Pages

ಅನುವಾದಿತ ಆತ್ಮಚರಿತ್ರೆ - ವಿಜಯ




ವಿಜಯ     -   ಸೂರ್ಯ ಸೇನ್

ನನ್ನ ಸಾಧಾರಣ ಜೀವನದಲ್ಲಿ ಅದೆಷ್ಟು ವಿಜಯದಶಮಿಯ ದಿನಗಳು ಒಂದಾದ ಮೇಲೊಂದು ಬರುತ್ತವೆಯೋ ಗೊತ್ತಿಲ್ಲ. ಆದರೆ ಅಂದಿನ ವಿಜಯದಶಮಿಯ ದಿನಗಳಿಗೂ ಇಂದಿನ ವಿಜಯದಶಮಿಯ ದಿನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇವತ್ತಿನ ವಿಜಯದಶಮಿಯು ಎಲ್ಲದಕ್ಕಿಂತಲೂ ಹೆಚ್ಚು ಅಮೂಲ್ಯವಾದದ್ದು ಎಂದೇ ಅನಿಸುತ್ತಿದೆ.
ಕಳೆದ ಎರಡು, ಎರಡೂವರೆ ವರ್ಷಗಳಲ್ಲಿ (ಚಿತ್ತಗಾಂಗ್ ಬಂಡಾಯ ನಡೆದ ದಿನದಿಂದ – 18, ಏಪ್ರಿಲ್, 1930) ಮೂರು ವಿಜಯದಶಮಿಗಳು ಬಂದಿದ್ದವು. ಅವುಗಳ ನಡುವೆ, ಹೊ! ನನ್ನ ಅದೆಷ್ಟೋ ಆತ್ಮೀಯ ಗೆಳೆಯರು ಮತ್ತು ನನ್ನ ಅದೆಷ್ಟೋ ಪ್ರೀತಿಯ ಸೋದರ-ಸೋದರಿಯರು ವಿಜಯ (ವಿದಾಯ) ದಿನವನ್ನು ಆಚರಿಸುವುದಕ್ಕೆ ಸಾಕ್ಷಿಯಾದೆ; ಅದೆಲ್ಲದರ ಸಂಪೂರ್ಣ ಜವಾಬ್ದಾರಿ ನನ್ನದೇ. ಇದೆಲ್ಲವೂ ಈ ದಿನ ನನ್ನ ಮನಸ್ಸಿಗೆ ಬರುತ್ತಿದೆ.
ಅದೆಷ್ಟೋ ಸುಂದರ, ಅನಘ್ರ್ಯ ರತ್ನಗಳು ಸುಖಜೀವನ, ಸಂಪತ್ತು, ಆಸ್ತಿಯಂತಹ ಇಹಜೀವನದ ಸೆಳೆತಗಳನ್ನು ಕ್ಷುಲ್ಲಕವೆಂದು ತೊರೆದು ದೇಶದ ಸ್ವಾತಂತ್ರ್ಯಕ್ಕಾಗಿ ಮಾತೃಭೂಮಿಯ ಬಲಿಪೀಠದಲ್ಲಿ ನಗುಮೊಗದೊಂದಿಗೆ ತಮ್ಮ ಜೀವವನ್ನು ಧಾರೆಯೆರದರು; ಅದೆಲ್ಲವೂ ಈಗ ನೆನಪಿಗೆ ಬರುತ್ತಿದೆ. ಹೀಗೆ ಮಾಡುವಾಗ ಅವರಲ್ಲಿ ಲವಲೇಶವೂ ಹಿಂಜರಿಕೆಯಾಗಲಿ, ತಡವರಿಕೆಯಾಗಲಿ ಇರಲಿಲ್ಲ. ತಮ್ಮ ಸ್ವಂತ ಇಚ್ಛೆಯಿಂದ ಪ್ರೇರಿತರಾಗಿ, ಉಲ್ಲಾಸದಿಂದ ಅವರು ಸಾವಿನ ಮಡಿಲಿಗೆ ಹಾರಿದರು.
ಈ ಮಹಾದಿನದಲ್ಲಿ ಅವರ ನೆನಪುಗಳು ಕಲ್ಲು ಹೃದಯದವನ ಕಣ್ಣಲ್ಲೂ ಕಣ್ಣೀರು ಹರಿಸುತ್ತದೆ. ಅವರ ಸಾಹಸ ಕಾರ್ಯಗಳ ಬಗ್ಗೆ ಹೇಳುವಾಗ ಹೆಮ್ಮೆಯಿಂದ ಎದೆಯುಬ್ಬಿ ಬರುತ್ತದೆ.
ಅಂದು,1 ನರೇಶ್, ಬಿಧು, ತೆಗ್ರಾ, ತ್ರಿಪುರಾ, ಮಧು, ಅರ್ಧೆಂದು, ಪ್ರಭಾಶ್, ನಿರ್ಮಲ್, ಜಿತೆನ್, ಮತಿ, ಶಶಾಂಕ,2 ರಾಮಕೃಷ್ಣ,3 ಭೊಲಾ, ನಿರ್ಮಲ್ ಬಾಬು,4 ಅಮರೆಂದ್ರ,5 ಮನ, ರಜತ್, ದೆಬು, ಸ್ವದೇಶ್6 ಮತ್ತು ಮಖನ್7 – ಇವರೆಲ್ಲರೂ ಒಬ್ಬರಾದ ಮೇಲೆ ಒಬ್ಬರು ನನ್ನ ಮನಸಿನಲ್ಲಿ ಬರುತ್ತಿದ್ದಾರೆ. ಅವರನ್ನು ನೆನಪಿಸಿಕೊಳ್ಳುವಾಗ ಅವರಿಗೆಲ್ಲಾ ವಿಜಯದಶಮಿಯ ಶುಭಾಶಯಗಳನ್ನು ಹೇಳುತ್ತಿದ್ದೇನೆ.
ನಾನು ಮನದೊಳಗೆ ಆಲೋಚಿಸುತ್ತೇನೆ:
ತಮ್ಮ ಜೀವನದಿಂದ ‘ವಿಜಯ’ದ ವಿದಾಯವನ್ನು ಆಚರಿಸುತ್ತಿರುವ ಹಲವಾರು ಜೀವಗಳಿಗೆ ನಾನೇ ಕಾರಣ. ಚಿನ್ನದ ಬೊಂಬೆಗಳಂತೆ ಹೊಳೆಯುವ ಯುವಕರನ್ನು ಸ್ವಾತಂತ್ರ್ಯದ ಬಲಿಪೀಠದಲ್ಲಿ ಬಲಿದಾನ ಮಾಡಿದ್ದೇನೆ ಮತ್ತು ಎಷ್ಟೋ ತಾಯಂದಿರ ಮಡಿಲನ್ನು ಖಾಲಿ ಮಾಡಿದ್ದೇನೆ. ಅದೆಷ್ಟೋ, ಅಯ್ಯೋ ಅದೆಷ್ಟೋ ಜನರನ್ನು ಗೃಹಬಂಧನ, ಸೆರೆವಾಸ, ಗಡಿಪಾರು ಮತ್ತು ಸಮುದ್ರದ ಸುತ್ತಲಿರುವ ದ್ವೀಪಗಳಲ್ಲಿ ಜೀವಾವಧಿ ಶಿಕ್ಷೆಗಳಿಗೆ ಕಳಿಸಿದ್ದೇನೆ? ಮನೆ ಮನೆಗಳಲ್ಲಿ ಕೇಳುವ ನೋವಿನ ಕೂಗುಗಳಿಗೆ ನಾನೇ ಕಾರಣ. ನಮ್ಮ ನೆಲಕ್ಕೆ ಬಂದ ಹಿಂಸೆ, ದಮನಗಳಿಗೆ ನನ್ನ ಕೆಲಸಗಳೇ ಕಾರಣ. ಈ ಎಲ್ಲಾ ಜವಾಬ್ದಾರಿಗಳಿಂದ ಹೇಗೆ ಮುಕ್ತನಾಗಲಿ?
ಅಮ್ಮಾ, ನನ್ನ ಸದಾ ಸಂತಸದಿಂದಿರುವ ದೇವಿ! ನಿನ್ನನ್ನು ಕಳುಹಿಸುವ ಈ ದಿನ ನನ್ನ ಹೃದಯ ನೋವಿನಿಂದ ನಲುಗಿಹೋಗಿದೆ; ತಾಯಿ, ಮನಃಪೂರ್ವಕವಾಗಿ ಕೇಳುತ್ತಿದ್ದೇನೆ, ಹೇಳು: “ನಾನೇನಾದರೂ ತಪ್ಪು ಮಾಡುತ್ತಿರುವೆನೆ?”
ಸುಮಾರು ಹದಿನೈದು ವರ್ಷಗಳ ಹಿಂದೆ, ಒಳ್ಳೆಯದು ಕೆಟ್ಟದ್ದು, ಎಲ್ಲವನ್ನೂ ಅಳೆದು ಸುರಿದು, ಸಾಕಷ್ಟು ಆಲೋಚನೆ ಮಾಡಿದ ಮೇಲೆ ನನ್ನ ಜೀವನದ ಆದರ್ಶ ಮತ್ತು ಗುರಿಯನ್ನು ಘೋಷಿಸಿದೆ. ಅದಕ್ಕೆ ಈಗಲೂ ಬದ್ಧನಾಗಿರುತ್ತೇನೆ.
ನನ್ನ ಮನಸ್ಸಿನಲ್ಲೇನಾದರೂ ದೌರ್ಬಲ್ಯ ಹುಟ್ಟಿಕೊಂಡಿದೆಯೇ? ಅಂತಹ ಹಲವಾರು ದೌರ್ಬಲ್ಯಗಳು ನನ್ನ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಪಟ್ಟವು, ಆದರೆ ಒಂದರೆಕ್ಷಣವೂ ನನ್ನ ಆದರ್ಶ ಮತ್ತು ಗುರಿಗಳನ್ನು ಬಿಡಲಿಲ್ಲ. ನಾನು ನಡೆಯುತ್ತಿರುವ ಹಾದಿಯನ್ನು ನಮ್ಮ ದೇಶದ ಕೆಲ ಜನರು ತಪ್ಪಾಗಿ ಅರ್ಥಮಾಡಿಕೊಂಡು ತಪ್ಪೆಂದು ಹೇಳಿದರು; ಆದರೆ ಇಂದಿಗೂ ನಾನು ನಡೆಯುತ್ತಿರುವ ಹಾದಿ ಸರಿಯೆಂಬುದೇ ನನ್ನ ಅನಿಸಿಕೆ; ಅದು ತೃಣಮಾತ್ರವೂ ಸಂದೇಹವಿಲ್ಲದ ಅನಿಸಿಕೆ.
ನಾನೇನೂ ತಪ್ಪು ಮಾಡಿಲ್ಲವೆಂಬ ನನ್ನ ಅನಿಸಿಕೆಯಲ್ಲಿ ಇವತ್ತಿಗೂ ಚಂಚಲತೆಯಿಲ್ಲ. ದೇಶದ ವಿಮೋಚನೆಗೋಸ್ಕರ ನಡೆಯುತ್ತಿರುವ ಯುದ್ಧದಿಂದಾಗಿ ನನ್ನ ದೇಶಕ್ಕೆ ಬಂದೆರಗಿರುವ ನೋವು, ಹಿಂಸೆಯ ಕೂಗು ಅನನ್ಯವಾದುದುಲ್ಲ; ಏಕೆಂದರೆ ಅಂತಹ ಬೇಗುದಿಗಳು ಬೇರೆ ದೇಶಗಳಲ್ಲಿ ಇಲ್ಲಿಗಿಂತ ದೊಡ್ಡ ಮಟ್ಟದಲ್ಲೇ ನಡೆದಿದೆ. ನನ್ನ ಆದರ್ಶದ ಬಗ್ಗೆ ಸಂಪೂರ್ಣ ವಿಶ್ವಾಸದೊಂದಿಗೆ ನಾನು ಆರಿಸಿಕೊಂಡ ಹಾದಿಯಲ್ಲಿ ಮುನ್ನಡೆಯುತ್ತಿದ್ದೇನೆ. ಹೊ, ತಾಯಿ, ನನ್ನ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸು, ನನ್ನನ್ನು ಇನ್ನಷ್ಟು ಬಲಶಾಲಿಯನ್ನಾಗಿ ಮಾಡು. ದಯವಿಟ್ಟು ಯಾವುದೇ ರೀತಿಯ ದೌರ್ಬಲ್ಯ ನನ್ನನ್ನು ದುರ್ಬಲಗೊಳಿಸದಂತೆ ಮತ್ತು ನನ್ನ ಹಾದಿಯಿಂದ ಕೂದಲೆಳೆಯಷ್ಟೂ ಹೊರಹೋಗದಂತೆ ನೋಡಿಕೊ. ನಾನು ಬಹಳ ಗಟ್ಟಿಗನೆಂದೇ ತಿಳಿದಿದ್ದೆ. ಆದರೆ ನನ್ನ ಕಳೆದೆರಡು ತಿಂಗಳ ಪಯಣವು ನನ್ನ ಕ್ರೂರ ಹೃದಯದಲ್ಲಿ ಮೃದು ವಾತ್ಸಲ್ಯವನ್ನು ಮತ್ತು ಆತ್ಮೀಯತೆಯನ್ನು ತುಂಬಿದೆಯೇನೋ ಎನ್ನುವಂತಿದೆ. ಈ ವಿಜಯದಶಮಿಯ ದಿನ ತಮ್ಮ ಗಂಡು ಮಕ್ಕಳು ಮತ್ತು ಹೆಣ್ಣುಮಕ್ಕಳನ್ನು, ಸೋದರರು ಮತ್ತು ಸೋದರಿಯರನ್ನು ಕಳೆದುಕೊಂಡು, ಅವರಿಗಾಗಿ ಕಣ್ಣೀರಿಡುತ್ತಿರುವ ಮತ್ತು ಅವರ ಕಂಬನಿಗಳು ಎದೆಯನ್ನು ತೋಯಿಸುತ್ತಿರುವ ಆ ಬಂಧುಗಳನ್ನು ನೆನಪಿಸಿಕೊಂಡಾಗ ಹೃದಯದಲ್ಲಿ ತಳಮಳವೆದ್ದು ತುಂಬಾ ನೋವಾಗುತ್ತದೆ. 
ಬಹುಶಃ ತಮ್ಮ ಹೃದಯ ಸಂಪತ್ತನ್ನು ಕಳೆದುಕೊಂಡದ್ದಕ್ಕೆ ನಾನೇ ಮೂಲ ಕಾರಣವೆಂದು ನನಗೆ ಶಾಪ ಹಾಕುತ್ತಿರಬಹುದು. ಆದರೆ ನನಗೆ ಅದರ ಬಗ್ಗೆ ಯೋಚನೆಯಿಲ್ಲ. ನನ್ನ ಹೃದಯವನ್ನು ನೋವಿನಿಂದ ಚುಚ್ಚುತ್ತಿರುವುದು ಅವರ ಹೃದಯ ವಿದ್ರಾವಕ ಅಳು ಮತ್ತು ಅವರ ದುಃಖಪೂರ್ಣ ನೋವು.
ಬಹಳಷ್ಟು ಅಕ್ಕರೆ ತೋರುವ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಂಡು ಹೇಗೆ ಹೃದಯ ಬಿರಿಯುವಂತೆ ಅಳುತ್ತಿದ್ದಾರೆ ಮತ್ತು ಅವರ ಹೃದಯಗಳು ಹೇಗೆ ತಡೆಯಲಾಗದ ದುಃಖದಿಂದ ಒದ್ದಾಡುತ್ತಿವೆ, ವಿಜಯದಶಮಿಯಂತಹ ಸಂತೋಷದ ದಿನವೂ ಅವರಿಗೆ ಹೇಗೆ ದುಃಖದಿಂದ ಕೂಡಿದೆಯೆಂದು ಸ್ಪಷ್ಟವಾಗಿ ನೋಡಬಲ್ಲೆ.
ತನ್ನ ವಂಶಸ್ಥನನ್ನು ಕಳೆದುಕೊಂಡ ತಂದೆಗೆ ವಿಜಯದಶಮಿಯ ಹಬ್ಬ ಶೋಕಾಚರಣೆಯಾಗಿದೆ. ಸೋದರ-ಸೋದರಿಯರು ತಮ್ಮ ಪ್ರೀತಿಪಾತ್ರ ಸೋದರ-ಸೋದರಿಯರನ್ನು ಕಳೆದುಕೊಂಡು ಸಹಿಸಲಸಾಧ್ಯ ನೋವಿನಿಂದ ನರಳುತ್ತಿದ್ದಾರೆ. ಅವರ ಮನಸ್ಸನ್ನು ಅದೆಂತಹ ಶೂನ್ಯ ಭಾವನೆ ತುಂಬಿರಬಹುದು? ಈ ಆಲೋಚನೆಗಳಿಂದ ನನ್ನ ಕಲ್ಲು ಹೃದಯವೂ ಕರಗಿ ನೀರಾಗುತ್ತಿದೆ. 
ಹೋ, ತಾಯಿ, ಮತ್ತೆ ಬೇಡಿಕೊಳ್ಳುತ್ತಿದ್ದೇನೆ, ಉತ್ತರ ಹೇಳು - ನಾನೇನಾದರೂ ತಪ್ಪು ಮಾಡಿದ್ದೇನಾ? ಅಷ್ಟೊಂದು ತಾಯಂದಿರು ಕಣ್ಣೀರು ಹಾಕಲು, ಅಷ್ಟೊಂದು ಅಪ್ಪಂದಿರು ಹೃದಯ ಬಿರಿಯುವ ನೋವಿನಿಂದ ನರಳಲು ಮತ್ತು ಅಷ್ಟೊಂದು ಸೋದರ-ಸೋದರಿಯರು ನಮ್ಮ ಹೃದಯವನ್ನು ಇರಿಯುವಂತಹ ದುಃಖದ ನಿಟ್ಟುಸಿರು ಬಿಡಲು ನಾನೇ ಕಾರಣಕರ್ತನಾದ್ದರಿಂದ ನನ್ನದು ತಪ್ಪಾಯಿತಾ?
ಆದರೆ ಇಲ್ಲ, ನನ್ನ ಮನಸ್ಸು ಹೇಳುತ್ತದೆ, ನಾನು ಸರಿದಾರಿಯಲ್ಲೇ ಸಾಗುತ್ತಿದ್ದೇನೆ. ಆದ್ದರಿಂದಲೇ ನನ್ನ ಸುತ್ತ ಸ್ಮಶಾನ ಬೆಳೆಯುತ್ತಿರುವುದನ್ನು ಗಮನಿಸುತ್ತಿದ್ದರೂ ಸಹ ಮತ್ತು ಅದರಿಂದ ನೋವಾಗುತ್ತಿದ್ದರೂ ಸಹ, ನಾನು ನನ್ನ ಆದರ್ಶವನ್ನು ಎದೆಗೊತ್ತಿಕೊಂಡು ಹಿಡಿದುಕೊಂಡಿದ್ದೇನೆ. ನನ್ನ ಭರವಸೆಯೆಂದರೆ, ಒಂದು ದಿನ ಆ ಸ್ಮಶಾನಗಳ ಮೇಲೆ ಸ್ವಾತಂತ್ರ್ಯದ ಭವ್ಯ ಸದನ ಕಟ್ಟಲಾಗುತ್ತದೆ. ಒಂದು ಕೈಯಲ್ಲಿ ಶಸ್ತ್ರಗಳನ್ನಿಟ್ಟು, ಇನ್ನೊಂದು ಕೈಯಲ್ಲಿ ಅಮೃತ (ವಿಷ, ಅಂದರೆ ಪೊಟಾಶಿಯಮ್ ಸಯನೈಡ್) ಕೊಟ್ಟು ಕಳುಹಿಸಿದ ಆ ಸುಂದರ, ನಿಷ್ಕಲಂಕ ಪವಿತ್ರ ಮೂರ್ತಿಯನ್ನು ಇಂದು ತುಂಬಾ ನೆನಪಿಸಿಕೊಳ್ಳುತ್ತಿದ್ದೇನೆ. ಅವಳ ನೆನಪು ಬೇರೆಲ್ಲಾ ಚಿತ್ರಗಳನ್ನು ಅಳಿಸಿಬಿಡುತ್ತಿದೆ.
ನಾನೇ ಕೈಯಾರೆ ನಾಯಕನ ವಸ್ತ್ರಗಳನ್ನು ತೊಡಿಸಿ ಕ್ರಾಂತಿಕಾರಿ ಚಟುವಟಿಕೆಗೆಂದು ರಣರಂಗಕ್ಕೆ ಕಳುಹಿಸಿದ, ಖಚಿತವಾದ ಸಾವಿನ ದವಡೆಗೆ ಹೋಗಲು ನಾನೇ ಅನುಮತಿ ನೀಡಿದ ಆಕೆಯ ನೆನಪನ್ನು ಕಳೆದ ಹದಿನೈದು ದಿನಗಳಿಂದ ಒಂದರೆಕ್ಷಣವೂ ಮರೆಯಲು ಸಾಧ್ಯವಾಗುತ್ತಿಲ್ಲ. ಬಟ್ಟೆ ತೊಡಿಸಿದ ಮೇಲೆ ಸ್ವಲ್ಪ ದುಃಖದ ಧ್ವನಿಯಲ್ಲೇ ಹೇಳಿದೆ, “ನಾನು ಬಟ್ಟೆ ತೊಡಿಸುವುದು ಇದೇ ಕೊನೆ.  ಇನ್ನು ಮೇಲೆ ನಿನ್ನಣ್ಣ ಬಟ್ಟೆ ಹಾಕಿಕೊಳ್ಳಲು ಸಹಾಯ ಮಾಡುವುದಿಲ್ಲ.”
ಈ ಮಾತುಗಳನ್ನು ಕೇಳಿ ಮೂರ್ತಿಯಲ್ಲಿ ನಿಸ್ತೇಜ ನಗು ಕಂಡಿತು! ಅದೆಂತಹ ಪಾಪದ ನಗು! ಅದರಲ್ಲಿ ಸಾಕಷ್ಟು ಸಂತೋಷ, ಸಾಕಷ್ಟು ದುಃಖ ಮತ್ತು ಘಾಸಿಗೊಂಡ ಭಾವನೆಗಳ ಹತ್ತಾರು ಮಾತುಗಳು ಹುದುಗಿದ್ದವು.
ಆಕೆ ಕೈಯಾರೆ ಅಮೃತ ಕುಡಿದು ಅಮರತ್ವ ಪಡೆದಳು. ಆದರೆ ಆಕೆಯ ವಿಸರ್ಜನೆಯಿಂದ ಉಂಟಾದ ನೋವನ್ನು ಈ ನಶ್ವರ ಪ್ರಪಂಚದಲ್ಲಿ ಮರೆಯಲು ಸಾಧ್ಯವಿಲ್ಲ. ಇಂದು ವಿಜಯದಶಮಿಯ ಸಂದರ್ಭದಲ್ಲಿ ಅವಳ ‘ವಿಜಯ’ದ ನೋವಿನ ನೆನಪುಗಳು ನನ್ನ ಹೃದಯದಲ್ಲಿ ದುಃಖದ ರಾಗವನ್ನು ಹೊಮ್ಮಿಸುತ್ತಿವೆ.
ಏಕೆಂದರೆ ಅವಳು ನನ್ನ ಸಂತಸದ ಸೆಲೆ; ಅವಳು ಅದೆಷ್ಟು ಮುಗ್ಧೆ ಮತ್ತು ಪುಣ್ಯವಂತೆಯಾಗಿದ್ದಳು, ಅದೆಷ್ಟು ಸುಂದರ, ಪವಿತ್ರ ಮತ್ತು ಶ್ರೇಷ್ಠಗಳಾಗಿದ್ದಳು. ನಾನು ಆಕೆಯ ಕೆಲಸದಲ್ಲಿ ಬೇರೆ ಯಾರಲ್ಲೂ ಕಾಣದ ಪರಿಪೂರ್ಣತೆಯನ್ನು ಕಂಡಿದ್ದೆ.
ಅವಳ ಮನಸಿನ ಸೌಂದರ್ಯ ನನ್ನನ್ನು ಸೆಳೆದಿತ್ತು. ಮಾನಸಿಕ ಶಕ್ತಿ, ದೃಢನಿಶ್ಚಯ, ಧೈರ್ಯ ಮತ್ತು ಸಾಹಸಗಳಲ್ಲಿ ಆಕೆ ಯಾರಿಗೂ ಕಡಿಮೆಯಿರಲಿಲ್ಲ. ಅವಳ ಸರಳತೆ ಮತ್ತು ವಿನಯಗಳೆರೆಡೂ ತುಂಬಾ ಸುಂದರವಾಗಿದ್ದವು. ಆಕೆಗೆ ಶಿಕ್ಷಣದಲ್ಲಾಗಲಿ, ಉತ್ತಮ ಮತ್ತು ಸುಂದರ ನಡೆನುಡಿಗಳ ಸಾಕ್ಷಾತ್ಕಾರದಲ್ಲಾಗಲಿ ಕೊರತೆ ಇರಲಿಲ್ಲ.
ಅಂತಹ ತುಂಬಾ ವಾತ್ಸಲ್ಯಮಯಿ ಮತ್ತು ಅಂತಹ ಅಕ್ಕರೆಯ ಮೂರ್ತಿಯನ್ನು ನನ್ನ ಕೈಯಾರೆ ಬಲಿಕೊಟ್ಟ ಮೇಲೆ ವಾಪಸ್ ಬಂದೆ. ಅದಕ್ಕೇ ಇಂದು ಆಕೆಯ ನೆನಪು ಪದೇ ಪದೇ ಕಾಡುತ್ತಿದೆ ಮತ್ತು ಆಕೆಯ ಚಿತ್ರ ನನ್ನ ಮನಸ್ಸನ್ನು ಕಾಡುತ್ತಿದೆ. ಆಕೆಯ ಅಪೂರ್ವ ಆತ್ಮಾಹುತಿಯು ನನ್ನ ಮನಸ್ಸಿಗೆ ಸಂತೋಷವನ್ನು ತರಲಿ ಮತ್ತು ನನ್ನನ್ನು ಮತ್ತಷ್ಟು ಬಲಶಾಲಿಯನ್ನಾಗಿ ಮಾಡಲಿ. ಅವಳ ನೆನಪು ಅವಳ ಗೌರವಕ್ಕೆ ಯೋಗ್ಯನಾಗುವಂತೆ ಮಾಡಲಿ ಮತ್ತು ಅಂತಹ ಸಂತೋಷವನ್ನು ಅವಳನ್ನು ಕಳೆದುಕೊಂಡ ನೋವು ಮಾಸುವಂತೆ ಮಾಡದಿರಲಿ.
ನನ್ನ ವಾತ್ಸಲ್ಯದ ಮೂರ್ತಿಗೆ ಹೇಳುತ್ತಿದ್ದೇನೆ:
ರಾಣಿ ! (ಪ್ರೀತಿಲತಾಳ ಅಡ್ಡ ಹೆಸರು) ಅನೇಕ ಸಂದರ್ಭಗಳಲ್ಲಿ ನಾನು ನಿನಗೆ ನೋವುಂಟು ಮಾಡಿದ್ದೇನೆ. ಈ ವಿಜಯದ ದಿನ ನಿನ್ನಣ್ಣನ ತಪ್ಪುಗಳನ್ನು ಮನ್ನಿಸಿ ಬಿಡು. ನಾನು ನಿನ್ನನ್ನು ಬಹಳ ಹತ್ತಿರದವಳೆಂದು ನೋಡಿದ್ದರಿಂದಲೇ ನಿನ್ನ ಸಣ್ಣ ತಪ್ಪುಗಳಿಗೂ ಜೋರು ಮಾತುಗಳನ್ನಾಡಿದ್ದೇನೆ; ಕೆಲವೊಮ್ಮೆ ತಪ್ಪಾರ್ಥ ಮಾಡಿಕೊಂಡು ನೋವು ಕೊಟ್ಟಿದ್ದೇನೆ. ನಾನು ಸಾವಿರಾರು ಜೋರು ಮಾತುಗಳನ್ನಾಡಿದರೂ ನೀನು ಮನಸಿಗೆ ಹಚ್ಚಿಕೊಳ್ಳುವುದಿಲ್ಲವೆಂದು ಯೋಚಿಸುವುದಕ್ಕೆ ಒಗ್ಗಿ ಹೋಗಿದ್ದೆ. ಆದರೆ ನೀನು ಯಾವತ್ತೂ ಮುನಿಸಿಕೊಳ್ಳಲಿಲ್ಲ, ಕೋಪ ಮಾಡಿಕೊಳ್ಳಲಿಲ್ಲ.

ಕೊನೆ ಕ್ಷಣವೂ ಸಹ ನಿನ್ನನ್ನು ತಪ್ಪಾರ್ಥ ಮಾಡಿಕೊಂಡು ಕೆಲವು ಜೋರು ಮಾತುಗಳನ್ನಾಡಿದ್ದೇನೆ. ಬಹುಶಃ ನೀನು ನಮ್ಮನ್ನು ಬಿಟ್ಟು ಹೋಗುವಾಗ ಘಾಸಿಯಾದ ಭಾವನೆಯೊಂದಿಗೆ ಹೋಗಿರಬೇಕು. ಈ ಪವಿತ್ರವಾದ ದಿನದಲ್ಲಿ ನನ್ನೆಲ್ಲಾ ತಪ್ಪುಗಳನ್ನು, ವಿಫಲತೆಗಳನ್ನು ಮರೆತು ಬಿಡು; ನಿನ್ನಣ್ಣನ ವಿಜಯದಶಮಿಯ ಶುಭಾಶಯಗಳನ್ನು ನಗುಮುಖದಿಂದ ಸ್ವೀಕರಿಸು. ನನ್ನ ವಾತ್ಸಲ್ಯದ, ನನಗೆ ನಿನ್ನ ಬಗ್ಗೆಯಿರುವ ಗೌರವದ ಶುಭಾಶಯಗಳನ್ನು ಕೋರುತ್ತಿದ್ದೇನೆ. ಇದು ಒಂದುಗೂಡುವ ದಿನ, ಎಲ್ಲಾ ವ್ಯತ್ಯಾಸಗಳನ್ನು, ಭಿನ್ನತೆಗಳನ್ನು, ಜಗಳಗಳನ್ನು ಮತ್ತು ವಿವಾದಗಳನ್ನು ಮರೆಯುವ ದಿನ ಮತ್ತು ಎಲ್ಲಾ ತಪ್ಪು ಒಪ್ಪುಗಳನ್ನು ಮರೆಯುವ ದಿನ. ನೀನು ನನ್ನ ಜೊತೆಯಿರುವಾಗ ಕೊಡುತ್ತಿದ್ದ ಸಂತೋಷವನ್ನೇ ಆ ದೂರದ ನಾಡಿನಿಂದಲೂ ಕೊಡು.
ದೇವಿ ಮೇಲಾಣೆ, ನಿನ್ನಷ್ಟು ಮುಗ್ಧ, ಪುಣ್ಯವಂತ, ನಿಷ್ಕಳಂಕಳಾದವಳು ನನಗೆ ಇದುವರೆಗೂ ಸಿಕ್ಕಿಲ್ಲವೆಂದು ನನ್ನ ಹೃದಯದಾಳದಿಂದ ಹೇಳಬಯಸುತ್ತೇನೆ. ನೀನು ನಿಜಕ್ಕೂ ಹೂವಿನಷ್ಟೇ ಸುಂದರ, ಪವಿತ್ರ ಮತ್ತು ಮಹಾನಳು. ನಿನ್ನ ಆತ್ಮಾಹುತಿಗೆ ಮತ್ತೊಂದು ಉದಾಹರಣೆಯಿಲ್ಲ; ಇದು ನಿನ್ನನ್ನು ಮತ್ತಷ್ಟು ಸೌಂದರ್ಯವತಿಯನ್ನಾಗಿ ಮಾಡಿದೆ.

* [ಚಿತ್ತಗಾಂಗ್ ಮಹಾಬಂಡಾಯದ ಪರಮೋಚ್ಛ ನಾಯಕರಾದ ಮಾಸ್ತರ್‍ದಾ ಸೂರ್ಯ ಸೆನ್ ಈ ಲೇಖನದ ಬರಹಗಾರರು. ಶಿಕ್ಷಕರಾಗಿದ್ದ ಸೂರ್ಯ ಸೆನ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು, ಚಿತ್ತಗಾಂಗ್‍ನಲ್ಲಿ ನಾಯಕರಾಗಿದ್ದರು. ಅವರನ್ನು ಪ್ರೀತಿಯಿಂದ ಮಾಸ್ತರ್‍ದಾ (ಮಾಸ್ತರಣ್ಣ) ಎಂದೇ ಕರೆಯುತ್ತಿದ್ದರು. ‘ವಿಜಯ’ದ ದಿವಸ ಎಂದರೆ ದೇವಿ ಹೊರಡುವ ದಿನ. ಆ ದಿನಗಳಲ್ಲಿ ಅದು ಒಂದು ಕಡೆ ದೇವಿ ಹೋಗುತ್ತಾಳೆಂಬ ನೋವು ಮತ್ತು ಇನ್ನೊಂದು ಕಡೆ ಎಲ್ಲರೂ ಒಟ್ಟಾಗಿ ಸೇರುವ ಸಂತೋಷ, ಸಂಭ್ರಮಗಳೆರೆಡೂ ಇರುವ ದಿನ. ಲೇಖಕರು ತಮ್ಮ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಹೋರಾಟದ ಸಂಗಾತಿ ಪ್ರೀತಿಲತಾ ವದೇದ್ದಾರೆ ಸಾವನ್ನಪ್ಪಿದ್ದರಿಂದ ಉಂಟಾದ ಮಾನಸಿಕ ಕ್ಷೋಭೆಯನ್ನು ‘ವಿಜಯ’ ಲೇಖನದಲ್ಲಿ ದಾಖಲಿಸಿದ್ದಾರೆ. ಪ್ರೀತಿಲತಾ ವದೇದ್ದಾರ್ ಆತ್ಮಾಹುತಿ ಮಾಡಿಕೊಂಡ ಹದಿನೈದು ದಿನಗಳ ನಂತರ ಬಂದ ವಿಜಯದ ದಿನ (ವಿಜಯದಶಮಿ) ಈ ಸಾಲುಗಳನ್ನು ಬರೆದರು. ವಿಚಾರಣೆಯ ಸಂದರ್ಭದಲ್ಲಿ, ಚಿತ್ತಗಾಂಗ್ ಜಿಲ್ಲೆಯಲ್ಲಿ ನಡೆದಂಥ ಎಲ್ಲಾ ಕ್ರಾಂತಿಕಾರಿ ಪ್ರಸಂಗಗಳಿಗೂ ಸೂರ್ಯ ಸೆನ್ ಜವಾಬ್ದಾರಿಯೆಂದು ಸಾಬೀತುಪಡಿಸಲು ಈ ಲೇಖನವನ್ನು ಮುಖ್ಯ ಸಾಕ್ಷಿಯಾಗಿ ಬ್ರಿಟಿಷರು ಉಪಯೋಗಿಸಿಕೊಂಡರು.]
1 ಪೇರಿಸಿದ್ದ ಶಸ್ತ್ರಗಳಿಗೆ ಬೆಂಕಿ ಹಾಕುವಾಗ ಗಂಭೀರ ಗಾಯವಾಗಿ, ಗಣೇಶ್ ಘೋಷ್ ಮತ್ತು ಅನಂತ್ ಸಿಂಗ್ ಮುಖ್ಯ ಸೇನೆಯಿಂದ ಬೇರ್ಪಟ್ಟು ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋದ ವ್ಯಕ್ತಿಯೇ ಹಿಮಾಂಗ್ಷು. ಅದಾದ ಕೆಲವು ದಿನಗಳಲ್ಲೇ ಹಿಮಾಂಗ್ಷು ತೀರಿಹೋದರು.
2 ಜಲಾಲಾಬಾದ್ ಕದನದ ಹುತಾತ್ಮರು.
3 ಐಜಿಪಿ ಕ್ರೆಗ್ ಎಂದು ತಪ್ಪಾರ್ಥ ಮಾಡಿಕೊಂಡು ಇನ್ಸ್‍ಪೆಕ್ಟರ್ ಆಫ್ ಪೊಲೀಸ್ ತಾರಿಣಿ ಚರಣ ಮುಖರ್ಜಿಯನ್ನು ಕೊಂದದ್ದಕ್ಕೆ ನೇಣಿಗೆ ಹಾಕಿದರು.
4 ಧಾಲ್‍ಘಾಟ್ ಮುಖಾಮುಖಿ ಕದನದಲ್ಲಿ ಗುಂಡಿನೇಟಿನಿಂದ ಸತ್ತರ.
5 1930ರ ಏಪ್ರಿಲ್ 24ರಂದು ಚಿತ್ತಗಾಂಗ್ ಪಟ್ಟಣವನ್ನು ಪೊಲೀಸರು ಮುತ್ತಿಗೆ ಹಾಕಿದಾಗ ಅಮರೇಂದ್ರ ನಂದಿ ಆತ್ಮಹತ್ಯೆ ಮಾಡಿಕೊಂಡರು.
6 ಕಲರ್ಪೊಲ್ ಕದನದಲ್ಲಿ ಹುತಾತ್ಮರಾದರು.
7 ಚಂದನ್ ನಗರ ಸಮರದಲ್ಲಿ ಹುತಾತ್ಮರಾದರು.

- ಅನುವಾದ: ಎಸ್.ಎನ್.ಸ್ವಾಮಿ 

ಕಾಮೆಂಟ್‌ಗಳಿಲ್ಲ: