Pages

ಕಥೆ - ಬಾಂಧವ್ಯ


ಸುಮಾ "ಬೇಗ ರೆಡಿಯಾಗು ಶಾಲೆಗೆ ಸಮಯವಾಗುತ್ತಿದೆ" ಅಕ್ಕ ಉಮಾ ತಂಗಿ ಸುಮಾಳನ್ನು ಕೂಗಿಕೊಂಡಳು. 
"ಬಂದೆ ಅಕ್ಕ, ಎರಡು ನಿಮಿಷ" ಎಂದ ಸುಮಾ ಐದು ನಿಮಿಷದ ನಂತರ ಹೊರಬಂದು "ರೆಡಿ ಅಕ್ಕ ಹೋಗೋಣ್ವಾ" ಎಂದಳು. 
ಶಾಲೆಗೆ ಹೊರಟ ಮಕ್ಕಳಿಬ್ಬರಿಗೂ "ನಿಧಾನವಾಗಿ ಹೋಗಿ" ಎಂದು ವೀಣಾ ಒಳ ನಡೆದಳು.

ಉಮಾ ಮತ್ತು ಸುಮಾ ಅಕ್ಕತಂಗಿಯರಾದರೂ ಸ್ನೇಹಿತರಂತೆ ಒಬ್ಬರನೊಬ್ಬರು ಬಿಟ್ಟಿರುತ್ತಿರಲಿಲ್ಲ. ಹೀಗೆ ಬೆಳೆದು ಉಮಾ ದ್ವಿತೀಯ ಪಿಯುಸಿಗೆ ಬಂದಾಗ ಸುಮಾ ಹತ್ತನೆ ತರಗತಿಗೆ ಬಂದಳು. ಒಂದು ದಿನ ಸುಮಾ ಶಾಲೆಯಿಂದ ಬರುವಾಗ ಅಪಘಾತವಾಗಿ ಎರಡು ತಿಂಗಳು ಹಾಸಿಗೆಯ ಮೇಲೆ ಮಲಗಬೇಕಾಯಿತು.         "ಉಮಾ ಪರೀಕ್ಷೆ ಸಮಯ ನಿನ್ನ ಗಮನ ಆ ಕಡೆ ಕೊಡು" ಎಂದು ವೀಣಾ ಮಗಳಿಗೆ ಹೇಳಿದಳು. 
"ಹೇಗಮ್ಮಾ ಓದಲಿ, ಇವಳು ಕಷ್ಟ ಪಡುತ್ತಿದ್ದರೆ ನನ್ನಿಂದ ಆಗ್ತಾಯಿಲ್ಲಮ್ಮ" ಎಂದಳು. 
ಕೊನೆಗೆ ಸುಮಾಳೆ  "ಸರಿ ನೀನೂ ಓದುತ್ತಾ, ನನಗೂ ಪಾಠ ಹೇಳಿಕೊಡು" ಎಂದಾಗ ಉಮಾ ಒಪ್ಪಿದಳು.   
ತಂಗಿಯ ಸೇವೆಯ ಜೊತೆಗೆ ತನ್ನ ಓದು ಮತ್ತು ತಂಗಿಗೂ ಪಾಠ ಹೇಳಿ ಕೊಡುತ್ತಿದ್ದಳು.  
ಪರಿಶ್ರಮದ ಫಲವಾಗಿ ಇಬ್ಬರು ಉತ್ತಮ ಅಂಕಗಳನ್ನು ಪಡೆದು ಮೊದಲ ಶ್ರೇಣಿಯಲ್ಲೇ ಉತ್ತೀರ್ಣರಾದರು. ಇವರಿಬ್ಬರ ಈ ಬಾಂಧವ್ಯವನ್ನು ನೋಡಿದ ತಂದೆ ತಾಯಿಗೆ ಬಹಳ ಸಂತೋಷವಾಯಿತು. ಉಮಾಳಿಗೆ ಇಪ್ಪತ್ತು ವರ್ಷ ತುಂಬಲು ಮನೆಯಲ್ಲಿ ಮದುವೆ ಮಾತು ಪ್ರಾರಂಭವಾಯಿತು. ಇದರಿಂದ ಅಕ್ಕತಂಗಿಯರಿಬ್ಬರಲ್ಲೂ ಒಬ್ಬರನೊಬ್ಬರು ಬಿಟ್ಟಿರುವುದು ಹೇಗೆಂಬ ಯೋಚನೆ ಪ್ರಾರಂಭವಾಯಿತು. ಎಲ್ಲರ ಮನಸ್ಸಿಗೆ ಒಪ್ಪಿದ ಉಮೇಶನೊಂದಿಗೆ ಉಮಾಳ ಮದುವೆ ನಡೆಯಿತು.
ಮದುವೆ ನಂತರ ಉಮಾ ಗಂಡನ ಮನೆಗೆ ಹೊರಟಳು. ಮನೆಯಲ್ಲಿ ಎಲ್ಲರಿಗೂ ಬೇಸರವಾಯಿತು. ದಿನಕ್ಕೊಮ್ಮೆ ಅಕ್ಕನೊಂದಿಗೆ ಮಾತನಾಡದಿದ್ದರೆ ಸುಮಾಳಿಗೆ ಸಮಾಧಾನವಾಗುತ್ತಿರಲಿಲ್ಲ. ಸುಮ ತನ್ನ 
ಬೇಸರ ಮರೆಯಲು ಓದುವುದರತ್ತ ಹೆಚ್ಚಿನ ಗಮನ ಹರಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದಳು. 
ಎರಡು ವರ್ಷ ಕಳೆದ ನಂತರ ಸುಮಾಳ ಮದುವೆ ಅವಳೊಪ್ಪಿದ ಹುಡುಗ ಸುರೇಶನೊಂದಿಗೆ ನಡೆಯಿತು. ತಂಗಿಯ ಮದುವೆಯಲ್ಲಿ ಉಮಾಳದೆ ಓಡಾಟ. 
ಆದರೆ ಉಮಾ ಎಷ್ಟೇ ಸಂಭ್ರಮದಿಂದ ಓಡಾಡುತ್ತಿದ್ದರೂ ಅವಳು ಸಂತೋಷವಾಗಿಲ್ಲವೆಂದು ಸುಮಾಳಿಗೆ ಅನಿಸುತಿತ್ತು. 
ಸುಮಾ "ಅಕ್ಕ ಹೊರಗೆ ಸಂತೋಷ, ಒಳಗೆ ದುಗುಡ, ಏಕೆ?" ಎಂದಾಗ ಉಮಾ "ಏನೂ ಇಲ್ಲ ಸುಮಾ, ನಿನ್ನ ಜೊತೆ ಮೊದಲಿನಂತೆ ಇರಲು ಸಾಧ್ಯಾನಾ?" ಎಂದು ಯೋಚಿಸುತಿದ್ದೇನೆ ಎಂದಳು. 
"ಸುಳ್ಳು ಹೇಳಬೇಡಕ್ಕ, ನೀನು ಬೇರೇನೋ ಚಿಂತೆಯಲ್ಲಿರುವೆ, ನನ್ನಲ್ಲಿ ಮುಚ್ಚು ಮರೆನಾ, ಹೇಳು" ಎಂದು ಒತ್ತಾಯಿಸಲು ಉಮಾ ತನಗೂ, ಅತ್ತೆಗೂ ನಡೆದ ಸಂಭಾಷಣೆಯನ್ನು ತಿಳಿಸಿದಳು. 
"ಅದು ಸರಿಯಲ್ಲವಾ, ಅವರಿಗೂ ಮೊಮ್ಮಗುವಿನ ಆಸೆಯಿರುವುದು, ನೀನ್ಯಾಕೆ  ಬೇಸರ ಮಾಡಿಕೊಳ್ಳುವೆ, ಭಾವನೊಂದಿಗೆ ಮಾತನಾಡಿ ಯಾರಾದರೂ ವೈದ್ಯರಿಗೆ ತೋರಿಸೋಣ" ಎಂದು ಸಮಾಧಾನಿಸಿದಳು.
  ವಾರದ ನಂತರ ಹೇಳಿದಂತೆ ಸುಮಾ ಅಕ್ಕನನ್ನು ಡಾಕ್ಟರ್ ಬಳಿ ಕರೆದುಕೊಂಡು ಹೋದಳು. 
ತಪಾಸಣೆ ಮಾಡಿದ ಡಾಕ್ಟರ್ "ಇವರಿಗೆ ಮಕ್ಕಳಾಗುವುದು ಸಾಧ್ಯವಿಲ್ಲ" ಎಂದು ಹೇಳಿದಾಗ ಇಬ್ಬರಿಗೂ ಆಘಾತವಾಯಿತು. 
ಎಚ್ಚೆತ್ತ ಸುಮಾ ಅಕ್ಕನೊಂದಿಗೆ "ಸಮಸ್ಯೆ ಒಂದಾದರೆ, ಹಲವಾರು ಪರಿಹಾರಗಳಿರುತ್ತವೆ,  ಚಿಂತಿಸಬೇಡ" ಎಂದು ಸಮಾಧಾನ ಮಾಡಿದರೂ ಉಮಾ ತನ್ನ ಅಳುವನ್ನು ನಿಲ್ಲಿಸಲಿಲ್ಲ. ನಂತರ ಹೇಗೋ ಸಮಾಧಾನ ಮಾಡಿ ಮನೆಗೆ ಕರೆದುಕೊಂಡು  ಬಂದಳು.
ಸ್ವಲ್ಪ ದಿನಗಳ ನಂತರ ಸುಮಾ ಗರ್ಭಿಣಿಯಾಗಿ ಹೆಣ್ಣುಮಗುವಿಗೆ ಜನ್ಮ ನೀಡಿದಳು. 
ಮಗುವನ್ನು ನೋಡಲು ಬಂದ ಅಕ್ಕನಿಗೆ ಸುಮಾ ಅಂದುಕೊಂಡಂತೆ "ಅಕ್ಕ ಇನ್ನು ಇವಳು ನಿನ್ನ ಮಗಳು, ತೆಗೆದುಕೋ" ಎಂದಳು. 
ಇದನ್ನು ಕೇಳಿದ ಉಮಾ ಏನೂ ಮಾಡಲು ತೋಚದೆ ಹಾಗೆ ನಿಂತಳು. ನಂತರ ಸಾವರಿಸಿಕೊಂಡು "ಇದು ಹೇಗೆ ಸಾಧ್ಯ ಸುಮಾ? ಸುರೇಶನನ್ನು ಕೇಳಬೇಡವಾ?" ಎಂದಳು. 
"ಇಷ್ಟೇನಾ ಅಕ್ಕ ನೀನು ನನ್ನ ಅರ್ಥ ಮಾಡಿಕೊಂಡಿರುವುದು? ನೀನು ದುಃಖದಲ್ಲಿದ್ದರೆ ನಾನ್ಹೇಗೆ ಸಂತೋಷವಾಗಿರಲಿ? ನಾನು ಮತ್ತು ಸುರೇಶ್ ಇಬ್ಬರು ಸೇರಿ ಈ ನಿರ್ಧಾರವನ್ನು ಮಾಡಿರುವುದು ನೀನು ಇಲ್ಲವೆನ್ನಬೇಡ" ಎಂದಳು. 
"ಅಕ್ಕ ಇನ್ನು ನಿನ್ನ ಬಾಳಿನಲ್ಲಿ ಚಿಂತೆಯಿರಬಾರದು, ನಿನ್ನ ಮಗಳನ್ನು ಕರೆದುಕೊಂಡು  ಹೋಗು"  ಎಂದಳು. 
ಆದರೂ "ಇಷ್ಟು ಬೇಗ ಬೇಡ ಸುಮಾ" ಎಂದು ಉಮಾ ತಂಗಿಗೆ ಹೇಳಿದಳು.ಕೇಳಿದ ಸುಮಾ  "ಬೇಡ ಅಕ್ಕ ಹಾಗೆ ಮಾಡಿದರೆ ಮಗು ನನ್ನ ಜೊತೆ ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತದೆ. 
ಮುಂದೆ ನಿನಗೆ ತೊಂದರೆಯಾಗುತ್ತದೆ, ಈಗಲೇ ಕರೆದುಕೊಂಡು ಹೋಗಕ್ಕ" ಎಂದಳು. ಇವರಿಬ್ಬರ ಮಾತುಗಳನ್ನು ಹೊರಗಿನಿಂದ ಕೇಳಿದ ತಂದೆ ತಾಯಿ ಸಂತೋಷಗೊಂಡರು. ಒಳಗಡೆ ಬಂದು "ನಿಮ್ಮಿಬ್ಬರ ನಡುವಿನ ಬಾಂಧವ್ಯ ಹಾಗೆ ಉಳಿದಿದೆ, ಇದು ಹೀಗೆ ಇರಲಿ, ಉಮಾ ಅವಳು ಹೇಳುವಂತೆ ಮಗುವನ್ನು ಕರೆದುಕೊಂಡು ಹೋಗಮ್ಮ" ಎಂದರು. 
ಉಮಾ ತಂಗಿಯ ಕಡೆಗೆ ನೋಡಿ "ವಯಸ್ಸಿನಲ್ಲಿ ನನಗಿಂತ ಚಿಕ್ಕವಳಾದರೂ ಗುಣದಲ್ಲಿ ಹಿರಿಯಳು" ಎಂದು ಪುಟ್ಟ ಕಂದನನ್ನು ಎದೆಗಪ್ಪಿಕೊಂಡಳು. ಇದನ್ನು ಕಂಡ ಎಲ್ಲರ ಮನಗಳು ಸಂತಸಗೊಂಡವು. 
ನಂತರ ಸುಮಾ "ಅಕ್ಕ ಮಗಳಿಗೆ ಏನೆಂದು ಹೆಸರಿಡುವೆ?" ಎಂದು ಕೇಳಿದಳು.
ನನ್ನ ಜೀವನದಲ್ಲಿ ಸಂತೋಷವನ್ನು ತಂದ ಕಂದನಿಗೆ  "ಖುಷಿ" ಎಂದು ಹೆಸರಿಡುವೆ ಎಂದು ಮಗುವನ್ನು ಮುದ್ದಿಸಿದಳು.


ವಿಜಯಲಕ್ಷ್ಮಿ ಎಂ ಎಸ್      

ಕಾಮೆಂಟ್‌ಗಳಿಲ್ಲ: