Pages

ಅನುವಾದ - ಕೋಮುವಾದಿ ದಂಗೆ ಮತ್ತು ಅದರ ಪರಿಹಾರ


   
[ಭಗತ್ ಸಿಂಗ್ ರವರ ೧೯೨೦ರ ದಶಕದಲ್ಲಿ ಬರೆದ ಲೇಖನದ ಅನುವಾದವಿದು]
   ಭಾರತದ ಪರಿಸ್ಥಿತಿ ಇಂದು ಬಹಳ ದಯನೀಯವಾಗಿದೆ. ಒಂದು ಧರ್ಮದ ಅನುಯಾಯಿಗಳು ಇನ್ನೊಂದು ಧರ್ಮದ ಅನುಯಾಯಿಗಳ ಶತ್ರುಗಳಾಗಿದ್ದಾರೆ. ಈಗ ಒಂದು ಧರ್ಮಕ್ಕೆ ಸೇರಿದವರೆಂದರೆ ಇನ್ನೊಂದು ಧರ್ಮದ ಕಟ್ಟಾ ಶತ್ರುಗಳೆಂದೇ ಅರ್ಥೈಸಲಾಗುತ್ತಿದೆ. ಇದನ್ನು ನಂಬಲಾಗದಿದ್ದರೆ, ಲಾಹೊರ್‍ನಲ್ಲಿನ ಇತ್ತೀಚಿನ ದಂಗೆಗಳನ್ನು ನೋಡಿ. ಯಾವ ರೀತಿ ನಿರ್ದೋಷ ಮುಸಲ್ಮಾನರನ್ನು, ಹಿಂದೂಗಳು ಮತ್ತು ಸಿಖ್ಖರು ಕೊಂದಿದ್ದಾರೆ ಮತ್ತು ಯಾವ ರೀತಿ ನಿರ್ದೋಷ ಹಿಂದೂಗಳು ಮತ್ತು ಸಿಖ್ಖರನ್ನು ಮುಸಲ್ಮಾನರು ಕೊಂದಿದ್ದಾರೆ ಎಂದು. ಈ ಕೊಲೆಗಳು ನಡೆದದ್ದು ಒಬ್ಬ ವ್ಯಕ್ತಿ ದೋಷಿಯೆಂದಲ್ಲ ಬದಲಿಗೆ ಅವನು ಹಿಂದೂ, ಮುಸ್ಲಿಂ ಅಥವಾ ಸಿಖ್ ಎಂದು. ಒಬ್ಬ ವ್ಯಕ್ತಿ ಮುಸಲ್ಮಾನನಿಂದ ಕೊಲೆಯಾಗಬೇಕಾದರೆ ಅವನು ಹಿಂದೂ ಅಥವಾ ಸಿಖ್ ಆಗಿದ್ದರೆ ಸಾಕು, ಅದೇ ರೀತಿ ಒಬ್ಬ ವ್ಯಕ್ತಿ ಹಿಂದೂ ಅಥವಾ ಸಿಖ್‍ನಿಂದ ಕೊಲೆಯಾಗಬೇಕೆಂದರೆ ಅವನು ಮುಸ್ಲಿಂ ಎಂಬ ಅಂಶವೇ ಸಾಕು. ಈಗ ಸ್ಥಿತಿ ಹೇಗಿದೆ ಎಂದರೆ ಭಾರತಕ್ಕೆ ದೇವರೇ ಗತಿ!!
  ಇಂತಹ ಪರಿಸ್ಥಿತಿಯಲ್ಲಿ ಭಾರತದ ಭವಿಷ್ಯ ಬಹಳ ಅಂಧಕಾರಮಯವಾಗಿದೆ. ಈ ಧರ್ಮಗಳು ಭಾರತವನ್ನು ನಾಶಗೊಳಿಸುತ್ತಿವೆ. ಈ ಕೋಮುವಾದಿ ದಂಗೆಗಳಿಂದ ಭಾರತಕ್ಕೆ ಎಂದು ಮುಕ್ತಿ ಎಂಬ ಪ್ರಶ್ನೆಗೆ ಸಧ್ಯಕ್ಕಂತೂ ಉತ್ತರವಿಲ್ಲ. ಈ ದಂಗೆಗಳು ಇತರ ದೇಶಗಳ ಮುಂದೆ ಭಾರತದ ಗೌರವವನ್ನು ಮಣ್ಣುಪಾಲಾಗಿಸಿವೆ. ಈ ಅಂಧವಿಶ್ವಾಸದಲ್ಲಿ ಎಲ್ಲರೂ ಕೊಚ್ಚಿಹೋಗುತ್ತಿರುವ ಸಮಯದಲ್ಲಿ ಶಾಂತವಾಗಿರುವ ಹಿಂದೂ, ಮುಸ್ಲಿಂ, ಸಿಖ್‍ರ ಸಂಖ್ಯೆ ಬಹಳ ಕಡಿಮೆಯಿದೆ. ಉಳಿದ ಎಲ್ಲರೂ ಕೋಲು, ಕತ್ತಿ, ಚಾಕು, ಚೂರಿ ಹಿಡಿದುಕೊಂಡು ಇನ್ನೊಬ್ಬರ ತಲೆ ಕಡಿದು ತಾವೂ ಸಾಯುತ್ತಿದ್ದಾರೆ. ಉಳಿದವರಲ್ಲಿ ಕೆಲವರನ್ನು ಗಲ್ಲಿಗೆ ಹಾಕಲಾಗುತ್ತದೆ ಮತ್ತು ಇತರರನ್ನು ಜೈಲಿಗೆ ಹಾಕಲಾಗುತ್ತದೆ. ಇಷ್ಟು ರಕ್ತಪಾತವಾದ ಮೇಲೆ ಈ ‘ಧರ್ಮಜನರ’ ಮೇಲೆ ಬ್ರಿಟಿಷ್ ಸರ್ಕಾರದ ಲಾಠಿಪ್ರಹಾರವಾಗುತ್ತದೆ ಮತ್ತು ಅವರ ತಲೆಯಲ್ಲಿನ ಹುಳು ಹೊರಬರುತ್ತದೆ.
  ಎಲ್ಲಿ ನೋಡಿದರೂ, ಈ ದಂಗೆಗಳ ಹಿಂದೆ ಕೋಮುವಾದಿ ನಾಯಕರ ಮತ್ತು ಪತ್ರಿಕೆಗಳ ಕೈವಾಡ ಕಾಣಿಸುತ್ತದೆ. ಈ ಸಮಯದಲ್ಲಿ ಭಾರತದ ನಾಯಕರ ನಾಯಕತ್ವದ ಬಗ್ಗೆ ಮಾತನಾಡುವುದಕ್ಕಿಂತ ಮೌನವಾಗಿರುವುದೇ ಒಳಿತು. ಯಾವ ನಾಯಕರು ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಡಿಸುವ ಜವಾಬ್ದಾರಿಯನ್ನು ತಮ್ಮ ತಲೆಗಳ ಮೇಲೆ ಹೊತ್ತುಕೊಂಡಿದ್ದರೋ, ಯಾರು ಸ್ವರಾಜ್ಯ-ಸ್ವರಾಜ್ಯ ಎಂದು ಘೋಷಣೆ ಕೂಗುವುದರಲ್ಲಿ ಸುಸ್ತಾಗುತ್ತಿರಲ್ಲಿಲ್ಲವೋ, ಇಂದು ಆ ನಾಯಕರು ತಲೆ ಮರೆಸಿಕೊಂಡಿದ್ದಾರೆ ಇಲ್ಲವೇ ಇದೇ ಧರ್ಮಾಂಧತೆಯಲ್ಲಿ ತೇಲಿ ಹೋಗಿದ್ದಾರೆ. ತಲೆ ಮರೆಸಿಕೊಂಡು ಕುಳಿತುಕೊಂಡವರ ಸಂಖ್ಯೆಯೇನು ಕಡಿಮೆಯೇ? ಆದರೆ ಕೋಮುವಾದಿ ಗಲಭೆಯಲ್ಲಿ ಸೇರಿರುವ ನಾಯಕರನ್ನು ಹುಡುಕಿದರೆ ಸಾಕಷ್ಟು ಜನ ಕಾಣಸಿಗುತ್ತಾರೆ. ಮನಃಪೂರ್ವಕವಾಗಿ ಎಲ್ಲರ ಒಳಿತನ್ನು ಬಯಸುವ ನಾಕರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಜೊತೆಗೆ ಕೋಮುವಾದ ಎಷ್ಟರಮಟ್ಟಿಗೆ ಪ್ರಬಲವಾಗಿದೆ ಎಂದರೆ ಈ ನಾಯಕರಿಗೂ ಸಹ ಅದನ್ನು ನಿಲ್ಲಿಸಲಾಗುತ್ತಿಲ್ಲ. ಭಾರತದಲ್ಲಿ ನಾಯಕತ್ವ ದಿವಾಳಿಯಾಗಿದೆ ಎನಿಸುತ್ತಿದೆ. 
  ಕೋಮುವಾದಿ ದಂಗೆಯನ್ನು ಹೆಚ್ಚಿಸುವಲ್ಲಿ ವಿಶೇಷ ಪಾತ್ರ ವಹಿಸುತ್ತಿರುವ ಇನ್ನೊಂದು ‘ಸಜ್ಜನರ ಗುಂಪು’ ಎಂದರೆ ಪತ್ರಿಕೆಯವರು. ಒಂದು ಕಾಲದಲ್ಲಿ, ಪತ್ರಿಕಾ ವೃತ್ತಿಯನ್ನು ಬಹಳ ಮೇಲ್ಮಟ್ಟದ್ದೆಂದು ಪರಿಗಣಿಸಲಾಗಿತ್ತು. ಆದರೆ ಇಂದು ಅದು ಬಹಳ ಹೀನಾಯವಾಗಿಬಿಟ್ಟಿದೆ. ಈ ಜನ ಒಬ್ಬರಿನ್ನೊಬ್ಬರ ವಿರುದ್ಧ ದಪ್ಪದಪ್ಪ ಅಕ್ಷರಗಳಲ್ಲಿ ಶೀರ್ಷಿಕೆಯನ್ನು ಕೊಟ್ಟು ಜನರ ಭಾವನೆಗಳನ್ನು ಉದ್ರೇಕಿಸುತ್ತಾರೆ ಮತ್ತು ಪರಸ್ಪರ ರುಂಡಗಳನ್ನು ಚೆಂಡಾಡಿಸುತ್ತಾರೆ. ಇದು ಒಂದೆರಡು ಜಾಗಗಳಲ್ಲಲ್ಲ. ಎಷ್ಟು ಜಾಗಗಳಲ್ಲಿ ಇದೇ ಕಾರಣಕ್ಕೆ ದಂಗೆಗಳಾಗಿವೆ. ಕಾರಣ, ಸ್ಥಳೀಯ ಪತ್ರಿಕೆಗಳು ತುಂಬಾ ಉದ್ರೇಕಕಾರಿ ಲೇಖನಗಳನ್ನು ಬರೆದದ್ದು. ಇಂತಹ ದಿನಗಳಲ್ಲಿ ಹೃದಯ ಮತ್ತು ಮನಸ್ಸೆರಡನ್ನೂ ಶಾಂತವಾಗಿಟ್ಟುಕೊಳ್ಳಬಲ್ಲ ಪತ್ರಕರ್ತರು ಬಹಳ ಕಡಿಮೆ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ.
  ಪತ್ರಿಕೆಗಳ ಪ್ರಮುಖ ಕರ್ತವ್ಯ ಶಿಕ್ಷಣವನ್ನು ನೀಡುವುದು, ಜನತೆಯ ಸಂಕುಚಿತತೆಯನ್ನು ಹೋಗಲಾಡಿಸುವುದು, ಕೋಮುವಾದಿ ಭಾವನೆಗಳನ್ನು ನಿರ್ಮೂಲನೆಗೊಳಿಸುವುದು, ಪರಸ್ಪರರಲ್ಲಿ ಸಾಮರಸ್ಯ ಬೆಳೆಸುವುದು ಮತ್ತು ಭಾರತವನ್ನು ಐಕ್ಯ ರಾಷ್ಟ್ರವನ್ನಾಗಿ ಮಾಡುವುದು. ಆದರೆ ಅವರು ಅಜ್ಞಾನವನ್ನು ಹರಡುವುದು, ಸಂಕುಚಿತತೆಯನ್ನು ಬೆಳೆಸುವುದು, ಕೋಮುವಾದಿಗಳಾಗುವಂತೆ ಮಾಡುವುದು, ಹೊಡೆದಾಟ ಬಡಿದಾಟಗಳನ್ನು ಮಾಡಿಸುವುದು ಮತ್ತು ಭಾರತದ ಐಕ್ಯತೆಯನ್ನು ಹಾಳುಮಾಡುವುದು ತಮ್ಮ ಆದ್ಯ ಕರ್ತವ್ಯವೆಂದು ಭಾವಿಸಿದ್ದಾರೆ. ಇದರಿಂದಲೇ ಭಾರತದ ಈಗಿನ ಪರಿಸ್ಥಿತಿಯ ಬಗ್ಗೆ ಯೋಚಿಸುವಾಗ ಕಣ್ಣುಗಳಿಂದ ರಕ್ತ ಸುರಿಯುತ್ತದೆ ಮತ್ತು ಮನಸ್ಸಿನಲ್ಲಿ ಪ್ರಶ್ನೆ ಏಳುತ್ತದೆ - “ಭಾರತ ಏನಾಗುತ್ತಿದೆ?”
  ಅಸಹಕಾರ ಚಳುವಳಿಯ ದಿನಗಳಲ್ಲಿ ಉತ್ಸಾಹ ಚಿಮ್ಮುತ್ತಿದ್ದ ಜನತೆ ಈಗ ಈ ಸ್ಥಿತಿಯನ್ನು ಕಂಡು ಅಳುತ್ತಾರೆ. ಸ್ವಾತಂತ್ರ್ಯದ ಮಿಂಚು ಕಣ್ಮುಂದೆ ಸುಳಿಯುತ್ತಿದ್ದ ಆ ದಿನಗಳೆಲ್ಲಿ, ಸ್ವರಾಜ್ಯ ಕೇವಲ ಕನಸಾಗಿರುವ ಈ ದಿನಗಳೆಲ್ಲಿ? ಅತ್ಯಾಚಾರಿಗಳಿಗೆ ದಂಗೆಗಳಿಂದ ದೊರೆತಿರುವ ಮೂರನೆಯ ಲಾಭವಿದು. ಯಾವ ನೌಕರಶಾಹಿಯ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿತ್ತೊ ಅವರಿಂದು ತಮ್ಮ ಅಸ್ತಿತ್ವವನ್ನು  ಎಷ್ಟು ಬಲಿಷ್ಟಗೊಳಿಸಿಕೊಂಡಿದ್ದಾರೆಂದರೆ ಈಗ ಅವರನ್ನು ಅಲುಗಾಡಿಸುವುದು ಸಾಮಾನ್ಯವಲ್ಲ.
  ಈ ಸಾಂಪ್ರದಾಯಿಕ ದಂಗೆಯ ಕಾರಣಗಳನ್ನು ಹುಡುಕಿದರೆ ಆರ್ಥಿಕತೆಯೇ ಕಾರಣ ಎಂದು ತಿಳಿಯುತ್ತದೆ. ಅಸಹಕಾರ ಚಳುವಳಿಯ ದಿನಗಳಲ್ಲಿ ನಾಯಕರು ಮತ್ತು ಪತ್ರಕರ್ತರು ಅಸಂಖ್ಯಾತ ತ್ಯಾಗ-ಬಲಿದಾನಗಳನ್ನು ಮಾಡಿದರು. ಅವರ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿತು. ಅಸಹಕಾರ ಚಳುವಳಿ ಕುಂಠಿತವಾದ ನಂತರ ನಾಯಕರ ಮೇಲೆ ಅವಿಶ್ವಾಸ ಉಂಟಾಯಿತು. ಅವರೀಗ ಕೋಮುವಾದಿ ಸಿದ್ಧಾಂತದ ದಂಧೆಯಲ್ಲಿ ತೊಡಗಿದ್ದಾರೆ. ಪ್ರಪಂಚದಲ್ಲಿ ಯಾವುದೇ ಕೆಲಸ ನಡೆದರೂ ಅದರ ಹಿಂದೆ ಹೊಟ್ಟೆಪಾಡಿನ ಪ್ರಶ್ನೆ ಅಡಗಿರುತ್ತದೆ.
ಎಲ್ಲಾ ದಂಗೆಗಳ ಪರಿಹಾರ ಯಾವುದಾದರೂ ಇದ್ದರೆ ಅದು ಭಾರತದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದರಲ್ಲಿದೆ. ಈಗ ಸ್ಥಿತಿ ಎಷ್ಟು ಕೆಟ್ಟದ್ದಾಗಿದೆಯೆಂದರೆ, ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ನಿಂದಿಸಬಲ್ಲ, ಯಾರನ್ನೂ ಬೇಕಾದರೂ ಅಪಮಾನಗೊಳಿಸಬಲ್ಲ. ಹಸಿವು ಮತ್ತು ದುಃಖದಿಂದ ನೊಂದ ಮನುಷ್ಯ ಎಲ್ಲಾ ಸಿದ್ಧಾಂತಗಳನ್ನು ಬಿಡಬಲ್ಲ. ನಿಜ, ಸಾಯುತ್ತಾನೆ, ಏನೆಲ್ಲಾ ಮಾಡುತ್ತಾನೆ.     ಜನತೆ ಪರಸ್ಪರರ ನಡುವೆ ಹೊಡೆದಾಡದಂತೆ ನಿಲ್ಲಿಸಲು ವರ್ಗ ಚೇತನದ ಅವಶ್ಯಕತೆಯಿದೆ. ಬಡವರು ಶ್ರಮಿಕರು, ರೈತರಿಗೆ – ‘ನಿಮ್ಮ ಶತ್ರು ಸಾಮ್ರಾಜ್ಯಶಾಹಿ ಎಂದು, ಆದ್ದರಿಂದಲೇ ನೀವು ಅವರ ಚಾಲಾಕಿತನದಿಂದ ದೂರವುಳಿಯಬೇಕು ಮತ್ತು  ಅವರ ಕೈಯಲ್ಲಿ ಸಿಲುಕಿ ಏನನ್ನೂ ಮಾಡಬಾರದು’ ಎಂದು ಸ್ಪಷ್ಟವಾಗಿ ಅರ್ಥಮಾಡಿಸಬೇಕಿದೆ.
  ವಿಶ್ವದ ಎಲ್ಲಾ ಬಡವರು, ಅವರು ಯಾವುದೇ ಜಾತಿ, ವರ್ಣ, ಧರ್ಮ ಅಥವಾ ರಾಷ್ಟ್ರಕ್ಕೆ ಸೇರಿರಲಿ ಅವರ ಸ್ಥಾನ ಒಂದೇ. ಧರ್ಮ, ವರ್ಣ, ಕುಲ ಮತ್ತು ರಾಷ್ಟ್ರೀಯತೆಯನ್ನು ಅಥವಾ ದೇಶದ ಭೇದಭಾವವನ್ನು ದೂರಮಾಡಿ ಎಲ್ಲರೂ ಐಕ್ಯತೆಯಿಂದ ಸೇರಿದರೆ, ಸರ್ಕಾರದ ಅಧಿಕಾರವನ್ನು ನಿಮ್ಮ ಕೈಯಲ್ಲಿ ತೆಗೆದುಕೊಳ್ಳಲು ಪ್ರಯತ್ನಿಸುವುದರಲ್ಲಿ ನಿಮ್ಮ ಒಳಿತಿದೆ. ಈ ಪ್ರಯತ್ನದಿಂದ ನಿಮಗೇನೂ ನಷ್ಟವಾಗದು, ಇದರಿಂದ ಯಾವುದೋ ಒಂದು ದಿನ ನಿಮ್ಮ ಸಂಕೋಲೆಗಳು ಮುರಿಯುತ್ತವೆ ಮತ್ತು ನಿಮಗೆ ಆರ್ಥಿಕ ಸ್ವಾತಂತ್ರ್ಯ ದೊರೆಯುತ್ತದೆ.
  ಈ ದಂಗೆಗಳಲ್ಲಿ ಸಾಮಾನ್ಯವಾಗಿ ನಿರಾಶಾಜನಕವಾದ ಸುದ್ದಿಗಳನ್ನೇ ಕೇಳುತ್ತಿರುತ್ತೇವೆ. ಆದರೆ ಕಲ್ಕತ್ತೆಯಲ್ಲಿ ನಡೆದ ದಂಗೆಯಲ್ಲಿ ಒಂದು ವಿಷಯ ಸಂತೋಷಕರವಾಗಿದೆ. ಅದೇನೆಂದರೆ ದಂಗೆಯಲ್ಲಿ ಕಾರ್ಮಿಕರು ಪಾಲ್ಗೊಳ್ಳಲಿಲ್ಲ ಮತ್ತು ಗುದ್ದಾಟದಲ್ಲಿ ತೊಡಗಲಿಲ್ಲ, ಬದಲಿಗೆ ಎಲ್ಲಾ ಹಿಂದೂ - ಮುಸಲ್ಮಾನರು ಪ್ರೇಮದಿಂದ ಕಾರ್ಖಾನೆಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು ಮತ್ತು ದಂಗೆಗಳನ್ನು ನಿಲ್ಲಿಸಲು ಕೂಡ ಪ್ರಯತ್ನಿಸಿದ್ದಾರೆ. ಏಕೆಂದರೆ ಅವರಲ್ಲಿ ವರ್ಗಚೇತನವಿದೆ ಮತ್ತು ಅವರಿಗೆ ತಮ್ಮ ವರ್ಗ ಹಿತಾಸಕ್ತಿಯ ಅರಿವಿದೆ. ಕೋಮುವಾದಿ ದಂಗೆಯನ್ನು ನಿಲ್ಲಿಸಲು ವರ್ಗ ಚೇತನವೇ ಉತ್ತಮವಾದ ಮಾರ್ಗವಾಗಿದೆ. 
ಸಂತೋಷದ ವಿಚಾರವೆಂದರೆ, ಧರ್ಮದ ಕಾರಣದಿಂದಾಗಿ ಪರಸ್ಪರರ ವಿರುದ್ಧ ಹೊಡೆದಾಡುವುದನ್ನು ಕಲಿಯುತ್ತಿದ್ದ ಭಾರತದ ಯುವಜನ, ಅದರಿಂದ ಬೇಸತ್ತು ಅದರಿಂದ ದೂರವಾಗುತ್ತಿದ್ದಾರೆ. ಅವರಲ್ಲಿ ಎಷ್ಟು ವಿಶಾಲ ಮನೋಭಾವ ಮೂಡಿದೆಯೆಂದರೆ ಅವರು ಜನರನ್ನು ಹಿಂದೂ, ಮುಸ್ಲಿಂ ಅಥವಾ ಸಿಖ್ ಎಂದು ನೋಡದೆ ಮನುಷ್ಯರಂತೆ ಕಾಣುತ್ತಿದ್ದಾರೆ, ನಂತರ ಭಾರತೀಯರೆಂದು ಕಾಣುತ್ತಿದ್ದಾರೆ. ಭಾರತೀಯ ಯುವಜನತೆಯಲ್ಲಿ ಈ ವಿಚಾರ ಮೂಡಿದೆಯೆಂದರೆ, ಭಾರತದ ಭವಿಷ್ಯ ಉಜ್ವಲವಾಗಿದೆ ಎಂಬುದು ತಿಳಿದುಬರುತ್ತದೆ. ಭಾರತೀಯರು ಈ ದಂಗೆಗಳಿಂದ ಗಾಬರಿಯಾಗಬೇಕಿಲ್ಲ, ಬದಲಿಗೆ ದಂಗೆಯಾಗದಿರುವಂತಹ ಪರಿಸ್ಥಿತಿಯನ್ನು ನಿರ್ಮಿಸಲು ಎಲ್ಲರೂ ತಯಾರಾಗಬೇಕಾಗಿದೆ.
1914-15ರಲ್ಲಿ ಹುತಾತ್ಮರು ಧರ್ಮವನ್ನು ರಾಜಕೀಯದಿಂದ ದೂರ ಮಾಡಿದರು. ಧರ್ಮ ವ್ಯಕ್ತಿಗತ ವಿಷಯವೆಂದು, ಅದರಲ್ಲಿ ಇನ್ನೊಬ್ಬರ ಮಧ್ಯಪ್ರವೇಶ ಅನವಶ್ಯಕ ಎಂದು ಅವರು ನಂಬಿದ್ದರು. ಧರ್ಮ ರಾಜಕೀಯದಲ್ಲಿ ಮಧ್ಯ ಪ್ರವೇಶಿಸಬಾರದು, ಏಕೆಂದರೆ ಅದು ಎಲ್ಲರೂ ಒಟ್ಟಾಗಿ, ಒಂದೆಡೆ ಕೆಲಸ ಮಾಡಲು ಅವಕಾಶ ಕೊಡುವುದಿಲ್ಲ. ಆದ್ದರಿಂದಲೇ ಗದರ್ ಪಕ್ಷ ಎಂತಹ ಚಳುವಳಿಯನ್ನು ಕಟ್ಟಿತೆಂದರೆ, ಸಿಖ್ಖರು ತಾಮುಂದು ನಾ ಮುಂದೆಂದು ಗಲ್ಲಿಗೇರಿದರು. ಹಿಂದೂ ಮುಸಲ್ಮಾನರೇನೂ ಹಿಂದೆ ಉಳಿಯಲಿಲ್ಲ.
ಈ ಸಮಯದಲ್ಲಿ ಕೆಲವು ಭಾರತೀಯ ನಾಯಕರು ಮೈದಾನಕ್ಕಿಳಿದಿದ್ದಾರೆ. ಅವರು ಧರ್ಮವನ್ನು ರಾಜಕೀಯದಿಂದ ಬೇರ್ಪಡಿಸಬೇಕೆಂದು ಇಚ್ಛಿಸಿದ್ದಾರೆ. ಜಗಳವನ್ನು ನಿಲ್ಲಿಸಲು ಇದೂ ಸಹ ಒಂದು ಉತ್ತಮ ಮಾರ್ಗವಾಗಿದೆ. ನಾವು ಅದನ್ನು ಸಂಪೂರ್ಣ ಸಮರ್ಥಿಸುತ್ತಿದ್ದೇವೆ. ಧರ್ಮವನ್ನು ರಾಜಕೀಯದಿಂದ ಬೇರ್ಪಡಿಸಿದರೆ ನಾವೆಲ್ಲರೂ ಒಟ್ಟಾಗಲು ಸಾಧ್ಯವಾಗುತ್ತದೆ. ಧರ್ಮದ   ವಿಷಯದಲ್ಲಿ ಬೇಕಿದ್ದರೆ ಬೇರೆ ಬೇರೆ ಇರೋಣ. ನಮ್ಮ ಅಭಿಪ್ರಾಯವೆಂದರೆ, ಭಾರತದ ಬಗ್ಗೆ ನಿಜವಾದ ಕಾಳಜಿ ಇರುವುದಾದರೆ, ನಾವು ಹೇಳಿರುವ ಪರಿಹಾರದ ಬಗ್ಗೆ ತಕ್ಷಣವೇ ವಿಚಾರ ಮಾಡಿದರೆ ಭಾರತದ ಮೇಲೆ ಈಗ ಆಗುತ್ತಿರುವ ಆತ್ಮಾಘಾತದಿಂದ ನಾವು ಮುಕ್ತರಾಗಬಹುದು. 
  -  (ಅನುವಾದ - ಸುಧಾ ಜಿ)

ಕಾಮೆಂಟ್‌ಗಳಿಲ್ಲ: