೋವುಗಳ ಹೊರಗಿಟ್ಟು
ಹಗುರಾಗಲು ನೀನೇ ಬೇಕು
ಖುಷಿಯಾದಾಗ ಹೇಳಿ ನಿನ್ನೊಟ್ಟು
ಆ ಮುಗ್ಧ ನಗುವ ನಾ ಕಾಣಬೇಕು.

ಕಾಲ ಬದಲಾಗಿರಬಹುದು ಅಮ್ಮ
ಗೆಳೆಯ ಗೆಳತಿಯರು ಇದ್ದಾರಮ್ಮ
ನನ್ನ ಜಗತ್ತೂ ವಿಸ್ತಾರವಾಗಿದೆ
ಹಲಕಾಲ ಕಳೆದಿದೆ ನಿನ್ನೊಂದಿಗಿರದೆ
ಆಗಾಗ ಸಿಡಿಮಿಡಿಗೊಳ್ಳುತ್ತೇನೆ
ಮಾತನಾಡದೆ ಮೌನವಾಗಿರುತ್ತೇನೆ
ನಮ್ಮ ಹುಡುಗಾಟದ ಮಾತುಗಳು
ನಿನಗೆ ಹಿಡಿಸದಿರಬಹುದೆಂದು
ನಮ್ಮ ಬೇಸರ ನೋವುಗಳು
ನಿನ್ನಲ್ಲಿ ಕಂಬನಿಯ ತರಿಸಬಹುದೆಂದು

ನಾನು ಬದಲಾಗಿದ್ದೇನೆ ನಿಜ!
ಅಮ್ಮನ ಸೆರಗನ್ನೇ ಬಿಡದ ಆ ಕಂದನೆಲ್ಲಿ
ಸ್ವತಂತ್ರವಾಗಿ ಓಡಾಡುತಿಹ ಈ ಮಗನೆಲ್ಲಿ?
ಆದರೂ ಅಮ್ಮ ಒಂದಂತೂ ಖಚಿತ
ಅಂದು, ಇಂದು, ಎಂದೆಂದೂ
ನಾ ನಿನ್ನ ಪುಟ್ಟ ಕಂದನೇ!!!

      

ಕಾಮೆಂಟ್‌ಗಳಿಲ್ಲ: