Pages

ವ್ಯಕ್ತಿ ಪರಿಚಯ - ಕಮಲಾದೇವಿ ಚಟ್ಟೋಪಾಧ್ಯಾಯ



ಹಸ್ತಕಲೆಗಳ ಮಾತೆ ಕಮಲಾದೇವಿ ಚಟ್ಟೋಪಾಧ್ಯಾಯರವರು 1903 ಏಪ್ರಿಲ್ 3 ರಂದು ಜನಿಸಿದರು. ತಂದೆ ಅನಂತಯ್ಯ ಧಾರೇಶ್ವರ ಮಂಗಳೂರಿನ ಕಲೆಕ್ಟರ್ ಆಗಿದ್ದರೂ ಸರಳ ಹಾಗೂ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಗುಣವುಳ್ಳವರಾಗಿದ್ದರು. ತಾಯಿ ಗಿರಿಜಾಬಾಯಿ ಸುಶಿಕ್ಷಿತ, ವಿಚಾರವಂತೆ.  ಬಿಡುವಿನ ಸಮಯದಲ್ಲಿ  ನೆರೆಹೊರೆಯವರೊಂದಿಗೆ ಮಹಿಳೆಯರ ಸಾಮಾಜಿಕ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು. ಇವರ ಅಜ್ಜಿಯು ಸಹ ಸಂಸ್ಕೃತ ಭಾಷೆ ಕಲಿತವರು. ವಿದ್ವಾಂಸರೊಂದಿಗೆ ಚರ್ಚಿಸುತ್ತಿದ್ದರು. ಇಂತಹ ವಾತಾವರಣದಲ್ಲಿ ಬೆಳೆದ ಕಮಲಾದೇವಿ ಸಹಜವಾಗಿಯೇ ಕಲೆ, ಸಾಹಿತ್ಯ ಎಲ್ಲದರಲ್ಲೂ  ಮುಂದಿದ್ದರು. ತಾಯಿ ಮಗಳಿಗೆ ಓದಲು ಸಂಗೀತ ಕಲಿಯಲು ಪ್ರೋತ್ಸಾಹಿಸುತ್ತಿದ್ದರು.

ಪ್ರಾಥಮಿಕ ಶಿಕ್ಷಣ ಮುಗಿದ ನಂತರ ಕಮಲಳ ಮದುವೆ 1917 ರಲ್ಲಿ ನಯಂಪಲ್ಲಿ ಕೃಷ್ಣರಾವ್ ರವರೊಂದಿಗೆ ನಡೆಯಿತು. ಆದರೆ ವರ್ಷದೊಳಗೆ  ಕೃಷ್ಣರಾವ್ ನಿಧನರಾಗಿ ಕಮಲ ತಾಯಿಯ ಮನೆಯಲ್ಲೇ ಉಳಿದಳು. ತಂದೆಯ ಮರಣಾ ನಂತರ ಇವರ ಸಂಸಾರ ಮದ್ರಾಸಿನ ಮಾವ ಕಲ್ಲೇ ನಾರಾಯಣರಾವ್ ರವರ ಮನೆಯಲ್ಲಿ ಬಂದು ನೆಲೆಸಿತು. ಇಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಸೇರಿ ಚರ್ಚೆ ಮಾಡುತ್ತಿದ್ದರು. ಮೊದಲೇ ದೇಶಪ್ರೇಮಿ ಕಮಲ ಇದರಿಂದ ಸ್ಫೂರ್ತಿಗೊಂಡರು. ಅಲ್ಲದೆ ಮದರಾಸು ಸಂಗೀತ ಮತ್ತು ನೃತ್ಯ ಕಲೆಗಳ ತವರೂರಾಗಿದ್ದರಿಂದ ಇಲ್ಲಿ ಸಂಗೀತ, ನಾಟಕಗಳಲ್ಲಿ ಆಸಕ್ತಿಯಿದ್ದ ಕಮಲಳಿಗೆ ನಾಟಕಗಳಲ್ಲಿ ಅಭಿನಯಿಸುವ ಅವಕಾಶ ದೊರೆಯಿತು. ಸಮಾನ ಅಭಿರುಚಿಯಿದ್ದ ಹರೀಂದ್ರನಾಥ್ ಚಟ್ಟೋಪಾಧ್ಯಾಯರ ಪರಿಚಯವಾಗಿ 1919 ರಲ್ಲಿ ಇಬ್ಬರೂ ಮದುವೆಯಾದರು. ನಂತರ ಉನ್ನತ ಶಿಕ್ಷಣಕ್ಕಾಗಿ ಹರೀಂದ್ರನಾಥ್ ರು ವಿದೇಶಕ್ಕೆ ಹೋದರು. ಕಮಲಾ ತಾಯಿಯೊಂದಿಗೆ ಮಂಗಳೂರಿಗೆ ಬಂದರು. ಆ ಸಮಯದಲ್ಲಿ ಸಾಹಿತ್ಯ, ಸಂಗೀತ,ಚಿತ್ರಕಲೆಯಲ್ಲಿ ಪರಿಣಿತಿ ಹೊಂದಿದ್ದು, ಸಂಘಟನಾಗಾರರಾಗಿದ್ದ ಮಾರ್ಗರೇಟ್ ಕಸಿನ್ಸ್ ರವರ ಪರಿಚಯವಾಗಿ  ಅವರಿಂದ ಪಿಯಾನೋ ಮತ್ತು ಪಾಶ್ಚಾತ್ಯ ಸಂಗೀತವನ್ನು ಕಲಿತರು.



ಅಂದು ಮಹಿಳೆಯರು ಸಾರ್ವಜನಿಕ ಸಭೆ ಸಮಾರಂಭಗಳಿಗೆ ಹೋಗುತ್ತಿರಲಿಲ್ಲ. ಆದರೆ ಕಮಲ ತನ್ನ ಗೆಳೆತಿಯೊಂದಿಗೆ ಸಂಗೀತ ಕಛೇರಿಗೆ ಹೋಗಿ ಬಂದರು. ಇದನ್ನು ಹಲವರು ಪ್ರತಿಭಟಿಸಿದರೂ ಕಮಲ ಗಣನೆಗೆ ತೆಗೆದುಕೊಳ್ಳಲಿಲ್ಲ.

ಅಕ್ಕ ಸುಗುಣಳ ಸಾವು ಇವರ ಮೇಲೆ ತುಂಬೆಲ್ಲ ಪ್ರಭಾವ ಬೀರಿತು. "ಹೆಣ್ಣುಮಕ್ಕಳ ಸುಧಾರಣೆಯಾಗದೆ ಅವರ ಕಷ್ಟಗಳು ಹೋಗಲಾರವು" ಎಂದುಕೊಂಡು ಸಮಾಜಸೇವೆ ಕಾರ್ಯಕರ್ತೆಯಾಗಲು ನಿರ್ಧರಿಸಿದರು. ಇದಕ್ಕಾಗಿ 1921ರಲ್ಲಿ ತರಬೇತಿಗಾಗಿ ಲಂಡನ್ ಗೆ ಹೊರಟರು. ಇಲ್ಲಿ ಅವರು ಕಲೆಯ ಜೊತೆಗೆ ಸಮಾಜಶಾಸ್ತ್ರದ ಡಿಪ್ಲಮೋಗೆ ಸೇರಿದರು. ದುಡಿಯುವ ಕಾರ್ಮಿಕರ ಸಮಸ್ಯೆಗಳನ್ನು ತಿಳಿದುಕೊಂಡರು. ರಾಜಕೀಯ ಕಾರ್ಯಕರ್ತರು, ಕಲಾವಿದರನ್ನು  ಭೇಟಿ ಮಾಡಿ ಚರ್ಚಿಸುತ್ತಿದ್ದರು. ಇಲ್ಲಿಯೇ ಅವರಿಗೆ ಮಾರ್ಕ್ಸ್ ವಾದಿಗಳ ಪರಿಚಯವಾಗಿ ಅವರೊಡನೆ ಮಾಡುತ್ತಿದ್ದ ಚರ್ಚೆಗಳಿಂದ ಭಾರತದ ಆರ್ಥಿಕ ಸಂಕಷ್ಟಗಳ ಅರಿವುಂಟಾಯಿತು.
ಸ್ವದೇಶಕ್ಕೆ ಹಿಂತಿರುಗಿದ ಕಮಲ ಮತ್ತು ಹರೀಂದ್ರನಾಥ್ ಜನಜಾಗೃತಿ ಮೂಡಿಸುವಂತಹ ನಾಟಕಗಳನ್ನು  ರಚಿಸಿ ಪ್ರದರ್ಶಿಸುತ್ತಿದ್ದರು. ಸಾಮಾಜಿಕ ಪಿಡುಗುಗಳಾಗಿದ್ದ ಜಾತಿಪದ್ಧತಿ, ಅಸ್ಪೃಶ್ಯತೆ, ಬಾಲ್ಯವಿವಾಹ ಮೊದಲಾದವು ಇವರ ನಾಟಕಗಳ ವಸ್ತುವಿಷಯಗಳಾಗಿರುತ್ತಿವು. ಉಪ್ಪಿನ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸುವುದರ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆಮನೆಗೂ ಹೋಗಿಬಂದರು. ಸೆರೆಮನೆಯಲ್ಲಿದ್ದಾಗಲೂ ಮಹಿಳಾ ಖೈದಿಗಳ ಶೋಚನೀಯ ಸ್ಥಿತಿಯನ್ನು ಕಂಡು ಮನ ಕಲಕಿದ ಕಮಲಾದೇವಿ ಅವರುಗಳಿಗೆ ಔಷಧೋಪಚಾರದ ವ್ಯವಸ್ಥೆಯನ್ನು ಮಾಡಿದರು.
ಜೈಲಿನಿಂದ ಹೊರ ಬಂದ ಮೇಲೆ ಮಹಿಳಾಪರ ಕೆಲಸವನ್ನು ಮುಂದುವರಿಸಲು ನಿಶ್ಚಯಿಸಿದರು. ಅಖಿಲ ಭಾರತ ಮಹಿಳಾ ಪರಿಷತ್ತಿನ ಕಾರ್ಯದರ್ಶಿಯಾಗಿ ಮಹಿಳೆಯರನ್ನು ಸಂಘಟಿಸುವಂತಹ ಕೆಲಸಗಳನ್ನು ಮಾಡಿದರು. ಗಿರಣಿ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಮಹಿಳಾ ಕಾರ್ಮಿಕರ ಸಮಸ್ಯೆಗಳನ್ನು ಅರಿತು ಅವರಿಗೆ ವೈದ್ಯಕೀಯ ಸೌಲಭ್ಯಗಳು ದೊರೆಯುವಂತೆ ಮಾಡಿದರು.
ರಾಷ್ಟ್ರದ ಬಹು ದೊಡ್ಡ ಸಮಸ್ಯೆಯಾಗಿದ್ದ ಬಾಲ್ಯವಿವಾಹದ ಬಗ್ಗೆ ಚಿಂತಿಸಿ ಅದರ ರದ್ದತಿ ಮತ್ತು ವಿವಾಹದ ವಯಸ್ಸನ್ನು ಹೆಚ್ಚಿಸಲು ಕಾನೂನುಗಳನ್ನು ತರುವಂತೆ ಪ್ರಯತ್ನಿಸಿ ಯಶಸ್ವಿಯಾದರು. ಮಹಿಳೆಯರಿಗಾಗಿಯೇ ಪ್ರಾರಂಭವಾದ ಇರ್ವಿಂಗ್ ಗೃಹವಿಜ್ಞಾನ ಕಾಲೇಜಿನ ಸ್ಥಾಪನೆಗೆ ಕಾರಣರಾದರು. 1944 ರಲ್ಲಿ ಪರಿಷತ್ತಿನ ಅಧ್ಯಕ್ಷರಾಗಿ ಮಹಿಳಾಪರ ಕಾರ್ಯಗಳನ್ನು ಮಾಡಿದರು. ಇದಲ್ಲದೆ ದೇಶದ ಬೆನ್ನೆಲುಬಾಗಿದ್ದ ರೈತರ ಸಮಸ್ಯೆಗಳನ್ನು ಪರಿಹರಿಸಲು ಅವರ ಚಳವಳಿಗಳಲ್ಲಿಯೂ  ಭಾಗವಹಿಸುತ್ತಿದ್ದರು. ಸಮಾಜಮುಖಿ ಕಾರ್ಯಗಳ ಜೊತೆಗೆ 1924 ರಲ್ಲಿ ಬೆಳಗಾವಿಯಲ್ಲಿ  ನಡೆದ ಅಧಿವೇಶನದಲ್ಲಿ ಸ್ವಯಂಸೇವಿಕೆಯಾಗಿ ಕಾರ್ಯ ನಿರ್ವಹಿಸುವುದರ ಮೂಲಕ ರಾಜಕೀಯರಂಗಕ್ಕೂ ಪಾದಾರ್ಪಣೆ ಮಾಡಿದರು. ನಂತರ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರೂ, ಸ್ಪರ್ಧಿಸಿದ ಪ್ರಥಮ ಮಹಿಳೆಯೆನಿಸಿಕೊಂಡರು. 1927 ರಲ್ಲಿ ಕಾಂಗ್ರೆಸ್ ಪಕ್ಷ ಎ.ಐ.ಸಿ.ಸಿ. ಸದಸ್ಯತ್ವವನ್ನು  ನೀಡಿತು. 1929 ರಲ್ಲಿ ನಡೆದ ಅಹಮದಾಬಾದಿನ ಯುವ ಕಾಂಗ್ರೆಸ್  ಸಮಾವೇಶದ ಅಧ್ಯಕ್ಷೆಯಾದರು.
ಸ್ವಾತಂತ್ರ್ಯಾ ನಂತರ ದೇಶ ವಿಭಜನೆಯಿಂದ ನಿರಾಶ್ರಿತರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡು ಅವರಿಗೆ ನೆಲೆಯನ್ನು  ಕಲ್ಪಿಸಿ, ಅನೇಕ ಜೀವನೋಪಾಯಗಳನ್ನು ಕಲಿಸಿದರು. ಹೀಗಿರುವಾಗಲೇ ಸಮಾನ ಅಭಿರುಚಿಯಿಂದ ಒಂದಾಗಿದ್ದ ದಂಪತಿಗಳು ಹಲವಾರು ಕಾರಣಗಳಿಂದ ಬೇರೆಯಾಗಿ ವಿಚ್ಛೇದನೆ ಪಡೆದರು. ಕರಕುಶಲಕಲೆ ಎಂದರೆ ಇಷ್ಟ ಪಡುತ್ತಿದ್ದ ಕಮಲಾದೇವಿ 1952 ರಲ್ಲಿ ಕರಕುಶಲ ಮಂಡಳಿಯ ಅಧ್ಯಕ್ಷೆಯಾದರು. ದೇಶದ ಪಾರಂಪರಿಕ ಕಲೆಗಳು ನಶಿಸಿ ಹೋಗುತ್ತಿರುವುದನ್ನು ಗಮನಿಸಿ ಅವುಗಳ ಪುನಶ್ಚೇತನಕ್ಕಾಗಿ ಶ್ರಮಿಸಿದರು. ಕುಶಲಕರ್ಮಿಗಳಿಗೆ ತಮ್ಮ ವೃತ್ತಿಯನ್ನು ಮುಂದುವರಿಸಲು ಸರ್ಕಾರದ ವತಿಯಿಂದ ನೆರವನ್ನು ಕೊಡಿಸುವುದರ ಜೊತೆಗೆ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಿದರು. 
ನಂತರ ಅವರು ಮತ್ತೆ ರಂಗಭೂಮಿಯತ್ತ ತಮ್ಮ ಗಮನವನ್ನು ಹರಿಸಿದರು. 1944 ರಲ್ಲಿ 'ಭಾರತೀಯ ರಾಷ್ಟ್ರೀಯ ರಂಗಭೂಮಿ' ಸಂಸ್ಥೆಯನ್ನು ಸ್ಥಾಪಿಸಿದರು. ಇದು ಮುಂದೆ ಭಾರತೀಯ ನಾಟ್ಯ ಸಂಘವಾಗಿ ಬದಲಾಗಿ ಕಮಲಾದೇವಿಯವರು ಮೊದಲ ಅಧ್ಯಕ್ಷೆಯಾದರು. ಯುನೆಸ್ಕೊ ಅನುದಾನದಿಂದ 'ರಾಷ್ಟ್ರೀಯ ನಾಟಕ ಶಾಲೆ' ಯನ್ನು ಪ್ರಾರಂಭಿಸಿದರು. ನಾಟಕಕ್ಕಾಗಿ ಬಳಸುತ್ತಿದ್ದ ಉಪಕರಣಗಳಿಗಾಗಿ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದರು. 1952 ರಲ್ಲಿ ಸ್ಥಾಪನೆಯಾದ ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಉಪಾಧ್ಯಕ್ಷೆಯಾಗಿ ನಂತರ ಅಧ್ಯಕ್ಷೆಯಾಗಿ ಆಯ್ಕೆಗೊಂಡರು. ಕಲಾವಿದರನ್ನು ಪ್ರೋತ್ಸಾಹಿಸಲು ವಾರ್ಷಿಕ ಪ್ರಶಸ್ತಿ ನೀಡುವುದನ್ನು ಪ್ರಾರಂಭಿಸಿದರು. ಯುವ ಕಲಾವಿದರನ್ನು  ಪ್ರೋತ್ಸಾಹಿಸಲು ಶಿಷ್ಯವೇತನವನ್ನು ನೀಡುತ್ತಿದ್ದರು.
ಕಮಲಾದೇವಿಯವರು 80 ನೇ ವಯಸ್ಸಿನಲ್ಲಿ ತಮ್ಮ ಅನುಭವಗಳನ್ನು  ಕೃತಿಗಳ ರೂಪದಲ್ಲಿ ಬರೆದರು.ಪ್ರಮುಖವಾದವುಗಳೆಂದರೆ ಭಾರತೀಯರ ಮಹಿಳೆಯರ ಸ್ವಾತಂತ್ರ್ಯ ಹೋರಾಟ, ಭಾರತದ ಹಾಸುಗಂಬಳಿಗಳು, ಆಂತರಿಕ ಕುಹರಗಳು ಮತ್ತು ಬಾಹ್ಯಾಕಾಶಗಳು(ಆತ್ಮಕಥನ).

ಇಷ್ಟೆಲ್ಲಾ ಸಮಾಜಸೇವೆ, ಕಲಾಸೇವೆ, ದೇಶಸೇವೆ ಮಾಡಿದ ಇವರು ಪದ್ಮಭೂಷಣ, ಪದ್ಮವಿಭೂಷಣ, ಶಾಂತಿನಿಕೇತನದ ದೇಶಿಕೋತ್ತಮ ಪ್ರಶಸ್ತಿ, ರಾಮನ್ ಮ್ಯಾಗ್ ಸೆಸೆ ಪ್ರಶಸ್ತಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಡಿ.ಲಿಟ್, ಆಂಧ್ರಪ್ರದೇಶದ ಕಲಾಸರಸ್ವತಿ ಪ್ರಶಸ್ತಿ ಹಾಗೂ ದೇಶೀ ಕಲೆಗಳಿಗೆ ಪುನಶ್ಚೇತನ ನೀಡಿದ್ದಕ್ಕಾಗಿ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಅತ್ಯುನ್ನತ "ರತ್ನ"ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾದರು. ಇಷ್ಟೆಲ್ಲಾ ಜನಪರ ಕಾರ್ಯಗಳನ್ನು ಮಾಡಿದ ಕಮಲಾರವರು 1988 ಅಕ್ಟೋಬರ್ 29ರಂದು ನಿಧನರಾದರೂ ತಮ್ಮ ಸಮಾಜಸುಧಾರಣೆ ಕಾರ್ಯಗಳಿಂದ ಜನರ ಮನದಲ್ಲಿ ಮರೆಯಾಗದೆ ಉಳಿದಿದ್ದಾರೆ.


- ವಿಜಯಲಕ್ಷ್ಮಿ ಎಂ ಎಸ್ 

ಕಾಮೆಂಟ್‌ಗಳಿಲ್ಲ: