(ಕಳೆದ ಸಂಚಿಕೆಯಿಂದ ಮುಂದುವರೆದಿದೆ)
ಅದೇ ಸಮಯದಲ್ಲಿ ಭಗತ್ ಸಹಪಾಠಿ ಸುಖದೇವ್‍ರನ್ನು ಭೇಟಿಯಾದರು. ಭೇಟಿಯಾದ ಮೊದಲ ದಿನದಿಂದಲೇ ಬೆಳೆದ ಸ್ನೇಹ ಗಾಢವಾಗುತ್ತಾ ಹೋಯಿತು. ಕೊನೆಗೆ ಇಬ್ಬರೂ ಒಂದೇ ದಿನ ದೇಶಕ್ಕಾಗಿ ಹುತಾತ್ಮರಾದರು. ಭಗತ್‍ಸಿಂಗ್ ಸುಖದೇವ್ ಇಬ್ಬರೂ ದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ, ಕ್ರಾಂತಿಕಾರಿ ಸ್ಫೂರ್ತಿ ದೇಶದಲ್ಲಿ ಇಲ್ಲದ ಬಗ್ಗೆ ಚರ್ಚಿಸುತ್ತಿದ್ದರು. ದ್ವಾರಕಾದಾಸ್ ಗ್ರಂಥಾಲಯದಿಂದ ಇಟಲಿ, ರಷ್ಯಾ, ಐರ್ಲೆಂಡ್, ಚೀನಾ ಮುಂತಾದ ದೇಶಗಳ ಕ್ರಾಂತಿಕಾರಿ ಚಳುವಳಿಗಳ ಬಗ್ಗೆ ಪುಸ್ತಕಗಳನ್ನು ತಂದು ಓದುತ್ತಿದ್ದರು ಮತ್ತು ಆ ಬಗ್ಗೆ ಚರ್ಚಿಸುತ್ತಿದ್ದರು. ಸಂಗೀತ, ಕಲೆ ಮುಂತಾದವುಗಳ ಬಗ್ಗೆಯೂ ಆಸಕ್ತಿ ವಹಿಸಿದ್ದರು. ಹೀಗೆಯೇ ಅವರ ಸ್ನೇಹ ಬಲವಾಯಿತು. ಭಗತ್‍ರ ಹಸನ್ಮುಖ ಸ್ವಭಾವ ಮತ್ತು ಹಾಸ್ಯಪ್ರಜ್ಞೆ ಸುಖದೇವ್‍ರಿಗೆ ಮಾತ್ರವಲ್ಲದೆ ಅವರೆಲ್ಲ ಸ್ನೇಹಿತರಿಗೂ ಅಚ್ಚುಮೆಚ್ಚಿನದಾಗಿತ್ತು.
ಜಲಿಯನ್‍ವಾಲಾಬಾಗ್ ನರಮೇಧ
1919ರಲ್ಲಿ ದೇಶದಾದ್ಯಂತ ರೌಲತ್ ಕಾಯಿದೆಯನ್ನು ವಿರೋಧಿಸಿ ಚಳುವಳಿ ನಡೆಯುತ್ತಿತ್ತು. ಏಪ್ರಿಲ್ 13ರಂದು ಪಂಜಾಬಿನ ಅಮೃತಸರದ ಜಲಿಯನ್‍ವಾಲಾಬಾಗಿನಲ್ಲಿ ಸಹಸ್ರಾರು ಹಿಂದೂ, ಮುಸ್ಲಿಂ, ಸಿಖ್ಖರು, ಸ್ತ್ರೀಪುರುಷರೆನ್ನದೆ, ಆಬಾಲವೃದ್ಧರಾಗಿ ಅಲ್ಲಿ ಸಭೆ ಸೇರಿದ್ದರು. ಭಾಷಣ ಆರಂಭವಾಗುತ್ತಿದ್ದ ಸ್ವಲ್ಪ ಹೊತ್ತಿಗೆ ಅಲ್ಲಿಗೆ ಆಗಮಿಸಿದ್ದ ಜನರಲ್ ಡಯರ್ ಇದ್ದಕ್ಕಿದ್ದಂತೆ ಜನರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ. ಆ ಜಾಗ ಚೌಕಾಕಾರವಾಗಿದ್ದು, ನಾಲ್ಕೂ ಕಡೆಗಳಲ್ಲಿ ಎತ್ತರವಾದ ಗೋಡೆಗಳಿದ್ದವು. ಕೇವಲ ಒಂದೇ ಒಂದು ಗೇಟ್ ಇತ್ತು. ಗೇಟಿನಲ್ಲಿ ಡಯರ್ ತನ್ನ ಟ್ಯಾಂಕ್ ನಿಲ್ಲಿಸಿದ್ದ. ಅವನಲ್ಲಿದ್ದ ಗುಂಡುಗಳು ಮುಗಿಯುವವರೆಗೂ ಗುಂಡಿನ ಮಳೆಗೆರೆದ. ನೂರಾರು ಜನ ಮೃತಪಟ್ಟರು ಮತ್ತು ಸಾವಿರಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡರು.
ಈ ಘಟನೆಯಿಂದ ಇಡೀ ದೇಶ ದಿಗ್ಭ್ರಮೆಗೊಳಗಾಯಿತು. ಬ್ರಿಟಿಷ್ ಸರ್ಕಾರ ಅವನ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಬದಲಿಗೆ ಪಂಜಾಬಿನಲ್ಲಿ ತೀವ್ರವಾದ ದಮನಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿತು. ಸೇನಾ ಆಡಳಿತದ ಹಿಡಿತಕ್ಕೆ ಬಂದ ಪಂಜಾಬ್ ಅತ್ಯಂತ ಹೇಯ ಅಪಮಾನಕ್ಕೆ ಒಳಗಾಯಿತು. ವಿದ್ಯಾರ್ಥಿಗಳು, ಶಿಕ್ಷಕರು 16 ಮೈಲಿ ದೂರ ನಡೆದುಕೊಂಡು ಹಾಜರಾತಿ ಒಪ್ಪಿಸಿ ಬರಬೇಕಿತ್ತು. ಕೆಲವೆಡೆಗಳಲ್ಲಿ ನಡೆಯುವ ಹಾಗಿರಲಿಲ್ಲ, ತೆವಳಿಕೊಂಡು ಹೋಗಬೇಕಿತ್ತು. ಜನರನ್ನು ಪಂಜರಗಳಲ್ಲಿ ಬಂಧಿಸಿ ಬೀದಿ ಬೀದಿಗಳಲ್ಲಿ ಪ್ರದರ್ಶನಕ್ಕಿಡಲಾಯಿತು. ಸಾವಿರಾರು ಜನರನ್ನು ಬಂಧಿಸಿ ಚಿತ್ರಹಿಂಸೆ ನೀಡಲಾಯಿತು. ಹಂಟರ್ ಆಯೋಗ ಡಯರ್ ತಪ್ಪಿತಸ್ಥನಲ್ಲವೆಂದು ಘೋಷಿಸಿತು, ಬ್ರಿಟನ್ನಿನಲ್ಲಿ ಈ ‘ನರಹಂತಕ’ನಿಗೆ ಸನ್ಮಾನ ಮಾಡಿ ಹಣ ನೀಡಲಾಯಿತು. ಆದರೆ ಅವನದೇ ತಾಯ್ನಾಡಿನಲ್ಲಿ ತನ್ನ ತಪ್ಪಿಗೆ ಭಾರತ ರಾಷ್ಟ್ರಪ್ರೇಮಿ ಯುವಕ ಉಧಮ್ ಸಿಂಗ್‍ನಿಂದ ಶಿಕ್ಷೆಗೆ ಒಳಗಾಗಿ ಸತ್ತದ್ದು ಇತಿಹಾಸ.
ಅಸಹಕಾರ ಚಳುವಳಿ
1920ರ ನವೆಂಬರ್‍ನಲ್ಲಿ ಕಾಂಗ್ರೆಸ್‍ನ ನಾಯಕತ್ವ ವಹಿಸಿದ್ದ ಗಾಂಧೀಜಿಯವರು ಅಸಹಕಾರ ಚಳುವಳಿಗೆ ಕರೆ ನೀಡಿದರು. ಭಾರತದ ವಿವಿಧ ಭಾಗಗಳ ಕ್ರಾಂತಿಕಾರಿ ಗುಂಪುಗಳು ಈ ಹೋರಾಟದಲ್ಲಿ ಭಾಗಿಯಾಗಲು ತೀರ್ಮಾನಿಸಿದವು. ಇಡೀ ದೇಶ ಒಂದಾಗಿ ಬ್ರಿಟಿಷರ ಮೇಲೆ ಒತ್ತಡ ಹೇರಿದರೆ ಸ್ವಾತಂತ್ರ್ಯ ಸಿಗಬಹುದೆಂಬ ಮಹಾನ್ ಆಕಾಂಕ್ಷೆಯಿಂದ ತಮ್ಮ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಅಸಹಕಾರ ಚಳುವಳಿಗೆ ಧುಮುಕಿದರು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು, ಲಾಯರ್‍ಗಳು ತಮ್ಮ ವೃತ್ತಿಯನ್ನು, ಸರ್ಕಾರಿ ನೌಕರರು ತಮ್ಮ ನೌಕರಿಗಳನ್ನು ಬಿಟ್ಟರು. ದೇಶದಾದ್ಯಂತ ಜನತೆ ಚಳುವಳಿಯಲ್ಲಿ ಭಾಗವಹಿಸಿತು. ಬಾಲಕ ಭಗತ್ ಸಿಂಗ್ ಸಹ ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಚಳುವಳಿಯಲ್ಲಿ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ ಬೆಂಕಿಗೆ ಹಾಕಲಾಯಿತು. 30,000ಕ್ಕೂ ಅಧಿಕ ಜನರನ್ನು ಬಂಧಿಸಲಾಯಿತು. ಜನತೆ ಬ್ರಿಟಿಷರಿಂದ ಲಾಠಿ ಏಟು, ಬೂಟಿನ ಏಟುಗಳನ್ನು ತಿಂದರು. ಆದರೆ ಜನತೆ ಹೋರಾಟದಿಂದ ಹಿಂದಕ್ಕೆ ಜಗ್ಗಲಿಲ್ಲ. ಬ್ರಿಟಿಷರ ವಿರುದ್ಧ ಭಾರತೀಯರು ಸಾರಿದ ಅತ್ಯಂತ ದೊಡ್ಡ ಅಹಿಂಸಾತ್ಮಕ ಹೋರಾಟವದು.
ಚೌರಿಚೌರ ಘಟನೆ
1921ರ ಫೆಬ್ರವರಿ 12ರಂದು ಉತ್ತರ ಪ್ರದೇಶದ ಚೌರಿಚೌರಾ ಎಂಬಲ್ಲಿ ಪ್ರತಿಭಟನಾಕಾರರು ಶಾಂತರೀತಿಯಲ್ಲಿ ಮೆರವಣಿಗೆ ಮಾಡುತ್ತಿದ್ದರು. ಪ್ರತಿಭಟನಾ ಮೆರವಣಿಗೆ ಸ್ಥಳೀಯ ಪೊಲೀಸ್ ಠಾಣೆಯ ಮುಂದೆ ಸಾಗುತ್ತಿದ್ದಾಗ, ಪೊಲೀಸರು ಇವರನ್ನು ಅಪಹಾಸ್ಯ ಮಾಡಿದರು. ಆದರೂ ಜನತೆ ಶಾಂತವಾಗಿ ಮುನ್ನಡೆಯುತ್ತಿದ್ದರು. ಪೊಲೀಸರು ಮೆರವಣಿಗೆಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು. ಆದರೆ ಪ್ರತಿಭಟನಾಕಾರರು ದೃಢವಾಗಿ, ಶಾಂತರಾಗಿ ಚದುರದೆ ಅಲ್ಲಿಯೇ ನಿಂತರು. ಪೊಲೀಸರು ತಮ್ಮಲ್ಲಿ ಮದ್ದುಗುಂಡುಗಳು ಖಾಲಿಯಾಗುವವರೆಗೂ ಜನರ ಮೇಲೆ ಗುಂಡು ಹಾರಿಸಿದರು. ಮೂವರು ಸ್ಥಳದಲ್ಲಿಯೇ ಸತ್ತರು ಮತ್ತು ಬಹಳಷ್ಟು ಜನ ತೀವ್ರವಾಗಿ ಗಾಯಗೊಂಡರು ಇದರಿಂದ ಉದ್ವಿಗ್ನತೆಗೆ ಒಳಗಾದ ಜನ ಪೊಲೀಸ್ ಠಾಣೆಗೆ ಬೆಂಕಿ ಇಟ್ಟರು ಮತ್ತು 21 ಪೊಲೀಸರು ಸತ್ತು ಹೋದರು.
ಈ ಘಟನೆಯಾದ ತಕ್ಷಣವೇ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡರು. ಹಿರಿಯ ನಾಯಕರಾದ ಮೋತಿಲಾಲ್ ನೆಹರು, ಚಿತ್ತರಂಜನ್ ದಾಸ್ ಮುಂತಾದ ಹಿರಿಯ ನಾಯಕರು ಎಷ್ಟೇ ಮನವಿ ಮಾಡಿಕೊಂಡರೂ ಗಾಂಧೀಜಿಯವರು ಜಗ್ಗಲಿಲ್ಲ. ಇಡೀ ದೇಶ ದಿಗ್ಭ್ರಾಂತವಾಯಿತು. ತಮ್ಮ ಚಟುವಟಿಕೆಗಳನ್ನು ಪಕ್ಕಕ್ಕಿಟ್ಟು ಈ ಹೋರಾಟದಲ್ಲಿ ತೊಡಗಿದ್ದ ಕ್ರಾಂತಿಕಾರಿಗಳು ಆಘಾತಕ್ಕೊಳಗಾದರು. ಚೌರಿಚೌರಾ ಘಟನೆಗೆ ಸಂಬಂಧಿಸಿದಂತೆ 276 ಜನರನ್ನು ಬಂಧಿಸಲಾಯಿತು. 19 ಜನರನ್ನು ಗಲ್ಲಿಗೇರಿಸಲಾಯಿತು ಮತ್ತು ಉಳಿದವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಇದರ ಬಗ್ಗೆ ಗಾಂಧೀಜಿಯವರು ಚಕಾರವೆತ್ತಲಿಲ್ಲ. ಬ್ರಿಟಿಷರನ್ನು ಖಂಡಿಸಲಿಲ್ಲ.
ಮೋತಿಲಾಲ್ ನೆಹರೂ
ಚಿತ್ತರಂಜನ್ ದಾಸ್
ಭಗತ್‍ಸಿಂಗ್‍ರ ಮೇಲಿನ ಪರಿಣಾಮ
ಇದರಿಂದ ಭಗತ್‍ಸಿಂಗ್ ಗಾಂಧೀಜಿ ಮತ್ತು ಕಾಂಗ್ರೆಸ್ ಬಗ್ಗೆ ತೀವ್ರ ಅಸಮಾಧಾನಗೊಂಡರು. ಬ್ರಿಟಿಷರನ್ನು ಭಾರತದಿಂದ ಓಡಿಸಲು ಭಗತ್‍ರು ಆ 14ರ ಎಳೆಯ ವಯಸ್ಸಿನಲ್ಲಿಯೇ ತೀರ್ಮಾನಿಸಿದರು. ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಸಾಮಾನ್ಯ ಜನರನ್ನೂ ತೊಡಗಿಸಿದರು ಎಂಬ ಕಾರಣಕ್ಕಾಗಿ ಭಗತ್‍ಸಿಂಗ್ ಅವರನ್ನು ಗೌರವಿಸಿದರೂ ಅವರ ಮಾರ್ಗವನ್ನು ತಿರಸ್ಕರಿಸಿದರು. ಬಿಳಿಯರು ನಿಶ್ಯಸ್ತ್ರರಾದ ಭಾರತೀಯರ ಮೇಲೆ ಆಕ್ರಮಣ ಮಾಡುವುದು, ಅವರ ಮೇಲೆ ಲಾಠಿಚಾರ್ಜ್, ಗೋಲಿಬಾರ್ ಮಾಡುವುದು, ಅಮಾನವೀಯವಾಗಿ ಹೊಡೆಯುವುದು, ಅದರ ಬದಲಿಗೆ ಭಾರತೀಯರು ಮೂಕರಾಗಿ ಪ್ರದರ್ಶನ ಮಾಡುವುದು, ಕೇವಲ ಘೋಷಣೆಗಳನ್ನು ಕೂಗುವುದು ಅವರಿಗೆ ಸರಿಕಾಣಲಿಲ್ಲ.
ತಿಲಕ್‍ರವರ “ಸ್ವರಾಜ್ಯ ನನ್ನ ಆಜನ್ಮ ಸಿದ್ದ ಹಕ್ಕು ಅದನ್ನು ನಾನು ಪಡೆದೇ ತೀರುತ್ತೇನೆ. ಭಿಕ್ಷೆ ಮನವಿಗಳಿಂದ ಸ್ವಾತಂತ್ರ್ಯ ಸಿಗುವುದಿಲ್ಲ, ಅದನ್ನು ಬಲವಂತವಾಗಿ ಪಡೆಯಬೇಕು,” ಎಂಬ ಸಿದ್ಧಾಂತವೇ ಸರಿ ಎಂಬ ತೀರ್ಮಾನಕ್ಕೆ ಬಂದರು. ಬ್ರಿಟಿಷರು ತಲ್ಲಣಗೊಂಡು ಮಂಡಿಯೂರಿ ನಿಲ್ಲಬೇಕಾದ ಪರಿಸ್ಥಿತಿಯಲ್ಲಿದ್ದಾಗ ಗಾಂಧೀಜಿಯವರು ಹೋರಾಟವನ್ನು ಹಿಂತೆಗೆದುಕೊಂಡು ಜನತೆಯ ಹೋರಾಟದ ಸ್ಪೂರ್ತಿಗೆ ತಣ್ಣೀರೆರೆಚಿದ್ದು ಭಗತ್‍ಸಿಂಗ್‍ರಿಗೆ ಸರಿಕಾಣಲಿಲ್ಲ. ಅವರ ಪ್ರಕಾರ, ‘ಶಕ್ತಿಯನ್ನು ಆಕ್ರಮಣಕಾರಿಯಾಗಿ ಬಳಸಿದರೆ ಅದು ಹಿಂಸೆ, ಆದರೆ ನ್ಯಾಯಯುತವಾದ ಕಾರಣಕ್ಕಾಗಿ ಅಂದರೆ ಒಂದು ದೇಶ ಸ್ವಾತಂತ್ರ್ಯ ಪಡೆಯಲು ತನ್ನ ಆಕ್ರಮಣಕಾರರ ಮೇಲೆ ಶಕ್ತಿ ಬಳಸಿದರೆ ಅದು ನೈತಿಕವಾಗಿ ಸರಿಯಾದದ್ದು!’
ವಿವಾಹವಾಗಲು ಕಾಲವಲ್ಲ
ಈ ಮಧ್ಯೆಯೇ ಮನೆಯಲ್ಲಿ ಅವರಿಗೆ ವಿವಾಹ ಮಾಡಲು ತಯಾರಿ ನಡೆಸಲಾಯಿತು. ಅಜ್ಜಿಯ ಒತ್ತಡ ಹೆಚ್ಚಾಯಿತು. ಭಗತ್ ನೇರವಾಗಿಯೇ ವಿವಾಹವಾಗಲು ನಿರಾಕರಿಸಿದರು. “ಇದು ಮದುವೆಗೆ ಸಮಯವಲ್ಲ, ನನ್ನ ಸರ್ವಸ್ವವನ್ನೂ ದೇಶಕ್ಕೇ ಅರ್ಪಿಸಬೇಕೆಂದು ತೀರ್ಮಾನಿಸಿದ್ದೇನೆ. ನೀನೂ, ಚಿಕ್ಕಪ್ಪಂದಿರು ಇದಕ್ಕಾಗಿಯೇ ಹೋರಾಡಿದ್ದೀರಿ. ನಾನೂ ನಿಮ್ಮ ದಾರಿಯನ್ನೇ ಅನುಸರಿಸುತ್ತೇನೆ,” ಎಂದು ತಂದೆಗೆ ಎಷ್ಟು ಹೇಳಿದರೂ, ತಂದೆಯಾಗಲಿ, ಮನೆಯ ಇತರರಾಗಲಿ ಕೇಳಲಿಲ್ಲ. ತಮ್ಮ ಚಿಕ್ಕಮ್ಮನ ನೋವನ್ನು ಕಂಡಿದ್ದ ಭಗತ್‍ಸಿಂಗ್ ಬಹುಶಃ ಇನ್ನೊಬ್ಬ ಹೆಣ್ಣು ಮಗಳ ಕಣ್ಣೀರನ್ನು ನೋಡಲು ಸಿದ್ದರಿರಲಿಲ್ಲವೇನೊ! ಒತ್ತಾಯ ತೀವ್ರವಾದಾಗ ಭಗತ್‍ಸಿಂಗ್ ಮನೆಯಿಂದ ಯಾರಿಗೂ ಹೇಳದೆ ಹೊರನಡೆದು ಕಾನ್ಪುರ ಸೇರಿದರು. ಅವರು ಮನೆಯಿಂದ ಹೊರ ಬಂದ ಮೇಲೆ ಅವರನ್ನು ಹುಡುಕಾಡಲು ಮನೆಯವರು ಪ್ರಯತ್ನಿಸಿದರು. ಭಗತ್‍ಸಿಂಗ್‍ರವರು ಅವರಿಗೆ ಒಂದು ಪತ್ರ ಬರೆದರು, “ಅಪ್ಪಾ, ನೀವು ಕೇವಲ ಅಜ್ಜಿಯ ಭಾವನೆಗಳಿಗೆ ಗಮನವೀಯುತ್ತಿರುವಿರಿ. ಆದರೆ 33 ಕೋಟಿ ಜನತೆಯ ತಾಯಿಯಾದ ಭಾರತಮಾತೆ ಎಷ್ಟು ಕಷ್ಟವನ್ನು ಅನುಭವಿಸುತ್ತಿದ್ದಾಳೆ ಎಂಬುದನ್ನು ಸ್ವಲ್ಪ ಆಲೋಚಿಸಿ. ಅವಳ ತೊಂದರೆಗಳನ್ನು ನಿವಾರಿಸಲು ನಾವು ಎಲ್ಲವನ್ನೂ ತ್ಯಾಗ ಮಾಡಬೇಕಾಗುತ್ತದೆ. ನಿಮಗೆ ನೆನಪಿರಬಹುದು, ಅಜ್ಜಾ ನನ್ನನ್ನು ದೇಶಸೇವೆಗೆಂದೇ ಮೀಸಲಾಗಿಟ್ಟರು. ಆ ಪ್ರತಿಜ್ಞೆಯನ್ನೇ ನಾನೀಗ ಪೂರೈಸುತ್ತಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ.” ಇದು ನಡೆದದ್ದು 1923ರಲ್ಲಿ. ಭಗತ್‍ಸಿಂಗ್‍ರಿಗೆ ಆಗ ಕೇವಲ 16 ವರ್ಷಗಳು. ಮದುವೆಯ ಪ್ರಯತ್ನ ಮಾಡುವುದಿಲ್ಲವೆಂದು ಆಶ್ವಾಸನೆ ನೀಡಿದ ನಂತರವೇ ಅಂದರೆ 1925ರಲ್ಲಿ ಭಗತ್ ತಮ್ಮ ಕುಟುಂಬದವರನ್ನು ಭೇಟಿಯಾದದ್ದು.
ಪತ್ರಕರ್ತರಾಗಿ ಭಗತ್
ಕಾನ್ಪುರದಲ್ಲಿ “ಪ್ರತಾಪ್” ಪತ್ರಿಕೆ ನಡೆಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಗಣೇಶ್ ಶಂಕರ್ ವಿದ್ಯಾರ್ಥಿಯವರನ್ನು ಭೇಟಿ ಮಾಡಿದರು. “ಸ್ವಾತಂತ್ರ್ಯಕ್ಕಾಗಿ ಹೋರಾಟಕ್ಕೆ ಧುಮುಕುವುದೆಂದರೆ ಜೀವದ ಮೇಲೆ ಆಸೆ ತೊರೆದಂತೆ,” ವಿದ್ಯಾರ್ಥಿಯವರು ಹೇಳಿದರು. “ದೇಶಕ್ಕಾಗಿ ಮಾಡಲು ಇಲ್ಲವೇ ಮಡಿಯಲು ಕಂಕಣಬದ್ಧನಾಗಿಯೇ ಇಲ್ಲಿಗೆ ಬಂದಿದ್ದೇನೆ,” ಉತ್ತರಿಸಿದರು ಭಗತ್. “ಸ್ವಾತಂತ್ರ್ಯಯೋಧ ಯಾವುದೇ ಆಮಿಷಕ್ಕೆ ಸಿಲುಕಬಾರದು,” ಎಚ್ಚರಿಸಿದರು. “ಖಂಡಿತವಾಗಿಯೂ ಇಲ್ಲ. ಯೋಧನಾಗಿ ನಿಮ್ಮ ಮಾರ್ಗದರ್ಶನದಲ್ಲಿ ನಡೆಯಲು ಇಚ್ಛಿಸುತ್ತೇನೆ,” ಅವರ ಪಾದ ಮುಟ್ಟಿ ಪ್ರಮಾಣ ಮಾಡಿದರು ಭಗತ್. ಈ ಯುವಕನ ಛಲವನ್ನು ಕಂಡ ವಿದ್ಯಾರ್ಥಿಯವರು ತಮ್ಮ ಪತ್ರಿಕೆಯಲ್ಲಿಯೇ ಪತ್ರಕರ್ತನಾಗಿ ಕೆಲಸ ಕೊಟ್ಟರು. ಅಲ್ಲಿಯೇ ಅವರು ಬಟುಕೇಶ್ವರ್ ದತ್‍ರನ್ನು ಭೇಟಿ ಮಾಡಿದ್ದು.
‘ಪ್ರತಾಪ್’ ಪತ್ರಿಕೆಯ ವರದಿಗಾರನಾಗಿ ಭಗತ್ ಮೊದಲು ವರದಿ ಮಾಡಿದ್ದು ದೆಹಲಿಯಲ್ಲಿ ನಡೆದ ಹಿಂದೂ-ಮುಸ್ಲಿಂ ಕೋಮು ಗಲಭೆಯ ಬಗ್ಗೆ. ಅಲ್ಲಿನ ಪರಿಸ್ಥಿತಿ ನೋಡಿ ಅವರು ತಲ್ಲಣಗೊಂಡರು. ಅನಾದಿ ಕಾಲದಿಂದಲೂ ಒಟ್ಟಿಗೆ ಬದುಕುತ್ತಿದ್ದ ಜನತೆ ಧರ್ಮದ ಹೆಸರಿನಲ್ಲಿ ಹೊಡೆದಾಡುತ್ತಿದ್ದುದನ್ನು ಕಂಡು ಚಿಂತಾಕ್ರಾಂತರಾದರು. ಬಹುಶಃ ಈ ಘಟನೆ ಅವರಲ್ಲಿ ಈಗಾಗಲೇ ಇದ್ದ ಕೋಮುವಾದಿ-ವಿರೋಧಿ ಭಾವನೆಯನ್ನು ತೀವ್ರಗೊಳಿಸಿತ್ತು ಮತ್ತು ಧರ್ಮನಿರಪೇಕ್ಷತಾ ಭಾವನೆಯನ್ನು ಅಂದರೆ ಧರ್ಮವನ್ನು ರಾಜಕೀಯದೊಂದಿಗೆ ಬೆರಸಬಾರದು, ಧರ್ಮ ವ್ಯಕ್ತಿಗತ ನಂಬಿಕೆಯಾಗಬೇಕು ಎಂಬುದನ್ನು ಸದೃಢಗೊಳಿಸಿತು. ನಂತರ ಅವರು ತಮ್ಮಂತಹ ಯುವಕರನ್ನು ಸೇರಿಸಿ 1925ರ
ಏಪ್ರಿಲ್ ನಲ್ಲಿ ಸಂಘಟಿಸಿದ “ನೌಜವಾನ್ ಭಾರತ್ ಸಭಾ” (ನವ ಯುವಕರ ಭಾರತ ಸಭೆ) ಯಾವುದೇ ಜಾತಿ, ಮತ, ಧರ್ಮಕ್ಕೆ ಮಾನ್ಯತೆ ನೀಡಲಿಲ್ಲ. ಎಲ್ಲರೂ ಒಂದು ಎನ್ನುವ ಭಾವನೆಗೆ ಮಹತ್ವ ನೀಡಿತು. ಅವರೆಲ್ಲಾ ಒಟ್ಟಿಗಿದ್ದರು. ಒಟ್ಟಿಗೆ ಅಡಿಗೆ ಮಾಡಿ, ಊಟ ಮಾಡುತ್ತಿದ್ದರು - ಜಾತಿ ಧರ್ಮಗಳ ಬೇಧವಿಲ್ಲದೆ.
(ಮುಂದುವರೆಯುತ್ತದೆ)
- ಸುಧಾ ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ