Pages

ಅನುಭವ - ಎನ್ ಎಸ್ ಎಸ್ ಕ್ಯಾಂಪ್



ಪ್ರಿಯ ಗೆಳೆಯರೆ, ನಾವು ಸಮಾಜ ಕಾರ್ಯ ವಿಭಾಗದಿಂದ ಪ್ರತಿ ವರ್ಷ ಹಳ್ಳಿಗಳಲ್ಲಿ ಸೇವಾ ಶಿಬಿರ ಹಮ್ಮಿಕೊಳ್ಳುತ್ತೇವೆ. 23/2/2017- 3/3/2017 ವರೆಗೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಟೈಗರ್ ರಿಸರ್ವ್ ನಡುವೆ ಇರುವ ಸೋಲಿಗರ ಪೋಡು ಬೆಡಗುಲಿಯಲ್ಲಿ ನಡೆಯಿತು. ಈ ಊರಿಗೆ ಇರುವುದೇ ಎರಡು ಖಾಸಗಿ ಬಸ್ ಗಳು. ಮಧ್ಯಾಹ್ನ ೧-೩೦ ಮತ್ತು ೨-೩೦ ಕ್ಕೆ.  ಎರಡೂ ಬಸ್ ಗಳು ರಾತ್ರಿ ಬೆಡಗುಲಿಯಲ್ಲಿಯೇ ಉಳಿದು ಮರುದಿನ ಹಿಂದಿರುಗುತ್ತವೆ. ಟೈಗರ್ ರಿಸರ್ವ್ ಆಗಿರುವುದರಿಂದ 
ಅರಣ್ಯ ಇಲಾಖೆಯ ಅನುಮತಿಯಿಲ್ಲದೆ ಯಾವುದೇ ಖಾಸಗಿ ವಾಹನಗಳು ಸಂಚರಿಸುವಂತಿಲ್ಲ. ಮತ್ತು ರಾತ್ರಿ ೬-೦೦ ರಿಂದ ಬೆಳಿಗ್ಗೆ ೬-೦೦ರವರೆಗೆ ಯಾವ ವಾಹನಗಳು ಸಂಚರಿಸುವಂತಿಲ್ಲ.
ಈ ಬಾರಿಯ ಶಿಬಿರ ಒಂದು ಮರೆಯಲಾರದ ಅನುಭವ. ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಬೆಡಗುಳಿಗೆ ತೆರಳಲು ನಮಗೆ ಈ ಬಾರಿ ಕಾಲೇಜಿನ ವಾಹನ ತೆಗೆದುಕೊಂಡು ಹೋಗಲು ಪರವಾನಗಿ ಇರಲಿಲ್ಲ. ಹುಡುಗರನ್ನು 23ರಂದು ಕಳುಹಿಸಿದ್ದೆವು. ಅವರು ಪ್ರಯಾಣ ಕಷ್ಟವಾಗಿತ್ತು, ತುಂಬಾ ರಷ್ ಇತ್ತು ಎಂದು ತಿಳಿಸಿ, ಖಾಸಗಿ ಬಸ್ ಮಾಲೀಕರಾದ ಫರೂಖ್ ಅವರ ನಂಬರ್ ಕೊಟ್ಟು, ಸಾಧ್ಯವಾದರೆ ಸೀಟ್ ರಿಸರ್ವ್ ಮಾಡಿಸಿಕೊಳ್ಳಿ ಎಂದು ಸೂಚನೆ ಕೊಟ್ಟರು. ಅಂತೆಯೇ ನಾವು, ಬಸ್ ಮಾಲೀಕರೆಗೆ ಫೋನಾಯಿಸಿ ನಾವು 15 -ಜನ - 13 ಹುಡುಗಿಯರು, ನಾನು ಮತ್ತು ಪ್ರೇಮಜ್ಯೋತಿ ಬಸ್ ಹತ್ತಿ ಸೀಟ್ ಪಡೆದು ನಿಟ್ಟುಸಿರಿಟ್ಟೆವು.  ಬಸ್ ಪುಣಜನೂರು ದಾಟಿ ಬೆಟ್ಟ ಅರ್ಧ ಹತ್ತಿತ್ತು. ಕಾಡಿಗೆ ಬೆಂಕಿ ಬಿದ್ದಿದ್ದರಿಂದ ಮುಂದೆ ಹೋಗಲಾಗದು ಎಂದು ಅರಣ್ಯ ಇಲಾಖೆ ಜೀಪ್ ನಮ್ಮ ಬಸ್ ನಿಲ್ಲಿಸಿತು. ಇಳಿದು ನೋಡಿದೆ. ಬೆಂಕಿ ಶಬ್ದ ಕಿವಿಗೆ ಅಡಚುತ್ತಿದೆ! 2 ಕಿಮಿ ಬಸ್ ರಿವರ್ಸ್ ಬಂದು ನಿಂತಿತು. ನಂತರ ಪುಣಜನೂರು ಗೇಟ್ ಬಳಿ ಕಾಯುತ್ತಾ ನಿಂತೆವು. 7 ಗಂಟೆ ಹೊತ್ತಿಗೆ, ಬಸ್ ಡ್ರೈವರ್ ಎಲ್ಲರಿಗೂ ಟೀ ತಂದು ಕೊಟ್ಟರು. ರಾತ್ರಿ 9 ಗಂಟೆಗೆ ಬಸ್ ಬಿಡುವುದಿಲ್ಲ ಅಂತ ತಿಳಿಯಿತು. ನಮ್ಮ ಪರಿಸ್ಥಿತಿ ದೇವರಿಗೇ "ಪ್ರೀತಿ" ಶಿವರಾತ್ರಿಯ ಆ ರಾತ್ರಿ ಮರೆಯಲಾಗದು. ಅತ್ತ ಬೆಡಗುಲಿಯಿಂದ ಹುಡುಗರು ಊಟಕ್ಕೆ ಅನ್ನ ಎಷ್ಟು ಮಾಡಿಸಲಿ ಎಂದರೆ ಇತ್ತ ನಮ್ಮ ಎರಡನೇ ಬ್ಯಾಚ್ ಶಾಂತರಾಜು ಜೀಪಿನಲ್ಲಿ ಬಂದು ಚಾಮರಾಜನಗರಕ್ಕೆ ಎಲ್ಲರನ್ನು  ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ನಗರಕ್ಕೆ ಹಿಂತಿರುಗಿದರೆ ಮತ್ತೆ ಬರಲು ಆಗುವುದೋ ಇಲ್ಲವೋ ಎಂಬ ತುಮುಲ. ಆಪದ್ಬಾಂಧವರಾಗಿ ಬಂದವರು ಬಸ್ ಮಾಲೀಕ ಫರೂಕ್ ಮತ್ತು ಚಾಲಕ ರಾಮಣ್ಣನವರು. "ಹೆದರಬೇಡಿ. ನಿಮ್ಮನ್ನು ಬೆಡಗುಲಿಗೆ ತಲಪಿಸುವ ಜವಾಬ್ದಾರಿ ನಮ್ಮದು" ಎಂದರು. ನಮಗೆಲ್ಲರಿಗೂ ಬಿಸಿ ಅನ್ನ ಸಾಂಬಾರ್ ರಾಮಣ್ಣನವರು ತಮ್ಮ ಮನೆಯಿಂದ ಮಾಡಿಸಿ ತಂದರು. 5-6 ತಟ್ಟೆ ಇತ್ತು. ಕುಡಿಯುವ ನೀರೂ ತಂದಿದ್ದರು. ಎಲ್ಲ ಹುಡುಗಿಯರಿಗೂ ಕೈ ತುತ್ತು ಊಟ! ನಂತರ ಮಲಗಲು, ಅಲ್ಲೆ ಇದ್ದ BSNL compound ಒಳಗೆ ಗೇಟ್ ಲಾಕ್ ಮಾಡಿಸಿ ನಮಗೆ ಮಲಗಲು ಅನುವು ಮಾಡಿದರು. ಆಕಾಶವೇ ಹೊದಿಕೆ. ನಕ್ಷತ್ರದ ಬೆಳಕು. ಮುಚ್ಚಿದ BSNL. ಬೀದಿ ದೀಪದ ಬೆಳಕು. ನಾನು ಏನು ಹೇಳಿದರೂ ok ಅಂದ ಹುಡುಗಿಯರು. ಅಲ್ಲೇ ಮಲಗಿದೆವು. 4 ಗಂಟೆಗೆ ಕೊರೆಯುವ ಛಳಿ. ಕಾಡಿನ ಬೆಂಕಿ ಎಲ್ಲ ಬೆಟ್ಟಗಳ ಮೇಲೆ, ಹೊಗೆ ಹಾಗು ಬೂದಿ ಹಾರಿಬರುತ್ತಿತ್ತು. ಮೈಸೂರಿಗೆ 6 ಗಂಟೆಗೆ ಹಿಂತಿರುಗುವುದು ಎಂದು ನಿಶ್ಚಯಿಸಿ್ದೆ. 5.45ಕ್ಕೆ ಬಸ್ ಮೇಲೆ ಬಿಡುವುದಾಗಿ ಹೇಳಿದರು. 6.40 ಬಸ್ ಪ್ರಯಾಣ ಆರಂಭ. 7.45 ಬೆಡಗುಲಿ ತಲಪಿದೆವು! ಹೀಗೆ ಆರಂಭ ಆದ ಶಿಬಿರ ಇಂದು ಸುಗಮವಾಗಿ ಮುಗಿಯಿತು. ನನ್ನ ಮಾತುಗಳು ಇನ್ನೂ ಮುಗಿಯುತ್ತಿಲ್ಲ. ಸಾಧ್ಯವಾದರೆ ರಾತ್ರಿ ಎಷ್ಟು ಹೊತ್ತಿಗಾದರೂ ಕರೆತರಲು ಸಿದ್ಧರಾಗಿ ನಿದ್ರೆ ಮಾಡದೇ ಕಾದ ಶಾಂತರಾಜು, ಅವರಿಗೆ ಸಹಕರಿಸಲು ಸಿದ್ಧರಾಗಿ ನಿಂತಿದ್ದ ಚಾಮರಾಜನಗರದ ರೋಟರಿ ಕ್ಲಬ್ ಅಧ್ಯಕ್ಷರಾದ ಸುರೇಶರವರು, ಆ ಬೆಂಕಿ ನಡುವೆ ಬೆಟ್ಟದ ಕೆಳಗೆ ಬರಲು ಸಿದ್ದವಿದ್ದ ನಮ್ಮ ಹುಡುಗರು, ನಮಗಾಗಿ ಕೋಳಿ ಪಾಳ್ಯದಲಿ ರೂಮ್ ಮಾಡಲು ಪ್ರಯತ್ನಿಸಿದ tvs estate ನೌಕರರು, ನಮ್ಮ ರಕ್ಷಣೆಗೆ ನಿಂತ ಇಡೀ ಬಸ್ ನ ಸೋದರ ಸೋದರಿಯರು. ಇವರೆಲ್ಲರಿಗಾಗಿ ನನ್ನದಲ್ಲದ ಆದರೆ ನನ್ನ ಹೃದಯಕ್ಕೆ ಹತ್ತಿರವಾದ ಸಾಲುಗಳು,  "ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ.."

- ಡಾ ಸುಮನಾ ಮೂರ್ತಿ 

1 ಕಾಮೆಂಟ್‌:

Rajiv Magal ಹೇಳಿದರು...

ತಾವು ಆಯೊಜಿಸಿದ ಗ್ರಾಮ ವಾಸ್ತವ್ಯ, ಸೇವಾ ಕಾರ್ಯಕ್ರಮಗಳೇ ಇತ್ತೀಚಿಗೆ ಮಾಯವಾಗುತ್ತಿರುವ ಸ೦ಧರ್ಭದಲ್ಲಿ ತಮ್ಮ ಅನುಭವಕ್ಕಿ೦ತ ಶಿಬಿರದ ಆಯೋಜನೆಗೆ ಅಭಿನ೦ದನೆಗಳು. ಕೇವಲ ನಾಲ್ಕು ಗೋಡೆಗಳ ನಡುವೆ ಅಭ್ಯಾಸ, ಅ೦ಕಕ್ಕೆ ಮಹತ್ವ ನೀದುವ ಪರಿಪಾಠ ಬದಲಾದರೆ ಇ೦ದಿನ ಯುವಕರ ಮನೋಭಾವ ಬದಲಾಗುವುದರಲ್ಲಿ ಸ೦ದೇಹವಿರದು. ಜೀವನದಲ್ಲಿ ನಡೆಯುವ ಘಟನಾವಳಿಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವ, ಎದುರಿಸುವ ಆತ್ಮ ಸ್ಥೈರ್ಯ ಕಲಿಸುವಲ್ಲಿ ಶಾಲೆಗಳು ಮು೦ದಾಗಬೇಕು. ಮಾನದ೦ಡವಲ್ಲದಿದ್ದರೂ, ಅ೦ಕಗಳು ತಾವಾಗಿಯೇ ಬರುತ್ತೆ .... ಆದರೆ ಜೀವನ ಸವೆಸುವ ಹಾದಿಯಲ್ಲಿ ಇಡಬೇಕಾದ ಹೆಜ್ಜೆಗಳನ್ನು ಕಲಿಸುವುದು ಅನುಭವವೇ? ಶುಭವಾಗಲಿ.