Pages

ನಾಟಕ - ಧನಿಯರ ಸತ್ಯನಾರಾಯಣ

                                    
                                                                                                                                                                      (ಕೊರಡ್ಕಲ್ ಶ್ರೀನಿವಾಸರಾವ್ ರವರ "ಧನಿಯರ ಸತ್ಯನಾರಾಯಣ" ಎಂಬ ಕಥೆಯನ್ನು ನಾಟಕ ರೂಪದಲ್ಲಿ ನೀಡುತ್ತಿದ್ದೇವೆ. ನಾಟಕದ ರೂಪಕ್ಕಿಳಿಸಿದವರು ಸುಧಾ ಜಿ)

ಆರು ವರ್ಷದ ಹುಡುಗ. ಬಾಳೆಯ ಕಂದು ಹೊತ್ತು ಕಷ್ಟಪಟ್ಟು ತರುತ್ತಿದ್ದಾನೆ. ಹೊರಲಾರದ ಹೊರೆ. ಈ ಕಡೆಯಿಂದ ಆ ಕಡೆಗೆ, ಆ ಕಡೆಯಿಂದ ಈ ಕಡೆಗೆ ವರ್ಗಾಯಿಸುತ್ತಿದ್ದಾನೆ. ಬೆವರುತ್ತಿದ್ದಾನೆ. ಬಿಗಿಯಾಗಿ ಹಿಡಿದರೆ ಜಜ್ಜಿಹೋಗುತ್ತದೇನೊ, ಸಡಿಲವಾಗಿ ಹಿಡಿದರೆ ಜಾರಿ ಬಿದ್ದು ಸುಳಿ ಮುರಿಯುತ್ತದೇನೊ ಎಂದು ಜಾಗರೂಕತೆಯಿಂದ ಹಿಡಿದಿದ್ದಾನೆ.
ತಾಯಿ: ಹೀಗೆ ಹಿಂದೆ ಬಿದ್ದರೆ ಮನೆ ಯಾವಾಗ ಸೇರುವುದು? ಹೊತ್ತು ಇಳಿಯುವುದೂ ಕಾಣುವುದಿಲ್ಲವೇ? ಬೇಡಾ ಬೇಡಾ ಅಂದ್ರೂ ಕೇಳದೆ ಹೊತ್ತೆ. ಯಾವ ಕರ್ಮಕ್ಕೆ ಅದು. ತೆಗೆದತ್ತ ಒಗೆ. ಬೇಗ ಮುಂದೆ ಬಂದರೆ ಸರಿ. ಇಲ್ಲದಿದ್ದರೆ ನಾನೇ ಅದನ್ನು ಎಳೆದು ಬಿಸಾಡುತ್ತೇನೆ. (ಅವಳ ಕೈಯಲ್ಲೂ ತಾಯಿ ಮನೆಯಿಂದ ತಂದ ಸಾಮಾನು, ಕಂಕುಳಲ್ಲಿ ಒಂದು ಮಗು ಇದೆ).
ಬೂದ: ಇಲ್ಲಮ್ಮಾ ಭಾರ ಏನಿಲ್ಲ. ನೋಡು, ಬೇಗ ಬೇಗ ಬರ್ತಾ ಇದ್ದೀನಿ. 
ತುಕ್ರಿ: ಅಣ್ಣ ಇಲ್ಲಿ ಕೊಡು (ಸ್ವಲ್ಪ ದೂರ ತಾನು ಕಷ್ಟಪಟ್ಟು ಹೊರುವಳು.)
ಬೂದ: ಅಮ್ಮಾ, ಅಜ್ಜಿ ಹೇಳಿದ್ದಾಳೆ. ಇದನ್ನು ನೆಟ್ಟರೆ ಬಾಳೆಹಣ್ಣು ಗೊನೆ ಸಿಗುತ್ತದಂತಮ್ಮಾ. (ತಾಯಿ ಏನೂ ಮಾತನಾಡದೆ ಸುಮ್ಮನೆ ನಡೆಯುತ್ತಿದ್ದಾಳೆ).
ತುಕ್ರಿ: ಅಮ್ಮಾ, ಅಜ್ಜಿ ಕೊಟ್ಟ ಬಾಳೆಹಣ್ಣು ಎಷ್ಟು ಚೆನ್ನಾಗಿತ್ತು. ನಾಕೇ ನಾಕು ನಂಗೆರಡು, ಅಣ್ಣನಿಗೆರಡು. ಗೊನೇಪೂರ್ತಿ ಆ ಕಾಡ, ನಾಗಿ ತಿಂದುಬಿಟ್ರಂತೆ. ಅದಕ್ಕೆ ಮಾವ ಇದನ್ನು ಕೊಟ್ಟದ್ದು.
ತಾಯಿ: ಸರಿ ಸರೆ, ಬೇಗ ಬೇಗ ನಡೀರಿ. ಬಾಳೆಹಣ್ಣು ಬಿಟ್ರೆ ನಂಗೂ ಸಂತೋಷನೇ. (ಮಕ್ಕಳ ಬಯಕೆಗೆ ತಾಯಿ ಇಲ್ಲವೆನ್ನಲಾರಳು)
ಮನೆ ತಲುಪಿದ ತಕ್ಷಣ ಅಪ್ಪನನ್ನು ಸಮೀಪಿಸಿದ ಮಕ್ಕಳು
ತುಕ್ರಿ: ಅಪ್ಪಾ ನೋಡಿಲ್ಲಿ ನಾವೇನು ತಂದಿದ್ದೀವಿ?
ತೌಡ: ಏನ್ರೋ ಅದು?
ಬೂದ: ಬಾಳೆ ಕಂದು ಅಪ್ಪಾ.
ತೌಡ: ಯಾಕ್ರೋ?
ತುಕ್ರಿ: ಅಪ್ಪಾ ಇದನ್ನು ನೆಟ್ರೆ ನಮಗೆ ಬೇಕಾದಷ್ಟು ಬಾಳೆಹಣ್ಣು ಸಿಗುತ್ತಂತಪ್ಪಾ.
ತೌಡ : ಇದನ್ನಿಲ್ಲಿ ನೆಟ್ರೆ ಧನಿಗಳ ದನಗಳು ನುಗ್ಗೋದಿಲ್ವೇನ್ರೋ. ಅದನ್ನ ನಾವು ಓಡಿಸೋಕಾಗುತ್ತಾ? ಬೇಡ ಬಿಡ್ರೋ.
ತುಕ್ರಿ : ಅಪ್ಪಾ ಅಪ್ಪಾ ಬಾಳೆಹಣ್ಣೂ ಅಪ್ಪಾ.
ತೌಡ : (ಮಕ್ಕಳ ಬಯಕೆ ತೀರಿಸಲಾಗದ ಅಸಹಾಯಕ ಪರಿಸ್ಥಿತಿಯಲ್ಲಿ, ಸಿಟ್ಟಿನಿಂದ ಏ ಬೇಡ ಅಂತಾ ಒಂದ್ಸಾರಿ ಹೇಳದ್ರೆ ಕೇಳ್ಬೇಕು. ಇಷ್ಟು ದಿನ ಇಲ್ಲೇನಾದ್ರೂ ನೆಟ್ಟಿದ್ವಾ? ನೆಟ್ಟಿದ್ರೂ ಉಳ್ಕೊಂದೈತಾ?
ತಾಯಿ: ಏನೋ ಪಾಪ ಮಕ್ಕಳು ಅಷ್ಟು ಆಸೆ ಪಡ್ತಾ ಇದ್ದಾವೆ. ನಮಗಂತೂ ಬಾಳೆಹಣ್ಣು ಕೊಂಡ್ಕೊಡೋಕೆ ಆಗಲ್ಲ. ಆ ಕಟ್ಟಿಗೆ ಸುತ್ತ ಕಟ್ಟಿ ಒಂಚೂರು ನೆಟ್ಕೊಡಿ.
ತೌಡ : ಆ ಕಟ್ಟಿಗೆ ಒಲೆ ಉರಿಸೋಕೆ ಬೇಡ್ವಾ?
ತಾಯಿ: ಹೇಗೊ ಮಾಡ್ಕೊಂಡ್ರಾಯ್ತು. ಅವಕ್ಕೆ ಯಾಕೆ ನಿರಾಸೆ, ಮಾಡ್ಕಡಿ.
ತೌಡ : ಸರಿ, ಅದನ್ನು ಅಲ್ಲಿ ಇಡ್ರೊ. ಬೆಳಗ್ಗೆ ಎದ್ದು ನೆಟ್ಕೊಡೀನಿ.

ಮಾರನೆ ದಿನ ತೌಡ ಬಾಳೆಕಂದು ನೆಡುತ್ತಾನೆ. ಮಕ್ಕಳು ಸಂತೋಷದಿಂದ ದಿನಾ ಬೆಳಗಾದರೆ ಅದನ್ನು ಮೊದಲು ನೋಡಲು ಬರುತ್ತಾರೆ. ಕೆರೆಯಿಂದ ನೀರು ಹೊತ್ತು ತಂದು ಆರೈಕೆ ಮಾಡುತ್ತಾರೆ. ಅದರೊಂದಿಗೆ ಆ ಮಕ್ಕಳ ಬೆವರೆಷ್ಟು ಸುರಿದಿತ್ತೋ, ಗಿಡ ಬೆಳೆಯಿತು. ಹೂವು ಬಿಟ್ಟಿತು. ಬೆರಳು ಬಿಟ್ಟಿತು. ಬೆರಳುಗಳು ಬಲಿತ ತೋರಕಾಯಿಗಳಾದವು, ಹಣ್ಣುಗಳಾಗುವುದನ್ನು ಎಲ್ಲರೂ ಕಾಯುತ್ತಿದ್ದರು. 
ಬೂದ : (ಗಿಡವನ್ನು ನೋಡುತ್ತಾ) ಅಮ್ಮಾ ಬಾಳೆ ಹಣ್ಣಾಗೋದು ಯಾವಾಗಮ್ಮಾ?
ತಾಯಿ: ಇನ್ನೆರಡು ದಿನ ತಡೀ ಮಗಾ. ಹಣ್ಣು ತಿನ್ನೋವ್ರಂತೆ. 
(ಬೂದ, ತುಕ್ರಿ, ದೂಮ ಖುಷಿಯಿಂದ ಕುಣಿಯಲಾರಂಭಿಸುವರು. ಅಷ್ಟರಲ್ಲಿ ಧಣಿಗಳು ಕಾಣಿಸಿಕೊಳ್ಳುವರು. ತಾಯಿ ಮಕ್ಕಳನ್ನು ಕರೆದುಕೊಂಡು ಒಳಹೋಗುವಳು).
ಧಣಿ : ತೌಡ , ಆ ಗೇಣಿ ಬಾಕಿ ಎರಡು ರೂಪಾಯಿ ಯಾವಾಗ ಕೊಡೋದು? ಅದೇನು ನಿನ್ನ ತೋಟವೆಂದು ಕೊಂಡಿದ್ದೀಯಾ?
ತೌಡ : (ದೀನತೆಯಿಂದ) ಈ ಮಳೆಗಾಲ ಸಾಗಲಿ, ಕಬ್ಬು ಹೂಡುವ ಕಾಲದಲ್ಲಿ ಹೇಗಾದರೂ ದುಡಿದು ಉಳಿಸಿ ಕೊಡುತ್ತೇನೆ ಧಣಿ.
ಧಣಿ : (ಕೋಪದಿಂದ) ಯಾವಾಗ ಕೇಳಿದರೂ ಇಂದಿಲ್ಲ ಮುಂದೆ ಎಂದೆನ್ನುವ ನಿನ್ನ ರೋಗ ಇದ್ದದ್ದೇ. ಆ! ಪರ್ವಾಗಿಲ್ವೆ (ಬಾಳೆಗಿಡದ ಕಡೆ ನೋಡಿ) ಒಳ್ಳೆ ಗೊನೇನೆ ಬಿಟ್ಟಿದೆ.
ತೌಡ : ಹೌದು ಧಣಿ. ಮಕ್ಕಳು ಆಸೆಯಿಂದ ನೆಟ್ಕಂಡವ್ರೆ.
ಧಣಿ: ಒಳ್ಳೇದು. ಒಳ್ಳೇದು. ನಾಡಿದ್ದು ಹುಣ್ಣೀಮೆ. ನಮ್ಮಲ್ಲಿ ಸತ್ಯನಾರಾಯಣ ಪೂಜೆ ಇದೆ. ನಾಳೆಯೇ ಕಡಿದಿಟ್ಟರೆ ನಾಡಿದ್ದಿಗೆ ಹಣ್ಣಾಗುತ್ತೆ. ಹುಣ್ಣಿಮೆ ಬೆಳಿಗ್ಗೆ ತಂದ್ಕೊಟ್ಟುಬಿಡು. ತಿಳಿತಾ?
ತೌಡ : (ಬರಸಿಡಿಲು ಬಡಿದವನಂತೆ) ಆ!
ಧಣಿ : ಯಾಕೊ ಹೇಳಿದ್ದು ಅರ್ಥಾ ಆಗಿಲ್ವಾ?
ತೌಡ : (ಅಂಜುತ್ತಾ) ಮಕ್ಕಳು ಆಸೆಯಿಂದ ಬೆಳೆಸಿದ್ದು. ಕೆಳಗಿನ ಒಂದೆರಡು ಚಿಪ್ಪಾದರೂ ಮಕ್ಕಳಿಗೆ............
ಧಣಿ: ಮಕ್ಕಳಿಗೆ ರಸಬಾಳೆ ಹಣ್ಣೊ, ಮಣ್ಣೊ! ದೇವರ ಬಾಯಿಗೆ ಬೀಳಲಿ! ಮಕ್ಕಳ ಮೈಕೈಗೆ ಸುಖ ಕೊಡುತ್ತಾನೆ. ಅದು ಬಿಟ್ಟು ಹೀಗೆಲ್ಲ ಮಾಡೋದ್ರಿಂದ್ಲೆ ನಿತ್ಯ ದರಿದ್ರ ತಪ್ಪೋಲ್ಲ ನಿಮಗೆ. (ಹೊರಡುತ್ತ) ನೆನಪಿದೆ ತಾನೆ ನಾಡಿದ್ದು...
ಮರುದಿನ ತೌಡ ಗೊನೆ ಕಡಿದ. ಮಕ್ಕಳು ಸಂತೋಷದಿಂದ ಕುಣಿದರು. ಹೆಂಡತಿಗೆ ಮಾತ್ರ ವಿಷಯ ತಿಳಿಸಿದ್ದ ತೌಡ. ಒಂದು ಗೋಣಿಚೀಲಕ್ಕೆ ಹಾಕಿದ್ದ. ಹಣ್ಣಾದಾಗ ನೋಡೋಣ ಎಂದು ಅವರಿಗೆ ಹೇಳಿದ್ದ. 
ಹುಣ್ಣಿಮೆಯ ದಿನ. ಬೂದ ಎದ್ದು ಬಂದು ಬಾಳೆಗೊನೆ ಇಟ್ಟಿದ್ದ ಜಾಗ ನೋಡಿ ಗಾಬರಿಯಿಂದ 
ಬೂದ : ಅಮ್ಮ, ಅಮ್ಮಾ ಬಾಳೆಗೊನೆ ಎಲ್ಲಮ್ಮಾ ಕಾಣ್ತಾನೇ ಇಲ್ಲ. 
ತುಕ್ರಿ : ಅಮ್ಮಾ ಎಲ್ಲೋಯ್ತಮ್ಮಾ?
ತಾಯಿ : (ದುಃಖವನ್ನು ಮರೆಮಾಚಿ) ಆ ಕಾಳಬೆಕ್ಕು ಬಂದು ತಿಂದೋಯ್ತು.
ದೂಮ: ಆ ಕಾಳ ... ಬೆಕ್ಕು.. ಸತ್ತೇ ಹೋಗ್ಲಿ.
(ಮೂವರು ದುಃಖ ತಡೆಯಲಾರದೆ ಅಳತೊಡಗಿದರು)
ಬೂದ /ತುಕ್ರಿ : ಅಮ್ಮಾ ನಿಜ ಹೇಳಮ್ಮ. ಬೆಕ್ಕು ಬಾಳೆಹಣ್ಣು ಎಲ್ಲಮ್ಮ ತಿನ್ನುತ್ತೆ. ಗೊನೆ ಹೇಗಮ್ಮಾ ಹೊತ್ಕೊಂಡು ಹೋಯ್ತು?
ತಾಯಿ: ಧಣಿಯೋರ ಮನೇಲಿ ಸತ್ಯನಾರಾಯಣ ಪೂಜೆಯಂತೆ. ಅವರು ಕೇಳಿದ್ರಂತೆ ಅಪ್ಪಾ ತಕೊಂಡು ಹೋದ್ರು.
ಬೂದ : ಅಮ್ಮಾ ದೇವ್ರು ಬಾಳೆಹಣ್ಣು ತಿನ್ನುತ್ತಾರಾ? 
ತುಕ್ರಿ : ಅಷ್ಟೂ ತಿಂತಾರಾ ಅಮ್ಮಾ ದೇವ್ರು?
ತಾಯಿ : ಹೋಗ್ಲಿ ಬಿಡಿ. ಇನ್ನೂ 2 – 3 ಕಂದುಗಳಿವೆ. ಯಾವುದಾದರೊಂದು ಬೇಗ ದೊಡ್ಡದಾಗಿ ಗೊನೆ ಹಾಕುತ್ತೆ. ಅದು ಪೂರಾ ನಿಮಗೆ. 
(ಅವರ ಅಳುಮೊರೆ ನೋಡಲಾರದೆ ಒಳಗೆ ಹೋದಳು).
ಬೂದ, ತುಕ್ರಿ ಸ್ವಲ್ಪ ಹೊತ್ತು ಅಲ್ಲಿಯೇ ಅಳುತ್ತಾ ಕುಳಿತರು. ಇದ್ದಕ್ಕಿದ್ದಂತೆ
ಬೂದ : ಬಾ ತುಕ್ರಿ, (ಬಾಳೆಕಂದುಗಳಿರುವತ್ತ ಓಡಿದ. ತುಕ್ರಿ ಅವನನ್ನು ಹಿಂಬಾಲಿಸಿದಳು. ಬೂದ ಬಾಳೆಕಂದುಗಳನ್ನು ಮುರಿಯುತ್ತಾ ಅಳುತ್ತಾ) ಇ ಇ ಇ ಇವು ಗೊನೇ ಹಾಕೋದೂ ಬೇಡಾ! ಆ ಆ ಆ ಸತ್ ನಾರ್ಣಾ..... ತಿತಿತ್ತಿನೋದು ಬೇಡಾ. (ಸೀಳಿ ಮುರಿದು ಹಾಕಿ ಅವುಗಳ ಮೇಲೆ ನರ್ತನ ಮಾಡುತ್ತಿದ್ದಾನೆ. ಅಲ್ಲೆಲ್ಲಾ ಕೆಸರೇಳುತ್ತಿದೆ. ತುಕ್ರಿಯೂ ಕುಣಿಯುತ್ತಿದ್ದಾಳೆ. ಎಂತಹ ಆವೇಶ! ಅದೆಂತಹ ನೃತ್ಯ! 
   - ಕೊರಡ್ಕಲ್ ಶ್ರೀನಿವಾಸರಾವ್