Pages

ಕಥೆ - ಸ್ಫೂರ್ತಿ

             

     ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಮೈಸೂರಿಗೆ ಹೋಗುವ ರೈಲಿಗಾಗಿ ಕಾಯುತ್ತಾ ಕುಳಿತಿದ್ದೆ. ರೈಲು ಬಂತು, ನನ್ನ ಲಗೇಜನ್ನು ತೆಗೆದುಕೊಂಡು ರೈಲಿನಲ್ಲಿ ಹತ್ತಿ ಕುಳಿತೆ. ನಾನು ಹತ್ತಿದ ಬೋಗಿಯಲ್ಲಿ ಶಾಲೆಯ ಮಕ್ಕಳೂ ಹತ್ತಿದರು. ಅವರನ್ನು ಮೈಸೂರಿನ ಪ್ರವಾಸಕ್ಕೆಂದು ಕರೆದೊಯ್ಯುತ್ತಿದ್ದರು. ಮಕ್ಕಳ ಮುಖದಲ್ಲಿ ಉತ್ಸಾಹ ತುಂಬಿತ್ತು. ಅವರನ್ನು ನಿಯಂತ್ರಣದಲ್ಲಿಡುವಲ್ಲಿ ಶಿಕ್ಷಕರು ಮಗ್ನರಾಗಿದ್ದರು. ನನ್ನ ಮುಂದೆ ಇಬ್ಬರು ಪುಟ್ಟ ಗೆಳತಿಯರು ಮಾತಿನಲ್ಲಿ ತೊಡಗಿದ್ದರು. ಆ ಪುಟಾಣಿಗಳನ್ನು ನೋಡಿ ನನ್ನ ಬಾಲ್ಯದ ನೆನಪಾಗಿ ಸಂತೋಷದಿಂದ ಮನ ಹಿಗ್ಗಿತು ಹಾಗೆಯೇ ದುಃಖದಿಂದ ಕಣ್ಣು ತುಂಬಿತು.
     ನಮ್ಮದು ಮೈಸೂರಿನ ಟಿ. ನರಸೀಪುರದ ಬಳಿಯ ಒಂದು ಹಳ್ಳಿ. ನಮ್ಮ ಮನೆಯ ಪಕ್ಕದಲ್ಲಿದ್ದ ಹೇಮಾ ನನ್ನ ಆತ್ಮೀಯ ಗೆಳತಿ. ನಾವಿಬ್ಬರೂ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದೆವು. ನಮ್ಮೂರಿನಲ್ಲಿದ್ದದ್ದು ಏಕೋಪಾಧ್ಯಾಯ ಶಾಲೆ. ನಾವು 5ನೇ ತರಗತಿ ಓದುತ್ತಿದ್ದಾಗ ಒಂದು ದಿನ ಕಿರುಪರೀಕ್ಷೆ ಅಂಕಗಳನ್ನು ಕೊಟ್ಟರು. ಅತ್ಯಂತ ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೊಡೆದರು. ಅದರಲ್ಲಿ ಹೇಮಾಳೂ ಒಬ್ಬಳು. ಅಂದು ಹೇಮಾಗೆ ಜ್ವರವಿತ್ತು. ನೋವಿನಂದ ಮತ್ತು ಅವಮಾನದಿಂದ ಹೇಮಾ ಅಳುತ್ತಲೇ ಮನೆಗೆ ಬಂದಳು. ನಾನೆಷ್ಟೇ ಸಮಾಧಾನ ಪಡಿಸಿದರೂ ಅವಳು ಸುಮ್ಮನಾಗಲಿಲ್ಲ.
ಮಾರನೇ ದಿನ ಶಾಲೆಗೆ ಹೊಗಲು ತಯಾರಾಗಿ, ಹೇಮಾಳ ಮನೆಗೆ ಹೋದೆ. ಹೇಮಾಗೆ ಹುಷಾರಿಲ್ಲವೆಂದು, ಅವಳು ಶಾಲೆಗೆ ಬರುವುದಿಲ್ಲವೆಂದು ಅವಳ ತಾಯಿ ಹೇಳಿದರು. ಶಾಲೆಯಲ್ಲಿ ಎಲ್ಲರೂ ಶಿಕ್ಷಕರು ಹೊಡೆದದ್ದರಿಂದಲೇ ಹೇಮಾಗೆ ಹುಷಾರಿಲ್ಲವೆಂದು ಹೇಳಿದರು. ಅಂದಿನಿಂದ ಶಿಕ್ಷಕರೆಂದರೆ ಭಯಪಡುತ್ತಿದ್ದೆ.
     15 ದಿನಗಳಾದರೂ ಹೇಮಾ ಸುಧಾರಿಸಿಕೊಳ್ಳಲಿಲ್ಲ. ನನಗೆ ಹೇಮಾಳಿಲ್ಲದೆ ಒಂಟಿ ಎನಿಸುತ್ತಿತ್ತು.  ಇದಕ್ಕೆಲ್ಲಾ ಆ ಶಿಕ್ಷಕರೇ ಕಾರಣವೆಂದು ಅವರಿಗೆ ಮನದಲ್ಲಿ ಶಾಪ ಹಾಕುತ್ತಿದ್ದೆ.
ಒಂದು ದಿನ ಶಾಲೆಯಿಂದ ಮನೆಗೆ ಬಂದಾಗ ಹೇಮಾಳ ಮನೆಯ ಮುಂದೆ ತುಂಬಾ ಜನ ನೆರೆದಿದ್ದರು. ಏನಾಗಿದೆ ಎಂದು ಅರ್ಥವಾಗದೆ ಮನೆಯ ಒಳಗೆ ಹೋದೆ. ಹೇಮಾಳ ಅಮ್ಮ ಅಳುತಿದ್ದರು. ನಮ್ಮಮ್ಮ ಅಲ್ಲಿಯೇ ಇದ್ದರು. ಒಂದೆಡೆ ಹೇಮಾಳನ್ನು ಮಲಗಿಸಿದ್ದರು. ಹೂವಿನ ಹಾರಗಳನ್ನು ಹಾಕಿದ್ದರು. ನನಗೆ ವಿಚಿತ್ರವೆನಿಸಿತು. ಅಮ್ಮನ ಕೇಳಿದೆ. ಅಮ್ಮ ಹೇಮಾಳನ್ನು ದೇವರು ಕರೆದೊಯ್ದನೆಂದು ಹೇಳಿ ಅತ್ತುಬಿಟ್ಟರು. ನನಗೇನು ಅರ್ಥವಾಗಲಿಲ್ಲ. ಸ್ವಲ್ಪಹೊತ್ತಿನ ನಂತರ ಹೇಮಾಳನ್ನು ಹೊತ್ತು ಅವರ ತೋಟಕ್ಕೆ ಕರೆದೊಯ್ದರು. ಅಲ್ಲಿ ತೋಡಿದ್ದ ಗುಂಡಿಯೊಳಗೆ ಹೇಮಾಳನ್ನು ಮಲಗಿಸಿದರು ಮಣ್ಣು ಹಾಕಿದರು. ಅದನ್ನು ನೋಡಿ ನನಗೆ ಭಯವಾಗಿ ಅಮ್ಮನನ್ನು ಏಕೆ ಹಾಗೆಲ್ಲಾ ಮಾಡುತ್ತಿದ್ದಾರೆಂದು ಕೇಳಿದೆ. ಅಮ್ಮ ಏನೂ ಉತ್ತರಿಸದೆ ನನ್ನನ್ನು ಅಪ್ಪಿ ಕಣ್ಣೀರಿಟ್ಟರು. ಆ ವಯಸ್ಸಿನಲ್ಲಿ ಅದೇನೆಂದು ತಿಳಿಯದೆ ಹೋದರೂ ಇನ್ನು ಮುಂದೆ ಹೇಮಾ ನನ್ನ ಜೊತೆ ಇರುವುದಿಲ್ಲವೆಂದು ತಿಳಿದು ಜೋರಾಗಿ ಅತ್ತೆ.
     ಹೇಮಾಳ ಜ್ವರಕ್ಕೆ ಕಾರಣವಾಗಿದ್ದ ಶಿಕ್ಷಕರ ಬಗ್ಗೆ ನನಗೆ ತುಂಬಾ ಕೋಪ ಬಂದು, ನಾನು ಶಾಲೆಗೆ ಹೋಗಲು ನಿರಾಕರಿಸಿದೆ. ಒಂದು ವಾರದ ನಂತರ ಅಪ್ಪ ಎರಡೇಟು ಹಾಕಿ ಶಾಲೆಗೆ ಕಳಿಸಿದರು. ಬಲವಂತವಾಗಿ ಶಾಲೆಗೆ ಹೋದರು ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಹೀಗೆಯೆ ಪರೀಕ್ಷೆಗಳು ಮುಗಿದು ರಜೆ ಆರಂಭವಾಯಿತು. ಮತ್ತೆ ಶಾಲೆ ಶುರುವಾಯಿತು, ಆದರೂ ನಾನಿನ್ನೂ ಆ ಶಾಕ್ ನಿಂದ ಹೊರಬಂದಿರಲಿಲ್ಲ.
     ಶಾಲೆಯಲ್ಲಿದ್ದ ಹಳೆಯ ಮೇಷ್ಟ್ರು ಬದಲಿಗೆ ಹೊಸ ಮೇಷ್ಟು ಬಂದಿದ್ದರು. ಆದರೆ ನನಗೆ ಅವರೇನೋ ಬೇರೆಯವರಂತಲ್ಲ ಎನಿಸಿತ್ತು. ಶಾಲೆಯಲ್ಲಿ ಮಕ್ಕಳೊಂದಿಗೆ ಬೆರೆಯುತ್ತಿದ್ದರು. ಬೆತ್ತ ಮೇಜಿನ ಮೇಲಿರುತ್ತಿತ್ತೇ ಹೊರತು ಅವರೆಂದೂ ಅದನ್ನು ಹೊಡೆಯಲು ಬಳಸುತ್ತಿರಲಿಲ್ಲ. ನನ್ನ ವರ್ತನೆಯ ಬಗ್ಗೆ ನಮ್ಮ ತಂದೆತಾಯಿಯರೊಂದಿಗೆ ಮಾತನಾಡಿದ ಅವರು ನನ್ನನ್ನು ಬಹಳ ಆತ್ಮೀಯತೆಯಿಂದ ಮಾತನಾಡಲಾರಂಭಿಸಿದರು. ಕ್ರಮೇಣವಾಗಿ ನಾನು ಅವರೊಂದಿಗೆ ಬೆರೆಯಲಾರಂಭಿಸಿ, ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಲಾರಂಭಿಸಿದೆ.
     ಒಂದು ದಿನ ಅವರು ನನ್ನನ್ನು ಕರೆದು ಹೇಮಾಳ ಬಗ್ಗೆ ವಿಚಾರಿಸಿದರು. ಅದಕ್ಕುತ್ತರವಾಗಿ, ನಾನು ಶಿಕ್ಷಕರು ಹೊಡೆದದ್ದರಿಂದ ಹೇಮಾಳ ಜ್ವರ ಜಾಸ್ತಿಯಾಗಿ ಅವಳು ದೇವರ ಬಳಿ ಹೋದಳು ಎಂದು ಹೇಳಿ ಅಳತೊಡಗಿದೆ. ಅದಕ್ಕವರು ನನ್ನನ್ನು ಸಮಾಧಾನ ಮಾಡಿ ಹೇಮಾ ಸತ್ತದ್ದು ಶಿಕ್ಷಕರು ಹೊಡೆದದ್ದರಿಂದಲ್ಲ, ಅವಳಿಗೆ ಮಲೇರಿಯಾ ಬಂದಿತ್ತು. ಸರಿಯಾದ ಜೌಷಧಿ ಸಿಗದೆ ಅವಳು ತೀರಿಕೊಂಡಳು. ಅವಳನ್ನು ನೆನಪಿಸಿಕೊಂಡು ಕೊರಗುತ್ತಾ ಇರದೆ, ದೊಡ್ಡ ಡಾಕ್ಟರ್ ಆಗಿ ಇದೇ ಹಳ್ಳಿಯಲ್ಲಿ ಕೆಲಸ ಮಾಡು ಎಂದು ಹುರಿದುಂಬಿಸಿದರು. ಅಂದು ಅವರ ಮಾತಿನಿಂದ ಪಡೆದ ಸ್ಫೂರ್ತಿಯೇ ನನ್ನನ್ನು ಸಂಪೂರ್ಣವಾಗಿ ಬದಲಾಯಿಸಿತು.
ಅಂದ ಹಾಗೆ, ನನ್ನ ಹೆಸರನ್ನು ನಿಮಗೆ ತಿಳಿಸಲಿಲ್ಲ ಅಲ್ವಾ/ ನನ್ನ ಹೆಸರು ಸ್ಪೂರ್ತಿ. ನಾನು ಈಗ ವೈದ್ಯಕೀಯ ಪದವಿಯನ್ನು ಮುಗಿಸಿಕೊಂಡು ನಮ್ಮ ಹಳ್ಳಿಯಲ್ಲಿ ಕ್ಲಿನಿಕ್ ತೆಗೆಯಲು ಹೋಗುತ್ತಿದ್ದೇನೆ. ನನಗಾಗಿ ನನ್ನ ಅಪ್ಪ, ಅಮ್ಮ ಮತ್ತು ನೆಚ್ಚಿನ ಗುರುಗಳು ಕಾಯುತ್ತಿದ್ದಾರೆ. ಹೋಗಿ ಬರಲೇ?
-     ಲಕ್ಷ್ಮಿ.ವಿ       

1 ಕಾಮೆಂಟ್‌:

Rajiv Magal ಹೇಳಿದರು...

ಕಥೆ, ಇನ್ನೂ ಚುಟುಕಾಗಬಹುದಿತ್ತು. ಒಟ್ಟಿನಲ್ಲಿ ಅರ್ಥಪೂರ್ಣವಾಗಿದೆ.
ಮೇಷ್ಟ್ರು ಮಕ್ಕಳನ್ನು ತಿದ್ದುವ ಪರಿಪಾಠದಿ೦ದ ಒ೦ದೆರಡು ಏಟು ಕೊಡುವುದರಲ್ಲಿ ತಪ್ಪೇನಿಲ್ಲ ಎ೦ಬುದು ಒ೦ದು ವಾದ; ಒಪ್ಪದ ಪೋಷಕರ ಸ೦ಖ್ಯೆ ಇ೦ದು ಹೆಚ್ಚು. ಆದರೆ, ಇ೦ದು ಗುರು-ಶಿಷ್ಯರ ಸ೦ಬ೦ಧ ವಿಕೃತದತ್ತ ಸಾಗುತಿರುವುದು ಗ೦ಭೀರ ಸಮಸ್ಯೆಯಾಗಿದೆ. ರಾಜಸ್ಥಾನದ ಬಿಕನೇರ್ ನಲ್ಲಿ ಇತ್ತೀಚಿಗೆ ನಡೆದ ಘಟನೆ ಹೃದಯ ಕಲುಕುವ೦ತದ್ದು. ಬಹುಶ: ಶಾಲೆಗಳಲ್ಲಿ ಗುರು-ಶಿಷ್ಯರ ನಡುವಿನ ಸ೦ಭ೦ದ ಕೇವಲ ಅ೦ಕ ಗಳಿಸುವದಾಗಿರದೇ ಒಟ್ಟಾರೆ ಬೆಳವಣಿಗೆಗೆ ಪೂರಕವಾಗಿದ್ದರೆ ಸೂಕ್ತ. ಪೋಷಕರ ಪಾತ್ರ ಈ ನಿಟ್ಟಿನಲ್ಲಿ ಅಧಿಕವಾಗಿದೆ. ಶಾಲೆಗೆ Admission ಸಿಕ್ಕ ನ೦ತರ ಜವಾಬ್ದಾರಿ ತೀರೋದಿಲ್ಲ. ಪೋಷಕರ Follow-up ಇದ್ದರೆ ಗುರುಗಳ ವರ್ತನೆಗೆ ಕಡಿವಾಣ ಸಾಧ್ಯ. Opinions differ.