ಚಾಮರಾಜನಗರದಲ್ಲಿ ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ, 2013ರ ಮಾರ್ಚ್ ತಿಂಗಳಲ್ಲಿ, ಒಂದು ದಿನದ ಪ್ರವಾಸ ಹೋಗಬೇಕೆಂದು ಎಲ್ಲಾ ವಿದ್ಯಾರ್ಥಿನಿಯರು ಆಸೆಪಟ್ಟರು. ಎಲ್ಲರೂ ಚರ್ಚೆ ಮಾಡಿ ಕೇರಳದ ವಯನಾಡಿಗೆ ಹೋಗಲು ನಿರ್ಧರಿಸಿ, ಅಧ್ಯಾಪಕರಿಗೆ ತಿಳಿಸಿದೆವು. ಅವರು ಸರಿ ಎಂದು ತಲಾ 500 ರೂಪಾಯಿಗಳನ್ನು ನಿಗದಿಪಡಿಸಿದರು. ಎಲ್ಲರ ಮನೆಯಲ್ಲೂ ಒಪ್ಪಿಸಿ ಹಣವನ್ನು ತಂದು ಅಧ್ಯಾಪಕರ ಕೈಗೊಪ್ಪಿಸಿದರು. ಅಧ್ಯಾಪಕರು ಬಸ್ಸಿಗೆ ಹಣ ಕಟ್ಟಿಯೇ ಬಿಟ್ಟರು. ಎಲ್ಲಾ ವಿದ್ಯಾರ್ಥಿನಿಯರಿಗೂ ಖುಷಿಯೊ ಖುಷಿ.
ವಯನಾಡ್ ಕೇರಳದ ಒಂದು ಜಿಲ್ಲೆ. 1980ರಲ್ಲಿ ಕೇರಳದ 12ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು. ಪಶ್ಚಿಮ ಘಟ್ಟದ ಒಂದು ಭಾಗ ಈ ಜಿಲ್ಲೆಯಲ್ಲಿದೆ. ಅತ್ಯಂತ ಹಿಂದಿನ ದಾಖಲೆಗಳಲ್ಲಿ ಈ ಪ್ರಾಂತ್ಯವನ್ನು ಮಾಯಕ್ಷೇತ್ರ ಎಂದು ಕರೆಯಲಾಗಿತ್ತು. ಕ್ರಮೇಣ ಅದು ಮಾಯಾನಾಡ್ ಆಗಿ, ಕೊನೆಗೆ ವಯನಾಡ್ ಆಯಿತು. ಜನಪದದ ಪ್ರಕಾರ ವಯಲ್ (ಭತ್ತದ ಗದ್ದೆ) ಮತ್ತು ನಾಡ್ (ನೆಲ) ಎರಡೂ ಸೇರಿ “ಭತ್ತದ ಗದ್ದೆಗಳ ನಾಡಾಗಿದೆ. ಈ ಪ್ರಾಂತ್ಯದಲ್ಲಿ ಬಹಳಷ್ಟು ಬುಡಕಟ್ಟು ಜನಾಂಗದವರಿದ್ದಾರೆ. ಇದು ಕೇರಳದ ಅತ್ಯಂತ ಕಡಿಮೆ ಜನಸಂಖ್ಯೆಯಿರುವ ಜಿಲ್ಲೆಯಾಗಿದೆ. ಮೂರು ತಾಲ್ಲೂಕುಗಳನ್ನು ಒಳಗೊಂಡ ಈ ಜಿಲ್ಲೆಯ ಜನಸಂಖ್ಯೆ 8,16,558 (2011 ಜನಗಣತಿ). ಗಂಡು ಹೆಣ್ಣಿನ ಪ್ರಮಾಣ 1035 ಹೆಣ್ಣು: 1000 ಗಂಡು. ಸಾಕ್ಷರತಾ ಪ್ರಮಾಣ – 89.32%. ಕಬಿನಿ, ಪನಮಾರಮ್, ಮಾನಂತವಾಡಿ, ಕಲಿಂದಿ ಮುಖ್ಯನದಿಗಳು. ಕೃಷಿ ಮುಖ್ಯವಾಗಿದೆ. ಕಾಫಿ, ಟೀ, ಕೋಕೋ, ಬಾಳೆಹಣ್ಣು ಮತ್ತು ವೆನಿಲ್ಲಾ ಇಲ್ಲಿನ ಪ್ರಮುಖ ಬೆಳೆಗಳು. ಜೊತೆಗೆ ಭತ್ತ ಬಹಳ ಮುಖ್ಯ ಬೆಳೆಯಾಗಿದೆ. ಪ್ರವಾಸೋದ್ಯಮದ ಮೂಲಕ ಜಿಲ್ಲೆಗೆ ಆದಾಯ ಬರುತ್ತದೆ. ಪಶ್ಚಿಮ ಘಟ್ಟಗಳ ಗಿರಿಸಾಲು, ಜೊತೆಗೆ ಹಲವಾರು ನದಿಗಳು ಮತ್ತು ವನ್ಯಜೀವಿಗಳು ಮುಖ್ಯ ಆಕರ್ಷಣೆಯಾಗಿವೆ. ವಯನಾಡ್‍ಗೆ ಹೋಗಲು ಬಂಡಿಪುರ ರಾಷ್ಟ್ರೀಯವನದ ಮೂಲಕ ಹೋಗಬೇಕು ಇಲ್ಲವೇ ಮೈಸೂರು, ಹುಣಸೂರು, ಗೋಣಿಕೊಪ್ಪಲು, ಕುಟ್ಟ, ಮಾನಂತವಾಡಿಯ ಮೂಲಕ ಅಲ್ಲಿಗೆ ಹೋಗಬಹುದು.
ಅಂದು ಶನಿವಾರ ಮುಂಜಾನೆ 5-30 ಕ್ಕೆ ಎಲ್ಲರಿಗೂ ಕಾಲೇಜು ಬಳಿ ಬರಲು ಹೇಳಿದ್ದರು. ಎಲ್ಲಾ ವಿದ್ಯಾರ್ಥಿನಿಯರು ಒಟ್ಟಿಗೆ ಸೇರಿ ಹೊರಡಲು 6 ಘಂಟೆ ಆಗಿಯೇ ಹೋಯಿತು. ನಾವೆಲ್ಲರೂ ಬಸ್ ಹತ್ತಿದೆವು. ನಮಗೆ ಇಷ್ಟವೆನಿಸಿದ ಸೀಟು ಹಿಡಿದು ಕುಳಿತೆವು. ಬಸ್ ಹೊರಟ ಸ್ವಲ್ಪ ಹೊತ್ತಿಗೆ ಶುರುವಾಯಿತು ಹಾಡು, ನೃತ್ಯ, ಆಟ ಇತ್ಯಾದಿಗಳು.
9 ಘಂಟೆಗೆ ಎಲ್ಲರಿಗೂ ದಣಿವಾಗಿ ಹಸಿವಿನಿಂದ ಕುಸಿದೆವು. ನಂತರ ಅಧ್ಯಾಪಕರು ಬಸ್‍ಅನ್ನು ಒಂದು ಟೀ ಎಸ್ಟೇಟ್ ಬಳಿ ನಿಲ್ಲಿಸಲು ಹೇಳಿದರು. ಎಲ್ಲರ ಮುಖದಲ್ಲಿ ಸಂತಸ ಕಾಣಿಸಿತು. ಏಕೆಂದರೆ ಬಾಳೆ, ತೆಂಗು, ಅಡಿಕೆ ತೋಟವನ್ನೇ ನೋಡುತ್ತಿದ್ದ ನಮಗೆ ಟೀ ಎಸ್ಟೇಟ್ ನೋಡಿ ಖುಷಿಯಾಯಿತು. ನಂತರ ಅಲ್ಲಿ ಉಪಹಾರವನ್ನು ಮುಗಿಸಿ, ಮುಂದೆ ಹೋದೆವು.
ಮೊದಲನೆ ಸ್ಥಳ ಎಡಕಲ್ಲು ಗುಹೆ. ಎಡಕ್ಕಲ್ ಗುಹೆಗಳು ಸಹಜವಾಗಿ ನಿರ್ಮಾಣಗೊಂಡಿರುವ ಗುಹೆಗಳು. ಅಂಬುಕುಟ್ಟಿ ಮಾಲಾದ ಮೇಲೆ, ಸಮುದ್ರಮಟ್ಟದಿಂದ 1200 ಮೀಟರ್ ಮೇಲಿದೆ. ನಿಯೋಲಿಥಿಕ್ ಮಾನವನದ್ದು ಎನಲಾದ ಸುಮಾರು ಕ್ರಿ.ಪೂ 6000 ವರ್ಷದ ಚಿತ್ರಗಳಿವೆ. ಈ ಪ್ರಾಂತ್ಯದಲ್ಲಿ ಐತಿಹಾಸಿಕ ಪೂರ್ವ ನಾಗರೀಕತೆ ಇತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಶಿಲಾಯುಗದ ಈ ಕೆತ್ತನೆಗಳು ಬಹಳ ಅಪರೂಪವಾದದ್ದು ಮತ್ತು ದಕ್ಷಿಣ ಭಾರತದಲ್ಲಿರುವ ಏಕೈಕ ಉದಾಹರಣೆಯಾಗಿದೆ. ಮನುಷ್ಯರ, ಪ್ರಾಣಿಗಳ, ಮನುಷ್ಯರು ಉಪಯೋಗಿಸುತ್ತಿದ್ದ ಸಾಧನಗಳ ಮತ್ತು ಚಿಹ್ನೆಗಳ ಕೆತ್ತನೆಗಳಿವೆ. 1890ರಲ್ಲಿ ಈ ಗುಹೆಗಳನ್ನು ಅನ್ವೇಷಿಸಿದ್ದು ಬ್ರಿಟಿಷ್ ಪೋಲಿಸ್ ಅಧಿಕಾರಿಯಾದ ಫ್ರಾಯಿಡ್ ಫಾಸೆಟ್. ಅಲ್ಲಿರುವ ಕ್ರಿಪೂ 1000 ಇಸವಿಯ ಕೆತ್ತನೆಗಳಿಗೆ ಸಿಂಧು ನದಿ ನಾಗರೀಕತೆಯ ಸಂಬಂಧವಿರಬಹುದೆಂದು ಭಾವಿಸಲಾಗಿದೆ.
ಬಸ್ ನಿಲ್ಲಿಸಿದ ನಂತರ ಗುಹೆ ತಲುಪಲು ಸುಮಾರು ಒಂದು ಕಿಮೀ ದೂರ ನಡೆದೆವು. ಸಹಪಾಠಿಗಳ ಜೊತೆ ನಡೆದಾಗ ಯಾರಿಗೂ ಸಮಯದ ಅರಿವಾಗಲಿಲ್ಲ. ಹೋಗುವ ದಾರಿಯಲ್ಲಿ ಇಕ್ಕೆಲಗಳಲ್ಲಿ ಕಂಡ ಹಸಿರು ಕಣ್ಣುಗಳಿಗೆ ಆನಂದವನ್ನು ನೀಡಿತು. ಹಾಗೆ ಸಾಗುತ್ತಾ ಗುಹೆಯನ್ನು ಪ್ರವೇಶಿಸಿದೆವು. ನೋಡಲು ಭಯಂಕರ ಮತ್ತು ರೋಮಾಂಚಕವಾಗಿತ್ತು. ಸುತ್ತಲೂ ಬಂಡೆ, ಬಂಡೆಯ ಮೇಲೆ ಲಿಪಿಗಳು, ಮೇಲೆ ನೋಡಿದರೆ ಬಂಡೆ ನಮ್ಮ ಮೇಲೆಯೇ ಬೀಳುತ್ತದೇನೋ ಎಂಬಂತೆ ಭಾಸವಾಗುತ್ತಿತ್ತು. ಸುಮಾರು 1000 ಮೆಟ್ಟಿಲುಗಳಿವೆ. ಎಲ್ಲರಿಗೂ ಪೂರ್ತಿ ಹತ್ತಿದ ಮೇಲೆ, ಹತ್ತಿದ್ದಕ್ಕೂ ಸಾರ್ಥಕವೆನಿಸಿತು. ಮತ್ತೆ ಅಲ್ಲಿಂದ ಹಿಂತಿರುಗುತ್ತಾ ಅಂಗಡಿಸಾಲುಗಳನ್ನು ನೋಡಿದೆವು. ಕರಕುಶಲ ವಸ್ತುಗಳ ಅಂಗಡಿಗಳನ್ನು ನೋಡಲು ಸೊಗಸಾಗಿತ್ತು. ಮತ್ತೆ ಬಸ್ ಹತ್ತಿ ಕುಳಿತೆವು.
ಮುಂದೆ ಸೂಚಿಪುರ ಜಲಾಶಯಕ್ಕೆ ಹೋದೆವು. ಅದು ಕೂಡ ದೂರದ ಹಾದಿ. ಸೂಚಿಪರ ಜಲಪಾತ (ಸೆಂಟಿನೆಲ್ ರಾಕ್ ಜಲಪಾತ) ಅದು ವೆಲ್ಲರಿಮಾಲದಲ್ಲಿರುವ ಮೂರು ಹಂತಗಳ ಜಲಪಾತ. ಸುತ್ತಲೂ ಡೆಸಿಡ್ಯುಯಸ್, ಎವರ್ಗ್ರೀನ್ ಮತ್ತು ಮಾಂಟೇನ್ ಕಾಡುಗಳಿವೆ. ಸೂಚಿ ಎಂದರೆ ಸೂಜಿ, ಪರ ಎಂದರೆ ಕಲ್ಲು ಎಂದರ್ಥ. 656 ಅಡಿಗಳ (200 ಮೀಟರ್) ಎತ್ತರವಿರುವ ಈ ಜಲಪಾತದ ನೀರು ಚೂಲಿಕಾ ನದಿಯನ್ನು ಸೇರುತ್ತದೆ.
ಬಸ್‍ನಿಂದ ಇಳಿದು ಜಲಾಶಯ ತಲುಪಲು ಒಂದು ಕಿಮೀ ನಡೆದೆವು. ಅಲ್ಲಿಯೂ ಕೂಡ ಮಳಿಗೆಗಳ ಸಾಲು ನೋಡುತ್ತಾ ಸಾಗಿದೆವು. ಹಾಗೆ ಹೋಗುತ್ತಾ ದೂರದಲ್ಲಿಯೇ ಜುಳುಜುಳುನಾದ ಕೇಳಿ ಎಲ್ಲರೂ ಓಡಲು ಶುರುಮಾಡಿದೆವು. ಅಧ್ಯಾಪಕರ ಮಾತು ಕೇಳದೆ ತಪ್ಪು ದಾರಿಯಲ್ಲಿ ನೀರಿಗಿಳಿದು ತುಂಬಾ ವಿದ್ಯಾರ್ಥಿನಿಯರು ಜಾರಿಜಾರಿ ಬಿದ್ದರು. ಮತ್ತೆ ಎತ್ತರದ ಜಲಾಶಯದಿಂದ ಬೀಳುತ್ತಿದ್ದ ನೀರಿಗೆ ಎಲ್ಲರೂ ಮೈಯೊಡ್ಡಿದರು. ನಮ್ಮೊಂದಿಗೆ ಅಧ್ಯಾಪಕರನ್ನೂ ನೀರಿಗಿಳಿಸಿ ಕುಣಿದಾಡಿದೆವು. ಹೀಗೆ ಸಮಯ ಉರುಳಿ ಊಟದ ಸಮಯ ಮೀರಿತು.
ಎಲ್ಲರನ್ನೂ ಅಧ್ಯಾಪಕರು ಕರೆದರು. ಮನಸ್ಸಿಲ್ಲದ ಮನಸ್ಸಿಂದ ನಾವೆಲ್ಲರೂ ಅಲ್ಲಿಂದ ಎದ್ದು ಬಂದೆವು. ಅಲ್ಲಿಂದ ಹೊರಟು ಅಲ್ಲಿದ್ದ ಮಳಿಗೆಗಳಲ್ಲಿ ಬೇಕಾದ್ದನ್ನು ಕೊಂಡು, ಬಸ್‍ನ ಬಳಿ ತಲುಪಿದೆವು. ಅಲ್ಲಿ ಊಟ ಮುಗಿಸಿದೆವು. ಮುಂದೆ ನಾವು ತಲುಪಿದ್ದು ಪೂಕಾಟ್ ಸರೋವರ.
ಪೂಕಾಟ್ ಸರೋವರ ಶುದ್ಧ ನೀರಿನ ಸರೋವರವಾಗಿದೆ. ಸಮುದ್ರಮಟ್ಟದಿಂದ 770 ಮೀಟರ್ ಎತ್ತರದಲ್ಲಿದೆ. ಪನಮಾರಮ್ ಉಪನದಿ, ಪೂಕಾಟ್ ಸರೋವರದಿಂದ ಆರಂಭವಾಗಿ ಕಬಿನಿ ನದಿಯನ್ನು ಸೇರುತ್ತದೆ. 8.5 ಎಕ್ಟೇರ್ ವಿಸ್ತೀರ್ಣ ಹೊಂದಿರುವ ಈ ಸರೋವರದ ಗರಿಷ್ಟ ಆಳ 6.5 ಮೀಟರ್. ಈ ಸರೋವರದ ವಿಶೇಷವೆಂದರೆ ಇದು ಭಾರತದ ನಕ್ಷೆಯ ಆಕಾರವನ್ನು ಹೊಂದಿದೆ. ಎಲ್ಲಾ ಕಾಲದಲ್ಲೂ ನೀರು ಹರಿಯುತ್ತದೆ. ಸುತ್ತಲೂ ಕಾಡು, ವನ್ಯಮೃಗ, ಪಕ್ಷಿಗಳಿವೆ. ಸರೋವರದಲ್ಲಿ ನೀಲಿ ಕಮಲಗಳಿವೆ. ಬೋಟಿಂಗ್, ಮಕ್ಕಳ ವನ, ಮತ್ಸ್ಯಾಗಾರವಿದೆ.
ಆ ಸ್ಥಳವು ಕಣ್ಣಿಗೆ, ಮನಸ್ಸಿಗೆ ಮುದ ನೀಡಿತು. ಅಲ್ಲಿ ಶಾಂತ ವಾತಾವರಣವಿತ್ತು. ದೋಣಿ ವಿಹಾರ ಸೊಗಸಾಗಿತ್ತು. ಸಮಯ 4-30 ಆಯಿತು. ಮಳೆರಾಯನ ಆರ್ಭಟ ಶುರುವಾಗಿತ್ತು. ಅಲ್ಲಿಂದ ಎಲ್ಲರೂ ಹೊರಟೆವು. ದಿನಪೂರ್ತಿ ನೋಡಿದ ಸ್ಥಳಗಳ ಮೆಲುಕು ಹಾಕುತ್ತಾ ಮತ್ತೆ ಆಟ, ಹಾಡು, ನೃತ್ಯ ಮಾಡುತ್ತಾ ರಾತ್ರಿ 10 ಘಂಟೆಗೆ ಕಾಲೇಜು ತಲುಪಿದೆವು. ಎಲ್ಲರೂ ಅವರವರ ಪೋಷಕರೊಂದಿಗೆ ತಮ್ಮ ಮನೆಗಳನ್ನು ಸೇರಿಕೊಂಡರು.
ವಯನಾಡ್‍ಗೆ ಹೋಗಲು ಪ್ರಶಸ್ತ ಸಮಯವೆಂದರೆ ಅಕ್ಟೋಬರ್‍ನಿಂದ ಫೆಬ್ರವರಿಯವರೆಗೆ. ಮೇಲೆ ಹೇಳಿದ ಸ್ಥಳಗಳೊಂದಿಗೆ ನೋಡಲಿರುವ ಇತರ ಸ್ಥಳಗಳೆಂದರೆ ಚೆಂಬ್ರಾ ಶೃಂಗ, ಮೀನ್ಮುಟ್ಟಿ ಜಲಪಾತ, ಬನಸುರ ಆಣೆಕಟ್ಟು, ನೀಲಿಮಾಲ ವ್ಯೂ ಪಾಯಿಂಟ್, ಫ್ಯಾಂಟಮ್ ರಾಕ್, ಮುತುಂಗಾದ ಬಿದಿರು ವನ, ಸುಲ್ತಾನ್ ಬತೇರಿ, ವಯನಾಡ್ ವನ್ಯಜೀವಿವನ, ಲಕ್ಕಿಡಿ ವ್ಯೂ ಪಾಯಿಂಟ್, ಕುರುವ ದ್ವೀಪ, ಪಕ್ಷಿಪಾತಾಳಂ ಪಕ್ಷಿಧಾಮ, ಉರವದಲ್ಲಿರುವ ಬಿದಿರು ಫ್ಯಾಕ್ಟರಿ.
-- ನಿಶಾ ಕೆ ಎನ್
1 ಕಾಮೆಂಟ್:
NISHA, IT IS GOOD. MAYBE SOME MORE DETAILS NEEDED.
Sudha
ಕಾಮೆಂಟ್ ಪೋಸ್ಟ್ ಮಾಡಿ