Pages

ವ್ಯಕ್ತಿ ಪರಿಚಯ - ನನ್ನ ಪ್ರೀತಿಯ ಗುರು ವಿಜಯ ದಬ್ಬೆ



              
' ಗುರಿ ' ತೋರಿಸಿ 'ಗುರಿ ' ಮುಟ್ಟಲು ಮಾರ್ಗದರ್ಶನ ಮಾಡಿದ ನನ್ನ ಪ್ರೀತಿಯ ಗುರು ವಿಜಯ ದಬ್ಬೆ ನನಗೆ  ಮಾತ್ರವಲ್ಲ, ಅನೇಕರಿಗೆ ಗುರಿ ತೋರಿದವರು. ಅವರು ಅಧ್ಯಾಪಕಿ, ಸಾಹಿತಿ, ಅಸಮಾನತೆಯ ವಿರುದ್ಧ ಹೋರಾಡುವ 'ಸಮತಾವಾದಿ', ವಿಮರ್ಶಕಿ, ಸಂಘಟನಾಕಾರ್ತಿ - ಹೀಗೆ ಅವರನ್ನು  ಅನೇಕ ಬಗೆಯಲ್ಲಿ  ಗುರುತಿಸಬಹುದು. ಆದರೆ ಅವೆಲ್ಲಕ್ಕೂ  ಮಿಗಿಲಾಗಿ ಅವರೊಬ್ಬ ಅತ್ಯಂತ ಸಹೃದಯ ಮನಸ್ಸಿನ ಸ್ನೇಹಜೀವಿ. 
ಇದೆಲ್ಲಾ ವಿವರಣೆ ಕೊಡುವಾಗ ಬಿ.ಟಿ ಲಲಿತಾನಾಯಕ್ ರವರು ವಿಜಯ ಬಗ್ಗೆ ಹೇಳಿರುವ ಮಾತುಗಳು ನೆನಪಾಗುತ್ತದೆ. "ಡಾ. ವಿಜಯಾ ದಬ್ಬೆಯವರ ವ್ಯಕ್ತಿತ್ವಕ್ಕೆ ಸಾಟಿಯಾಗಬಲ್ಲ ವ್ಯಕ್ತಿಯನ್ನು ನಾನಿನ್ನೂ ಹುಡುಕುತ್ತಲೇ ಇದ್ದೇನೆ. ವಿಜಯಾ ದಬ್ಬೆ ಎಂಬ ಹೆಸರೇ ಮಹಿಳೆಯರಲ್ಲಿ ಆತ್ಮಾಭಿಮಾನ, ಧೈರ್ಯ ತುಂಬುವಂಥದ್ದು. ಪ್ರಜ್ಞಾವಂತರಿಗೆ ರೋಮಾಂಚನವನ್ನು ಉಂಟು ಮಾಡುವ ಶಕ್ತಿಯನ್ನು  ಪಡೆದಿರುವಂತದ್ದು." (ವಿಜಯಾನ್ವೇಷಣೆ)
ವಿಜಯಾರವರ ಜೀವನದ ಕೆಲ ಸಮಯದಲ್ಲಿ ನನಗೆ  ಅವರ ಒಡನಾಟ ದೊರೆತದ್ದು  ನನ್ನ ಸೌಭಾಗ್ಯ.  1976 ರಲ್ಲಿ  ಎಂ.ಎ. ಪದವಿಗೆ ಕನ್ನಡ ಅಧ್ಯಯನ ಸಂಸ್ಥೆಯ ಮೆಟ್ಟಿಲನ್ನೇರುತ್ತಿದ್ದಾಗ ಆ ಮೊದಲ ದಿನವೇ ನನಗೆ ವಿಜಯಾರವರ ದರ್ಶನವಾಯಿತು. ಅವರು ಮೆಟ್ಟಿಲೇರುತ್ತಿದ್ದರು. ಬಹಳ ತೆಳುವಾಗಿ ಹೆಚ್ಚು ಎತ್ತರವಿಲ್ಲದ ಅವರನ್ನು ನೋಡಿ ಅವರೂ ವಿದ್ಯಾರ್ಥಿ ಎಂದೇ ಭಾವಿಸಿದೆ. ನೋಡಿ ನಕ್ಕೆ, ಅವರೂ ನಕ್ಕು ಮುಂದೆ ಹೋದರು. ಅದೇ ದಿನ ಮಧ್ಯಾಹ್ನ ನಮ್ಮ ತರಗತಿಗೆ ಬಂದು ಪಾಠ ಆರಂಭಿಸಿದರು. ಅವರ ಬೋಧನಾ ವೈಖರಿಗೆ ಅಂದೇ ಅಲ್ಲೇ ನಾನು ಅವರ ಅಭಿಮಾನಿಯಾದೆ.  ಇಷ್ಟು ಚಿಕ್ಕವರು ಅವರನ್ನು ನಾನು ವಿದ್ಯಾರ್ಥಿ ಎಂದೇ ಭಾವಿಸಿದ್ದೆ. ಅವರು ನಮ್ಮ ಅಧ್ಯಾಪಕರು, ಸದ್ಯ ಏನೇನೋ ಮಾತನಾಡಲಿಲ್ಲ ಎಂದು ನೆಮ್ಮದಿಯ ಉಸಿರು ಬಿಟ್ಟೆ. ಅಂದಿನಿಂದಲೇ ಅವರ ತರಗತಿ ಎಂದರೆ ನನಗೆ ಅಚ್ಚುಮೆಚ್ಚು. ಹೇಗಾದರೂ ಅವರ ಸ್ನೇಹ ಗಳಿಸಬೇಕೆನ್ನಿಸಿತು. ಆದರೆ ಅವರನ್ನು ಅವರ ಕೊಠಡಿಯಲ್ಲಿ ಭೇಟಿಯಾಗುವ ಅವಕಾಶ ದೊರೆತದ್ದು ಎರಡು ತಿಂಗಳ ನಂತರ. ಅಂತು ಇಂತೂ ಅವರ ಸ್ನೇಹ ಗಳಿಸಲು ಸಫಲಳಾದೆ. ಅಂದಿನಿಂದ ಕೊನೆಯವರೆಗೂ ಅವರ ಒಡನಾಟವನ್ನು ಬಿಡಲಿಲ್ಲ.
  1978 - 79ರಲ್ಲಿ ವಿಜಯರವರು ಒಂದು  ಅಧ್ಯಯನದ ಗುಂಪನ್ನು ಆರಂಭಿಸಿದರು. ಅದರಲ್ಲಿ  ವಿಜಯಾರವರ ಕೆಲವು ಗೆಳತಿಯರು ರತಿರಾವ್, ಸುಸನ್ ಮುಂತಾದವರು ಹಾಗೂ ಅವರ ಶಿಷ್ಯೆಯರ ಗುಂಪೇ ಹೆಚ್ಚಾಗಿತ್ತು. ನಾನು, ಇಂದುಬಾಯಿ, ಕುಮುದ, ಶೈಲಜ, ಭವಾನಿ, ಚಂದ್ರಮತಿ ಹೀಗೆ... ಆ ಗುಂಪಿನಲ್ಲಿ ವಾರಕ್ಕೊಮ್ಮೆ ಗಂಗೋತ್ರಿಯ ಗಾಂಧಿಭವನದಲ್ಲಿ ಸೇರಿ ಸಮಾಜದಲ್ಲಿನ ಅಸಮಾನತೆಗಳ ಬಗ್ಗೆ  ಚರ್ಚಿಸುತ್ತಿದ್ದೆವು.
ಅವರ ಬರಹಗಳನ್ನು ಓದಿ ಚರ್ಚಿಸುವುದು ದೆಹಲಿಯಿಂದ ಮಧುಕೀಶ್ವರ್ ರವರ ಸಂಪಾದಕತ್ವದಲ್ಲಿ ಹೊತ್ತು ಬರುತ್ತಿದ್ದ "ಮಾನುಷಿ" ಮಾಸಪತ್ರಿಕೆಯನ್ನು  ಓದಿ ವಿಮರ್ಶಿಸುತ್ತಿದ್ದೆವು. ಎಲ್ಲಾ ಅಸಮಾನತೆಯ ವಿರುದ್ಧ ಹೋರಾಡಲು ಒಂದು ಸಂಘಟನೆ ಅಗತ್ಯವೆಂದು "ಸಮತಾವೇದಿಕೆ"ಯನ್ನು ಆರಂಭಿಸಿದರು. ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯಬೇಕಾದರೆ ಅವರೇ ಸಧೃಢರಾಗಬೇಕು, ಅದಕ್ಕೆ  ವಿದ್ಯಾಭ್ಯಾಸ ಬಹಳ ಅಗತ್ಯವೆಂದು ಕೆಳವರ್ಗದ ಮನೆಗಳ ಹೆಂಗಸರಿಗೆ ವಾರಕ್ಕೊಮ್ಮೆ ಅಕ್ಷರಾಭ್ಯಾಸ ಮಾಡಿಸಲು ಆರಂಭಿಸಿದೆವು. ಆ ಮೂಲಕ ಅವರ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡಿದೆವು. ಸಮತಾವೇದಿಕೆಯಿಂದ ಹಲವು ವಿಚಾರಸಂಕಿರಣಗಳನ್ನು, ಮಹಿಳೆಗೆ ಕಾನೂನಿನ ಅರಿವು ಮೂಡಿಸುವ ವಿಷಯಗಳನ್ನು ಒಳಗೊಂಡಂತೆ ಹತ್ತಾರು ಸಂಗತಿಗಳನ್ನು ಕುರಿತು ವಿಚಾರಸಂಕಿರಣ, ಕಮ್ಮಟ ಇತ್ಯಾದಿಗಳನ್ನು  ಮಾಡಿದೆವು.
ಬನುಮಯ್ಯ ಕಾಲೇಜಿನಲ್ಲಿ ಸಮತಾವೇದಿಕೆಯಿಂದ ಮೊದಲ ವಿಚಾರಸಂಕಿರಣ ನಡೆಸಿದೆವು. ಗೃಹಿಣಿಯ ಕೆಲಸಕ್ಕೆ ಇಂದಿಗೂ ಬೆಲೆಯಿಲ್ಲ.  ಅದನ್ನು  ಖಂಡಿಸಿ "ಬೆಲೆ ದೊರೆಯದ ಉದ್ಯೋಗ"ಎಂಬ ಲೇಖನವನ್ನು  ನಾನು ಮಂಡಿಸಿದೆ. ' ಮಹಿಳೆ ಮತ್ತು  ಕಾನೂನು' ಇತ್ಯಾದಿ ವಿಷಯಗಳನ್ನು ಕುರಿತ ಪ್ರಬಂಧಗಳು ನಮ್ಮಅಂದಿನ ವಿಚಾರ ಸಂಕಿರಣದಲ್ಲಿತ್ತು. ಅಲ್ಲದೆ ಮಹಿಳೆಯರಿಗೆ ಅರಿವು ಮೂಡಿಸಲು ಸಣ್ಣ ಸಣ್ಣ ನಾಟಕಗಳ ಪ್ರದರ್ಶನಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿದೆವು. ಇವೆಲ್ಲಾ ವಿಜಯಾರವರ ನೇತೃತ್ವದಲ್ಲಿ ನಡೆಯುತ್ತಿತ್ತು.
"ವಿವೋಚನೆಯೆಡೆಗೆ" ಪುಸ್ತಕವನ್ನು ಸಹ ಅಂದು ಬಿಡುಗಡೆ ಮಾಡಿದೆವು. ಈ ಎಲ್ಲಾ ಕಾರ್ಯಕ್ರಮಗಳಿಗೆ ಹಣವನ್ನು ಸದಸ್ಯರೇ ಹೆಚ್ಚಾಗಿ ಭರಿಸುತ್ತಿದ್ದೆವು. ಅಂತಾ ವೇದಿಕೆಯಿಂದ ಅನಿಯತಕಾಲಿಕ ' ಸಮತಾ' ವಾರ್ತಾ ಪತ್ರಿಕೆಯನ್ನು ತಂದೆವು. ಅನ್ಯಾಯಕ್ಕೊಳಗಾದ ಮಹಿಳೆಯರ ಕಥೆ,  ದೇಶದ ವಿವಿಧೆಡೆ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಅದಕ್ಕೆ ಅವರು ನಡೆಸಿದ ಹೋರಾಟದ ವಿವರಗಳನ್ನು ಬದಲಾವಣೆ ತರುವ ನಿಟ್ಟಿನಲ್ಲಿ ಅಗತ್ಯವಾಗುವವರ ಬಗ್ಗೆಯೂ ಲೇಖನಗಳಿರುತ್ತಿದ್ದೆವು. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಪಠ್ಯಗಳನ್ನು ಕೂಲಂಕಶವಾಗಿ ಅಧ್ಯಯನ ಮಾಡಿ ಅದರಲ್ಲಿ ಯಾವ ರೀತಿ ಮಹಿಳೆ ಕಡೆಗಣಿಸಲ್ಪಟ್ಟಿದ್ದಾಳೆ ಎಂಬ ಬಗ್ಗೆ  ಆತ್ಮವಿಶ್ವಾಸ ಬೆಳೆಸುವ ಪಠ್ಯ ಬೇಕಾಗಿದೆ ಎಂಬ ಶೀರ್ಷಿಕೆಯಲ್ಲಿ ನಾನು ಒಂದು ಲೇಖನವನ್ನು  "ಸಮತಾ "ವಾರ್ತಾ ಪತ್ರಿಕೆಯಲ್ಲಿ  ಪ್ರಕಟಿಸಿದ್ದೆ.
ವಿಜಯಾ ದಬ್ಬೆಯವರು ಸಮತಾಗಾಗಿ "ತೂರಬೇಡಿ ಗಾಳಿಗೆ ಹೆಣ್ತನದ ಘನತೆಯ, ಜೀವ ಕೊಡುವ ಜೀವವಿದು ಕಡಿಮೆ ಯಾರಿಗೇ ಕಡಿಮೆ ಯಾರಿಗೇ" ಎಂಬ ಗೀತೆಯನ್ನು ರಚಿಸಿದರು. ಇದು ಈಗ ಎಲ್ಲೆಲ್ಲಿ  ಮಹಿಳೆಯರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಾರೋ ಅಲ್ಲೆಲ್ಲಾ ಈ ಗೀತೆಯನ್ನು ಹಾಡುತ್ತಾರೆ.
ಕತ್ತಲ ಏಕಾಂತದಲ್ಲಿ ಕಣ್ಣ ಹನಿ ಸಾಕವ್ಬ.... 
ಬೆಳಕಿಗೊಮ್ಮೆ ಈಚೆ ಬಾ ಕಂಡಿತು ಜೀವನಾಧಾರ ಕಂಡಿತು ಜೀವನಾ
ನಾಚಬೇಡಿ ಹೆಣ್ತನಕ್ಕೆ ತಲೆ ಎತ್ತಿ ನಿಲ್ಲಿರಿ 
ನಾಚಬೇಕು ತುಳಿದವರು, ಮನು ಜಾತಿಗೆ ಸೇರಿದವರು
ನಾನು ನೀನು ಅವಳು ಇವಳು
ಹೆಣ್ಣಾಗಿ ನೊಂದವರು
ಕೈಗೆ ಕೈ ಜೋಡಿಸವ್ವ
ಹೊಸ ಜಗತ್ತು ನಮ್ಮದು
ಎಂಬ ಗೀತೆಯನ್ನು ರಚಿಸಿ ಮಹಿಳೆಯರನ್ನು ಹೊಸ ಜಗತ್ತಿನೆಡೆಗೆ ಕರೆದೊಯ್ಯುವ ಕೆಲಸವನ್ನು ಮಾಡಿದ್ದಾರೆ.
ಹಲವಾರು ಇತರ ಕಾರಣಕ್ಕಾಗಿ  1991ರಲ್ಲಿ "ಸಮತಾ ಅಧ್ಯಯನ ಕೇಂದ್ರ" ಸ್ಥಾಪನೆ  ಮಾಡಿದರು. ಅದರಲ್ಲೂ  ಮಾಡುತ್ತಿದ್ದುದು ಇವೇ ಕಾರ್ಯಕ್ರಮಗಳು. ಹಳೆಗನ್ನಡದ ಕವಿ ಸಾಹಿತಿಗಳಿಂದ ಆಧುನಿಕ ಯುಗದವರೆವಿಗೂ ಕವಿಗಳು ಮಹಿಳೆಯರನ್ನು  ಕಂಡ ರೀತಿಯ ಬಗ್ಗೆ ಚರ್ಚೆ ವಿಮರ್ಶೆಗಳು ನಡೆದವು. ಮಹಿಳೆಯರಿಗೆ ಕಾನೂನಿನ ಅರಿವನ್ನು ಮೂಡಿಸುವ ಶಿಕ್ಷಣದ ಅಗತ್ಯ .....
ಸಮತಾದ ಚಟುವಟಿಕೆಗಳು ಆರಂಭವಾದ ನಂತರ ಮಹಿಳೆಯರಿಗಾಗಿ ಒಂದು ತಾತ್ಕಾಲಿಕ ತಂಗುದಾಣದ ಅಗತ್ಯದ ಕನಸ್ಸನ್ನು ಕಂಡ ವಿಜಯಾ ಆ ಬಗ್ಗೆ  ಪ್ರಯತ್ನಿಸಿದುದರ ಫಲ ಇಂದು ಮೈಸೂರಿನಲ್ಲಿ "ಶಕ್ತಿಧಾಮ"ನೆಲೆ ನಿಂತಿದೆ ಎಂದರೆ ತಪ್ಪಾಗಲಾರದು. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಕೃಷಿಯನ್ನು ಮುಂದುವರಿಸೇ ಇದ್ದರು. ಅವರ ಆಕೃತಿ ಚಿಕ್ಕದಾದರೂ ಅವರ ಕತೃತ್ವ ಅಗಾಧವಾದದ್ದು. "ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು" ಎಂಬ ಮಾತು ದಬ್ಬೆಯವರಿಗೆ ಅಕ್ಷರಶಃ ಅನ್ವಯಿಸುತ್ತದೆ. 
ಸಾಹಿತ್ಯ ಕ್ಷೇತ್ರದಲ್ಲೂ ಅವರನ್ನು ಹೆಚ್ಚಾಗಿ ಕಾಡಿದ್ದು ಮಹಿಳೆಯರೇ. ಕಾರಣಾಂತರದಿಂದ ಲೇಖಕಿಯರನ್ನು ಬದುಕಿರುವಾಗಲೇ ದಿವಂಗತ ಪಟ್ಟಿಗೆ ತಳಲ್ಪಟ್ಟ, ಕಡೆಗಣಿಸಲ್ಪಟ್ಟ ಲೇಖಕಿಯರನ್ನು ಗುರುತಿಸಿ ಅವರ ಬದುಕಿನ ಹೋರಾಟ ಹಾಗೂ ಸಾಹಿತ್ಯದ ಬಗ್ಗೆ ಹೊಸ ದೃಷ್ಟಿಕೋನದಿಂದ ಅಭ್ಯಸಿಸಿ ವಾಚಿಕೆಗಳ ರೂಪದಲ್ಲಿ ಹೊರ ತರುವ ಕೆಲಸವನ್ನು ಮಾಡಿದರು. ಆಧುನಿಕ ಕನ್ನಡ ಸಾಹಿತ್ಯದ ಮೊದಲ ಲೇಖಕಿ ಎಂದು ಗುರುತಿಸಲ್ಪಡುವ ತಿರುಮಲಾಂಬರವರು ಬದುಕಿರುವಾಗಲೇ ದಿವಂಗತರ ಪಟ್ಟಿಗೆ ಸೇರಿಸಲ್ಪಟ್ಟಿದ್ದವರು. ಅವರನ್ನು  ಹುಡುಕಿ ಹೊರ ತಂದು ' ಹಿತೈಷಿಣಿಯ ಹೆಜ್ಜೆ  ಗುರುತುಗಳು ' ಎಂಬ ವಾಚಿಕೆಯನ್ನು ತಂದರು. 
ಶಾಮಲಾದೇವಿರವರ ಸಾಹಿತ್ಯಗಳನ್ನು ಕುರಿತ ಶಾಮಲಾ ಸಂಚಯ, ಅನುಪಮಾ ನಿರಂಜನ ಮೊದಲಾದ ಲೇಖಕಿಯ ವಾಚಿಕೆಗಳನ್ನು ತಂದರು. ಅವರು ಆ ದಿಕ್ಕಿನಲ್ಲಿ  ನಡೆದುದಲ್ಲದೆ ನಮ್ಮನ್ನು ಅಂದರೆ ಅವರ ಶಿಷ್ಯ ವರ್ಗಕ್ಕೂ ಪ್ರೇರಣೆ ನೀಡಿದರು. ಅಂತಾ ವೇದಿಕೆಯ ವತಿಯಿಂದ ನಡೆದ "ಸ್ವಾತಂತ್ರ್ಯಪೂರ್ವ ಲೇಕಿಯರು" ವಿಚಾರ ಸಂಕಿರಣ ಫಲವಾಗಿ ನಾನು ನನ್ನ ಗುರು ವಿಜಯಾರವರ ಹಾದಿಯಲ್ಲೇ ನಡೆಯುವ ಅವಕಾಶ ದೊರೆತು ದಿವಂಗತರ ಪಟ್ಟಿಗೆ ಸೇರಿದ್ದ 'ಗಿರಿಬಾಲೆ' ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ ಸ್ವಾತಂತ್ರ್ಯಪೂರ್ವದ ಲೇಖಕಿ ಸರಸ್ವತಿ ರಾಜವಾಡೆಯವರನ್ನು 1987 ರಲ್ಲಿ ಹೊರಜಗತ್ತಿಗೆ ಪರಿಚಯಿಸಿ ಅವರ ಸಾಹಿತ್ಯ ಜೀವನ ಕುರಿತು ಅಧ್ಯಯನ ನಡೆಸಿ ವಿಜಯಾರವರ ಮಾರ್ಗದರ್ಶನದಲ್ಲೇ ಪಿ.ಎಚ್.ಡಿ ಪದವಿ ಪಡೆಯುವ ಭಾಗ್ಯ ನನ್ನದಾಯಿತು ಎಂದು ಹೇಳಲು ಬಹಳ ಹೆಮ್ಮೆ ಎನಿಸುತ್ತದೆ. ಡಾ. ಶಶಿಕಲಾರವರು ಕಲ್ಯಾಣಮ್ಮನವರನ್ನು ಅಧ್ಯಯನ ಮಾಡಿದರು.
ಇಷ್ಟೇ  ಅಲ್ಲದೆ ವಿಜಯಾರವರು ನಾರಿದಾರಿ ದಿಗಂತ, ಮಹಿಳೆ ಸಾಹಿತ್ಯ ಸಮಾಜ ಮುಂತಾದ ಪ್ರಬಂಧ ಸಂಕಲನಗಳನ್ನು ಉರಿಯ ಸಿಡಿಲಿನ ಉತ್ಕಲೆ ಎಂಬ ಪ್ರವಾಸ ಕಥನವನ್ನು, ನೀರು ಲೋಹದ ಚಿಂತೆ, ತಿರುಗಿ ನಿಂತ ಪ್ರಶ್ನೆಗಳು ಕವನ ಸಂಕಲನಗಳನ್ನು ಹೊರ ತಂದರು. ಹಲವಾರು ಆಯಾಮಗಳಲ್ಲಿ ಅವರು ಶ್ರಮಿಸುತ್ತಲೇಯಿದ್ದರು. ಭಾಷಣಗಳು, ಕಮ್ಮಟಗಳು ನಿರಂತರವಾಗಿ ನಡೆಯುತ್ತಲೇ ಇದ್ದವು.  
ಈ ರೀತಿ ಬಿಡುವಿಲ್ಲದ. ಬೇಸರಿಸದ ಉತ್ಸಾಹದ ಚಿಲುಮೆಯಂತೆ ಕಾರ್ಯ ನಿರ್ವಹಿಸುತ್ತಿದ್ದ ಅವರಿಗೆ 1999 ರ ಜನವರಿ 6 ರಂದು ದೊಡ್ಡ ಅಪಘಾತ ಸಂಭವಿಸಿತು. ಮೂರು ತಿಂಗಳ ಕಾಲ ತೀವ್ರ ಘಟಕದಲ್ಲಿ ಕೋಮಾದಲ್ಲಿಯೇ ಇದ್ದರು. ಅಲ್ಲಿದ್ದರೂ ಅವರ ಬಳಿ ಒಬ್ಬರನ್ನು ಇರಲು ಅನುಮತಿ ಕೊಟ್ಟಿದ್ದರು. ಅದು ವಿಜಯಾರವರಿಗೆ ಮಾತ್ರ ಕೊಟ್ಟ ಅವಕಾಶ. ಅವರ ಸಹೋದರಿಯರು, ಸಮತಾ ಅಧ್ಯಯನ ಕೇಂದ್ರದ ಶಿಷ್ಯೆಯರು, ಗೆಳತಿಯರು, ಸರದಿಯಂತೆ ಅವರ ಬಳಿ ಇರುತ್ತಿದ್ದೆವು. ಬೆಳಗಿನ 6 ರಿಂದ 8 ರವರೆಗೆ ನನ್ನ ಸರದಿ. ನಾನು ಅವರ ಕೈ ಕಾಲುಗಳಿಗೆ ಎಣ್ಣೆ ಉಜ್ಜುವುದು ಇತ್ಯಾದಿಗಳನ್ನು ಮಾಡುತ್ತಿದ್ದೆ. ಅದೇ ಸಂದರ್ಭದಲ್ಲಿ "ಗೋವಿಂದ ಪೈ ಪತ್ರವನ್ನು" ಎಂಬ ನನ್ನ ಪುಸ್ತಕ ಬಿಡುಗಡೆಯಾಯಿತು. ಅದನ್ನು ವಿಜಯಾರವರಿಗೆ ತೋರಿಸಿದೆ. ಆಗ ಅವರ ಮುಖದಲ್ಲಾದ ಬದಲಾವಣೆ  ನನ್ನನ್ನು  ದಂಗು ಬಡಿಸಿತು. ಪುಸ್ತಕವನ್ನು ಕೈಯಲ್ಲಿ  ಸವರಿ ನನ್ನ ಕೆನ್ನೆ ಸವರಿ ತಲೆಯ ಮೇಲೆ ಕೈ ತಂದು ಆಶೀರ್ವದಿಸಿದರು. ವಿಜಯ ಮತ್ತೆ ಬರುತ್ತಾರೆ ಎಂಬ ಬಲವಾದ ನಂಬಿಕೆ ನನಗೆ  ಅಂದು ಹುಟ್ಟಿತು. ಅವರಿಗಿದ್ದ ಸಾಹಿತ್ಯಪ್ರೇಮ, ಸಮಾಜಮುಖಿ ಧೋರಣೆ ಯಾವುದೂ ಮರೆಯಾಗಿರಲಿಲ್ಲ. ಆದರೆ ವ್ಯಕ್ತ ಪಡಿಸಲು ಬೇಕಾದ ಬಾಷಾ ಸಂಪತ್ತು ಅವರ ಕೈ ಬಿಟ್ಟಿತ್ತು.
ಕೋಮಾದಿಂದ ಹೊರ ಬಂದು ಮನೆಗೆ ಬಂದ ನಂತರ ಸಹೋದರಿ, ಸಹೋದರರು ಅವರಿಗೆ ಪ್ರತಿಯೊಂದನ್ನೂ ಆಗ ತಾನೇ ಹುಟ್ಟಿದ ಮಗುವಿಗೆ ಕಲಿಸುವಂತೆ ಹೇಳಿ ಕೊಡುತ್ತಿದ್ದರು. ನಾನೂ ದಿನ ಬಿಟ್ಟು ದಿನ ಹೀಗೆ ಅಕ್ಷರಾಭ್ಯಾಸ ಮಾಡಿಸುವ ಕಾಯಕ ಕೈಗೊಂಡೆ. ಹೀಗೆ ಇತರರೂ ಮಾಡಿದ್ದಾರೆ. ಬರೆದರು ಬರೆದರು ಬರೆದೇ ಬರೆದರು. ಅಂತೂ ಇಂತೂ ಅವರಿಗೆ ಅವರ ಜಾಡು ಸ್ವಲ್ಪ ಮಟ್ಟಕ್ಕೆ ದೊರೆಯಿತು. ಪ್ರತಿನಿತ್ಯ ಡೈರಿ ಬರೆಯುವುದು, ಪ್ರತಿಯೊಂದು ಪದಾರ್ಥಗಳನ್ನು ಬರೆದು ಗುರುತಿಸುವ ಕೆಲಸ ಮಾಡುತ್ತಿದ್ದರು. ನಂತರ ಕೆಲವು ಸಣ್ಣ ಪುಟ್ಟ ಘಟನೆಗಳನ್ನು ಗದ್ಯರೂಪದಲ್ಲಿ ದಾಖಲಿಸುತ್ತಿದ್ದರು. ಹಲವು ಕವನಗಳನ್ನು ರಚಿಸಲಾರಂಭಿಸಿದರು. ದಬ್ಬೆಯಿಂದ ಮೈಸೂರಿಗೆ ಬಂದಾಗ ನಮ್ಮ ಮನೆಯಲ್ಲಿ ಒಂದೆರಡು ದಿನಗಳಿರುತ್ತಿದ್ದರು. ಆಗೆಲ್ಲಾ ಅವರು ಬರೆದುದನ್ನು  ತೋರಿಸುತ್ತಿದ್ದರು. ಅದರ ಬಗ್ಗೆ ಮಾತನಾಡುತ್ತಿದ್ದೆವು. ಊಟ ತಿಂಡಿ ಮುಗಿಸಿ ನಾವು ಇಡೀ ದಿನ ಇದೇ ಕೆಲಸ ಮಾಡುತ್ತಿದ್ದೆವು. ಅವರು ಮೊದಲು ಬರೆದ ಪುಸ್ತಕಗಳನ್ನು ಓದುವುದು, ಹೊಸದನ್ನು ಓದುವುದು ಈ ರೀತಿ  ನಡೆಯುತ್ತಿತ್ತು. ಆಗೆಲ್ಲಾ ನನಗೆ ಆಸ್ಪತ್ರೆಯಲ್ಲಿ ಹುಟ್ಟಿದ ಭರವಸೆ ಗಟ್ಟಿಗೊಳ್ಳುತ್ತಾ ನಡೆಯಿತು.
ಜಯಾ ಮೇಡಂರವರನ್ನು ಆಸ್ಪತ್ರೆಯಿಂದ ಮನೆಗೆ ಕರೆ ತಂದ ಸಂದರ್ಭದಲ್ಲಿ ಮನೆಯವರನ್ನೆಲ್ಲಾ ಕೂಡಿಸಿಕೊಂಡು "ನಾವು ಜೀವವನ್ನೇನೋ ಉಳಿಸಿದ್ದೇವೆ ಆದರೆ ನೀವೆಲ್ಲಾ ತಾಳ್ಮೆಯಿಂದ ಕಷ್ಟಪಟ್ಟು ನೋಡಿಕೊಳ್ಳಬೇಕಾಗುತ್ತದೆ. ಅವರು ಎಷ್ಟರ ಮಟ್ಟಿಗೆ ಚೇತರಿಸಿಕೊಳ್ಳುತ್ತಾರೆ ಎಂದು ನಾವು ಹೇಳಲಾಗುವುದಿಲ್ಲ" ಎಂದಿದ್ದ ಡಾಕ್ಟರ್ ಅವರಲ್ಲಾದ ಪ್ರಗತಿಯನ್ನು ನೋಡಿ "ಇದು ನಮ್ಮ ವೈದ್ಯಕೀಯ ವಿಜ್ಞಾನಕ್ಕೇ ಒಂದು ಅಚ್ಚರಿ" ಎಂದು ಉದ್ಗರಿಸಿದ್ದರಂತೆ. ಈ ವಿಷಯವನ್ನು ಅವರ ತಂಗಿ ಛಾಯ ಹೇಳಿದರು.

ವಿಜಯಾರವರಿಗೆ ಆದ ಅಪಘಾತ ಅವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಮಾತ್ರವಲ್ಲ, ಇಡೀ ಸಾಹಿತ್ಯಕ್ಕೆ ಹಾಗೂ ಮಹಿಳಾ ಸಂಘಟನೆಗೆ ಆದ ದೊಡ್ಡ ನಷ್ಟ. ಅಪಘಾತವಾದ ಸುಮಾರು ಒಂದೆರೆಡು ವರ್ಷ ಅವರ ಆರೋಗ್ಯದಲ್ಲಿ ಅಷ್ಟೇನೂ ಸುಧಾರಣೆ ಕಾಣಲಿಲ್ಲ. ಆದರೆ ಅವರ ಪ್ರಯತ್ನ ನಿರಂತರವಾಗಿ ಹಂತ ಹಂತವಾಗಿ ನಡೆಯುತ್ತಲೇ ಇತ್ತು. ಆದರೆ ನಂತರ ಅವರು ಮತ್ತೆ ತಮ್ಮ ಬರವಣಿಗೆಯನ್ನು ಆರಂಭಿಸಿದರು ಮೆಲ್ಲಮೆಲ್ಲನೆ. ಇತ್ತೀಚಿನ ದಿನಗಳಲ್ಲಿ ಅವರು ಮೊದಲಿನ ವಿಜಯಾರಾಗಿ ಹೊರ ಬರುತ್ತಾರೆ ಎಂಬ ಭರವಸೆ ಮೂಡಿಸಿದ್ದರು. ಸುಮಾರು 150 ಕವನಗಳನ್ನು  ರಚಿಸಿದ್ದಾರೆ. ಅದರಲ್ಲಿ ಎರಡು ಕವನಗಳನ್ನು ಇಲ್ಲಿ  ದಾಖಲಿಸುತ್ತೇನೆ.

       ಜನವರಿ
ವರ್ಷ ವರ್ಷಗಳೇ
ನೀವು ಹೇಳದೆ
ಮುಂದಕ್ಕೆ  ಮುಂದಕ್ಕೆ
ಹೋಗುತ್ತೀರಲ್ಲ
ಅವು ಮಲಗುವುದಿಲ್ಲ.
ವರ್ಷಗಳು ಹಾಗೇ
ಅವು ಸಮಾನ
ಜನವರಿ ನಕ್ಕವು.
ನಾನೇ ಅಲ್ಲ ನನ್ನಿಂದ ಮುಂದಕ್ಕೂ ಸದಾ
ಇದ್ದು ಹೋಗುವುದು ಸದಾ
ಇವೆಲ್ಲಾ ಸ್ಪಷ್ಟಾನು ಸ್ಪಷ್ಟ
ಅವಕ್ಕೆ  ಯಾರಿಗೆ ಏನಾದರೂ
ಇದ್ದರೂ ಅತ್ತರೂ ಸತ್ತರೂ ಹಾಗೆ
ಓಹೋ ತಿಳಿಯಿತು ತಿಳಿಯಿತೀಗ.
ಹೋಗಲಾರದೆ ಇದ್ದರೆ ಹೇಗೆ
ಬಂದು ಇದ್ದು ಹೋಗುವಿಕೆ

ವಿಶಿಷ್ಟ ಪ್ರಪಂಚ

ಎಚ್ಚರವೆಂದಿತೇ ಸ್ಟೌವ್
ನಾನೇ ಹಿರಿಯನೆಂದಿತೇ ಅದು
ಬೇಡವೆಂದವರು ಯಾರೂ ಇಲ್ಲ
ಎಲ್ಲಿ ಎಲ್ಲದಕ್ಕೂ ಭಾವವುಂಟು.
ಅದಿಲ್ಲವೆಂಬುದು ಹಿರಿಯರ ಮಾತು
ಬೆಳಗಿನ ಕಾಫಿಯಿಂದ ಮಲಗುವ ಕಷಾಯದವರೆಗೂ
ನೀನೆ ನೀನು ನಿನ್ನ ತೀರ್ಮಾನ
ನಮ್ಮ ಭಯ, ನಿನ್ನ ಅಪಾಯ
ನಿನ್ನನ್ನು ನೋಡಿದರೆ ಚಿಕ್ಕವನು
ಆದರೆ ನೀನೇ ಅತಿ ಮುಖ್ಯ
ನಿನ್ನ ನೆನಪಿಲ್ಲದಿದ್ದರೆ
ಬದುಕಲು ಅಸಾಧ್ಯ
ಮನೆಯಲ್ಲಿ ನಿನ್ನ ಹಿರಿತನ
ಸ್ಟೌವ್ ನಿನಗೆ ಜನಕ್ಕೆ ಭಯ 
ಎಲ್ಲರಿಗೂ ನೆನಪಿಸಿದ್ದೀಯೆ
ಪುನಃ ಪುನಃ  ಮೌನವೇ?
ನೆನಪುಂಟು ನೆನಪುಂಟು.
2-2-18 ರಂದು ಡಾ.ಸುಬ್ರಹ್ಮಣ್ಯಂರವರ ಮನೆಯಲ್ಲಿ ವಿಜಯಾರವರ ಕವಿಗೋಷ್ಠಿಯೊಂದನ್ನು ಆಯೋಜಿಸಿದರು. ನಾವು ಗೆಳೆಯ, ಗೆಳತಿಯರು ಇಪ್ಪತ್ತು ಜನ ಸೇರಿದ್ದೆವು. ಆ ದಿನ ಎಲ್ಲರ ಮುಖದಲ್ಲೂ ಭರವಸೆಯ ಬೆಳಕು ಮೂಡಿತು. ಇನ್ನೇನು ನಮ್ಮ ವಿಜಯಾ ದಬ್ಬೆಯವರು ಮೊದಲಿನಂತೆಯೇ ಮರಳುತ್ತಾರೆ ಎಂಬ ಭಾವನೆ ಹುಟ್ಟಿ ಮನಸ್ಸು ಖುಷಿಯಿಂದ ಕುಣಿಯಿತು. ಆದರೆ ಈ ನಮ್ಮ ಖುಷಿ ಹೆಚ್ಚು ದಿನಗಳು ಉಳಿಯಲಿಲ್ಲ. ಮತ್ತೆ ನಮಗೆ ಮೋಸವಾಯಿತು. 23-2-18 ರಂದು ವಿಜಯಾರವರು ನಮ್ಮನ್ನೆಲ್ಲಾ ಬಿಟ್ಟು ನಡೆದೇ ಬಿಟ್ಟರು. ನಮ್ಮ ವಿಜಯಾ ಹೊರಟೇ ಬಿಟ್ಟರಲ್ಲ ಎಂದು ಬಹಳ ಮರುಗಿತು ಮನಸ್ಸು
ವಿಜಯಾ ಎಲ್ಲಿ ಹೋದಿರಿ ನೀವು ಎಲ್ಲಿ  ಹೋದಿರಿ?
ನಾನೆಲ್ಲಿ ಹೋದೆ ಇಲ್ಲೇ ಇರುವೆನಲ್ಲಾ
ನಿನ್ನಲ್ಲಿ, ಅವಳಲ್ಲಿ, ಇವಳಲ್ಲಿ
ನಾನಿಲ್ಲೇ ಇರುವೆನೆಲ್ಲಾ ನಿಮ್ಮೊಟ್ಟಿಗೆ.
ಎಂದು ವಿಜಯಾ ನುಡಿದಂತಾಯಿತು. ಹೌದು ನಮ್ಮೆಲ್ಲರಲ್ಲಿ ನಮ್ಮೊಟ್ಟಿಗೆ ಇದ್ದಾರೆ ಎಂಬ ಸಮಾಧಾನದಲ್ಲಿ ನಾವು ಮುಂದೆ ಸಾಗಬೇಕಾಗಿದೆ.

- ಡಾ. ಶ್ರೀವಳ್ಳಿ

     




ಕಾಮೆಂಟ್‌ಗಳಿಲ್ಲ: