Pages

ಪುಸ್ತಕ ಪ್ರೀತಿ: "ಮಂಕುತಿಮ್ಮನ ಕಗ್ಗ"

   
ತಿಮ್ಮಗುರು 'ಡಿ ವಿ ಗುಂಡಪ್ಪ'ರವರು


     ಕನ್ನಡದ ದಾರ್ಶನಿಕ ಕವಿ ಎಂದೇ ಪ್ರಖ್ಯಾತರಾದ ಡಿವಿಜಿಯವರ (ಡಿ ವಿ ಗುಂಡಪ್ಪ) ‘ಮಂಕುತಿಮ್ಮನ ಕಗ್ಗ’ ವಿಶ್ವ ಸಾಹಿತ್ಯದಲ್ಲಿಯೇ ಅಪರೂಪ ಕೃತಿ ಎಂದರೆ ಬಹುಶಃ ತಪ್ಪಾಗಲಾರದು. ಈ ಕೃತಿಯನ್ನು, ಬಹಳಷ್ಟು ಸಾರಿ ಓದಲೆತ್ನಿಸಿ, ಅರ್ಥವಾಗಲು ಕಷ್ಟ ಎನ್ನುವ ಕಾರಣದಿಂದ ಅದನ್ನು ಪಕ್ಕದಲ್ಲಿಟ್ಟದ್ದುಂಟು. ಆದರೆ ಅದರ ಬಗೆಗಿನ ವಿಶ್ಲೇಷಣೆ ಮತ್ತು ಪದೇ ಪದೇ ಕೇಳುತ್ತಿದ್ದ ‘ಹುಲ್ಲಾಗು ಬೆಟ್ಟದಡಿ’, ‘ನಗುವು ಸಹಜದ ಧರ್ಮ’ – ಈ ರೀತಿಯಾದ ಕೆಲವು ಮುಕ್ತಕಗಳು ಓದುವ ಆಸೆಯನ್ನು ಕೆರಳಿಸುತ್ತಿದ್ದವು. ಕೊನೆಗೊಮ್ಮೆ ಶ್ರೀ ಶ್ರೀಕಾಂತ್‍ರವರ ತಾತ್ಪರ್ಯ ಸಮೇತವಾದ ಕಗ್ಗ ಓದಿದ ಮೇಲೆ ಬಹಳಷ್ಟು ಅಂಶಗಳು ಸ್ಪಷ್ಟವಾದವು. ಅದಾದ ನಂತರ ಕಗ್ಗವನ್ನು ನಿಯತವಾಗಿ ಓದಲಾರಂಭಿಸಿದೆ. ಕನ್ನಡದ ಅಮೂಲ್ಯ ಕೃತಿಗಳಲ್ಲಿ ಒಂದೆನಿಸಿದ ಇದರ ಬಗ್ಗೆ ಒಂದು ಲೇಖನ ಬರೆಯಬೇಕೆನಿಸಿತು. ಆ ಪ್ರಯತ್ನವೇ ಈ ಲೇಖನ.
      ವ್ಯಕ್ತಿ ಏಕೆ ಬದುಕಬೇಕು? ಹುಟ್ಟಿದ ಮೇಲೆ ನಾವಾಗಿಯೇ ಸಾಯಲಾರದ್ದಕ್ಕಾಗಿ ಬದುಕಬೇಕೇ? ಹೊಟ್ಟೆಹೊರೆಯುವುದಕ್ಕಿಂತ ಮಿಗಿಲಾದ ಯೋಚನೆಗಳು ಮನುಷ್ಯರ ಬಾಳಿಗೆ ಅವಶ್ಯವೇ? ಎನ್ನುವ ಪ್ರಶ್ನೆಗಳಿಗೆ ಸಕಾರಾತ್ಮಕವಾಗಿ ಉತ್ತರಿಸುತ್ತಾರೆ ಡಿ.ವಿ.ಜಿ.ಯವರು. ಹೊಟ್ಟೆಪಾಡಿಗಾಗಿ ಬದುಕುವುದಕ್ಕಿಂತ ಉನ್ನತ ಉದ್ದೇಶ ಇದೆ ಎನ್ನುತ್ತಾರೆ. ಯಾವ ಉದ್ದೇಶದ ಸಾಧನೆಗಾಗಿ, ಎಂಥಾ ಮನೋಭಾವ ಬೆಳೆಸಿಕೊಳ್ಳಬೇಕು, ಜೀವನವನ್ನು ಹೇಗೆ ನಡೆಸಿ ಸಾರ್ಥಕಗೊಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಡಿ.ವಿ.ಜಿಯವರು ತಮ್ಮ ತತ್ವ ಚಿಂತನೆ ಮತ್ತು ಅನುಭವಗಳ ಆಧಾರದ ಮೇಲೆ ಬರೆದಿರುವ ಕೃತಿಯೇ ಮಂಕುತಿಮ್ಮನ ಕಗ್ಗ. ವ್ಯಕ್ತಿ ಮತ್ತು ಸಮಾಜದಲ್ಲಿ ಜೀವನೋತ್ಸಾಹ ಹಾಗೂ ಜೀವನೋತ್ಕರ್ಷ ಇರಬೇಕೆನ್ನುವುದೇ ಅವರ ಸಿದ್ಧಾಂತದ ಮುಖ್ಯಾಂಶಗಳು.
ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ (1887-1975) ರವರು ಹುಟ್ಟಿದ್ದು ಮಾರ್ಚ್ 17ರಂದು ಮುಳುಬಾಗಿಲಿನಲ್ಲಿ. ಅವರು ಓದಿದ್ದು ಕೇವಲ ಪ್ರೌಢಶಾಲೆಯವರೆಗೆ ಮಾತ್ರ. ತಮಿಳು ಮನೆತನದಲ್ಲಿ ಹುಟ್ಟಿ, ತೆಲುಗು ಪ್ರಧಾನವಾಗಿದ್ದ ಭಾಗದಲ್ಲಿ ಡಿವಿಜಿಯವರು ಬೆಳೆದರು ಮತ್ತು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅನುತ್ತೀರ್ಣರಾಗಿದ್ದರು ಎಂದರೆ ಬಹುಶಃ ಯಾರೂ ನಂಬುವುದಿಲ್ಲವೇನೋ. ಕನ್ನಡದ ಸಾಹಿತ್ಯ ಕ್ಷೇತ್ರವನ್ನು ಸಂಪದ್ಭರಿತಗೊಳಿಸಿದ ಅವರನ್ನು ಆಧುನಿಕ ಭಾರತ ಸಾಹಿತ್ಯದ ಅಶ್ವತ್ಥವೃಕ್ಷ ಎನ್ನಲಾಗಿದೆ. ಜ್ಞಾನದ ಎಲ್ಲಾ ಕ್ಷೇತ್ರಗಳಲ್ಲೂ ಅಧ್ಯಯನ ಮಾಡಿರುವ ಅವರು 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಡಿವಿಜಿಯವರು ಮುಟ್ಟದ ಸಾಹಿತ್ಯ ಪ್ರಾಕಾರಗಳಿಲ್ಲ. ಕಾವ್ಯ, ಅನುವಾದ, ನಾಟಕ, ಪ್ರಬಂಧ, ಜೀವನಚರಿತ್ರೆ, ತತ್ವಶಾಸ್ತ್ರ, ಧಾರ್ಮಿಕ, ರಾಜಕೀಯ, ಮಕ್ಕಳ ಸಾಹಿತ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅವರು ತಮ್ಮ ಛಾಪನ್ನು ಮೂಡಿಸಿದ್ದಾರೆ.
      ಬಹಳ ಸರಳಜೀವಿಯಾಗಿದ್ದ ಅವರು, ನೇರ ನಡೆನುಡಿಯುಳ್ಳವರಾಗಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರು. ಸ್ವಾಭಿಮಾನಿಯಾಗಿದ್ದರು. ಅತ್ಯಂತ ಕಷ್ಟದ ದಿನಗಳಲ್ಲಿಯೂ ಯಾರ ಮುಂದೆಯೂ ಕೈಚಾಚಲಿಲ್ಲ, ಅಧಿಕಾರಸ್ಥರಿಂದ ಸಹಾಯ ಬೇಡಲಿಲ್ಲ. ಸಹಾಯಾರ್ಥ ಬಂದಂತಹ ಚೆಕ್ಕುಗಳನ್ನು ಅವರೆಂದೂ ನಗದೀಕರಿಸಲೇ ಇಲ್ಲ. ಕಷ್ಟಗಳಿದ್ದಾಗ್ಯೂ ಎದೆಗುಂದಲಿಲ್ಲ, ಹತಾಶರಾಗಲಿಲ್ಲ, ಅವರ ಮುಖದ ಮೇಲಿನ ಮುಗುಳ್ನಗೆ ಮಾಸಲೇ ಇಲ್ಲ. ಅವರ ಪ್ರಸಿದ್ಧ ಕವನದ ಹೆಸರು ‘ವನಸುಮ’, ಅವರಿಗೆ ಅನ್ವರ್ಥನಾಮ. ಮೈಸೂರು ವಿವಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ತನ್ನ ಗೌರವವನ್ನು ಹೆಚ್ಚಿಸಿಕೊಂಡಿತು. ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದುಕೊಂಡರು. 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಸಾರ್ವಜನಿಕ ಸನ್ಮಾನ ಸಮಾರಂಭದಲ್ಲಿ ಅವರಿಗೆ 1 ಲಕ್ಷ ರೂಗಳನ್ನು ಕೊಟ್ಟರೆ, ಅದನ್ನವರು ಗೋಖಲೆ ಸಾರ್ವಜನಿಕ ಸಂಸ್ಥೆಗೆ ದಾನವಾಗಿ ಕೊಟ್ಟುಬಿಟ್ಟರು. ಕರ್ನಾಟಕ ಸರ್ಕಾರ ಅವರಿಗೆ 500 ರೂಗಳ ಮಾಸಾಶನ ಕೊಟ್ಟರೆ ಅವರದನ್ನು ತೆಗೆದುಕೊಳ್ಳಲಿಲ್ಲ, ತಾವು ಮಾಡಿದ್ದೆಲ್ಲಾ ಸೇವೆ ಎಂಬುದು ಅವರ ಮನೋಭಾವವಾಗಿತ್ತು. ಅವರ ಬಗ್ಗೆ ಇಷ್ಟೆಲ್ಲಾ ತಿಳಿದುಕೊಂಡ ಮೇಲೆ ಮಂಕುತಿಮ್ಮನ ಕಗ್ಗ ಕೇವಲ ಕೆಲವು ಸಾಲುಗಳ ಪದ್ಯವಲ್ಲ, ನೀತಿ ಬೋಧನೆಯಲ್ಲ, ಬದಲಿಗೆ ಅವರ ಜೀವನದ ಅನುಭವಗಳ ಕಾವ್ಯ ರೂಪ ಎಂಬುದನ್ನು ನಾವು ಒಪ್ಪಲೇಬೇಕಾಗುತ್ತದೆ.
      ಜೀವನದ ವಿವಿಧ ಆಯಾಮಗಳ ಬಗ್ಗೆ ಪದ್ಯ ರೂಪದಲ್ಲಿ ಬಂದಿರುವ ಅವರ ಕಗ್ಗವನ್ನು ಕಂಠಪಾಠ ಮಾಡಿಕೊಂಡು ಸಮಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು. ಅವರ ಕಗ್ಗ ಓದಲು ಮಾತ್ರವಲ್ಲದೆ ಜೀವನದಲ್ಲಿ ಅಳವಡಿಸಿಕೊಂಡರೆ ಮನುಷ್ಯ ಉತ್ತಮನಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಏಕೆಂದರೆ ಡಿವಿಜಿಯವರು ಇದನ್ನು ಬೇರೆಯವರು ಅನುಸರಿಸಲಿ ಎಂದು ಬರೆದಿಲ್ಲ, ತಾವು ಅನುಸರಿಸಿದ್ದನ್ನು, ಸಾಧಿಸಿದ್ದನ್ನು ಬರೆದಿದ್ದಾರೆ. ಆದ್ದರಿಂದಲೇ ಅವರು ಕೊನೆಯಲ್ಲಿ ‘ಲೋಕತಾಪದಿ ಬೆಂದವನು, ತಂಪನ್ನು ಬಯಸಿದವನು, ವ್ಯಾಕರಣ ಕಾವ್ಯಲಕ್ಷಣಗಳನ್ನು ಪರಿಗಣಿಸಿದೆ, ಈ ಕಂತೆಯಲಿ ತನ್ನ ನಂಬಿಕೆಯನ್ನು ನೇಯ್ದಿದ್ದಾನೆ’ ಎಂದು ಕಗ್ಗದ ಬಗ್ಗೆ ಬರೆದಿದ್ದಾರೆ.
      ಇದು ಸಾಹಿತ್ಯಿಕವಾಗಿ, ದಾರ್ಶನಿಕವಾಗಿಯೂ ಕನ್ನಡದಲ್ಲಿ ಬಂದಿರುವ ಒಂದು ಅತ್ಯುನ್ನತ ಕೃತಿ ಎಂದರೆ ತಪ್ಪಾಗಲಾರದು. ಆದ್ದರಿಂದ ಇಂತಹ ಕೃತಿಯನ್ನು ಕನ್ನಡಿಗರಿಗೆ ನೀಡಿದ ಡಿವಿಜಿಯವರಿಗೆ ನಮ್ಮ ಹೃತ್ಪೂರ್ವಕ ನಮನಗಳನ್ನು ಸಲ್ಲಿಸಲೇಬೇಕು.
      ಡಿವಿಜಿಯವರು ತಮ್ಮ ಕಗ್ಗದಲ್ಲಿ ಮನುಷ್ಯನ ವಿವಿಧ ಜಂಜಾಟಗಳನ್ನು ತೆಗೆದುಕೊಂಡು ಬರೆದಿದ್ದಾರೆ, ವ್ಯಕ್ತಿ ಜೀವನದ ಎಲ್ಲಾ ಆಯಾಮಗಳನ್ನೂ ಚಿತ್ರಿಸಿದ್ದಾರೆ. ವಿಶ್ವಕ್ಕೆ ಅಳಿವಿಲ್ಲ, ಅದು ಅನಂತ ಎಂಬುದರಿಂದ ಆರಂಭಿಸಿ ಮನುಷ್ಯರಲ್ಲಿರಬೇಕಾದ ವಿವಿಧ ಗುಣಗಳ ಬಗ್ಗೆ, ಜೀವನವನ್ನು ಎದುರಿಸಬೇಕಾದ ರೀತಿಯ ಬಗ್ಗೆ ಬರೆದಿದ್ದಾರೆ. ಅವರ ಕಗ್ಗದ ವ್ಯಾಪ್ತಿಯೂ ಅನಂತವೇನೋ ಎನಿಸಿಬಿಡುತ್ತದೆ. ಅವರ ಕೆಲವು ಪದ್ಯಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ. ಇದರ ಸವಿಯನ್ನುಂಡವರು ಖಂಡಿತವಾಗಿಯೂ 'ಮಂಕುತಿಮ್ಮನ ಕಗ್ಗ'ವನ್ನು ಪೂರ್ತಿಯಾಗಿ ಓದುವರೆಂಬುದು ನಮ್ಮ ದೃಢ ವಿಶ್ವಾಸ.

ಜೀವನವನ್ನು ಸಮೃದ್ಧಿಗೊಳಿಸಲೋಸುಗ ಪ್ರತಿಯೊಬ್ಬರು ಹೋರಾಟ ಮಾಡಬೇಕು ಎನ್ನುವ ಅವರು ಹೇಳುವುದು ಹೀಗೆ :
ಗೌರವಿಸು ಜೀವನವ ಗೌರವಿಸು ಚೇತನವ |
ಆರದೋ ಜಗವೆಂದು ಭೇದವೆಣಿಸದಿರು |
ಹೋರುವುದೆ ಜೀವನ ಸಮೃದ್ಧಿಗೋಸುಗ ನಿನಗೆ |
ದಾರಿಯಾತ್ಮೋನ್ನತಿಗೆ – ಮಂಕುತಿಮ್ಮ ||

ಹೇಗೆ ಹೋರಾಟ ಮಾಡಬೇಕೆಂಬುದರ ಬಗ್ಗೆ ಅವರು ಈ ರೀತಿ ಹೇಳುತ್ತಾರೆ :
ಹೋರು ಧೀರತೆಯಿಂದ, ಮೊಂಡುತನದಿಂ ಬೇಡ |
ವೈರ ಹಗೆತನ ಬೇಡ, ಹಿರಿ ನಿಯಮವಿರಲಿ |
ವೈರಾಗ್ಯ ಕಾರುಣ್ಯ ಮೇಳನವೆ ಧೀರತನ |
ಹೋರುದಾತ್ತತೆಯಿಂದ – ಮಂಕುತಿಮ್ಮ ||

ವ್ಯಕ್ತಿ ಯಾವ ರೀತಿ ಬದುಕಬೇಕು ಎಂಬುದನ್ನು ಈ ಕೆಳಕಂಡ ಪದ್ಯಗಳಲ್ಲಿ ಮನಮುಟ್ಟುವಂತೆ ಚಿತ್ರಿಸಿರುತ್ತಾರೆ :
ಸ್ಮಿತವಿರಲಿ ವದನದಲಿ ಕಿವಿಗೆ ಕೇಳಿಸದಿರಲಿ |
ಹಿತವಿರಲಿ ವಚನದಲಿ ಋತವ ಬಿಡದಿರಲಿ |
ಮಿತವಿರಲಿ ಮನಸಿನುದ್ವೇಗದಲಿ ಭೋಗದಲಿ |
ಅತಿ ಬೇಡವೆಲ್ಲಿಯುಂ - ಮಂಕುತಿಮ್ಮ ||

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು |
ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆ |
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ |
ಎಲ್ಲರೊಳಗೊಂದಾಗು ಮಂಕುತಿಮ್ಮ ||

ನಗುವಿನ ಮಹತ್ವವನ್ನು ಹೀಗೆ ಬರೆಯುತ್ತಾರೆ :
ನಗುವುದು ಸಹಜದ ಧರ್ಮ ; ನಗಿಸುವುದು ಪರಧರ್ಮ |
ನಗುವ ಕೇಳುತ ನಗುವುದತಿಶಯದ ಧರ್ಮ |
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ |
ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ ||

ಹೆಸರಿನ ಹಂಬಲ ಬೇಡ ಮನುಷ್ಯನಿಗೆ ಎನ್ನುವ ಇವರು ಆ ಬಗ್ಗೆ ಈ ರೀತಿಯಾಗಿ ಹೇಳುತ್ತಾರೆ :
ಅಕ್ಕಿಯೊಳಗನ್ನವನು ಮೊದಲಾರು ಕಂಡವರು |
ಅಕ್ಕರದ ಬರಹಕ್ಕೆ ಮೊದಲಿಗನದಾರು |
ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳು |
ದಕ್ಕುವುದೆ ನಿನಗೆ ಜಸ - ಮಂಕುತಿಮ್ಮ ||

ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ|
ಫಲಮಾಗುವಂದು ತುತ್ತೂರಿ ದನಿಯಿಲ್ಲ|
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ |
ಹೊಲಿ ನಿನ್ನ ತುಟಿಗಳನು – ಮಂಕುತಿಮ್ಮ ||

ಮನುಷ್ಯ ಹೇಡಿಯಂತೆ ಸಾಯಬಾರದು, ಧೈರ್ಯದಿಂದ ಬದುಕನ್ನೆದುರಿಸಬೇಕು ಎಂಬುದನ್ನು ಹೀಗೆ ಬರೆಯುತ್ತಾರೆ :
ಸತ್ತೆನೆಂದೆನಬೇಡ ; ಸೋತೆನೆಂದೆನಬೇಡ |
ಬತ್ತಿತೆನ್ನೊಳು ಸತ್ವದೂಟೆಯೆನಬೇಡ |
ಮೃತ್ಯುವೆನ್ನುವುದೊಂದು ತೆರೆಯಿಳಿತ ; ತೆರೆಯೇರು |
ಮತ್ತೆ ತೋರ್ಪುದು ನಾಳೆ – ಮಂಕುತಿಮ್ಮ ||

ಸಮಾಜದಲಿ ಒಂದಾಗಿ ಬದುಕಲೇಬೇಕು ಎಂಬುದನ್ನು ಸಾರುತ್ತ ಅವರು ಹೀಗೆ ಬರೆಯುತ್ತಾರೆ :
ಒಬ್ಬನುಣುವೂಟದಲಿ ಸವಿಯಿಲ್ಲ ಸೊಗವಿಲ್ಲ |
ಇಬ್ಬರಾಗುವೆನೆಂದನಂತೆ ಪರಬೊಮ್ಮಂ |
ಹೆಬ್ಬದುಕನೊಂಟಿತನದೊಳದೇನು ಬದುಕುವೆಯೊ? |
ತಬ್ಬಿಕೊಳೊ ವಿಶ್ವವನು – ಮಂಕುತಿಮ್ಮ ||

ಈ ಕಗ್ಗವನ್ನು ಕಾದಂಬರಿಯಂತೆ ಒಮ್ಮೆ ಓದಿ ಪಕ್ಕಕ್ಕಿಡದೆ ದಿನವೂ ಕೆಲವು ಪದ್ಯಗಳನ್ನು ಓದಿ, ಅದನ್ನು ನಮ್ಮ ಜೀವನದಲಿ ಅಳವಡಿಸಿಕೊಳ್ಳಲಾದರೆ, ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುವುದರಲ್ಲಿ, ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಲ್ಲಿ, ಆ ಮೂಲಕ ನಾವು ಉತ್ಕೃಷ್ಟ ವ್ಯಕ್ತಿಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕಾವ್ಯ ಜಗತ್ತಿನಲ್ಲಿ ಇದರ ಸ್ಥಾನ ಅತ್ಯಂತ ಮೇಲ್ಮಟ್ಟದ್ದು. ಇದನ್ನು ಇತರ ಭಾಷೆಗಳಿಗೆ ಅನುವಾದಿಸಲಾದರೆ, ಎಷ್ಟೋ ಜನರು ಇದರ ಉಪಯುಕ್ತತೆಯನ್ನು ಪಡೆಯಬಹುದು. 

- ಡಾ।। ಸುಧಾ.ಜಿ

ಕಾಮೆಂಟ್‌ಗಳಿಲ್ಲ: