ಮೂರು ವರ್ಷದ ಕೆಳಗೆ ಅವಳೊಂದಿಗೆ ಮಾತನಾಡಿದ್ದು, ನನಗೆ ಇನ್ನೂ ನೆನಪಿದೆ. ಆಗ ತಾನೇ ಇಂಜಿನಿಯರಿಂಗ್ ಮುಗಿಸಿದ್ದಳು. ಕಾಲೇಜಿನಲ್ಲಿ ನನಗೆ ಒಂದು ವರ್ಷ ಜೂನಿಯರ್ ಅವಳು. ಭವಿಷ್ಯದ ಬಗ್ಗೆ, ತನ್ನ ಕನಸುಗಳ ಬಗ್ಗೆ, ಆಕಾಂಕ್ಷೆಗಳ ಬಗ್ಗೆ ಹೇಳಿದ್ದಳು. ಉತ್ತಮ ವಿಶ್ವದ ವಿನ್ಯಾಸ ಮಾಡ ಬಯಸಿದ ಇಂಜಿನಿಯರ್, ತನ್ನ ಕಲೆಯಿಂದ ದನಿಯಿಲ್ಲದವರ ದನಿಯಾಗ ಬಯಸಿದ ಕಲೆಗಾರ್ತಿ.
ಈಗ ನಾನು ಅದೇ ಹುಡುಗಿ ಎಂದು ಈ ಮಹಿಳೆ ಹೇಳುವಾಗ ನಾನು ಬೆರಗುಗೊಂಡಿದ್ದೇನೆ. ಸರಳ-ಮಿತವ್ಯಯದ ಜೀವನಶೈಲಿಯ ಬಗ್ಗೆ ಉತ್ಸಾಹ-ಅಭಿಮಾನದಿಂದ ವಾದಿಸುತ್ತಿದ್ದ ಆ ಹುಡುಗಿಯು ಒಂದು ಸಂಜೆ ವಿಹಾರಕ್ಕೆ ಹೊರೆ ಹೊತ್ತು ಮೆರವಣಿಗೆ ಹೊರಟ ಭಾರತೀಯ ವಧುವಿನಂತೆ ತಯಾರಾಗಿರುವ ಈ ಮಹಿಳೆಯೇ!? ಅತ್ಯುತ್ಸಾಹದಿಂದ ತನ್ನ ಗಂಡನ ಕಾರು, ಕಾಳಜಿ, ಕಳಕಳಿಯ ಬಗ್ಗೆ ಈಕೆ ಮಾತನಾಡುತ್ತಿರುವಾಗ, ತನ್ನದೇ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಬಯಸಿದ್ದ ಆ ಹುಡುಗಿ ಎಲ್ಲಿ ಕಳೆದು ಹೊದಳೋ ಎಂದು ಕಾಡುತ್ತಿದೆ. ಕಾಲೇಜು ದಿನಗಳಲ್ಲಿ ಎಷ್ಟು ಉತ್ಸಾಹಭರಿತ ಹಾಗು ವಿಶ್ವಾಸತ್ಮಕವಾಗಿದ್ದಳೆಂದು ನನಗೆ ನೆನಪಿದೆ. ಹೊಸ ವಿಷಯ ತಿಳಿವ ಕುತೂಹಲ, ಹೊಸ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವ ಕಾತುರ! ಇವಳಲ್ಲಿ ಉದಯಗೊಂಡಿರುವ ಮಹಿಳೆಯು ಇವಳಲ್ಲೊಮ್ಮೆ ಅರಳಿದ್ದ ಹುಡುಗಿಯನ್ನು ಹಿಸುಕಿ ಹಾಕಿರುವಳೆ? ಆ ಹುಡುಗಿ - ಕನಸು ಕಟ್ಟುವ ಧೈರ್ಯ ಮಾಡಿದ್ದವಳು, ಪ್ರಶ್ನಿಸುವ ಛಲವಿದ್ದವಳು, ಪ್ರಯೋಗಗಳಿಗೆ ತೆರೆದುಕೊಂಡಿದ್ದವಳು, ಅವಕಾಶಗಳನ್ನು ಅನ್ವೇಶಿಸುತ್ತಿದ್ದವಳು.
ನನಗೆ ಈ ಮಹಿಳೆಯ ಕುರಿತು ಯಾವುದೇ ದೂರುಗಳಿಲ್ಲ. ಆಕೆಯ ಜೀವನ, ಆಕೆಯ ಅಭಿರುಚಿ, ಆಕೆಯ ಆಯ್ಕೆ. ನಾನು ಅವೆಲ್ಲವನ್ನೂ ಗೌರವಿಸುತ್ತೇನೆ. ನನ್ನ ಒಂದೇ ಒಂದು ಚಿಂತೆ ಈಕೆ ಒಮ್ಮೆ ಆಗಿದ್ದ ಹುಡುಗಿ. ಆ ಹುಡುಗಿ ಎಲ್ಲಿ ಮಾಯವಾದಳು? ತನ್ನ ಮನಸ್ಸಿನ ಯಾವುದಾದರು ಕತ್ತಲೆ ಮೂಲೆಯಲ್ಲಿ ಅವಳನ್ನು ಹೂತಿಟ್ಟಳೇನೋ? ತನ್ನ ಈಗಿನ ಜೀವನದ ಬಗ್ಗೆ ಮತನಾಡುವಾಗ, ಈಕೆ ಹೇರಳತನದ ಪ್ರದರ್ಶನವನ್ನೇಕೆ ಮಾಡುತ್ತಿದ್ದಾಳೆ? ಅವಳೇನಾದರೂ ಅಪ್ರಜ್ಞಾಪೂರ್ವಕವಾಗಿ ತನ್ನ ಕಳೆದುಕೊಂಡ ಕನಸುಗಳನ್ನು ಈ ಭೌತಿಕ ಹೇರಳತನದಿಂದ ಸರಿದೂಗಿಸಿದ್ದೇನೆ ಎಂದು ಹೇಳಬಯಸುತ್ತಿದ್ದಾಳೆಯೇ? ಅವಳು ಇಂಜಿನಿಯರ್. 'x'ನ ಮೌಲ್ಯದಲ್ಲಿ ಆದ ಇಳಿಕೆ, 'y'ನ ಮೌಲ್ಯದಲ್ಲಿ ಆದ ಏರಿಕೆಯಿಂದ ಸರಿದೂಗಿಸಲಾಗದು ಏಕೆಂದರೆ ಅವೆರಡೂ ಒಂದೇ ಸಮೀಕರಣದ ಭಾಗಗಳಲ್ಲ ಎಂಬುದನ್ನು ಅರಿಯುವಷ್ಟು ಜಾಣೆ!
ಬಹುಶ ನಾನೇ ಅತಿಯಾಗಿ ವಿಮರ್ಶಿಸುತ್ತಿರುವೆನೇನೋ. ಇದು ಕೇವಲ ನನ್ನೊಳಗಿನ ನಿರಾಶಾವಾದವಿರಬಹುದು. ನನ್ನ ಪೂರ್ವನಿರ್ಧಾರಿತ ಸಂಕುಚಿತ ದೃಷ್ಟಿಕೋನವಿರಬಹುದು. ನನಗೆ ಸಂಪೂರ್ಣ ವಿವರಗಳು ತಿಳಿದಿಲ್ಲ. ಅರಿವಿಲ್ಲದೆ ತೀರ್ಮಾನಗಳಿಗೆ ಜಿಗಿಯುತ್ತಿರುವೆನೇನೋ. ಆಕೆ ಹೊಸದಾಗಿ ಕಂಡುಕೊಂಡಿರುವ ವೈವಾಹಿಕ ಆನಂದ ಹಾಗು ಸಂಪದ್ಭರಿತತೆ ಆಕೆಯ ಕನಸುಗಳನು ನನಸಾಗಿಸುವುದರಲ್ಲಿ ಸಹಾಯಕವಿರಲೂಬಹುದು. ಅಥವಾ ಹೊಸ ಕನಸುಗಳ ನಿರ್ಮಾಣಕ್ಕೆ ಎಡೆ ಮಾಡಿಕೊಡುವಂತಿರಬಹುದು, ಯಾರಿಗೆ ಗೊತ್ತು? ಯಾವುದು ವಿಕಾಸವಾಗದೋ, ಅದು ವರ್ಜಿತವಾಗಿಬಿಡುತ್ತದೆ.
ಆದರೂ ಕಳೆದ ವರ್ಷ ಆಕೆಗೆ ವಯಸ್ಸು 24, ವಿವಾಹವಾದಳು. ಈಗ 25, ತಾಯಿಯಾಗಿದ್ದಾಳೆ. ವಿವಾಹ ಹಾಗು ತಾಯ್ತನ ಎರಡನ್ನೂ ಗೌರವಿಸುತ್ತಾ, ಮುಂದಿನ ವರ್ಷ "26, ನಾನ್ಯಾರು?" ಎಂದು ಆತ್ಮವಿಮರ್ಶೆ ಕೈಗೊಂಡರೆ ಹೇಗೋ ಎಂದು ಮನಸ್ಸು ಆಲೋಚಿಸುತ್ತಿದೆ. ಈ ಮಹಿಳೆ ಕಂಡುಕೊಳ್ಳುವ ಉತ್ತರ ಈಕೆ ಒಮ್ಮೆ ಆಗಿದ್ದ ಹುಡುಗಿಯನ್ನು ನಿರಾಶೆಗೊಳಿಸದಿರಲಿ ಎಂದು ಪ್ರಾರ್ಥಿಸುತ್ತೇನೆ.
- ಮಂಜುನಾಥ್ ಎ ಎನ್
(ಆಂಗ್ಲದಲ್ಲಿ: http://anamkal.blogspot.com/2014/07/25-who-am-i.html)
1 ಕಾಮೆಂಟ್:
Manju, many of our girls are in a similar situation. Hope this will be working as an eye-opener.
ಕಾಮೆಂಟ್ ಪೋಸ್ಟ್ ಮಾಡಿ