Pages

ಕವನ - ಎದ್ದೇಳು ಫೀನಿಕ್ಸ್ ಪಕ್ಷಿಯಂತೆ


ಗೆಳತಿ ಹೇಳಿದೆ ನೀನು
ವಿವಾಹವಾದ ಮೇಲೆ
ಬದಲಿಸಿದೆ ಹೆಸರನ್ನು
ಮರೆತೆ ಗೆಳತಿಯರನ್ನು
ದೂರಸರಿಸಿದೆ ತಾಯ್ತಂದೆಯರನ್ನು
ತೊರೆದೆ ಆಸೆಆಕಾಂಕ್ಷೆಗಳನ್ನು
ಕಳೆದುಕೊಂಡೆ ಅಸ್ತಿತ್ವವನ್ನೇ ಎಂದು.

ಕೇಳುತ್ತಿರುವೆ ನಾ ಗೆಳತಿ
ಅನ್ಯಮಾರ್ಗವಿರಲಿಲ್ಲವೇ ಸಖಿ?
ಅಂಗೀಕರಿಸಿದೆ ಏಕೆ ಬದಲಿಸಲು ಹೆಸರ?
ಒಪ್ಪಿದೆ ಏಕೆ ಮರೆಯಲು  ಗೆಳತಿಯರ?
ಅನುಮೋದಿಸಿದ್ದೇಕೆ ಸರಿಸಲು ಹೆತ್ತವರ?
ಸಮ್ಮತಿಸಿದ್ದೇಕೆ ತೊರೆಯಲು ಮನಸಿನಾಸೆಗಳ?
ಕಳೆದುಕೊಳ್ಳುತ್ತಿರುವಾಗ ಅಸ್ತಿತ್ವವನ್ನೇ
ಮೌನವಾಗಿ ತಳ್ಳಿದ್ದೇಕೆ ಭಾವನೆಗಳನ್ನೇ?

ಗೆಳತಿ ಕಾಲ ಮಿಂಚಿಲ್ಲವಿನ್ನೂ
ಗೋರಿಗೆ ಕಾಲಿಡುವ ಮುನ್ನ
ಮತ್ತೆ ಎದ್ದುನಿಲ್ಲುವ ಅವಕಾಶವಿದೆ
ಇನ್ನೂ ಸಾಧಿಸಲು ಸಮಯವಿದೆ
ಉಳಿಸಿಕೊಳ್ಳಲು ಹೆಸರ
ಆರಿಸಿಕೊಳ್ಳಲು ಗೆಳತಿಯರ
ನೋಡಿಕೊಳ್ಳಲು ತಾಯ್ತಂದೆಯರ
ಕೈಗೊಳ್ಳಲೊಂದು ವೃತ್ತಿಯ
ಕೈಬಿಡದಿರಲು ಆಸೆಯ
ಮರಸ್ಥಾಪಿಸಲು ಮರೆತ ಅಸ್ತಿತ್ವವ
ಬೆಳೆಸಿಕೊಳ್ಳಲು ನಮ್ಮ ವ್ಯಕ್ತಿತ್ವವ

ಎದ್ದೇಳು ಗೆಳತಿ ಫೀನಿಕ್ಸ್ ಪಕ್ಷಿಯಂತೆ!!
- ಸುಧಾ ಜಿ