ನಾಗರ ಹಾವೆ, ಹಾವೊಳು ಹೂವೆ,
ಬಾಗಿಲ ಬಿಲದೊಳು ನಿನ್ನಯ ಠಾವೆ,
ಕೈಗಳ ಮುಗಿವೆ ಹಾಲನ್ನೀವೆ,
ಬಾ ಬಾ ಬಾ ಬಾ ಬಾ ಬಾ ಬಾ.
ಬಹುಶಃ ಈ ಹಾಡನ್ನು ಕೇಳದ ಕನ್ನಡಿಗರೇ ಇಲ್ಲವೇನೊ. ಮಕ್ಕಳು ಕನ್ನಡ ಪದಗಳನ್ನು ಕಲಿಯಲೆಂದೆ ಮಕ್ಕಳ ಸಾಹಿತ್ಯವನ್ನು ರಚಿಸಿದ ಬರಹಗಾರರಲ್ಲಿ ಪಂಜೆ ಮಂಗೇಶ ರಾಯರು ಪ್ರಮುಖರು. ಮಕ್ಕಳ ಸಾಹಿತ್ಯ ಪಿತಾಮಹ, ಕನ್ನಡ ಸಣ್ಣ ಕಥೆಗಳ ಜನಕ, ಕನ್ನಡ ಪ್ರಬಂಧಗಳ ಆರಂಭಕರ್ತ ಎಂದೇ ಖ್ಯಾತರಾಗಿರುವ ಪಂಜೆಯವರು ಜನಿಸಿದ್ದು ಫೆಬ್ರವರಿ 22, 1874 ರಂದು. ರಾಮಪ್ಪಯ್ಯ ಮತ್ತು ಸೀತಮ್ಮರವರ ಮಗನಾಗಿ ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಜನಿಸಿದ ಪಂಜೆಯವರು, ಚಿಕ್ಕಂದಿನಿಂದಲೇ ತಂದೆಯನ್ನು ಕಳೆದುಕೊಂಡರು. ತಾಯಿ ಸೀತಮ್ಮ ಕಷ್ಟದಲ್ಲಿ ತಮ್ಮ 6 ಮಕ್ಕಳನ್ನೂ ಬೆಳೆಸಿದರು. ಪಂಜೆಯವರು ಕಷ್ಟದಲ್ಲೇ ತಮ್ಮ ವಿದ್ಯಾಭ್ಯಾಸ ಮುಗಿಸಿದರು. ಬಿಎ ಪದವಿಯ ಜೊತೆಗೆ ಶಿಕ್ಷಕ ಡಿಪ್ಲಮೋ ಗಳಿಸಿದರು.
ಓದುತ್ತಿರುವಾಗಲೇ ತಮ್ಮ ಕನ್ನಡ ಪ್ರೌಢಿಮೆಯ ಕಾರಣದಿಂದ ಅನುವಾದಕರ ಉದ್ಯೋಗ ಸಂಪಾದಿಸಿದರು. ನಂತರ ಕೊಡಗಿನಲ್ಲಿ ಶಾಲಾ ಇನ್ ಸ್ಪೆಕ್ಟರ್ ಆಗಿ ಸೇರಿಕೊಂಡರು. ಶಾಲೆಯ ದುಸ್ಥಿತಿಯನ್ನು ಗಮನಿಸಿದ ಅವರು ತಮ್ಮ ಅಲ್ಪ ಸಂಬಳದಲ್ಲಿಯೇ ಹಲವಾರು ಕಲ್ಯಾಣ ಕಾರ್ಯಕ್ರಮಗಳಿಗೆ ನೆರವು ನೀಡಿದ್ದಲ್ಲದೆ, ತಾವೇ ಹಲವಾರು ಯೋಜನೆಗಳನ್ನು ಆರಂಭಿಸಿದರು. ಹೊಸ ಶಿಕ್ಷಣದ ಕಲಿಕೆಯ ವಿಧಾನಗಳನ್ನು ಕಂಡುಹಿಡಿದ ಅವರು, ಶಿಕ್ಷಕರಲ್ಲಿ ಕಲಿಕೆಯ ಪ್ರೀತಿಯನ್ನು ಮೂಡಿಸಿದರು. “ಬಾಲ ಸಾಹಿತ್ಯ ಮಂಡಳಿ”ಯನ್ನೂ ಆರಂಭಿಸಿದರು. ನಂತರ ಮಡಿಕೇರಿಯಲ್ಲಿ ಕೆಲವು ಕಾಲ ಹೈಸ್ಕೂಲ್ ನ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದರು.
ಚಿಕ್ಕಂದಿನಿಂದಲೂ ಅಶುಕವಿತೆಗಳನ್ನು ಬರೆಯುತ್ತಿದ್ದ ಅವರು ಕೊಂಕಣಿ ಮತ್ತು ಕನ್ನಡದಲ್ಲಿ ತಾವು ರಚಿಸಿದ ಕವಿತೆಗಳನ್ನು ತಮ್ಮ ಸುಶ್ರಾವ್ಯ ಕಂಠದಲ್ಲಿ ಹೇಳುತ್ತಿದ್ದರು. 1912ರಿಂದಲೇ ತಮ್ಮ ಸಾಹಿತ್ಯಕೃಷಿ ಆರಂಭಿಸಿದ ಅವರು ಸುವಾಸಿನಿ ಮತ್ತು ಸತ್ಯದೀಪಿಕ ಪತ್ರಿಕೆಗಳಿಗೆ ಬರೆಯಲಾರಂಭಿಸಿದರು. “ಹರಟೆಮಲ್ಲ”, “ಕವಿಶಿಷ್ಯ”, “ರಾ ಮ ಪಂ” ಕಾವ್ಯನಾಮಗಳಿಂದ ಕಥೆ, ಲೇಖನಗಳನ್ನು ಬರೆಯುತ್ತಿದ್ದರು. ತುಳು ಮತ್ತು ಕನ್ನಡ ಜನಪದ ಕಥೆಗಳನ್ನು ದಾಖಲು ಮಾಡಿದರು. ಬೋಧನಾ ವಿಧಾನಗಳ ಬಗ್ಗೆ, ವ್ಯಾಕರಣ, ಪದಗಳ ಬಗ್ಗೆ, ಭೂಗೋಳಶಾಸ್ತ್ರದ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದರು. ಜೊತೆಗೆ ಐತಿಹಾಸಿಕ, ಸಾಹಿತ್ಯಿಕ ಸಂಶೋಧನಾ ಕೃತಿಗಳನ್ನು ರಚಿಸಿದರು. ಸಣ್ಣಕತೆಗಳನ್ನು, ಕವನಗಳನ್ನು, ಮಕ್ಕಳ ಪದ್ಯಗಳನ್ನು, ಹಾಸ್ಯಕೃತಿಗಳನ್ನು ರಚಿಸಿದರು. ಕೋಟಿ ಚೆನ್ನಯ ಎಂಬ ಸಣ್ಣ ಕಾದಂಬರಿ ಸಿನಿಮಾ ಆಗಿದೆ. ಮೊದಲ ಪತ್ತೇದಾರಿ ಕಾದಂಬರಿ ಬರೆದವರು ಇವರು. ಇಂಗ್ಲಿಷ್ ನಲ್ಲಿ ಸಹ ಇವರು ಬರೆದಿದ್ದಾರೆ. ನಾಟಕ, ಅನುವಾದ, ಪತ್ರಿಕೋದ್ಯಮದಲ್ಲಿಯೂ ಸಹ ಕೃಷಿ ಮಾಡಿದ್ದಾರೆ.
ಪತ್ನಿ ಗಿರಿಜಾಬಾಯಿ ಮತ್ತು ಅವರ ಐವರು ಮಕ್ಕಳೂ ಸಹ ಇವರ ಸಾಹಿತ್ಯ ಕೃಷಿಗೆ ಮತ್ತು ಇತರ ಚಟುವಟಿಕೆಗಳಿಗೆ ಬೆಂಬಲ ನೀಡಿದರು. ಇವರು 1934ರಲ್ಲಿ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1937ರಲ್ಲಿ ನ್ಯುಮೋನಿಯ ಕಾರಣದಿಂದ ಮೃತರಾದರು.
ನವೋದಯ ಸಾಹಿತ್ಯದ ಕರ್ತೃವಾದ ಪಂಜೆಯವರು ಕನ್ನಡ ಸಾಹಿತ್ಯ ಬೆಳೆಯಲು ಕಾರಣರಾದವರಲ್ಲಿ ಒಬ್ಬರು ಎಂಬುದರಲ್ಲಿ ಎರಡನೆಯ ಮಾತಿಲ್ಲ.

- ಡಾ।। ಸುಧಾ.ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ