Pages

ಶಾಲಾ ಡೈರಿ - 3




ಶಾಲೆಯೊಳಗೆ ಹೆಜ್ಜೆ ಇಟ್ಟಾಕ್ಷಣ ನನಗೆ ಬರುತ್ತಿದ್ದ ದೂರು ಮಾತ್ರ ಅವನದೇ. ಸುನಿಲ್ ಅಂತ ಹೆಸರು ಮೂರನೇ ತರಗತಿ ಓದ್ತಾ ಇದ್ದಾನೆ. ಮಿಸ್ ಸುನಿಲ್ ಹೊಡೆದ ಸುನಿಲ್ ಬೈದ ಸುನಿಲ್ ಅದನ್ನ ಮುರಿದ ಸುನಿಲ್ ಮಾತ್ರ home work ಬರೆದಿಲ್ಲ ...ಹೀಗೆ ತರಹೇವಾರಿ ಬೇಡದ ಕೆಲಸಗಳ ಸರದಾರ. ಅವನ ಮುಖ ಲಕ್ಷಣವೂ ಆಂಗಿಕ ಚಲನೆಯೂ ವಿಚಿತ್ರವೇ ತೀರ ವಯಸ್ಸಾದವನಂತೆ ಕಾಣುತ್ತಿದ್ದ. ಮೊದಲಿಗೆ ಒಳ್ಳೆ ಮಾತಿನಲ್ಲಿ ಬೋಧನೆ. ನಂತರ ಕೋಪದಲ್ಲಿ ಎಚ್ಚರಿಕೆ, ಸಹನೆ ಮೀರಿ ಹೊಡೆತಗಳು ಬಿದ್ದವು. ಯಾವುದಕ್ಕೂ ಜಗ್ಗಲಿಲ್ಲ. ಸಮಸ್ಯೆಯಾಗಿಯೇ ಉಳಿದ. ಅವನ ಪೋಷಕರೊಂದಿಗೆ ಮಾತಾನಾಡುವುದು ಅಂತಿಮ ದಾರಿಯಾಗಿ ಕಂಡಿತು. ಕರೆಸಿದೆ. ತಾಯಿ ಬಂದಳು ಹುಟ್ಟು ಕುರುಡು. ತಾಯಿಗೆ ಮಗನ ಮೇಲೆ ಎಲ್ಲಿಲ್ಲದ ಭರವಸೆ. ಅವನು ಚೆನ್ನಾಗಿ ಓದಬೇಕೆಂಬುದು ಅವಳ ಆಸೆ. ಅವನ ಬಗ್ಗೆ ಹೇಳಿದ್ದಾಯಿತು. ಆಕೆ ಪೂರ್ತಿ ಜವಾಬ್ದಾರಿ ನನಗೇ ವಹಿಸಿದಳು. ನೀವು ಏನು ಮಾಡಿದರೂ ನಾ ಯಾಕೆ ಅಂತ ಕೇಳೋಲ್ಲ ಅವನ ತಿದ್ದುಕೊಡಿ ಅವನಪ್ಪ ಕುಡುಕ ನನಗೋ ಕುರುಡು ಎಂದು ನೊಂದುಕೊಂಡಳು. ಆಕೆಯ ಅರಿಕೆಗೆ ಮನಸ್ಸು ಚಿಂತೆಗೊಳಗಾಯಿತು. ಅವನ ಕೈಲಿ ಓದಿಸುವುದು ಈಗ ದೂರದ ಮಾತು. ತಕ್ಷಣಕ್ಕೆ ಅವನ ಕಾಡು ವರ್ತನೆ ನಿಲ್ಲಿಸಲು ಬಹಳ ಚಂತಿಸಿದೆ. ಅವನ ಬಗ್ಗೆ ಊರಲ್ಲಿ ವಿಚಾರಿಸಿದೆ ಎಲ್ಲರೂ ದೂರುವವರೇ. 

ಒಂದು ದಿನ ಅವನನ್ನು ಬಳಿಗೆ ಕರೆದೆ. ಅವನೊಂದಿಗೆ ಮಾತಿಗಿಳಿದೆ. ಅವನಿಗಿಷ್ಟವಾದ ವಿಷಯ ಕೆಲಸಗಳನ್ನು ನೆನಪಿಸಿ ಖುಷಿಪಡಿಸಿದೆ. ನಿಧಾನಕ್ಕೆ ಅವರ ತಾಯಿಯ ಬಗ್ಗೆ ಕೇಳಿದೆ. ಅಂದು ನಾ ಎಂದು ನೋಡಿರದ ಸುನಿಲ್ ಹೊರಬಂದ. ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ತೀಯ ಎಂದು ಕೇಳಿದ್ದಕ್ಕೆ ನಮ್ ಶಾಲೆ ಮಕ್ಕಳು ....ಊ ಮಿಸ್ ಅವರಮ್ಮನಿಗೆ ಮುದ್ದೆ ಕೂಡ ಮಾಡಿ ಕೊಡ್ತಾನೆ ಎಲ್ಲ ಸಹಾಯ ಮಾಡ್ತಾನೆ ಅಂತ ಹೇಳಿದ್ರು. ಸುನಿಲ್ ಸುಮ್ಮನೇ ಇದ್ದ. ನನಗಂತೂ ಬಲು ಖುಷಿಯಾಯಿತು. ಅವರ ತಂದೆ ಬಗ್ಗೆ ವಿಚಾರಿಸಿದೆ. ಅವನೇನು ಹೇಳಲಿಲ್ಲ ಪುನಃ ಮಕ್ಕಳೇ ಮಿಸ್ ಅವರಪ್ಪ ಕುಡಿದು ಬಂದು ಪಾಪ ಅವರಮ್ಮನ್ನ ಹೊಡೀತಾರೆ. ನಮ್ಮ ಸುನಿಲ್ ಆಗ ಅವರಪ್ಪನ್ನ ಹೊಡೀಬೇಡ ಅಂತ ಬೈತಾನೆ ದೂರ ತಳ್ತಾನೆ  ಮಿಸ್ ಅವರಪ್ಪ ಅಂದರೆ ಇವನಿಗಾಗಲ್ಲ ಅಂತ ಹೇಳಿದ್ರು.  ಇಷ್ಟು ಸಣ್ಣ ಹುಡುಗನ ಮನೆ ಚಿತ್ರಣ ಕೇಳಿ ಕಣ್ತುಂಬಿತು. ಇವನ ವರ್ತನೆಗೆ ಕಾರಣ ತಿಳಿಯಿತು. 
ಅದನ್ನ ತೋರ್ಗೊಡದೆ ಅಂದು ಮನಸಾರೆ ಸುನಿಲ್ ನ ಮೆಚ್ಚಿಕೊಂಡೆ. ಅಕ್ಷರಭ್ಯಾಸಕ್ಕಿಂತ ಅಮ್ಮನ ಮೇಲಿನ ಪ್ರೀತಿ ದೊಡ್ಡದು. ನಮ್ ಸುನಿಲ್ ಓದದೆ ಇರ್ಬೋದು ಆದ್ರೆ ಅವನು ತುಂಬಾ ಒಳ್ಳೇವ್ನು. ಅವನನ್ನ ನೋಡಿ ಕಲೀರಿ ಅಂತ ಅವನ ಬೆನ್ನನ್ನು ತಟ್ಟಿದೆ. ಅಂದಿನಿಂದ ಅವನನ್ನು ನಡೆಸಿಕೊಳ್ಳುವ ರೀತಿ ಬದಲಾಯಿಸಿದೆ. ಕ್ರಮೇಣ ಅವ ಬದಲಾದ. ಅವನ ಮೇಲಿನ ದೂರುಗಳು ಮಾಯವಾದವು. ಅವನ ಮುಖವೂ ಲಕ್ಷಣವಾಯಿತು. ಶಾಲೆಗೆ ನೀಟಾಗಿ ಬರತೊಡಗಿದ. ನಗತೊಡಗಿದ ಓದಲೂ ಶುರುಮಾಡಿದ. ನನಗದೇ ಸಮಾಧಾನ.
   - ಉಷಾಗಂಗೆ   

1 ಕಾಮೆಂಟ್‌:

Rajiv Magal ಹೇಳಿದರು...

ಒಳ್ಳೆಯ ಸ೦ದೇಶ ನೀಡುವ, ನೀತಿ ಭರಿತ ಕಥೆ. ಅಭಿನ೦ದನೆಗಳು. ಈ ರೀತಿಯ ಲೇಖನಗಳು ಹೆಚ್ಚು ಜನರಿಗೆ ತಲುಪಲಿ. ಹೆಚ್ಚೆಚ್ಚು ಜನರ ಅನಿಸಿಕೆ - ಅಭಿಪ್ರಾಯಗಳು ತಮ್ಮ ಬ್ಲಾಗ್ ನಲ್ಲಿ ಕ೦ಡುಬರಲಿ. ಬಳಪ ಇನ್ನೂ ಹೆಚ್ಚು ಜನರ ಕಣ್ಣಿಗೆ ಬೀಳಲಿ. ಬಳಪವನ್ನು ಆಧರಿಸಿ, ಸಕಾರಾತ್ಮಕ ಬರಹಗಳು ಹೆಚ್ಚಲಿ.
೨೦೧೭ರ ಕ್ಯಾಲೆ೦ಡರ್ ನಲ್ಲಿ ಬಳಪ ಬ್ಲಾಗ್ ವಿಳಾಸವಿಲ್ಲದಿರುವುದಕ್ಕೆ ಏನಾದರೂ ಕಾರಣವಿದೆಯೇ?