Pages

ಕವನ: "ದಾಮಿನಿ"



      ನಿರ್ಭಯಾ ಘಟನೆಗೆ ತಲ್ಲಣಿಸಿದ ಮನ ರಾತ್ರಿಯೆಲ್ಲ ನಿದ್ದೆದೂರಾಗಿ ಒದ್ದಾಡುತಿರುವಾಗ ಆ ತುಮುಲಗಳನ್ನೆಲ್ಲ ಹೊರಹಾಕಿದ ಪ್ರಯತ್ನವೇ ಈ ಕವನ, ನೊಂದ ಹೆಣ್ಣುಮಕ್ಕಳ ಆತ್ಮಗಳಿಗೆ ಅಂಕಿತ ಈ ಪದ್ಯ, ಹೋರಾಡುವ ಮನಗಳಿಗೆ ಅರ್ಪಣೆ ಈ ಕವನ...


ದಾರುಣವದು ದುರ್ದಿನದಲಿ 
ದಾಂಡಿಗರ ದಾಂಧಲೆಯಲಿ 
ಧ್ವಂಸಳಾದೆ ದಯೆತೋರದ 
ದುಷ್ಟ ಜನರ ಧರೆಯಲಿ 

ನೆತ್ತರಿನ ಮಡುವಿನಲಿ 
ನೆಂದು ಹೋದರೂ ನೀನು 
ನಂದಲಿಲ್ಲ ನಂಬಿಕಾಗ್ನಿ 
ನರಳುತಿದ್ದರೂನು 

ದೇಶವಿಡೀ ಕಂಪಿಸಿ 
ದುರಂತಕಾಗಿ ದುಃಖಿಸಿ 
ದಾಮಿನಿಯರ ದುರ್ಗತಿಯ 
ದಾರಿಯನ್ನು ಅಳಿಸಿ ಎಂದು 

ಬದುಕ ಬಯಸಿದೆ ನೀನು 
ಛಲದಿ ಸಹಿಸಿದೆ 
ಇಂದು ನಾಳೆ ಎಂದಾದರೂ 
ಗೆಲುವೆ ಎಂದೆಣಿಸಿದೆ 

ಆ ದುರುಳರ ದಮನವಿನ್ನು 
ದೂರದಲ್ಲಿ ಇಲ್ಲವೆಂದು 
ಧೂರ್ತರಿಗೆ ದಂಡವಂತು 
ದೊರಕದಿರುವುದಿಲ್ಲವೆಂದು 

ದಿನವು ದೂಡಿದೆ ನೀನು 
ದಾರಿ ನೋಡಿದೆ 
ಮತ್ತೇಕೆ ಮೌನವಾದೆ 
ನಮ್ಮನೇಕೆ ದೂಡಿ ಹೋದೆ 

ಓ ಗೆಳತಿ ಈ ಅಂತ್ಯವು 
ಮುಗಿದಾ ಕಥೆಯಲ್ಲ 
ಮೌನ ವಹಿಸಿ ಸಹಿಸಿದವರೂ 
ಎದ್ದು ನಿಂತರಲ್ಲ 

ದಫನದಾಗ್ನಿ ದಳ್ಳುರಿಯು 
ದೀವಿಗೆಯಾಗಿಹುದಿಲ್ಲಿ 
ದಾನವರ ದೌರ್ಜನ್ಯವು 
ದುಸ್ಸಹವಿನ್ನಿಲ್ಲಿ

ನೀ ಸಹಿಸಿದ ದುಷ್ಕೃತ್ಯಕೆ 
ಜಗವೇ ಜರ್ಜರಿತಗೊಂಡು 
ಪೈಶಾಚಿಕ ಕೃತ್ಯಕೆ 
ಪ್ರಪಂಚ ಪರದೆ ಸೀಳಿಕೊಂಡು 

ತಂಡ ತಂಡ ಮಾಡಿಕೊಂಡು 
ಕೆಂಪು ಕೆಂಡ ಕಾರಿಕೊಂಡು 
ನಾವ್ ಸಹಿಸೆವು ನಾಯಕರೆ 
ಎದ್ದು ಹೊರಗೆ ಬನ್ನಿರೆಂದು 

ನಾರಿ ಭಕ್ಷಕಾರಿಗಳಿಗೆ 
ಶೂಲ ಶಿಕ್ಷೆ ಹಾಕಿರೆಂದು 
ಧಾತ್ರಿಯರು ದ್ರೋಹಿಗಳಿಗೆ 
ಧಕ್ಕೆ ಉಂಟು ಮಾಡಲೆಂದು 

ಧಿಕ್ಕಾರದ ದನಿ ಎದ್ದಿದೆ 
ದೈತ್ಯದಲೆಯು ದಡದಲಿಂದು

- ಉಷಾಗಂಗೆ

1 ಕಾಮೆಂಟ್‌:

Rajiv Magal ಹೇಳಿದರು...

ಅರ್ಥಗರ್ಭಿತವಾಗಿದೆಯದರೂ, ಈ ನಾಲ್ಕು ಸಾಲುಗಳು ಪ್ರಕರಣದ ಬಗ್ಗೆ ಬರೆದಿರುವ ಕವನದ ಬಗ್ಗೆ ನನ್ನ ಪ್ರತಿಕ್ರಿಯೆಯಲ್ಲ. ಆ ಪ್ರಕರಣ ಜರುಗಿದ ತರುವಾಯ ಹಲವಾರು ಘೋರ ಘಟನೆಗಳು ಜರುಗಿವೆಯಾದರೂ ಸಾರ್ವಜನಿಕರ ಪ್ರತಿಭಟನೆ selective ಆಗಿರುವುದು ವಿಷಾದನೀಯ. ವಾಸ್ತವವಾಗಿ ನಿರ್ಭಯಾ ಪ್ರಕರಣಕ್ಕೂ ಮು೦ಚಿನ ದಿನಗಳಲ್ಲಿ ಸಹ ಅಹಿತಕರ ಘಟನೆಗಳು ಜರುಗಿದ್ದವು. ನಿರ್ಭಯಾ ಜನಗಳಿಗೆ ’ಭಯ’ ತೊರೆದು
ಎಚ್ಚೆತ್ತುಕೊಳ್ಳುವ೦ತೆ ಮಾಡಿರಬೇಕು? ಬಹುಶ: ಮುದ್ರಣ ಮಾಧ್ಯಮದಲ್ಲಿ ಸಾರ್ವಜನಿಕರ ಸಹಭಾಗಿತ್ವದಿ೦ದ, ಕನಿಷ್ಟ ಪಕ್ಷ, ಜನಗಳಿಗೆ ಸ೦ದೇಶ ಒ೦ದನ್ನು ರವಾನಿಸಬಹುದೇನೋ ಎ೦ಬುದೇ ನನ್ನ ಅನಿಸಿಕೆ.