(ತನ್ನ ಅಜ್ಜಿ ಗಂಗಮ್ಮನಿಗೆ ಮೊಮ್ಮಗಳು ನಮನ)
ನನ್ನಜ್ಜಿ ಬಲು ಖಿಲಾಡಿ
ಎಂಬತ್ತರಲ್ಲೂ ಎತ್ತಿನ ಗಾಡಿ
ಒಂದೆಡೆ ಸುಮ್ಮನೆ ಕೂರಳು
ಕಾಲುಗಳಾ ಅವು ಗಾಲಿಗಳು
ಈಗಲೂ ಗಟ್ಟಿ ಹಲ್ಲಿನಕಟ್ಟು
ಇರಲೇಬೇಕು ಚಕ್ಲಿ ನಿಪ್ಪಟ್ಟು
ಕೆಲಸವಿರದಿರೆ ಟಿವಿ ಹಚ್ಚು
ತೆಲಗು ಮಹೇಶನೇ ಬಲು ಮೆಚ್ಚು
ಸೆಲ್ಫೋನ್ ಲ್ಯಾಪ್ಟಾಪ್ ಯಾವುದೆ ಇಕ್ಕು
ಒಲ್ಲೆ ಎನ್ನಳು ಭಲೆ ಭಲೆ ಟೆಕ್ಕು
ಈಗಲೂ ಸೂಜಿಗೆ ದಾರ ಹಚ್ಚುವಳು
ಬಿಂದಿಗೆ ನೀರನು ಹೊತ್ತು ತರುವಳು
ಮಾಡದಿರೆಂದರೆ ಮುಖ ಹನುಮಂತ
ಮಾಡುವುದೊಂದೆ ನಿತ್ಯದ ಮಂತ್ರ
ಏನೆ ಅಂದರೂ ನಗುವೇ ಉತ್ತರ
ಕೆಡುಮಾತುಗಳು ಸುಳಿಯದು ಹತ್ತಿರ
ಬಯಕೆಯೊ ಅವಳದು ಮನೆಯಲಿ ಸಂತಸ
ನಾವುಗಳೆಂದರೆ ಪಂಚಾಮೃತ ರಸ
ಕಷ್ಟಗಳಿಂದಲೇ ಇಲ್ಲಿಗೆ ಪಯಣ
ನಿತ್ಯವಿತ್ತು ಕಣ್ಣೀರ ಆಭರಣ
ಎಲ್ಲವ ಮರೆತು ಎಲ್ಲರ ಕ್ಷಮಿಸಿ
ಒಳಿತನೆ ಕೋರ್ವಳು ದೈವಕೆ ನಮಿಸಿ
ನೋಡೆನು ಅಂಥ ಅಪರೂಪದ ಅಜ್ಜಿಗೆ
ಬೆರಗಾಗಿ ನಮಿಸುವೆ ಆ ಅಕಾಶಗಂಗೆಗೆ
- ಉಷಾಗಂಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ