Pages

ಅಂತರರಾಷ್ಟ್ರೀಯ ಮಹಿಳಾ ದಿನ



ಮಹಿಳಾ ದಿನ

ಮಹಿಳಾ ದಿನದಂದು
ಕೇಳಿದರು ನಮ್ಮನ್ನು
ನಿಮಗೇಕೆ ಈ ದಿನ?
ಶಿಕ್ಷಣವಿದೆ, ಉದ್ಯೋಗವಿದೆ
ಸುಖೀ ಕುಟುಂಬವಿದೆ
ಮತ್ತೇಕೆ ಈ ಆಚರಣೆ?
ಇನ್ನೇಕೆ ಈ ಪ್ರತಿಭಟನೆ?

ಉತ್ತರಿಸಿದಳು ಒಬ್ಬಾಕೆ
ನಮ್ಮೆಲ್ಲರ ಪ್ರತಿನಿಧಿಯಾಗಿ
ನಿಜ, ನೀವು ಹೇಳುತ್ತಿರುವುದು
ಅಕ್ಕರೆಯ ತಂದೆ ಕೊಡಿಸಿದ ಶಿಕ್ಷಣ
ಸ್ವಸಾಮರ್ಥ್ಯದಿಂದ ಪಡೆದ ಉದ್ಯೋಗ
ಪ್ರೀತಿಯಿಂದ ಗೌರವಿಸುವ ಸಂಗಾತಿ
ಮಮತೆದಿಂದ ಕಾಣುವ ಸ್ನೇಹಿತರು
ಎಲ್ಲವೂ, ಎಲ್ಲರೂ ಇದ್ದಾರೆ ನಿಜ;


ಆದರೂ ಸಮಾಜದಲ್ಲಿ ನಮಗೆ ನಿಜ ಸಮಾನತೆ ಇದೆಯೇ?
ನಿರ್ಧಾರಗಳನ್ನು ಕೈಗೊಳ್ಳುವ ಹಕ್ಕಿದೆಯೇ?
ಆಕಾಶಕ್ಕೇರುವ ಕನಸುಗಳ ನನಸಾಗಿಸಲು ಆಗಿದೆಯೇ?
ವಿಭಿನ್ನ ರಂಗಗಳಲ್ಲಿ ಸಾಮರ್ಥ್ಯ ತೋರಿಸುವ ಅವಕಾಶವಿದೆಯೇ?
ನಿರ್ಭಯವಾಗಿ ಹೊರಗಡೆ ಓಡಾಡುವ ವಾತಾವರಣವಿದೆಯೇ?
ಕಛೇರಿಯಲಿ ವಕ್ರನೋಟಗಳ ಹಾವಳಿಯಿಂದ ಮುಕ್ತಿಯಿದೆಯೇ?
ಬೀದಿಕಾಮಣ್ಣರ ಕಾಟದಿಂದ ವಿಮುಕ್ತಿಯಿದೆಯೇ?

ಇಷ್ಟು ಮಾತ್ರವಲ್ಲ
ಈ ದಿನದ ಆಚರಣೆಗೆ
ಇದೆ ಇನ್ನೊಂದು ದೊಡ್ಡ ಕಾರಣ -


ನಮಗಿರುವುದೆಲ್ಲವೂ
ನಮ್ಮೆಲ್ಲ ಸೋದರಿಯರಿಗೆ ಸಿಕ್ಕಿದೆಯೇ?
ಶಿಕ್ಷಣ, ಕೆಲಸ, ಸ್ಥಾನಮಾನ ದೊರೆತಿದೆಯೇ?
ಕುಡುಕ ಗಂಡನಿಂದ, ಅವನ ಹೊಡೆತಗಳಿಂದ ಮುಕ್ತಿ ಪಡೆದಿರುವಳೇ?
ಕೌಟುಂಬಿಕ ಹಿಂಸೆ, ವರದಕ್ಷಿಣೆ ಸಾವು ನಿಂತಿದೆಯೇ?
ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯುತಿಹಳೇ?
ತನ್ನ ದೇಹದ ಮೇಲೆ ಸಂಪೂರ್ಣ ಹಕ್ಕಿದೆಯೇ?
ಹೆಣ್ಣುಭ್ರೂಣವೆಂದಾಗ ಉಳಿಸಿಕೊಳ್ಳುವ ಅಧಿಕಾವಿದೆಯೇ?

ಅವರಿಗಾಗಿ ದನಿ ಎತ್ತದಿದ್ದರೆ
ನಮ್ಮ ಶಿಕ್ಷಣದ ಉಪಯೋಗವೇನು ?
ಅವರಿಗಿಲ್ಲದ್ದು ನಮಗೆ ದೊರೆತರೆ
ಸಮಾಜಕ್ಕೆ ಪ್ರಯೋಜನವೇನು?
ಬೆಸೆದಿದೆ ನಮ್ಮೆಲ್ಲರ ಬಾಳು
ಒಂದೇ ವಸ್ತ್ರದ ಎಳೆಗಳ ತೆರದಿ
ವಿಮುಕ್ತಿ ದೊರೆವುದು ಕೇಳು
ಎಲ್ಲರಿಗೂ, ಒಟ್ಟಿಗೆ, ಒಂದೇ ಸಮಯದಿ
ಬಟ್ಟೆಯ ಪ್ರತಿ ನೂಲು
ಗಟ್ಟಿಗೊಳ್ಳಲೇಬೇಕು
ಅದುವರೆಗೂ ಹೋರಾಟ
ಸಾಗುತ್ತಿರಲೇಬೇಕು! !

             


- ಸುಧಾ ಜಿ       

ಕಾಮೆಂಟ್‌ಗಳಿಲ್ಲ: