Pages

ಕವನ - ನಾವು ಪ್ರೇಮ ಭಿಕ್ಷೆ ಬೇಡುವುದಿಲ್ಲ



ನಿಮಗೆ
ಪರಂಪರೆಯಿಂದ ಬಂದದ್ದೆಷ್ಟು
ನೀವು ಗಳಿಸಿದ್ದೆಷ್ಟು?
ಖಾಲಿ ಬಿದ್ದ ಜಮೀನು!
ಮುಳ್ಳು ಬೇಲಿಯೊಳಗಿನ ತೋಟ!
ಪಾಳು ಬಿದ್ದ ಮನೆ!
ನಿಮ್ಮ ಮಹಲು!
ಬಾಡಿಗೆಗೆ ಬಿಟ್ಟಿರುವ ಮನೆಗಳು!
ಎಷ್ಟು ಕೇಜಿ ಬಂಗಾರವಿದೆ?
ಪಾಲಿನಲ್ಲಿ ಬಂದದ್ದು
ನೀವೇ ಸಂಪಾದಿಸಿದ್ದು!
ನಿಮ್ಮ ಕೈ ಕೊರಳು ಕಾಲುಗಳನ್ನು
ಚಿನ್ನದ ಸರಪಳಿಯಲ್ಲೇ
ಬಿಗಿದುಕೊಂಡಿದ್ದೀರಾ?
ಬಸ್ಸು..ಕಾರು..ಸ್ಕೂಟರು
ಮನೆಯ ತುಂಬಾ
ಆಳು ಕಾಳು
ಎಷ್ಟು ನಾಯಿಗಳಿವೆ
ಕಾಂಪೌಂಡಿನೊಳಗೆ!
ದೊಡ್ಡ ಪರದೆಯ ಟೀವಿ
ರೂಮುಗಳ ತುಂಬಾ
ಕಂಪ್ಯೂಟರುಗಳು
ಬೀರುವಿಗೂ ಮಿಕ್ಕ ಬಟ್ಟೆಗಳು!
ಪ್ರದರ್ಶನಕ್ಕಿಟ್ಟ ಪಾತ್ರೆ ಪರಿಕರಗಳು!
ಸ್ವಾಮಿ
ಲೆಕ್ಕ ಕೇಳುತ್ತಿಲ್ಲ ನಾವು!
ನಮಗೆ ಗೊತ್ತು
ನಿಮ್ಮ ಮಹಲಿನಲ್ಲಿ
ಗೋಡೆಗಳು ಬೆಳೆದಿವೆ!
ಅಲ್ಲೊಂದು ಮೂಲೆಯಲ್ಲಿ
ಅಮ್ಮ ಅನಾಥೆಯಾಗಿದ್ದಾಳೆ!
ಕಿಟಕಿಯ ಕಂಡಿಯಿಂದ
ಇಳಿಸಂಜೆಯಲ್ಲಿ ಸೂರ್ಯನನ್ನು
ಕಾಣುವ ಅಪ್ಪನ ಕಂಗಳಲ್ಲಿ ನೀರಿದೆ!
ಮಗ ದಾರಿ ತಪ್ಪಿದ್ದಾನೆ!
ಮಗಳು ಕಂಗಾಲಾಗಿದ್ದಾಳೆ
ಸಂಬಂಧಗಳಿಗೆ
'ನಾಯಿಗಳಿವೆ ಎಚ್ಚರಿಕೆ!'
ಫಲಕ  ಎದ್ದು ಕಾಣುತ್ತದೆ!!
ಗೊತ್ತು
ನೀವು ಚಿನ್ನವನ್ನೇನು ತಿನ್ನಲಾರಿರಿ!
ನಾವು ಕೇಳಿದ್ದು
ತುತ್ತು ಅನ್ನವಷ್ಟೆ
ಮುಖದ ತುಂಬ ಮುಳ್ಳುಕಂಟಿ
ಬೆಳೆದುಕೊಂಡವರಲ್ಲಿ
ಪ್ರೇಮ ಭಿಕ್ಷೆ ಬೇಡಲಾರೆವು!!
  ~ ರಂಗಮ್ಮ ಹೊದೇಕಲ್.

ಕಾಮೆಂಟ್‌ಗಳಿಲ್ಲ: