Pages

ಸರಣಿ ಲೇಖನ - 4 - ನಾನೇಕೆ ನಾಸ್ತಿಕ


(ಕಳೆದ ಸಂಚಿಕೆಯಿಂದ ಮುಂದುವರೆದಿದೆ)

ನಕಾರಾತ್ಮಕ ದೃಷ್ಟಿಯಿಂದ ಆಸ್ತಿಕರಿಗೆ ನಾವು ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತೇವೆ:
1. ನೀವು ನಂಬಿದಂತೆ ಸರ್ವಶಕ್ತ, ಸರ್ವಂತರ್ಯಾಮಿ, ಸರ್ವಜ್ಞನಾದ ದೇವರಿರುವುದಾದರೆ, ದುಃಖ ಮತ್ತು ಸಂಕಟಗಳ ನಿಜವಾದ, ಅಸಂಖ್ಯಾತ ದುರಂತಗಳ ಅನಂತ ಸರಮಾಲೆಯಾದ ಈ ಭೂಮಿಯನ್ನು ಅಥವಾ ಪ್ರಪಂಚವನ್ನು ಸೃಷ್ಟಿಸಿದುದೇಕೆ? ಒಂದೇ ಒಂದು ಜೀವವು ಪೂರ್ಣ ತೃಪ್ತಿ ಹೊಂದಿಲ್ಲ.
ನಿಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ – ಇದು ಅವನ ‘ನಿಯಮ’ವೆಂದು ಹೇಳಬೇಡಿ. ಅವನು ಯಾವುದಾದರೂ ನಿಯಮಕ್ಕೆ ಅಧೀನನಾಗಿದ್ದರೆ, ಅವನು ಸರ್ವಶಕ್ತನಲ್ಲ. ಅವನೂ ನಮ್ಮಂತೆಯೇ ಇನ್ನೊಬ್ಬ ಗುಲಾಮ. ಅದು ಅವನ ಲೀಲೆಯೆಂದು ಮಾತ್ರ ದಯವಿಟ್ಟು ಹೇಳಬೇಡಿ. ರೋಮನ್ ಸಾಮ್ರಾಜ್ಯದ ದೊರೆ ನೀರೊ ರೋಮ್ ನಗರವನ್ನು ಮಾತ್ರ ಸುಟ್ಟು ಹಾಕಿದ. ಅವನು ಬಹಳ ಕಡಿಮೆ ಸಂಖ್ಯೆಯ ಜನರನ್ನು ಕೊಂದು ಹಾಕಿದ; ತುಂಬಾ ಕಡಿಮೆ ದುರಂತಗಳನ್ನು ಸೃಷ್ಟಿ ಮಾಡಿದ. ಅದೆಲ್ಲವೂ ಆತನ ಸಂಪೂರ್ಣ ಆನಂದಕ್ಕಾಗಿ. 
ಇತಿಹಾಸದಲ್ಲಿ ಅವನ ಸ್ಥಾನವೇನು? ಅವನನ್ನು ಇತಿಹಾಸಕಾರರು ಯಾವ ಹೆಸರುಗಳಿಂದ ಕರೆಯುತ್ತಾರೆ? ಅವನ ಮೇಲೆ ವಿಷಪೂರಿತ ವಿಶ್ಲೇಷಣಗಳನ್ನು ಸುರಿಯುತ್ತಾರೆ. ಆ ನಿರಂಕುಶ ಪ್ರಭು, ಹೃದಯಹೀನ ಮತ್ತು ದುಷ್ಟ ನೀರೊನನ್ನು ದೂಷಣೆಗಳಿಂದ ಖಂಡಿಸಿ ಬರೆದ ಪುಟಗಳು ಕಪ್ಪಾಗಿವೆ. ತನ್ನ ಸಂತೋಷಕ್ಕಾಗಿ ಒಬ್ಬ ಚೆಂಗಿಸ್‍ಖಾನ್ ಸಾವಿರಾರು ಜನರನ್ನು ಬಲಿಕೊಟ್ಟ; ಆ ಹೆಸರನ್ನೇ ನಾವು ದ್ವೇಷಿಸುತ್ತೇವೆ. ಹಾಗಾದರೆ, ಪ್ರತಿದಿನವೂ, ಪ್ರತಿಗಂಟೆಯೂ, ಪ್ರತಿನಿಮಿಷವೂ ಅಸಂಖ್ಯಾತ ದುರಂತಗಳನ್ನು ಸೃಷ್ಟಿ ಮಾಡುತ್ತಿರುವ ಸದಾಕಾಲದ ನೀರೊ, ಆ ನಿಮ್ಮ ಸರ್ವಶಕ್ತನನ್ನು ಹೇಗೆ ಸಮರ್ಥಿಸಿಕೊಳ್ಳುವಿರಿ? ನಾನು ಕೇಳುತ್ತೇನೆ, ಈ ಪ್ರಪಂಚವನ್ನು - ನಿಜವಾದ ನರಕವನ್ನು, ನಿರಂತರವಾದ ಮತ್ತು ಘೋರವಾದ ಅಶಾಂತಿಯ ಸ್ಥಳವನ್ನು ಸೃಷ್ಟಿ ಮಾಡಿದ್ದೇಕೆ? ಮನುಷ್ಯನನ್ನು ಸೃಷ್ಟಿ ಮಾಡದೆ ಇರುವ ಸಾಮರ್ಥ್ಯವಿದ್ದಾಗಲೂ, ಆ ಸರ್ವಶಕ್ತನು ಸೃಷ್ಟಿ ಮಾಡಿದ್ದೇಕೆ? ಇದೆಲ್ಲದಕ್ಕೂ ಸಮರ್ಥನೆಯೇನು?
ಪರಲೋಕದಲ್ಲಿ ನಿರಪರಾಧಿ ದುಃಖಿಗಳನ್ನು ಪುರಸ್ಕರಿಸುವುದು ಮತ್ತು ಜೊತೆಗೇ ತಪ್ಪು ಮಾಡಿದವರಿಗೆ ಶಿಕ್ಷಿಸುವುದೆಂದು ನೀವು ಹೇಳುತ್ತೀರಾ? ಬಹಳ ಮೃದುವಾದ ಮತ್ತು ಹಿತಕರವಾದ ಮುಲಾಮನ್ನು ಹಚ್ಚಲೆಂದೇ ನಿಮ್ಮ ದೇಹವನ್ನು ಗಾಯಗೊಳಿಸುವ ಧೈರ್ಯ ಮಾಡುವ ವ್ಯಕ್ತಿಯನ್ನು ನೀವು ಎಲ್ಲಿಯವರೆಗೆ ಸಮರ್ಥಿಸುವಿರಿ? ಅರೆ ಹಸಿವೆಯಿಂದ ಕೋಪೋದ್ರಿಕ್ತವಾದ ಸಿಂಹಗಳನ್ನು ಆರೈಕೆ ಮಾಡಲು ಮನುಷ್ಯರನ್ನು ತಳ್ಳಿ, ನಂತರ ಅವರು ಬದುಕುಳಿದರೆ ಹಾಗೂ ಕ್ರೂರ ಮೃಗಗಳಿಂದ ಸಾಯುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಾದರೆ ಅವರನ್ನು ಚೆನ್ನಾಗಿ ಶುಶ್ರೂಷೆ ಮಾಡುತ್ತಿದ್ದ ಗ್ಲೇಡಿಯೇಟರ್ ಸಂಸ್ಥೆಗಳ ಬೆಂಬಲಿಗರನ್ನು ಮತ್ತು ಸಂಘಟನಾಕಾರರನ್ನು ಎಷ್ಟರಮಟ್ಟಿಗೆ ಸಮರ್ಥಿಸಿಕೊಳ್ಳಲು ಸಾಧ್ಯ? ಆದ್ದರಿಂದಲೇ ನಾನು ಕೇಳುವುದು – ಪ್ರಜ್ಞಾವಂತ ಸರ್ವಶಕ್ತನು ಈ ಪ್ರಪಂಚವನ್ನು ಮತ್ತು ಅದರೊಳಗೆ ಮನುಷ್ಯನನ್ನು ಏಕೆ ಸೃಷ್ಟಿ ಮಾಡಿದ? ಆನಂದ ಕಾಣಲೆಂದೇ? ಹಾಗಾದರೆ ಅವನಿಗೂ ಮತ್ತು ನೀರೊ ರಾಜನಿಗೂ ವ್ಯತ್ಯಾಸವೆಲ್ಲಿದೆ? 
ನೀವು ಮಹಮ್ಮದೀಯರು ಮತ್ತು ಕ್ರಿಶ್ಚಿಯನ್ನರು: ಹಿಂದೂ ತತ್ವಶಾಸ್ತ್ರವು ಇನ್ನೊಂದು ವಾದವನ್ನು ಎತ್ತಲೂ ಈಗಲೂ ಒದ್ದಾಡುತ್ತಿರಬಹುದು. ನಿಮ್ಮನ್ನು ಕೇಳುತ್ತೇನೆ – ಮೇಲೆ ಕೇಳಿದ ಪ್ರಶ್ನೆಗಳಿಗೆ ನಿಮ್ಮ ಉತ್ತರವೇನು? ನಿಮಗೆ ಪೂರ್ವಜನ್ಮದಲ್ಲಿ ನಂಬಿಕೆಯಿಲ್ಲ. ಹಿಂದೂಗಳಂತೆ ಮೇಲ್ನೋಟಕ್ಕೆ ಮುಗ್ಧ, ನೊಂದಜೀವಿಗಳಂತೆ ಕಾಣುವ ಜನರ ಹಿಂದಿನ ಜನ್ಮದ ಪಾಪಕೃತ್ಯಗಳ ವಾದವನ್ನೂ ಮುಂದಿಡಲಾರಿರಿ. ಮಾತಿನಿಂದ ಪ್ರಪಂಚವನ್ನು ಸೃಷ್ಟಿಸಲು ಮತ್ತು ಪ್ರತಿದಿನವೂ ಎಲ್ಲವೂ ಚೆನ್ನಾಗಿದೆಯೆಂದು ಹೇಳಲು ಸರ್ವಶಕ್ತನು ಆರು ದಿನಗಳ ಕಾಲ ಶ್ರಮಪಟ್ಟಿದ್ದೇಕೆ? ಈಗ ಅವನನ್ನು ಇಲ್ಲಿಗೆ ಕರೆಯಿರಿ. ಹಿಂದಿನ ಇತಿಹಾಸವನ್ನು ತೋರಿಸಿ. ಇಂದಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಲಿ. ‘ಎಲ್ಲವೂ ಚೆನ್ನಾಗಿದೆ’ ಎಂದು ಹೇಳುವ ಧೈರ್ಯ ಮಾಡುತ್ತಾನೋ ನೋಡೋಣ.
ಬಂಧೀಖಾನೆಯ ಕತ್ತಲೆಯ ಕೂಪಗಳು, ಕೊಳೆಗೇರಿ ಮತ್ತು ಗುಡಿಸಲುಗಳಲ್ಲಿರುವ ಮಿಲಿಯಾಂತರ ಮಾನವ ಜೀವಿಗಳನ್ನು ನುಂಗುತ್ತಿರುವ ಹಸಿವಿನ ಉಗ್ರಾಣಗಳು, ಬಂಡವಾಳಶಾಹಿ ರಕ್ತಪಿಪಾಸುಗಳು ತಮ್ಮ ರಕ್ತ ಕುಡಿಯುವ ಮತ್ತು ಅಲ್ಪಸ್ವಲ್ಪ ಪ್ರಜ್ಞೆಯಿರುವ ಮನುಷ್ಯನನ್ನು ಭಯದಿಂದ ನಡುಗುವಂತೆ ಮಾಡುವ ಮಾನವ ಶಕ್ತಿಯನ್ನು ಅಪವ್ಯಯಗೊಳಿಸುವ ಪ್ರಕ್ರಿಯೆಯನ್ನು ಶಾಂತವಾಗಿಯೋ ಅಥವಾ ಉದಾಸೀನದಿಂದಲೋ ಗಮನಿಸುತ್ತಿರುವ ಶೋಷಿತ ದುಡಿಮೆಗಾರರು, ಅಧಿಕವಾದ ಉತ್ಪಾದನೆಯನ್ನು ಅವಶ್ಯಕವಿರುವ ಉತ್ಪಾದಕರಿಗೆ ಹಂಚುವ ಬದಲು ಸಮುದ್ರಕ್ಕೆ ಸುರಿಯಲು ಆದ್ಯತೆ ಕೊಡುವವರು, ಇಲ್ಲಿಂದ ಆರಂಭವಾಗಿ, ಮಾನವನ ಮೂಳೆಗಳ ಅಡಿಪಾಯದ ಮೇಲೆ ಕಟ್ಟಲಾದ ರಾಜರ ಅರಮನೆಗಳರವರೆಗೆ... ಇದೆಲ್ಲವನ್ನೂ ನೋಡಿದ ಮೇಲೆ ಹೇಳಲಿ: “ಎಲ್ಲವೂ ಚೆನ್ನಾಗಿದೆ.” ಏಕೆ ಮತ್ತು ಏತಕ್ಕಾಗಿ? ಇದೇ ನನ್ನ ಪ್ರಶ್ನೆ. ನೀವು ಮೌನವಾಗಿದ್ದಿರಿ. ಸರಿ, ಹಾಗಾದರೆ ನಾನು ಮುಂದುವರೆಸುತ್ತೇನೆ.
ನೀವು ಹಿಂದೂಗಳು, ಇಂದು ನರಳುತ್ತಿರುವವರು ಪೂರ್ವಜನ್ಮಗಳ ಪಾಪಿಗಳ ವರ್ಗಕ್ಕೆ ಸೇರಿದವರೆಂದು ಹೇಳುತ್ತೀರಿ. ಒಳ್ಳೆಯದು, ಇಂದಿನ ದಮನಕಾರರು ಹಿಂದಿನ ಜನ್ಮದಲ್ಲಿ ಸಂತರಾಗಿದ್ದರು, ಅದಕ್ಕೇ ಅಧಿಕಾರವನ್ನು ಅನುಭವಿಸುತ್ತಾರೆ ಎಂದು ಹೇಳುತ್ತೀರಿ. ನಿಮ್ಮ ಪೂರ್ವಜರು ಬಹಳ ಚಾಣಾಕ್ಷ ಜನರು ಎಂದು ಒಪ್ಪಿಕೊಳ್ಳುತ್ತೇನೆ. ವೈಚಾರಿಕತೆ ಮತ್ತು ಅಪನಂಬಿಕೆಯ ಎಲ್ಲಾ ಪ್ರಯತ್ನಗಳನ್ನು ಹೊಡೆದುರುಳಿಸುವಷ್ಟು ಬಲವಾದ ಸಿದ್ಧಾಂತಗಳನ್ನು ಹುಡುಕಲು ಪ್ರಯತ್ನಪಟ್ಟರು. ಆದರೆ ಈ ವಾದವು ಎಷ್ಟರಮಟ್ಟಿಗೆ ಗಟ್ಟಿಯಾಗಿ ನಿಲ್ಲುತ್ತದೆಯೆಂದು ವಿಶ್ಲೇಷಿಸಿ ನೋಡೋಣ.
ಅತ್ಯಂತ ಪ್ರಸಿದ್ಧರಾದ ನ್ಯಾಯಾಧೀಶರ ದೃಷ್ಟಿಯಲ್ಲಿ, ತಪ್ಪು ಮಾಡಿದವನಿಗೆ ವಿಧಿಸುವ ಶಿಕ್ಷೆಯನ್ನು ಮೂರು ಅಥವಾ ನಾಲ್ಕು ಉದ್ದೇಶಗಳನ್ನು ಪೂರೈಸುವ ದೃಷ್ಟಿಯಿಂದ ಸಮರ್ಥಿಸಿಕೊಳ್ಳಬಹುದು. ಅವುಗಳೆಂದರೆ ಪ್ರತೀಕಾರ, ಸುಧಾರಣಾತ್ಮಕ ಮತ್ತು ಪ್ರತಿಬಂಧಕ. ಈಗ ಪ್ರತೀಕಾರದ ಸಿದ್ಧಾಂತವನ್ನು ಎಲ್ಲಾ ಮೇಲ್ಮಟ್ಟದ ಚಿಂತಕರು ಖಂಡಿಸುತ್ತಿದ್ದಾರೆ. ಪ್ರತಿಬಂಧಕ ಸಿದ್ಧಾಂತಕ್ಕೂ ಅದೇ ಗತಿಯಾಗುತ್ತಿದೆ. ಸುಧಾರಣಾತ್ಮಕ ಸಿದ್ಧಾಂತವೊಂದೇ ಮಾನವನ ಪ್ರಗತಿಗೆ ಅವಶ್ಯಕವಾದ ಮತ್ತು ಅನಿವಾರ್ಯವಾದ ಸಿದ್ಧಾಂತವಾಗಿದೆ. ಅದಕ್ಕೆ ಅಪರಾಧಿಯು ಅತ್ಯಂತ ಸಮರ್ಥ ಮತ್ತು ಶಾಂತಿಪ್ರಿಯ ನಾಗರಿಕನಾಗಿ ಸಮಾಜಕ್ಕೆ ಹಿಂದಿರುಗಿ ಬರಬೇಕೆಂಬ ಉದ್ದೇಶವಿದೆ. 
ಆದರೆ ಮಾನವರು ಅಪರಾಧಿಗಳೆಂದು ಒಪ್ಪಿಕೊಂಡರೂ ಸಹ, ಅವರಿಗೆ ದೇವರು ನೀಡುವ ಶಿಕ್ಷೆಯ ಸ್ವರೂಪವಾದರೂ ಏನು? ಅವನನ್ನು ಹಸು, ಬೆಕ್ಕು, ಮರ, ಗಿಡಮೂಲಿಕೆ ಅಥವಾ ಮೃಗವಾಗಿ ಜನಿಸಲು ಕಳುಹಿಸುತ್ತಾನೆಂದು ಹೇಳುವಿರಿ. ಇಂತಹ ಶಿಕ್ಷೆಗಳು 84 ಲಕ್ಷ ಇದೆಯೆಂದು ನೀವು ಎಣಿಸುವಿರಿ. ನಾನು ಕೇಳುತ್ತೇನೆ: ಮಾನವನ ಮೇಲೆ ಅದರ ಸುಧಾರಣೆಯ ಪ್ರಭಾವವೇನಿದೆ? ತಾವು ಮಾಡಿದ ಪಾಪಕ್ಕಾಗಿ ಪೂರ್ವಜನ್ಮದ ಕತ್ತೆಯಾಗಿ ಜನಿಸಿದ್ದೇವೆಂದು ಹೇಳುವ ಎಷ್ಟು ಜನರನ್ನು ಭೇಟಿಯಾಗಿದ್ದೀರಿ? ಯಾರೂ ಇಲ್ಲ. ನಿಮ್ಮ ಪುರಾಣಗಳಿಂದ ತೆಗೆದು ಹೇಳಬೇಡಿ. ನಿಮ್ಮ ಪುರಾಣದ ಕಥೆಗಳಿಗೆ ಹೋಗುವ ಅವಕಾಶ ನನಗಿಲ್ಲ. 
ಅದಕ್ಕಿಂತ ಹೆಚ್ಚಾಗಿ, ಈ ಪ್ರಪಂಚದಲ್ಲಿ ಬಡವನಾಗಿರುವುದೇ ಮಹಾಪಾಪವೆಂಬುದು ನಿಮಗೆ ತಿಳಿದಿದೆಯೇ? ಬಡತನವೇ ಪಾಪ, ಅದೊಂದು ಶಿಕ್ಷೆ. ಮನುಷ್ಯನು ಹೆಚ್ಚು ಅಪರಾಧಗಳನ್ನು ಮಾಡುವಂತೆ ಪ್ರೇರೇಪಿಸುವ ಶಿಕ್ಷಾ ಕ್ರಮಗಳನ್ನು ಪ್ರಸ್ತಾಪಿಸುವ ಅಪರಾಧಶಾಸ್ತ್ರ ತಜ್ಞರು, ನ್ಯಾಯವಾದಿ ಅಥವಾ ಶಾಸಕರನ್ನು ನೀವು ಎಷ್ಟರಮಟ್ಟಿಗೆ ಮೆಚ್ಚುವಿರಿ? ಅವನೂ ಸಹ ಇದೆಲ್ಲವನ್ನೂ ಮನುಕುಲವು ಅನುಭವಿಸುವ ಕೇಳರಿಯದಂತಹ ಸಂಕಷ್ಟಗಳಿಂದ ಬರುವ ಅನುಭವದಿಂದ ಕಲಿಯಬೇಕೇನು? ಬಡ ಮತ್ತು ಅನಕ್ಷರಸ್ಥ ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿ – ಉದಾಹರಣೆಗೆ, ಚಮ್ಮಾರ ಅಥವಾ ಕಸಗುಡಿಸುವವನ ಗತಿ ಏನಾಗುವುದೆಂದು ಯೋಚಿಸಿದ್ದೀರಾ? ಅವನು ಬಡವ, ಆದ್ದರಿಂದಲೇ ಅವನು ಓದಲಾರ. ಮೇಲು ಜಾತಿಯಲ್ಲಿ ಹುಟ್ಟಿದ್ದರಿಂದಲೇ ಅವನಿಗಿಂತ ಮೇಲಿನವರೆಂದು ಭಾವಿಸುವ ಅವನ ಜೊತೆಗಾರ ಮನುಷ್ಯ ಅವನನ್ನು ದ್ವೇಷಿಸುತ್ತಾನೆ ಮತ್ತು ದೂರವಿಡುತ್ತಾನೆ. ಅವನ ಅಜ್ಞಾನ, ಅವನ ಬಡತನ, ಅವನನ್ನು ನಡೆಸಿಕೊಂಡ ರೀತಿ, ಇದೆಲ್ಲವೂ ಸಮಾಜದ ಬಗ್ಗೆ ಅವನ ಹೃದಯವನ್ನು ಕಲ್ಲಾಗಿಸುತ್ತದೆ. ಅವನು ಪಾಪ ಮಾಡುತ್ತಾನೆಂದುಕೊಳ್ಳೋಣ. ಅದರ ಭಾರ ಹೊರುವವರು ಯಾರು? ದೇವರೇ, ಅವನೇ ಅಥವಾ ಸಮಾಜದ ವಿದ್ಯಾವಂತರೇ? 
ಸೊಕ್ಕಿದ ಮತ್ತು ಅಹಂಕಾರಿ ಬ್ರಾಹ್ಮಣರಿಂದ ಉದ್ದೇಶಪೂರ್ವಕವಾಗಿಯೇ ಅಜ್ಞಾನದಲ್ಲಿಟ್ಟಿರುವ ಜನರು, ನಿಮ್ಮ ಪವಿತ್ರ ಪುಸ್ತಕಗಳ ಕಲಿಕೆಯ ವೇದಗಳ ಕೆಲವು ವಾಕ್ಯಗಳನ್ನು ಕೇಳಿದ್ದಕ್ಕೆ ಕಿವಿಗೆ ಕಾದ ಸೀಸವನ್ನು ಸುರಿಸಿಕೊಳ್ಳುವ ಶಿಕ್ಷೆ ಪಡೆಯುವ ಜನರು ಅನುಭವಿಸುವ ಶಿಕ್ಷೆಯ ಬಗ್ಗೆ ಏನು ಹೇಳುತ್ತೀರಿ? ಅವರೇನಾದರೂ ಅಪರಾಧ ಮಾಡಿದರೆ ಅವುಗಳಿಗೆ ಹೊಣೆ ಯಾರು ಮತ್ತು ಅದಕ್ಕೆ ಶಿಕ್ಷೆಯನ್ನು ಅನುಭವಿಸುವವರು ಯಾರು? 
ನನ್ನ ಪ್ರೀತಿಯ ಸ್ನೇಹಿತರೇ, ಈ ಸಿದ್ಧಾಂತಗಳೆಲ್ಲ ಸವಲತ್ತುಳ್ಳವರ ಸೃಷ್ಟಿಗಳು; ಈ ಸಿದ್ಧಾಂತಗಳ ಸಹಾಯದಿಂದ ತಾವು ಕಬಳಿಸಿದ ಅಧಿಕಾರ, ಸಂಪತ್ತು ಮತ್ತು ಮೆಲರಿಮೆಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಹೌದು, ಬಹುಶಃ ಅಪ್ಟಾನ್ ಸಿಂಕ್ಲೇರ್ ಇರಬಹುದು, ಎಲ್ಲೋ ಒಂದು ಕಡೆ ಬರೆದಿದ್ದಾರೆ; ಮನುಷ್ಯನನ್ನು ಕೇವಲ ಅಮರತ್ವದಲ್ಲಿ ನಂಬುವಂತೆ ಮಾಡಿ, ಆನಂತರ ಅವನ ಎಲ್ಲಾ ಸಂಪತ್ತು ಮತ್ತು ಆಸ್ತಿಗಳನ್ನು ದೋಚಿರಿ, ಅವನು ಅದಕ್ಕೂ ಸಹ ಅಸಮಾಧಾನವಿಲ್ಲದೆ ನಿಮಗೆ ಸಹಾಯ ಮಾಡುತ್ತಾನೆ. ಧರ್ಮಬೋಧಕರ ಮತ್ತು ಅಧಿಕಾರವುಳ್ಳವರ ನಡುವಿನ ಮೈತ್ರಿಯು ಸೆರೆಮನೆಗಳನ್ನು, ನೇಣುಗಂಭಗಳನ್ನು, ಚಾಟಿಯೇಟುಗಳನ್ನು ಮತ್ತು ಈ ಸಿದ್ಧಾಂತಗಳನ್ನು ನೀಡಿವೆ.
ಒಬ್ಬ ಮನುಷ್ಯ ಪಾಪವನ್ನೋ ಅಥವಾ ಅಪರಾಧವನ್ನೋ ಮಾಡುತ್ತಿರುವಾಗ ನಿಮ್ಮ ಸರ್ವಶಕ್ತ ದೇವರು ಅದನ್ನು ತಡೆಯುವುದಿಲ್ಲವೇಕೆ? ಅದನ್ನು ಬಹಳ ಸುಲಭವಾಗಿ ಮಾಡಬಹುದು. ಯುದ್ಧಕೋರರನ್ನು ಕೊಂದು ಅಥವಾ ಅವರಲ್ಲಿರುವ ಯುದ್ಧೋನ್ಮಾದವನ್ನು ಕೊಂದು ಮಹಾಯುದ್ಧವು ಜನತೆಯ ತಲೆಯ ಮೆಲೆ ಸುರಿದಿರುವ ಸರ್ವನಾಶವನ್ನೇಕೆ ತಪ್ಪಿಸಲಿಲ್ಲ? ಬ್ರಿಟಿಷರ ಮನಸ್ಸಿನಲ್ಲಿ ಭಾರತವನ್ನು ಬಿಡುಗಡೆ ಮಾಡುವಂತಹ ಭಾವನೆಗಳನ್ನೇಕೆ ಸೃಷ್ಟಿಸಲಿಲ್ಲ? ಇಡೀ ದುಡಿಯುವ ಸಮುದಾಯವನ್ನು - ಅಲ್ಲ, ಇಡೀ ಮನುಕುಲವನ್ನು ಬಂಡವಾಳವಾದದ ಸಂಕೋಲೆಗಳಿಂದ ಮುಕ್ತಗೊಳಿಸಲು, ಉತ್ಪಾದನಾ ಸಾಧನಗಳನ್ನು ವೈಯಕ್ತಿಕವಾಗಿ ವಶಮಾಡಿಕೊಳ್ಳುವ ತಮ್ಮ ಹಕ್ಕನ್ನು ಬಿಟ್ಟುಬಿಡುವಂತೆ ಬಂಡವಾಳಿಗರ ಹೃದಯದಲ್ಲಿ ಪರೋಪಕಾರಿ ಬುದ್ಧಿಯನ್ನೇಕೆ ತುಂಬುವುದಿಲ್ಲ? ಸಮಾಜವಾದಿ ತತ್ವವನ್ನು ಕಾರ್ಯಗತ ಮಾಡುವ ಬಗ್ಗೆ ಆಲೋಚನೆ ಮಾಡಲು, ಅದನ್ನು ಜಾರಿಗೊಳಿಸಲು ನಿಮ್ಮ ಸರ್ವಶಕ್ತನಿಗೆ ಬಿಟ್ಟಿದ್ದೇನೆ. ಸಾಮಾನ್ಯ ಜನಕಲ್ಯಾಣದ ಮಟ್ಟಿಗೆ ಜನರು ಸಮಾಜವಾದದ ಒಳಿತುಗಳನ್ನು ಗುರುತಿಸಿದ್ದಾರೆ. ಅದನ್ನು ಜಾರಿಗೆ ತರಲು ಅಸಾಧ್ಯವೆಂಬ ನೆಪದಲ್ಲಿ ವಿರೋಧಿಸುತ್ತಿದ್ದಾರೆ. ಸರ್ವಶಕ್ತ ಕೆಳಗಿಳಿದು ಬರಲಿ, ಎಲ್ಲವನ್ನೂ ಸುವ್ಯವಸ್ಥಿತ ರೀತಿಯಲ್ಲಿ ವ್ಯವಸ್ಥೆ ಮಾಡಲಿ; 
ಈಗ ಸುತ್ತಿ ಬಳಸುವ ವಾದಗಳನ್ನು ಮುಂದಿರಿಸುವ ಪ್ರಯತ್ನವನ್ನು ಮಾಡಬೇಡಿ, ಅದೆಲ್ಲವೂ ಹಳತಾಗಿವೆ. ಇಲ್ಲಿ ಬ್ರಿಟಿಷರ ಆಳ್ವಿಕೆಯಿರುವುದಕ್ಕೆ ದೇವರ ಇಚ್ಛೆ ಕಾರಣವಲ್ಲ, ಕಾರಣವೆಂದರೆ ಅವರಲ್ಲಿ ಅಧಿಕಾರವಿದೆ, ನಮಗೆ ಅವರನ್ನು ವಿರೋಧಿಸುವ ಧೈರ್ಯವಿಲ್ಲ. ಅವರು ನಮ್ಮನ್ನು ದಾಸ್ಯದಲ್ಲಿಟ್ಟಿರುವುದು ದೇವರ ಸಹಾಯದಿಂದಲ್ಲ; ಬದಲಿಗೆ ಬಂದೂಕು ಮತ್ತು ರೈಫಲ್‍ಗಳಿಂದ, ಬಾಂಬು ಮತ್ತು ಗುಂಡುಗಳಿಂದ, ಪೊಲೀಸ್ ಮತ್ತು ಮಿಲಿಟರಿ ಹಾಗೂ ನಮ್ಮ ನಿಷ್ಕಾಳಜಿಯ ಸಹಾಯದಿಂದ; ಸಮಾಜದ ವಿರುದ್ಧ ಅತ್ಯಂತ ಹೇಯವಾದ ಪಾಪ – ಒಂದು ದೇಶದಿಂದ ಇನ್ನೊಂದು ದೇಶದ ಘೋರ ಶೋಷಣೆಯನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ದೇವರೆಲ್ಲಿದ್ದಾನೆ? ಅವನೇನು ಮಾಡುತ್ತಿದ್ದಾನೆ? ಮಾನವ ಜನಾಂಗದ ಈ ಎಲ್ಲಾ ಸಂಕಷ್ಟಗಳನ್ನು ನೋಡಿ ಆನಂದಿಸುತ್ತಿದ್ದಾನೆಯೇ? ಅವನೊಬ್ಬ ನೀರೊ, ಅವನೊಬ್ಬ ಚೆಂಗಿಸ್‍ಖಾನ್: ಅವನಿಗೆ ಧಿಕ್ಕಾರ.
ಈ ಪ್ರಪಂಚದ ಉಗಮ ಮತ್ತು ಮನುಷ್ಯನ ಉಗಮವನ್ನು ಹೇಗೆ ವಿವರಿಸುತ್ತೇನೆಂದು ಕೇಳುವಿರಾ? ಸರಿ ಹೇಳುತ್ತೇನೆ.  ಚಾರ್ಲ್ಸ್ ಡಾರ್ವಿನ್ನರು ಈ ವಿಷಯದ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸಿದರು. ಅವರನ್ನು ಅಧ್ಯಯನ ಮಾಡಿ. ಸೋಹನ್ ಸ್ವಾಮಿಯವರ ‘ಸಾಮಾನ್ಯ ಪ್ರಜ್ಞೆ’ಯನ್ನು ಓದಿರಿ. ಇದು ನಿಮ್ಮ ಪ್ರಶ್ನೆಗಳಿಗೆ ಸ್ವಲ್ಪಮಟ್ಟಿಗೆ ಉತ್ತರ ಕೊಡಬಹುದು. ಇದೊಂದು ಪ್ರಕೃತಿಯ ವಿದ್ಯಮಾನ. ಸೂಕ್ಷ್ಮಾತಿಸೂಕ್ಷ್ಮ ಕಣಗಳ ರೂಪದಲ್ಲಿ ವಿವಿಧ ದ್ರವ್ಯಗಳ ಆಕಸ್ಮಿಕ ಮಿಶ್ರಣದಿಂದ ಪ್ರಪಂಚವು ಉತ್ಪತ್ತಿಯಾಗಿದೆ. ಯಾವಾಗ? ಇತಿಹಾಸವನ್ನು ಸಂಪರ್ಕಿಸಿ. ಇದೇ ಪ್ರಕ್ರಿಯೆಯು ಪ್ರಾಣಿಗಳನ್ನು, ಬಹಳ ಕಾಲದ ನಂತರ ಮನುಷ್ಯನನ್ನು ಸೃಷ್ಟಿಸಿತು. ಡಾರ್ವಿನ್ನರ ‘ಜೀವ ಸಂಕುಲಗಳ ಉಗಮ’ (Origin of Species) ಓದಿರಿ. ಆನಂತರದ ಪ್ರಗತಿಯೆಲ್ಲವೂ ಪ್ರಕೃತಿಯೊಂದಿಗೆ ಮನುಷ್ಯನ ನಿರಂತರ ಸಂಘರ್ಷ ಮತ್ತು ಅದನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ಅವನು ಮಾಡಿದ ಪ್ರಯತ್ನಗಳಿಂದಾದದ್ದು. ಇದು ಪ್ರಪಂಚದ ಉಗಮದ ವಿದ್ಯಮಾನದ ಬಗ್ಗೆ ಹೇಳಲು ಸಾಧ್ಯವಾಗುವ ಅತ್ಯಂತ ಸಂಕ್ಷಿಪ್ತ ವಿವರಣೆ.
ನಿಮ್ಮ ಇನ್ನೊಂದು ವಾದವು, ಬಹುಶಃ ಕೇವಲ ಈ ಪ್ರಶ್ನೆಯನ್ನು ಕೇಳಲಿರಬಹುದು – ಪೂರ್ವಜನ್ಮದಲ್ಲಿ ಮಾಡಿದ ಪಾಪಕೃತ್ಯಗಳಿಲ್ಲದಿದ್ದರೆ, ಮಗುವು ಕುರುಡ ಅಥವಾ ಕುಂಟನಾಗಿ ಹುಟ್ಟುವುದೇಕೆ? ಈ ಸಮಸ್ಯೆಯನ್ನು ಜೀವಶಾಸ್ತ್ರಜ್ಞರು ಇದೊಂದು ಜೈವಿಕ ವಿದ್ಯಮಾನವೆಂದು ವಿವರಿಸಿಬಿಟ್ಟಿದ್ದಾರೆ. ಅವರ ಪ್ರಕಾರ, ಮಗುವು ಹುಟ್ಟುವ ಮುನ್ನ ಊನವಾಗುವುದಕ್ಕೆ ಎಡೆಮಾಡಿಕೊಟ್ಟ, ತಮ್ಮ ಕೃತ್ಯಗಳ ಬಗ್ಗೆ ತಿಳಿದಿರುವ ಅಥವಾ ತಿಳಿಯದಿರುವ ತಂದೆತಾಯಿಗಳ ಹೆಗಲ ಮೇಲೆ ಇಡೀ ಭಾರ ಬೀಳುತ್ತದೆ.
ಸಹಜವಾಗಿಯೇ ನೀವು ಇನ್ನೊಂದು ಪ್ರಶ್ನೆಯನ್ನು ಕೇಳಬಹುದು, ಅದು ಸಾರದಲ್ಲಿ ಸ್ವಲ್ಪ ಬಾಲಿಶವಾಗಿರಬಹುದು. ದೇವರ ಅಸ್ತಿತ್ವವಿಲ್ಲದಿದರೆ, ಅವನನ್ನು ಜನರು ಹೇಗೆ ನಂಬುತ್ತಾ ಬಂದರು? ನನ್ನ ಉತ್ತರವು ಸ್ಪಷ್ಟವಾಗಿದೆ ಮತ್ತು ಸಂಕ್ಷಿಪ್ತವಾಗಿದೆ. ಅವರು ದೆವ್ವಗಳು ಮತ್ತು ಕ್ಷುದ್ರ ಶಕ್ತಿಗಳನ್ನು ನಂಬಿದಂತೆ; ಒಂದೇ ವ್ಯತ್ಯಾಸವೆಂದರೆ ದೇವರ ನಂಬಿಕೆ ಹೆಚ್ಚು ಕಡಿಮೆ ಸಾರ್ವತ್ರಿಕ ಮತ್ತು ಆ ತತ್ವಶಾಸ್ತ್ರವು ಚೆನ್ನಾಗಿ ಬೆಳೆದಿದೆ. ಕೆಲವು ವಿಚಾರವಾದಿಗಳಂತೆ, ಸರ್ವಶಕ್ತನ ಅಸ್ತಿತ್ವವನ್ನು ಬೋಧಿಸುವ ಮೂಲಕ ಜನರನ್ನು ತಮ್ಮ ಅಧೀನದಲ್ಲಿಟ್ಟುಕೊಳ್ಳಲು ಮತ್ತು ತಮ್ಮೆಲ್ಲಾ ಸವಲತ್ತಿನ ಸ್ಥಾನಮಾನಗಳಿಗೆ ಅವನಿಂದ ಅಧಿಕಾರವನ್ನು ಮತ್ತು ಅನುಮತಿಯನ್ನು ಪಡೆದುಕೊಳ್ಳಲು ಬಯಸಿದ ಶೋಷಕರ ಅಪ್ರಮಾಣಿಕತೆಯಿಂದ ದೇವರ ಉಗಮವಾಯಿತೆಂದು ಹೇಳುವುದಿಲ್ಲ; ಹಾಗಿದ್ದರೂ, ಎಲ್ಲಾ ನಂಬಿಕೆಗಳು, ಧರ್ಮಗಳು, ಪಂಥಗಳು ಮತ್ತು ಅಂತಹ ಇತರ ಸಂಸ್ಥೆಗಳು ನಂತರದಲ್ಲಿ ನಿರಂಕುಶ ಪ್ರಭುತ್ವದ ಮತ್ತು ಶೋಷಕ ಸಂಸ್ಥೆಗಳ ಜನರ ಮತ್ತು ವರ್ಗಗಳ ಬೆಂಬಲಿಗರಾದವು ಎಂಬ ಪ್ರಮುಖ ಅಂಶದಲ್ಲಿ ಅವರೊಂದಿಗೆ ಭಿನ್ನಾಭಿಪ್ರಾಯವಿಲ್ಲ. ಎಲ್ಲಾ ಧರ್ಮಗಳ ಪ್ರಕಾರ ರಾಜನ ವಿರುದ್ಧ ದಂಗೆಯೇಳುವುದು ಪಾಪಕಾರ್ಯ.
ದೇವರ ಉಗಮದ ಬಗ್ಗೆ ನನ್ನ ಸ್ವಂತ ಅಭಿಪ್ರಾಯವಿದು – ಮನುಷ್ಯನ ದೌರ್ಬಲ್ಯ ಮತ್ತು ನ್ಯೂನತೆಗಳನ್ನು ಗಮನಕ್ಕೆ ತೆಗೆದುಕೊಂಡು ಅವನ ಇತಿಮಿತಿಗಳನ್ನು ಅರಿತುಕೊಂಡಾಗ, ಎಲ್ಲಾ ದುರ್ಭರ ಸನ್ನಿವೇಶಗಳನ್ನು ಧೈರ್ಯವಾಗಿ ಎದುರಿಸಲು, ಎಲ್ಲಾ ಅಪಾಯಗಳನ್ನು ಪೌರುಷದಿಂದ ಎದುರಿಸಲು ಮತ್ತು ಏಳಿಗೆ ಹಾಗೂ ಸಮೃದ್ಧಿಗಳಲ್ಲಿ ಅವನ ಭಾವಸ್ಫೋಟಗಳನ್ನು ನಿಯಂತ್ರಿಸಲು ದೇವರನ್ನು ಕಾಲ್ಪನಿಕವಾಗಿ ಅಸ್ತಿತ್ವಕ್ಕೆ ತರಲಾಯಿತು. ದೇವರ ಖಾಸಗಿ ನಿಯಮಗಳು ಮತ್ತು ಪೋಷಕನ ಉದಾರತೆಗಳನ್ನು ಸೇರಿಸಿಕೊಂಡು ಆತನನ್ನು ಸವಿವರವಾಗಿ ಚಿತ್ರಿಸಲಾಯಿತು. ಆತನ ಕೋಪ ಮತ್ತು ಖಾಸಗಿ ನಿಯಮಗಳನ್ನು ಚರ್ಚಿಸಿದಾಗ, ಮನುಷ್ಯನು ಸಮಾಜಕ್ಕೆ ಅಪಾಯಕಾರಿಯಾಗದಂತೆ ಪ್ರತಿಬಂಧಕ ಪಾತ್ರವನ್ನು ನಿರ್ವಹಿಸುತ್ತಾನೆ. ಅವನ ಪೋಷಕನ ಅರ್ಹತೆಗಳನ್ನು ವಿವರಿಸುವಾಗ ಆತ ತಂದೆಯಾಗಿ, ತಾಯಿಯಾಗಿ, ಸೋದರಿಯಾಗಿ ಮತ್ತು ಸಹಾಯಕನಾಗಿ ಸಹಾಯ ಮಾಡುತ್ತಾನೆ. ಏಕೆಂದರೆ ಮನುಷ್ಯ ಘೋರ ದುಃಖದಲ್ಲಿದ್ದಾಗ, ಅವನು ತನ್ನೆಲ್ಲಾ ಸ್ನೇಹಿತರಿಂದ ಮೋಸ ಹೋಗಿ ದೂರವಾದಾಗ, ಸಹಾಯ ಮಾಡಲು, ಬೆಂಬಲ ನೀಡಲು ಸಾರ್ವಕಾಲಿಕ ಸರ್ವಶಕ್ತ ನಿಜವಾದ ಸ್ನೇಹಿತನೊಬ್ಬ ಇದ್ದಾನೆ ಮತ್ತು ಅವನು ಏನು ಬೇಕಾದರೂ ಮಾಡಬಲ್ಲನೆಂಬ ಕಲ್ಪನೆಯು ಮನುಷ್ಯನಿಗೆ ಸಮಾಧಾನ ಕೊಡುತ್ತದೆ. ಅದು ನಿಜವಾಗಿಯೂ ಸಮಾಜದ ಪ್ರಾಚೀನ ಯುಗದಲ್ಲಿ ಬಹಳ ಉಪಯೋಗಕಾರಿಯಾಗಿತ್ತು. ಮನುಷ್ಯ ದುಃಖದಲ್ಲಿರುವಾಗ ದೇವರ ಕಲ್ಪನೆಯು ಸಹಾಯಕವಾಗುತ್ತದೆ.
ಸಮಾಜವು ಮೂರ್ತಿಪೂಜೆಯನ್ನು ಮತ್ತು ಧರ್ಮದ ಸಂಕುಚಿತ ಪರಿಕಲ್ಪನೆಯನ್ನು ಹೋರಾಡಿದ ಹಾಗೆಯೇ ಈ ನಂಬಿಕೆಯನ್ನೂ ಹೋರಾಡಬೇಕು. ಅದೇ ರೀತಿ, ಮನುಷ್ಯ ತನ್ನ ಕಾಲ ಮೇಲೆ ನಿಲ್ಲಲು ಪ್ರಯತ್ನಿಸಿದಾಗ ಮತ್ತು ವಾಸ್ತವವಾದಿಯಾದಾಗ, ನಂಬಿಕೆಯನ್ನು ಪಕ್ಕಕ್ಕೆ ಸರಿಸಿ, ಸನ್ನಿವೇಶಗಳು ತರುವ ಹತಾಶೆ, ತೊಂದರೆಗಳನ್ನು ಪೌರುಷದಿಂದ ಎದುರಿಸಬೇಕು. ಇದೇ ನನ್ನ ಸ್ಥಿತಿ. ಸ್ನೇಹಿತರೇ, ಇದು ಜಂಭವಲ್ಲ. ನನ್ನ ಚಿಂತನಾ ಕ್ರಮವೇ ನನ್ನನ್ನು ನಾಸ್ತಿಕನನ್ನಾಗಿ ಮಾಡಿದೆ. ದೇವರಲ್ಲಿಡುವ ನಂಬಿಕೆ ಮತ್ತು ನಿತ್ಯ ಪ್ರಾರ್ಥನೆಗಳನ್ನು ಅತ್ಯಂತ ಸ್ವಾರ್ಥ ಹಾಗೂ ಮನುಷ್ಯರಿಗೆ ಅತ್ಯಂತ ಹೀನಕಾರ್ಯ ಎಂದೇ ಪರಿಗಣಿಸಿದ್ದೇನೆ; ಈ ಪ್ರಾರ್ಥನೆಗಳೆಲ್ಲವೂ ನನ್ನ ಮಟ್ಟಿಗೆ ಸಹಾಯವಾಗುತ್ತದೆಯೆಂದು ಸಾಬೀತಾಗುತ್ತವೆಯೋ ಅಥವಾ ನನ್ನ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತವೆಯೋ ನನಗೆ ಗೊತ್ತಿಲ್ಲ. ನಾಸ್ತಿಕರು ಎಲ್ಲಾ ಸಂಕಷ್ಟಗಳನ್ನು ಧೈರ್ಯವಾಗಿ ಎದುರಿಸುವುದನ್ನು ಓದಿದ್ದೇನೆ. ಆದ್ದರಿಂದಲೇ ಕಡೆಯತನಕ, ಗಲ್ಲಿಗೆ ಹೋದಾಗಲೂ ಸಹ ತಲೆಯೆತ್ತಿ ನಿಂತ ಮನುಷ್ಯನಂತೆ ನಿಲ್ಲಲು ಪ್ರಯತ್ನಿಸುತ್ತಿದ್ದೇನೆ.
ನಾನು ಹೇಗೆ ಮುಂದುವರೆಸಿಕೊಂಡು ಹೋಗುತ್ತೇನೆ ಎಂಬುದನ್ನು ನೋಡೋಣ. ಒಬ್ಬ ಸ್ನೇಹಿತರು ಪ್ರಾರ್ಥಿಸಲು ಕೇಳಿದರು. ನಾನು ನಾಸ್ತಿಕನೆಂದು ಹೇಳಿದಾಗ, ಅವರು ಹೇಳಿದರು: “ನಿನ್ನ ಕಡೆಯ ದಿನಗಳಲ್ಲಿ ನೀನು ನಂಬಲು ಆರಂಭಿಸುವೆ.” ನಾನು ಹೇಳಿದೆ, “ಇಲ್ಲ ಮಹನೀಯರೇ, ಅದು ಹಾಗಾಗಬಾರದು. ಅದು ನನ್ನ ಪಾಲಿಗೆ ಅಧೋಗತಿಗಿಳಿಯುವ ಮತ್ತು ನೀತಿಗೆಡಿಸುವ ಕೆಲಸವೆಂದು ತಿಳಿದಿದ್ದೇನೆ. ನಾನು ಸ್ವಾರ್ಥಕ್ಕಾಗಿ ಪ್ರಾರ್ಥಿಸುವುದಿಲ್ಲ.” ಓದುಗರೇ ಮತ್ತು ಸ್ನೇಹಿತರೇ: ಇದು ‘ಜಂಭ’ವೇ? ಹಾಗೆಂದಾದರೆ, ನಾನು ಅದರ ಪರವಾಗಿ ನಿಲ್ಲುತ್ತೇನೆ.
(ಮುಗಿಯಿತು)

- ಎಸ್.ಎನ್.ಸ್ವಾಮಿ

ಕಾಮೆಂಟ್‌ಗಳಿಲ್ಲ: