Pages

ಅನುವಾದಿತ ಕಥೆ - “ಮೂರ್ಖ ಮತ್ತು ಮಹಾಮೂರ್ಖ”

ಶಮಾ ಫತೇಹ್ ಅಲಿಯವರ ಹಿಂದಿ ಭಾಷೆಯ “ಮೂರ್ಖ ಮತ್ತು ಮಹಾಮೂರ್ಖ”   ಕಥೆಯ ಅನುವಾದ] 


     1964ರಲ್ಲಿ ಅಲಿಬಾಗ್‍ನ ಸುತ್ತಮುತ್ತಲಿನ ಹೊಲಗಳಲ್ಲಿ ಅಡ್ಡಾಡುತ್ತಿರುವಾಗ ನಿಮಗೊಂದು ವಿಚಿತ್ರವಾದ ದೃಶ್ಯ ಕಾಣಸಿಗುತ್ತದೆ. ಕನ್ನಡಕ ಧರಿಸಿದ್ದ, ಅಚ್ಚಬಿಳಿ ಗಡ್ಡವಿದ್ದ ಸಣಕಲು ವೃದ್ಧನೊಬ್ಬ ಶಿಸ್ತಿನ ಸಿಪಾಯಿಯಂತೆ ಅತ್ತಿಂದಿತ್ತ, ಇತ್ತಿಂದತ್ತ ಪೆರೇಡ್ ಮಾಡುತ್ತಿದ್ದ. ಆತನ ಹಿಂದೆ ಚಿಕ್ಕಮಕ್ಕಳ ಒಂದು ಸೈನ್ಯ ಹೊರಟಿತ್ತು. ಆ ವ್ಯಕ್ತಿ ಥೇಟ್ ಜನರಲ್ ನಂತೆ ಆಗೊಮ್ಮೆ ಈಗೊಮ್ಮೆ ದುರ್ಬೀನು ಹಿಡಿದು ನಾಲ್ಕು ದಿಕ್ಕುಗಳಿಗೂ ದೃಷ್ಟಿ ಹಾಯಿಸುತ್ತಿದ್ದ. 
ಅನಿಲ್, ಹರೀಶ್, ಅಹಮದ್, ಶೀಲಾ ಮತ್ತು ಕಿರಣ್, ರವಿ ಸಲೀಮ್ ಮಾಮುವಿನ ಹಿಂದೆ ಕರ್ತವ್ಯನಿಷ್ಠೆಯಿಂದ ಹೋಗುತ್ತಿದ್ದರಲ್ಲದೆ ಪ್ರಪಂಚದಲ್ಲೇ ಅತ್ಯುತ್ತಮವಾದ ಕಾರ್ಯವೊಂದನ್ನು ಮಾಡುತ್ತಿದ್ದೇವೆಂಬ ಗಾಂಭೀರ್ಯ ಎದ್ದುತೋರುತ್ತಿತ್ತು. ಗಿಡಗಳಲ್ಲಿ, ಪೊದೆಗಳಲ್ಲಿ ಇಣುಕುತ್ತಾ, ಏನೋ ಕಂಡಂವರಂತಾಗಿ, ಮರುಕ್ಷಣವೇ ದುರ್ಬೀನು ಕಸಿದುಕೊಂಡು ಕುತೂಹಲದಿಂದ ವೀಕ್ಷಿಸುತ್ತಿದ್ದರು. 


    ಅಲ್ಲೇ ಪಕ್ಕದ ಒಂದು ಪೊದೆಯಿಂದ ಪಟಪಟ ಅಂತ ಹಕ್ಕಿಯೊಂದು ಹಾರಿಹೋಯಿತು. ಒಂದೇ ಸಮನೆ ಮಕ್ಕಳು ಅದರ ಹೆಸರನ್ನೇ ಕೂಗತೊಡಗಿದರು. “ಧುಮರಿ” ಎಂದು ಅನಿಲ್, “ಚಿಲ್ ಚಿಲ್” ಎಂದು ಶೀಲಾ, “ಬ್ಯಾಬ್ಲರ್” ಎಂದು ಹರೀಶ್. 
“ಬ್ಯಾಬ್ಲರ್ ಹಕ್ಕಿಯನ್ನೇ ನೋಡಿಲ್ವೇನೋ ದಡ್ಡ” ಎಂದು ಹರೀಶ ಅನಿಲ್ ನನ್ನು ಮೂದಲಿಸಿದ. 
ಅದಕ್ಕೆ ಅನಿಲ್, “ಓಹೋ, ಇಂಗ್ಲಿಷ್ ಹೆಸರು ಹೇಳಿದ ಮಾತ್ರಕ್ಕೆ ಹಿಂದಿ ಪದ ತಪ್ಪಾಗಿ ಬಿಡುತ್ತದೇನು” ಎಂದ. 
ಹರೀಶ “ಅಯ್ಯೊ ದಡ್ಡ, ಮೂರ್ಖ” ಎಂದ. 
ಅನಿಲ್ “ನೀನೆ ದಡ್ಡರಿಗೆಲ್ಲ ದಡ್ಡ, ಮಹಾ ಮೂರ್ಖ, ಶತಮೂರ್ಖ” ಎಂದ. ಶುರುವಾಯಿತು ಯುದ್ಧ. ಸಲೀಮ್ ಮಾಮು ಮತ್ತು ಮಕ್ಕಳಂತೂ ಈ ದೃಶ್ಯದಿಂದ ಮಜಾ ತೆಗೆದುಕೊಳ್ಳುತ್ತಿದ್ದರು. ಕೊನೆಗೂ ತಮ್ಮ ಯುದ್ಧವನ್ನು ಮುಗಿಸಿದ ಪೋರರು ಧೂಳು ಕೊಡವಿ ಟೋಪಿ ಸರಿಮಾಡಿಕೊಂಡರು. 
     ಇಷ್ಟು ಬೇಗ ಯುದ್ಧ ಮುಗಿದಿದ್ದರಿಂದ ಬೇಸರಗೊಂಡ ಕಿರಣ್ ಸುಮ್ಮನಿರಲಾರದೆ ಹರೀಶ್‍ನನ್ನು ಕೆಣಕಿದ. “ಆಯ್ತು, ಅನಿಲ್ ಮೂರ್ಖ, ದಡ್ಡನಾದರೆ, ನೀನೇನು? ನಿನ್ನ ಪ್ರಕಾರ ಧುಮುರಿ ಬೇರೆ, ಚಿಲ್ ಚಿಲ್ ಬೇರೆ, ಬ್ಯಾಬ್ಲರ್ ಬೇರೇನಾ? ಪ್ರಶ್ನಿಸಿದ.
 ಅದಕ್ಕೆ ಅಹಮದ್ ಶಾಲೆಯಲ್ಲಿ ಉತ್ತರಿಸುವಂತೆ ಕೈ ಮೇಲಕ್ಕೆತ್ತಿ “ಒಂದೇ, ಎಲ್ಲಾ ಒಂದೇ, ಮೂರೂ ಹೆಸರುಗಳೂ ಒಂದೆ, ನಾನು ಪುಸ್ತಕದಲ್ಲಿ ಓದಿದ್ದೇನೆ" ಎಂದ.
ಅದಕ್ಕೆ ರವಿ “ಓಹೋ ಹಾಗಾದರೆ ಮೂರ್ಖ, ಮಹಾಮೂರ್ಖ ಇಬ್ಬರೂ ಸಮಾನರೇ?” ಛೇಡಿಸಿದ. 
ಅದಾಗಲೇ ನಾಚಿಕೆಯಿಂದ ತಲೆತಗ್ಗಿಸಿದ್ದ ಅನಿಲ್ ಮತ್ತು ಹರೀಶನನ್ನು ಕಂಡು “ಹೋಗ್ಲಿ ಬಿಡಿ, ಇನ್ನು ವಾದ ಸಾಕು,. ಎಲ್ಲರ ಉತ್ತರವೂ ಸರಿಯೇ. ಕೇವಲ ಬೇರೆ ಬೇರೆ ಹೆಸರಿಗಾಗಿ ಜಗಳವಾಯಿತು” ಎಂದಳು ದೊಡ್ಡ ಮನಸ್ಸಿನ ಶೀಲಾ. ಇದುವರೆಗೂ ಸುಮ್ಮನಿದ್ದ ಸಲೀಮ್ ಮಾಮು ಇದ್ದಕ್ಕಿದ್ದಂತೆ ಗಂಭೀರ ಸ್ವರದಲ್ಲಿ,  “ಮಕ್ಕಳೇ, ಎಷ್ಟೋ ಬಾರಿ ಕೇವಲ ಹೆಸರಿಗಾಗಿಯೇ ಜಗಳಗಳಾಗುತ್ತವೆ” ಎಂದರು. ಇಷ್ಟೊತ್ತು ನಡೆದ ಜಗಳ ಕೇವಲ ಸಣ್ಣ ಹೆಸರಿಗಾಗಿಯೇ ಎಂದು ಮಕ್ಕಳೆಲ್ಲಾ ಯೋಚಿಸುತ್ತಿರುವಾಗಲೇ ಆಕಾಶದಲ್ಲಿ ಒಂದು ಸಣ್ಣ ಬಿಂದುವಿನ ಕಡೆ ಬೆರಳು ತೋರಿಸುತ್ತಾ ರವಿ, “ಅಲ್ಲಿ ನೋಡಿ, ಪಕ್ಷಿಯೊಂದು ಹಾರುತ್ತಿದೆ” ಎಂದ. ಆ ಹಕ್ಕಿ ಹತ್ತಿರ ಬರುತ್ತಿದ್ದಂತೆಯೇ ಗಡಚಿಕ್ಕುವ ಶಬ್ದ ಕೇಳಿಬಂತು. ಅದು ವಿಮಾನವೆಂದು ತಿಳಿಯಿತು. ಮಕ್ಕಳೆಲ್ಲಾ ಅದನ್ನೇ ಮಿಕಮಿಕಾಂತ ನೋಡುತ್ತಿದ್ದರು. 
ಅಹಮದ್ ನಂತೂ ಎವೆಯಿಕ್ಕದೆ ನೋಡುತ್ತಾ, “ಇದು ಬಾಂಬರ್ ವಿಮಾನವಾಗಿರಬಹುದೇ” ಎಂದನು. 
“ಖಂಡಿತ ಅದು ಪಾಕಿಸ್ತಾನದ ಬಾಂಬರ್ ವಿಮಾನವೇ. ಎಲ್ಲರೂ ಇದ್ದಲ್ಲಿಯೇ ಮಲಗಿಬಿಡಿ, ಮೊದಲೇ ಯುದ್ಧದ ಸಮಯ. ಸುಮ್ಮನೆ ಏಕೆ ತೊಂದರೆಗೆ ಸಿಕ್ಕಿಕೊಳ್ಳುವುದು” ಎಂದರು ಸಲೀಮ್ ಮಾಮು. ಎಲ್ಲರೂ ಸದ್ದಿಲ್ಲದೆ ಪೊದೆಗಳಡಿಯಲ್ಲಿ ಅಡಗಿಕೊಂಡರು. ವಿಮಾನದ ಸದ್ದು ದೂರವಾಗುತ್ತಿದ್ದಂತೆಯೇ, ನಿರಾತಂಕದಿಂದ ತಲೆ ಎತ್ತಿದ ರವಿ ಕುತೂಹಲ ತಾಳಲಾರದೆ ಪ್ರಶ್ನಿಸಿದ. “ಈಗ ಪಾಕಿಸ್ತಾನದ ಜೊತೆ ನಡೆಯುತ್ತಿರುವ ಯುದ್ಧವೂ ಸಹ ಕೇವಲ ಹೆಸರಿಗಾಗಿಯೇನು, ಸಲೀಮ್ ಮಾಮು”. 
ಮಕ್ಕಳೆಲ್ಲಾ ಮುಸಿಮುಸಿ ಎಂದು ನಕ್ಕುಬಿಟ್ಟರು. ಈ ಮಾತು ಕೇಳಿ ಸಲೀಮ್ ಮಾಮುಗೆ ಹೊಸ ವಿಷಯ ಹೊಳೆದಂತಾಯಿತು. ನಂತರ "ಹೌದು, ನಿಜವಾಗಿ ಹೇಳಬೇಕೆಂದರೆ, ಹೆಸರಿಗಾಗಿಯೆ ಮೊದಲಿನಿಂದಲೂ ಪಾಕಿಸ್ತಾನದ ಜೊತೆ ಅರ್ಥವಿಲ್ಲದ ಯುದ್ಧ ನಡೆಯುತ್ತಿದೆ" ಎಂದರು. 
ಅನಿಲ್ ಬೇಸರದಿಂದ, “ಎಂತಹ ಮೂರ್ಖತನ, ಇದರಿಂದಲೇ ಅಪ್ಪ ಯುದ್ಧದಲ್ಲಿ ಸೆಣೆಸಾಡುವಂತಾಗಿದೆ” ಎಂದ. 
“ಹೌದು ಮೂರ್ಖರು, ಮಹಾಮೂರ್ಖರು” ಕಿರಣ ದನಿಗೂಡಿಸಿದ. 
     ಪೀ.....ಪೀ.....ಎಂದು ಜೋರಾಗಿ ಹಾರ್ನ್ ಮಾಡಿಕೊಂಡು ಬರುತ್ತಿದ್ದ ಜೀಪೊಂದು ಶಬ್ದಮಾಡುತ್ತಾ ಜೋರಾಗಿ ಬ್ರೇಕ್ ಹಾಕಿತು. ಪೊಲೀಸ್ ಅಲ್ಲಿಂದಲೇ “ಯಾರೋ ನೀವು, ಅಲ್ಲೇ ನಿಂತುಕೊಳ್ಳಿ, ದುರ್ಬೀನು ಹಿಡಿದು ಓಡಾಡಲು ನಿಮಗೆ ಯಾರು ಅಪ್ಪಣೆ ಕೊಟ್ಟರು” ಎಂದು ಹತ್ತಿರ ಬಂದ. 
ಲಾಠಿ ಹಿಡಿದಿದ್ದ ಪೊಲೀಸ್, ಮಾಮುವಿನ ಬಳಿ ಬಂದು, “ಏನಯ್ಯಾ, ನೀನು ಮಾಡುತ್ತಿರುವ ಕೆಲಸ? ದುರ್ಬೀನು ಹಿಡಿದು ಮಕ್ಕಳಿಗೆ ಏನು ಟ್ರೈನಿಂಗ್ ಕೊಡುತ್ತಿದ್ದೀಯಾ? ಅದೂ ಈ ಯುದ್ಧದ ಸಮಯದಲ್ಲಿ, ಈ ರೀತಿ ಓಡಾಡಬಾರದು ಎಂದು ಗೊತ್ತಿಲ್ವೇ?” ಪಶ್ನಿಸಿದ. 
ಉತ್ತರವಾಗಿ ಮಾಮು “ಹೌದು ಸರ್ ಗೊತ್ತು, ಆದರೆ ..” ಎನ್ನುತ್ತಿದ್ದಂತೆಯೇ ಪೊಲೀಸ್, "ಆದರೆ ಏನು, ನನಗೆ ತಿಳಿಯಲ್ಲ ಅನ್ಕೊಂಡೇನು? ಈ ಮಕ್ಕಳಿಗೆ  ಗೂಢಚಾರಿ ತರಬೇತಿ ನೀಡ್ತಾ ಇದ್ದೀಯಾ? ಯಾರು ನೀನು, ನಿನ್ನ ಹೆಸರೇನು?” ಕೇಳಿದ. 
ಅಹಮದ್ ಟೀಚರ್‍ ಉತ್ತರ ಹೇಳಿದರೆ ಕಷ್ಟದಿಂದ ಬೇಗ ಪಾರಾಗಬಹುದು ಎಂದುಕೊಂಡು, ತಕ್ಷಣವೇ “ಅವರ ಹೆಸರು ಸಿಲೀಮಿಲಿ ಮಾಮು” ಎಂದು ಬಡಬಡಿಸಿದ. 
ಧೀರೆ ಶೀಲಾ ಅವನನ್ನು ತಡೆದು, “ಏಯ್ ಸುಮ್ನಿರೊ, ಅವರಿಗೆ ನಿಜವಾದ ಹೆಸರು ಹೇಳಬೇಕು” ಎಂದಳು. 
ಅಹಮದ್, ಹಾಗಾದ್ರೆ, ಇದು ನಿಜವಾದ ಹೆಸರಲ್ವೇನು” ಕೇಳಿದ. 
“ನನ್ನ ಹೆಸರು ಅಲಿ”. 
“ಅಲಿ! ಶುದ್ಧ ಪಾಕಿಸ್ತಾನಿ ಹೆಸರು. ನನ್ನ ಸಂಶಯ ನಿಜ. ನೀನು ದುರ್ಬೀನು ಹಿಡಿದು ಮಕ್ಕಳಿಗೆ ಟ್ರೈನಿಂಗ್ ಕೊಡುತ್ತಿರುವಾಗಲೇ ಅಂದುಕೊಂಡೆ, ನಡೀರಿ ಪೊಲೀಸ್  ಸ್ಟೇಷನ್‍ಗೆ” ಎಂದು ಗದರಿದ.   
ಮಕ್ಕಳೆಲ್ಲಾ ದಂಗಾದರು. ಅಹಮದ್ ‘ಓ’ ಎಂದು ಅಳಲು ಶುರುಮಾಡಿದ. 
ಶೀಲಾ “ಏನೂ ಆಗುವುದಿಲ್ಲ, ಸುಮ್ಮನಿರು” ಎಂದು ಸಮಾಧಾನ ಪಡಿಸಿದಳು. ಹರೀಶ್ ಮತ್ತು ಅನಿಲ್ ಏನಾದರೊಂದು ಮಾಡಿ ಸಮಸ್ಯೆ ಬಗೆಹರಿಸಬೇಕೆಂದು ಮುಂದಾದರೂ ಅವರಿಗೆ ಧೈರ್ಯ ಸಾಕಾಗಲಿಲ್ಲ. 
“ಜೈಲಿನಲ್ಲಿ ಹಾಕಿ ನಮ್ಮನ್ನೆಲ್ಲಾ ಚಚ್ತಾರೆ" ಎಂದು ಅಹ್ಮದ್ ಅಳತೊಡಗಿದ. ಅವನನ್ನು ಸುಮ್ಮನಿರೆಂದು ಗದರಿದ ಪೊಲೀಸ್ ಒಂದು ನೋಟ್ ಬುಕ್ ತೆಗೆದು “ಪೂರ್ತಿ ಹೆಸರೇನು” ಎಂದ. 
ಮಾಮು ಸ್ಥಿರವಾಗಿ ನಿಂತು “ಡಾ|| ಸಲೀಂ ಅಲಿ ಎಂದು ಉತ್ತರಿಸುತ್ತಿದ್ದಂತೆಯೇ ಬರೆದುಕೊಳ್ಳುತ್ತಿದ್ದ ಪೊಲೀಸ್ “ಏನು ಡಾ|| ಸಲೀಮ್ ಅಲಿ, ಆದರೆ ಅವರು ಪಕ್ಷಿಪ್ರೇಮಿಯಲ್ವೇ, ಏನಾದ್ರೂ ಎಡವಟ್ಟಾಯ್ತಾ” ಎಂದು ತುಸು ಆಲೋಚಿಸಿ ಹಿಡಿದ್ದಿದ್ದ ಪುಸ್ತಕವನ್ನು ತಕ್ಷಣ ಕೆಳಗೆ ಬಿಟ್ಟು ಡಾ|| ಸಲೀಮ್ ಅಲಿ ಎಂದು ಅವರನ್ನು ಗಬಕ್ಕನೇ ತಬ್ಬಿಕೊಂಡ. 

“ಸರ್ ಎಷ್ಟು ದಿನದಿಂದ ನನಗೊಂದು ಹಕ್ಕಿ ಚಿಂತೆಗೆಡಿಸಿದೆ. ನಾನು ಹೋದ ಕಡೆಯೆಲ್ಲಾ ಅದನ್ನು ನೋಡ್ತೀನಿ. ಆದ್ರೆ ಅದರ ಹೆಸರೇ ಗೊತ್ತಿಲ್ಲ, ದಯವಿಟ್ಟು ಅದು ಯಾವ ಹಕ್ಕಿಯೆಂದು ಹೇಳಿ. ಸ್ವಲ್ಪ ದೊಡ್ಡದಾದ ಪಾದ, ಕೊಕ್ಕು ಉದ್ದ್ದವಾಗಿದೆ, ಸಿಕ್ಕಸಿಕ್ಕವರನ್ನೆಲ್ಲ ಕೇಳಿ ಕೇಳಿ ಸಾಕಾಗಿದೆ.” 
ಸಲೀಮ್ ಅವರು “ಅದರ ಕೊಕ್ಕಿನ ಮೇಲೆ ಕೆಂಪು ಗೆರೆ ಇದೆಯೇ?" ಕೇಳಿದರು.  
"ಹಾ ಅದೇ ಹಕ್ಕಿ, ಎಲ್ಲಾ ಕಡೆ ಕಾಣುತ್ತೆ. ಡಿಡ್ ಯೂ ಡೂ ಇಟ್ ಎಂದು ಕೂಗುತ್ತೆ ಅಲ್ವಾ?” ಕೇಳಿದರು. 
“ಹೌದು, ಹೌದು ಹೋದಲೆಲ್ಲಾ ಹೀಗೆ ಕೂಗುತ್ತೆ.” 
“ಅದನ್ನು ‘ಡಿಡಿ ಯೂ ಡೂ ಇಟ್’ ಎನ್ನುತ್ತಾರೆ” ಎಂದ ಹರೀಶ್. 
ಕಿರಣ್ “ಟಿಟಹರಿ ಅಂತಾನೂ ಕರೀತಾರೆ”. 
ಅನಿಲ್ – “ಅಥವಾ ಫಿರ್‍ಜರ್ದಿ ಎಂತಲೂ ಕರೀತಾರೆ. 
ಶೀಲಾ- ರೆಡ್ ವಾಯ್ಲೆಂಡ್ ವೈಪ್‍ವಿಂಗ್ ಅಂತಲೂ ಕರೀತಾರೆ. 
ರವಿ “ಹೌದು ಕೇವಲ ಶತಮೂರ್ಖರು ಮಾತ್ರ ಈ ಹೆಸರಿನಿಂದ ಕರೀತಾರೆ” ಅಂದ. ಶುರುವಾಯಿತು ನೋಡಿ ಮತ್ತೊಂದು ಮಹಾಯುದ್ಧ!!       
ಉಷಾಗಂಗೆ

ಕಾಮೆಂಟ್‌ಗಳಿಲ್ಲ: