Pages

ಪುಸ್ತಕ ಪ್ರೀತಿ - ಮೂಕಹಕ್ಕಿಯ ಹಾಡು




ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮುಖ್ತರ್ ಮಾಯಿರವರ ಆತ್ಮಕಥನವನ್ನು ಕನ್ನಡಕ್ಕೆ ಅನುವಾದಿಸಿರುವವರು ಡಾ ಎನ್ ಜಗದೀಶ್ ಕೊಪ್ಪ. ಮೂಕಹಕ್ಕಿಯ ಹಾಡು ಎಂದು ಮುದ್ರಿತವಾಗಿರುವ ಈ ಪುಸ್ತಕದಲ್ಲಿ ಹೆಣ್ಣುಮಗಳೊಬ್ಬಳ ಹೋರಾಟದ ಕಥೆ ಅಡಗಿದೆ. ಡಾ ಜಗದೀಶ್ ಕೊಪ್ಪ ರವರು ಬಹಳ ಸರಳವಾಗಿ ಇದನ್ನು ಅನುವಾದಿಸಿದ್ದಾರೆ. 

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೀರ್ವಾಲ ಹಳ್ಳಿಯಲ್ಲಿ ಗುಜಾರ್ ಎಂಬ ಕೆಳಜಾತಿಯ ಬುಡಕಟ್ಟು  ಜನಾಂಗದಲ್ಲಿ ಗುಲಾಂ ಫರೀದ್ ಗುಜಾರರ ಮೊದಲ ಮಗಳಾಗಿ ಮುಖ್ತರ್ ಜನಿಸಿದಳು. ಬಾಲ್ಯದಿಂದಲೂ ಮುಗ್ಧೆಯಾಗಿ ಬೆಳೆದಿದ್ದ ಈಕೆಗೆ ಸಿಟ್ಟು ಮತ್ತು ಕಣ್ಣೀರು ಎಂಬುದೆ ತಿಳಿದಿರಲಿಲ್ಲ. ಒಮ್ಮೆ ತಮ್ಮ ಮತ್ತು ತಂಗಿಯ ಜಗಳದಿಂದ ಬೆಚ್ಚಿದ ಕೋಳಿಮರಿಯು ಭಯದಿಂದ ಒಲೆಯ ಬೆಂಕಿಗೆ ಹಾರಿಬಿದ್ದದ್ದನ್ನು ಕಂಡು ಮುಖ್ತರ್ ಇಡೀ ರಾತ್ರಿ  ಅತ್ತಿದ್ದಳು. ಅನಕ್ಷರಸ್ಥೆಯಾದರೂ ಕುರಾನ್ ಗ್ರಂಥದ ಶ್ಲೋಕಗಳನ್ನು ಬಾಯಿಪಾಠ ಮಾಡಿದ್ದ ಕಾರಣ "ಒಂದು ಜೀವವನ್ನು ಸೃಷ್ಟಿಸಲಾರದ ನಮಗೆ ಇನ್ನೊಂದು ಜೀವವನ್ನು ಕೊಲ್ಲುವ ಹಕ್ಕಿಲ್ಲ" ಎಂದು ತಿಳಿದಿದ್ದಳು.
  ಚಿಕ್ಕಂದಿನಿಂದಲು ಮನೆಕೆಲಸ ಮಾಡಿಕೊಂಡು ಹಿರಿಯರಿಗೆ ಗೌರವ ನೀಡುತ್ತ ಬೆಳೆದ ಮುಖ್ತರ್ ಮನೆಯವರು ನೋಡಿದ ಪೋಲಿಯೋ ಪೀಡಿತ ವರನ ಜೊತೆ ಮದುವೆಯಾದಳು. ನಂತರ ಗಂಡನ ಮನೆಗೆ ಬಂದು ಸೋಮಾರಿ ಗಂಡನೊಂದಿಗೆ ಇರಲಾರದೆ ತೌರುಮನೆಗೆ ಬಂದುಬಿಟ್ಟಳು. ನಂತರ ವಿಚ್ಛೇದನೆಯು ಆಯಿತು. ಮಕ್ಕಳಿಗೆ ಕುರಾನ್ ನನ್ನು ಕಂಠಪಾಠ ಮಾಡಿಸುತ್ತಾ ಮನೆಯವರೊಂದಿಗೆ  ಕೃಷಿ  ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜೀವನ ಸಾಗಿಸುತ್ತಿದ್ದಳು ಮುಖ್ತರ್.
ಹೀಗಿರುವಾಗ ಇವಳ ಹನ್ನೆರಡು ವರ್ಷದ ಸೋದರ ಶಕುರ್ ಒಂದು ದಿನ ಹೊಲದಿಂದ ಹಿಂದಿರುಗುವಾಗ ಜಮೀನಿನಲ್ಲಿ ಕಬ್ಬಿನ ಜಲ್ಲೆಯನ್ನು ಮುರಿದಿದ್ದ ಮತ್ತು ಜಮೀನ್ದಾರರ ಮಗಳು ಸಲ್ಮಾಳನ್ನು ಸೋದರಿಯೆಂಬಂತೆ ಗೌರವದಿಂದ ಮಾತನಾಡಿಸಿದ್ದನು. ಆದರೆ ಇದು ಜಮೀನ್ದಾರ ಕುಟುಂಬದವರಿಗೆ ದೊಡ್ಡ ಅಪರಾಧವಾಗಿ ಕಂಡಿತು. ಭಯದಿಂದ ಕಾಣೆಯಾಗಿದ್ದ ಅವನನ್ನು ಸೇವಕರು ಹಿಡಿದುಕೊಂಡು ಚಿತ್ರಹಿಂಸೆಯನ್ನು ನೀಡಿ ನಂತರ ಪೊಲೀಸ್ ಠಾಣೆಗೆ ಒಪ್ಪಿಸಿದರು. ಇಂತಹ ಸಮಯಗಳಲ್ಲಿ ಗ್ರಾಮಮಟ್ಟದಲ್ಲಿದ್ದ "ಜಿರ್ಗ"ಎಂಬ ನ್ಯಾಯ ಪಂಚಾಯಿತಿ ನ್ಯಾಯತೀರ್ಮಾನ ಮಾಡುತ್ತಿದ್ದವು. ಇವುಗಳ ತೀರ್ಮಾನವೇ ಅಂತಿಮವಾಗಿರುತ್ತಿತ್ತು. ಈ ಪ್ರಕರಣದಲ್ಲು ಅಷ್ಟೇ. ಶಕುರ್ ಜಮೀನ್ದಾರರ ಮಗಳನ್ನು ಮಾತನಾಡಿಸಿದ್ದರಿಂದ ಆ ತಪ್ಪಿಗಾಗಿ ಅವನ ಸೋದರಿ ಜಮೀನ್ದಾರರ ಮನೆಗೆ ಹೋಗಬೇಕಾಗಿತ್ತು. ಮೀರ್‍ವಾಲ ಗ್ರಾಮದ ಮಸ್ತೋಯ್ ಕುಟುಂಬದವರು ಅತ್ಯಂತ ಕ್ರೂರಿಗಳು,  ದರ್ಪ,  ಹಿಂಸೆ, ದೌರ್ಜನ್ಯ ಮತ್ತು ಕ್ರೌರ್ಯಗಳಿಗೆ ಹೆಸರಾಗಿದ್ದರು. ಇವರ ಈ ಕೃತ್ಯಗಳಿಗೆ ಪೋಲಿಸರು ಕುರುಡರಂತಾಗಿದ್ದರು. ಇವರು ಕೆಳವರ್ಗದ ಮಹಿಳೆಯರ ಮೇಲೆ ನಡೆಸುತ್ತಿದ್ದ ಅತ್ಯಾಚಾರ ಹೊರಜಗತ್ತಿಗೆ ಕಾಣುತ್ತಿರಲ್ಲ. ಧರ್ಮದ ಹೆಸರಿನಲ್ಲಿ ನಡೆಸುತ್ತಿದ್ದ ಕೃತ್ಯಗಳಿಗೆ ಎಲ್ಲರೂ ಅಸಹಾಯಕರಾಗಿದ್ದರು. ಮುಖ್ತರ್ ವಿಷಯದಲ್ಲೂ ಅಷ್ಟೇ, ಅವಳ ಅಪ್ಪ ಎಷ್ಟೇ ಬೇಡಿಕೊಂಡರೂ ಕರುಣೆ ತೋರಲಿಲ್ಲ. ಜಿರ್ಗ ನ್ಯಾಯ ಪಂಚಾಯಿತಿ  ನೀಡಿದ ತೀರ್ಮಾದಂತೆ ಶಕುರ್ ಸೋದರಿ ಮುಖ್ತರ್ ಮೇಲೆ ಅತ್ಯಾಚಾರ ಮಾಡುವಂತೆ ತೀರ್ಮಾನ ನೀಡಿತ್ತು.
2002 ಜೂನ್ 2 ರಂದು ಏನೂ ಅರಿಯದ ಮುಗ್ಧೆ ಮುಖ್ತರ್ ಕುರಾನ್ ಗ್ರಂಥವನ್ನು ಎದೆಗಪ್ಪಿಕೊಂಡು ತಂದೆ, ಚಿಕ್ಕಪ್ಪ ಹಾಗೂ ಮೌಲ್ವಿ ಮೊದಲಾದವರೊಂದಿಗೆ ಜಮೀನ್ದಾರರ ಮನೆ ಕಡೆಗೆ ನಡೆದಳು. ಅಲ್ಲಿ ಮಸ್ತೋಯ್ ಸಮುದಾಯದ ಎಲ್ಲರೂ ಸೇರಿದ್ದರು. ಅವರೆಲ್ಲರೂ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರು. ಮುಖ್ತರ್ ಕೈಯಿಂದ ಕುರಾನ್ಅನ್ನು ಕಿತ್ತೊಗೆದು, ಅವಳ ಮೇಲೆ ಸರದಿಯಂತೆ ಅತ್ಯಾಚಾರವನ್ನು ಮಾಡಿದರು. ಅನಿರೀಕ್ಷಿತ ಆಘಾತದಿಂದ ಮುಖ್ತರ್ ಕುಸಿದಳು. ಇಡೀ ರಾತ್ರಿ  ಹಾಗೆಯೇ ಬಿದ್ದಿದ್ದ ಅವಳನ್ನು ಮಾರನೆ ದಿನ ಕತ್ತಲು ತುಂಬಿದ್ದ ಕುದುರೆ ಲಾಯದೊಳಕ್ಕೆ ಎಳೆದುಕೊಂಡು ಹೋಗಿ ಕೂಡಿ ಹಾಕಿದರು. ಅಲ್ಲಿ ಮತ್ತೆ ನಾಲ್ವರು ಅವಳ ಮೇಲೆ ಅತ್ಯಾಚಾರ ಮಾಡಿದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೂ ಆಕೆ ಆ ನಾಲ್ವರ ಮುಖಗಳನ್ನು ಮರೆಯುವಂತಿರಲಿಲ್ಲ. ಸತತ 24 ಘಂಟೆಗಳ ಬಂಧನ, ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ನಂತರ ಅವಳನ್ನು ಹೊರಗೆ ಕಳುಹಿಸಿದರು.
ಅಲ್ಲಿಂದ ಮನೆಗೆ ಬಂದವಳೆ ರೋಧಿಸುತ್ತಿದ್ದ ಅಮ್ಮನ ತೆಕ್ಕೆಗೆ ಸೇರಿದಳು. ನಿರ್ಜೀವ ಶವದಂತಾಗಿದ್ದ ಅವಳಲ್ಲಿ ಅಳಲು ಕಣ್ಣೀರು ಸಹ ಬರುತ್ತಿರಲಿಲ್ಲ. ಮೂರು ದಿನಗಳ ಕಾಲ ಊಟ, ತಿಂಡಿ, ನೀರು ಎಲ್ಲವನ್ನು ತ್ಯಜಿಸಿದ್ದ ಅವಳನ್ನು ಎಲ್ಲರೂ ಸಮಾಧಾನ ಮಾಡುತ್ತಿದ್ದರೂ ಆತ್ಮಹತ್ಯೆಯೊಂದೆ ನನ್ನ ಮುಂದಿರುವ ದಾರಿ ಎಂದು ತಾಯಿಗೆ ವಿಷವನ್ನು ತಂದುಕೊಡುವಂತೆ ಕೇಳುತ್ತಿದ್ದಳು. 
ಎಲ್ಲರೂ ನೀಡಿದ ಸಮಾಧಾನದಿಂದ ಚೇತರಿಸಿಕೊಂಡ ಮುಖ್ತರ್ ಮನದಲ್ಲಿ ಜಮೀನ್ದಾರರ ವಿರುದ್ಧ ಹೋರಾಡಬೇಕೆಂಬ ಭಾವನೆ ಚಿಗುರಿತು. ಇದೇ ಸಮಯಕ್ಕೆ ಸರಿಯಾಗಿ ಮುಖ್ತರ್ ವಿಷಯವು  ಪತ್ರಿಕೆಗಳಲ್ಲಿ ಪ್ರಚಾರವಾಗಿ ಇಡೀ ಪಾಕಿಸ್ತಾನದಲ್ಲಿ ಸುದ್ದಿಯಾಯಿತು. ನಂತರ ಮುಖ್ತರ್ಗೆ ಪೋಲಿಸ್ ಠಾಣೆಯಿಂದ ಕರೆ ಬಂದಿತು. ಠಾಣೆಗೆ ಹೋದ ಅವರನ್ನು ಸರಿಯಾಗಿ ನಡೆಸಿ ಕೊಳ್ಳಲಿಲ್ಲ. ಸುದ್ದಿ ತಿಳಿದ ಪತ್ರಕರ್ತರು ಠಾಣೆಗೆ ಬಂದು ಮುಖ್ತರ್ ಳನ್ನು ಪ್ರಶ್ನಿಸಿದರು. ಅವರುಗಳಿಗೆ ಮುಖ್ತರ್ ಯಾವುದೇ ಭಾವನೆಗಳಿಲ್ಲದೆ ಎಲ್ಲವನ್ನು  ತಿಳಿಸಿದಳು. ಇದರಿಂದ ನ್ಯಾಯ ಸಿಗುತ್ತದೆಯೆಂಬುದು ಅವಳ ಉದ್ದೇಶವಾಗಿರಲಿಲ್ಲ. ಬದಲಾಗಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮಾಧ್ಯಮಗಳ ಮೂಲಕ ಹೊರ ಜಗತ್ತಿಗೆ ತಿಳಿಯಲಿ ಎಂಬುದು ಇವಳ ಉದ್ದೇಶವಾಗಿತ್ತು. ಅಪ್ಪನ ಬೆಂಬಲದಿಂದ ಜಮೀನ್ದಾರರು ನೀಡುತ್ತಿದ್ದ ಬೆದರಿಕೆಗಳ ನಡುವೆಯೂ ಮುಖ್ತರ್ ಲಿಖಿತ ದೂರನ್ನು ನೀಡಲು ನಿರ್ಧರಿಸಿದಳು. ಆ ಮೂಲಕ ಮೇಲ್ವರ್ಗದ ಜನರ ವಿರುದ್ಧ ಬಂಡಾಯದ ಬಾವುಟದ ಹಾರಿಸಿದಳು. ಆದರೆ ಅನಕ್ಷರಸ್ಥೆಯಾದ ಅವಳನ್ನು ವಂಚಿಸಿ ತಪ್ಪು ಮಾಹಿತಿಗಳಿದ್ದ ಪತ್ರಕ್ಕೆ ಹಾಗೂ ಖಾಲಿ ಹಾಳೆಯೊಂದರ ಮೇಲೆ ಪೊಲೀಸರು ಹೆಬ್ಬೆಟ್ಟಿನ ಮುದ್ರೆಯನ್ನು ಒತ್ತಿಸಿಕೊಂಡರು.  
ನಂತರ ಇವಳನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಅವಳನ್ನು ಹಲವಾರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ವಿಚಾರಣೆ ಪ್ರಾರಂಭವಾಯಿತು. ಸಹೃದಯಿ ನ್ಯಾಯಾಧೀಶರು, “ನಾನು ನಿನ್ನ ತಂದೆಯ ಸಮಾನ, ಎಲ್ಲವನ್ನೂ ಹೇಳು” ಎಂದಾಗ ಮುಖ್ತರ್ ಆ ಘಟನೆಯನ್ನು ಸವಿಸ್ತಾರವಾಗಿ ಹೇಳಿದಳು. ಎಲ್ಲವನ್ನೂ ಕೇಳಿದ ನ್ಯಾಯಾಧೀಶರು “ಹೋರಾಟವನ್ನು ಕೈಬಿಡಬೇಡಿ, ಸ್ಥೈರ್ಯದಿಂದ ಮುಂದುವರೆಸಿ” ಎಂದು ಧೈರ್ಯ ತುಂಬಿದರು. ನಂತರ ಮಾಧ್ಯಮದವರ ಜೊತೆ ಮಾನವ ಹಕ್ಕುಗಳ ಸಂಘಟನೆಯ ಕಾರ್ಯಕರ್ತರು, ಮಹಿಳಾ ಹಕ್ಕುಗಳ ಕಾರ್ಯಕರ್ತರು, ಇವಳ ಗ್ರಾಮಕ್ಕೆ ಬಂದು ಹೋರಾಟಕ್ಕೆ ಬೆಂಬಲವನ್ನು ಸೂಚಿಸಿ ಸರ್ಕಾರವನ್ನು ಆರೋಪಿ ಸ್ಥಾನದಲ್ಲಿರಿಸಿದರು. 
ವಿಚಾರಣೆ ಮುಗಿಯುವ ಮುನ್ನವೇ ಎಚ್ಚರಗೊಂಡ ಸರ್ಕಾರ ಅವಳಿಗೆ ಪರಿಹಾರವಾಗಿ 5 ಲಕ್ಷ ಮೌಲ್ಯದ ಚೆಕ್ ಅನ್ನು ನೀಡಲು ಮುಂದೆಬಂದಿತು. ಮುಖ್ತರ್ ಅದನ್ನು ನಿರಾಕರಿಸಿ “ನನ್ನ ಈ ಪರಿಸ್ಥಿತಿಗೆ ಅನಕ್ಷರತೆಯೇ ಕಾರಣ, ದಯಮಾಡಿ ನನಗೆ ಹಣ ಬೇಡ, ನನ್ನ ಹಳ್ಳಿಗೆ ಶಾಲೆ ಬೇಕು” ಎಂದು ಉತ್ತರಿಸಿದಳು. ಸರ್ಕಾರ ಅದಕ್ಕೆ ಒಪ್ಪಿಗೆಯನ್ನು ನೀಡಿ ಶಾಲೆಯನ್ನು ಮಂಜೂರು ಮಾಡಿದ್ದೇ ಅಲ್ಲದೇ ಹಣವನ್ನು ಸಹ ನೀಡಿತು.
ಜೊತೆಗೆ, ಸರ್ಕಾರ ಅತ್ಯಾಚಾರಿಗಳು ಮತ್ತು ನ್ಯಾಯಪಂಚಾಯತಿ ಸದಸ್ಯರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿತು. ಇದರ ವಿಚಾರಣೆಗಾಗಿ ಡೇರಾ ಘಾಸಿ ಖಾನ್ ನಗರದಲ್ಲಿ ವಿಶೇಷ ಮತ್ತು ತ್ವರಿತಗತಿಯ ನ್ಯಾಯಾಲಯವನ್ನು ಸ್ಥಾಪಿಸಿತು. 2002 ಜುಲೈನಲ್ಲಿ ವಿಚಾರಣೆ ಪ್ರಾರಂಭವಾಯಿತು. ವಾದವಿವಾದಗಳ ನಡುವೆ ವಿಚಾರಣೆ ಅಂತ್ಯಗೊಂಡು ನ್ಯಾಯಾಧೀಶರು ತೀರ್ಪು ಬರೆಯುವ ಮುನ್ನ ಪೊಲೀಸರು ನೀಡಿದ ದಾಖಲೆಗಳನ್ನು ಪರಿಶೀಲಿಸಿದರು. ಮುಖ್ತರ್ ಹೇಳಿದ ಹೇಳಿಕೆಗಳಿಗೂ, ಅಲ್ಲಿದ್ದ ಹೇಳಿಕೆಗೂ ವ್ಯತ್ಯಾಸ ಇದ್ದುದ್ದರಿಂದ ಪೊಲೀಸ್ ಅಧಿಕಾರಿಯನ್ನು ಕರೆಸಿ ಛೀಮಾರಿ ಹಾಕಿ ಜೈಲಿಗೆ ಕಳಿಸುವುದಾಗಿ ಹೇಳಿದರು. 
2002 ಆಗಸ್ಟ್ 31 ರಂದು ತೀರ್ಪು ಹೊರಬಿದ್ದಿತು. ಅದರಂತೆ ಅತ್ಯಾಚಾರಿ ಜಮೀನುದಾರ ಮತ್ತು ಅವನ ಮೂವರು ಸಹಚರರಿಗೆ ಹಾಗೂ ನ್ಯಾಯಪಂಚಾಯಿತಿಯ ಇಬ್ಬರು ವ್ಯಕ್ತಿಗಳಿಗೆ ತಲಾ 50000 ರೂಪಾಯಿ ಜುಲ್ಮಾನೆ ಮತ್ತು ಮರಣದಂಡನೆ ನೀಡಲಾಯಿತು. ಉಳಿದ ನ್ಯಾಯಪಂಚಾಯಿತಿ ಸದಸ್ಯರಿಗೆ ಮುಂದೆ ಸಭೆ ನಡೆಸಿದರೆ ‘ಭಯೋತ್ಪಾದನೆ ನಿಗ್ರಹ ಕಾಯ್ದೆ’ಯಡಿ ಬಂಧಿಸಿ ಶಿಕ್ಷೆ ವಿಧಿಸುವುದಾಗಿ ಹೇಳಿ ಬಿಡುಗಡೆ ಮಾಡಲಾಯಿತು. ಈ ತೀರ್ಪಿನಿಂದ ನೈತಿಕವಾಗಿ ಕುಗ್ಗಿಹೋಗಿದ್ದ ಮುಖ್ತರ್ ಳಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಿತು. 
2005ರಲ್ಲಿ ಮೊದಲ ಬಾರಿಗೆ ಇವಳನ್ನು ಸ್ಪೇನ್ ದೇಶದ ಮಹಿಳಾ ಸಂಘಟನಾ ಸಂಸ್ಥೆಯೊಂದು ಅಂತರರಾಷ್ಟ್ರೀಯ ಮಹಿಳಾ ಸಮಾವೇಶಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನ ನೀಡಿತು. ಅಲ್ಲಿ ಮಹಿಳೆಯರ ಮೇಲಿನ ದೌರ್ಜನಗಳ ವಿರುದ್ಧ ವಿಷಯ ಪ್ರಸ್ತಾಪಿಸಲು ಅನೇಕ ದೇಶಗಳಿಂದ ಮಹಿಳೆಯರು ಬಂದಿದ್ದರು. ಎಲ್ಲವನ್ನೂ ಕೇಳಿದ ಮುಖ್ತರ್ ಳಿಗೆ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡುವುದರ ಜೊತೆಗೆ ಮೃಗಗಳಂತೆ ವರ್ತಿಸುವ ಪುರುಷರಲ್ಲಿ ಬದಲಾವಣೆ ತರಲು ಗಂಡುಮಕ್ಕಳಿಗೂ ಶಿಕ್ಷಣ ನೀಡಬೇಕೆಂದು ನಿಶ್ಚಯಿಸಿದಳು. 
ಜಮೀನುದಾರರು ಸಲ್ಲಿಸಿದ್ದ ಮೇಲ್ಮನವಿಯ ಹಿನ್ನೆಲೆಯಲ್ಲಿ ಲಾಹೋರ್ ಹೈಕೋರ್ಟ್‍ನಲ್ಲಿ ಐವರನ್ನು ಬಂಧಮುಕ್ತಗೊಳಿಸಿ, ಒಬ್ಬನಿಗೆ ಜೀವಾವಧಿ ಶಿಕ್ಷೆಯನ್ನು ಖಾಯಂಗೊಳಿಸಿತು. ಇದರ ವಿರುದ್ಧ ಮಾನವ ಹಕ್ಕುಗಳ ಕಾರ್ಯಕರ್ತರು “ಇಂದು ಪಾಕಿಸ್ತಾನದ ಕರಾಳ ದಿನ ಮತ್ತು ಮಹಿಳೆಯರ ಸಾರ್ವಭೌಮ ಹಕ್ಕುಗಳು ಮಣ್ಣುಪಾಲಾದ ದಿನ” ಎಂದು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. 
ಮುಖ್ತರ್ ಮತ್ತು ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು. ಆ ಸಮಯದಲ್ಲಿ ಕೆನಡಾದ ರಾಯಭಾರಿ ಮಾರ್ಗರೆಟ್ ಹಬರ್ ಮುಖ್ತರ್ ಳನ್ನು ಭೇಟಿಯಾದಳು. ‘ಮುಖ್ತರ್ ಮಾಯಿ ಮಹಿಳೆಯರ ಹಕ್ಕುಗಳಿಗಾಗಿ ನಡೆಸಿರುವ ಹೋರಾಟ ಜಗತ್ತಿನ ಗಮನ ಸೆಳೆದಿದೆ, ಪಾಕಿಸ್ತಾನದ ಪುರುಷ ಜಗತ್ತು ಮಹಿಳೆಯರಿಗೆ ಸೃಷ್ಟಿಸಿದ ಶರಪಂಜರವನ್ನು ಮುರಿದುಹಾಕಿದ್ದಾಳೆ” ಎಂದರು. 
ಆ ಮಧ್ಯೆಯೇ ಅವಳು ಗೃಹಸಚಿವರನ್ನು ಭೇಟಿಯಾಗಿ ತನಗೆ ಜೀವಬೆದರಿಕೆಯಿದೆಯಾದ್ದರಿಂದ, ರಕ್ಷಣೆ ನೀಡಬೇಕೆಂದು ಕೇಳಿಕೊಂಡಳು. ಆದರೆ ಅವಳಿಗೆ ಅಲ್ಲಿಯೂ ನ್ಯಾಯ ಸಿಗಲಿಲ್ಲ. ಅವಳ ಮೇಲೆ ಕೇಸ್ ಹಿಂಪಡೆಯುವಂತೆ ತೀವ್ರ ಒತ್ತಡ ಹೇರಲಾಯಿತು. ರಕ್ಷಣೆ ನೀಡುವ ಹೆಸರಿನಲ್ಲಿ ಅವಳನ್ನು ಗೃಹಬಂಧನದಲ್ಲಿರಿಸಲಾಯಿತು. ಜೊತೆಗೆ ಅವಳು ವಿದೇಶಗಳಿಗೆ ಹೋದರೆ ತಮ್ಮ ದೇಶದ ಮಾನ ಹರಾಜಾಗುವುದೆಂಬ ಭಯದಿಂದ ಅವಳ ಪಾಸ್‍ಪೋರ್ಟ್ ಮತ್ತು ವೀಸಾ ಮುಟ್ಟುಗೋಲು ಹಾಕಿಕೊಂಡರು.
2005 ಅಕ್ಟೋಬರ್‍ನಲ್ಲಿ ಪಾಕಿಸ್ತಾನದ ಉತ್ತರ ಭಾಗದಲ್ಲಿ ಭೂಕಂಪ ಸಂಭವಿಸಿತು. ಆ ಸಮಯದಲ್ಲಿ ಅಂತರರಾಷ್ಟ್ರೀಯ ನೆರವು ಬೇಕಿತ್ತು. ಇದೇ ಸಮಯದಲ್ಲಿ “ಏಷ್ಯನ್ ಅಮೇರಿಕನ್ ನೆಟ್‍ವರ್ಕ್” ಎಂಬ ಸಂಸ್ಥೆಯು ಮುಖ್ತರ್‍ಳನ್ನು ವರ್ಷದ ಮಹಿಳೆಯೆಂದು ಆಯ್ಕೆ ಮಾಡಿತು. ಇದರಿಂದ ವಿದೇಶಿ ಪ್ರವಾಸಕ್ಕಿದ್ದ ನಿರ್ಬಂಧವನ್ನ್ನು ಸರ್ಕಾರ ತೆಗೆದುಹಾಕಬೇಕಾಗಿ ಬಂತು. ಹೋದೆಡೆಯೆಲ್ಲಾ ಮುಖ್ತರ್ ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡಳು. ಸಹಾಯದ ಮಹಾಪೂರವೇ ಹರಿದುಬಂದಿತು. ಒಬ್ಬ ಅನಕ್ಷರಸ್ಥ ಮಹಿಳೆ ತಾನು ಏನೆಲ್ಲ ಕಷ್ಟ ಅನುಭವಿಸಿದರು, ತನ್ನ ದೇಶದ ಜನತೆಗೆ ನೆರವಾದಳು.
ಕಾನೂನಿನ ಹೋರಾಟದ ಜೊತೆಜೊತೆಗೆ ವಿದ್ಯೆ ಕಲಿತ ಆಕೆ, 2007ರಲ್ಲಿಯೇ ಆಕೆಯ ಮತ್ತು ಕುಟುಂಬದವರ ಜೀವಕ್ಕೆ ಬೆದರಿಕೆಯಿದ್ದರೂ “ಮುಖ್ತರ್ ಮಾಯಿ ಮಹಿಳಾ ಕಲ್ಯಾಣ ಸಂಘಟನೆ”ಯನ್ನು ಆರಂಭಿಸಿದಳು. ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ, ಆ ಮೂಲಕ ಹೆಣ್ಣುಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಅರಿವನ್ನು ಮೂಡಿಸುವ ಪ್ರಯತ್ನದಲ್ಲಿ ತೊಡಗಿದಳು. ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿ ಬೆಳೆದಳು. ಅವಳು ಸ್ಥಾಪಿಸಿರುವ ಸಂಘಟನೆ ಸಮುದಾಯದಲ್ಲಿಯೂ ಮಹಿಳಾ ಹಕ್ಕುಗಳ ಬಗ್ಗೆ ಅರಿವನ್ನು ಮೂಡಿಸಲೆತ್ನಿಸುತ್ತಿದೆ. ಬಾಲ್ಯ ವಿವಾಹದ ವಿರುದ್ಧ ಹೋರಾಡುತ್ತಿದೆ. ಜೊತೆಗೆ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಆಶ್ರಯ, ವೈದ್ಯಕೀಯ ನೆರವು ಮತ್ತು ಕಾನೂನಾತ್ಮಕ ನೆರವನ್ನು ನೀಡುತ್ತಿದೆ. 
ಸತತವಾಗಿ 6 ವರ್ಷಗಳ ಕಾಲ ನಡೆದ ವಿಚಾರಣೆ 2011ರ ಏಪ್ರಿಲ್ 20ರಂದು ಮುಗಿಯಿತು. ತೀರ್ಪಿನಲ್ಲಿ ಒಬ್ಬನಿಗೆ ಮಾತ್ರ ಜೀವಾವಧಿ ಶಿಕ್ಷೆ ಎತ್ತಿಹಿಡಿದು, ಉಳಿದವರನ್ನು ಖುಲಾಸೆಗೊಳಿಸಿತು. ಇದರಿಂದ ಹತಾಶಳಾದರೂ ಧೃತಿಗೆಡದ ಮುಖ್ತರ್ ತನ್ನ ದೇಶದ ಮಹಿಳಾ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರೆಸಿದ್ದಾಳೆ. ಮರುವಿವಾಹವಾದ ಆಕೆಗೆ, ಆಕೆಯ ಪತಿ ಸಹ ಅವಳ ಇನ್ನಿತರ ಕುಟುಂಬ ಸದಸ್ಯರಂತೆ, ಹೋರಾಟದಲ್ಲಿ ಜೊತೆಯಿದ್ದಾನೆ ಎನ್ನುವುದು ಹರ್ಷದಾಯಕ ವಿಷಯವಾಗಿದೆ.

ಕಾಮೆಂಟ್‌ಗಳಿಲ್ಲ: