ಭಾರತೀಯ ಹಿಂದೂ ಪಾರಂಪರಿಕ ಧರ್ಮ ಇಂದೂ ಸಹ ಹೆಣ್ಣು ಗಂಡು ಎಂಬ ತಾರತಮ್ಯ ಹೊಂದಿರುವುದು ಎಲ್ಲರಿಗೂ ತಿಳಿದ ವಿಷಯವೇ. ಪರಿಸ್ಥಿತಿ 21ನೇ ಶತಮಾನದಲ್ಲೂ ಹೀಗಿರುವಾಗ 19ನೇ ಶತಮಾನದಲ್ಲಿ ಹೆಣ್ಣಿನ ಬಗ್ಗೆ ಸಮಾಜದ ಭಾವನೆ ಏನಿತ್ತು ಎಂಬುದನ್ನು ತಿಳಿಯುವುದೇನೂ ಕಷ್ಟವಲ್ಲ. ಸಮಾಜದಲ್ಲಿ ಪುರುಷರಿಗೆ ಹೆಚ್ಚು ಒತ್ತುಕೊಡಲಾಗಿತ್ತು. ಇದಕ್ಕೆ ಒತ್ತಾಸೆಯಾಗಿ ಪುರಾತನ ಧರ್ಮಗ್ರಂಥಗಳೂ ಅದನ್ನೇ ಸಾರಿ ಹೇಳುತ್ತಿದ್ದವು. ಸಮಾಜದಲ್ಲಿ ಲಿಂಗಭೇದ ಜಾತಿಬೇದ. ಹೀಗೆ ಹತ್ತಾರು ಸಾಮಾಜಿಕ ಜಾಡ್ಯಗಳಿಂದ ತುಂಬಿಹೋಗಿತ್ತು. ಇದಕ್ಕೆ ಅಂತ್ಯ ಹಾಡಿ ಕ್ರಾಂತಿ ಮಾಡುವ ವ್ಯಕ್ತಿಗಳು ಆ ನಿಟ್ಟಿನಲ್ಲಿ ತಮ್ಮದೇ ಕ್ರಾಂತಿಕಾರಿ ಮನೋಧರ್ಮದಿಂದ ಸಮಾಜದ ಅನಿಷ್ಟ ಪದ್ಧತಿಗಳಿಗೆ ಪೂರ್ಣ ವಿರಾಮವನ್ನಿಟ್ಟು, ಹೆಣ್ಣುಮಕ್ಕಳ ಸಮಾನತೆ, ಶಿಕ್ಷಣಕ್ಕಾಗಿ ಹೋರಾಡಿದರು.
ಅವರಲ್ಲಿ ಮಹಾತ್ಮ ಜ್ಯೋತಿಭಾ ಫುಲೆಯವರು ಮುಂಚೂಣಿಯಲ್ಲಿದ್ದಾರೆ. ಅವರು ಚಿಂತಕರು, ಸಮಾಜ ಸುಧಾರಕರು, ಕ್ರಿಯಾಶೀಲರು ಮತ್ತು ಕ್ರಾಂತಿಕಾರಿಗಳಾಗಿದ್ದರು. ಅವರ ಹೋರಾಟ ಎಲ್ಲಾ ಕ್ಷೇತ್ರಗಳಲ್ಲೂ ಹರಡಿತ್ತು, ಮುಖ್ಯವಾಗಿ ಶಿಕ್ಷಣ, ಕೃಷಿ, ಜಾತಿ ವ್ಯವಸ್ಥೆಯ ನಾಶ, ಸ್ತ್ರೀ ಮತ್ತು ವಿಧವೆಯರ ಏಳಿಗೆ ಮತ್ತು ಅಸ್ಪೃಶ್ಯತೆಯ ನಿರ್ಮೂಲನೆ.
ತಾವೂ ಕೂಡ ಶೂದ್ರ ಮನೆತನದಲ್ಲಿ ಹುಟ್ಟಿ ಮೇಲ್ವರ್ಗದವರಿಂದ ಅವಮಾನಿತಗೊಂಡರೂ, ಕೊನೆಗೊಂದು ದಿನ ಆ ವರ್ಣ ವ್ಯವಸ್ಥೆಯ ವಿರುದ್ಧ ಸಿಡಿದೆದ್ದವರಲ್ಲಿ ಮೊದಲಿಗರು. ಇವರು ಏಪ್ರಿಲ್ 11, 1827 ರಲ್ಲಿ, ಪುಣೆಯಲ್ಲಿ ಗೋವಿಂದ್ ರಾವ್ ಮತ್ತು ಚಿಮಣ್‍ಬಾಯಿಯವರ ಮಗನಾಗಿ ಜನಿಸಿದರು. ಬಾಲ್ಯದಲ್ಲಿ ತಮ್ಮ ಜಾತಿಯ ಕಾರಣದಿಂದ ತುಂಬಾ ನೋವುಂಡರೂ, ಸಮಜದಲ್ಲಿ ಹೊಸ ಚೈತನ್ಯ ಚಿಲುಮೆಯನ್ನು ಉಂಟು ಮಾಡಲು ಶಿಕ್ಷಣ ಅತಿ ಅಮೂಲ್ಯ ಸಾಧನ ಎಂಬುದನ್ನು ಅರಿತು ಅದನ್ನು ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಹಂಚಿದವರಿವರು.
ಥಾಮಸ್ ಪೇನ್‍ರವರ “ಮನುಷ್ಯನ ಹಕ್ಕುಗಳು” ಪುಸ್ತಕದಿಂದ ಪ್ರೇರಿತರಾದ ಅವರು ಸಾಮಾಜಿಕ ನ್ಯಾಯದ ಬಗ್ಗೆ ತೀವ್ರ ಕಳಕಳಿಯನ್ನು ಬೆಳೆಸಿಕೊಂಡರು ಮತ್ತು ಭಾರತೀಯ ವರ್ಣ ವ್ಯವಸ್ಥೆಯ ವಿರುದ್ಧ ಸಿಡಿದೆದ್ದರು. ಸಾಮಾಜಿಕ ಅಸಮಾನತೆಗಳನ್ನು ತೊಡೆದು ಹಾಕುವಲ್ಲಿ ಮಹಿಳೆಯರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ಶಿಕ್ಷಣ ನೀಡುವುದು ಅತ್ಯಂತ ಜರೂರಾದ ಕಾರ್ಯ ಎಂದು ಪರಿಗಣಿಸಿ, ಅದನ್ನು ಸಾಧಿಸಲು ಹೆಜ್ಜೆ ಹಾಕಿದರು.
ಸ್ತ್ರೀಯರ ಸ್ಥಾನಮಾನವನ್ನು ಗಮನಿಸಿದ ಅವರು ಹೆಣ್ಣುಮಕ್ಕಳ ಶಿಕ್ಷಣದ ಹರಡುವಿಕೆಗೆ ಶ್ರಮಿಸಿದರು. ಹೆಣ್ಣುಮಕ್ಕಳ ಶಿಕ್ಷಣ ವ್ಯಾಪಕವಾಗಿ ಹರಡಬೇಕೆಂದರೆ ಮಹಿಳಾ ಶಿಕ್ಷಕರು ಅವಶ್ಯಕ ಎಂಬುದನ್ನು ಮನಗಂಡರು. ತಮ್ಮ ಪತ್ನಿ ಸಾವಿತ್ರಿಬಾಯಿ ಫುಲೆಯವರಿಗೆ ಶಿಕ್ಷಣ ನೀಡಿ ಅವರನ್ನು ಶಿಕ್ಷಕಿಯನ್ನಾಗಿ ಮಾಡಿದರು.
ಆರಂಭದಲ್ಲಿ ಅವರ ಪ್ರಯತ್ನಗಳಿಗೆ ಹಲವಾರು ವಿಘ್ನಗಳು ಬಂದೊದಗಿದರು, ಅಂತಿಮವಾಗಿ ಜನರಿಗೆ ಹೆಣ್ಣುಮಕ್ಕಳ ಶಿಕ್ಷಣದ ಮಹತ್ವವನ್ನು ತಿಳಿಸಿಕೊಡುವಲ್ಲಿ ಯಶಸ್ವಿಯಾದರು. 1848ರಲ್ಲಿ ತಮ್ಮ ಪತ್ನಿಯ ಜೊತೆಗೂಡಿ ಹೆಣ್ಣುಮಕ್ಕಳ ಶಾಲೆಯನ್ನು ಪ್ರಾರಂಭಿಸಿ, ಸ್ತ್ರೀ ಶಿಕ್ಷಣದ ಇತಿಹಾಸಕ್ಕೆ ಮುನ್ನುಡಿಯನ್ನು ಬರೆದರು. ಇದಕ್ಕಾಗಿ ಅವರು ತಮ್ಮ ಮನೆಯನ್ನು ಬಿಡಬೇಕಾಗಿ ಬಂತು. ಬೇರೆ ಬೇರೆ ವ್ಯಕ್ತಿಗಳಿಂದ ಹಣ ಸಂಗ್ರಹಿಸಿದರು. ನಂತರದ ದಿನಗಳಲ್ಲಿ 18 ಶಾಲೆಗಳನ್ನು ತೆರೆದರು.
ಆರಂಭದಲ್ಲಿ ಅವರ ಪ್ರಯತ್ನಗಳಿಗೆ ಹಲವಾರು ವಿಘ್ನಗಳು ಬಂದೊದಗಿದರು, ಅಂತಿಮವಾಗಿ ಜನರಿಗೆ ಹೆಣ್ಣುಮಕ್ಕಳ ಶಿಕ್ಷಣದ ಮಹತ್ವವನ್ನು ತಿಳಿಸಿಕೊಡುವಲ್ಲಿ ಯಶಸ್ವಿಯಾದರು. 1848ರಲ್ಲಿ ತಮ್ಮ ಪತ್ನಿಯ ಜೊತೆಗೂಡಿ ಹೆಣ್ಣುಮಕ್ಕಳ ಶಾಲೆಯನ್ನು ಪ್ರಾರಂಭಿಸಿ, ಸ್ತ್ರೀ ಶಿಕ್ಷಣದ ಇತಿಹಾಸಕ್ಕೆ ಮುನ್ನುಡಿಯನ್ನು ಬರೆದರು. ಇದಕ್ಕಾಗಿ ಅವರು ತಮ್ಮ ಮನೆಯನ್ನು ಬಿಡಬೇಕಾಗಿ ಬಂತು. ಬೇರೆ ಬೇರೆ ವ್ಯಕ್ತಿಗಳಿಂದ ಹಣ ಸಂಗ್ರಹಿಸಿದರು. ನಂತರದ ದಿನಗಳಲ್ಲಿ 18 ಶಾಲೆಗಳನ್ನು ತೆರೆದರು.
ಇಷ್ಟೆ ಅಲ್ಲದೆ ಸ್ತ್ರೀಯರ ಮೇಲೆ ಅನೇಕ ಕಠೋರ ನಿಬಂದನೆಗಳನ್ನು ಹೇರಲಾಗಿತ್ತು. ವಿಧವೆಯರು ಮರುವಿವಾಹ ಆಗುವಂತಿರಲಿಲ್ಲ. ಅವರು ತಲೆ ಬೋಳಿಸಿಕೊಂಡು ಮನೆಯ ಒಂದು ಮೂಲೆಯಲ್ಲಿರಬೇಕಿತ್ತು. ಇದನ್ನು ವಿರೋಧಿಸಿದ ಫುಲೆಯವರು ಕ್ಷೌರಿಕರನ್ನು ಸಂಘಟಿಸಿ ತಲೆ ಬೋಳಿಸುವ ಪದ್ಧತಿಯ ವಿರುದ್ಧ ಹೋರಾಟ ನಡೆಸಿದರು. ಜೊತೆಗೆ ವಿಧವಾ ವಿವಾಹಕ್ಕೆ ಒತ್ತು ನೀಡಿ, 1854ರಲ್ಲಿ ವಿಧವಾ ವಿವಾಹ ಮಾಡಿಸಿ ಹೊಸ ದಾಖಲೆ ನಿರ್ಮಿಸಿದರು.
ಅಂದಿನ ದಿನಗಳಲ್ಲಿ ವಿಧವೆಯರು, ಮುಖ್ಯವಾಗಿ ಬಾಲವಿಧವೆಯರು ತಮ್ಮ ಮನೆಯವರ ಅತ್ಯಾಚಾರಕ್ಕೆ ಬಲಿಯಾಗಿ ಗರ್ಭಿಣಿಯರಾದಾಗ ಅವರನ್ನು ಮನೆಯಿಂದ ಹೊರ ತಳ್ಳಲಾಗುತ್ತಿತ್ತು. ಅವರು ಇದಕ್ಕೆ ಪ್ರತಿಯಾಗಿ “ಬಾಲಹತ್ಯಾ ಪ್ರತಿಬಂಧಕ ಸಂಸ್ಥೆಯನ್ನ್ನು ಸ್ಥಾಪಿಸಿ, ಆ ಬಾಲವಿಧವೆಯರಿಗೆ ಆಶ್ರಯ ನೀಡಿ ಮೇಲ್ವರ್ಗದ ಜನರ ದ್ವೇಷವನ್ನು ಕಟ್ಟಿಕೊಂಡರು. ಬಾಲ್ಯವಿವಾಹದ ವಿರುದ್ಧವಾಗಿಯೂ ಹೋರಾಡಿದರು. ಬಹುಪತ್ನಿತ್ವವನ್ನು ವಿರೋಧಿಸಿದರು.
ಜಾತಿಪದ್ಧತಿಯ ಪಿಡುಗನ್ನು, ಅಸ್ಪೃಷ್ಯತೆಯನ್ನು ನಿರ್ಮೂಲನ ಮಾಡಲು ಕಂಕಣಬದ್ಧರಾಗಿ 1873ರ ಸೆಪ್ಟೆಂಬರ್ 23ರಂದು “ಸತ್ಯಶೋಧಕ ಸಮಾಜ”ವನ್ನು ಕಟ್ಟಿದರು. ಜಾತಿಪದ್ಧತಿಯ ಪಿಡುಗನ್ನು, ಅಸ್ಪೃಶ್ಯತೆಯನ್ನು ನಿರ್ಮೂಲನ ಮಾಡಲು ಕಂಕಣಬದ್ಧರಾಗಿ 1873ರ ಸೆಪ್ಟೆಂಬರ್ 23ರಂದು “ಸತ್ಯಶೋಧಕ ಸಮಾಜ”ವನ್ನು ಕಟ್ಟಿದರು. ಅದರ ಮುಖ್ಯ ಉದ್ದೇಶವಿದ್ದದ್ದು ಮೇಲ್ವರ್ಗದ ಜನರಿಂದ ಶೂದ್ರ ಮತ್ತು ಅತಿ-ಶೂದ್ರರ ವಿಮೋಚನೆಯಾಗಿತ್ತು. ಅವರ ಈ ಎಲ್ಲಾ ಹೋರಾಟಗಳಿಗೆ ಮನ್ನಣೆ ನೀಡಿ ಮಹಾರಾಷ್ಟ್ರದ ಜನತೆ ಅವರಿಗೆ 1888ರ ಮೇ 11 ರಂದು “ಮಹಾತ್ಮ” ಎಂಬ ಬಿರುದನ್ನು ನೀಡಿದರು.
ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಮಾನವ ಘನತೆ, ಆರ್ಥಿಕ ನ್ಯಾಯ ಮತ್ತು ಶೋಷಣಾರಹಿತ ಸಮಾಜವನ್ನು ಸ್ಥಾಪಿಸಬೇಕಾದರೆ ಹಳೆಯ, ಅಸಮಾನ, ಶೋಷಾಣಾಯುಕ್ತ ಸಾಮಾಜಿಕ ವ್ಯವಸ್ಥೆಯನ್ನು ಕಿತ್ತೊಗೆಯಬೇಕೆಂದು ಅವರು ದೃಢವಾಗಿ ನಂಬಿದ್ದರು ಮತ್ತು ಅದಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟರು.
- ಉಷಾಗಂಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ