“ಎಂದಿನಂತೆ ತ್ರಿವಿಕ್ರಮ ಬೇತಾಳನನ್ನು ವಶಪಡಿಸಿಕೊಳ್ಳಲು ಹೊರಟ. ಮರದ ಮೇಲೆ ನೇತಾಡುತ್ತಿದ್ದ ಬೇತಾಳನನ್ನು ಹೆಗಲಿಗೇರಿಸಿ ನಾಲ್ಕಾರು ಹೆಜ್ಜೆ ಹಾಕುತ್ತಿದ್ದ ಹಾಗೆ ಬೇತಾಳ ಕೇಳಿತು - “ನಮ್ಮಿಬ್ಬರ ಒಪ್ಪಂದ ನೆನಪಿದೆ ತಾನೇ? ಈಗ ನಾನೊಂದು ಕಥೆ ಹೇಳುವೆ, ನಂತರ ಪ್ರಶ್ನೆ ಕೇಳುವೆ. ಸರಿಯಾಗಿ ಗಮನವಿಟ್ಟು ಕೇಳು. ಉತ್ತರ ಗೊತ್ತಿದ್ದೂ ಹೇಳದಿದ್ದರೆ ನಿನ್ನ ತಲೆ ಸಾವಿರ ಹೋಳಾಗುತ್ತದೆ. ಉತ್ತರ ಹೇಳಿದರೆ ನಾನು ಮತ್ತೆ ಮರಕ್ಕೆ ನೇತಾಡುವೆ. ಒಂದು ವೇಳೆ ಉತ್ತರ ಗೊತ್ತಿಲ್ಲದೆ ಮೌನವಾಗಿದ್ದರೆ ಆಗ ನಾನು ನಿನ್ನ ವಶವಾಗುವೆ.” ತಲೆಯಾಡಿಸಿದ ತ್ರಿವಿಕ್ರಮ. ಮಾತನಾಡಬಾರದಲ್ಲ!
“ಒಂದಾನೊಂದು ಊರಲ್ಲಿ ಒಬ್ಬ ರಾಜ ಇದ್ದ.” ಕ್ಷಣ ಕಾಲ ಮೌನ ವಹಿಸಿತು ಬೇತಾಳ.
ತ್ರಿವಿಕ್ರಮ ಪ್ರಶ್ನಾರ್ಥಕವಾಗಿ ನೋಡಿದ.
“ಈ ಕಥೆ ಬೇಡ ಬಿಡು. ಅದೇ ರಾಜರ ಕಥೆ ಕೇಳಿ ಕೇಳಿ ನಿನಗೂ ಬೇಸರ, ನನಗೂ ಬೇಜಾರು. ಇತ್ತೀಚಿನ ಹೊಸದೊಂದು ಕಥೆ ಹೇಳುವೆ.”
ಉತ್ಸುಕನಾಗಿ ಬೇತಾಳನತ್ತ ನೋಡಿ - “ದೇವರೇ ಈ ಕಥೆಗಾದರೂ ನನಗೆ ಉತ್ತರ ಗೊತ್ತಿರದಿರಲಿ” ಎಂದುಕೊಂಡ.
“ನಿನ್ನ ಮನಸ್ಸಿನಲ್ಲಿ ಏನಾಗುತ್ತಿದೆ ನನಗೆ ಗೊತ್ತು ಬಿಡು. ಈಗ ಕಥೆಯನ್ನು ಗಮನವಿಟ್ಟು ಕೇಳು.”
“ಒಂದೂರು. ಆ ಊರು ಹೇಗೆ ಅಂತೀಯ. ಬೇಡ ಬಿಡು ಅದನ್ನು ಹೇಳ್ತಾ ಕೂತ್ಕೊಂಡ್ರೆ ಆಮೇಲೆ ಕಥೆ ಮುಂದುವರಿಯೋದೆ ಇಲ್ಲ, ಅಷ್ಟಿದೆ. ಆ ಊರಲ್ಲಿ ಒಂದು ಕಾಲೇಜು. ಅದರ ಬಗ್ಗೆ ನಿನಗೆ ಹೇಳ್ಲೇ ಬೇಕು. ಕಾಲೇಜಂದ್ರೆ ಹೇಗಿರುತ್ತೆ ಗೊತ್ತಾ. ನಿಂಗೆ ಗೊತ್ತಾಗುವುದಿಲ್ಲ. ನೀನು ಯಾವತ್ತಾದ್ರೂ ಕಾಲೇಜಿಗೆ ಹೋಗಿದ್ದೀಯಾ? ಇಲ್ವಲ್ಲ! ಕಾಲೇಜಂದ್ರೆ ದೊಡ್ಡ ಮಕ್ಕಳು ಪಾಠ ಕಲಿಯೋ ಸ್ಥಳ - ನಮ್ಮ ಗುರುಕುಲ ಇದ್ದ ಹಾಗೆ. ಆದ್ರೆ ವ್ಯತ್ಯಾಸ ಇಷ್ಟೆ. ಭಾರಿ ದೊಡ್ಡ ಕಟ್ಟಡಗಳು, ದೊಡ್ಡ ಮೈದಾನ, ಪುಸ್ತಕಗಳು, ಮೇಷ್ಟ್ರು, ಈಗ ಮೇಡಮ್ಮಂದಿರೂ ಇದ್ದಾರೆ - ಎಲ್ಲಾ ಇರ್ಬೇಕು. ಸಾವಿರಾರು ಜನ ಪಾಠ ಕಲಿತಾರೆ. ನಾನೊಮ್ಮೆ ಪಟ್ಟಣದ ಒಂದು ಕಾಲೇಜಿಗೆ ಹೋಗಿದ್ದೆ. ನಿನ್ನ ಅರಮನೆ ಅದರ ಮುಂದೆ ಚಿಕ್ಕದೇ. ಜೊತೆಗೆ ಗುಂಡಿ ಒತ್ತಿದ್ರೆ ಗಾಳಿ ಬರುತ್ತೆ. ನಿಂಬೆರಸದಂಥದ್ದು ಅದೇನೊ ಅಂತಾರೆ - ಹಾ! ಪೆಪಸಿ ಬರುತ್ತೆ. ಅದೇನು ಬೆಳಕು! ನೋಡೋಕೆ ಎರಡು ಕಣ್ಣು ಸಾಲದು.”
“ “ಈ ಕಾಲೇಜೂ ಸಹ ಒಂದು ಕಾಲದಲ್ಲಿ ಸುಮಾರಾಗಿ, ಸುಮಾರಾಗಿ ಅಂದ್ರೇನು, ಚೆನ್ನಾಗಿಯೇ ಇತ್ತಂತೆ. ಕ್ರಮೇಣವಾಗಿ ಹೀಗಾಯ್ತಂತೆ. ಅಯ್ಯೊ, ನಿನಗೆ ಅರ್ಥ ಆಗ್ಲಿಲ್ಲ ಅಲ್ವ. ಬಾ ಅಲ್ಲಿಗೇ ಕರೆದುಕೊಂಡು ಹೋಗ್ತೀನಿ."
ಸಂತೋಷದಿಂದ ತಲೆಯಾಡಿಸಿದ ತ್ರಿವಿಕ್ರಮ. ಸ್ವಲ್ಪ ಹೊತ್ತಾದ ನಂತರ, ಬೇತಾಳ "ನೋಡು, ಇದೇ ಕಾಲೇಜು’ ಎಂದಿತು.
ತ್ರಿವಿಕ್ರಮನ ಮುಖದ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಕಂಡ ಬೇತಾಳ ಹೇಳಿದ "ಓಹೋ, ಪಾಳುಬಿದ್ದ ಮನೆ, ಕುದುರೆ ಲಾಯಗಳನ್ನು ತೋರಿಸಿ ಕಾಲೇಜು ಎನ್ನುತ್ತಿದ್ದೇನೆ ಅಂದುಕೊಳ್ಳುತ್ತಿರುವೆಯಾ? ಇದೇ ಕಾಲೇಜು. ಯಾವ ರಾಜರ ದಾಳಿಗೂ ಸಿಲುಕಿ ಹಾಳಾಗಿರುವುದಲ್ಲ. ಬಿಸಿಲು-ಮಳೆಯ ಶಾಂತ ಸ್ವರೂಪವನ್ನೂ ಸಹಿಸದ ಬಹಳ ಸೂಕ್ಷ್ಮ ಸ್ವಭಾವದ ವಸ್ತುಗಳಿಂದ ತಯಾರು ಮಾಡಲಾಗಿತ್ತು ಎನಿಸುತ್ತದೆ. ಇದಕ್ಕೇನು ಬಹಳ ವಯಸ್ಸಾಗಿಲ್ಲ. ಒಂದು 20-25 ವರ್ಷ ಆಗಿರಬೇಕಷ್ಟೇ. ಇದನ್ನು ಕಟ್ಟಿದ ಮಹಾನುಭಾವನಿಗೆ ಕೈ ಮುಗಿಯಬೇಕು.”
ಆ ಜಾಗದಲ್ಲಿ ಇರುವುದು ಬೇಡ, ಬೇರೆಲ್ಲಾದರೂ ಹೋಗೋಣ ಎನ್ನುವಂತೆ ತ್ರಿವಿಕ್ರಮ ಬೇತಾಳನಿಗೆ ಸಂಜ್ಞೆಯ ಮೂಲಕ ಹೇಳಿದ. ‘ಸರಿ’ ಎಂದು ಬೇತಾಳ. ತ್ರಿವಿಕ್ರಮ ಬೇತಾಳನನ್ನು ಹೊತ್ತುಕೊಂಡು ದೂರದ ಜಾಗದಲ್ಲಿ ಮರಗಳ ತಂಪಿನಲ್ಲಿ ನಡೆಯತೊಡಗಿದ.
“ಇರಲಿ ಬಿಡು. ಕಥೆಯ ಮುಖ್ಯಾಂಶ ಇದಲ್ಲ. ಈಗ ಇಲ್ಲಿರುವುದೇ ಕಾಲೇಜು. 40-50 ಜನ ಪಾಠ ಹೇಳಿಕೊಡ್ತಾರೆ. ಒಂದೆರಡು ಸಾವಿರ ಜನ ಪಾಠ ಕಲಿಯಲು ಬರ್ತಾರೆ. ಇವರನ್ನೆಲ್ಲಾ ನೋಡ್ಕೊಳ್ಳೋಕೆ ಒಬ್ಬರು. ಈ ಕಾಲೇಜಿನ ವಿಶೇಷ ಗುಣ ಏನಪ್ಪಾ ಅಂದ್ರೆ ಯಾರಿಗೂ, ಯಾವುದಕ್ಕೂ ಸಮಯವನ್ನು ನಿಗದಿ ಮಾಡಿಲ್ಲ. ಇದು ಹೀಗೆ ಆಗಬೇಕು ಎನ್ನುವ ಕಡ್ಡಾಯವೇನೂ ಇಲ್ಲ. ಮೇಷ್ಟ್ರುಗಳು ಪಾಠ ಮಾಡಿದ್ರೆ ಮಾಡಬಹುದು, ಬೇಡ ಅಂದ್ರೆ ಬಿಡಬಹುದು. ವಿದ್ಯಾರ್ಥಿಗಳೂ ಅಷ್ಟೆ. ಇಷ್ಟ ಇದ್ರೆ ಕ್ಲಾಸಿಗೆ ಬರಬಹುದು ಕಷ್ಟ ಆದ್ರೆ ತಿರ್ಕೊಂಡು ಇರಬಹುದು.”
“ಕಳೆದ ಬಾರಿ ನಾನು ಈ ಕಡೆ ಹೋಗಬೇಕಾದರೆ ಇಲ್ಲೊಂದು ಕಾರ್ಯಕ್ರಮ ನಡೀತು. ಆಗ ನಂಗೆ ಹಲವಾರು ಪ್ರಶ್ನೆ ಬಂದ್ವು. ನೀನು ಬಾಳಾ ಬುದ್ಧಿವಂತ. ನೀನು ಉತ್ತರ ಹೇಳೇ ಹೇಳ್ತೀಯಾ. ಆಗ ನಂಗೆ ಉತ್ತರವೂ ಸಿಗುತ್ತೆ, ನಾನು ನಿನ್ನ ಕೈಲೂ ಸಿಗೋದಿಲ್ಲ ಅಂತ ಇದನ್ನು ಹೇಳ್ತಾ ಇದ್ದೀನಿ” ಎಂದಿತು ಬೇತಾಳ.
ತ್ರಿವಿಕ್ರಮನ ಮುಖ ಬಾಡಿ ಹೋಯಿತು-ಈ ಬಾರಿಯೂ ಬೇತಾಳ ಸಿಗುವುದಿಲ್ಲವಲ್ಲ ಎಂದು. ಆದರೆ ಮರಳಿ ಪ್ರಯತ್ನವ ಮಾಡು ಎಂಬಂತೆ “ಮುಂದೇನು” ಹೇಳು ಎಂಬಂತೆ ಬೇತಾಳನತ್ತ ನೋಡಿದ.
“ಈಗ ನಿಮ್ಮೂರ ಜಾತ್ರೆ ಮಾಡ್ಬೇಕು ಅಂದ್ರೆ ಏನ್ಮಾಡ್ತೀರಾ? ಇವತ್ತು ಅಂದ್ರೆ ಇವತ್ತೇ ಎಲ್ಲಾ ತಯಾರಿ ಮಾಡ್ಕೋತೀರಾ?” ತ್ರಿವಿಕ್ರಮ ತಲೆಯಲ್ಲಾಡಿಸಿದ.
“ಒಂದು ವಾರಾನಾದ್ರೂ ಬೇಕಲ್ವಾ?” ಹೌದೆಂದು ತಲೆಯಾಡಿಸಿದ.
“ಆದರೆ, ಇಲ್ಲಿ ಕಥೇನೆ ಬೇರೆ. ಕಾರ್ಯಕ್ರಮದ ಬೆಳಿಗ್ಗೆ ಎದ್ದು ಎಲ್ಲಾ ತಯಾರಿ. ಇವರೆಲ್ಲಾ ಪ್ರಚಂಡರಪ್ಪಾ. ರಾತ್ರೋರಾತ್ರಿ ಎಲ್ಲಾ ಮಂಗಮಾಯ ಮಾಡ್ಬಿಡ್ತಾರೆ. ಚಿಟಿಕೆ ಹೊಡೆಯುವಷ್ಟು ಸಮಯ ಸಾಕು. ಬೆಳಿಗ್ಗೆ ತಳಿರು-ತೋರಣ ಕಟ್ಟಿದ್ದಾಯ್ತು. ಚಪ್ಪರ ಏರಿಸಿದ್ದಾಯ್ತು. ಕಿವಿ ಕಿತ್ತುಹೋಗುವಷ್ಟು ಕರ್ಕಶ ಹಾಡು ಬರುತ್ತಿತ್ತು. ಎಲ್ಲರೂ ಚೆನ್ನಾಗಿ ಅಲಂಕಾರ ಮಾಡಿಕೊಂಡು ಬೂದಿ ಗಂಧ ಹಚ್ಚಿಕೊಂಡು ಬಂದಿದ್ದರು. ಅಲ್ಲೊಂದು ಕಡೆ ‘ಪ್ರತಿಭಾ ದಿನಾಚರಣೆ’ಎಂದು ಬರೆಸಲಾಗಿತ್ತು.
“ಕಾಲೇಜಿನ ಮಕ್ಕಳಲ್ಲಿ ಇರೊ ಪ್ರತಿಭೆಗೆ ಸನ್ಮಾನ ಅಂತೆ. ಅವರ ಪ್ರತಿಭೆ ತೋರೋಕೆ ಮುಂಚೆ ನಾಲ್ಕಾರು ಜನ ಗಣ್ಯರು ಮಾತನಾಡಬೇಕಲ್ಲ. ಗಣ್ಯರೆಲ್ಲಾ ಎಂದಿನಂತೆ ತಡವಾಗಿ ಬಂದರು. ಎಂತಹ ಧೀಮಂತರು. . .. . ಅಲ್ಲ ಎಂಥಾ ಖದೀಮರು ಬಂದಿದ್ದರು ಅಂತೀಯಾ. ಒಬ್ಬ ಕಾಸು ಕೊಟ್ಟು, ಹೆಂಡ ಕೊಟ್ಟು ಜನಗಳ ಕೈಕಾಲು ಹಿಡಿದು ಓಟು ಗಿಟ್ಟಿಸಿ ಮಂತ್ರಿಯಾದವ. ಅಧಿಕಾರ ಸಿಕ್ಕ ಸ್ವಲ್ಪೇ ದಿನಗಳಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಮಾಡ್ಕೊಂಡ ಅಂತ ಸುದ್ದಿ.”
“ಇನ್ನೊಬ್ಬ, ವಿದ್ಯೆಯ ದಾನ ಅನ್ನೋ ಹೆಸರಿನಲ್ಲಿ ಕಾಲೇಜು ತೆಗೆದು ಕಾಸಿಗೆ ವಿದ್ಯೆ ಮಾರಾಟ ಮಾಡೋ ಖದೀಮ. ಮತ್ತೊಬ್ಬ ಬಡ್ಡಿಗೆ ಕಾಸು ಕೊಟ್ಟು ಜನಗಳ ರಕ್ತ ಹೀರೋದಲ್ಲದೆ, ದಿನಾ ಹೆಂಡ ಕುಡಿದು ಬಂದು ಮನೆಯಲ್ಲಿ ಜಗಳವಾಡಿಕೊಂಡು ರಾತ್ರಿಯೆಲ್ಲ, ಇಡೀ ಬೀದಿಗೆ ನಿದ್ರೆ ಕೊಡದಿರುವವನು. ಇವರಲ್ಲಿ ಒಬ್ರಿಗಾದ್ರೂ ವಿದ್ಯೆ ಇರ್ಲಿಲ್ಲ ಅಥವಾ ವಿದ್ಯೆಗೂ ಅವ್ರಿಗೂ ಏನೂ ಸಂಬಂಧ ಇರಲಿಲ್ಲ. ಕಾರ್ಯಕ್ರಮ ಶುರು ಆಯ್ತು. ಪಾಪ, ವಿದ್ಯಾರ್ಥಿಗಳು ಈಗಾಗಲೇ ಒಂದೂವರೆ ಘಂಟೆ ಕಾದು ಸುಸ್ತಾಗಿದ್ದರು. ಆದ್ರೆ ಏನು ಮಾಡಲು ಸಾಧ್ಯ. ‘ಅತಿಥಿ ದೇವೋಭವ.’
“ಸ್ವಾಗತ ಭಾಷಣವನ್ನು ಮಾಡಲು ಬಂದ ಆಸಾಮಿ ಮೈಕ್ ಹಿಡಿದು “ವೇದಿಕೆಯ ಮೇಲೆ ಪವಡಿಸಿರುವ ಮಹನೀಯರೇ” ಎಂದ. ನಾನು, ಇದ್ಯಾರಪ್ಪಾ ವೇದಿಕೆಯ ಮೇಲೆ ಪವಡಿಸಿರುವವರು ಎಂದು ನೋಡಿದೆ. ಎಲ್ಲರೂ ಕುಳಿತೇ ಇದ್ದರು. ತೂಕಡಿಸುತ್ತಿದ್ದಾರೇನೋ ಎಂದು ನೋಡಿದೆ, ಆದರೆ ಅದೇನು ಸದನವೇ? ಯಾರಪ್ಪ ಈ ಮಹಾನುಭಾವ ಎಂದು ಪಕ್ಕದಲ್ಲಿರುವವರನ್ನು ಕೇಳಿದರೆ ಮೇಷ್ಟ್ರು ಎಂದ. ಪ್ರತಿಯೊಬ್ಬರನ್ನೂ ಹಾಡಿ ಹೊಗಳಿ ಅಟ್ಟಕ್ಕೇರಿಸಿ ಅದರ ಜೊತೆಜೊತೆಗೆ ತನ್ನನ್ನೂ ಹೊಗಳಿಕೊಂಡು 2-3 ನಿಮಿಷದಲ್ಲಿ ಮುಗಿಸಬೇಕಾಗಿದ್ದ ಭಾಷಣವನ್ನು 25 ನಿಮಿಷ ಮಾಡಿದ. ತಲೆ ಮೇಲೆ ಸೂರ್ಯನ ಧಾಳಿ, ಕಿವಿಗಳಿಗೆ ಈತನ ವಾಗ್ಝರಿ! ಪಾಪ, ವಿದ್ಯಾರ್ಥಿಗಳು ಬಾಯ್ಮುಚ್ಚಿ, ಕಿವಿಮುಚ್ಚಿ ಕುಳಿತಿದ್ದರು. ಕಣ್ಮುಚ್ಚಲಂತೂ ಸಾಧ್ಯವಿಲ್ಲ ಎದುರಿಗೆ ಮೇಷ್ಟ್ರಿಗೆ ಕಾಣಿಸುತ್ತಲ್ಲಾ? ಕೊನೆಗೂ ಭಾಷಣ ಮುಗೀತು.”
“ಈಗ ಇನ್ನೊಬ್ಬರು ಎದ್ದುನಿಂತರು. ಆಹಾ ಅದೇನು ಮಾತಿನ ಧಾಟಿ, ತ್ರಿವಿಕ್ರಮ! ನಿನ್ನ ಆಸ್ಥಾನದಲ್ಲೂ ಸಹ ಅಂತಹ ಹೊಗಳುಭಟರಿಲ್ಲ. ನೋಡು ಸ್ವಲ್ಪ ಹಣ ಜಾಸ್ತಿ ಕೊಟ್ರೆ ನಿನ್ನ ಜೊತೆ ಕರ್ಕೊಂಡು ಹೋಗಬಹುದು. ಗೂಬೆಯನ್ನೂ ಸಹ ಸುಂದರವೆಂದೂ, ಕತ್ತೆಯ ಸ್ವರವನ್ನು ಅದ್ಭುತವೆಂದೂ ಹೊಗಳುವ ಚಾಕಚಕ್ಯತೆಯಿದೆ. ಅವನು ಏನಂದ ಗೊತ್ತೇ? ವಿದ್ಯೆ ಮಾರಾಟ ಮಾಡುವವನನ್ನು ವಿದ್ಯೆಯ ಉದ್ಧಾರಕ ಎಂದೂ, ಹೆಂಡ ಕುಡುಕನನ್ನು ಸಮಾಜ ಸೇವಕ ಎಂದೂ, ಎಲ್ಲಕ್ಕೂ ಮಿಗಿಲಾಗಿ, ಮಂತ್ರಿಗಳನ್ನು ತೋರಿಸಿ- ಇವರು ನಮ್ಮ ಕಾಲೇಜಿನಲ್ಲೇ ಓದಿ ಶ್ರಮ ಪಟ್ಟು (ಆ ಮಂತ್ರಿ ಕಾಪಿ ಹೊಡೆದು ಪಾಸಾಗಿದ್ದು, ಈ ಮೇಷ್ಟ್ರೆ ಅಂತೆ ಪಾಸ್ ಮಾಡಿಸಿದ್ದು - ಪಕ್ಕದಲ್ಲಿ ಮಾತನಾಡಿಕೊಳ್ಳುತ್ತಿದ್ದರು.) ಮುಂದೆ ಬಂದಿದ್ದಾರೆ. ಎಲ್ಲರೂ ಇವರನ್ನೇ ಆದರ್ಶವಾಗಿಟ್ಟುಕೊಳ್ಳಬೇಕು, ಎಂದರು. ಚಪ್ಪಾಳೆ ಸದ್ದು ಕೇಳಿಸಿತು. ಎಲ್ಲಿಂದ ಎಂದು ನೋಡಿದರೆ ಮೇಷ್ಟ್ರುಗಳಿಂದ. ಇಲ್ಲೀವರೆಗೂ ಅದ್ಯಾರೋ ಗಾಂಧೀಜಿ, ನೇತಾಜಿ, ವಿವೇಕಾನಂದ ಅಂತಿದ್ರು. ಈಗ. . . ಕಾಲ ಬದಲಾಗಿದೆ.”
“ನಂತರ ಮಾತನಾಡಲು ಆ ಮಂತ್ರಿಗಳು ಎದ್ದು ನಿಂತ್ರು. ಯಾರೋ ಬರೆದುಕೊಟ್ಟಿದ್ದ ಹಾಳೆಗಳನ್ನು ಕೈಯಲ್ಲಿ ಹಿಡಿದು ಅಚ್ಚುಕಟ್ಟಾಗಿ ಓದಿದ್ರು. ಆದ್ರೆ ಅದೇನು ವಿಚಿತ್ರ ಅಂತೀನಿ ಓದಿದ್ನೆ ಎರಡೆರಡು ಸಾರಿ ಓದಿದ್ರು. ಎಲ್ಲರಿಗೂ ಪ್ರಶ್ನೆ. ಅವರ ಸೆಕ್ರೆಟರಿ ಅಂತೆ- ತಲೆ ಚಚ್ಕೊಂಡು ಅಯ್ಯೊ ಕಾರ್ಬನ್ ಹಾಳೆ ತೆಗೀಲೆ ಇಲ್ವಲ್ಲಾ ಅಂತ ಬೇಜಾರು ಮಾಡ್ಕೊಂಡ. ಪಾಪ ಆ ಮಂತ್ರಿಗೆ ಗೊತ್ತಾಗ್ಲೇ ಇಲ್ಲ. ಬೇರೆಯವರಿಗೆ ಗೊತ್ತಾದ್ರೂ ಏನ್ ಮಾಡೋಕಾಗುತ್ತೆ. ಕೆಲವು ಹುಡುಗ್ರು ಸೀಟಿ ಹೊಡೆದ್ರು. ಮಂತ್ರಿಗಳು ಅನ್ಕೊಂಡ್ರು ಓಹ್! ನನ್ನ ಭಾಷಣ ಬಹಳ ಚೆನ್ನಾಗಿದೆ ಅಂತ, ಚೆನ್ನಾಗಿ ಕೊರೆದ್ರು.”
ಆಮೇಲೆ ಅದೇ ಆ ವಿದ್ಯೆಯ ಉದ್ಧಾರಕ ಎದ್ದು ನಿಂತ್ಕೊಂಡು “ವಿದ್ಯೆ ಬಹಳ ಮುಖ್ಯ. ಮನುಷ್ಯನಿಗೆ ವಿದ್ಯೆ ಬೇಕು ಅದನ್ನು ಹೇಗಾದ್ರೂ ಮಾಡಿ ಪಡೀಬೇಕು. ಅದಕ್ಕೆ ದುಡ್ಡಿಲ್ಲ ಅನ್ಕೊಂಡು ಓದದೇ ಇರ್ಬೇಡಿ. ನನ್ನ ಕಾಲೇಜಿಗೆ ಬನ್ನಿ ನಾನು ಸೀಟು ಕೊಡ್ತೀನಿ. ದುಡ್ಡೇನೂ ಜಾಸ್ತಿ ಆಗಲ್ಲ. ಸರ್ಕಾರ ಸಾಲ ಬೇರೆ ಕೊಡುತ್ತೆ. ಇಲ್ಲದೇ ಇದ್ರೆ ಇವರು (ಸಮಾಜ ಸೇವಕರನ್ನು ತೋರಿಸಿ) ಕೊಡ್ತಾರೆ. ನೀವು ಭಾರತದ ಭವಿಷ್ಯ, ಓದಲೇಬೇಕು ಎಂದ. ಅದರ ಜೊತೆಗೆ ವಿದ್ಯೆಯ ಪವಿತ್ರತೆ ಬಗ್ಗೆ ಮಾತನಾಡಿದ. ಯಾರೂ ಅದನ್ನು ಮಾರಾಟ ಮಾಡಬಾರದು ಅಂದ. ಆದ್ರೆ ನಾನು ಶಿಕ್ಷಣಕ್ಕೆ ಅಳಿಲು ಸೇವೆ ಸಲ್ಲಿಸುತ್ತಾ ಇದ್ದೇನೆ. ನಾನು ವಿದ್ಯೆ ಮಾರಾಟ ಮಾಡ್ತಾ ಇಲ್ಲ, ಕೆಲವೊಂದು ಅವಶ್ಯಕತೆಗಳಿಗೆ ಹಣ ತಗೊಳ್ತೀನಿ. ನಿಮ್ಮ ನಂತರ ಬರುವವರು ಚೆನ್ನಾಗಿ ಇರಬೇಕಲ್ಲ” ಎಂದ. ಪಕ್ಕದಲ್ಲಿರುವವರು ಯಾರೋ “ಈ ಮನುಷ್ಯ ಕಾಲೇಜು ತೆಗೆದಾಗ ಕಾಲಲ್ಲಿ ಒಂದು ಹವಾಯ್ ಚಪ್ಪಲಿ ಇತ್ತು, ಈಗ್ ನೋಡು ಹೇಗಿದ್ದಾನೆ? ವಿದ್ಯೆ ಮಾರಾಟ ಮಾಡಲಿಲ್ವಂತೆ” ಎಂದ.
ಆ ಸಮಾಜ ಸೇವಕ ಎದ್ದು ನಿಂತುಕೊಂಡ. . . .ಅಲ್ಲ ತೂರಾಡಲಾರಂಭಿಸಿದ. ರಾತ್ರಿಯದು ಇಳಿದಿರಲಿಲ್ಲವೋ ಅಥವಾ ಬೆಳಿಗ್ಗೆ ಸೇವನೆಯೋ ಕಾಣೆ. ಹೇಗೊ ಅವನ ಭಂಟರು ಹಿಡಿದು ನಿಲ್ಲಿಸಿದರು. ಭಾಷಣ ಮಾಡಲು ಇರುವ ಆ ಮರದ ಪೆಟ್ಟಿಗೆಯ ಹಿಂದೆ ನಿಲ್ಲಿಸಿದರು. ಶುರು ಮಾಡಿದ. . . . “ಅಣ್ಣಂದಿರೇ, ಅಕ್ಕಂದಿರೆ. .. .” ಸುಮಾರು ಕಾಲ ಹೇಳಿದ. ನಂತರ ಅವನ ಸಮಾಜ ಸೇವೆಯನ್ನು ವಿವರಿಸಿದ. ಆ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹಳ ಸಹಾಯ ಮಾಡಿದ್ದೇನೆ ಎಂದ. ಏನಂತೆ ಗೊತ್ತೆ?. . . . ಪರೀಕ್ಷೆಯನ್ನೇ ಬರೆಯದೆ ಪಾಸಾಗೋದಂತೆ... ಪಕ್ಕದಲ್ಲಿರೋರು ಹೇಳ್ತಿದ್ರು. ಹೀಗೆ ಸುತ್ತಿ ಹೊಡೆದಾ. . . ಹೊಡೆದಾ. . . ಎಲ್ರೂ ಸುಸ್ತಾಗಿದ್ರು. ವಿದ್ಯಾರ್ಥಿಗಳ ಕಥೆ ಕೇಳಲೇಬೇಡ. ಒಳಗೆ ಕುಳಿತಿರೋಕು ಸಾಧ್ಯ ಇಲ್ಲ. ಹೊರಗಡೇ ಹೋಗೋಕು ಸಾಧ್ಯ ಇಲ್ಲಾ. ಗೇಟು ಬೀಗ ಹಾಕಿತ್ತು-ಜೈಲಿನ ತರಹ! ಕೊನೆಗೂ ಮುಗಿಸಿ ಚೇರ್ ಮೇಲೆ ಕುಳಿತುಕೊಳ್ಳುವ ಬದಲು ನೆಲದ ಮೇಲೆ ಬಿದ್ದೇ ಬಿಟ್ಟ. ಅವನನ್ನು ಎಬ್ಬಿಸಿ ಕೂರಿಸಿ - ಅದೇ ಆ ಹೊಗಳು ಭಟ್ಟ ಬಂದು ಪಾಪ ಅವರಿಗೆ ಹುಷಾರಿಲ್ಲ ಅಂದ್ರು. ಆ ಹುಷಾರಿಲ್ಲದ ಗುಟ್ಟು ಎಲ್ರಿಗೂ ಗೊತ್ತಾಗಿತ್ತು!
ನಂತರ ಬಹುಮಾನ ವಿತರಣೆ. ಮೈಕ್ ಹಿಡಿದ ಹುಡುಗ ಈಗ ಬಹುಮಾನ ಸ್ಪರ್ಧೆ ಕಾರ್ಯಕ್ರಮ ಅಂದ. ಅವನಿಗೆ ತರಬೇತಿ ಕೊಟ್ಟಿದ್ದು ಕನ್ನಡ ಮೇಷ್ಟ್ರಂತೆ. ಹೆಸರುಗಳನ್ನು ಓದುತ್ತಿದ್ದರೆ, ಹುಡುಗ್ರು ಹೋಗಿ ಬಹುಮಾನ ತೊಗೊಂಡು ಬರ್ತಿದ್ರು. ಅದೇನ್ ಬಹುಮಾನ ಅಂತೀಯಾ 2-3 ಕಾಸಿನ ತಗಡು. ನೀನಾದ್ರೆ ಹೇಗ್ ಕೊಡ್ತಿದ್ದೆ ಅಲ್ವಾ? ಯಾರೋ ಗೊಣಗಾಡುತ್ತಿದ್ದರು. “ಅಯ್ಯೊ ನಮ್ಮ ಕಾಸನ್ನೆಲ್ಲಾ ಆ ಮೇಷ್ಟ್ರುಗಳೇ ಹೊಡ್ಕೊಂಡು ಬಿಟ್ಟವ್ರೆ ಕಣೊ. 50 ರೂಪಾಯಿ ಬಹುಮಾನ ಅಂದ್ರು ಇದು 5 ರೂಪಾಯಿ ಆಗೋಲ್ವಲ್ಲೊ” ಅಂತಾ.
ಕೊನೆಗೆ ವಂದನಾರ್ಪಣೆ. ವೇದಿಕೆಯ ಮೇಲಿದ್ದ ಗಣ್ಯರೆಲ್ಲರೂ ಘನಂದಾರಿ ಕೆಲಸ ಮಾಡಿದ್ದಾರೆಂದು ಅವರಿಗೆ ಮಾಲಾರ್ಪಣೆ. ಆ ಮೇಷ್ಟ್ರು-ಇತಿಹಾಸದ ಮೇಷ್ಟ್ರಂತೆ - ಕರ್ನಾಟಕ ಆರಂಭಿಸಿದವರಿಂದ- ವಿದ್ಯಾರ್ಥಿಗಳೆಲ್ಲರಿಗೂ ವಂದನಾರ್ಪಣೆ ಅರ್ಪಿಸಿದರು. ಆಹಾ! ಅದೇನು ಕೊರೆತ. ಆತನ ಪಾಠ ಕೇಳುವ ವಿದ್ಯಾರ್ಥಿಗಳೇ ಧನ್ಯರು. ಪಕ್ಕದಲ್ಲಿ ಕುಳಿತ ವಿದ್ಯಾರ್ಥಿಗಳು “ಅಲ್ವೊ ಕ್ಲಾಸಿನಲ್ಲಿ ಕೊರೀತಾನೆ ಅಂತಾ ನಾವ್ ಕ್ಲಾಸಿಗೆ ಹೋಗಲ್ಲ ಅದಕ್ಕೆ ಈಗ ಅವಕಾಶ ಸಿಕ್ತು ಅಂತಾ ಕೊರೀತಾ ಇದಾನೆ ನೋಡು” ಅಂದರು.
“ವೇದಿಕೆ ಮೇಲಿದ್ದ ಗಣ್ಯರೆಲ್ಲಾ ಕೆಳಗೆ ಇಳಿದು ಕುರ್ಚಿಯ ಮೇಲೆ ಕುಳಿತರು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು. ಒಂದ್ ನಾಕ್ ಜನ ವೇದಿಕೆ ಮೇಲೆ ಬಂದ್ರು. ಅದೇನ್ ವೇಷ ಅಂತೀಯಾ, ನಿನ್ನ ರಾಜ್ಯದಲ್ಲಿ ಭಿಕ್ಷುಕರೂ ಸಹ ಅದಕ್ಕಿಂತ ಚೆನ್ನಾಗಿ ಬಟ್ಟೆ ಹಾಕ್ತಾರೆ. ಪಾಪ ಬಡ ಮಕ್ಕಳಿರಬಹುದು ಅಂದ್ಕೊಂಡೆ. ಅಲ್ವಂತಪ್ಪಾ, ಎಲ್ಲಾ ಶ್ರೀಮಂತರ ಮಕ್ಕಳಂತೆ ಅದು ಹೊಸಾ ರೀತಿ ದಿರಿಸಂತೆ. ಇದ್ದಕ್ಕಿದ್ದಂತೆ ಅದೇನೋ ಜೋರಾಗಿ ಶಬ್ದ ಆಯ್ತು, ನಾನಂದ್ಕೊಂಡೆ ಬಾಂಬ್ ಇರ್ಬೇಕು ಅಂತ. ಇತ್ತೀಚೆಗೆ ಎಲ್ಲಾ ಕಡೆ ಅದೇ ಅಲ್ವಾ. ಏನಪ್ಪಾ ಅನ್ಕೊಳ್ಳುವಷ್ಟರಲ್ಲಿ ಆ ನಾಕ್ ಜನ ಹುಡುಗ್ರು ಮೈ ಮೇಲೆ ದೆವ್ವ ಬಂದೋರ್ ತರ ಕುಣಿದು - ಕುಪ್ಪಳಿಸೋಕೆ ಶುರು ಮಾಡಿದ್ರು. ಎಲ್ರೂ ಬಿಟ್ಟ ಬಾಯಿ ಬಿಟ್ಟವರಂತೆ ನೋಡ್ತಾ ಕೂತಿದ್ರು. ನಾನು ಪಾಪ ಏನಾಯ್ತೊ ಅನ್ಕೊಂಡ್ರೆ ಅದು ನೃತ್ಯ ಅಂತೆ. ಹೆಂಗಿತ್ತು ಗೊತ್ತಾ? ನಿಮ್ಮೂರ ಶನಿ ಗುಡೀಲಿ ಪೂಜಾರಿ ಮೇಲೆ ಶನಿ ದೇವ್ರು ಬಂದಾಗ ಆಡ್ತಾನಲ್ಲ ಹಂಗೇ ಇತ್ತು.”
ಅದಾದ್ ಮೇಲೆ ಇನ್ನೊಬ್ಬ ಬಂದ. ಹೆಂಗಿದ್ದ ಅಂತೀಯಾ? ಒಂದು ಕಣ್ಣಿಗೆ ಗಾಜು, ಒಂದು ಕಿವಿಗೆ ಓಲೆ, ಶರ್ಟು ಹರಿದೋಗಿತ್ತು, ಪ್ಯಾಂಟ್ ಅರ್ಧಾನೆ ಇತ್ತು. ಒಂದು ಜೋಳಿಗೆ ಬೇರೆ. ನಾನೆಲ್ಲೊ “ಇಷ್ಟು ಜನರನ್ ನೋಡಿ ಭಿಕ್ಷೆ ಬೇಡೋಕೆ ಬಂದವ್ನೆ” ಅಂದ್ಕೊಂಡೆ. ಆದ್ರೆ ಬಂದವ್ನು ಭಿಕ್ಷೆ ಕೇಳಿಲ್ಲ. ಮೇಲಕ್ ಹಾರಿ ಕೆಳಕ್ ಬಿದ್ದ. “ಓಹೋ, ಪಾಪ ಮೂರ್ಛೆ ರೋಗಾನೂ ಇದೆ” ಅನ್ಕೊಂಡೆ. ಆದ್ರೆ ಹುಡುಗ್ರು ಸೀಟಿ ಹೊಡೀತಿದ್ರೂ, ಗಣ್ಯರು, ಮೇಷ್ಟ್ರು ಕೂಡ ಕೈಕಾಲು ಕುಣಿಸಿ ತಾಳ ಹಾಕ್ತಿದ್ರು. ಪಾಪ ಕೆಲವರೇ ಕೆಲವರು ಬಡಪಾಯಿಗಳು ಅಲ್ಲಿ ಕೂರ್ಲಿಕ್ಕೂ ಆಗದೆ ಹೊರಗೆ ಬರ್ಲಿಕ್ಕೂ ಆಗ್ದೆ ಒದ್ದಾಡುತ್ತಿದ್ದರು.
“ಇದೇನಪ್ಪಾ ಹುಚ್ಚರ ಸಂತೆಗೆ ಬಂದು ಸೇರಿಬಿಟ್ಟೆ, ಹೊರಡೋಣ” ಅಂತಾ ಎದ್ದು ನಿಂತೆ. ಅಷ್ಟರಲ್ಲಿ ಒಬ್ಬ ಹೆಣ್ಣು ಮಗಳು ವೇದಿಕೆ ಮೇಲೆ ಬಂದ್ಲು. ಮೈ ತುಂಬ ಬಟ್ಟೆ ಹಾಕಿದ್ಲು. “ಭರತನಾಟ್ಯ ಆಡ್ತಾಳೆ” ಅಂದ್ರು. ನೋಡೇ ಬಿಡೋಣ ಅಂತಾ ಕುಳಿತೆ. ಎರಡು ನಿಮಿಷ ಆಡಿದ್ದು ಚೆನ್ನಾಗೇ ಇತ್ತು- ಇದ್ದಕ್ಕಿದ್ದಂತೆ ಪಾಪ ಬಟ್ಟೆ ಉದುರೋಗಿ ಬಿಡೋದೆ. ನಾನು ಕೃಷ್ಣ ಪರಮಾತ್ಮನಂತೆ ಅವಳ ರಕ್ಷಣೆಗೆ ಹೊರಟೆ. ಆದ್ರೆ ಆ ಹುಡ್ಗಿ ದ್ರೌಪದಿಯಂತೆ ಅಳ್ತಾ ಇರ್ಲಿಲ್ಲ, ನೋಡಿದ್ರೆ ಹಾಗೇ ಕುಣಿಯಲು ಶುರುಮಾಡಿದ್ಲು. ಮೈಮೇಲೇನೋ ಇನ್ನೊಂದು ಬಟ್ಟೆ ಇತ್ತು- ಸೊಳ್ಳೆ ಪರದೆ ತರಹ. ನಂಗೇ ನಾಚ್ಕೆ ಆಗೋಯ್ತು ಎದ್ದು ಹೊರಗೆ ಬಂದ್ಬಿಟ್ಟೆ. ನನ್ನ ಜೊತೆ ಆ ಕೆಲವು ಬಡಪಾಯಿಗಳು ಸಿಕ್ಕಿದ್ದೇ ಅವಕಾಶ ಅಂತಾ ಬಂದು ಬಿಟ್ರು. ಇನ್ನುಳಿದವರೆಲ್ಲಾ ಹೆಂಡ ಕುಡಿದವರ ತರಹ ಅದರೊಳಗೆ ಮುಳುಗಿ ಹೋಗಿದ್ರು.
ಇದೂ ಕಥೆ. ಈಗ ನನ್ನ ಪ್ರಶ್ನೆ - ಈ ಮೇಷ್ಟ್ರುಗಳಿಂದ ವಿದ್ಯಾರ್ಥಿಗಳು ಉದ್ಧಾರವಾಗುತ್ತಾರಾ? ಈ ವಿದ್ಯಾರ್ಥಿಗಳಿಂದ ದೇಶ ಉದ್ಧಾರವಾಗುತ್ತಾ? ಈ ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದೂ ಉತ್ತರ ಹೇಳದಿದ್ದರೆ ನಿನ್ನ ತಲೆ ಸಾವಿರ ಹೋಳಾಗುತ್ತದೆ” ಎಂದಿತು ಬೇತಾಳ. ತ್ರಿವಿಕ್ರಮ ಮೌನವಾಗಿಯೇ ಇದ್ದ. ಯೋಚಿಸುತ್ತಿದ್ದಾನೆ ಎಂದು ಭಾವಿಸಿತು ಬೇತಾಳ.
ಆದರೆ ತ್ರಿವಿಕ್ರಮ ಬಾಯೇ ಬಿಡಲಿಲ್ಲ. ಬೇತಾಳ ಆಶ್ಚರ್ಯಚಕಿತನಾಗಿ ನೋಡಿತು. ತ್ರಿವಿಕ್ರಮ ಗೊತ್ತಿಲ್ಲವೆನ್ನುವಂತೆ ತಲೆಯಲ್ಲಾಡಿಸಿದ.
“ಆಯ್ತು, ನೀನೇ ಗೆದ್ದೆ. ಈಗ ನಾನು ನಿನ್ನ ದಾಸ, ಆದರೆ ತ್ರಿವಿಕ್ರಮ ನನ್ನದೊಂದು ಪ್ರಶ್ನೆ ಇದೆ” ಎಂದಿತು ಬೇತಾಳ. “ಕೇಳು” ಎಂದ ತ್ರಿವಿಕ್ರಮ.
“ಅಲ್ಲಯ್ಯಾ ಎಂಥೆಂಥ ಕಷ್ಟದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೀಯಾ. ಈ ಪ್ರಶ್ನೆಗಳಿಗ್ಯಾಕಯ್ಯಾ ಉತ್ತರ ಸಿಗಲಿಲ್ಲ?” ತ್ರಿವಿಕ್ರಮ ನುಡಿದ, “ಅಲ್ಲಯ್ಯಾ! ನನ್ನ ರಾಜ್ಯದಲ್ಲಿ ಎಷ್ಟೆಷ್ಟೋ ಸಮಸ್ಯೆಗಳನ್ನು ಪರಿಹರಿಸಿದ್ದೇನೆ. ಇಂಥ ಪ್ರಶ್ನೆ ಯಾವತ್ತೂ ಬಂದಿರಲಿಲ್ಲಯ್ಯಾ.”
“ಅಲ್ಲಾ ತ್ರಿವಿಕ್ರಮ ಸುಲಭವಾಗಿ “ಇಲ್ಲಾ” ಎಂದು ಹೇಳಬಹುದಿತ್ತಲ್ಲಾ?””
“ಅದೇಗಯ್ಯಾ ಸಾಧ್ಯ? ಎಲ್ಲಾ ಮೇಷ್ಟ್ರು, ಎಲ್ಲಾ ವಿದ್ಯಾರ್ಥಿಗಳು ಅದೇ ರೀತಿ ಅಂದ್ರೆ ಇಲ್ಲಾ ಎನ್ನಬಹುದಿತ್ತು. ಆದ್ರೆ ಕೆಲವರು ಬೇರೆ ರೀತಿ ಅಂತಾ ನೀನೇ ಹೇಳಿದಲ್ಲಯ್ಯಾ?”
“ಆದ್ರೆ ಒಬ್ಬೊಬ್ರೆ ಏನ್ ಮಾಡೋಕಾಗುತ್ತೆ?”
“ಇಡೀ ಕೋಣೆಯನ್ನು ತುಂಬ್ಕೊಂಡಿರೊ ಕತ್ತಲನ್ನು ಒಂದು ಸಣ್ಣ ದೀಪ ಹೊಡೆದೋಡಿಸುತ್ತೆ, ಅಲ್ವೇನಯ್ಯಾ?”
“ಛೆ, ನಾನು ಹೋಗಿ ಹೋಗಿ ನಿನ್ನ ಕೈಲಿ ಸಿಕ್ಕಿಹಾಕಿಕೊಂಡೆ. ನಂಗೆ ಗೊತ್ತಿಲ್ಲದ ಉತ್ತರ ನೀನು ಹೇಳ್ತೀಯಾ ಅಂದ್ಕೊಂಡಿದ್ದೆ. ನನ್ನ ಹಳ್ಳ ನಾನೇ ತೋಡಿಕೊಂಡೆ.”
“ನನಗಂತೂ ಬಹಳ ಸಂತೋಷವಾಗ್ತಾ ಇದೆ. ಮೊದ್ಲೆ ಇಂಥ ಕಥೆ ಹೇಳಿದ್ರೆ ಚೆನ್ನಾಗಿರ್ತಿತ್ತು. ಸರಿ ಈಗ ನಡಿ ಹೋಗೋಣ” ಎಂದು ಬೇತಾಳನ ಮೇಲೆ ಹತ್ತಿ ಕುಳಿತ ತ್ರಿವಿಕ್ರಮ.
“ಎಲ್ಲಿಗೆ ಮಹಾಸ್ವಾಮಿ?” ಕೇಳಿತು ಬೇತಾಳ.”
“ಅದೇ ಆ ಕಾಲೇಜಿಗೆ, ಆ ದೊಡ್ಡ ಮನುಷ್ಯರಿಗೆಲ್ಲಾ ಒಂದು ನಮಸ್ಕಾರ ಹೇಳಿ ಬರುವೆ. ಅವರಿಂದ ತಾನೇ ನೀನು ನನಗೆ ಸಿಕ್ಕಿದ್ದು.” ಮರುಮಾತನಾಡದೆ ಬೇತಾಳ ಆ ಕಡೆ ತ್ರಿವಿಕ್ರಮನನ್ನು ಹೊತ್ತು ಸಾಗಿದ.
- ಸುಧಾ ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ