"ವಿಜ್ಞಾನದ ಮೂಲದಲ್ಲಿ ಎರಡು ವಿರೋಧಾತ್ಮಕ ಮನೋವೃತ್ತಿಗಳ ನಡುವೆ ಅತ್ಯಗತ್ಯವಾದ ಒಂದು ಸಮತೋಲನವಿದೆ -
೧. ಹೊಸ ಆಲೋಚನೆಗಳ ಮುಕ್ತ ಸ್ವಾಗತ - ಅವು ಎಷ್ಟೇ ವಿಲಕ್ಷಣ ಅಥವಾ ಅಸಮಂಜಸವೆನಿಸಿದರೂ ಸಹ.
೨. ಆಲೋಚನೆಗಳ ನಿರ್ದಯ, ನಿಷ್ಪಕ್ಷಪಾತ ಸಂದೇಹಾತ್ಮಕ ಪರಿಶೀಲನೆ.
ಈ ಸಮತೋಲನದಿಂದಲೇ ದಟ್ಟ ಸತ್ಯಗಳನ್ನು ದಟ್ಟ ಅಸಂಬದ್ಧತೆಗಳಿಂದ ಹೊರತರಲು ಸಾಧ್ಯ."
- ಕಾರ್ಲ್ ಸಾಗನ್
ವಿಜ್ಞಾನ ಎಂಬುದು "ವಿಶೇಷವಾದ ಜ್ಞಾನ" ಎಂದೂ, ಅದನ್ನು "ವಿಕೃತ ಜ್ಞಾನ"ವಾಗಿಸಬಾರದೆಂದೂ ಅಭಿಪ್ರಾಯಗಳಿವೆ. ಆದರೆ ವಿಜ್ಞಾನವು ಸಾಮಾನ್ಯವಾದ ಜ್ಞಾನ, ಭಾವಾತೀತವಾದ ಉದ್ವೇಗರಹಿತ ಸತ್ಯಶೋಧನ. ವಿಜ್ಞಾನ ಹಾಗು ಸತ್ಯದ ನಡುವಿನ ಸಂಬಂಧದಲ್ಲಿ ಅತ್ಯಂತ ಸೂಕ್ಷ್ಮವಾದ ವಿಚಾರವೇನೆಂದರೆ ವಿಜ್ಞಾನವು ಸತ್ಯದ ಗುಣಲಕ್ಷಣಗಳ ಬಗ್ಗೆಯಾಗಲಿ ಅಥವಾ ಸತ್ಯವು ಹೀಗೇಕೆ ಎಂಬುದರ ಬಗ್ಗೆಯಾಗಲಿ ತಾತ್ವಿಕ ಜಿಜ್ಞಾಸೆ ಮಾಡದು. ಸತ್ಯವು ಯಾರಿಗೆ ಎಷ್ಟೇ ಪ್ರಿಯವಾಗಿರಲಿ, ಅಪ್ರಿಯವಾಗಿರಲಿ ಅದರಿಂದ ವಿಜ್ಞಾನಕ್ಕೇನೂ ಇಲ್ಲ. ಸತ್ಯ ಇಂತಿಷ್ಟೇ ಎಂದು ಕಂಡುಕೊಳ್ಳುವುದು ಮಾತ್ರ ವಿಜ್ಞಾನದ ಗುರಿ.
ವೈಜ್ಞಾನಿಕ ಆಲೋಚನೆಯ ಪ್ರಮುಖ ಅಂಶಗಳು - ತರ್ಕ ಹಾಗು ಕಾರಣ. ನಡೆಯುತ್ತಿರುವ ಚಟುವಟಿಕೆಯ ತರ್ಕಬದ್ಧ ವಿವರಣೆ, ಕಾರಣಗಳು ಹಾಗು ಅವುಗಳನ್ನು ಪರಿಶೀಲಿಸಬಹುದಾದ ವಿಧಾನಗಳು ಇವೆ ಸೇರಿ ವೈಜ್ಞಾನಿಕ ಆಲೋಚನೆಯ ರಾಜಮಾರ್ಗದಲ್ಲಿ ನಡೆಸುತ್ತವೆ. ಭೌತಶಾಸ್ತ್ರಜ್ಞ ರಿಚರ್ಡ್ ಫೇಯ್ಮನ್ ರವರು ಹೇಳುವಂತೆ - "ವಿಜ್ಞಾನವು ಬಹುಪಾಲು ಅವಲೋಕನ ಹಾಗು ಅದರ ಸೂಕ್ಷ್ಮ ತಾರ್ಕಿಕ ಪರಿಶೀಲನೆ." ಈ ರೀತಿಯ ಆಲೋಚನಾ ಕ್ರಮವನ್ನು ಕುರಿತು ಸರ್ ಸಿ.ವಿ.ರಾಮನ್ ರವರು - "ಇದು ಪ್ರಕೃತಿಯನ್ನು ಪ್ರೀತಿಸು ಪರಿ. ಆದರೆ ಅಮೂರ್ತ ಅರ್ಚನೆಯಲ್ಲ, ಪ್ರಾಯೋಗಿಕವಾಗಿ ಅರ್ಥೈಸಿಕೊಳ್ಳುವ ಕ್ರಿಯೆ." ಎನ್ನುತ್ತಾರೆ.
ದಿನನಿತ್ಯದ ಜೀವನದಲ್ಲಿ ಗಮನಿಸಿದ್ದನ್ನು ಪ್ರಶ್ನಿಸಿ ಪರಿಶೀಲಿಸುವ ಅಭ್ಯಾಸವೇ ವಿಜ್ಞಾನ. ಪ್ರಕೃತಿ ಬಗ್ಗೆ ಮನುಷ್ಯ ಪಡೆದಿರುವ ಸಂಪೂರ್ಣ ಜ್ಞಾನ ಸೂಕ್ಷ್ಮ ಗಮನಿಸುವಿಕೆ, ಪರಿಶೀಲನೆ
ಹಾಗು ಇದೇಕೆ ಹೀಗೆ ಎಂದು ಪ್ರಶ್ನಿಸಿಯೇ ಪಡೆದದ್ದು. ಹುಟ್ಟುತ್ತಾ ವಿಶ್ವಮಾನವನಾಗಿರುವ
ಶಿಶುವಿನಲ್ಲಿ ಸಹಜ ಕುತೂಹಲ ಹೇಗೆ ಪ್ರಶ್ನಿಸುತ್ತದೆಯೋ ಹಾಗೆ ವಿಚಾರವಂತನಾದವನು
ಪ್ರಶ್ನಿಸುತ್ತಾನೆ. ಎಲ್ಲಾ ಜ್ಞಾನಮಾರ್ಗಗಳಲ್ಲೂ "ಎಲ್ಲಿ, ಏಕೆ, ಏನು, ಹೇಗೆ, ಯಾವಾಗ,
ಯಾರು" ಎಂಬತಹ ಪ್ರಶ್ನೆಗಳಿಂದಲೇ ವಿಚಾರಗಳ ವಿಕಾಸ ಸಾಧ್ಯ. ಈ ಬಗೆಯ ಕೌತುಕ ಕುತೂಹಲಗಳೇ ವೈಜ್ಞಾನಿಕ ದೃಷ್ಟಿಕೋನದ ಪ್ರಮುಖ ಅಂಗಗಳು. ನ್ಯೂಟನ್ ಸೇಬು ಏಕೆ ಕೆಳಗೆ ಬಿತ್ತು ಎಂದು ಆಲೋಚಿಸುವಂತೆ ಮಾಡಿದ್ದು ಈ ಬಗೆಯ ಕುತೂಹಲವೇ. ಆದರೆ ಈ ಸೇಬಿನ ಕಥೆ ಎಷ್ಟು ಸತ್ಯ ಎಂದು ಪ್ರಶ್ನಿಸುವುದು ಸಹ ಇದೇ ವೈಜ್ಞಾನಿಕ ಆಲೋಚನೆಯ ಫಲ!
ನಮ್ಮ ವಿಚಾರಗಳನ್ನು ನಾವೇ ಅಲ್ಲಗಳೆಯಲು ಸಾಧ್ಯವೇ ಎಂದು ಪರಿಶೀಲಿಸಿ ನೋಡುವುದು ವಿಜ್ಞಾನದ ಮೊದಲ ಮಜಲುಗಳಲ್ಲೊಂದು.
ಹಲವು ಬಾರಿ ನಮ್ಮ ಆಲೋಚನೆ, ವಿಚಾರಗಳು ಅಲ್ಲಿಲ್ಲಿ ಕೇಳಿದ್ದನ್ನು, ಅವರಿವರು
ಹೇಳಿದ್ದನ್ನು ನಂಬಿ ರೂಪಿತಗೊಂಡಿರುತ್ತವೆ. ಇಂದು ವಾಟ್ಸಾಪ್ಪ್, ಫೇಸ್ ಬುಕ್, ನ್ಯೂಸ್
ಚಾನಲ್ ಗಳು ಮುಂತಾದ ಮಾಧ್ಯಮಗಳು ನಮ್ಮ ವಿಚಾರ ಅಭಿಪ್ರಾಯಗಳನ್ನು ಕಟ್ಟಿಕೊಡುತ್ತವೆ.
ಇವುಗಳನ್ನು ವಿವೇಚಿಸುವ ಗೋಜಿಗೆ ಹೋಗದೆ ನಂಬಿಕೊಳ್ಳುವ ಮನೋವೃತ್ತಿ
ಅವೈಜ್ಞಾನಿಕವಾಗುತ್ತದೆ. 2012ಕ್ಕೆ ಪ್ರಪಂಚ ಮುಳುಗಿಹೋಗುವುದು ಎಂದು ಬೊಬ್ಬೆಯಿಟ್ಟ
ಮಾಧ್ಯಮಗಳು ಇವೇ ಎಂದು ನೆನಪಿರಲಿ! ಆದ ಕಾರಣ ನೆಚ್ಚಿಕೊಂಡ ಸಂಗತಿಗಳನ್ನು ಸಂದರ್ಭ ಒದಗಿ
ಬಂದಾಗ ಪರಿಶೀಲಿಸಿ, ವಿರುದ್ಧವಾದ ವಿಚಾರಗಳ ಸಮ್ಮುಖದಲ್ಲಿ ಒರೆಗೆ ಹಚ್ಚುಬೇಕು. ಇದು
ಮನುಷ್ಯನ ರೂಢಿಗತ ಸ್ವಭಾವಕ್ಕೆ ವಿರುದ್ಧವೆನಿಸಿದರೂ ವೈಜ್ಞಾನಿಕ ಹೌದು.
ಹೆಚ್ಚಿನ ಸಾಕ್ಷಿಗಳಿಗಾಗಿ ಹುಡುಕುವುದು, ನಿರ್ಣಾಯಕ ಸಾಕ್ಷಿ ಸಿಗುವವರೆಗೂ ಅನುಮಾನದ ದೃಷ್ಟಿ ಹೊಂದಿರುವುದು ಸಹ ವೈಜ್ಞಾನಿಕವೇ ಹೌದು. ನ್ಯೂಟನ್ ಹಾಗು ಸೇಬಿನ ಕಥೆಯ ಸತ್ಯಾಸತ್ಯತೆ ನಂಬದೆ, ಅದು ಕೇವಲ ಮಿತಕ ಮಾತ್ರವೇ ಎಂದು ಪ್ರಶ್ನಿಸಿ ಪರೀಕ್ಷಿಸಿದವರು ಈ ಬಗೆಯ ವಿಜ್ಞಾನಿಗಳು! ಯಾವುದನ್ನೂ ಕೊನೆಯ ಮಾತೆಂದು ವಿಜ್ಞಾನ ಒಪ್ಪದು, ಪದೇ ಪದೇ ಪರಿಶೀಲಿಸುವುದು. 1927ರಲ್ಲಿ ರಸಾಯನಶಾಸ್ತ್ರದಲ್ಲಿ ನೋಬಲ್ ಪ್ರಶಸ್ತಿ ಕೋಲಿಕ್ ಆಮ್ಲದ ರಚನೆ ಕಂಡುಹಿಡಿದನೆಂದು ಹೆನ್ರಿಕ್ ವಿಲ್ಯಾಂಡ್ ಗೆ ನೀಡಲಾಯಿತು, ಆದರೆ ಅದೇ ವರ್ಷ ಆತ ಕಂಡುಹಿಡಿದ ರಚನೆ ತಪ್ಪೆಂದು ಕಂಡುಹಿಡಿಯಲಾಯಿತು. ವಿಜ್ಞಾನದಲ್ಲಿ ಯಾರೂ ಅಧಿಕೃತರಲ್ಲ, ಸತ್ಯವೊಂದೇ ಅಧಿಕೃತ. ಸತ್ಯದ ಶೋಧನ ನಿರಂತರವಾದದ್ದು ಆದ್ದರಿಂದಲೇ ವೈಜ್ಞಾನಿಕವಾಗಿ ಆಲೋಚಿಸ ಬಯಸಿದರೆ ಇಂದು ಆಲೋಚಿಸಿ ನಾಳೆ ಬಿಡಲಾಗದು ಅದೊಂದು ಜೀವನ ಕ್ರಮವಾಗಲೇ ಬೇಕಾಗುತ್ತದೆ.
ವೈಜ್ಞಾನಿಕ ಆಲೋಚನೆಯನ್ನು ಕ್ರಮಬದ್ಧವಾಗಿ ಬೆಳೆಸಿಕೊಳ್ಳುವ ಪ್ರಕ್ರಿಯೆಯನ್ನು ನ್ಯೂಟನ್ ನ ಸೇಬಿನ ಕಥೆಯ ಸತ್ಯ ಹುಡುಕುವ ಮೂಲಕ ನಾಂದಿಯಾಡುವಿರೇನೊ ನೋಡಿ!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ