ಬ್ರಿಟನ್‍ನಲ್ಲಿದ್ದ ಪ್ರೈವೀ ಕೌನ್ಸಿಲ್‍ಗೆ ಮೇಲ್ಮನವಿಯನ್ನು ಸಲ್ಲಿಸುವಂತೆ ಎಲ್ಲರೂ ಭಗತ್‍ಸಿಂಗ್‍ರನ್ನು ಒತ್ತಾಯಿಸಿದರು. ಭಗತ್‍ರಿಗೆ ಆ ಬಗ್ಗೆ ನಂಬಿಕೆ ಇರದಿದ್ದರೂ, ಲಂಡನ್‍ನಲ್ಲಿ ತಮ್ಮ ಸಂಘಟನೆಯ ಬಗ್ಗೆ ಇನ್ನಷ್ಟು ಪ್ರಚಾರವಾಗುತ್ತದೆಂಬ ಏಕೈಕ ಆಕಾಂಕ್ಷೆಯೊಂದಿಗೆ ಒಪ್ಪಿಕೊಂಡರು. ಆದರೆ ಪೈವೀ ಕೌನ್ಸಿಲ್ ಟ್ರಿಬ್ಯುನಲ್‍ನ ತೀರ್ಪನ್ನು ಸರಿ ಎಂದಿತು. ನ್ಯಾಯದ ಅಪಹಾಸ್ಯವನ್ನು ಮಾಡಿದ್ದ ಬ್ರಿಟಿಷ್ ಸರ್ಕಾರದ ಒಂದು ಭಾಗವಾಗಿದ್ದ ಪ್ರೈವೀ ಕೌನ್ಸಿಲ್ ಇನ್ನೇನು ತಾನೇ ತೀರ್ಮಾನ ಕೊಡಲು ಸಾಧ್ಯವಿದ್ದಿತು!
ಗಾಂಧಿಯವರಲ್ಲಿ ಜನತೆಯ ಮನವಿ
ಜನತೆಗೆ ಕೊನೆಗೆ ಉಳಿದ ಒಂದೇ ಒಂದು ದಾರಿ ಎಂದರೆ ಗಾಂಧೀಜಿಯವರನ್ನು ಮಧ್ಯಪ್ರವೇಶ ಮಾಡುವಂತೆ ಕೇಳಿಕೊಳ್ಳುವುದಾಗಿತ್ತು. ದೇಶದ ಎಲ್ಲಾ ಕಡೆಗಳಿಂದಲೂ ಗಾಂಧೀಜಿಯವರಿಗೆ ಈ ಬಗ್ಗೆ ಬೇಡಿಕೆಯನ್ನು ಸಲ್ಲಿಸಲಾಯಿತು. ಜೈಲಿನಲ್ಲಿದ್ದ ಇತರೆ ಕ್ರಾಂತಿಕಾರಿಗಳೂ ಸಹ ಭಗತ್‍ಸಿಂಗ್, ಸುಖದೇವ್, ರಾಜಗುರುರವರ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿಯಾದರೂ ಪರಿವರ್ತಿಸಬೇಕೆಂದು ಕೇಳಿಕೊಂಡರು. ನೇತಾಜಿಯವರೂ ಸಹ ಗಾಂಧೀಜಿಯರಿಗೆ “ಭಗತ್‍ಸಿಂಗ್, ರಾಜಗುರು, ಸುಖದೇವ್‍ರ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಿದರೆ ಮಾತ್ರ ಇರ್ವಿನ್ ಜೊತೆ ಒಪ್ಪಂದಕ್ಕೆ ಸಹಿ ಹಾಕಲು ಅಂಗೀಕರಿಸಿ, ಇಲ್ಲದಿದ್ದರೆ ಒಪ್ಪಂದವನ್ನು ಮುರಿದುಬಿಡಿ” ಎಂದು ಕೇಳಿಕೊಂಡಿದ್ದರು. ಬ್ರಿಟಿಷರ ಜೊತೆ ಸಹಕರಿಸಲು ಒಪ್ಪಿ, ಗಾಂಧೀಜಿ ಒಪ್ಪಂದಕ್ಕೆ ಸಹಿ ಹಾಕಿದರು. ಕಾಂಗೆಸ್ಸಿಗರನ್ನೆಲ್ಲಾ ಬಿಡುಗಡೆ ಮಾಡುವಂತೆ ಮಾಡಿದರು. ಆದರೆ ಭಗತ್‍ಸಿಂಗ್ ಮತ್ತು ಅವರ ಸಂಗಾತಿಗಳ ಬಿಡುಗಡೆಯ ಬಗ್ಗೆ ಇರ್ವಿನ್‍ನನ್ನು ಆಗ್ರಹಿಸಲಿಲ್ಲ. ಅಷ್ಟೇ ಏಕೆ ಜೈಲಿನಲ್ಲಿ ಹತ್ತಾರು ವರ್ಷಗಳಿಂದ ಬಂಧಿತರಾಗಿದ್ದ ರಾಜಕೀಯ ಖೈದಿಗಳನ್ನೂ ಸಹ ಬಿಡುಗಡೆ ಮಾಡುವಂತೆ ಕೇಳಿಕೊಳ್ಳಲಿಲ್ಲ. ಗಾಂಧೀಜಿಯವರ ವಿಧಾನಗಳು ಕ್ರಾಂತಿಕಾರಿಗಳ ವಿಧಾನಗಳಿಗಿಂತ ಭಿನ್ನವಾಗಿತ್ತೆಂಬುದು ನಿಜ. ಆದರೂ ಕ್ರಾಂತಿಕಾರಿಗಳಿಗೆ ಗಾಂಧೀಜಿಯವರ ಬಗ್ಗೆ ಅಪಾರವಾದ ಗೌರವವಿತ್ತು. ಆದರೆ ಗಾಂಧೀಜಿಯವರಿಗೆ ಕ್ರಾಂತಿಕಾರಿಗಳ ವಿಧಾನಗಳ ಬಗ್ಗೆ ಮಾತ್ರವಲ್ಲದೆ, ಕ್ರಾಂತಿಕಾರಿಗಳ ಬಗ್ಗೆಯೂ ತೀವ್ರವಾದ ಅಸಮಾಧಾನವಿತ್ತೆಂಬುದು ಇದರಿಂದ ಸುಸ್ಪಷ್ಟ. ಕಾಂಗ್ರೆಸ್ಸಿಗರು ಕ್ರಾಂತಿಕಾರಿಗಳಂತೆ ಜೀವತ್ಯಾಗ ಮಾಡದಿದ್ದರು, ಸ್ವಾರ್ಥದ ಲವಲೇಶವಿಲ್ಲದೆ ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಸಂಕಷ್ಟಗಳನ್ನು ಎದುರಿಸಿದ ಕ್ರಾಂತಿಕಾರಿಗಳ ಬಗ್ಗೆ ಸ್ವಲ್ಪವಾದರೂ ಪ್ರೀತಿ ಬೆಳೆಯದೇ ಇದ್ದದ್ದು ನಿಜಕ್ಕೂ ಆಶ್ಚರ್ಯವೇ.
ಇಡೀ ದೇಶ ಗಾಂಧೀಜಿಯವರನ್ನು ತೀವ್ರವಾಗಿ ಖಂಡಿಸುತ್ತಿದ್ದರೂ, ಭಗತ್‍ಸಿಂಗ್, ರಾಜಗುರು ಸುಖದೇವ್, ಅವರನ್ನು ಟೀಕಿಸಲಿಲ್ಲ. ಇದು ಕ್ರಾಂತಿಕಾರಿಗಳ ಮಹಾನತೆಗೆ ಹಿಡಿದ ಕನ್ನಡಿಯಾಗಿದೆ. ಸುಖದೇವ್ ಗಾಂಧೀಜಿಯವರಿಗೆ ಪತ್ರ ಬರೆದರೂ ಅದು ತಮ್ಮನ್ನು ಉಳಿಸುವಂತೆ ಕೇಳಿಕೊಳ್ಳಲು ಅಲ್ಲ. ಬದಲಿಗೆ ಗಾಂಧೀಜಿಯವರ ವಿಧಾನಗಳು ಸ್ವಾತಂತ್ರ್ಯವನ್ನು ಗಳಿಸಲು ಅಸಮರ್ಥವಾಗಿವೆ ಮತ್ತು ಕ್ರಾಂತಿಕಾರಿಗಳ ವಿಧಾನಗಳು ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಹೊಡೆದೋಡಿಸುವಲ್ಲಿ ಮಾತ್ರವಲ್ಲದೆ ಕ್ರಾಂತಿಯನ್ನು ಸ್ಥಾಪಿಸುವಲ್ಲಿ ಅಸಮರ್ಥವಾಗಿವೆ ಎಂಬುದನ್ನು ತೋರಿಸಲು.
ಇಡೀ ದೇಶ ಗಾಂಧೀಜಿಯವರನ್ನು ತೀವ್ರವಾಗಿ ಖಂಡಿಸುತ್ತಿದ್ದರೂ, ಭಗತ್‍ಸಿಂಗ್, ರಾಜಗುರು ಸುಖದೇವ್, ಅವರನ್ನು ಟೀಕಿಸಲಿಲ್ಲ. ಇದು ಕ್ರಾಂತಿಕಾರಿಗಳ ಮಹಾನತೆಗೆ ಹಿಡಿದ ಕನ್ನಡಿಯಾಗಿದೆ. ಸುಖದೇವ್ ಗಾಂಧೀಜಿಯವರಿಗೆ ಪತ್ರ ಬರೆದರೂ ಅದು ತಮ್ಮನ್ನು ಉಳಿಸುವಂತೆ ಕೇಳಿಕೊಳ್ಳಲು ಅಲ್ಲ. ಬದಲಿಗೆ ಗಾಂಧೀಜಿಯವರ ವಿಧಾನಗಳು ಸ್ವಾತಂತ್ರ್ಯವನ್ನು ಗಳಿಸಲು ಅಸಮರ್ಥವಾಗಿವೆ ಮತ್ತು ಕ್ರಾಂತಿಕಾರಿಗಳ ವಿಧಾನಗಳು ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಹೊಡೆದೋಡಿಸುವಲ್ಲಿ ಮಾತ್ರವಲ್ಲದೆ ಕ್ರಾಂತಿಯನ್ನು ಸ್ಥಾಪಿಸುವಲ್ಲಿ ಅಸಮರ್ಥವಾಗಿವೆ ಎಂಬುದನ್ನು ತೋರಿಸಲು.
ಗಾಂಧಿಯವರ ವಿರುದ್ಧ ಜನತೆಯ ಕೂಗು
ಎಲ್ಲೆಡೆ ಗಾಂಧೀಜಿಯವರ ವಿರುದ್ಧ ಧಿಕ್ಕಾರದ ದನಿ ಎದ್ದಿತು. ಕಾಂಗ್ರೆಸ್ಸಿನ ಯುವ ಸಮುದಾಯ ಸಹ ಗಾಂಧೀಜಿಯ ವಿರುದ್ಧ ಬಂಡೆದ್ದಿತು. ಅದು ಎಷ್ಟರ ಮಟ್ಟಿಗೆ ತೀವ್ರವಾಗಿತ್ತೆಂದರೆ, ಗಾಂಧೀಜಿ ಕರಾಚಿ ಅಧಿವೇಶನಕ್ಕೆ ರೈಲಿನಲ್ಲಿ ಹೋಗುತ್ತಿದ್ದಾಗ, ಪ್ರತಿ ನಿಲ್ದಾಣದಲ್ಲಿಯೂ ಗಾಂಧೀಜಿಯ ವಿರುದ್ಧ ಘೋಷಣೆಯನ್ನು ಕೂಗಲಾಯಿತು, ಕಪ್ಪುಬಾವುಟ ಪ್ರದರ್ಶಿಸಲಾಯಿತು. “ಗಾಂಧೀಜಿ ಹಿಂದಿರುಗಿ”, “ಗಾಂಧಿವಾದಕ್ಕೆ ಧಿಕ್ಕಾರ” ಎನ್ನುವ ಕೂಗು ಗಾಂಧೀ ವಿರೋಧಿಗಳಿಂದ ಮಾತ್ರ ಬಂದದ್ದಲ್ಲ, ಗಾಂಧಿಯವರನ್ನು ಪ್ರೀತಿಸುವರಿಂದಲೇ ಬಂದದ್ದು. ಅಂದರೆ ಭಗತ್‍ಸಿಂಗ್ ಬಗ್ಗೆ ಜನತೆಗೆ ಎಷ್ಟು ಪ್ರೀತಿ ಬೆಳೆದಿತ್ತೆಂಬುದನ್ನು ಊಹಿಸಬಹುದು. ಕಾಂಗ್ರೆಸ್‍ನ ಕರಾಚಿ ಅಧಿವೇಶನದಲ್ಲಿ ಭಗತ್‍ಸಿಂಗ್ ಮತ್ತವರ ಸಂಗಾತಿಗಳ ಸಾಹಸವನ್ನು ಹೊಗಳಿ ಗೊತ್ತುವಳಿಯನ್ನು ಅಂಗೀಕರಿಸಲು ಗಾಂಧೀಜಿಯವರು ಒಪ್ಪಬೇಕಾಯಿತು.
ಗಾಂಧೀಜಿಯವರಿಗೊಂದು ಪತ್ರ - "ಶಾಂತಿ ಎಲ್ಲಿ?"
ಗಾಂಧೀಜಿಯವರು ಮಾರ್ಚ್ 7 ರಂದು ದೆಹಲಿಯಲ್ಲಿ ಸಾರ್ವಜನಿಕ ಸಭೆಯೊಂದಕ್ಕೆ ಆಗಮಿಸಿದಾಗ ಒಂದು ಕರಪತ್ರವನ್ನು ಹಂಚಲಾಗಿತ್ತು - “ನೀವು ಶಾಂತಿ , ಶಾಂತಿ ಎನ್ನುವಿರಿ ಆದರೆ ಇಂದು ಶಾಂತಿ ಎಲ್ಲಿದೆ? ಶಾಂತಿಯನ್ನು ಹುಡುಕುವುದಾದರೆ, ಬ್ರಿಟಿಷರ ಬಂದೂಕಿನ ಗುಂಡಿಗೆ ಬಲಿಯಾದ ಅಥವಾ ಗಲ್ಲುಗಂಬಕ್ಕೆ ಏರಲು ಸಜ್ಜಾಗಿರುವ ಮಕ್ಕಳ ಮಾತೆಯರಲ್ಲಿ ಹುಡುಕಿ, ಜೈಲಿನ ಕತ್ತಲಿನ ಕೋಣೆಯಲ್ಲಿ ಕೊಳೆಯುತ್ತಿರುವ ಕ್ರಾಂತಿಕಾರಿಗಳ ಪತ್ನಿಯರನ್ನು ಕೇಳಿ ಅಥವಾ ದೇಶಕ್ಕಾಗಿ ಗಂಡನನ್ನು ಕಳೆದುಕೊಂಡ ವಿಧವೆಯನ್ನು ಕೇಳಿ. ಹುತಾತ್ಮರಿಗೆ ನೀವು ಮಾಡಬೇಕಾದ ಕರ್ತವ್ಯದ ಬಗ್ಗೆ ನಿಮಗೆ ನೆನಪಿದೆಯೇ? ಗಾಂಧಿ-ಇರ್ವಿನ್ ಒಪ್ಪಂದದಂತಹ ಅವಮಾನಕರ ಒಪ್ಪಂದಕ್ಕೆ ನೀವು ಭಾಗಿಯಾಗುವಿರಾ?” ಗಾಂಧೀಜಿಯವರು ಈ ಬಗ್ಗೆ ಏನೂ ಪ್ರತಿಕ್ರಿಯಿಸಲಿಲ್ಲ. ಮಾರ್ಚ್ 4 ರಂದು ಗಾಂಧಿ – ಇರ್ವಿನ್ ಒಪ್ಪಂದಕ್ಕೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಹಿ ಹಾಕಿದಾಗ ಇಡೀ ದೇಶದಲ್ಲಿ ಕಾಂಗ್ರೆಸ್‍ನ ನಾಯಕರ ವಿರುದ್ಧ ಕೂಗೆದ್ದಿತು. ಪ್ರಗತಿಪರ ವ್ಯಕ್ತಿಗಳೆಲ್ಲರೂ ಇದನ್ನು ದ್ರೋಹ ಎಂದು ಕರೆದರು.
ದಯಾಭಿಕ್ಷೆಯ ತಿರಸ್ಕಾರ - ತಂದೆಗೊಂದು ಭಾವುಕ ಪತ್ರ
ಭಗತ್‍ರಿಗೆ ಎಲ್ಲರೂ ದಯಾಭಿಕ್ಷೆಯನ್ನು ಕೇಳಿ ಎಂದು ಹೇಳಿದ್ದರು. ಆದರೆ ಭಗತ್‍ರು ಅದಕ್ಕೆ ಒಪ್ಪುವ ಮಾತೇ ಇರಲಿಲ್ಲ. ಬ್ರಿಟಿಷರಲ್ಲಿ ದಯಾಭಿಕ್ಷೆಯೇ? ಭಗತ್ ಕನಸಿನಲ್ಲಿಯೂ ಊಹಿಸಲಾಗದ ವಿಚಾರವದು. ಆದರೆ ಜೈಲಿನಲ್ಲಿದ್ದ ಭಗತ್‍ಸಿಂಗ್, ಸುಖದೇವ್‍ರಿಗೆ ತಮ್ಮ ಬಂಧುಗಳು ತಮಗಾಗಿ ದಯಾಭಿಕ್ಷೆಯ ಮನವಿ ಮಾಡಿಕೊಂಡಿದ್ದರೆಂದು ತಿಳಿದು ಆಘಾತವಾಯಿತು.
ಭಗತ್ ತಮ್ಮ ತಂದೆಗೆ ತೀಕ್ಷ್ಣವಾದ, ಸ್ವಲ್ಪ ಕಠೋರವೇ ಎನಿಸಬಹುದಾದ ಮಾತುಗಳಲ್ಲಿ ಪತ್ರವೊಂದನ್ನು ಬರೆದರು. “ಅಪ್ಪಾ, ನನ್ನನ್ನು ರಕ್ಷಿಸಲು ನೀವು ಟ್ರಿಬ್ಯುನಲ್‍ನ ಸದಸ್ಯರಿಗೆ ಮನವಿಯನ್ನು ಸಲ್ಲಿಸಿದ್ದೀರಿ ಎಂಬುದನ್ನು ಕೇಳಿ ನನಗೆ ತೀವ್ರವಾದ ಆಘಾತವಾಗಿದೆ. ಇದು ನನ್ನ ಮನಸ್ಸಿನ ಇಡೀ ಸಮತೋಲನವನ್ನೇ ಕಲಕಿದೆ. ಇಂತಹ ಸನ್ನಿವೇಶದಲ್ಲಿ ಅಂತಹ ಮನವಿಯನ್ನು ಸಲ್ಲಿಸುವುದು ಸರಿ ಎಂದು ನೀವು ಹೇಗೆ ಭಾವಿಸಿದಿರಿ? ತಂದೆಯಾಗಿ ನಿಮಗೆ ಎಷ್ಟೇ ಸೂಕ್ಷ್ಮ ಭಾವನೆ ಮತ್ತು ಭಾವುಕತೆಗಳಿದ್ದರೂ ಸಹ ನನ್ನನ್ನು ಕೇಳದೆಯೇ ನನ್ನ ಪರವಾಗಿ ಇಂತಹ ಕಾರ್ಯ ಕೈಗೊಳ್ಳಲು ನಿಮಗೆ ಯಾವುದೇ ಹಕ್ಕಿದೆ ಎಂದು ನಾನು ಭಾವಿಸುವುದಿಲ್ಲ. ರಾಜಕೀಯ ರಂಗದಲ್ಲಿ ನನ್ನ ವಿಚಾರಗಳು ನಿಮ್ಮ ವಿಚಾರಗಳಿಗಿಂತ ಭಿನ್ನವಾಗಿತ್ತೆಂಬುದು ನಿಮಗೆ ತಿಳಿದಿದೆ. . . ನೀವು ಬಹುಶಃ ಭಾವಿಸುವಂತೆ ನನ್ನ ಜೀವವೇನು—ಕಡೆಯ ಪಕ್ಷ ನನ್ನ ಪಾಲಿಗೆ-ಅಮೂಲ್ಯವಲ್ಲ. ನನ್ನ ಆದರ್ಶಗಳನ್ನು ಮಾರಾಟ ಮಾಡಿ ಅದನ್ನು ಗಳಿಸಿಕೊಳ್ಳುವ ಅಗತ್ಯವಿಲ್ಲ. ನನ್ನ ಮೇಲೆ ಹೂಡಿರುವ ದಾವೆಯಷ್ಟೇ ನನ್ನ ಇತರ ಸಂಗಾತಿಗಳ ದಾವೆಗಳೂ ಗಂಭೀರವಾಗಿವೆ. ನಾವು ಒಂದು ಸಮಾನ ನೀತಿಯನ್ನು ಅನುಸರಿಸುತ್ತಿದ್ದೇವೆ ಮತ್ತು ಜೊತೆಜೊತೆಗೆ ಎಲ್ಲವನ್ನೂ ಎದುರಿಸಿದ್ದೇವೆ. ಆದ್ದರಿಂದ ವೈಯಕ್ತಿಕವಾಗಿ ಎಷ್ಟೇ ಕಷ್ಟವನ್ನು ಅನುಭವಿಸಿದರೂ ಸಹ ಕೊನೆಯವರೆಗೂ ನಾವು ಒಂದಾಗಿಯೇ ನಿಲ್ಲುತ್ತೇವೆ. ನಿಜಕ್ಕೂ ನಾನು ವಿಸ್ಮಯಾಘಾತಕ್ಕೆ ಒಳಗಾಗಿದ್ದೇನೆ. ನಿಮ್ಮ ಈ ನಡೆಯನ್ನು ಖಂಡಿಸುವಾಗ ಮರ್ಯಾದೆಯ ಸಾಮಾನ್ಯ ನಿಯಮಗಳನ್ನು ಗಮನಿಸದೇ ಇರಬಹುದು, ನನ್ನ ಭಾಷೆ ಸ್ವಲ್ಪ ಕಠಿಣವಾಗಿರಬಹುದು ಎಂಬ ಹೆದರಿಕೆ ನನಗಿದೆ. ಮುಚ್ಚುಮರೆಯಿಲ್ಲದೆ ಹೇಳಬೇಕೆಂದರೆ, ನನಗೆ ಬೆನ್ನಲ್ಲಿ ಚೂರಿ ಹಾಕಿದಂತೆನಿಸುತ್ತಿದೆ.”
ದೇಶಬಾಂಧವರಿಗೊಂದು ಸಂದೇಶ
1931ರ ಮಾರ್ಚ್ ಮೂರರಂದು ಅವರ ತಂದೆ ತಾಯಿ, ತಮ್ಮ ಕುಲ್ತಾರ್ ಸಿಂಗ್ ಸೇರಿದಂತೆ ಕುಟುಂಬದವರೆಲ್ಲಾ ಅವರನ್ನು ಭೇಟಿಯಾಗಲು ಬಂದಿದ್ದರು. ಭಗತ್‍ಸಿಂಗ್ ತಮ್ಮ ಎಂದಿನ ಶೈಲಿಯಲ್ಲಿಯೇ ಕ್ರಾಂತಿಕಾರಿ ಸ್ಫೂರ್ತಿ ಹಾಗೂ ಲವಲವಿಕೆಯೊಂದಿಗೆ ಮಾತನಾಡಿದರು. ಮುಂಬರಲಿದ್ದ ಮರಣ ಅವರ ಮಾನಸಿಕ ಸಮತೋಲನವನ್ನು ಯಾವುದೇ ರೀತಿಯಲ್ಲಿ ಹರಣಗೊಳಿಸಿರಲಿಲ್ಲ. ಕುಟುಂಬದವರಿಗೆ ಕಣ್ಣೀರಿಡದಂತೆ, ತಮ್ಮನ್ನು ನಗುನಗುತ್ತಾ ಕಳಿಸಿಕೊಡುವಂತೆ ಕೇಳಿಕೊಂಡರು. ಆದರೆ ಅವರ ತಮ್ಮ ಕುಲ್ತಾರ್‍ಸಿಂಗ್‍ರಿಗೆ ದುಃಖವನ್ನು ತಡೆದುಕೊಳ್ಳಲಾಗದೆ ಕಣ್ತುಂಬಿ ಬಂತು. ಇದನ್ನು ಕಂಡು ಭಗತ್ ಸಹ ಭಾವ ಪರವಶರಾದರು. ಅವರೆಲ್ಲರೂ ಜೈಲಿನಿಂದ ಹಿಂತಿರುಗಿದ ನಂತರ ಕುಲ್ತಾರರಿಗೆ ಭಗತ್ ಒಂದು ಪತ್ರ ಬರೆದರು. ಆ ಪತ್ರ ಅಣ್ಣ ತಮ್ಮನ ನಡುವಿನ ಬಾಂಧವ್ಯದ ಸಂಕೇತ ಮಾತ್ರವಾಗಿರದೆ, ಒಬ್ಬ ಕ್ರಾಂತಿಕಾರಿ ಸಾವನ್ನು ಹೇಗೆ ಸ್ವೀಕರಿಸಬೇಕೆಂಬುದಕ್ಕೆ ಉಜ್ವಲ ಸಾಕ್ಷಿಯ ದಾಖಲೆಯಾಗಿದೆ. ಆ ಪತ್ರದ ಮೂಲಕ ಅವರು ತಮ್ಮ ದೇಶಬಾಂಧವರಿಗೂ ಸಂದೇಶವನ್ನು ನೀಡಿದ್ದರು. ಅವರು ಆ ಪತ್ರದಲ್ಲಿ ಬರೆದದ್ದು, “ಇಂದು ನಿನ್ನ ಕಣ್ಣೀರನ್ನು ಕಂಡು ನನಗೆ ಬಹಳ ನೋವಾಯಿತು. ನಿನ್ನ ದನಿಯಲ್ಲಿ ದುಃಖವಿತ್ತು. ನಿನ್ನ ಕಣ್ಣೀರನ್ನು ನೋಡಲು ಸಾಧ್ಯವಿಲ್ಲ. ತಮ್ಮಾ, ಧೈರ್ಯವಾಗಿ ಓದನ್ನು ಮುಂದುವರೆಸು, ನಿನ್ನ ಬಗ್ಗೆ ಗಮನವಿರಲಿ. ಹತಾಶನಾಗಬೇಡ... ಇನ್ನೇನು ಬರೆಯಲಿ? ಇನ್ನೇನು ತಾನೆ ನಾನು ಹೇಳಬಲ್ಲೆ, ಕೇಳು. . .
ಮರ್ದನದ ಹೊಸ ವಿಧಾನಗಳನ್ನವರು ಹುಡುಕುತ್ತಲೇ ಇದ್ದಾರೆ
ಎಷ್ಟು ದೂರ ಸಾಗಿಯಾರೆಂದು ನಾವು ಕಾತರದಿಂದ ಕಾಯುತ್ತಿದ್ದೇವೆ.
ಜೀವನದ ಕುರಿತಾಗಿ ನಾವು ಕೋಪಗೊಳ್ಳುವುದೇಕೆ?
ನಮ್ಮದೊಂದು ವಿಭಿನ್ನ ಜಗತ್ತು, ಅದಕ್ಕಾಗಿ ನಾವು ಸಮರವನ್ನೇ ಸೆಣಸೋಣ.
ಓ ಪಕ್ಷದ ಬಂಧುವೇ - ಎನಗುಳಿದಿರುವುದು ಇನ್ನೊಂದೆರಡು ಘಳಿಗೆ ಮಾತ್ರ,
ಮುಂಜಾವಿನ ದೀಪ ನಾನು, ಇನ್ನೇನು ಆರಿಹೋಗಲಿದ್ದೇನೆ;
ಎನ್ನ ದೇಶದ ಬಂಧುಗಳೆ ಸಂತಸದಿ ಉಳಿಯಿರಿ, ಇನ್ನು ನಮ್ಮ ಕಥೆ,
ನಾವಿನ್ನು ಹೊರಟೆವು.
ವಿದಾಯ! ವಿದಾಯ ನಿಮಗೆ!
ಧೀರರಾಗಿರಿ ಎಂದೂ!
(ಮುಂದುವರೆಯುತ್ತದೆ)
(ಮುಂದುವರೆಯುತ್ತದೆ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ