[‘ದಿಸ್ ಲ್ಯಾಂಡ್ ಈಸ್ ಮೈನ್’ ಇಂಗ್ಲಿಷ್ ಸಿನಿಮಾದಲ್ಲಿ ಫ್ಯಾಸಿಸಂ ಪ್ರತಿರೋಧದ ಅದ್ಭುತ ಚಿತ್ರಣ]
ಮೊದಲನೆ ಮಹಾಯುದ್ಧದ ಕರಾಳ ನೆನಪುಗಳು ಮಾಸುವ ಮುನ್ನವೇ ಮೂರು ದಶಕಗಳ ನಂತರ ಯುರೋಪಿನ ಮೇಲೆ ಎರಡನೆ ವಿಶ್ವಯುದ್ಧದ ಕರಿನೆರಳು ಕವಿಯಿತು. ಹತ್ತೊಂಬತ್ತನೇ ಶತಮಾನದ ನಲವತ್ತರ ದಶಕದಲ್ಲಿ ಮಿಲಿಯಾಂತರ ಜನರನ್ನು ಬಲಿ ತೆಗೆದುಕೊಂಡು, ಅದಕ್ಕಿಂತ ಹೆಚ್ಚು ಪಟ್ಟು ಜನರನ್ನು ಅಂಗಹೀನರನ್ನಾಗಿ ಮಾಡಿ, ಮನೆ-ಸಂಸಾರಗಳನು ನಾಶ ಮಾಡಿದ ಎರಡನೆ ವಿಶ್ವಯುದ್ಧವನ್ನು ಆರಂಭಿಸಿದ್ದು ಜರ್ಮನಿ. ಆದರೆ ವಿಶ್ವಯುದ್ಧಕ್ಕೂ ಮುನ್ನ ಜರ್ಮನಿಯಲ್ಲಿ ಅದಿಕಾರಕ್ಕೇರಿದ ಹಿಟ್ಲರ್, ಆರ್ಯ ಜನಾಂಗದ ಶ್ರೇಷ್ಟತೆ, ಇತರ ಜನಾಂಗಗಳ ಕನಿಷ್ಟತೆ ಹಾಗೂ ಪರಧರ್ಮದ್ವೇಷಗಳನ್ನು ಹರಡಿ, ಜನಾಂಗೀಯ ದ್ವೇಷದ ಕಟ್ಟುಕಥೆಗಳನ್ನು, ಸುಳ್ಳುಪ್ರಚಾರಗಳನ್ನು ಬಂಡವಾಳ ಮಾಡಿಕೊಂಡು ಅಧಿಕಾರಕ್ಕೇರಿದನು. ತನ್ನ ಅಸತ್ಯದ ಗದ್ದುಗೆಯನ್ನು ಭದ್ರಪಡಿಸಿಕೊಳ್ಳಲು ಕ್ರೌರ್ಯದ ಪರಮಾವಧಿಯನ್ನು ಮುಟ್ಟಿದನು.
ತನ್ನನ್ನು ವಿರೋಧಿಸಿದ ಜನರ ಮೇಲೆ ‘ಯಾತನಾ ಶಿಬಿರ’ದಲ್ಲಿ ನಡೆಸಿದ ಹಿಂಸೆ, ಹೊರೆಗೆ ನಡೆಸಿದ ಕೊಲೆ, ಸುಲಿಗೆ, ಅತ್ಯಾಚಾರ, ಮನುಷ್ಯಹೀನ ನಡವಳಿಕೆಗಳು, ಇತಿಹಾಸದಲ್ಲಿ ಕ್ರೌರ್ಯದ ಹೊಸ ಅಧ್ಯಾಯಗಳನ್ನೇ ತೆರೆದವು. ಅದೆಲ್ಲವನ್ನೂ ಒಂದೇ ಪದದಲ್ಲಿ ಹೇಳುವುದಾದರೆ, ಫ್ಯಾಸಿಸಂ. ಹಿಟ್ಲರ್ ಮಾನವೀಯತೆ, ಸೂಕ್ಷ್ಮ ಸಂವೇದನೆ, ಸ್ವಾತಂತ್ರ್ಯ, ಸೋದರತೆ, ಸ್ವತಂತ್ರ ಅಭಿವ್ಯಕ್ತಿ - ಪ್ರಜಾತಂತ್ರದ ಎಲ್ಲಾ ಆಶಯಗಳನ್ನು ಬೂಟುಕಾಲಿನಡಿ ಹೊಸಕಿ ಹಾಕಿದನು. ಪ್ರಪಂಚವನ್ನೇ ತನ್ನ ಕಪಿಮುಷ್ಟಿಯಲ್ಲಿ ಹಿಡಿಯಲು ಪ್ರಯತ್ನಿಸಿದನು. ಇದೆಲ್ಲವನ್ನೂ ಮಾಡಿದ್ದು ಜರ್ಮನಿಯ ಕೈಗಾರಿಕೆ ಮನೆತನದವರಿಗೆ ಮಾರುಕಟ್ಟ ಒದಗಿಸಲು. ಅವರ ಸರಕುಗಳನ್ನು ಮಾರಲು ವಸಾಹತುಗಳನ್ನು ಸೃಷ್ಟಿಸಲು.
ಎಲ್ಲಿ ದಬ್ಬಾಳಿಕೆ, ಅನ್ಯಾಯ ಇರುತ್ತದೆಯೋ ಅಲ್ಲಿ ಪ್ರತಿರೋಧವೂ ಇರುತ್ತದೆ. ಹಾಗಾಗಿ, ಹಿಟ್ಲರ್‍ನ ಕುಕೃತ್ಯಗಳು ವಿರೋಧ ಕಾಣದೆ ಹೋಗಲಿಲ್ಲ. ಸ್ವಾತಂತ್ರ್ಯ ಪ್ರೇಮಿ, ಮನುಕುಲ ಪ್ರೇಮಿ ಜನರು ಪ್ರತಿರೋಧ ವ್ಯಕ್ತಪಡಿಸಿದರು. ಜೀವನದ ಹಂಗು ತೊರೆದು ಹೋರಾಡಿದರು. ದಮನಿತ ಜನರ ಸ್ವಾತಂತ್ರ್ಯ ಗೀತೆಯನ್ನು ಹಾಡಿದರು. ಹುತಾತ್ಮರಾದರು. ನಿಜವಾದ ಧೈರ್ಯದ ಸಂಕೇತವಾದರು. ಅವರಲ್ಲಿ ಸಾಮಾನ್ಯ ಜನರು, ಕವಿಗಳು ಗಾಯಕರು, ಕಲಾವಿದರು, ಎಲ್ಲಾ ಜನರೂ ಇದ್ದರು. ನಿರಂಕುಶ ಪ್ರಭುತ್ವದ ವಿರೋಧ ಅವರೆಲ್ಲರ ಸ್ನೇಹವನ್ನು ಬೆಸೆದಿತ್ತು.
ಕಲಾವಿದರು ಸಮಾಜಕ್ಕೆ ಅತೀತವಲ್ಲ. ಆ ಕಾರಣದಿಂದಲೇ ಅವರೂ ತಮ್ಮ ಪ್ರತಿರೋಧದ ಧ್ವನಿಯನ್ನು ಕಲೆಯಲ್ಲಿ ಅಭಿವ್ಯಕ್ತಿಸಿದರು. ಕೇವಲ ತನ್ನಾನಂದ, ತನ್ನೊಳಗಿನ ತಾಕಲಾಟ, ವ್ಯಕ್ತಿಗತ ಭಾವನೆ, ಸಂಕುಚಿತ ನೆಲೆಗಟ್ಟುಗಳನ್ನು ಮೀರಿ ಸಮುದಾಯದ ತಲ್ಲಣಗಳನ್ನು, ನೋವು-ನಲಿವುಗಳನ್ನು ತಮ್ಮ ವಸ್ತುಗಳನ್ನಾಗಿ ಮಾಡಿಕೊಂಡರು. ಹಾಡುಗಳನ್ನು ಕಟ್ಟಿದರು. ಕಥೆಗಳನ್ನು ಬರೆದರು. ನಾಟಕಗಳನ್ನು ಆಡಿದರು. ಚಿತ್ರಗಳನ್ನು ಬಿಡಿಸಿದರು. ನೃತ್ಯಗಳನ್ನು ಸಂಯೋಜಿಸಿದರು. ಪ್ರತಿರೋಧದ ಉತ್ಸಾಹಕ್ಕೆ ಪುಷ್ಟಿ ನೀಡಿದರು. ಇದರೊಂದಿಗೆ ಸೇರುವುದರಲ್ಲಿ ಸರ್ವಕಲೆಗಳ ಸಮನ್ವಯ - ಸಿನಿಮಾ ರಂಗವೇನೂ ಹಿಂದೆ ಬೀಳಲಿಲ್ಲ. ವಿವಿಧ ಆಯಾಮಗಳಲ್ಲಿ, ವಿವಿಧ ಸ್ತರಗಳಲ್ಲಿ, ವಿವಿಧ ಭಾವಗಳಲ್ಲಿ ಫ್ಯಾಸಿವಾದದ ಕರಾಳ ಮುಖಗಳನ್ನು ಚಲನಚಿತ್ರ ತೆರೆದಿಟ್ಟಿತು.
‘ದಿಸ್ ಲ್ಯಾಂಡ್ ಈಸ್ ಮೈನ್’ ಚಲನಚಿತ್ರವು ನಾಜಿ ವಿರೋಧಿ ಸಿನಿಮಾಗಳ ಅಗ್ರಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆ. ಇದರಲ್ಲಿ ನಾಜಿóಗಳ ಕ್ರೌರ್ಯದ ಹಸಿಹಸಿ ಚಿತ್ರಣವಿಲ್ಲ. ಆದರೂ ಮನಸಿಗೆ ಆಳವಾದ ನೋವನ್ನುಂಟು ಮಾಡುತ್ತದೆ. ಶೌರ್ಯ, ಧೀರತ್ವದ ಅತಿರಂಜಕ ವ್ಯಕ್ತಿಗಳಿಲ್ಲ. ಆದರೂ ಅಸಾಧಾರಣ ಸಾಹಸದ ಪರಿಚಯವಾಗುತ್ತದೆ. ಸಂದರ್ಭಗಳು ಬಂದಾಗ ಮನದಾಳದೊಳಗೆ ನೊಂದವರ ಕುರಿತು ಪ್ರೀತಿಯಿದ್ದರೆ, ಸಾಮಾನ್ಯರೂ ಸಹ ಅಸಾಮಾನ್ಯರಾಗುತ್ತಾರೆ. ಏಕೆಂದರೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುವುದು, ಪ್ರಕಟವಾಗುವುದು, ಗಟ್ಟಿಯಾಗುವುದು, ಅವುಗಳನ್ನು ಪರೀಕ್ಷಿಸುವ ಸಮಯ ಬಂದಾಗ. ಅಂಥದೊಂದು ಚಿತ್ರಣವನ್ನು ನಿರ್ದೇಶಕ ಜಾನ್ ರೆನಾಯ್ ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ.
ಈ ಸಿನಿಮಾದ ಕಥಾವಸ್ತು ಒಂದು ಆಕ್ರಮಿತ ಪ್ರದೇಶದ ಸಂಕಷ್ಟದ ಹಾಗೂ ಪ್ರತಿಭಟನೆಯ ವಿಷಯ. ಅದು ಯಾವ ದೇಶದ್ದಾದರೂ ಆಗಬಹುದು, ಯಾವ ಪ್ರಭುತ್ವ ಹಾಗೂ ಜನರದ್ದಾದರೂ ಆಗಬಹುದು. ಈ ಸಾರ್ವತ್ರಿಕತೆಯನು ತಿಳಿಸಲೆಂದೇ ಜಾನ್ ರೆನಾಯ್ ಕಥಾಸ್ಥಳವನ್ನು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತಗೊಳಿಸಿಲ್ಲ. ಅವರು ತಮ್ಮ ಚಿತ್ರ ನಿರ್ಮಾಣದ ಸಂದರ್ಭದಲ್ಲಿ ಹಿಟ್ಲರ್ ಬೇರೆ ಬೇರೆ ದೇಶಗಳನ್ನು ಆಕ್ರಮಣ ಮಾಡಿ ವಶಪಡಿಸಿಕೊಳ್ಳುತ್ತಿದ್ದರಿಂದ, ಸಿನಿಮಾದ ಸ್ಥಳವನ್ನು ಯುರೋಪಿನ ಯಾವುದೋ ಒಂದು ಪ್ರದೇಶವೆಂದು ಆರಂಭದಲ್ಲಿ ಶೀರ್ಷಿಕೆಯಲ್ಲೇ ಸ್ಪಷ್ಟಪಡಿಸುತ್ತಾರೆ. ಅದು ಯುರೋಪೇ ಏಕಾಯಿತೆಂದರೆ, ನಾಜಿóಗಳ ಕುಕೃತ್ಯದ, ಎರಡನೇ ವಿಶ್ವಯುದ್ಧದ ಯಾತನಾ ಕೇಂದ್ರ ಅದಾಗಿತ್ತು. ಜೊತೆಗೆ ಪ್ರಥಮ ದೃಶ್ಯವೇ ಬಹಳ ಮಾರ್ಮಿಕವಾಗಿ ತೆರೆದುಕೊಳ್ಳುತ್ತದೆ. ಒಂದನೇ ವಿಶ್ವಯುದ್ಧದಲ್ಲಿ ಜೀವಕೊಟ್ಟ ಧೀರ ಯೋಧರ ನೆನಪಿನಲ್ಲಿ ಸ್ಥಾಪಿಸಿದ ಪ್ರತಿಮೆಯ ಹಿನ್ನೆಲೆಯಲ್ಲಿ ನಾಜಿ ಸೈನಿಕರು ನಗರವನ್ನು ಆಕ್ರಮಿಸಿಕೊಂಡು, ತಮ್ಮ ಆಳ್ವಿಕೆಯನ್ನು ಸ್ಥಾಪಿಸುತ್ತಾರೆ.
ಇಡೀ ಸಿನಿಮಾ ನಾಜಿ ಅಥವಾ ಫ್ಯಾಸಿವಾದದ ಅಸತ್ಯಗಳನ್ನು, ಮುಖವಾಡಗಳನ್ನು ಸಮರ್ಥವಾಗಿ ಬಯಲುಪಡಿಸುತ್ತಾ ಸಾಗುತ್ತದೆ. ‘ಶಾಲೆಗಳು, ಪೊಲೀಸ್, ನ್ಯಾಯಾಲಯಗಳು ಸ್ವತಂತ್ರವಾಗಿರುತ್ತವೆ. ವಿಚಾರಣೆ ಮುಕ್ತವಾಗಿರುತ್ತದೆ’ ಎಂದು ಮೇಯರ್ ಹೆನ್ರಿ ಮೆಲ್‍ವೆಲೆ ಹೆಸರಿನಲ್ಲಿ ಘೋಷಿಸುತ್ತಲೇ, ಹಂತ ಹಂತವಾಗಿ ತಮಗೆ ಬರುವ ವಿರೋಧವನ್ನು ಹತ್ತಿಕ್ಕುತ್ತಾ ಹೋಗುತ್ತದೆ. ಫ್ಯಾಸಿವಾದಿಗಳು ಯಾವತ್ತೂ ಮೊದಲು ಕೈ ಹಾಕುವುದೇ ಬೌದ್ಧಿಕ ಕ್ಷೇತ್ರಕ್ಕೆ. ಜನರನ್ನು ಬೌದ್ಧಿಕವಾಗಿ ದಿವಾಳಿ ಮಾಡಿದರೆ, ಭ್ರಷ್ಟರನ್ನಾಗಿ ಮಾಡಿದರೆ, ಫ್ಯಾಸಿವಾದದ ನಿರಂಕುಶ ಆಳ್ವಿಕೆ ತಕರಾರಿಲ್ಲದೆ ನಡೆಯುತ್ತದೆ. ಅದರಿಂದಾಗಿಯೇ ನಾಜಿ ಅಧಿಕಾರಿ ಮೇಜರ್ ವಾನ್ ಕೆಲ್ಲರ್ ಅಲ್ಲಿನ ಶಾಲೆಯ ಪುಸ್ತಕಗಳಲ್ಲಿ ಪ್ರಜಾತಂತ್ರದ ಚೈತನ್ಯವಿರುವ ಹಾಳೆಗಳನ್ನು ಹರಿಯಲು, ಪ್ಲೆಟೊ ಹಾಗೂ ಅರಿಸ್ಟಾಟಲನ ಪುಸ್ತಕಗಳನ್ನು ಸುಡುವ ನಾಜಿ ಸಹಭಾಗಿಯಾದ ನಗರದ ಮೇಯರ್ ಹೆನ್ರಿ ಮ್ಯಾನ್‍ವಿಲೆ ಮೂಲಕ ಆಜ್ಞಾಪಿಸುತ್ತಾನೆ.
ಆ ಶಾಲೆಯ ಮುಖ್ಯಸ್ಥರಾದ ಪ್ರೊ.ಸೊರೆನ್ ಪ್ರಜಾತಂತ್ರ ಪ್ರೇಮಿ. ಸ್ವಾತಂತ್ರ್ಯದ ಪಕ್ಷಪಾತಿ ಹಾಗೂ ನ್ಯಾಯನಿಷ್ಠ. ಆದ್ದರಿಂದಲೇ ಅವನ ಪ್ರಭಾವವನ್ನು ಶಾಲೆಯ ಶಿಕ್ಷಕರಲ್ಲೂ ಕಾಣಬಹುದು. ಲೂಯಿ ಮಾರ್ಟಿನ್ ಎನ್ನುವ ಶಿಕ್ಷಕಿ ತಲೆಬಾಗದವಳು. ಅವಳಲ್ಲೂ ಪರಾಧೀನತೆಯ ವಿರೋಧಿ ಭಾವ ಪುಟಿಯುತ್ತಿರುತ್ತದೆ. ಆದ್ದರಿಂದಲೇ ಅವಳಿಗೆ ನಿಷೇಧಿತ ಹಾಳೆಗಳನ್ನು ಹರಿಯಲು ಮನಸ್ಸಿಲ್ಲ. ಅಕಸ್ಮಾತ್ ಹರಿದರೂ ಅದನ್ನು ಜೋಪಾನವಾಗಿಟ್ಟುಕೊಂಡು ಮತ್ತೆ ಅಂಟಿಸುವ ಬಯಕೆ ಹೊಂದಿದವಳು. ಆದರೆ ಆಕೆಯ ಸಹೋದ್ಯೋಗಿ ಶಿಕ್ಷಕ, ಆಲ್ಬರ್ಟ್ ಲೂರಿ ಅಂಜುವ ಸ್ವಭಾವದ ವ್ಯಕ್ತಿ. ಅದಕ್ಕೆ ಆತನ ತಾಯಿ ಎಮ್ಮಾ ಲೂರಿಯೂ ಕಾರಣ. ಮಗನನ್ನು ವಿಪರೀತ ಹಚ್ಚಿಕೊಂಡು, ಆತನನ್ನು ಚಿಕ್ಕ ಮಗುವಿನಂತೇ ನೋಡುವ ಕುರುಡು ವ್ಯಾವೋಹದ ತಾಯಿ. ಆದರೆ ಲೂರಿಗೆ ಪ್ರೊ.ಸೊರೆನ್ ಮೇಲೆ ಅಗಾಧ ಗೌರವವಿದೆ. ತನ್ನ ಅಂಜಿಕೆಯ ಸ್ವಭಾವದ ಕುರಿತು ಬೇಸರವಿದೆ. ಅದು ಎರಡು ಘಟನೆಗಳಲ್ಲಿ ಕಾಣಿಸುತ್ತದೆ.
ಲೂಯಿ ಮಾರ್ಟಿನ್ ಕಷ್ಟವಾದ ಹಾಳೆಗಳನ್ನು ಹರಿಯುವ ಕೆಲಸವನ್ನು ಲೂರಿ ಮಾಡಿಬಿಡುತ್ತಾನೆ. ಅಥವಾ ಬಾಂಬ್ ದಾಳಿಯ ಸೂಚನೆ ಬಂದಾಗ, ಅತ್ಯಂತ ಭಯವಿಹ್ವಲನಾಗಿ, ಮನೆಯಲ್ಲಿದ್ದ ತಾಯಿಯನ್ನೂ ಕರೆದುಕೊಂಡು, ಮಕ್ಕಳತ್ತ ಗಮನವೀಯದೆ ಹೆದರಿಕೋಂಡು ನೆಲಮಾಳಿಗೆಯಲ್ಲಿ ಕುಳಿತಿರುತ್ತಾನೆ. ಶಿಕ್ಷಕಿ ಲೂಯಿ ಮಾತ್ರ ಮಕ್ಕಳಿಗೆ ಧೈರ್ಯ ತುಂಬುತ್ತಾ, ಲೂರಿಯನ್ನೂ ಸಮಾಧಾನಪಡಿಸುತ್ತಾ ಪ್ರೊ.ಸೊರೆನ್ ಸಹಾಯದಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಾಳೆ. ಇಷ್ಟೆಲ್ಲಾ ಆದರೂ ಆಕೆ ಲೂಯಿಯನ್ನು ಸಹಾನುಭೂತಿಯಿಂದಲೇ ನೋಡುತ್ತಾಳೆ. ಲೂರಿಗೆ ತನ್ನ ಹೆದರಿಕೆಯ ಮನಸ್ಥಿತಿಯ ಬಗ್ಗೆ ಬೇಸರವಾಗಿ ‘ತಾನು ಹೇಡಿ’ಯೆಂದು ಪ್ರೊ.ಸೊರೆನ್ ಜೊತೆ ಅತ್ತುಬಿಡುತ್ತಾನೆ. ಈ ಅಂಜಿಕೆಯ ಸ್ವಭಾವದಿಂದಲೇ ತಾನು ಲೂಯಿಯನ್ನು ಪ್ರೀತಿಸುತ್ತಿರುವುದನ್ನು ಹೇಳದೆ ಗುಪ್ತವಾಗಿಟ್ಟುಕೊಳ್ಳುತ್ತಾನೆ.
ಒಂದು ಆಕ್ರಮಿತ ಪ್ರದೇಶ ಎಲ್ಲಿಯವರೆಗೆ ದಬ್ಬಾಳಿಕೆಯನ್ನು ಸಹಿಸುತ್ತದೆ! ಅದರ ಸಹನಾ ಶಕ್ತಿ ಮೀರಿದಾಗ, ಧೈರ್ಯದ ಕಿಡಿಗಳು ಹಾರಿದಾಗ ಪ್ರತಿರೋಧ ಬರುತ್ತದೆ. ಅದು ಲೂಯಿ ಮಾರ್ಟಿನ್ನಳ ತಮ್ಮ ಪಾಲ್ ಮಾರ್ಟಿನ್‍ನಿಂದ ಆರಂಭವಾಗುತ್ತದೆ. ಅವನು ಮೇಜರ್ ವಾನ್ ಕೆಲ್ಲರ್ ನೇತೃತ್ವದಲ್ಲಿ ನಡೆಯುತ್ತಿದ್ದ ಮೆರವಣಿಗೆ ಮೇಲೆ ಬಾಂಬ್ ಸ್ಫೋಟಿಸುತ್ತಾನೆ. ನಾಜಿಗಳಿಗೆ ಅವನನ್ನು ಹಿಡಿಯಲು ಸಾಧ್ಯವಾಗುವುದಿಲ್ಲ. ತನಿಖೆ ಆರಂಭವಾಗುತ್ತದೆ. ಆದರೆ ಫ್ಯಾಸಿವಾದಿಗಳ ತನಿಖೆಯ ರೀತಿಯೇ ಬೇರೆ. ಅದು ಪ್ರಜಾತಂತ್ರದಲ್ಲಿ ನಡೆಯುವ ವೈಜ್ಞಾನಿಕ ತನಿಖೆಯಲ್ಲ, ಹಿಂಸಾತ್ಮಕ ತನಿಖೆ.
ಆಕ್ರಮಿತ ನಾಜಿಗಳ ವಿರುದ್ಧ ಬಂಡೇಳಲು ಪ್ರೇರಿಸುವಂತಹ ಲೇಖನಗಳನ್ನು ‘ಲಿಬರ್ಟಿ’ ಪತ್ರಿಕೆಯು ಪ್ರಕಟಿಸುತ್ತಿರುತ್ತದೆ. ಅದರ ಬರಹಗಾರನ ಮೇಲೆ ಮೇಜರ್ ವಾನ್ ಕೆಲ್ಲರ್‍ನ ಕಣ್ಣಿರುತ್ತದೆ. ಅದರ ಭಾಷಾ ಶೈಲಿ, ಪ್ರಬುದ್ಧ ಬರವಣಿಗೆಗಳನ್ನು ನೋಡಿ, ಮೇರುಕೃತಿ ಸಾಹಿತ್ಯಗಳನ್ನು ಓದುವ ಹವ್ಯಾಸವಿದ್ದ ಪ್ರೊ.ಸೊರೆನ್ ಎಂಬುದು ಅವನಿಗೆ ಖಚಿತವಾಗಿರುತ್ತದೆ. ಬಾಂಬಿನ ಘಟನೆಯನ್ನು ನೆಪ ಮಾಡಿಕೊಂಡು ಪ್ರೊ.ಸೊರೆನ್ ಸೇರಿದಂತೆ ಹತ್ತು ಜನರನ್ನು ಒತ್ತೆಯಾಳಾಗಿಟ್ಟುಕೊಂಡು, ಬಾಂಬ್ ಹಾಕಿದವನ ಹೆಸರನ್ನು ಬಹಿರಂಗಪಡಿಸಲು ಜನರನ್ನು ಒತ್ತಾಯಿಸುತ್ತಾನೆ. ಇಲ್ಲದಿದ್ದರೆ ಎಲ್ಲರನ್ನು ಸಾಯಿಸುವ ಬೆದರಿಕೆಯನ್ನೂ ಹಾಕುತ್ತಾನೆ. ಪ್ರೊ.ಸೊರೆನ್‍ರವರ ಬಂಧನದ ಸಮಯದಲ್ಲಿ ಶಿಕ್ಷಕ ಲೂರಿ ತನ್ನ ಅಂಜಿಕೆಯನ್ನು ಮರೆತು, ಒಂದು ಸಣ್ಣ ಪ್ರತಿಭಟನೆ ವ್ಯಕ್ತಪಡಿಸುತ್ತಾನೆ. ಏಕೆಂದರೆ ನಾಜಿóಗಳು ಅವನ ಆದರ್ಶವ್ಯಕ್ತಿಯನ್ನು ಬಂಧಿಸುತ್ತಿದ್ದರು.
ನಾಜಿóಗಳು ಇತರೆ ದೇಶಗಳಲ್ಲಿ ತಮ್ಮ ಆಳ್ವಿಕೆಯನ್ನು ಸ್ಥಾಪಿಸಲು, ನಿರಾತಂಕವಾಗಿ ಮುಂದುವರೆಸಲು ಹೂಡುತ್ತಿದ್ದ ತಂತ್ರಗಳಲ್ಲಿ ಅಲ್ಲಿಯವರನ್ನೇ ತಮ್ಮ ಸಹಭಾಗಿಗಳನ್ನಾಗಿ ಮಡಿಕೊಳ್ಳುತ್ತಾರೆ. ಸ್ಥಳೀಯ ಅವಕಾಶವಾದಿಗಳು ನಾಜಿóಗಳ ಜೊತೆ ಕೈ ಸೇರಿಸಿ, ತಾವು ಉದ್ಧಾರವಾಗುತ್ತಾರೆ, ತಮ್ಮ ಜನರನ್ನು ನಾಶ ಮಾಡುತ್ತಾರೆ. ಈ ಅಂಶವನ್ನು ‘ದಿಸ್ ಲ್ಯಾಂಡ್ ಈಸ್ ಮೈನ್’ ಪರಿಣಾಮಕಾರಿಯಾಗಿ ಚಿತ್ರಿಸಿದೆ.
ಆ ನಗರದ ಮೇಯರ್, ರೈಲ್ವೆ ಸೂಪರಿಂಟೆಂಡ್ ಜಾರ್ಜ್ ಲ್ಯಾಂಬೆರ್ಟ್, ಮಾಂಸದಂಗಡಿಯ ನೋಬಲ್, ಇನ್ನಿತರರು ಅಂತಹ ಸಹಭಾಗಿಗಳಾಗಿರುತ್ತಾರೆ; ತಮ್ಮ ವ್ಯಾಪಾರ, ಆಸ್ತಿ, ಸ್ಥಾನಮಾನಗಳಿಗಾಗಿ. ಮೇಜರ್ ವಾನ್ ಕೆಲ್ಲರ್ ಇವರ ಮೇಲೆ ಒತ್ತಡ ಹೇರಿ ಬಾಂಬ್ ದಾಳಿಯ ಹಿಂದಿದ್ದವನನ್ನು ಹುಡುಕುವ ಯತ್ನ ಮಾಡುತ್ತಾನೆ. ಮೇಯರ್ ಮತ್ತು ನೋಬಲ್ ಸಂಪೂರ್ಣವಾಗಿ ಶರಣಾಗಿದ್ದರೆ, ಲ್ಯಾಂಬರ್ಟ್ ಸ್ವಲ್ಪ ತೊಳಲಾಡುತ್ತಿರುತ್ತಾನೆ. ಅವನು ಮತ್ತು ಲೂಯಿ ಮಾರ್ಟಿನ್ ಪ್ರೀತಿಸುತ್ತಿರುತ್ತಾರೆ. ಲ್ಯಾಂಬರ್ಟ್ ತನ್ನೊಳಗಿನ ಸಂಘರ್ಷದಲ್ಲಿ ನರಳುತ್ತಿರುತ್ತಾನೆ. ಅವನಿಗೆ ನಾಜಿóಗಳೊಂದಿಗೆ ಮುಖಾಮುಖಿಯಾಗುವ ಧೈರ್ಯವಿಲ್ಲ. ಇಂತಹ ಸಂದರ್ಭದಲ್ಲಿ ಎಲ್ಲರೂ ಯಾವ ಪಕ್ಷ ವಹಿಸುತ್ತಾರೆನ್ನುವ ಸ್ಪಷ್ಟ ನಿಲುವನ್ನು ಪ್ರಕಟಿಸಲೇಬೇಕಾದ ಸಂದರ್ಭ ಬರುತ್ತದೆ.
ಪಾಲ್, ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಿ ತಪ್ಪಿಸಿಕೊಂಡು ಅಕ್ಕ ಲೂಯಿಯ ಮನೆಗೆ ಯಾರಿಗೂ ತಿಳಿಯದಂತೆ ಬರುತ್ತಾನೆ. ದುರದೃಷ್ಟಕ್ಕೆ ಲೂರಿಯ ತಾಯಿ ನೋಡಿಬಿಡುತ್ತಾಳೆ. ಆ ದಿನ ಲೂಯಿ ಮನೆಗೆ ಲೂರಿಯು ರಾತ್ರಿಯೂಟಕ್ಕೆ ಬಂದಿರುತ್ತಾನೆ. ಅವನಿಗೆ ಬಾಂಬ್ ಸ್ಫೋಟ, ಅದರ ಹಿಂದಿನಿಂದಲೇ ಪಾಲ್‍ನ ಆಗಮನದಿಂದ ಭಯ ಉಂಟಾಗುತ್ತದೆ. ಉರಿಯುವ ಗಾಯಕ್ಕೆ ಉಪ್ಪು ಸವರಿದಂತೆ ನಾಜಿó ಸೈನಿಕರು ತಲಾಷ್ ಮಾಡಲು ಮನೆಗೆ ಬಂದಾಗ ಭಯಭೀತನಾಗುತ್ತಾನೆ. ಅವನು ಮಾತನಾಡುವುದನ್ನು ತಪ್ಪಿಸಲೆಂದೇ ಪಾಲ್ ಅಭ್ಯಾಸವಿಲ್ಲದ ಲೂರಿಗೆ ಸಿಗರೇಟ್ ಹತ್ತಿಸುತ್ತಾನೆ. ಅವನಿಗೆ ಸಿಗರೇಟಿನ ಘಾಟಿನಿಂದ ಉಂಟಾದ ಕೆಮ್ಮಿನಿಂದಾಗಿ ಸೈನಿಕರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಡಲಾಗುವುದಿಲ್ಲ. ಸೈನಿಕರು ಅಲ್ಲಿಗೆ ಬಂದ ಲೂರಿಯ ತಾಯಿಯ ಗಲಾಟೆಯಿಂದಾಗಿ ವಾಪಸ್ ಹೋದರೂ, ಅನುಮಾನ ಉಳಿದಿರುತ್ತದೆ. ಮರುದಿನ ಲೂರಿಯನ್ನು ಬಂಧಿಸುತ್ತಾರೆ. ಅಲ್ಲಿ ಎಮ್ಮಾಳ ಯಾವ ಬೆದರಿಕೆ, ಕೂಗಾಟ, ಗಲಾಟೆಗಳು ಸಹಾಯಕ್ಕೆ ಬರುವುದಿಲ್ಲ. ತನ್ನ ಮಗನನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂಬ ಕುರುಡು ವ್ಯಾಮೋಹದಿಂದ ಲ್ಯಾಂಬರ್ಟ್‍ಗೆ ಪಾಲ್ ಬಗ್ಗೆ ತಿಳಿಸುತ್ತಾಳೆ. ಲ್ಯಾಂಬರ್ಟ್ ಮೇಯರ್ ಜೊತೆ ಮಾತನಾಡಿಕೊಂಡು ಮೇಜರ್ ವಾನ್ ಕೆಲ್ಲರ್‍ಗೆ ತಿಳಿಸುತ್ತಾನೆ. ಅವನು ಅಪರಾಧಿ ಮನೋಭಾವದಿಂದ ನರಳಿ ಪಾಲ್‍ಗೆ ಸೂಚನೆ ಕೊಟ್ಟರೂ ಸಹ ಅದು ಉಪಯೋಗವಾಗುವುದಿಲ್ಲ. ಅವರು ಪಾಲ್‍ನನ್ನು ಕೊಲ್ಲುತ್ತಾರೆ.
ಜೈಲಿನಿಂದ ಸ್ವತಂತ್ರನಾಗಿ ಬಂದ ಲೂರಿ, ತಾಯಿಯ ತಡೆಯನ್ನೂ ಲೆಕ್ಕಿಸದೆ, ಲೂಯಿಯನ್ನು ನೋಡಲು ಮನೆಗೆ ಬರುತ್ತಾನೆ. ಅಲ್ಲಿ ಲೂಯಿ ಮತ್ತು ಪಾಲ್ ಪ್ರಿಯತಮೆ ಜೂಲಿ ಗ್ರಾಂಟ್ ಪಾಲ್‍ನ ಸಾವಿಗಾಗಿ ಅಳುತ್ತಿರುತ್ತಾರೆ. ಆದರೆ ಲೂಯಿಯನ್ನು ಜೈಲಿನಿಂದ ಬಿಡುಗಡೆ ಮಾಡಿದ್ದಾರೆಂದರೆ, ಲೂಯಿಯೇ ಪಾಲ್ ಬಗ್ಗೆ ಹೇಳಿರಬೇಕೆಂದು ತಪ್ಪಾರ್ಥ ಮಾಡಿಕೊಂಡ ಲೂರಿ ಲೂಯಿಯನ್ನು ಮನೆಯಿಂದ ಹೊರದಬ್ಬುತ್ತಾಳೆ. ಇದರಿಂದ ದಿಗ್ಭ್ರಾಂತನಾದ ವಿಷಯ ತಿಳಿದುಕೊಳ್ಳಲು ಯತ್ನಿಸುತ್ತಿದ್ದ ಲೂರಿಗೆ, ಸ್ವತಃ ತಾಯಿಯೇ ಸತ್ಯ ತಿಳಿಸಿದಾಗ ಆಘಾತವಾಗುತ್ತದೆ. ಇಲ್ಲಿ ರೆನಾಯ್ ಸೂಕ್ಷ್ಮವಾದ ಅಂಶವನ್ನು ತೋರಿಸುತ್ತಾರೆ. ಮಕ್ಕಳ ಮೇಲೆ ಅಥವಾ ಯಾರ ಮೇಲಾದರೂ ತೀವ್ರವಾದ ಪ್ರೀತಿಯಿರಬೆಕು, ಅದರೆ ವ್ಯಾಮೋಹವಿರಬಾರದು. ಅದು ಕಣ್ಣನ್ನು ಕುರುಡು ಮಾಡುತ್ತದೆ. ಹೃದಯವನ್ನು ಸಂಕುಚಿತಗೊಳಿಸುತ್ತದೆ; ಸಮುದಾಯಕ್ಕೆ ವಿಪತ್ಕಾರಿಯಾಗುತ್ತದೆ. ವ್ಯಕ್ತಿ ಒಳ್ಳೆಯವನಾದರೂ ಸ್ವಾರ್ಥಪರನನ್ನಾಗಿ ಮಾಡಿಬಿಡುತ್ತದೆ. ಅದಕ್ಕೇ ತಾಯಿ ಎಮ್ಮಾ ತನ್ನ ಮಗನ ಸುಖಕ್ಕಾಗಿ ದೇಶದ ಹಿತವನ್ನು ಬಲಿ ಕೊಟ್ಟಳು. ಇದೇ ವ್ಯಾಮೋಹ ಅಪಾಯ.
ಪಾಲ್‍ನ ಸಾವಿಗೆ ಕಾರಣನಾದ ಜಾರ್ಜ್ ಲ್ಯಾಂಬರ್ಟ್‍ನನ್ನು ಕೊಲ್ಲಲು ಲೂರಿ ಅವನ ಆಫೀಸಿಗೆ ನುಗ್ಗುತ್ತಾನೆ. ಆದರೆ ಅಷ್ಟರೊಳಗೆ ತನ್ನೊಳಗಿನ ದ್ವಂದ್ವವನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಲ್ಯಾಂಬರ್ಟ್ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ದುರದೃಷ್ಟವಶಾತ್, ಸಾಂದರ್ಭಿಕವಾಗಿ ಲೂರಿಯೇ ಕೊಲೆಗಾರನೆಂದು ಬಂಧನಕ್ಕೆ ಒಳಗಾಗುತ್ತಾನೆ. ವಿಚಾರಣೆ ಆರಂಭವಾಗುತ್ತದೆ. ಈ ವಿಚಾರಣೆಯನ್ನು ರೆನಾಯ್, ಪ್ರತಿರೋಧದ ಮಹತ್ವ, ಫ್ಯಾಸಿವಾದದ ಕರಾಳ ಮುಖ, ಧೈರ್ಯ, ಆಳ್ವಿಕರ ಸಹಭಾಗಿಗಳ ರಾಜಿ, ನಾಜಿó ತಂತ್ರಗಳು – ಇವೆಲ್ಲವನ್ನೂ ಚರ್ಚೆಗೆ ತರಲೆಂದೇ ನ್ಯಾಯಾಲಯದಲ್ಲಿ ಮುಕ್ತ ವಿಚಾರಣೆಯಿರುತ್ತದೆ ಎಂಬ ಸ್ಥಿತಿಯನ್ನು ಸೃಷ್ಟಿಸಿಕೊಂಡಿದ್ದಾರೆ. ವಾಸ್ತವದಲ್ಲಿ ಹಾಗಿಲ್ಲದಿರಬಹುದು. ಯಥಾವತ್ ಚಿತ್ರಣದಿಂದ ಉದ್ದೇಶ ಪೂರೈಕೆಯಾಗದಿದ್ದಾಗ, ಇಂತಹ ವಾಸ್ತವ ಎನಿಸುವಂತಹ ಕಲ್ಪನೆಗಳನ್ನು ಸೃಷ್ಟಿಸಿಕೊಳ್ಳಬಹುದು. ಅದೇ ಕಲೆ. ಮತ್ತೆ ಕೆಲವೊಮ್ಮೆ ನಾಜಿಗಳು ತೋರಿಕೆಗೆ, ತಮಗೆ ಅಪಾಯ ಎನಿಸದಿರುವವರೆಗೂ ಇಂತಹ ಸಡಿಲತೆಗಳನ್ನು ಹೊಂದಿರುತ್ತಾರೆ. ಅವರು ತಮಗೆ ಬೇಕೆನಿಸಿದಾಗ ಯಾವ ಬದಲಾವಣೆಯನ್ನಾದರೂ ಮಾಡಬಹುದಲ್ಲ.
ಪುಕ್ಕಲು ಸ್ವಭಾವದ, ನಾಚಿಕೆಯ ವ್ಯಕ್ತಿತ್ವವಿರುವ ಲೂರಿಯು ವಿಚಾರಣೆಯ ಸಂದರ್ಭದಲ್ಲಿ ಕೋರ್ಟಿನಲ್ಲಿ ನೀಂತು ಮಾತನಾಡಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಅವನು ಆರೋಪಿಯ ಕಡೆಯ ಭಾಷಣದಲ್ಲಿ ಸ್ವಲ್ಪ ಧೈರ್ಯದಿಂದ ಮಾತನಾಡುತ್ತಾನೆ. “ನಾನು ಲಾಯರ್ ಸಹಾಯ ಬೇಡವೆಂದೆ, ಕಾರಣ ನನ್ನ ರಕ್ಷಣೆಗಿರುವುದು ಸತ್ಯ. ಅದು ಗೊತ್ತಿರುವುದು ನನಗೊಬ್ಬಿಗೇ” ಎಂದು ಆರಂಭಿಸಿ, ‘ತಾನು ಅಂಜಿಕೆಯವನು ಹೊರಗೆ, ಉಳಿದವರು ಹೊರಗೆ ಧೈರ್ಯಸ್ಥರಂತೆ ಕಂಡರೂ, ಒಳಗೆ ಅಂಜುಬುರುಕರು” ಎನ್ನುತ್ತಾ ನಾಜಿಗಳೊಂದಿಗೆ ಕೈ ಸೇರಿಸಿದವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುತ್ತಾನೆ. ಲೂರಿಯು ತನ್ನ ನಿರೀಕ್ಷೆಗೂ ಮೀರಿ ಮಾತನಾಡುತ್ತಿರುವುದನ್ನು ಕಂಡು, ಅದರ ಅಪಾಯವನ್ನು ಗ್ರಹಿಸಿದ ಪ್ರಾಸಿಕ್ಯೂಟರ್ ಮತ್ತೊಂದು ಸಾಕ್ಷಿಯಿದೆ ಎನ್ನುತ್ತಾ ಆರೋಪಿ ಕಡೆ ಭಾಷಣಕ್ಕೆ ಕತ್ತರಿ ಹಾಕಿ, ವಿಚಾರಣೆಯನ್ನು ಮುಂದೂಡಿಸುತ್ತಾನೆ. ಲೂಯಿಯ ಬಾಯಿಯನ್ನು ಮುಚ್ಚಿಸಲು ಮೇಜರ್ ವಾನ್ ಕೆಲ್ಲರ್ ಬೇರೆ ತಂತ್ರವನ್ನು ಹೂಡುತ್ತಾನೆ. ಅದು ಎಲ್ಲಾ ದೇಶಗಳಲ್ಲೂ, ಎಲ್ಲಾ ಫ್ಯಾಸಿವಾದಿಗಳೂ ಹೂಡುವ ಕುತಂತ್ರ. ತಮ್ಮ ಆಳ್ವಿಕೆಯ ಕುರಿತು ಸುಳ್ಳು ಕನಸುಗಳನ್ನು ಬಿತ್ತುವುದು. ಸುಳ್ಳು ಭವಿಷ್ಯವನ್ನು ಮುಂದಿಡುವುದು. ಮೇಜರ್ ವಾನ್ ಕೆಲ್ಲರ್ ಮಾಡುವುದೂ ಅದನ್ನೇ.
ಲೂರಿ ವಾಸ್ತವದಲ್ಲಿ ಧೈರ್ಯವಂತನೆಂದು ಹೊಗಳುತ್ತಾ, ನಾಜಿ ಆಳ್ವಿಕೆಯ ಭ್ರಮೆಯ ಬೀಜವನ್ನು ಲೂರಿಯ ತಲೆಯೊಳಗೆ ಬಿತ್ತುತ್ತಾನೆ. “ನಾವು ಜರ್ಮನರು ನ್ಯಾಯಾಲಯವನ್ನು ವಶಕ್ಕೆ ತೆಗೆದುಕೊಳ್ಳಬಹುದಿತ್ತು. ಆದರೆ ಅದು ನಮಗೆ ಬೇಡ. ನಾವು ನಿರಂಕುಶ ಪ್ರಭುಗಳಲ್ಲ. ಯುದ್ಧದಲ್ಲಿ ಸೋತ ರಾಷ್ಟ್ರಕ್ಕೆ ಸ್ವಾತಂತ್ರ್ಯ ಕೊಡುವುದು ನಮ್ಮ ಆದ್ಯತೆ. ...ನಾವು ಭವಿಷ್ಯದಲ್ಲಿ ಪ್ರಪಂಚಕ್ಕೆ ಸಂತೋಷ ತರಲು ತ್ಯಾಗಗಳನ್ನು ಮಾಡುತ್ತಿದ್ದೇವೆ” ಎಂದು ಹೇಳುತ್ತಾ ಭ್ರಮೆಯನ್ನು ಸೃಷ್ಟಿಸುತ್ತಾನೆ. ಇಲ್ಲಿ ಮತ್ತು ವಿಚಾರಣೆಯ ಸಂದರ್ಭಗಳಲ್ಲಿ ಸಂಭಾಷಣೆಗಳು ಅಮೋಘವಾಗಿವೆ. ಕಥೆ ಮತ್ತು ಸಂಭಾಷಣೆಗಳನ್ನು ಬರೆದು ಡೂಡ್ಲಿ ನಿಕೊಲಾಸ್ ಮತ್ತು ಜಾನ್ ರೆನಾಯ್ ನಾಜಿóಗಳ, ಆ ಮೂಲಕ ಎಲ್ಲಾ ಫ್ಯಾಸಿವಾದಿಗಳ ಮುಖವಾಡವನ್ನು ಕಿತ್ತೊಗೆದಿದ್ದಾರೆ. ಮೇಜರ್ ವಾನ್ ಕೆಲ್ಲರ್, “ಮೇಯರ್, ಮುಂತಾದವರು ತಮ್ಮ ಸ್ವಂತ ಹಿತಕ್ಕಾಗಿ ನಮ್ಮೊಡನೆ ಸೇರಿದರು. ಅಂತಹವರು ನಮಗೆ ಬೇಕು. ಅವರಂಥ ಜನ ಪ್ರಪಂಚದೆಲ್ಲೆಡೆ ಇದ್ದಾರೆ. ಜರ್ಮನಿಯಲ್ಲೂ ಇದ್ದಾರೆ. ಅವರ ಸಹಾಯದಿಂದಲೇ ನಮ್ಮ ಪಕ್ಷ ಮೇಲೆ ಬಂದಿದ್ದು” ಎಂದು ಹೇಳುವುದರೊಂದಿಗೆ ಇತಿಹಾಸದಲ್ಲಿ ನಾಜಿó ಪಕ್ಷದ ಉದಯದ ಹಿಂದಿನ ಕರಾಳ ಸತ್ಯವನ್ನು ಬಹಿರಂಗಪಡಿಸುತ್ತಾನೆ. ಆ ಕ್ಷಣದಲ್ಲಿ ಇದನ್ನೆಲ್ಲಾ ಲೂರಿಯು ನಂಬುತ್ತಾನೆ. ಎಲ್ಲಾ ಸಮಯಗಳಲ್ಲು ಲೂರಿಯಂಥ ಮುಗ್ಧ ಜನ ಈ ಹಸಿ ಸುಳ್ಳುಗಳನ್ನೆಲ್ಲಾ ಸುಮ್ಮನೆ ನಂಬಿಬಿಡುತ್ತಾರೆ. ಆದರೆ ಅವನಿಗೆ ಭ್ರಮನಿರಸನವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.
ಮರುದಿನ ಬೆಳಿಗ್ಗೆ, ಲೂರಿಯು ವಿಚಾರಣೆಗೆಂದು ತಯಾರಾಗುತ್ತಿದ್ದಾಗ, ತನ್ನ ಜೈಲಿನ ಸರಳುಗಳ ಮೂಲಕ, ಪ್ರೊ.ಸೊರೆನ್ ಸೇರಿದಂತೆ ಹತ್ತು ಜನ ಒತ್ತೆಯಾಳುಗಳನ್ನು ಗುಂಡಿಕ್ಕಿ ಕೊಲ್ಲುವುದನ್ನು ನೋಡುತ್ತಾನೆ. ‘ಪ್ರೊ.ಸೊರೆನ್’ ಎಂಬ ಲೂರಿಯ ಆರ್ತನಾದಕ್ಕೆ ಅವರು ಸಾಯುವ ಮುನ್ನ ಕೈ ಬೀಸುತ್ತಾರೆ. ವಿಚಾರಣೆಯ ಸಂದರ್ಭದಲ್ಲಿ ಮಾಡುವ ಕೊನೆ ಭಾಷಣದಲ್ಲಿ ಇದನ್ನೇ ನೆನಪಿಸಿ, ತನ್ನ ಕೆಲಸವೇನೆಂದು ತಿಳಿಯಿತೆಂದು ಹೇಳುತ್ತಾನೆ. ನಂತರ ಲೂರಿ ಮಾಡುವ ಭಾಷಣ ಅದ್ಭುತ. ಅದು ಚಾರ್ಲಿ ಚಾಪ್ಲಿನ್ ‘ದಿ ಗ್ರೇಟ್ ಡಿಕ್ಟೇಟರ್’ನಲ್ಲಿ ಮಾಡುವ ಕೊನೆ ಭಾಷಣದ ನಂತರದ ಸಾಲಿನಲ್ಲಿ ಬರುವ ಉತ್ತಮ ಭಾಷಣ.
“ನಮ್ಮಂಥ ನಿಮ್ಮಂಥ ಜನರಿಗೆ ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು ಎನ್ನುವುದನ್ನು ತಿಳಿದುಕೊಳ್ಳೋದೆ ಕಷ್ಟ. ದುಡಿಯುವ ಜನರಿಗೆ ಶತ್ರುವನ್ನು ಗುರುತಿಸೋದು ಬಹಳ ಸುಲಭ. ಏಕೆಂದರೆ ಈ ರೀತಿಯ ಆಕ್ರಮಣಗಳ ಉದ್ದೇಶಾನೇ ಅವರನ್ನ ಗುಲಾಮರನ್ನಾಗಿ ಮಾಡೋದು.” ಇದು ದುಡಿಯುವ ವರ್ಗದ ಜನತೆಯ ಸಹಜ ಪ್ರತಿಕ್ರಿಯೆಯ ಸತ್ಯವನ್ನು ತೋರಿಸುತ್ತದೆ. ಆಕ್ರಮಣಗಳ ನೇರ ಪರಿಣಾಮ ಶ್ರಮಜೀವಿಗಳಿಗೆ ತಟ್ಟುತ್ತದೆ. ಹಾಗಾಗಿಯೇ ಅವರಲ್ಲಿ ಯಾವುದೇ ಸೈದ್ಧಾಂತಿಕ ಗೊಂದಲಗಳು ಬರುವುದಿಲ್ಲ. ಆದರೆ ಮಧ್ಯಮವರ್ಗದ ಸ್ಥಿತಿ ಅದಲ್ಲ. ಮಧ್ಯಮ ವರ್ಗ ಸದಾ ಹೇಗಾದರೂ ಮೇಲೆಕ್ಕೋಗುವ ಯತ್ನದಲ್ಲಿರುವುದರಿಂದ ತನಗೆ ಅನ್ಯಾಯವಾಗದ ಹೊರತು, ಅನ್ಯಾಯಕ್ಕೆ ಮುಖಾಮುಖಿಯಾಗುವುದೇ ಇಲ್ಲ. ಅವರಿಗೆ ಫ್ಯಾಸಿವಾದಿಗಳ “ಜಯದಿಂದ ಅಂಥದ್ದೇನೂ ಕೆಟ್ಟದ್ದಾಗಲ್ಲ ಎಂದು ಸುಲಭವಾಗಿ ನಂಬಿಕೆ ಬರುತ್ತದೆ.”
ಒಂದು ಆಕ್ರಮಿತ ದೇಶಕ್ಕೆ ಪ್ರತಿರೋಧ ಬಹಳ ಮುಖ್ಯ. ಪ್ರತಿಭಟನಾಕಾರರು ಆರಂಭದಲ್ಲಿ ವ್ಯಕ್ತಿಗತ ಸಾಹಸಗಳಿಗೇ ಕೈ ಹಾಕುತ್ತಾರೆ. ಅದೊಂದು ಸಾಮುದಾಯಿಕ ಹೋರಾಟವಾಗುವ ತನಕ. ಆದ್ದರಿಂದಲೇ “ಸೋತುಹೋದ ಜನರಿಗೆ ಉಳಿದಿರೋ ಒಂದೇ ಅಸ್ತ್ರ ಅಂದ್ರೆ, ವಿನಾಶಕಾರಿ ಕೆಲಸಗಳೇ... ಎಲ್ಲಿಯವರೆಗೆ ವಿನಾಶಕಾರಿ ಕೆಲಸ ಮಾಡುವವರು ಇರ್ತಾರೋ, ಅಲ್ಲಿಯವರೆಗೂ ಬೇರೆ ಕಡೆ ಹೋರಾಡ್ತಾ ಇರೋ ಜನರಿಗೆ ನಾವಿನ್ನೂ ಸೋತಿಲ್ಲ ಅನ್ನೋದು ಗೊತ್ತಾಗುತ್ತೆ... ನಾವು ಸಾಯಿಸಿದ ಪ್ರತಿಯೊಬ್ಬ ಜರ್ಮನ್‍ಗೆ ಬದಲಾಗಿ, ನಮ್ಮ ಮುಗ್ಧ ಜನರು ನೇಣಿಗೆ ಹೋಗ್ತಾರೆ. ಆದರೆ ಅವರ ಸಾಹಸ ಕಾರ್ಯ ಬೇಗನೆ ಎಲ್ಲೆಡೆ ಹರಡುತ್ತೆ. ನಮ್ಮ ಪ್ರತಿರೋಧ ಬೆಳೆಯುತ್ತೆ.” ಪ್ರತಿರೋಧವು “ನಾವು ಕಷ್ಟ ಅನುಭವಿಸುವಂತೆ, ಹಸಿವಿನಿಂದ ನರಳುವಂತೆ, ಸಾಯುವಂತೆ ಮಾಡುತ್ತೆ, ಅದು ನಮ್ಮ ಸಂಕಷ್ಟಗಳನ್ನು ಹೆಚ್ಚಿಸುತ್ತೆ. ಆದರೆ ಗುಲಾಮಗಿರಿಯ ಅವಧಿಯನ್ನು ಕಡಿಮೆ ಮಾಡುತ್ತೆ.” ಲೂರಿ ಕಡೆಯಲ್ಲಿ, ನಾಜಿóಗಳ ಜೊಗೆ ಸೇರಿಕೊಂಡು ವ್ಯಾಪಾರದಿಂದ ಲಾಭ ಮಾಡಿಕೊಂಡವರನ್ನು ಬಯಲಿಗೆಳೆಯುತ್ತಾ, ಅವರೊಳಗಿನ ನ್ಯೂನತೆಗಳನ್ನು ತೋರಿಸಿಕೊಡುತ್ತಾನೆ. ಲೋರಿಯ ಕಡೆಯ ಮಾತುಗಳು ಫ್ಯಾಸಿವಾದಿಗಳಿಂದ ಆಕ್ರಮಿತ ಅಥವಾ ಫ್ಯಾಸಿವಾದಿಗಳಿರುವ ರಾಷ್ಟ್ರಗಳಿಗೆ ಸರಿಯಾಗಿ ಹೊಂದುತ್ತದೆ: “ನಾನು ಸತ್ಯ ಹೇಳೋದಿಕ್ಕೆ ಪ್ರಯತ್ನಪಟ್ಟೆ. ಅದಕ್ಕೇ ನನಗೆ ಮರಣದಂಡನೆ. ಒಂದು ಆಕ್ರಮಿತ ಪ್ರದೇಶದಲ್ಲಿ ಸತ್ಯವನ್ನು ಜೀವಂತವಾಗಿ ಇಡೋದಿಕ್ಕೆ ಸಾಧ್ಯವಿಲ್ಲ. ಅದು ಅಪಾಯಕಾರಿ. ಏಕೆಂದರೆ ಆಕ್ರಮಣಗಳು ಸುಳ್ಳಿನ ಮೇಲೆ ನಿಂತಿರುತ್ತವೆ. ಅದನ್ನೇ ಹೊಸ ವ್ಯವಸ್ಥೆಯೆಂದು ಕರೆಯುತ್ತಾರೆ.”
ಕಡೆಯಲ್ಲಿ ಲೂರಿಯನ್ನು ನಿರಪರಾಧಿಯೆಂದು ಬಿಟ್ಟರೂ ಸಹ, ಅವನು ಮತ್ತೆ ಶಾಲೆಗೆ ಬಂದ ಕೂಡಲೇ ಬಂಧನಕ್ಕೊಳಗಾಗುತ್ತಾನೆ. ಅದಕ್ಕೂ ಮುನ್ನ ತನ್ನ ವಿದ್ಯಾರ್ಥಿಗಳಿಗೆ ಪ್ರೊ.ಸೊರೆನ್ ಅವರಿಂದ ಕಲಿತ ಪಾಠವನ್ನು ಕಡೆಯ ಪಾಠವಾಗಿ ಹೇಳುತ್ತಾನೆ. ಫ್ಯಾಸಿವಾದಿಗಳು ಪುಸ್ತಕಗಳನ್ನು ಸುಡಬಹುದು, ಆದರೆ ಎಲ್ಲರ ಮೆದುಳುಗಳನ್ನಲ್ಲ. ಆದ್ದರಿಂದಲೇ, ಮಕ್ಕಳಿಗೆ ಪ್ರಜಾತಂತ್ರವನ್ನು ಪ್ರತಿಪಾದಿಸುವ ‘ಮಾನವನ ಹಕ್ಕುಗಳು’ ಪಾಠವನ್ನು ಕಂಠಪಾಠ ಮಾಡಿಸುತ್ತಾನೆ. ಅವನನ್ನು ನಾಜಿó ಸೈನಿಕರು ಕರೆದುಕೊಂಡು ಹೋಗುವಾಗ, ಅವನು ನ್ಯಾಯಾಲಯದಲ್ಲಿ ಲೂರಿಯನ್ನು ಗುಟ್ಟಾಗಿ ಪ್ರೀತಿಸಿದ್ದನ್ನು ಹೇಳಿದ್ದನ್ನು ಕೇಳಿದ್ದ ಲೂರಿ, ಈಗ ನಿಜವಾಗಿಯೂ ಮನುಷ್ಯನಾದ ಲೂರಿಗೆ ಇಷ್ಟಪಟ್ಟು ಮುತ್ತನಿಡುತ್ತಾಳೆ. ಈ ಸಿನಿಮಾದಲ್ಲಿ ಕೇವಲ ನಾಜಿóಗಳ ವಿರುದ್ಧ ಧೀರೋದಾತ್ತ ಹೋರಾಟವನ್ನಷ್ಟೇ ಅಲ್ಲದೆ, ಸೂಕ್ಷ ಅಂಶಗಳಾದ ಪ್ರೀತಿಯ ಅರ್ಥವನ್ನು ವ್ಯಾಖ್ಯಾನಿಸುತ್ತಾ ಹೋಗಿದ್ದಾರೆ. ಪ್ರೀತಿಯ ತಳಹದಿಯು ಎಲ್ಲಾ ಸಂದರ್ಭಗಳಲ್ಲೂ, ಎಲ್ಲಾ ಪ್ರದೇಶಗಳಲ್ಲೂ ಒಂದೇ ರೀತಿ ಇರುವುದಿಲ್ಲ. ಅದು ಕೇವಲ ಮದುವೆಯ ಬಂಧನಕ್ಕಾಗಿಯೂ ಅಲ್ಲ. ಪ್ರೀತಿ ಮನುಷ್ಯರ ಜೀವನದ ಉದ್ದೇಶವನ್ನು ಉದಾತ್ತಗೊಳಿಸಬೇಕು, ಉತ್ತಮ ಜೀವನವನ್ನು ಕಟ್ಟಲು ಪ್ರೇರಣೆಯಾಗಿ ನಿಲ್ಲಬೇಕು.
ಪಾಲ್‍ನನ್ನು ಪ್ರೀತಿಸಿದ ಲೂರಿ ಗ್ರಾಂಟ್, ಆತನ ಉದ್ದೇಶವನ್ನು ಅರ್ಥಮಾಡಿಕೊಳ್ಳದೆ, ಅವನು ಜರ್ಮನರೊಂದಿಗೆ ಇದ್ದಾನೆಂದು ತಿಳಿದು ಅವನ ಪ್ರೀತಿಯನ್ನೇ ತಿರಸ್ಕರಿಸುತ್ತಾಳೆ. ಅಲ್ಲಿ ಪಾಲ್ ಒಬ್ಬ ವ್ಯಕ್ತಿಯಷ್ಟೇ ಅಲ್ಲ. ಅವನ ವಿಚಾರಗಳೂ ಅವಳಿಗೆ ಮುಖ್ಯ. ಹಾಗಾಗಿಯೇ ತನ್ನ ದೇಶವನ್ನು ಪ್ರೀತಿಸದ ವ್ಯಕ್ತಿಯನ್ನು ಪ್ರೀತಿಸುವುದಾದರೂ ಹೇಗೆ? ಪಾಲ್ ಕೂಡ ಅಷ್ಟೆ. ತನ್ನ ಪ್ರಿಯತಮೆ ದೂರವಾದರೂ ಕೂಡ, ನಾಜಿó ವಿರುದ್ಧ ಬಂಡೇಳಲು ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಸತ್ಯ ಹೇಳುವುದಿಲ್ಲ. ಇದು ನಿಜವಾದ ಪ್ರೀತಿ. ಲೂಯಿಯ ವಿಷಯದಲ್ಲೂ ಅಷ್ಟೆ. ಅವಳು ಜಾಜ್ ಲ್ಯಾಂಬರ್ಟ್ ಅನ್ನು ಪ್ರೀತಿಸಿದ್ದಳು. ತಾನು ಮಾನಸಿಕವಾಗಿ ಜರ್ಜರಿತಳಾಗಿದ್ದಾಗ, ಲ್ಯಾಂಬರ್ಟ್‍ನ ಸಾಮೀಪ್ಯ, ಬೆಂಬಲ ಬಯಸಿ ಹೋಗುತ್ತಾಳೆ. ಆದರೆ ಲ್ಯಾಂಬರ್ಟ್ ನಾಜಿóಗಳೊಂದಿಗೆ ಸಂಧಾನಪರದ ಮಾತುಗಳನ್ನಾಡಿದಾಗ, ಪ್ರತಿರೋಧವನ್ನು ಸೂಕ್ಷ್ಮವಾಗಿ ವಿರೋಧಿಸಿದಾಗ, ಲೂಯಿ ಲ್ಯಾಂಬರ್ಟ್‍ನನ್ನು ತೊರೆಯುತ್ತಾಳೆ. ತಾನು ಮುಂಚೆ ಪ್ರೀತಿಸಿರದ, ಹೊರಗಿನ ಜನರಿಗೆ ಸಾಮಾನ್ಯನಂತೆ ಕಂಡಿದ್ದ, ಸ್ವಲ್ಪ ತನಗಿಂತ ವಯಸ್ಸಾಗಿದ್ದ, ಆದರೆ ಸಂದರ್ಭ ಬಂದಾಗ ಸ್ವಾತಂತ್ರ್ಯಕ್ಕಾಗಿ ಜೀವ ಕೊಡಲು ಸಿದ್ಧನಾದ ಲೂರಿಯನ್ನು ಪ್ರೀತಿಸುತ್ತಾಳೆ. ಇದು ಆದರ್ಶ ಪ್ರೀತಿ.
ಇಲ್ಲಿ ಪ್ರತಿಯೊಬ್ಬರೂ ಅದ್ಭುತವಾಗಿ ನಟಿಸಿದ್ದಾರೆ. ಒಬ್ಬ ಮುಗ್ಧ, ಅಂಜುಬುರುಕ ಶಿಕ್ಷಕನಾಗಿದ್ದವನು, ಕಡೆಯಲ್ಲಿ ಅನ್ಯಾಯವನ್ನು ಪ್ರತಿಭಟಿಸಿ, ಧೈರ್ಯ ಪ್ರದರ್ಶಿಸಿದ ಲೂಯಿ ಪಾತ್ರವನ್ನು ಚಾಲ್ರ್ಸ್ ಲಾಟನ್ ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಆ ಪಾತ್ರದಲ್ಲಾಗುವ ಬದಲಾವಣೆಯನ್ನು ಯಾವುದೇ ಅತಿಶಯವಿಲ್ಲದೆ, ರಮ್ಯ ಪಾತ್ರವಾಗಿಸದೆ, ಸಹಜವಾಗಿ ಅಭಿನಯಿಸಿದ್ದಾರೆ. ನಾಜಿ ಅಧಿಕಾರಿಯಾಗಿ ವಾಲ್ಟರ್ ಸ್ಲೆಜಾಕ್ ನಾಜಿಗಳ ಕ್ರೌರ್ಯ, ವಂಚನೆ, ನರಿಬುದ್ಧಿಗಳನ್ನು ಸುಂದರವಾಗಿ ನಟನೆಯ ಮೂಲಕ ವೀಕ್ಷಕನಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲೂಯಿ ಮಾರ್ಟಿನ್ ಪಾತ್ರದಲ್ಲಿ ಮೌರಿನ್ ಓ ಹರಾ, ತಾಯಿಯಾಗಿ ಊನಾ ಓ ಕೊನಾರ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
- ಎಸ್.ಎನ್.ಸ್ವಾಮಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ