(ಕಳೆದ ಸಂಚಿಕೆಯಿಂದ ಮುಂದುವರೆದಿದೆ)
ಕ್ರಾಂತಿಕಾರಿಗಳು ಅಸೀಮ ದೇಶಭಕ್ತರು, ಕೊಲೆಗಡುಕರಲ್ಲ
ಭಗತ್‍ಸಿಂಗ್‍ರು ಆಶಿಸಿದಂತೆ ಅವರ ಈ ಹೇಳಿಕೆಯ ಬಗ್ಗೆ ಇಡೀ ದೇಶದಲ್ಲಿ ಚರ್ಚೆ ಆರಂಭವಾಯಿತು. ಕ್ರಾಂತಿಯ ಬಗ್ಗೆ, ಕ್ರಾಂತಿಕಾರಿಗಳ ಬಗ್ಗೆ, ಅವರ ತ್ಯಾಗದ ಬಗ್ಗೆ, ಸ್ವಾತಂತ್ರ್ಯ ಗಳಿಸುವ ವಿಧಾನದ ಬಗ್ಗೆ, ಚರ್ಚೆಗಳು ಆರಂಭವಾದವು. ಕ್ರಾಂತಿಕಾರಿಗಳು ಬಯಸಿದಂತೆ ಜನತೆ ಅವರನ್ನು ಕೊಲೆಗಡುಕರೆಂದು, ಭಯೋತ್ಪಾದಕರೆಂದು, ಉಗ್ರವಾದಿಗಳೆಂದು ಪರಿಗಣಿಸದೆ, ಬದಲಿಗೆ ಕ್ರಾಂತಿಕಾರಿಗಳನ್ನು ಅಪಾರವಾದ ದೇಶಪ್ರೇಮವುಳ್ಳ, ಎಂತಹುದೇ ತ್ಯಾಗಕ್ಕೂ ಸಿದ್ಧರಿರುವ ಅಸೀಮ ದೇಶಪ್ರೇಮಿಗಳೆಂದು ಪರಿಗಣಿಸಿದರು.
ತೀರ್ಪು
ವಿಚಾರಣೆ ಎಂಬ ನಾಟಕ ಮುಗಿದು ಜಡ್ಜ್ ಮೊದಲೇ ಸಿದ್ಧವಿದ್ದ ತೀರ್ಪನ್ನು ಓದಿದನು. ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಭಗತ್ ಮತ್ತು ದತ್ ಇಬ್ಬರೂ ಎಂದಿನಂತೆ ಅಂದೂ ಸಹ ಹಸನ್ಮುಖರಾಗಿಯೇ ಇದ್ದರು. ಅವರ ಆಪ್ತರೆಲ್ಲರೂ ಮೇಲ್ಮನವಿ ಸಲ್ಲಿಸುವಂತೆ ಹೇಳಿದರು. ಆದರೆ ಅವರಿಗೆ ಇಷ್ಟವಿರಲಿಲ್ಲ. ಏಕೆಂದರೆ ಬ್ರಿಟಿಷ್ ನ್ಯಾಯಾಲಯದ ಬಗ್ಗೆ ಅವರಿಗೆ ಯಾವುದೇ ನಂಬಿಕೆ ಇರಲಿಲ್ಲ. ಆದರೂ ಸಹ ಕೆಳಗಿನ ನ್ಯಾಯಾಲಯವನ್ನು ತಮ್ಮ ವಿಚಾರಗಳನ್ನು ಜಗತ್ತಿಗೆ ಸಾರಲು ಹೇಗೆ ವೇದಿಕೆಯನ್ನಾಗಿ ಬಳಸಿಕೊಂಡಿದ್ದರೋ ಹಾಗೆಯೇ ಮೇಲಿನ ನ್ಯಾಯಾಲಯವನ್ನು ಬಳಸಿಕೊಳ್ಳಬಹುದು ಎಂದೆನಿಸಿ ಮೇಲ್ಮನವಿಯನ್ನು ಸಲ್ಲಿಸಿದರು. ಈಗಾಗಲೇ ಅವರು ತಮ್ಮ ವಾದದ ವೈಖರಿಯಿಂದ ಭಾರತಕ್ಕೆ ಮಾತ್ರವಲ್ಲದೇ ಜಗತ್ತಿಗೇ ಭಾರತದ ಕ್ರಾಂತಿಕಾರಿಗಳ ಉದಾತ್ತ ಧ್ಯೇಯದ ಬಗ್ಗೆ ಮನದಟ್ಟು ಮಾಡಿದ್ದರು. ಜನತೆ ಅವರಿಂದ ಗಾಢವಾಗಿ ಪ್ರೇರೇಪಿತರಾಗಿದ್ದರು. ಎಲ್ಲೆಡೆ ಭಗತ್ ಮತ್ತು ದತ್‍ರ ಹೆಸರುಗಳು ರಾರಾಜಿಸಿದವು. ಯುವಜನತೆ ಅವರ ಆರಾಧಕರಾದರು. ಪ್ರತಿಯೊಬ್ಬ ದೇಶಪ್ರೇಮಿ ಮಾತೆ ತನ್ನ ಮಕ್ಕಳೂ ಸಹ ಅವರಂತೆಯೇ ಆಗಬೇಕೆಂದು ಆಶಿಸಿದಳು. ವಿದೇಶಗಳಲ್ಲಿಯೂ ಈ ಮೊಕದ್ದಮೆಯ ವಿಚಾರ ಚರ್ಚೆಗೆ ಗ್ರಾಸವಾಯಿತು. ಆದ್ದರಿಂದಲೇ ಬ್ರಿಟಿಷ್ ಸರ್ಕಾರ ಅವರ ಮೇಲ್ಮನವಿಯನ್ನು ತಿರಸ್ಕರಿಸಿತು. ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಲು ಅವಕಾಶ ನೀಡಬಾರದೆಂದು ನಿರ್ಧರಿಸಿತು.
ಜೈಲಿನಲ್ಲಿ ಪ್ರತಿಭಟನೆ –ಆಮರಣಾಂತ ಉಪವಾಸ ಮುಷ್ಕರ
ಭಗತ್‍ಸಿಂಗ್‍ರು ಜೈಲಿನಲ್ಲಿ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಜೈಲಿನಲ್ಲಿ ರಾಜಕೀಯ ಖೈದಿಗಳನ್ನು ಬಹಳ ಹೀನವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಅದರಲ್ಲೂ ಕ್ರಾಂತಿಕಾರಿಗಳನ್ನು ಕಳ್ಳಕಾಕರಿಗಿಂತ ತುಚ್ಛವಾಗಿ ಕಾಣಲಾಗುತ್ತಿತ್ತು. ಸರಿಯಾದ ಆಹಾರವನ್ನು ನೀಡುತ್ತಿರಲಿಲ್ಲ. ಎಷ್ಟೋ ಬಾರಿ ಬ್ರೆಡ್‍ಅನ್ನು ಪ್ರಾಣಿಗಳಿಗೆ ಎಸೆದಂತೆ ಎಸೆಯಲಾಗುತ್ತಿತ್ತು. ಅಶ್ಲೀಲ ಭಾಷೆಯನ್ನು ಬಳಸಲಾಗುತ್ತಿತ್ತು. ಅವರಿಗೆ ಕನಿಷ್ಟ ಅವಶ್ಯಕತೆಗಳನ್ನೂ ಸಹ ಒದಗಿಸಿರಲಿಲ್ಲ. ಪ್ರಶ್ನಿಸಿದರೆ ಅಮಾನವೀಯವಾದ ಹಿಂಸೆಗೆ ಒಳಪಡಿಸಲಾಗುತ್ತಿತ್ತು.
ಭಗತ್ ಇದನ್ನು ವಿರೋಧಿಸಿ ಸಿಡಿದು ನಿಲ್ಲುವ ತೀರ್ಮಾನವನ್ನು ಮಾಡಿದರು. ಆಮರಣಾಂತ ಉಪವಾಸ ಮುಷ್ಕರದ ಮೂಲಕ ಬ್ರಿಟಿಷ್ ಸರ್ಕಾರವನ್ನು ಆಗ್ರಹಿಸಲು ಮತ್ತು ಜನತೆಗೆ ತಮ್ಮ ಹೋರಾಟದ ವಿಚಾರಗಳನ್ನು ತಲುಪಿಸಲು ಸಜ್ಜಾದರು. ಜೂನ್ 17ರಂದು ಅವರು ಜೈಲ್ ಮುಖ್ಯಸ್ಥರಿಗೆ ಒಂದು ಪತ್ರ ಬರೆದು ತಮ್ಮ ಬೇಡಿಕೆಗಳನ್ನು ಮಂಡಿಸಿದರು. “ನಾವು ರಾಜಕೀಯ ಖೈದಿಗಳು. ನಮಗೆ ಸರಿಯಾದ ಆಹಾರವನ್ನು ನೀಡಬೇಕು. ನಮ್ಮನ್ನು ಯಾವುದೇ ಅಗೌರವವಾದ ಕೆಲಸ ಮಾಡುವಂತೆ ಒತ್ತಾಯಿಸಬಾರದು. ಓದಲು ಪುಸ್ತಕ ಬರೆಯುವ ಸಾಮಗ್ರಿಗಳನ್ನು ಒದಗಿಸಬೇಕು. ಸಮಾಚಾರ ಪತ್ರಿಕೆಯನ್ನು ಕೊಡಬೇಕು. ಸರಿಯಾದ ಶೌಚಾಲಯ, ಬಟ್ಟೆಗಳನ್ನು ಒದಗಿಸಬೇಕು. ಯೂರೋಪಿಯನ್ನರು ತಮ್ಮ ಸ್ವಾರ್ಥಕ್ಕಾಗಿ ಕಳ್ಳತನ ಮಾಡಿ, ಸಿಕ್ಕಿಬಿದ್ದರೆ ಅವರಿಗೆ ನೀವು ಎಲ್ಲಾ ಉತ್ತಮ ಸೌಲಭ್ಯ ನೀಡುತ್ತೀರಿ. ಉತ್ತಮ ವಾತಾವರಣ, ಕೋಣೆ, ಆಹಾರ ಬಟ್ಟೆ, ನೀಡುತ್ತೀರಿ. ಆದರೆ ನಮಗೆ, ರಾಜಕೀಯ ಖೈದಿಗಳಿಗೆ ನೀವು ಅಂತಹ ಕನಿಷ್ಟ ಅವಶ್ಯಕತೆಗಳಿಂದಲೂ ಸಹ ವಂಚಿಸುತ್ತೀರಿ.”
ಜೈಲಿನ ಅಧಿಕಾರಿಗಳು ಯಾವುದೇ ಉತ್ತರವನ್ನು ನೀಡಲ್ಲಿಲ್ಲ.ಆದ್ದರಿಂದ ಅವರು ಉಪವಾಸ ಮುಷ್ಕರವನ್ನು ಆರಂಭಿಸಲು ನಿರ್ಧರಿಸಿದರು. ಭಗತ್‍ಸಿಂಗ್‍ರನ್ನು ಲಾಹೋರ್ ಸೆಂಟ್ರಲ್ ಜೈಲಿಗೆ ವರ್ಗಾಯಿಸಲಾಯಿತು. ಅಲ್ಲಿ ಎಲ್ಲಾ ಕ್ರಾಂತಿಕಾರಿಗಳೊಡಗೂಡಿ ಮುಷ್ಕರವನ್ನು ಆರಂಭಿಸಿದರು. ಜನತೆಗೆ ಈ ವಿಷಯ ತಿಳಿದಾಗ ಎಲ್ಲೆಡೆ ಸರ್ಕಾರದ ನೀತಿಯನ್ನು ವಿರೋಧಿಸಿ, ವ್ಯಾಪಕವಾದ ಪ್ರತಿಭಟನೆಗಳು ಆರಂಭವಾದವು. ಮೋತಿಲಾಲ್ ನೆಹರು, ಜಿನ್ನಾ ಈ ಬಗ್ಗೆ ಸರ್ಕಾರವನ್ನು ತೀವ್ರವಾಗಿ ಖಂಡಿಸಿದರು. ಈ ಮುಷ್ಕರ ಇಡೀ ದೇಶದಲ್ಲಿ ಎಲ್ಲರ ಗಮನ ಸೆಳೆದು, ಚರ್ಚೆಗಳು ಪ್ರಾರಂಭವಾದವು. ಬಹಳಷ್ಟು ಸಾರ್ವಜನಿಕರು ತಾವೂ ಉಪವಾಸ ಮಾಡುತ್ತಾ ಕ್ರಾಂತಿಕಾರಿಗಳಿಗೆ ಬೆಂಬಲ ಸೂಚಿಸಿದರು. ಹಲವಾರು ಪತ್ರಿಕೆಗಳು ಪ್ರತಿನಿತ್ಯ ಕ್ರಾಂತಿಕಾರಿಗಳ ಆರೋಗ್ಯದ ಬಗ್ಗೆ ವರದಿ ನೀಡಲಾರಂಭಿಸಿದವು. ಜಲಿಯನ್‍ವಾಲಾಬಾಗಿನಲ್ಲಿ ನಡೆದ ಒಂದು ಬೃಹತ್ ಪ್ರತಿಭಟನೆಯಲ್ಲಿ “ಕ್ರಾಂತಿಕಾರಿಗಳಿಗೆ ಏನಾದರೂ ಅಪಾಯವಾದರೆ, ಸರ್ಕಾರವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಲಾಹೋರಿನಲ್ಲಿ ಹತ್ತು ಸಾವಿರ ಜನರ ಪ್ರತಿಭಟನೆ ನಡೆಯಿತು. ಜೂನ್ 21 ರಂದು ದೇಶದಾದ್ಯಂತ ‘ಭಗತ್‍ಸಿಂಗ್ ದಿನ’ ಎಂದು ಆಚರಿಸಲಾಯಿತು.
ಜೈಲಿನಲ್ಲಿ ಕಿರುಕುಳ - ಸಂಗಾತಿಗಳ ಬಗ್ಗೆ ಕಾಳಜಿ
ಭಗತ್‍ಸಿಂಗ್‍ರು ಯಾವಾಗಲೂ ತಮ್ಮ ಸಂಗಾತಿಗಳ ನಡುವೆ0iÉುೀ ಇದ್ದು, ಅವರನ್ನು ಹುರಿದುಂಬಿಸುತ್ತಿದ್ದರು. ಅವರೊಂದಿಗೆ ಕ್ರಾಂತಿಯ ಬಗ್ಗೆ, ಸಮಾಜವಾದದ ಬಗ್ಗೆ ಚರ್ಚಿಸುತ್ತಿದ್ದರು. ಎಲ್ಲರೂ ಸೇರಿ ಕೆಲವೊಮ್ಮೆ ಘೋಷಣೆಗಳನ್ನು ಕೂಗುತ್ತಿದ್ದರು. ಕೆಲವೊಮ್ಮೆ ಕ್ರಾಂತಿಗೀತೆಗಳನ್ನು ಹಾಡುತ್ತಿದ್ದರು. ಉಪವಾಸವಿದ್ದರೂ ಅವರ ಉತ್ಸಾಹವನ್ನು ಕಂಡು ಇತರ ಖೈದಿಗಳು, ಅಧಿಕಾರಿಗಳು ದಂಗಾದರು.
ಬ್ರಿಟಿಷ್ ಸರ್ಕಾರ ಈ ಉಪವಾಸ ಮುಷ್ಕರಕ್ಕೆ ಬಗ್ಗಲಿಲ್ಲ. ಬದಲಿಗೆ ಮುಷ್ಕರವನ್ನು ಮುರಿಯಲು ಅಮಾನುಷವಾದ ತಂತ್ರಗಳನ್ನು ಬಳಸಿತು. ಕ್ರಾಂತಿಕಾರಿಗಳನ್ನು ಬಹಳ ಅಮಾನವೀಯವಾಗಿ ನಡೆಸಿಕೊಳ್ಳಲಾಯಿತು. ಗಂಟೆಗಟ್ಟಲೆ ಅವರನ್ನು ಸರಳುಗಳಿಂದ ಹೊಡೆಯಲಾಗುತ್ತಿತ್ತು. ಇಲ್ಲವೇ ಮಂಜುಗಡ್ಡೆಯ ಮೇಲೆ ಮಲಗಿಸಲಾಗುತ್ತಿತ್ತು. ಬಾಂಬೆಯ “ಯಂಗ್ ಲಿಬರೇಟರ್” ಎಂಬ ಪತ್ರಿಕೆ, “ಅಧಿಕಾರಿಗಳ ಬರ್ಬರತೆಗೆ ಮತ್ತು ಕಾನೂನುಬಾಹಿರ ವರ್ತನೆಗೆ ಮಿತಿಯೇ ಇಲ್ಲ. ಲಾಹೋರ್ ಖೈದಿಗಳಿಗೆ ನೀಡುತ್ತಿರುವಂತಹ ಶಿಕ್ಷೆಯನ್ನು ಬಹುಶಃ ಮಧ್ಯಯುಗದ ಬರ್ಬರರೂ, ನಿರಂಕುಶಾಧಿಕಾರಿಗಳೂ ಸಹ ನೀಡುತ್ತಿರಲಿಲ್ಲವೇನೋ!”, ಎಂದು ಬರೆಯಿತು. ನೀರಿನ ಗಡಿಗೆಗಳ ಬದಲಿಗೆ ಹಾಲಿನ ಗಡಿಗೆಗಳನ್ನಿಟ್ಟರು. ಮೂಗಿನ ಮೂಲಕ ಕೊಳವೆ ತೂರಿಸಿ ಆಹಾರವನ್ನು ಹಾಕಲೆತ್ನಿಸಿದರು. ಕ್ರಾಂತಿಕಾರಿಗಳು ಇದಾವುದಕ್ಕೂ ಬಗ್ಗಲಿಲ್ಲ. ಆಗ ಸರ್ಕಾರ ಮಾತಿಗಷ್ಟೇ ‘ಆಯಿತು’ ಎಂದು ಹೇಳಿತು. ಆದರೆ ಭಗತ್‍ಸಿಂಗ್ ಸರ್ಕಾರದ ಆದೇಶ ಗೆಜೆಟ್‍ನಲ್ಲಿ ಪ್ರಕಟವಾಗುವವರೆಗೂ ತಾವು ಉಪವಾಸವನ್ನು ಕೈಬಿಡಲು ಅಂಗೀಕರಿಸುವುದಿಲ್ಲ ಎಂದು ಘೋಷಿಸಿದರು. ಸರ್ಕಾರ ಮುಷ್ಕರವನ್ನು ಮುರಿಯಲು ಭಗತ್ ಮತ್ತು ದತ್‍ರಿಗೆ ಮಾತ್ರ ಎಲ್ಲಾ ಸೌಲಭ್ಯಗಳನ್ನು ನೀಡಲು ಸಿದ್ಧವಿತ್ತು. ಆದರೆ ಅವರಿಬ್ಬರು ಅದನ್ನು ನಿರಾಕರಿಸಿದರು. ಭಗತ್ ತಾವು ವಿಶೇಷವೆಂದು ಯಾವತ್ತೂ ಭಾವಿಸಿರಲಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಸಾವಿರಾರು ಜನರಲ್ಲಿ ತಾವೂ ಸಹ ಒಬ್ಬರು ಎಂಬುದು ಅವರ ಭಾವನೆಯಾಗಿತ್ತು. ಭಗತ್ ಮತ್ತು ಅವರ ಸಂಗಾತಿಗಳ ನಡುವೆ ಇದ್ದ ಅಪಾರ ವಾತ್ಸಲ್ಯದ ಬಗ್ಗೆ ಕಟುಕ ಬ್ರಿಟಿಷ್ ಸರ್ಕಾರಕ್ಕೆ ಏನು ಗೊತ್ತಿತ್ತು!
ಜತಿನ್ ದಾಸ್‍ರ ಬಲಿದಾನ
ಉಪವಾಸ ಮುಷ್ಕರದಲ್ಲಿದ್ದ ಜತಿನ್‍ದಾಸ್‍ರ ಪರಿಸ್ಥಿತಿ ತೀವ್ರವಾಗಿ ಬಿಗಡಾಯಿಸಿತು. ಜೈಲು ಸಮಿತಿ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಶಿಫಾರಸ್ಸು ಮಾಡಿತು. ಸರ್ಕಾರ ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತೇವೆಂದು ಹೇಳಿತು. ಜತಿನ್ ದಾಸ್ ತಾವೊಬ್ಬರೇ ಹೊರಬರಲು ಸಿದ್ಧರಿರಲಿಲ್ಲ. ಔಷಧಿಯನ್ನು ಸಹ ಸೇವಿಸಲು ಅವರು ಒಪ್ಪಲಿಲ್ಲ. ಒಮ್ಮೆ ಮಾತ್ರ ಭಗತ್‍ರ ಮಾತಿಗೆ ಬೆಲೆ ಕೊಟ್ಟು ಔಷಧಿ ಸೇವಿಸಿದರು. ಆದರೆ ಅವರ ಆರೋಗ್ಯ ಹದಗೆಡುತ್ತಾ ಹೋಯಿತು. ಆದರೂ ಬ್ರಿಟಿಷ್ ಸರ್ಕಾರ ಬಗ್ಗಲಿಲ್ಲ. ಸೆಪ್ಟೆಂಬರ್ 13ರಂದು, 63 ದಿನಗಳ ಉಪವಾಸ ಮುಷ್ಕರದ ನಂತರ ಅವರು ಹುತಾತ್ಮರಾದರು. ಕ್ರಾಂತಿಕಾರಿಗಳು ಎಂತಹ ತ್ಯಾಗವನ್ನಾದರೂ ಮಾಡಬಲ್ಲರು ಎಂಬುದನ್ನು ಜತಿನ್ ಜಗತ್ತಿಗೆ ಸಾರಿದರು. ಎಲ್ಲಾ ದೇಶಪ್ರೇಮಿ ಜನರ ಮನೆಗಳಲ್ಲಿ ಕ್ರಾಂತಿಕಾರಿಗಳ ಭಾವಚಿತ್ರಗಳು ಕಾಣಿಸಿಕೊಂಡವು. ಮೋತಿಲಾಲ್ ನೆಹರೂ, “ಅವರ ಅಪ್ರತಿಮ ಸಾಹಸ ಸ್ವಾತಂತ್ರ್ಯವನ್ನು ಹತ್ತಿರಗೊಳಿಸಿದೆ” ಎಂದು ಹೊಗಳಿದರು. ಉಪವಾಸ ಮುಷ್ಕರದ ಸಾಧನವನ್ನು ತಾವು ಕಾಂಗ್ರೆಸ್ಸಿಗರಿಗಿಂತ ತೀವ್ರವಾಗಿ ಮಾಡಬಲ್ಲೆವೆಂಬುದನ್ನು ಕ್ರಾಂತಿಕಾರಿಗಳು ಗಾಂಧೀಜಿಯವರಿಗೆ ತೋರಿಸಿಕೊಟ್ಟರು. ದೇಶವೆಲ್ಲಾ ಈ ಬಗ್ಗೆ ಮಾತನಾಡುತ್ತಿದ್ದರೂ, ಜಗತ್ತೇ ಅವರನ್ನು ಕೊಂಡಾಡುತ್ತಿದ್ದರೂ, ಗಾಂಧೀಜಿಯವರು ಕ್ರಾಂತಿಕಾರಿಗಳ ಉಪವಾಸ ಮುಷ್ಕರದ ಬಗ್ಗೆ ಏನೂ ಮಾತನಾಡದಿದ್ದದ್ದು ವಿಪರ್ಯಾಸವೇ ಸರಿ!
‘ನನ್ನ ಮಗನೂ ಜತಿನನಂತಾಗಲಿ’
ಭಗತ್‍ರಿಗೆ ಜತಿನ್‍ದಾಸ್‍ರ ಸಾವು ಹೇಳಲಸದಳವಾದ ವೇದನೆಯನ್ನು ಉಂಟುಮಾಡಿತು. ಕಲ್ಕತ್ತಾದಿಂದ ಜತಿನ್‍ದಾಸ್‍ರ ಮನವೊಲಿಸಿ ಎಚ್.ಎಸ್.ಆರ್.ಎಗೆ ಕರೆದುಕೊಂಡು ಬಂದಿದ್ದವರು ಭಗತ್. ಭಾವುಕ ಜೀವಿಯಾದ ಅವರು ಎಲ್ಲರ ಎದುರಿಗೆ ಬಹಿರಂಗವಾಗಿ ಅತ್ತುಬಿಟ್ಟರು. ಅದರೂ ಕ್ರಾಂತಿಯ ಪಥದಲ್ಲಿ ಇಂತಹುದ್ದನ್ನೆಲ್ಲಾ ಸಹಿಸಿಕೊಳ್ಳಬೇಕೆಂಬುದು ಅವರಿಗೆ ಅರ್ಥವಾಗಿತ್ತು. ಜತಿನ್‍ದಾಸ್‍ರ ಸಾವಿನಿಂದ ಇಡೀ ದೇಶ ದಿಗ್ಭ್ರಾಂತವಾಯಿತು. ಬ್ರಿಟಿಷ್ ಸರ್ಕಾರ ಅಷ್ಟು ಕ್ರೂರವಾಗಿ ನಡೆದುಕೊಳ್ಳುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಆ ಸಾವಿನ ನೋವಿನಲ್ಲಿಯೂ ಜನರು ಬ್ರಿಟಿಷ್ ಸರ್ಕಾರಕ್ಕೆ ಸೆಡ್ಡು ಹೊಡೆದು ಗೆದ್ದ ಧೀರನನ್ನು ಕಂಡಿತು. ಶವವನ್ನು ಹೊತ್ತ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿದರು.
ಲಾಹೋರಿನಿಂದ ಜತಿನ್‍ದಾಸ್‍ರ ಮೃತದೇಹವನ್ನು ಕೊಂಡೊಯ್ದ ರೈಲು ಕಲ್ಕತ್ತಾ ತಲುಪುವವರೆಗೂ ಮಾರ್ಗಮಾಧ್ಯದಲ್ಲಿನ ಎಲ್ಲಾ ರೈಲ್ವೆ ನಿಲ್ದಾಣದಲ್ಲಿಯೂ ಅಸಂಖ್ಯಾತ ಜನ ಈ ಯೋಧನಿಗೆ ನಮನ ಸಲ್ಲಿಸಿದರು. ಕಲ್ಕತ್ತಾದ ಹೌರಾ ನಿಲ್ದಾಣದಲ್ಲಿ 6 ಲಕ್ಷ ಜನ ಕಾಯುತ್ತಿದ್ದರು. ಅಲ್ಲಿಂದ ಹೊರಟ ಮೆರವಣಿಗೆಯಲ್ಲಿ ಎಲ್ಲಾ ಕಡೆಗಳಿಂದಲೂ ಜನ ಸೇರುತ್ತಲೇ ಹೋದರು. ದಾರಿಯುದ್ದಕ್ಕೂ ಗೋಡೆಗಳ ಮೇಲೆ “ನನ್ನ ಮಗನೂ ಜತಿನ್‍ದಾಸ್‍ನಂತಾಗಲಿ,” ಎನ್ನುವ ಭಿತ್ತಿಪತ್ರಗಳನ್ನು ಅಂಟಿಸಲಾಗಿತ್ತು. ಜತಿನ್‍ದಾಸ್‍ರ ಸಾವು ಕ್ರಾಂತಿಕಾರಿಗಳನ್ನು ಇನ್ನಷ್ಟು ವಜ್ರಕಾಯರನ್ನಾಗಿಸಿತು.
ಕಾಂಗ್ರೆಸ್ ಮಾತಿಗೆ ಮನ್ನಣೆ
ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಗೊತ್ತುವಳಿಯ ಕಾರಣದಿಂದಾಗಿ ಭಗತ್ ಮತ್ತು ದತ್ ತಮ್ಮ ಉಪವಾಸ ಮುಷ್ಕರವನ್ನು ಹಿಂತೆಗೆದುಕೊಂಡರು. ಕಾಂಗ್ರೆಸ್‍ನ ಬಗ್ಗೆ ಅವರಿಗೆ ಭಿನ್ನಾಭಿಪ್ರಾಯಗಳಿದ್ದರೂ, ಸ್ವಾತಂತ್ರ್ಯಕ್ಕಾಗಿನ ಕಾಂಗ್ರೆಸ್‍ನ ಹೋರಾಟವನ್ನು ಅವರು ಗೌರವಿಸಿದ್ದರು. ಆದ್ದರಿಂದಲೇ ಕಾಂಗ್ರೆಸ್ ನ ನಾಯಕರ ಮಾತಿಗೆ ಬೆಲೆ ಕೊಟ್ಟು ಮುಷ್ಕರವನ್ನು ಹಿಂತೆಗೆದುಕೊಂಡರು. ಇದು ಕ್ರಾಂತಿಕಾರಿಗಳ ಉದಾತ್ತತೆಯನ್ನು ತೋರಿಸುತ್ತದೆ. 1929ರ ಅಕ್ಟೋಬರ್ 5ರಂದು ಅಂದರೆ ಉಪವಾಸದ 116ನೇ ದಿನ ಮುಷ್ಕರವನ್ನು ನಿಲ್ಲಿಸಿದರು. ಅವರು ಐರಿಷ್ ಕ್ರಾಂತಿಕಾರಿಯ 97ದಿನಗಳ ವಿಶ್ವದಾಖಲೆಯನ್ನು ಮುರಿದಿದ್ದರು, ದಾಖಲೆ ಸೃಷ್ಟಿಸಲು ಅಲ್ಲ ಬದಲಿಗೆ ಒಂದು ಉನ್ನತವಾದ ಧ್ಯೇಯಸಾಧನೆಗಾಗಿ. ಆದರೆ ಅದೂ ಸಹ ತಾತ್ಕಾಲಿಕವೆಂದು, ಸರ್ಕಾರ ಅವರ ಹಕ್ಕುಗಳನ್ನು ನೀಡುವವರೆಗೆಂದು ಅವರು ಸ್ಪಷ್ಟಗೊಳಿಸಿದ್ದರು. ಈ ವಿಷಯ ವಿದೇಶಗಳಲ್ಲಿಯೂ ಮುಖ್ಯವಾಗಿ ಲಂಡನ್ನಿನಲ್ಲಿ ಹರಡಿತು. ಎಲ್ಲೆಡೆಯಿಂದಲೂ ಎಚ್.ಎಸ್.ಆರ್.ಎ ಗೆ ಬೆಂಬಲ ದೊರೆಯಲಾರಂಭಿಸಿತು. ಕೆನಡಾ, ಜಪಾನ್, ಅಮೇರಿಕಾ ಮುಂತಾದ ಕಡೆಗಳಲ್ಲಿದ್ದ ಭಾರತೀಯರು ಹಣ ಕಳಿಸಲಾರಂಭಿಸಿದರು.
ಸ್ಯಾಂಡರ್ಸ್ ಕೊಲೆ ಮೊಕದ್ದಮೆ
ಈ ಮಧ್ಯೆಯೇ, ಅವರ ಮೇಲೆ ಇನ್ನೊಂದು ಮೊಕದ್ದಮೆಯನ್ನು ಸರ್ಕಾರ ಹೂಡಿತು. ಅದು ಸ್ಯಾಂಡರ್ಸ್ ಕೊಲೆ ಮೊಕದ್ದಮೆ. ಈ ಬಗ್ಗೆ ಭಗತ್‍ಸಿಂಗ್‍ರು ಚಿಂತಿಸಲಿಲ್ಲ. ಈ ಮೊದಲೇ ಅವರು ಎಲ್ಲಕ್ಕೂ ಸಜ್ಜಾಗಿ ಬಂಧನಕ್ಕೊಳಗಾಗಿದ್ದರು. ಜೈಗೋಪಾಲ್, ಫಣೀಂದ್ರ ಘೋಷ್ ಮತ್ತು ಹಂಸ್‍ರಾಜ್‍ವೋರಾ ಎಂಬ ಮೂವರು ಪೊಲೀಸರ ಆಮೀಷಕ್ಕೆ ಬಲಿಯಾಗಿ ಸರ್ಕಾರದ ಪರ ಸಾಕ್ಷಿದಾರರಾಗಿಬಿಟ್ಟಿದ್ದರು. ಅವರು ಪೊಲೀಸರಿಗೆ ಕ್ರಾಂತಿಕಾರಿಗಳೆಲ್ಲರ ಬಗ್ಗೆ ಮಾಹಿತಿ ನೀಡಿದ್ದರು. ಬಹಳಷ್ಟು ಕ್ರಾಂತಿಕಾರಿಗಳನ್ನು ಬಂಧಿಸಲಾಗಿತ್ತು.
ಕ್ರಾಂತಿಕಾರಿ ಪ್ರಚಾರಕ್ಕಾಗಿ ನ್ಯಾಯಾಲಯದ ಬಳಕೆ
ಇತ್ತ ವಿಚಾರಣೆ ಏಕಮುಖವಾಗಿದೆ ಎಂದು, ಅದು ಕೇವಲ ನಾಟಕವೆಂದು, ಆರೋಪಿಗಳು ಮತ್ತು ಅವರ ವಕೀಲರು ಏನೇ ಹೇಳಿದರೂ ಅದನ್ನು ನ್ಯಾಯಾಲಯ ಕೇಳುವುದಿಲ್ಲವೆಂದು, ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಲಾಗಿದೆಎಂದು ದು, ಭಗತ್ ಮತ್ತು ಕೆಲವರನ್ನು ಖಂಡಿತವಾಗಿಯೂ ಗಲ್ಲಿಗೆ ಹಾಕುವ ತೀರ್ಮಾನವನ್ನು ಬ್ರಿಟಿಷ್ ಸರ್ಕಾರ ಈಗಾಗಲೇ ಕೈಗೊಂಡಿದೆ ಎಂದು ಕ್ರಾಂತಿಕಾರಿಗಳಿಗೆ ಮನದಟ್ಟಾಗುತ್ತಾ ಹೋಯಿತು. ಅವರೂ ಸಹ ವಿಚಾರಣೆಯನ್ನು ನಿರ್ಲಕ್ಷಿಸಲು ತೀರ್ಮಾನಿಸಿದರು. ಆದ್ದರಿಂದ ಅವರು ಕೆಲವು ದಿನ ವಿಚಾರಣೆಗೆ ನ್ಯಾಯಾಲಯದ ಮುಂದೆ ಹಾಜರಾಗಲು ನಿರಾಕರಿಸಿದರು. ಕೆಲವು ದಿನ ಕೇವಲ ಘೋಷಣೆಗಳನ್ನು ಮಾತ್ರ ಕೂಗಿದರು. ದೇಶಪ್ರೇಮಿ ಗೀತೆಗಳನ್ನು ಹಾಡಲು ಕೆಲವು ದಿನಗಳನ್ನು ಬಳಸಿಕೊಂಡರು. ಇನ್ನೂ ಕೆಲವು ದಿನ ಸ್ವಾತಂತ್ರ್ಯ ಮತ್ತು ಕ್ರಾಂತಿಯ ಮೂಲಕ ಮಾತ್ರ ಈ ದೇಶದ ಉದ್ಧಾರ ಸಾಧ್ಯವೆಂಬುದನ್ನು ಎಲ್ಲರಿಗೂ ಅರ್ಥವಾಗುವಂತೆ ವಿವರಿಸಿದರು. ವಿವರಣೆಯನ್ನು ಬಹುತೇಕ ಬಾರಿ ನೀಡುತ್ತಿದ್ದದ್ದು ಭಗತ್ ಎಂದು ಪುನಃ ಹೇಳಬೇಕಿಲ್ಲವಷ್ಟೆ! ಆ ಉದ್ದೇಶಕ್ಕಾಗಿಯೇ ಅಲ್ಲವೆ ಅವರು ಬಂಧನಕ್ಕೊಳಗಾಗಿದ್ದು. ವಿಚಾರಣೆಯ ದಿನಗಳಂದು ಶಾಲಾಕಾಲೇಜುಗಳಿಂದ ವಿದ್ಯಾರ್ಥಿಗಳು ತಂಡೋಪತಂಡವಾಗಿ ಕೋರ್ಟ್ ಮುಂದೆ ಹಾಜರಾಗುತ್ತಿದ್ದರು. ಕ್ರಾಂತಿಕಾರಿಗಳ ದನಿಗೆ ತಮ್ಮ ದನಿಗೂಡಿಸುತ್ತಿದ್ದರು. ಕ್ರಾಂತಿಕಾರಿಗಳ ಅಚ್ಚುಮೆಚ್ಚಿನ ಗೀತೆ ಇದು -
“ಬಲಿದಾನದ ಉತ್ಕಟೇಚ್ಛೆ ತುಡಿಯುತ್ತಲಿದೆ ನಮ್ಮ ಮನದಲ್ಲೀಗ,
ಕಟುಕನ ಕೈಯಲ್ಲಿನ ಶಕ್ತಿಯನು ನಾವು ನೋಡಬೇಕೀಗ”.
(ಸರ್ಫರೋಶಿ ಕೀ ತಮನ್ನಾ ಅಬ್ ಹಮಾರೆ ದಿಲ್ ಮೇ ಹೈ,
ದೇಖ್‍ನಾ ಹೈ ಜೋರ್ ಕಿತನಾ ಬಾಜೂ ಯೇ ಖಾತಿಲ್ ಮೇ ಹೈ)
ನ್ಯಾಯದ ಅಪಹಾಸ್ಯ
ಒಂದು ದಿನ ಭಗತ್‍ರ ವಕೀಲರಾದ ದುನಿಚಂದ್‍ರನ್ನು ನ್ಯಾಯಾಲಯದೊಳಗೆ ಬರಲು ಬಿಡಲಿಲ್ಲ. ವಿಶ್ವದ ಯಾವುದೇ ನ್ಯಾಯಾಲಯದಲ್ಲಿ ಈ ರೀತಿ ನಡೆದಿರಲಿಕ್ಕಿಲ್ಲ! ಆದ್ದರಿಂದ ಭಗತ್ ಮತ್ತು ಅವರ ಸಂಗಾತಿಗಳು ನ್ಯಾಯಾಲಯಕ್ಕೆ ಬಹಿಷ್ಕಾರ ಹಾಕಲು ಮತ್ತು ಉಪವಾಸ ಮುಷ್ಕರವನ್ನು ಪುನಃ ಕೈಗೆತ್ತಿಕೊಳ್ಳಲು ನಿರ್ಧರಿಸಿದರು. ಸರ್ಕಾರ ಖೈದಿಗಳಿಗೆ ಕೆಲವು ಸೌಕರ್ಯಗಳನ್ನು ನೀಡಿದ್ದರೂ, ಕ್ರಾಂತಿಕಾರಿಗಳ ಎಲ್ಲಾ ನ್ಯಾಯಯುತವಾದ ಬೇಡಿಕಗಳಿಗೆ ಮನ್ನಣೆ ನೀಡಿರಲಿಲ್ಲ.
“ನ್ಯಾಯದ ಹೆಸರಿನಲ್ಲಿ ನಡೆಯುತ್ತಿರುವ ಈ ನಾಟಕವನ್ನು ನೋಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ನಮ್ಮನ್ನು ರಕ್ಷಿಸಿಕೊಳ್ಳಲು ಬೇಕಾದ ಯಾವುದೇ ಸೌಲಭ್ಯ ನಮಗೆ ಸಿಗುತ್ತಿಲ್ಲ. ನಮಗೆ ಪತ್ರಿಕೆಗಳನ್ನೂ, ಸಹ ನೀಡಲಾಗುತ್ತಿಲ್ಲ. ಹಾಗಾಗಿ ಈ ಸಮಸ್ಯೆಗಳನ್ನು ಪರಿಹರಿಸಿದರೆ, ನಾವು ನ್ಯಾಯಾಲಯಕ್ಕೆ ಹಾಜರಾಗುತ್ತೇವೆ,” ಎಂದು ಹೇಳಿಕೆಯನ್ನು ನೀಡಿದರು. ಫೆಬ್ರವರಿ 19ರಂದು ಸರ್ಕಾರ ಪತ್ರಿಕಾ ಹೇಳಿಕೆಯನ್ನು ನೀಡಿ ಆಶ್ವಾಸನೆ ನೀಡಿತು. ಆದರೆ ಉಪವಾಸ ಮುಷ್ಕರ ಹಿಂತೆಗೆದುಕೊಂಡ ತಕ್ಷಣ ತನ್ನ ಆಶ್ವಾಸನೆಯಿಂದ ಹಿಂದೆ ಸರಿಯಿತು. ಜಗತ್ತಿನಲ್ಲೆಲ್ಲೂ ಇಷ್ಟು ನಾಚಿಕೆಗೆಟ್ಟ ಸರ್ಕಾರವಿರಲಾರದು!
ಟ್ರಿಬ್ಯೂನಲ್‍ನ ರಚನೆ
1930ರ ಮೇ 1ರಂದು ವಿಚಾರಣೆಯ ನಾಟಕ ಮುಗಿಯಿತು. ತೀರ್ಪು ನೀಡಲು ವೈಸ್‍ರಾಯ್ ಇರ್ವಿನ್ ಮೂವರು ನ್ಯಾಯಾಧೀಶರನ್ನೊಳಗೊಂಡ ಒಂದು ಟ್ರಿಬ್ಯುನಲ್ ರಚಿಸಿದ. ಈ ಟ್ರಿಬ್ಯುನಲ್‍ಗೆ ಆರೋಪಿಗಳು ಹಾಜರಿಲ್ಲದಿದ್ದರೂ, ತೀರ್ಪು ನೀಡುವ ಅಧಿಕಾರವನ್ನು ಕೊಡಲಾಯಿತು. ತನ್ನ ವಿರುದ್ಧ ದನಿ ಎತ್ತುವವರನ್ನು ನಿರ್ದಾಕ್ಷಿಣ್ಯವಾಗಿ ದಮನಗೊಳಿಸಲು ತಾನು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತೇನೆಂಬುದನ್ನು ಬ್ರಿಟಿಷ್ ಸರ್ಕಾರ ಈ ಮೂಲಕ ತೋರಿಸಿಕೊಟ್ಟಿತು. 1930ರ ಮೇ 5 - ಟ್ರಿಬ್ಯುನಲ್‍ನ ಮೊದಲ ದಿನ ಭಗತ್‍ಸಿಂಗ್ ತಮ್ಮ ಸಂಗಾತಿಗಳ ಪರವಾಗಿ ಈ ಕೆಳಕಂಡ ಹೇಳಿಕೆಯನ್ನು ನೀಡಿದರು - “ನಮಗೆ ನಿಮ್ಮ ಬಗ್ಗೆ ವೈಯಕ್ತಿಕ ದ್ವೇಷವೇನೂ ಇಲ್ಲ. ನಾವು ಭಯ ಮತ್ತು ದ್ವೇಷದಿಂದ ಮುಕ್ತರು. ನೀವು ನಿಮ್ಮ ಕೆಲಸ ಮಾಡುತ್ತಿದ್ದೀರಿ. ನಮ್ಮ ಮೇಲಿನ ದೌರ್ಜನ್ಯ ನಮ್ಮಲ್ಲಿ ಕಹಿಯನ್ನೇನೂ ಮೂಡಿಸಿಲ್ಲ.” ಈ ರೀತಿ ಹೇಳುವ ಮೂಲಕ ಕ್ರಾಂತಿಕಾರಿಗಳು ಉದಾತ್ತತೆಯನ್ನು ಮೆರೆದಿದ್ದಾರೆ.
18 ಜನ ಆರೋಪಿಗಳು ಘೋಷಣೆಗಳನ್ನು ಕೂಗಿದರು ಮತ್ತು ‘ಸರ್ಫರೋಷಿ ಕೀ ತಮನ್ನ’ ಹಾಡನ್ನು ಹಾಡಿದರು. ನಂತರ ರಾಜಗುರು ಟ್ರಿಬ್ಯುನಲ್‍ನ ರಚನೆ ನ್ಯಾಯಬದ್ಧವಲ್ಲವೆಂದು, ಅದರ ನ್ಯಾಯಬದ್ಧತೆಯ ಬಗ್ಗೆ ತೀರ್ಮಾನವಾಗುವವರೆಗೂ ಅದನ್ನು ಮುಂದೂಡಬೇಕೆಂದು ಹೇಳಿದರು. ಜೆ.ಎನ್. ಸನ್ಯಾಲ್‍ರವರು ಎದ್ದು ನಿಂತು, “ಬ್ರಿಟಿಷರು ಅದೆಷ್ಟು ಭಾರತೀಯರ ಕೊಲೆಯನ್ನು ಮಾಡಿದ್ದಾರೆಂದರೆ ನಾವು ಬಯಸಿದರೂ ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾರೆವು. ಒಂದು ದೇಶದ ಜನತೆಯನ್ನು ಪರಾಧೀನತೆಗೆ ಒಳಪಡಿಸುವುದೇ ಅತ್ಯಂತ ಹೇಯ ಅಪರಾಧ. ಬ್ರಿಟಿಷರು ಆ ಅಪರಾಧವನ್ನು ಮಾಡಿದ್ದಾರೆ. ಅದರೊಂದಿಗೆ ತಮ್ಮ ರಾಕ್ಷಸೀ ಶಕ್ತಿಯೊಂದಿಗೆ ಸ್ವಾತಂತ್ರ್ಯದ ಹೋರಾಟವನ್ನು ಹೊಸಕಿಹಾಕಲೆತ್ನಿಸುತ್ತಿದ್ದಾರೆ. ಆದ್ದರಿಂದ ಬ್ರಿಟಿಷರೇ ಆರೋಪಿಗಳು, ನಾವಲ್ಲ. ನಾವು ಭಾರತದ ಗೌರವ, ಘನತೆಯ ರಕ್ಷಕರು.” ಅವರಿಗೆ ಮಾತನ್ನು ಪೂರ್ಣಗೊಳಿಸಲು ಅವಕಾಶ ನೀಡಲಿಲ್ಲ. ಆದ್ದರಿಂದ ಎಲ್ಲಾ ಕ್ರಾಂತಿಕಾರಿಗಳು ಈ ನಾಟಕದ ವಿಚಾರಣೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಸಾರಿದರು. ಬಹುತೇಕ ಭಾರತೀಯ ವಕೀಲರೂ ಸಹ ಅಲ್ಲಿಗೆ ಹಾಜರಾಗುವುದನ್ನು ನಿಲ್ಲಿಸಿದರು. ಆದರೆ ಟ್ರಿಬ್ಯುನಲ್ ಮಾತ್ರ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ತನ್ನ ಕಾರ್ಯ ಮುಂದುವರೆಸಿತು. ಎಷ್ಟಾದರೂ ಆ ಟ್ರಿಬ್ಯುನಲ್ ಸಹ ನಾಚಿಕೆಗೆಟ್ಟ ಸರ್ಕಾರದ ಭಾಗವಲ್ಲವೇ!
ಸುಳ್ಳು ಸಾಕ್ಷಿಗಳ ಆಧಾರದ ಮೇಲಿನ ತೀರ್ಪು
ಸರ್ಕಾರಿ ದಾಖಲೆ ಮತ್ತು ಸಾಕ್ಷಿಗಳು ಸುಳ್ಳೆಂದು ಸಾಬೀತಾಗಿತ್ತು. ಮೂವರು ಮುಖ್ಯ ಸರ್ಕಾರಿ ಸಾಕ್ಷಿದಾರರ ಹೇಳಿಕೆಗಳು ಒಂದಕ್ಕೊಂದು ವಿರುದ್ಧವಾಗಿದ್ದವು. ಆರೋಪಿಗಳನ್ನು ಗುರುತಿಸದೇ, ಆರೋಪಿಗಳ ಪಟ್ಟಿಯನ್ನು ತಯಾರಿಸಲಾಯಿತು. ಈ ರೀತಿ ನಡೆದದ್ದು, ಬಹುಶಃ ವಿಶ್ವದ ಇತಿಹಾಸದಲ್ಲೇ ಮೊದಲೇನೋ! ಯಾವುದೇ ಸಾಕ್ಷಿಯಿಲ್ಲದೆ, ಆಧಾರವಿಲ್ಲದೆ, ದಾಖಲೆಯಿಲ್ಲದೆ ಬ್ರಿಟಿಷ್ ನ್ಯಾಯಾಲಯ 1930ರ ಅಕ್ಟೋಬರ್ 7ರಂದು ತೀರ್ಪನ್ನು ಹೊರಹಾಕಿತು. ಭಗತ್‍ಸಿಂಗ್, ರಾಜಗುರು, ಸುಖದೇವ್‍ರಿಗೆ ಗಲ್ಲುಶಿಕ್ಷೆಯನ್ನು ವಿಧಿಸಲಾಗಿತ್ತು. ಉಳಿದವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. ಮೂವರನ್ನು ಮಾತ್ರ ಬಿಡುಗಡೆಗೊಳಿಸಲಾಯಿತು.
ಭಗತ್‍ಸಿಂಗ್, ರಾಜಗುರು, ಸುಖದೇವ್ ನಗುನಗುತ್ತಲೇ ಶಿಕ್ಷೆಯನ್ನು ಸ್ವೀಕರಿಸಿದರು. ಜಗತ್ತನ್ನೇ ಗೆದ್ದೆವೇನೋ ಎಂಬ ಮುಖಭಾವ ಎದ್ದು ಕಾಣುತ್ತಿತ್ತು. ಮದನ್‍ಲಾಲ್ ಧಿಂಗ್ರಾ ಹೇಳಿದಂತೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವ ಉತ್ತಮ ಅವಕಾಶ ತಮಗೆ ದೊರೆಯಿತೆಂದು ಕುಣಿದಾಡಿಬಿಟ್ಟರು. ಉಳಿದವರು ತಮಗೆ ಆ ಅವಕಾಶ ಸಿಗಲಿಲ್ಲವೆಂದು ನೊಂದುಕೊಂಡರು. ಎಂತಹ ದಿಟ್ಟತನ! ಎಂತಹ ಅಪ್ರತಿಮ ತ್ಯಾಗ!
ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಉತ್ಸಾಹ
ಇಷ್ಟೊತ್ತಿಗಾಗಲೇ ಭಗತ್‍ಸಿಂಗ್ ಭಾರತದ ಯುವಜನತೆಯ ಆರಾಧ್ಯ ದೈವವಾಗಿಬಿಟ್ಟಿದ್ದರು. ಅಸಹಕಾರ ಚಳುವಳಿಯ ನಂತರ ಕ್ಷೀಣವಾಗಿದ್ದ ಸ್ವಾತಂತ್ರ್ಯ ಚಳುವಳಿಗೆ ಈ ವಿಚಾರಣೆ ಹೊಸ ಜೀವವನ್ನು ಕೊಟ್ಟಿತ್ತು. ನೇತಾಜಿಯವರು “ಇಂದು ಇಡೀ ದೇಶವನ್ನು ಆವರಿಸಿಕೊಂಡಿರುವ ಕ್ರಾಂತಿಯ ಸ್ಪೂರ್ತಿಯ ಸಂಕೇತ ಭಗತ್‍ಸಿಂಗ್. ಆ ಸ್ಫೂರ್ತಿ ಹೊತ್ತಿಸಿರುವ ಜ್ವಾಲೆ ಎಂದಿಗೂ ಆರಿಹೋಗುವುದಿಲ್ಲ,” ಎಂದು ಘೋಷಿಸಿದರು. ಯುವ ಕಾಂಗ್ರೆಸ್ಸಿಗರು, ಕಾಂಗ್ರೆಸ್ಸಿನ ಹಿರಿಯ ನಾಯಕರ ಮೇಲೆ ಒತ್ತಡವನ್ನು ಹೇರಿ “ಸಂಪೂರ್ಣ ಸ್ವರಾಜ್ಯದ ಗೊತ್ತುವಳಿ”ಯನ್ನು ಅಂಗೀಕರಿಸುವಂತೆ ಮಾಡಿದ್ದರು. ಬಂಗಾಳದಿಂದ ಪಂಜಾಬಿನವರೆಗೂ ಕ್ರಾಂತಿಕಾರಿಗಳು ಉತ್ಸಾಹದಿಂದ ಚಟುವಟಿಕೆಗಳನ್ನು ಆರಂಭಿಸಿದ್ದರು. ಭಗತ್‍ಸಿಂಗ್‍ರವರ ಯೋಜನೆ ಯಶಸ್ವಿಯಾಗಿತ್ತು.
ಶಿಕ್ಷೆಯನ್ನು ವಿರೋಧಿಸಿ ಜನತೆಯ ಆಕ್ರೋಶ
ಭಗತ್‍ಸಿಂಗ್, ರಾಜಗುರು, ಸುಖದೇವ್‍ರಿಗೆ ನೀಡಿದ ಶಿಕ್ಷೆಯನ್ನು ಕೇಳಿ ಜನತೆಗೆ ಬರಸಿಡಿಲು ಎರಗಿದಂತಾಯಿತು. ದೇಶದಾದ್ಯಂತ ಹರತಾಳ, ಪ್ರತಿಭಟನಾ ಮೆರವಣಿಗೆಗಳು ನಡೆದವು. ಪೆÇಲೀಸರ ನಿಷೇದಾಜ್ಞೆಯನ್ನೂ ಉಲ್ಲಂಘಿಸಿ, ನೂರಾರು ಪ್ರತಿಭಟನೆಗಳು ನಡೆದವು. ಪೆÇಲೀಸರ ಅಮಾನುಷವಾದ ಲಾಠಿ ಪ್ರಹಾರಕ್ಕೂ ಜಗ್ಗದೆ, ಸ್ತ್ರ್ರೀ-ಪುರುಷರೆನ್ನದೆ, ಜನತೆ ಎಲ್ಲೆಡೆ ಸಾವಿರಸಾವಿರ ಸಂಖ್ಯೆಯಲ್ಲಿ ಈ ತೀರ್ಪನ್ನು ವಿರೋಧಿಸಿದರು. ವಿದ್ಯಾರ್ಥಿಗಳು ಶಾಲಾಕಾಲೇಜುಗಳನ್ನು ತೊರೆದರು. ಲಾಹೋರಿನಲ್ಲಿ ಎರಡು ಲಕ್ಷ ಜನರ ಪ್ರತಿಭಟನಾ ಮೆರವಣಿಗೆ ನಡೆಯಿತು.
ಎಚ್.ಎಸ್.ಆರ್.ಎಯ ಇತರ ಕ್ರಾಂತಿಕಾರಿಗಳು ಇವರನ್ನು ಜೈಲಿನಿಂದ ತಪ್ಪಿಸಲು ವಿಫಲಯತ್ನ ನಡೆಸಿದರು. ತಯಾರಿಯ ಸಮಯದಲ್ಲಿಯೇ ಭಗವತೀಚರಣ್ ವೋರಾ ಮಡಿದರು.
ದೇಶದ್ರೋಹಿಯೊಬ್ಬನ ಕಾರಣದಿಂದ ಚಂದ್ರಶೇಖರ ಆಜಾದ್ ಧೀರೋದಾತ್ತವಾಗಿ ಒಂದು ಇಡೀ ಪೆÇಲೀಸ್ ಬೆಟಾಲಿಯನ್‍ಅನ್ನು ಎದುರಿಸುತ್ತಾ, ಹುತಾತ್ಮರಾದರು.
ಆದರೆ ಭಗತ್‍ಸಿಂಗ್‍ರಿಗೆ ತಪ್ಪಿಸಿಕೊಳ್ಳಲು ಯಾವುದೇ ಇಚ್ಛೆ ಇರಲಿಲ್ಲ. ಹಾಗಿದ್ದಲ್ಲಿ ಅಸೆಂಬ್ಲಿಯಲ್ಲಿ ಬಾಂಬ್ ಹಾಕಿದ ನಂತರ ತಪ್ಪಿಸಿಕೊಂಡು ಹೋಗಬಹುದಿತ್ತು. ಆದರೆ ಅವರಿಗೆ ತಮ್ಮ ಜೀವವನ್ನು ಉಳಿಸಿಕೊಳ್ಳುವುದಕ್ಕಿಂತ, ತಮ್ಮ ಜೀವತ್ಯಾಗದಿಂದ ದೇಶದಲ್ಲಾಗುವ, ಮುಖ್ಯವಾಗಿ ಯುವಜನತೆಯಲ್ಲಾಗುವ ಪರಿವರ್ತನೆ ಮುಖ್ಯವಾಗಿತ್ತು. ತಮ್ಮ ತ್ಯಾಗ-ಬಲಿದಾನಗಳಿಂದ ದೇಶದ ಸ್ವಾತಂತ್ರ್ಯವನ್ನು ತ್ವರಿತಗೊಳಿಸುವುದು ಬೇಕಿತ್ತು. ಒಂದು ಜೀವದ ಬಲಿದಾನದಿಂದ ಅಸಂಖ್ಯಾತ ಯುವಜನ ಪ್ರೇರೇಪಿತರಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕುತ್ತಾರೆ ಎಂಬುದು ಅವರ ಸದೃಢವಾದ ನಂಬಿಕೆಯಾಗಿತ್ತು. ಅವರ ನಂಬಿಕೆ ಅದೆಷ್ಟು ಸತ್ಯವಾಗಿತ್ತು ಅವರ ಬಲಿದಾನವಾದ ಕೇವಲ 16 ವರ್ಷಗಳ ನಂತರ ನಮಗೆ ಸ್ವಾತಂತ್ರ್ಯ ದೊರಕಿತು.
ದೇಶದ್ರೋಹಿಯೊಬ್ಬನ ಕಾರಣದಿಂದ ಚಂದ್ರಶೇಖರ ಆಜಾದ್ ಧೀರೋದಾತ್ತವಾಗಿ ಒಂದು ಇಡೀ ಪೆÇಲೀಸ್ ಬೆಟಾಲಿಯನ್‍ಅನ್ನು ಎದುರಿಸುತ್ತಾ, ಹುತಾತ್ಮರಾದರು.
ಆದರೆ ಭಗತ್‍ಸಿಂಗ್‍ರಿಗೆ ತಪ್ಪಿಸಿಕೊಳ್ಳಲು ಯಾವುದೇ ಇಚ್ಛೆ ಇರಲಿಲ್ಲ. ಹಾಗಿದ್ದಲ್ಲಿ ಅಸೆಂಬ್ಲಿಯಲ್ಲಿ ಬಾಂಬ್ ಹಾಕಿದ ನಂತರ ತಪ್ಪಿಸಿಕೊಂಡು ಹೋಗಬಹುದಿತ್ತು. ಆದರೆ ಅವರಿಗೆ ತಮ್ಮ ಜೀವವನ್ನು ಉಳಿಸಿಕೊಳ್ಳುವುದಕ್ಕಿಂತ, ತಮ್ಮ ಜೀವತ್ಯಾಗದಿಂದ ದೇಶದಲ್ಲಾಗುವ, ಮುಖ್ಯವಾಗಿ ಯುವಜನತೆಯಲ್ಲಾಗುವ ಪರಿವರ್ತನೆ ಮುಖ್ಯವಾಗಿತ್ತು. ತಮ್ಮ ತ್ಯಾಗ-ಬಲಿದಾನಗಳಿಂದ ದೇಶದ ಸ್ವಾತಂತ್ರ್ಯವನ್ನು ತ್ವರಿತಗೊಳಿಸುವುದು ಬೇಕಿತ್ತು. ಒಂದು ಜೀವದ ಬಲಿದಾನದಿಂದ ಅಸಂಖ್ಯಾತ ಯುವಜನ ಪ್ರೇರೇಪಿತರಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕುತ್ತಾರೆ ಎಂಬುದು ಅವರ ಸದೃಢವಾದ ನಂಬಿಕೆಯಾಗಿತ್ತು. ಅವರ ನಂಬಿಕೆ ಅದೆಷ್ಟು ಸತ್ಯವಾಗಿತ್ತು ಅವರ ಬಲಿದಾನವಾದ ಕೇವಲ 16 ವರ್ಷಗಳ ನಂತರ ನಮಗೆ ಸ್ವಾತಂತ್ರ್ಯ ದೊರಕಿತು.
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)
- ಸುಧಾ ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ