Pages

ಕವನ - ಉರುಳಾಗಬಯಸುತ್ತೇನೆ



ಎಳೆ ವಯಸಿನ ಒಳ ಮನಸಿನ 
ಹಸುಗನಸಿನ ಎಳಸು ಬಳಸಿ
ಬಾಯಾರದಿದ್ದರೂ ನೀರು ಕುಡಿಸಿದಾಗ
ಅದು ದಾಹವಾಗಿ, ಬೆಂಕಿಯಾಗಿ ಕಡೆಗೆ
ಕಾಡ್ಗಿಚ್ಚಾಗಿ ಹಬ್ಬಿದಾಗಲೂ ನಾನು ಸುಡಲಿಲ್ಲ
ಕಡಲಿನಲ್ಲೇ ತೇಲಿದೆ, ಮುಳುಗಲಿಲ್ಲ
ಆಗಸದಲ್ಲಿ ಹಾರುತ್ತಾ 
ರೆಕ್ಕೆ ಮುರಿದುಕೊಂಡು ಬಿದ್ದದ್ದೇನೋ ನಿಜ
ಆದರೆ ಮನಸ್ಸು ಮುರಿಯಲಿಲ್ಲ
ಚಂಡಮಾರುತ ಬಂದು ಅಲೆಗಳೆದ್ದಾಗ ಕೊಚ್ಚಿ ಹೋಗಲಿಲ್ಲ
ಆದರೂ ನೀವು ಹೆಸರಿಟ್ಟು ಕರೆದಿರಿ
*ಕೋಮಲೆ*

ನನಗೀಗ ಹೆಸರು ಬೇಕಿಲ್ಲ
ಹೊಸೆದು ಬಿಡಿ 
ನೀವು ನೇಯುತ್ತಿರುವ ಹಗ್ಗದಲ್ಲಿ
ಕೈಲಾಗದವರ ಕೊರಲಾಗದಿದ್ದರೂ 
ಉರುಳಾಗಬಯಸುತ್ತೇನೆ
ತೋಳಬಲದ ಮೇಲೆ  ತುಲನೆ ಮಾಡಿಸಿಕೊಂಡು
ತುಲಾಭಾರಕ್ಕೆ ನಿಂತವರ

   - ಸುಚೇತಾ ಪೈ

ಕಾಮೆಂಟ್‌ಗಳಿಲ್ಲ: