Pages

ಪುಸ್ತಕ ಪ್ರೀತಿ - ಗೆಜ್ಜೆಪೂಜೆ





ಎಂ.ಕೆ. ಇಂದಿರಾವರ  ಕಾದಂಬರಿಯಾಧಾರಿತವಾದ ಈ ಚಿತ್ರವು ೧೯೬೯ ರಲ್ಲಿ ಪುಟ್ಟಣ್ಣನವರ ನಿರ್ದೇಶನದಲ್ಲಿ ಬಹಳ ಅದ್ಬುತವಾಗಿ ಮೂಡಿಬಂದಿದೆ. ಚಿತ್ರದಲ್ಲಿ ಲೀಲಾವತಿ, ಕಲ್ಪನಾ, ಅಶ್ವತ್ಥ್ ಮತ್ತು ಎಲ್ಲರ ಅಭಿನಯ ಮನದಲ್ಲಿ ಅಚ್ಚಳಿಯದೆ ನಿಲ್ಲುತ್ತದೆ. ಸಂದರ್ಭಕ್ಕನುಸಾರವಾಗಿ ಚಿತ್ರಿಸಿರುವ ಹಾಡುಗಳು ಅರ್ಥಪೂರ್ಣವಾಗಿಯೂ, ಸುಮಧುರವಾಗಿಯೂ ಇವೆ.

ಕತ್ತಲಿನಲ್ಲಿರುವ ಮಾನವನಿಂದ ಸೃಷ್ಟಿ ಮಾಡಲ್ಪಟ್ಟ ವೃತ್ತಿಯೆ ವೇಶ್ಯಾವೃತ್ತಿ. ಹುಟ್ಟುತ್ತಲೇ ಯಾರೂ ವೇಶ್ಯೆಯರಾಗಿ ಹುಟ್ಟುವುದಿಲ್ಲ. ಸಮಾಜದ ಒತ್ತಡಕ್ಕೆ ಸಿಲುಕಿ ಅದರಲ್ಲಿ ಬಂಧಿಸಲ್ಪಡುತ್ತಾರೆ.
ತನ್ನ ವಂಶದ ವೃತ್ತಿಯಾಗಿದ್ದ ಗೆಜ್ಜೆಪೂಜೆಯನ್ನು ತಿರಸ್ಕರಿಸಿದ್ದ ಅಪರ್ಣಾಳು ಪ್ರೀತಿಯ ಮೋಸಕ್ಕೆ ಬಲಿಯಾಗಿ ಹೆಣ್ಣು ಮಗುವಿಗೆ ತಾಯಿಯಾಗುತ್ತಾಳೆ. ತನ್ನ ಮಗಳನ್ನು ಸಾಕುವುದಕ್ಕಾಗಿ ಇಷ್ಟವಿಲ್ಲದಿದ್ದರೂ ವೇಶ್ಯಾವೃತ್ತಿಯನ್ನು ಸ್ವೀಕರಿಸುತ್ತಾಳೆ. ಐದಾರು ವರ್ಷಗಳ ನಂತರ ಮಗಳ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬರುತ್ತಾಳೆ. ಅಲ್ಲಿ ಎದುರುಮನೆಯ ಮಕ್ಕಳಾದ ವಾಸು ಮತ್ತು ಲಲಿತಾಳ ಜೊತೆ ಮಗಳು ಚಂದ್ರಳನ್ನು ಶಾಲೆಗೆ ಸೇರಿಸುತ್ತಾಳೆ. ಹೀಗೆ ವರ್ಷಗಳು ಕಳೆದು ಚಂದ್ರಳು ಪದವಿಯನ್ನು ಪಡೆಯುತ್ತಾಳೆ. ವಾಸು ಮತ್ತು ಚಂದ್ರ ಪರಸ್ಪರ ಪ್ರೀತಿಸುತ್ತಿರುತ್ತಾರೆ. ಮುಂದೆ ನಾನು ಓದುತ್ತೇನೆ ಎಂದು ಚಂದ್ರ ಮನೆಯಲ್ಲಿ ಹೇಳಿದಾಗ ಅವಳ ಅಜ್ಜಿಯು "ನೀನು ಓದಿದ್ದು ಸಾಕು ಗೆಜ್ಜೆಪೂಜೆ ಮಾಡಿಸಿಕೊ" ಎನ್ನುತ್ತಾಳೆ. ಆಗ ಚಂದ್ರಳು ಅಳುತ್ತಿದ್ದ ತಾಯಿಗೆ "ಅಮ್ಮ ನಾನು ಓದಿ ಅಗ್ನಿಸಾಕ್ಷಿಯಾಗಿ ಮದುವೆಯಾಗುತ್ತೇನೆ. ನಮ್ಮನ್ನು ಸೂಳೇರು ಅಂತ ಹೇಳುವವರ ಮುಂದೆ ಸಂಸಾರಿಯಾಗಿ ಬಾಳಿ, ನಮಗೆ ಅಂಟಿರುವ ಎರಡಕ್ಷರದ "ಸೂಳೆ" ಎಂಬ ಕಳಂಕಾನ ತೊಡೆದುಹಾಕ್ತೀನಿ" ಎಂದು ಹೇಳುತ್ತಾಳೆ.

ಆ ದಿನ ಚಂದ್ರಳು ಸೋಮುವನ್ನು ಭೇಟಿ ಮಾಡಿ "ನೀನು ನನಗೆ ತಾಳಿ ಕಟ್ಟಿ ಸೂಳೆ ಅನ್ನೊ ನರಕದಿಂದ ನನ್ನನ್ನು ಸಂಸಾರವೆಂಬ ಸ್ವರ್ಗಕ್ಕೆ ಕರ್ಕೊಂಡುಹೋಗ್ತೀನಿ" ಎಂದು ಮಾತು ಕೊಡು ಎನ್ನುತ್ತಾಳೆ. ಅದಕ್ಕೆ ಸೋಮು "ಖಂಡಿತವಾಗಿ ನಿನ್ನನ್ನು ಮದುವೆಯಾಗುವೆ" ಎಂದು ಪ್ರಮಾಣ ಮಾಡುತ್ತಾನೆ.  

ಹೀಗಿರುವಾಗ ಒಂದು ದಿನ ಆಕಸ್ಮಿಕವಾಗಿ ಸೋಮುವಿನ  ತಂದೆ ಇಪ್ಪತ್ತು ವರ್ಷಗಳ ನಂತರ ಸಿಕ್ಕ ಗೆಳೆಯನನ್ನು ಮನೆಗೆ ಕರೆ ತರುತ್ತಾನೆ. ಊಟ ಮಾಡುವಾಗ ಎದುರು ಮನೆಯಿಂದ ಪಿಟೀಲು ವಾದನ ಕೇಳಿಸುತ್ತದೆ. ನೀನು ಹೀಗೆ ನುಡಿಸುತ್ತಿದ್ದೆ ಅಲ್ಲವೆ ಎಂದು ಗೆಳೆಯನಿಗೆ ಹೇಳುತ್ತಾರೆ. ಸರಿರಾತ್ರಿಯಲ್ಲಿ ಬಾಗಿಲು ತಟ್ಟಿದ ಶಬ್ದದಿಂದ ಎದ್ದು ಬಂದು ಬಾಗಿಲು ತೆಗೆದಳು ಚಂದ್ರ. ಒಳಗೆ ಬರುತ್ತಿದ್ದ ವ್ಯಕ್ತಿಯನ್ನು ಯಾರು ಎಂದು ಕೇಳುತಿದ್ದರೂ ಉತ್ತರಿಸದೆ ಒಳಬಂದು ಅಪರ್ಣ ಎಂದು ಕೂಗುತ್ತಾರೆ. ಅವರನ್ನು ನೋಡಿ ಅವರ ಕಾಲಿಗೆ ಬಿದ್ದ ತಾಯಿಯನ್ನು ಯಾರು ಅವರು? ಎಂದು ಕೇಳಿದಳು ಚಂದ್ರ. ಇವರು ನಿನ್ನ ತಂದೆ ಎಂದು ಅಮ್ಮ ಹೇಳಿದ್ದನ್ನು ಕೇಳಿ ಸಂತೋಷಗೊಂಡ ಚಂದ್ರ ನಾನು ನಿಮ್ಮನ್ನು "ಅಪ್ಪ "ಎಂದು ಕರೆಯಲೆ ಎಂದು ಬೇಡುವಾಗ ನೋಡುಗರ ಕಣ್ಣಂಚು ಒದ್ದೆಯಾಗುವುದು. ಅಪ್ಪ ನಿನ್ನ ನೆನಪಿಗಾಗಿ ಏನಾದರೂ ಕೊಡು ಎಂದಾಗ, ಆತ ತನ್ನ ಕೈಯಲ್ಲಿರುವ ವಜ್ರದ ಉಂಗುರವನ್ನೆ ಮಗಳ ಬೆರಳಿಗೆ ತೊಡಿಸಿ ಅವಳನ್ನು ಅಪ್ಪಿಕೊಳ್ಳುತ್ತಾರೆ. ಅದೇ ಸಂದರ್ಭದಲ್ಲೇ ಕಿಟಕಿಯಿಂದ  ಈ ದೃಶ್ಯವನ್ನು ಕಂಡ ಸೋಮುವು ಚಂದ್ರಳ ಮೇಲೆ ಅನುಮಾನಗೊಂಡು ಮಾರನೆ ದಿನ ಚಂದ್ರಳ ಜೊತೆ "ಸೂಳೆ ಮಗಳು ಸೂಳೆ" ಎಂಬುದನ್ನು ನೀನು ಸಾಬೀತುಮಾಡಿದೆ. ನನ್ನನ್ನು ಮರೆತುಬಿಡು ಎಂದು ಹೇಳುತ್ತಾನೆ. ಚಂದ್ರಳನ್ನು ಹುಡುಕಿಕೊಂಡು ಕಾಲೇಜಿನ ಹತ್ತಿರ ಬಂದ ಆಕೆಯ ತಂದೆಯು "ಮಗಳೆ ನಿನ್ನ ಎದುರು ಮನೆಯಲ್ಲಿರುವ ಸೋಮುವಿನ ಜೊತೆ ನಿನ್ನ ತಂಗಿಯ ಮದುವೆ ನಿಶ್ಚಯವಾಗಿದೆ. ನಾನು ನಿನ್ನ ತಂದೆ ಎಂಬುದನ್ನು ಯಾರಿಗೂ ಹೇಳಬಾರದೆಂದು ಕೇಳಿಕೊಳ್ಳುತ್ತಾರೆ." ಅದಕ್ಕೆ ಚಂದ್ರಳು "ಅಪ್ಪಾಜಿ ನಾನು ಸಾಯುವವರೆವಿಗೂ ಇದನ್ನು  ಗುಟ್ಟಾಗಿ ಇಡುವೆನೆಂದು ಪ್ರಮಾಣ  ಮಾಡುತ್ತಾಳೆ." ಇತ್ತ  ಸೋಮುವಿನ ಮದುವೆ ನಂತರ ಚಂದ್ರಳು ತನ್ನ ಅಜ್ಜಿಯ ಜೊತೆ ನನಗೆ ಗೆಜ್ಜೆಪೂಜೆಯ ಶಾಸ್ತ್ರ ಮಾಡಿಸು ಎನ್ನುತ್ತಾಳೆ. ಶಾಸ್ತ್ರ ಮಾಡಿಸಿಕೊಂಡು ಸೋಮುವಿನ ತಂದೆಗೂ ಮತ್ತು ಅಲ್ಲೆ ಇದ್ದ ತನ್ನ ತಂದೆಗೂ ನಮಸ್ಕರಿಸಿ ಬರುವಾಗ ಕೆಳಗೆ ಬಿದ್ದು ಪ್ರಾಣವನ್ನು ಬಿಡುತ್ತಾಳೆ. ಅಲ್ಲೆ ಇದ್ದ ಚಂದ್ರಳ ತಂದೆಯು "ನಾನೆ ನಿನ್ನ ತಂದೆಯೆಂದು ಸಮಾಜಕ್ಕೆ ತಿಳಿಸಿದ್ದರೆ,  ನೀನು ಸಾಯುತ್ತಿರಲಿಲ್ಲ ಮಗಳೇ, ನನ್ನ ನೆನಪಾಗಿ ನಿನಗೆ ಕೊಟ್ಟ ವಜ್ರದುಂಗುರವೇ ನಿನ್ನ ಸಾವಿಗೆ ಎರವಾಯಿತೇ ಮಗಳೆ . ನನ್ನನ್ನು ಕಾಪಾಡಲು ನಿನ್ನ ಜೀವ ನೀಡಿದೆಯಾ ತಾಯಿ?" ಎಂದು ಗೋಳಾಡುತ್ತಾರೆ.  ಅಲ್ಲಿಗೆ ಬಂದ ಚಂದ್ರಳ ತಾಯಿ ಮಗಳನ್ನು ಆಲಂಗಿಸಿಕೊಂಡಿದ್ದಂತೆಯೇ ಅವಳ ಪ್ರಾಣವು ಹೋಗುತ್ತದೆ. ಈ ಮನಮಿಡಿಯುವ ದೃಶ್ಯವು ಎಂತವರ ಕಲ್ಲೆದೆಯು ಕರಗುವಂತೆ ಮಾಡುತ್ತದೆ.
ಇಂದಿಗೂ ಈ ಸಮಾಜದಲ್ಲಿ ನಡೆಯುತ್ತಿರುವ ಇಂತಹ ಅನಿಷ್ಟ ಪದ್ದತಿಗಳನ್ನು ಎಲ್ಲರೂ ತಡೆಗಟ್ಟಬೇಕು. 
ಆ ಕಾಲದಲ್ಲೆ ಈ ವಿಷಯವನ್ನು ತೆಗೆದುಕೊಂಡು ಕಾದಂಬರಿಯನ್ನು ಬರೆದ ಇಂದಿರಾರವರು ನಮಗೆಲ್ಲರಿಗೂ ಮಾದರಿಯಾಗಿ ನಿಲ್ಲುತ್ತಾರೆ.
ಇಂತಹ ಮನಮಿಡಿಯುವ ಕಥಾವಸ್ತುವನ್ನು ತೆಗೆದುಕೊಂಡು ಪುಟ್ಟಣ್ಣರವರು ಬಹಳ ನೈಜವಾಗಿ   ಚಿತ್ರಿಸಿದ್ದಾರೆ.
ತನಗೆ ಅಂಟಿರುವ ಅಪವಾದವನ್ನು ಕಳೆದುಕೊಳ್ಳಲು ಅವಕಾಶವನ್ನೆ ನೀಡದ ಸಮಾಜವನ್ನು ಪುರಸ್ಕರಿಸಬೇಕೆ  ಎನ್ನುವ ಚಂದ್ರಳ  ಪ್ರಶ್ನೆ ನಮ್ಮೆಲ್ಲರನ್ನೂ ಕಾಡಬೇಕಲ್ಲವೆ???

                                                             -  ಗೀತಾ ಕೆ

1 ಕಾಮೆಂಟ್‌:

Rajiv Magal ಹೇಳಿದರು...

ಶಿರ್ಷಿಕೆ: ಪುಸ್ತಕ ಪ್ರೀತಿ
ಅದರೆ ಚಿತ್ರ VCD ಯದು.
ಪುಸ್ತಕದ ಮುಖ ಪುಟ ಸಿಗಲಿಲ್ಲವೇ?