ಬೆಳಕಿಗೆಳೆದರವಳನ್ನು
ಬೇಡಿಗಳಿಂದ ಬಂಧಿಸಿ
ಭಾವನೆಗಳ ಭಗ್ನಗೊಳಿಸಿ
ಹೋಟೆಲೊಂದರ ಮೇಲಿನ ದಾಳಿಯೇ
ಆದರದು ಅವಳ ಬದುಕಿನ ದರೋಡೆಯೇ
ಪ್ರಕಟಿಸಿದವು ಪತ್ರಿಕೆಗಳು ಸುದ್ದಿ
ಪ್ರಜೆಗಳಿತ್ತರು ತಮ್ಮ ತೀರ್ಪು
ವಧೆಯಾಯಿತವಳ ಚಾರಿತ್ರ್ಯ
ಹಂಗಿಸಲಾಯಿತವಳ ಸಂಸ್ಕೃತಿಯ
ನಿಂದೆಗೊಳಗಾಯಿತವಳ ಕುಟುಂಬ
ನಿಂತಳವಳಲ್ಲಿ ಒಂಟಿಯಾಗಿ ನೊಂದು
ಆದರೊಂದು ದಿನ
ಆ ಹತಾಶ ಹೃದಯ
ಮಾತನಾಡುವುದು
ಅನಿವಾರ್ಯವಾಯಿತು
ಎಲ್ಲಿದ್ದಿರಿ ನೀವೆಲ್ಲಾ
ನನ್ನ ಪತಿಯ ಚಿತೆಯುರಿಯುತ್ತಿದ್ದಾಗ
ಅಳುವ ಕಂದನ ಹೊತ್ತು ನಾ ನಿಂತಿದ್ದಾಗ
ಎಲ್ಲಿದ್ದಿರಿ ನೀವಾ ದಿನಗಳಲಿ
ನಾ ನೆರವಿಗಾಗಿ ಕೈಚಾಚಿದ್ದಾಗ
ಹಸಿದ ನಾನು ಹಸಿದ ಕೂಸ ಸಂತೈಸುವಾಗ
ಎಲ್ಲಿದ್ದಿರಿ ನೀವಾ ದಿನ
ರೋಗಕ್ಕೆ ನನ್ನ ಮಗು ಬಲಿಯಾದಾಗ
ತನ್ನೆಲ್ಲವನ್ನೂ ತಾಯೊಬ್ಬಳು ಕಳಕೊಂಡಾಗ
ಎಲ್ಲಿದ್ದಿರಿ ನೀವಾ ದಿನಗಳಲ್ಲಿ
ಮನೆಯಿಲ್ಲದೆ ನಾನಲೆಯುತ್ತಿದ್ದಾಗ
ಮಾಡುವುದೇನೆಂದು ತೋಚದಿದ್ದಾಗ
ಈಗ ಬಂದಿದ್ದೀರಿ ನೀವು
ಸುಸಂಸ್ಕೃತ ಸಮಾಜದವರು
ಪ್ರಶ್ನಿಸಲು ನನ್ನ
ಹೌದು ನಾ ವೇಶ್ಯೆಯೇ
ಈ ಕೂಸಿನ ತಾಯಿಯೇ
ನಿಜಕ್ಕೂ ನಾ ಕಾಣೆನಿದರ ತಂದೆಯ
ಪರಿವರ್ತನೆಗೆ ನೆರವು ನೀಡುವಿರಾ???
ಅಸಹನೀಯ ಮೌನವಲ್ಲಿ ನೆಲೆಸಿತು
ಅವಳ ಕಾಲ್ಸಪ್ಪಳ ಮಾತ್ರ ಕೇಳಿತ್ತು
ಅನುವಾದ - ಸುಧಾ ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ