“ಮುನ್ನುಗ್ಗು ಗೆಳೆಯ ಅಸಹಾಯಕಯರಾಗಿ ಸಾಯುತ್ತಿರುವ ನಿನ್ನ ಒಲವಿನ ಮಾತೃಭೂಮಿಯ ಮಕ್ಕಳನ್ನು ನೀನು ನೈಜವಾದ ಸ್ವಾತಂತ್ರ್ಯದೆಡೆಗೆ ಕರೆದೊಯ್ಯಬೇಕು, ನೆನಪಿರಲಿ ‘ಭಾರತೀಯರಿಗಾಗಿ ಭಾರತ’ ಇದಕ್ಕಾಗಿ ನಾವೆಲ್ಲರೂ ಹೋರಾಡಬೇಕು.ಇದೇ ನಮ್ಮ ಗುರಿ”. ಈ ಸ್ಪೂರ್ತಿದಾಯಕ ವಾಕ್ಯಗಳಿಂದ ಭಾರತದ ಯುವ ಜನರಲ್ಲಿ ಕ್ರಾಂತಿಯ ಚಿಲುಮೆ, ಉತ್ಸಾಹ ಮೂಡಿಸಿದ ಕ್ರಾಂತಿಕಾರಿ ವೀರ ಮಹಿಳೆ ಮೇಡಂ ಕಾಮರವರು. ಇವರ ಪೂರ್ಣ ಹೆಸರು ಮೇಡಂ ಭಿಖಾಜಿ ರುಸುಂಜಿ ಕಾಮ. 1861 ಸೆಪ್ಟೆಂಬರ್ 24 ರಂದು ಬೊಂಬಾಯಿಯ ಪಾರ್ಸಿ ಶಾಲೆಯೊಂದರಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿ ನಂತರ ಅನೇಕ ವಿದೇಶಿ ಭಾಷೆಗಳನ್ನು ಸಹ ಕಲಿತರು. ಹುಟ್ಟಿನಿಂದಲೇ ಆಗರ್ಭ ಶ್ರೀಮಂತರಾದರೂ ಸಹ ಐಶಾಮಿ ಜೀವನದತ್ತ ಇವರ ಮನಸ್ಸು ವಾಲಲೇ ಇಲ್ಲ. ತಮ್ಮ ಶ್ರೀಮಂತಿಕೆಯನ್ನು ಡಂಭಾಚಾರಕ್ಕೆ ಬಳಸದೆ, ಬದಲಾಗಿ ಇತರರ ಕಷ್ಟ ಕಾರ್ಪಣ್ಯಗಳಿಗಾಗಿ ಬಳಸಿಕೊಂಡರು. ಚಿಕ್ಕಂದಿನಿಂದಲೇ ಪರರ ಕಷ್ಟಗಳಿಗೆ ಸ್ಪಂದಿಸುವ ಮೇಡಂ ಕಾಮಾರವರ ಈ ವ್ಯಕ್ತಿತ್ವವೇ ಮುಂದೆ ಅವರಿಗೆ ದೇಶಾಭಿಮಾನವನ್ನು ಬೆಳೆಸಿತು. ಇವರ ದೇಶಾಭಿಮಾನ ಎಷ್ಟರ ಮಟ್ಟಿಗೆ ಇತ್ತೆಂದರೆ ಅವರ ಪತಿ ಶ್ರೀ ಭಿಖಾಜಿ ವಿಕ್ರಮ್ ಕಾಮರವರನ್ನು ತೊರೆಯುವಷ್ಟು. ಇವರು ಭಾರತದಲ್ಲಿನ ಕ್ರಾಂತಿಕಾರಿಗಳಿಗಷ್ಟೇ ಅಲ್ಲ ಇಡೀ ವಿಶ್ವದಲ್ಲೆಡೆ ಇದ್ದ ಕ್ರಾಂತಿಕಾರಿಗಳಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದರು.
1898 ರಲ್ಲಿ ಬೊಂಬಾಯಿಯ ಸುತ್ತಮುತ್ತ ಪ್ರದೇಶಗಳಲ್ಲಿದ್ದ ಜನರಿಗೆ ಪ್ಲೇಗ್ ಮಾರಿ
ಕಾಡಲಾರಂಭಿಸಿತು. ಆಗ ಸುಖದ ಸುಪ್ಪತ್ತಿಗೆಯಲ್ಲಿದ್ದ ಕಾಮಾರವರು, ಅದನ್ನು ತೊರೆದು,
ಪ್ಲೇಗ್ ಪೀಡಿತರು ನೆರವಿಗೆ ನಿಂತರು. ಇದರಿಂದಾಗಿ ಮೇಡಂ ಕಾಮಾರವರೂ ಸಹ ಅನಾರೋಗ್ಯಕ್ಕೆ ತುತ್ತಾದರು, ಚಿಕಿತ್ಸೆ ಪಡೆಯಲು ಪ್ಯಾರಿಸ್ ನಗರಕ್ಕೆ ತೆರಳಿದರು. ಅಲ್ಲಿದ್ದ ಕೆಲ ಭಾರತೀಯ ಕ್ರಾಂತಿಕಾರಿಗಳ ಪರಿಚಯವಾಯಿತು. ಅವರ ಸಹಾಯದಿಂದ ಮುಂದೆ ಲಂಡನ್ನಿಗೆ ತೆರಳಿ ಅಲ್ಲಿ ಭಾರತೀಯ ಕ್ರಾಂತಿಕಾರಿಗಳಾದ ಶ್ರೀಶ್ಯಾಮ ಕಿಷನ್ ವರ್ಮರನ್ನು ಭೇಟಿಯಾದರು. ಅವರಿಂದ ಮೇಡಂ ಕಾಮಾರವರಿಗೆ ಉತ್ತಮವಾದ ಮಾರ್ಗದರ್ಶನ ದೊರೆಯಿತು. ನಂತರ ಯುರೋಪಿನ ಹಲವಾರು ದೇಶಗಳ ಕ್ರಾಂತಿಕಾರಿಗಳ ಪರಿಚಯವಾಯಿತು. ಅವರೊಂದಿಗೆ ಪರಸ್ಪರ ಸಮಾಲೋಚನೆ ನಡೆಸಿದ ಮೇಡಂ ಕಾಮಾರವರಿಗೆ ಕ್ರಾಂತಿಕಾರಿಗಳಿಗೆ ಮುಖ್ಯವಾಗಿ ಬೇಕಾದ ಆಯುಧಗಳೇನೆಂಬುದು ತಿಳಿದು ಬಂತು. ತಕ್ಷಣವೇ ಅವರು ಭಾರತದಲ್ಲಿನ ಕ್ರಾಂತಿಕಾರಿಗಳಿಗೆ ಕೆಲವು ಶಸ್ತ್ರಾಸ್ತ್ರಗಳು ಹಾಗೂ ಕ್ರಾಂತಿಕಾರಿ ಸಾಹಿತ್ಯದ ಪುಸ್ತಕಗಳನ್ನು ಉಡುಗೊರೆಯ ರೂಪದಲ್ಲಿ ರವಾನಿಸತೊಡಗಿದರು.
ಜರ್ಮನಿಯ ಸ್ಟೂಗರ್ಟ್‍ನಲ್ಲಿ 1907 ರ ಆಗಸ್ಟ್‍ನಲ್ಲಿ ನಡೆದ “ವಿಶ್ವ ಸಮಾಜವಾದಿ ಸಮ್ಮೇಳನ”ದಲ್ಲಿ ಪ್ರತಿನಿಧಿಯಾಗಿ ತೆರಳಿದ ಮೇಡಂ ಕಾಮಾರವರು ಅಲ್ಲಿ ಸಮಾವೇಶಗೊಂಡಿದ್ದ ರಷ್ಯಾದ ಶಿಲ್ಪಿ ಲೆನಿನ್, ಜರ್ಮನಿಯ ಸಿಂಹಿಣಿ ಕ್ಲಾರಾ ಜೆಟ್‍ಕಿನ್, ಪೋಲೆಂಡಿನ ಹೋರಾಟಗಾರ್ತಿ ರೋಸಾಲುಕ್ಸೆಂಬರ್ಗ್ ಮುಂತಾದವರನ್ನು ಭೇಟಿ ಮಾಡಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಹಾದಿಗೆ ಈ ಸಮ್ಮೇಳನವನ್ನು ದಾರಿ ದೀಪವಾಗಿ ಬಳಸಿಕೊಂಡರು. ಸಮ್ಮೇಳನದಲ್ಲಿ ತಮ್ಮ ಭಾಷಣ ಪ್ರಾರಂಭಿಸುವ ಮುನ್ನ ನಮ್ಮ ರಾಷ್ಟ್ರಧ್ವಜವನ್ನು ಹಾರಿಸಿದರು. ಅಲ್ಲಿ ನೆರೆದಿದ್ದ ಲಕ್ಷಾಂತರ ಕ್ರಾಂತಿಕಾರಿಗಳ ಮುಂದೆ ಭಾರತದಲ್ಲಿ ನಡೆಯುತ್ತಿದ್ದ ಬ್ರಿಟಿಷರ ದೌರ್ಜನ್ಯದ ಬಗ್ಗೆ ವಿವರವಾಗಿ ಕಣ್ಣಿಗೆ ಕಟ್ಟುವಂತೆ ಹೇಳಿದರು. ನಮ್ಮ ದೇಶದ ಸ್ವತಂತ್ರಕ್ಕೆ ಇಡೀ ವಿಶ್ವದ ಜನತೆಯ ಬೆಂಬಲವನ್ನು ಈ ಮೂಲಕ ಪಡೆದರು. ಈ ಸಂದರ್ಭದಲ್ಲಿ ಅವರು ಮಾಡಿದ ಭಾಷಣಗಳ ಪ್ರತಿಗಳು ಮುದ್ರಿತವಾಗಿ ಭಾರತೀಯ ಕ್ರಾಂತಿಕಾರಿಗಳ ಕೈಸೇರಿತು. ಅವರಿಗೆ ಉತ್ಸಾಹವನ್ನು ತುಂಬಿತು. ಹೊರ ದೇಶದಲ್ಲಿದ್ದುಕೊಂಡೇ ಭಾರತದ ಕ್ರಾಂತಿಕಾರಿಗಳಿಗೆ ದಾರಿ ದೀಪವಾಗಿದ್ದ ಇವರ ಮೇಲೆ ಬ್ರಿಟೀಷ್ ಪೋಲಿಸರ ಹದ್ದಿನ ಕಣ್ಣುಬಿತ್ತು. ಇದ್ಯಾವುದಕ್ಕೂ ಜಗ್ಗದ ಮೇಡಂ ಕಾಮಾರವರು ತಮ್ಮ ಕ್ರಾಂತಿಕಾರಿ ಚಟುವಟಿಕೆಗಳನ್ನು ಮುಂದುವರೆಸುತ್ತಾ ಹೋದರು. ಕ್ರಾಂತಿಕಾರಿಗಳ ಬಗ್ಗೆ ಅವರಿಗಿದ್ದ ಒಲವನ್ನು ಕಂಡ ಜನರು ಇವರನ್ನು “ಭಾರತದ ಕ್ರಾಂತಿಯ ಮಾತೆ” ಎಂದು ಘೋಷಿಸಿದರು. ವಿದೇಶಗಳಲ್ಲಿ ಓದುತ್ತಿದ್ದ ಭಾರತೀಯ ಯುವಕರಿಗೂ ಸಹ ಹುರಿದುಂಬಿಸಿ ಕ್ರಾಂತಿಯ ಬಗ್ಗೆ ತಿಳುವಳಿಕೆ ನೀಡಿ ಭಾರತದಲ್ಲಿ ಅವರು ಹೋರಾಡುವಂತೆ ಮಾಡಿದರು. ಮೇಡಂ ಕಾಮಾರವರ ಈ ಕ್ರಾಂತಿಕಾರಿ ಚಟುವಟಿಕೆಗಳು ಕೇವಲ ಭಾರತಕ್ಕೆ ಸೀಮಿತವಾಗಿರಲಿಲ್ಲ. ಇದು ವಿಶ್ವದ ವಿವಿಧ ದೇಶಗಳಲ್ಲೂ ಪಸರಿಸ ತೊಡಗಿತು. ವಿಶ್ವದ ಯಾವುದೇ ದೇಶದಲ್ಲಿ ನಡೆಯುವ ಅನ್ಯಾಯ ದೌರ್ಜನ್ಯದವಿರುದ್ಧ ಧನಿಯೆತ್ತಿ ನಿಂತರು. ಮೇಡಂ ಕಾಮಾರವರು ಈ ತೀವ್ರಕರ ಕ್ರಾಂತಿಕಾರಿ ಚಟುವಟಿಕೆಗಳಿಂದ ಹಿಮ್ಮೆಟ್ಟುವಂತೆ ಮಾಡಲು ಬ್ರಿಟೀಷ್ ಸರ್ಕಾರವು ಅವರ ಒಂದು ಲಕ್ಷ ರೂ ಆಸ್ತಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಇದರಿಂದ ಕಿಂಚಿತ್ತೂ ಧೃತಿಗೆಡದ ಮೇಡಂ ಕಾಮಾರವರು ತಮ್ಮ ಕೆಲಸ-ಕಾರ್ಯಗಳನ್ನು ಅದೇ ಉತ್ಸಾಹದಿಂದ ಮುಂದುವರೆಸುತ್ತಲೇ ಹೋದರು.
ಮನಸ್ಸಿಗೆ ವಯಸ್ಸಾಗದಿದ್ದರೂ ದೇಹಕ್ಕೆ ವಯಸ್ಸಾಗುತ್ತದೆ, ಅಲ್ಲವೇ. ಹಾಗೆಯೇ ನಿರಂತರವಾಗಿ ದುಡಿಯುತ್ತಿದ್ದ ಅವರ ದೇಹ ದಣಿಯಲು ಪ್ರಾರಂಭಿಸಿತು. ತಮ್ಮ ಕೊನೆಗಾಲವನ್ನು ಸ್ವದೇಶದಲ್ಲಿ ಕಳೆಯಬೇಕೆಂದು ಆಸೆ ಪಟ್ಟ ಮೇಡಂ ಕಾಮಾರವರನ್ನು ಬ್ರಿಟಿಷ್ ಸರ್ಕಾರ ಬರಗೊಡಲಿಲ್ಲ. ಹಾಗೊಮ್ಮೆ ಅನುಮತಿ ಕೊಡಬೇಕೆಂದರೆ ಇಷ್ಟು ವರ್ಷಗಳ ಕಾಲ ಅವರು ನಡೆಸಿದ ಕ್ರಾಂತಿಕಾರಿ ಚಟುವಟಿಕೆಗಳು ತಪ್ಪು ಎಂದು ಬರೆದು ಕೊಡಬೇಕೆಂದು ಹೇರಿತು. ಸ್ವಾತಂತ್ರ್ಯ, ಕ್ರಾಂತಿಯೇ ತನ್ನ ಉಸಿರಾಗಿ ಭಾವಿಸಿದ್ದ ಮೇಡಂ ಕಾಮಾರವರು ಇದಕ್ಕೆ ಒಪ್ಪುವುದುಂಟೇ???? ಕೊನೆಗೆ ಬ್ರಿಟೀಷ್ ಸರ್ಕಾರವೇ ಈ 60 ರ ಹರೆಯದ ಮೇಡಂ ಕಾಮಾರವರಿಗೆ ಸೋತು ದೇಶಕ್ಕೆ ಬರಲು ಅನುಮತಿ ನೀಡಿತು. ವಿಶ್ರಾಂತಿ ಪಡೆಯುವ ವಯಸ್ಸಿನಲ್ಲಿ ಕಾಮಾರವರು ಸುಮ್ಮನೆ ಕೂರಲಿಲ್ಲಿ. ಬಳಲಿ ಬೆಂಡಾದ ತಮ್ಮ ದೇಹವನ್ನು ಹೊತ್ತುಕೊಂಡೇ ಎಲ್ಲೆಡೆ ಭಾಷಣಗಳನ್ನು ಮಾಡಿ ಕ್ರಾಂತಿಕಾರಿಗಳನ್ನು ಹುರಿದುಂಬಿಸಿದರು. ತಮ್ಮ ಕೊನೆಯುಸಿರೆಳೆಯುವವರೆಗೂ ಬಡವರಿಗೆ ತಮ್ಮಿಂದಾಗುವ ಸಹಾಯವನ್ನು ಮಾಡಿದರು. ಭಾರತ ಸ್ವಾತಂತ್ರ್ಯ ಹೋರಾಟಗಾರರಿಗಷ್ಟೇ ಅಲ್ಲ ಇತರ ದೇಶದ ಸ್ವತಂತ್ರ್ಯ ಹೋರಾಟಗಾರರಿಗೂ ಉತ್ಸಾಹದ ಚಿಲುಮೆ, ಹಾಗೂ ಮಾರ್ಗದರ್ಶಿಯಾಗಿ ನಿಂತರು. ಇಷ್ಟೆಲ್ಲಾ ಸಾಹಸಗಳನ್ನು ಮಾಡಿದ ಈ ಅಧಮ್ಯ ಚೇತನ 1936 ಆಗಸ್ಟ್ 13 ರಂದು ಬೊಂಬಾಯಿಯ ಪಾರ್ಸಿ ಆಸ್ಪತ್ರೆಯೊಂದರಲ್ಲಿ ಕಣ್ಮರೆಯಾಗಿ ಹೋಯಿತು.
“ಆನೆ ಸತ್ತರೂ ಸಾವಿರ, ಇದ್ದರೂ ಸಾವಿರ” ಎಂಬ ಗಾದೆ ಮಾತಿಗೆ ಉತ್ತಮ ಉದಾಹಣೆಯಾದರು ನಮ್ಮೆಲ್ಲರ ಹೆಮ್ಮೆಯ ‘ಭಾರತದ ಕ್ರಾಂತಿಯ ಮಾತೆ’ ಮೇಡಂ ಕಾಮಾ!!!!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ