Pages

ವ್ಯಕ್ತಿ ಪರಿಚಯ - ಆರ್. ಕಲ್ಯಾಣಮ್ಮ


ಮೂಲತಃ ತಮಿಳಿನವರಾದ ಕಲ್ಯಾಣಮ್ಮನವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದಾರೆ.  ಇವರು ಸಾಹಿತ್ಯ ಸೇವೆಯೊಂದಿಗೆ ಸಮಾಜ ಸೇವೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸಿದರು.
ಮಧ್ಯಮ ವರ್ಗದ ಕುಟುಂಬದಲ್ಲಿ ರಾಮಸ್ವಾಮಿ  ಅಯ್ಯಂಗಾರ್  ಮತ್ತು ಜಾನಕಮ್ಮನವರ ಮಗಳಾಗಿ  ಕಲ್ಯಾಣಮ್ಮ1892 ರಲ್ಲಿ ಜನಿಸಿದರು. ನಂತರ ಇವರನ್ನು  ಆರ್ಯ ಬಾಲಿಕಾ ಶಾಲೆಗೆ ಸೇರಿಸಿದರು. ಇವರು ಕಡಿಮೆ ಮಾತನಾಡುತ್ತಿದ್ದರೂ ಕಲಿಯುವುದರಲ್ಲಿ ಹೆಚ್ಚಿನ  ಆಸಕ್ತಿಯನ್ನು ತೋರುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಪುಸ್ತಕಗಳನ್ನು ಓದುವ ಹವ್ಯಾಸದೊಂದಿಗೆ ಪತ್ರಿಕೆಗಳಿಗೂ ಬರೆಯುತ್ತಿದ್ದರು.
ಅಂದಿನ ಬಹು ದೊಡ್ಡ ಸಮಸ್ಯೆ ಎಂದರೆ  ಬಾಲ್ಯವಿವಾಹ, ಅದರಂತೆ ಇವರಿಗೂ ಸಹ ಆಡುವ ವಯಸ್ಸಿನಲ್ಲಿಯೇ ಅಂದರೆ 9 ವರ್ಷವಿದ್ದಾಗಲೇ ಮದುವೆಯಾಯಿತು.  ಇದರಿಂದ ವಿದ್ಯಾಭ್ಯಾಸವೂ ಕೊನೆಗೊಂಡಿತು. ಮದುವೆ, ಗಂಡ ಎಂದರೆ ಏನು ಎಂದು ತಿಳಿಯದ ಇವರು ಮದುವೆಯಾದ 45 ದಿನಗಳಲ್ಲೇ ವಿಧವೆಯಾದರು.
ಅಂದಿನ ಸಂಪ್ರದಾಯಸ್ಥ ಸಮಾಜವು ಕಲ್ಯಾಣಿಯನ್ನು ವಿಧವೆಯೆಂದು ನಾಲ್ಕು ಗೋಡೆಗಳ ನಡುವೆ ಇರುವುದನ್ನು ತಪ್ಪಿಸಿದುದು ಅವರ  ಚಿಕ್ಕಪ್ಪ ಕೃಷ್ಣಯ್ಯಂಗಾರ್. ಪ್ರಾಧ್ಯಾಪಕರಾಗಿದ್ದ ಇವರು ಶಿಕ್ಷಣದ ಬಗ್ಗೆ  ತಿಳಿದಿದ್ದು "ಹೆಣ್ಣು ಮಕ್ಕಳಿಗೆ  ಶಿಕ್ಷಣ ಅವಶ್ಯಕವಾದದ್ದು"  ಇವಳು ಸೂಕ್ಷ್ಮಮತಿ, ಓದನ್ನು ಮುಂದುವರಿಸಲು ಅವಕಾಶ ಮಾಡಿಕೊಡಿ ಎಂದು ಅಣ್ಣನಿಗೆ  ಹೇಳಿಕಲ್ಯಾಣಿಯನ್ನು ಓದಲು ಪ್ರೋತ್ಸಾಹಿಸಿ ಲೋಯರ್ ಸೆಕೆಂಡರಿ ಪರೀಕ್ಷೆಯನ್ನು  ತೆಗೆದುಕೊಂಡು ಉತ್ತೀರ್ಣರಾಗಲು ಕಾರಣರಾದರು. ಹೀಗೆ ಚಿಕ್ಕಪ್ಪನ ಒಂದು ಸಲಹೆ ಇವರ ಜೀವನದ ಪಥವನ್ನೇ ತಿರುಗಿಸಿತು. 
ಮುಂದೆ ಓದುವ ಆಸೆಯಿದ್ದರೂ ಅನುಕೂಲತೆಗಳಿರದಿದ್ದರಿಂದ ಅವರ ಓದು ಅಷ್ಟಕ್ಕೇ ಮುಗಿಯಿತು. ನಂತರ ಮನೆಯಲ್ಲಿಯೇ ಇದ್ದ ಪ್ರಾಚೀನ ತಮಿಳು ಮತ್ತು ಕನ್ನಡ ಗ್ರಂಥಗಳನ್ನು ಮತ್ತು ಚಿಕ್ಕಪ್ಪ ಕಳುಹಿಸಿಕೊಡುತ್ತಿದ್ದ ಪುಸ್ತಕಗಳನ್ನು ಓದುತ್ತಿದ್ದರಿಂದ ಇವರ ಬೌದ್ಧಿಕ ಜ್ಞಾನ ಬೆಳೆದು ಹೊರ ಪ್ರಪಂಚದ ವಿಷಯಗಳನ್ನು ತಿಳಿದುಕೊಳ್ಳಲು ಸಹಾಯವಾಯಿತು.  
ಇದರ ಫಲವಾಗಿ ಇವರು ತಾವು ಓದಿದ ಮತ್ತು ತಿಳಿದುಕೊಂಡ ವಿಷಯಗಳನ್ನು ಕುರಿತು ಕಥೆಗಳು, ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು.  ಅವುಗಳು "ಸಾಧ್ವಿ, ಕಂಠೀರವ, ವಿದ್ಯಾದಾಯಿನಿ" ಮೊದಲಾದ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಇವರ ಬರವಣಿಗೆಯಲ್ಲಿ ಸಾಮಾಜಿಕ ಸಮಸ್ಯೆಗಳು ಪ್ರಮುಖ ವಿಷಯಗಳಾಗಿದ್ದವು.
ಇವರು ತಮಗೆ ಬಂದ ವಿಧವಾಪಟ್ಟದಿಂದ ವಿಚಲಿತರಾಗದೆ ತಮ್ಮನ್ನು  ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ತಮ್ಮಂತಹ ಇತರೆ ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದರು. ಇದಕ್ಕಾಗಿ"ಶ್ರೀ ಶಾರದ ಸ್ತ್ರೀ  ಸಮಾಜ"ವನ್ನು 1913 ಏಪ್ರಿಲ್ 26 ರಲ್ಲಿ ಸ್ಥಾಪಿಸಿದರು.ಮೊದಲಿಗೆ ಸರ್ಕಾರಿ ಬಾಲಿಕಾ ಪಾಠಶಾಲೆಯಲ್ಲಿ ಪ್ರಾರಂಭವಾದ
ಈ ಸಮಾಜದಲ್ಲಿ ಎಲ್ಲಾ ವರ್ಗದ ಮಹಿಳೆಯರಿಗೂ ಆಧ್ಯತೆ ನೀಡಲಾಗಿತ್ತು. ಮಹಿಳೆಯರು ಸ್ವತಂತ್ರವಾಗಿ  ಜೀವನ ನಿರ್ವಹಿಸಲು  ಬೇಕಾಗುವಂತಹ ತರಬೇತಿಗಳನ್ನು ನೀಡಲಾಗುತ್ತಿತ್ತು  ಮತ್ತು ಪ್ರಮುಖ ಸ್ತ್ರೀ ಮತ್ತು ಪುರುಷರ ಜೀವನ ಮೊದಲಾದವುಗಳ ಬಗ್ಗೆ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿತ್ತು. ಒಟ್ಟಾರೆ ಮಧ್ಯಮ ಮತ್ತು ಬಡ ವರ್ಗದ ಮಹಿಳೆಯರಿಗೆ ಈ ವೇದಿಕೆಯು ತುಂಬಾ ಅನುಕೂಲಗಳನ್ನು ಒದಗಿಸಿಕೊಟ್ಟಿತ್ತು.
ಇದನ್ನೆಲ್ಲಾ ಗಮನಿಸಿದ ಸರ್ಕಾರ ಈ ಸಮಾಜಕ್ಕೆ 1919 ರಲ್ಲಿ ಉಚಿತವಾಗಿ ಸ್ಥಳವನ್ನು ನೀಡಿತು. ನಂತರ ಸಾರ್ವಜನಿಕ ವಂತಿಗೆಯನ್ನು ಸಂಗ್ರಹಿಸಿ ಗ್ರಂಥಾಲಯಉಪನ್ಯಾಸ ಮಂದಿರ, ಆಟದ ಮೈದಾನ,ಕುಶಲ ಕೈಗಾರಿಕೆ  ಮೊದಲಾದ ಸೌಕರ್ಯ ಗಳನ್ನೊಳಗೊಂಡ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ಎಷ್ಟೇ ನಿಸ್ವಾರ್ಥ ಸೇವೆಯನ್ನು ಮಾಡಿದರೂ ಇವರು ಹಣದ ದುರುಪಯೋಗದ ಆರೋಪವನ್ನು ಎದುರಿಸ ಬೇಕಾಯಿತು. ಇದನ್ನು ಸಹಿಸದ ಇವರು 1926 ರಲ್ಲಿ ಸಮಾಜದಿಂದ ಹೊರ ಬಂದರು.
ನಂತರ ಈ ಮೊದಲೆ ಸ್ಥಾಪಿತವಾಗಿ ನಿಂತುಹೋಗಿದ್ದ "ಸರಸ್ವತಿ"ಪತ್ರಿಕೆಯನ್ನು 1917 ರಲ್ಲಿ ಮತ್ತೆ  ಹೊರ ತರುವುದರ ಮೂಲಕ ಸಮಾಜದಿಂದ ದೂರವಾದ ನೋವನ್ನು ಮರೆತರು. ಆಗ ತಿರುಮಲಾಂಬರವರ "ಕರ್ನಾಟಕ ನಂದಿನಿ" ಮತ್ತು ಶ್ಯಾಮಲಾ ಬೆಳಗಾಂವಕರ್ ರವರ "ಜಯಕರ್ನಾಟಕ"ಪತ್ರಿಕೆಗಳಿದ್ದರೂ ಇವರ ಸರಸ್ವತಿ ಪತ್ರಿಕೆ "ಮಹಿಳೆಯರ ಸಹಾಯದಿಂದ ಮಹಿಳೆಯರಿಗಾಗಿ ಪ್ರಕಟಿಸಲ್ಪಡುವ ಮಾಸಪತ್ರಿಕೆ"ಎಂಬ ಹೆಗ್ಗಳಿಕೆಯನ್ನು ಪಡೆಯಿತು. ಈಪತ್ರಿಕೆಯಲ್ಲಿ ಯರಲ್ಲದೆ 
ಟಿ.ಪಿ.ಕೈಲಾಸಂಜಿ.ಪಿ.ರಾಜರತ್ನಂಡಿ.ವಿ.ಜಿ. ಮೊದಲಾದವರ ಲೇಖನಗಳು ಪ್ರಕಟವಾಗುತ್ತಿದ್ದವು. ಈ ಪತ್ರಿಕೆಯಲ್ಲಿ ನಾಟಕಗಳನ್ನು ಪ್ರಕಟಿಸುತ್ತಿದ್ದರು. ಹಾಗು ಸಂಗೀತಕ್ಕೂ ಪ್ರೋತ್ಸಾಹ ನೀಡಿ ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಕಟಿಸುತ್ತಿದ್ದರು. ಮಹಿಳೆಯರಿಗೆ ಹೊರ ಜಗತ್ತಿನ ವಿಷಯಗಳ ಬಗ್ಗೆ  ತಿಳುವಳಿಕೆ ನೀಡುವಂತಹ ವಿಚಾರ,ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ವಿಭಾಗಆಹಾರಆರೋಗ್ಯಅಡುಗೆ ಹೀಗೆ ಎಲ್ಲಾ ವಿಷಯಗಳು ಈ ಪತ್ರಿಕೆಯಲ್ಲಿರುತ್ತಿದ್ದವು.ಮಹಿಳೆಯರಲ್ಲಿ ಸ್ಪೂರ್ತಿ ತರುವ ಉದ್ದೇಶದಿಂದ ವಿಶೇಷವಾಗಿ ಸಾಧನೆ  ಮಾಡಿದ ಮಹಿಳೆಯರ ಚಿತ್ರಗಳನ್ನು  ಪ್ರಕಟಿಸುತ್ತಿದ್ದರು. ಬೇರೆ ಭಾಷೆಗಳಿಂದ ಅನುವಾದಿಸಿದ ಸಾಧನೆ ಮಾಡಿದ ಮಹಿಳೆಯರ ಜೀವನ ಕಥೆಗಳನ್ನು ಬರೆಯುತ್ತಿದ್ದರು. ಇದರಿಂದ ಭಾಷೆ ಅರಿವಿಲ್ಲದಿದ್ದರೂ  ವಿದೇಶಿ ಮಹಿಳೆಯರ ಬಗ್ಗೆಯೂ  ತಿಳಿಯುವಂತಾಯಿತು.
ಈ ಪತ್ರಿಕೆಯ ಜನಪ್ರಿಯತೆ ಎಷ್ಟಿತ್ತೆಂದರೆ  ಅಂಚೆ ಮೂಲಕ ಪ್ರತಿಗಳನ್ನು ತರಿಸಿಕೊಂಡು ಓದುತ್ತಿದ್ದರು. ಒಮ್ಮೆ ಹೀಗೆ ತರಿಸಿಕೊಳ್ಳುತ್ತಿದ್ದವರ ಮನೆಗೆ ಸ್ವತಃ ಕಲ್ಯಾಣಮ್ಮನವರೇ ಹೋಗಿ ಪತ್ರಿಕೆಯನ್ನು ಕೊಟ್ಟು ಅವರನ್ನು ಪ್ರೋತ್ಸಾಹಿಸಿ, ಮಾರ್ಗದರ್ಶನ ನೀಡಿದ್ದರ ಫಲವಾಗಿ ಮುಂದೆ ಅವರೆ ಆ ಪತ್ರಿಕೆಗೆ ಲೇಖನಗಳನ್ನು ಬರೆಯುವಂತಾದರು.
ಇನ್ನೊಮ್ಮೆ ಓದುವ ಆಸಕ್ತಿಯಿದ್ದು ಆರ್ಥಿಕ ಅನಾನುಕೂಲದಿಂದ ಪತ್ರಿಕೆಯನ್ನು ತೆಗೆದು ಕೊಳ್ಳಲಾಗುತ್ತಿಲ್ಲ ,ನೀವೆ ಉಚಿತವಾಗಿ ಕಳುಹಿಸಿಕೊಡಿ ಎಂದು ಉಡುಪಿಯಿಂದ ಓದುಗರೊಬ್ಬರು ಕಾಗದವನ್ನು ಬರೆದಿದ್ದ ವಿಷಯವನ್ನು ತಿಳಿಸುತ್ತಾ "ನಮ್ಮ ಈ ಅಲ್ಪ ಸೇವೆಯನ್ನು ಸ್ವೀಕರಿಸಲು ಈ ನಮ್ಮ ಸೋದರಿಯು ಮುಂದೆ ಬಂದಿರುವುದು ಸಂತೋಷದ ಸಂಗತಿ " ಎಂದು ಆ ಮಹಿಳೆಯ ಧೈರ್ಯವನ್ನು ಹೊಗಳಿದ್ದಾರೆ. ಈ ಎರಡು ಸಂಗತಿಗಳನ್ನು ನೋಡಿದರೆ ಪತ್ರಿಕೆಯ ಎಷ್ಟು  ಜನಪ್ರಿಯತೆಯನ್ನು ಪಡೆದಿತ್ತು ಎಂಬುದು ತಿಳಿಯುತ್ತದೆ. ಹಾಗೆ ಇವರ ಈ ಪತ್ರಿಕೆಯಲ್ಲಿ  ಜನಪ್ರಿಯವಾಗಿದ್ದ ಇನ್ನೊಂದು  ವಿಭಾಗವೆಂದರೆ " ಮಕ್ಕಳ ಬಾವುಟ" ಎಂಬ ಮಕ್ಕಳ ವಿಭಾಗ.ಇವರು ಮಕ್ಕಳನ್ನು ಪ್ರೋತ್ಸಾಹಿಸಲು ಮಕ್ಕಳಿಗೆ ಸಂಪಾದಕತ್ವವನ್ನು ನೀಡಿ,ಮಕ್ಕಳೇ ಶಿಶುಗೀತೆಗಳು ಮತ್ತು ನೀತಿಕಥೆಗಳನ್ನು ಬರೆಯುವಂತೆ ಉತ್ತೇಜನವನ್ನು ನೀಡುತ್ತಿದ್ದರು.
ಮಕ್ಕಳ ಬಗ್ಗೆ  ಇವರಿಗೆ ಅಪಾರವಾದ ಪ್ರೀತಿ. ಮಹಿಳೆಯರ ಜೊತೆ ಜೊತೆಯಲ್ಲಿಯೇ ಮಕ್ಕಳ ಅಭಿವೃದ್ಧಿಯ ಬಗ್ಗೆಯೂ ಚಿಂತಿಸಿ ತಾವು ಪ್ರಾರಂಭಿಸಿದ ಸಮಾಜದಲ್ಲಿ ಬಾಲವಾಡಿಯನ್ನು ತೆರೆದಿದ್ದರು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ,ಅವರ ಸೃಜನಶೀಲ ಬೆಳವಣಿಗೆಗಾಗಿ ಅವಕಾಶವನ್ನು ನೀಡಲು ಎಲ್ಲಾ ಮಕ್ಕಳನ್ನು ಒಂದೆಡೆ ಸೇರಿಸಿ1938 ರಲ್ಲಿ" ಅಖಿಲ ಕರ್ನಾಟಕ ಮಕ್ಕಳ ಕೂಟ"ವನ್ನು ಪ್ರಾರಂಭಿಸಿದರು. ಅಲ್ಲಿ ಮಕ್ಕಳಿಗಾಗಿ ಕಂಠಪಾಠ, ಕಸೂತಿ,ಕವನ,ಕಥೆ, ಚರ್ಚೆ, ಚಿತ್ರ ಬರೆಯುವುದು ಮೊದಲಾದ ಸ್ಪರ್ಧೆಗಳನ್ನು ನಡೆಸುತ್ತಿದ್ದರು. ಮಕ್ಕಳಿಗಾಗಿ ಉಪಯುಕ್ತ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದರು. ಹಲವಾರು ಕಡೆಗಳಲ್ಲಿ ಮಕ್ಕಳ ಸಮ್ಮೇಳನಗಳನ್ನು ನಡೆಸುತ್ತಿದ್ದರು. ಈ ಸಮ್ಮೇಳನಗಳಲ್ಲಿ ಮಕ್ಕಳನ್ನೇ ಅಧ್ಯಕ್ಷರನ್ನಾಗಿ ಮಾಡುತ್ತಿದ್ದರು. ಹೀಗೆ ಎಲ್ಲಾ ಮಕ್ಕಳನ್ನು ತಮ್ಮದೇ ಎಂದು ತಿಳಿದು ಮಾತೃವಾತ್ಸಲ್ಯವನ್ನು ನೀಡುತ್ತಿದ್ದರು.
ಸಮಾಜ ಸೇವೆಯೇ  ದೇಶಸೇವೆಯೆಂದು ತಿಳಿದ ಇವರು  " ದೇಶ ಸ್ವತಂತ್ರಗೊಂಡರೆ ಸಾಲದು ಪ್ರಜೆಗಳು ಅಭಿವೃದ್ಧಿ  ಹೊಂದಬೇಕು" ಇಂದಿನ ಮಕ್ಕಳು ನಾಳಿನ ಪ್ರಜೆಗಳು ಹಾಗಾಗಿ ಮಕ್ಕಳು ಮತ್ತು ಮಕ್ಕಳನ್ನು ಬೆಳೆಸುವ ಮಹಿಳೆಯರ ಅಭಿವೃದ್ಧಿಗೆ ಒತ್ತು ಕೊಟ್ಟು  ಶ್ರಮಿಸಿದರು .
ಇವರ ನಿಸ್ವಾರ್ಥ ಸೇವೆ ಮತ್ತು ಶ್ರಮದ ಫಲವಾಗಿ ಹಲವಾರು ಗೌರವ ಹುದ್ದೆ ಗಳು,ಬಿರುದುಗಳಿಗೆ ಭಾಜನರಾದರು.
ಇವರ ಬರವಣಿಗೆಯು ಓದುಗರೊಂದಿಗೆ ಹಿರಿಯ ಸಾಹಿತಿಗಳ ಮೆಚ್ಚುಗೆಯನ್ನು  ಪಡೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಂದಿನ ಅಧ್ಯಕ್ಷರು ಬಿ.ಎಂ.ಶ್ರೀ ಯವರು ಕಲ್ಯಾಣಮ್ಮನವರನ್ನು ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ಮಹಿಳಾ ಸದಸ್ಯೆಯಾಗಿ ಆಯ್ಕೆ ಮಾಡಿದರು. ಇದರಿಂದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಹಲವಾರು ಸಂಘ ಸಂಸ್ಥೆಗಳು ಇವರನ್ನು ಭಾಷಣಕಾರರಾಗಿ ಆಹ್ವಾನ ನೀಡಿದವು. ಕಲ್ಯಾಣಮ್ಮನವರು ತಮ್ಮ ಎಲ್ಲಾ ಭಾಷಣಗಳಲ್ಲಿ ಶಿಕ್ಷಣ ಮತ್ತು ಮಹಿಳೆಯರನ್ನು ಕುರಿತು  ವಿಚಾರಗಳನ್ನು ಮಂಡಿಸುತ್ತಿದ್ದರು. ಇದನ್ನು ಗಮನಿಸಿದ ಸರ್ಕಾರ 1921-22 ರ ಅವಧಿಗೆ ಕನ್ನಡ ಲೊಯರ್ ಸೆಕೆಂಡರಿ ಪರೀಕ್ಷೆಗೆ ಪರಿವೀಕ್ಷಕರನ್ನಾಗಿ ನೇಮಿಸಿತು.
1926
ರಲ್ಲಿ ನ್ಯಾಷನಲ್ ಕಾಲೇಜಿನ "ಬಾಲ ಕರ್ನಾಟಕ ಸಂಘ" ದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇದರ ವಿದ್ಯಾಪ್ರಚಾರದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
1932
ರಲ್ಲಿ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.
1933
ರಲ್ಲಿ ಸರ್ಕಾರದಿಂದ ಬೆಂಚ್ ಮ್ಯಾಜಿಸ್ಟ್ರೇಟ್  ಅಥವಾ ಗೌರವ ನ್ಯಾಯಾಧೀಶರಾಗಿ ಆಯ್ಕೆಗೊಳ್ಳುವ ಮೂಲಕ ಈ ಪದವಿಯನ್ನು  ಪಡೆದ ಮೊದಲ ಮಹಿಳೆ ಎನಿಸಿಕೊಂಡರು.
1937
ರಲ್ಲಿ ನಗರಸಭಾ ಶಾಲಾ ಮಂಡಳಿಯ ಸದಸ್ಯೆಯಾಗಿ ನೇಮಕಗೊಂಡರು.
1937
ರಲ್ಲಿ ಮುಸ್ಲಿಂ  ಶಿಕ್ಷಣ ಸಮಿತಿಗೆ  ಸದಸ್ಯರನ್ನಾಗಿ ಆರಿಸಲಾಯಿತು.
1938
ರಲ್ಲಿ ಪುರಸಭಾ ಸದಸ್ಯರಾಗಿ ಆಯ್ಕೆಗೊಂಡರು. ನಂತರ ಉಪಾಧ್ಯಕ್ಷೆಯೂ ಆಗುವ ಮೂಲಕ ಮೊದಲ ಬಾರಿಗೆ ಉನ್ನತ ಸ್ಥಾನದಲ್ಲಿ ಮಹಿಳೆಯೆಂಬ ಹೆಗ್ಗಳಿಕೆಗೆ ಪಾತ್ರರಾದರು.
1938
ರಲ್ಲಿ ಲಾಂಗರ್ ಖಾನೆ ಸಮಿತಿಗೆ ಸದಸ್ಯರಾಗಿ ನೇಮಕ ಮಾಡಲಾಯಿತು.
1940
ರಲ್ಲಿ ಕನ್ನಡ ವೃತ್ತಪತ್ರಿಕಾಗೋಷ್ಠಿ,24 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
ಪುರಸಭಾ ಆರೋಗ್ಯ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಇದಲ್ಲದೆ ಇವರು ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿದ್ದರು 
ಮೈಸೂರು ರಾಜ್ಯ ಜೀವವಿಮಾ ಕಂಪನಿಯ ನಿರ್ದೇಶಕರಾಗಿದ್ದರು.
1938
ರಲ್ಲಿ ಮೈಸೂರಿನ ಕೃಷ್ಣರಾಜ ಒಡೆಯರ್ ಅವರಿಂದ ಸಾರ್ವಜನಿಕ ಸೇವಾ ಸ್ವರ್ಣ ಪದಕವನ್ನು ಪಡೆದಿದ್ದರು.
1919
ರಲ್ಲಿ ಬಂಗಾಲದ ಆರ್ಯ ಸಾಹಿತ್ಯ ಪರಿಷತ್ತು ವಿದ್ಯಾ ವಿನೋದಿನಿ ಬಿರುದನ್ನು ನೀಡಿತು.
ಇವರು ಬರೆದ ಸಣ್ಣ ಕಥೆಗಳಲ್ಲಿ ಪ್ರಮುಖವಾದವುಗಳೆಂದರೆ ಅಂಜುಬುರುಕಿ, ಗ್ರಹಣ,ಒಲ್ಲದ ಹೆಂಡತಿ, ನಿರ್ಭಾಗ್ಯ ನಳಿನಿ, ಮಾರ್ಜಾಲ,ದೈವೇಚ್ಛೆ.
1918
ರಲ್ಲಿಇವರ ಮೊದಲ ಕೃತಿ ಪ್ರಿಯಂವದೆ ಪ್ರಕಟಗೊಂಡಿತು. ಇದರಲ್ಲಿ ವರದಕ್ಷಿಣೆಯಿಂದಾಗುವ ಸಮಸ್ಯೆಗಳನ್ನು ಕುರಿತು ಬರೆದಿದ್ದಾರೆ.
1921
ರಲ್ಲಿ ಇಂದಿರೆ ಅಥವಾ ನಿರ್ಭಾಗ್ಯ ವನಿತೆ ಕಾದಂಬರಿಯನ್ನು ಬರೆದಿದ್ದಾರೆ.ಇದರಲ್ಲಿ ವಿಧವೆಯರ ಜೀವನದ ಬಗ್ಗೆ ಬರೆದಿದ್ದಾರೆ.
1927
ರಲ್ಲಿ ಬರೆದ. ಸುಖಲತಾ ಕಾದಂಬರಿಯಲ್ಲಿ ವೃದ್ಧರ ಮರುಮದುವೆಯ ಬಗ್ಗೆ ಚಿತ್ರಿಸಿದ್ದಾರೆ.
1950
ರಲ್ಲಿ ಭಕ್ತೆ ಮೀರ ಕಾದಂಬರಿಯನ್ನು ಬರೆದರು.
ಮಾಧವಿ ಎಂಬುವುದು ಇವರ ಕೊನೆಯ ಕಾದಂಬರಿಯಾಗಿದೆ.
ಇವರು ಸುಮಾರು 21 ನಾಟಕಗಳನ್ನು ಬರೆದಿದ್ದಾರೆ. 
ಪ್ರಮುಖವಾದವುಗಳೆಂದರೆ
ಸ್ನೇಹ ಲತೆ, ಹಿಂದೂ ಭಾಗ್ಯೋದಯ, ಬ್ಯಾರಿಸ್ಟರ್  ರಾಮಚಂದ್ರನ್, ನಿರ್ಮಲೆ, ಇಪ್ಪತ್ತನೆಯ ಶತಮಾನದ ಅಳಿಯ,ಹುಡುಗರು ಮತ್ತು ಹುಡುಗಿಯರುಶೂರ್ಪನಖಾಭಂಗ, ಸತೀ ಪದ್ಮಿನಿ. 
ಇವಲ್ಲದೆ ಮಕ್ಕಳಿಗಾಗಿ ಕಿಟ್ಟು ಕಂಡ ಗಾಂಧಿ, ಗಾಂಧೀಜಿ  ಮತ್ತು ಮಕ್ಕಳು, ಸ್ವಾಮಿ ವಿವೇಕಾನಂದ,ಶ್ರೀ ಮಹದೇವ ಗೋವಿಂದ ರಾನಡೆ,ಮೊದಲಾದ ಮಹನೀಯರ ವ್ಯಕ್ತಿ ಚಿತ್ರಗಳನ್ನು ಬರೆದಿದ್ದಾರೆ. ರಾಣಿ ದುರ್ಗಾವತಿ,ಮಹಾರಾಣಿ ಸ್ವರ್ಣಮಯಿ, ಮೊದಲಾದ ವ್ಯಕ್ತಿಚಿತ್ರಗಳು ಹಾಗೂ ಕವಯತ್ರಿ ಪದ್ಮಾವತಿ ದೇವಿ,ವಿಜಯಲಕ್ಷ್ಮಿ ಪಂಡಿತ, ಶಾರದಾದೇವಿ,ಪಂಡಿತ ರಮಾಬಾಯಿ ಕೇಳ್ಕರ್ ಮೊದಲಾದ ಮಹಿಳೆಯರ ಜೀವನ ವಿವರಗಳನ್ನು ಪ್ರಕಟಿಸಿದ್ದಾರೆ.
ಸುಮಾರು 400 ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ.
1960
ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ಅಂದಿನ ಅಮೆರಿಕದ ಅಧ್ಯಕ್ಷ ಜಾನ್ ಎಫ್.ಕೆನಡಿಗೆ ಕಲ್ಯಾಣಮ್ಮನವರನ್ನು ಪರಿಚಯಿಸಿದಾಗ ಇವರ ಕಾರ್ಯವೈಖರಿಯನ್ನು ಮೆಚ್ಚಿ ಅಮೇರಿಕೆಗೆ ಬರುವಂತೆ ಆಹ್ವಾನ ನೀಡಿದ್ದರು.
ಈ ರೀತಿ ಕನ್ನಡ ಸಾಹಿತ್ಯ
ಕ್ಷೇತ್ರಕ್ಕೆ  ಅಪಾರವಾದ ಕೊಡುಗೆಯನ್ನು ನೀಡಿದ ಕಲ್ಯಾಣಮ್ಮನವರು 1965 ಫೆಬ್ರವರಿ 16 ರಂದು ಅಸು ನೀಗಿದರು. ತಮ್ಮ ಅಪ್ರಕಟಿತ ಕೃತಿಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಉಪಯೋಗಿಸಬೇಕು ಎನ್ನುವುದು  ಇವರ ಕೊನೆಯ ಆಸೆಯಾಗಿತ್ತು.
ಇವರ ಕಾಲಾನಂತರ ನೆನಪಿಗಾಗಿ ಚಾಮರಾಜಪೇಟೆಯ ಸಾರ್ವಜನಿಕ ಉದ್ಯಾನವನಕ್ಕೆ "ಆರ್.ಕಲ್ಯಾಣಮ್ಮನವರ ಮಕ್ಕಳ ಆಡದ ಮೈದಾನ" ಎಂದು ಹೆಸರಿಡಲಾಯಿತು ಮತ್ತು ಅಖಿಲ ಕರ್ನಾಟಕ ಮಕ್ಕಳ ಕೂಟವು ಇವರ ಹೆಸರಿನಲ್ಲಿ ಸ್ಮಾರಕ ನಿಧಿಯನ್ನು ಸ್ಥಾಪಿಸಿತು. ಸರ್ಕಾರವು ಇವರ ಹೆಸರಿನಲ್ಲಿ ಸ್ಮಾರಕ ನಿಧಿಯನ್ನು ಸ್ಥಾಪಿಸಿ  ಅದರಿಂದ ಬರುವ ಬಡ್ಡಿ ಹಣದಿಂದ ವಿದ್ಯಾರ್ಥಿ ವೇತನವನ್ನು ಪ್ರಾರಂಭಿಸಿತು.
ಸಂಪ್ರದಾಯ. ಕುಟುಂಬದಲ್ಲಿ ಹುಟ್ಟಿ, ಬಾಲವಿಧವೆಯಾದರೂ ಎದೆಗುಂದದೆ  ಸಮಾಜದ ಒಳಿತಿಗಾಗಿ ಶ್ರಮಿಸಿದ ಕಲ್ಯಾಣಮ್ಮನವರು ಇಂದಿನ ಜನತೆಗೆ ಮಾದರಿ ಮಹಿಳೆಯಾಗಿದ್ದಾರೆ.
-      ವಿಜಯಲಕ್ಷ್ಮಿ  ಎಂ ಎಸ್      

ಕಾಮೆಂಟ್‌ಗಳಿಲ್ಲ: