Pages

ಪತ್ತೇದಾರಿ ಕಥೆ - ಹುಡುಕಾಟ

                                      

ಡಾ. ಅಶೋಕ, ಗೆಳೆಯ ಡಾ. ಕೇಶವನಿಗೆ ಹುಟ್ಟುಹಬ್ಬದ ಶುಭಾಶಯ ಕೋರಲು ಬೆಳಿಗ್ಗೆಯೇ ಫೋನು ಮಾಡಿದ್ದು, ಅಲ್ಲೇ ಇದ್ದ ಮಡದಿ ಡಾ. ನಂದಿತಾಳಿಗೆ ಕೇಳಿಸುತ್ತಾ ಇತ್ತು. ಇದು ಅನೇಕ ವರ್ಷಗಳಿಂದ ನಡೆದು ಬಂದಿರುವ ಅಭ್ಯಾಸ. ಆದರೆ, ಮಾತನಾಡಿದ ಬಳಿಕ ಚಿಂತಾಕ್ರಾಂತನಾಗಿ  ಕುಳಿತುಬಿಟ್ಟ. ಆತಂಕಪಟ್ಟು ಏನಾಯಿತು ಎಂದು ಅವಳು ಕೇಳಿದಾಗ ವಿಷಯವೆಲ್ಲ ಹೊರ ಬಂತು. 
ಅಶೋಕ ಮತ್ತು ಕೇಶವ ಬೆಂಗಳೂರಿನಲ್ಲಿ ಸರ್ಜರಿಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುವಾಗ ಸ್ನೇಹಿತರಾಗಿದ್ದು. ಹಾಸ್ಟೆಲ್‍ನ ರೂಮ್‍ಮೇಟ್ಸ್ ಸಹ. ಅಶೋಕ ತುಮಕೂರಿನವನು, ಕೇಶವ ಗುಲ್ಬರ್ಗದವ. ಕೇಶವ ಒಮ್ಮೆ ತನ್ನೆಲ್ಲ ಕಥೆ ಹೇಳಿಕೊಂಡಿದ್ದ. ಗುಲ್ಬರ್ಗದ ಬಳಿಯ ಸಣ್ಣ ಊರು ಕೇಶವನದ್ದು. ಮನೆ ತುಂಬಾ ಮಕ್ಕಳು, ಬಡತನ. ಕೇಶವ ಬುದ್ಧಿವಂತ. ಎಸ್‍ಎಸ್‍ಎಲ್‍ಸಿಯಲ್ಲಿ ಒಳ್ಳೆಯ ಅಂಕ ಪಡೆದಿದ್ದ. ಮುಂದೆ ಓದಲು ಊರಿನಲ್ಲಿ ಕಾಲೇಜಿರಲಿಲ್ಲ. ಬೇರೆಡೆ ಕಳಿಸಲು ಅನಾನುಕೂಲ. ಅಂಥಾ ಸಂದರ್ಭದಲ್ಲಿ ನೆರವಿಗೆ ಬಂದಿದ್ದು ಅವನ ತಾಯಿಯ ಅಕ್ಕ, ದೊಡ್ಡಮ್ಮ ಡಾ. ರೇಣುಕ. ಆಕೆ ಸ್ತ್ರೀರೋಗ ತಜ್ಞೆ. ಪತಿ ಡಾ. ಶಾಮಣ್ಣ ಫಿಸೀಶಿಯನ್. ಗುಲ್ಬರ್ಗದಲ್ಲಿ ಅವರದೊಂದು ನರ್ಸಿಂಗ್ ಹೋಂ ಇತ್ತು. ದಂಪತಿ ಬಡಜನ ಪರ ಎಂದು ಹೆಸರುವಾಸಿ. ಅದರಲ್ಲೂ ಡಾ. ರೇಣುಕ ಎಂದರೆ ಅಲ್ಲಿ ದೇವತೆಯೇ. ಸುತ್ತಮುತ್ತಲಿನ ಹಳ್ಳಿಯ ಜನರೆಲ್ಲಾ ಸರ್ಕಾರಿ ಆಸ್ಪತ್ರೆಗಿಂತ ಇಲ್ಲೇ ಕಡಿಮೆ ದರ ಎಂದು ಇಲ್ಲಿಗೆ ಬರುತ್ತಿದ್ದುದುಂಟು. ದಂಪತಿಗೆ ಮಕ್ಕಳಿರಲಿಲ್ಲ.  
ರೇಣುಕ, ಕೇಶವನನ್ನು ಓದಿಸುವ ಸಲುವಾಗಿ ತಮ್ಮೊಡನೆ ಕರೆದುಕೊಂಡು ಬಂದರು. ಪಿಯೂಸಿಯಲ್ಲಿ ಒಳ್ಳೆಯ ಅಂಕ ಪಡೆದ ಹುಡುಗನನ್ನು ಗುಲ್ಬರ್ಗದಲ್ಲೇ ಮೆಡಿಕಲ್ ಓದಿಸಿದರು. ಅಷ್ಟೊತ್ತಿಗೆ ಅವನನ್ನು ದತ್ತು ತೆಗೆದುಕೊಂಡಿದ್ದರು. ಕೇಶವನಿಗೆ ಸರ್ಜರಿ ಓದಿ ತಮ್ಮ ನರ್ಸಿಂಗ್ ಹೋಂಅನ್ನು ಇನ್ನಷ್ಟು ಬೆಳೆಸುವಾಸೆ. ಹಾಗಾಗಿಯೇ ಅವನು ಬೆಂಗಳೂರಿಗೆ ಬಂದದ್ದು. ಅವನು ರೇಣುಕಾರನ್ನು ಅವ್ವ, ಎಂದೂ, ಶಾಮಣ್ಣರವರನ್ನು ದೊಡ್ಡಪ್ಪ ಎಂದೂ ಕರೆಯುತ್ತಿದ್ದ. ಅವರೆಂದರೆ ಅವನಿಗೆ ಬಹಳ ಪೂಜ್ಯಭಾವ. ತನಗೆ ಆಸರೆಯಾದದಕ್ಕಾಗಿ ಮಾತ್ರವಲ್ಲ. ವೈದ್ಯವೃತ್ತಿಯನ್ನು ಅದರ ನೈಜ ಉದ್ದೇಶದಿಂದ ನಡೆಸಿಕೊಂಡು ಬಂದದಕ್ಕಾಗಿ. ದಿನದಲ್ಲಿ ಒಂದುಬಾರಿಯಾದರೂ ಅವರನ್ನು ನೆನಸಿಕೊಳ್ಳದಿದ್ದರೆ ಅವನಿಗೆ ತೃಪ್ತಿಯಿಲ್ಲ. 
ಪದವಿ ಪಡೆದ ಬಳಿಕ ಅಶೋಕ ಲ್ಯಾಪ್ರೋಸ್ಕೋಪಿ ಫೆಲೋಶಿಪ್‍ಗೆಂದು ದೆಹಲಿಗೆ ಬಂದವ ಅಲ್ಲೇ ಉಳಿದುಕೊಂಡು ಬಿಟ್ಟ. ಅಲ್ಲಿಯ ಆಸ್ಪತ್ರೆಯಲ್ಲಿಯೇ ಕೆಲಸ, ಅಲ್ಲಿಯೇ ಸಹೋದ್ಯೋಗಿಯಾಗಿದ್ದ, ಮಕ್ಕಳ ತಜ್ಞೆ ಡಾ. ನಂದಿತಾಳೊಡನೆ ಪ್ರೀತಿ, ವಿವಾಹ, ಮಗಳು ನೇಹಾ ಜನನ, ಹೀಗೆ ದೆಹಲಿಯವನೇ ಆಗಿ ಬಿಟ್ಟ. ಕೇಶವ, ಗುಲ್ಬರ್ಗಕ್ಕೆ ಮರಳಿ ನರ್ಸಿಂಗ್ ಹೋಂನಲ್ಲಿ ಕೆಲಸ ಆರಂಭಿಸಿದ. ಇಬ್ಬರ ನಡುವೆ ಮೊದಮೊದಲಿಗೆ ಪತ್ರ ವ್ಯವಹಾರ ಚೆನ್ನಾಗಿಯೇ ಇತ್ತು. ನಂತರದ ದಿನಗಳಲ್ಲಿ, ಇಬ್ಬರೂ ತಮ್ಮ ಕೆಲಸದಲ್ಲಿ ವ್ಯಸ್ತರಾಗಿ ಅದು ನಿಂತು ಹೋಯಿತು. ಕೇಶವನ ಮದುವೆ ಗುಲ್ಬರ್ಗದಲ್ಲೇ ನಡೆದಿದ್ದು, ಹೋಗಲು ಅಶೋಕ ಕಾತರನಾಗಿದ್ದ. ಗೆಳೆಯನನ್ನು ನೋಡುವುದಕ್ಕಿಂತ, ಅವನ ಅವ್ವನನ್ನು ನೋಡುವ ಉತ್ಸುಕತೆಯೇ ಹೆಚ್ಚು ಅನ್ನಬಹುದು. ಆದರೆ, ಅಸ್ಪತ್ರೆಯಲ್ಲಿ ಇವನ ರೋಗಿಗಳನ್ನು ನೋಡಿಕೊಳ್ಳಲು ಯಾರೂ ಸಿಗದೆ ಹೋಗಲಾಗಿರಲಿಲ್ಲ. ಅಶೋಕನ ಮದುವೆಗೆ ಕೇಶವ ಬಂದಿದ್ದ. ಆದರೆ, ತುಂಬಾ ಗಡಿಬಿಡಿಯಲ್ಲಿ ಬಂದ ಕಾರಣ, ಗೆಳೆಯರು ಹೆಚ್ಚುಕಾಲ ಜೊತೆಯಲ್ಲಿ ಕಳೆಯಲು ಆಗಿರಲಿಲ್ಲ. 
ಮೊಬೈಲ್ ಫೋನು ಬರುವ ಮೊದಲಿನ ಕಾಲವದು. ಯಾವಾಗಲಾದರೊಮ್ಮೆ ಫೋನಿನಲ್ಲಿ ಮಾತನಾಡುವುದಿತ್ತು. ಕೊನೆಗೆ ಅದೂ ನಿಂತು, ಪರಸ್ಪರರ ಹುಟ್ಟುಹಬ್ಬಕ್ಕೆ ಮರೆಯದೆ ಶುಭಾಶಯ ಕೋರುವುದು ಮಾತ್ರ ಮುಂದುವರೆಯಿತು. ಆಗ ತಮ್ಮೆಲ್ಲ ಸುಖ ದುಖ ಹಂಚಿಕೊಳ್ಳುವುದಿತ್ತು. ಆದರೆ, ಈ ಸಲ ಅಶೋಕ ತನ್ನ ಜನ್ಮದಿನದಂದು ದೆಹಲಿಯಲ್ಲಿ ಇರಲಿಲ್ಲ. ವೈದ್ಯಕೀಯ ಸಮ್ಮೇಳನಕ್ಕೆಂದು ಅಮೆರಿಕಾಗೆ ಹೋಗಿದ್ದ. ಪತ್ನಿ, ಮಗಳನ್ನೂ ಜೊತೆಗೆ ಕರೆದೊಯ್ದಿದ್ದ. ಬಂದದ್ದು 2 ತಿಂಗಳ ಬಳಿಕ. ಹಾಗಾಗಿ, ಕೇಶವನ ಶುಭಾಶಯ ಸಿಕ್ಕಿರಲಿಲ್ಲ. ನಂತರ ಕೆಲಸದಲ್ಲಿ ಬಿಜಿಯಾದ ಕಾರಣ ಅವನನ್ನು ಸಂಪರ್ಕಿಸಲು ಆಗಿರಲಿಲ್ಲ. ಈಗ ಕೇಶವನಿಗೆ ಶುಭಾಶಯ ಕೋರಲು ಮರೆಯಬಾರದೆಂದು ಬೆಳಿಗ್ಗೆ ಎದ್ದ ಕೂಡಲೇ ಫೋನು ಮಾಡಿದ್ದು. 
ಶುಭಾಶಯಕ್ಕೆ ಧನ್ಯವಾದ ಹೇಳುವ ಬದಲು ಬಿಕ್ಕಿಬಿಕ್ಕಿ ಅಳಲು ಪ್ರಾಂಭಿಸಿದ್ದ ಕೇಶವ. ಅಶೋಕ ಕಕ್ಕಾಬಿಕ್ಕಿಯಾಗಿದ್ದ. ನಂತರ ಸ್ವಲ್ಪ ಸಾಂತ್ವನ ಹೇಳಿದ ಮೇಲೆ ಅವನು ತುಂಡುತುಂಡಾಗಿ ಹೇಳಿದ್ದನ್ನು ಅರ್ಥ ಮಾಡಿಕೊಡಿದ್ದು ಹೀಗೆ. ಕೇಶವನ ಹೆಂಡತಿ, ಊರ್ಮಿಳಾ, ಪದವೀಧರೆ, ಬಡಹುಡುಗಿ. ತಮ್ಮ ಮನೆಗೆ ಚೆನ್ನಾಗಿ ಹೊಂದಿಕೊಳ್ಳುತ್ತಾಳೆ ಎಂಬ ಭರವಸೆಯಿಂದಲೇ ರೇಣಕಾರವರೇ ಅವಳನ್ನು ಆಯ್ಕೆ ಮಾಡಿದ್ದು. ಆದರೆ, ಊರ್ಮಿಳಾ, ಮಹತ್ವಾಕಾಂಕ್ಷಿ. ಚಿಕ್ಕಂದಿನಿಂದ ಬಡತನವನ್ನು ಹಾಸಿಹೊದೆದಿದ್ದ ಅವಳಿಗೆ ಶ್ರೀಮಂತಿಕೆಯ ವೈಭೋಗದ ಹುಚ್ಚು. ಡಾಕ್ಟರುಗಳ ಮನೆ, ಸಿರಿವಂತಿಕೆಯ ಎಲ್ಲ ಸೌಲಭ್ಯಗಳು ಇದ್ದೇ ಇರುತ್ತವೆ ಎಂಬ ಕನಸಿಟ್ಟುಕೊಂಡೇ ಅವಳು ಗಂಡನ ಮನೆಗೆ ಬಂದಿದ್ದು. ಅವಳಿಗೆ ಬಹಳ ಬೇಗ ಭ್ರಮ ನಿರಸನವಾಯಿತು. ರೇಣುಕಾ ದಂಪತಿಗಳದ್ದು ಬಹಳ ಸರಳ ಜೀವನ. ಹಳೆಯ ಕಾಲದ ಮನೆ, ಕನಿಷ್ಠ ಸೌಲಭ್ಯಗಳು. ಓಡಾಡಲು ಅವಶ್ಯವೆಂದು ಕಾರಿದ್ದರೂ ಹಳೆಯ ಮಾಡೆಲಿನದ್ದು. ರೇಣಕಾರ ಬಳಿ ದುಬಾರಿ ಸೀರೆ, ಒಡವೆಗಳಿರಲಿಲ್ಲ. ಅಷ್ಟಲ್ಲದೆ, ಅವರ ಆಸ್ಪತ್ರೆ, ಬಡವರಿಗಾಗಿ ಇದ್ದ ಕಾರಣ, ಅಂಥಾ ಹೆಚ್ಚೇನೂ ಲಾಭವೂ ಇರಲಿಲ್ಲ. ಅಲ್ಲಿಗಲ್ಲಿಗೆ ಸರಿ ಹೋಗುತ್ತಿತ್ತು ಅಷ್ಟೇ. ಮೊದಮೊದಲಿಗೆ, ಊರ್ಮಿಳಾ ಗಂಡನ ಬಳಿ ತನ್ನ ಆಸೆ ಆಕಾಂಕ್ಷೆಗಳನ್ನು ಹೇಳಿಕೊಂಡರೂ ಅವನು ತನ್ನ ಪೋಷಕರು ಹೇಳಿದ್ದನ್ನೇ ಮಾಡುವವ ಎಂದು ತಿಳಿದ ಮೇಲೆ ಸುಮ್ಮನಾದಳು. ಅಥವಾ ಕೇಶವ ಹಾಗೆ ತಿಳಿದಿದ್ದ. ಅವಳು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಳು ಅಷ್ಟೇ. ಅಲ್ಲದೆ, ಒಂದು ಮಗುವಿನ ತಾಯಾದ ಬಳಿಕ ಕೆಲವರ್ಷ ಅವಳು ಅದರ ಲಾಲನೆ-ಪಾಲನೆಯಲ್ಲಿ ಕಳೆಯಬೇಕಾಯಿತು. 
ಸುಮಾರು 10 ತಿಂಗಳ ಹಿಂದೆ, ಡಾ. ಶಾಮಣ್ಣರಿಗೆ ಪಾಶ್ವವಾಯು ಆಗಿ ಅವರು ಕೆಲಕಾಲ ನರಳಿ ತೀರಿಕೊಂಡಿದ್ದರು. ಅದೇ ಸಮಯಕ್ಕೆ ಕೇಶವ, ಆಶೋಕನಿಗೆ ಫೋನು ಮಾಡಿದಾಗ, ಅವನು ಅಮೆರಿಕಾಗೆ ಹೋದ ಕಾರಣ ಸಿಕ್ಕಿರಲಿಲ್ಲ. ರೇಣುಕಾಗೆ ಗಂಡನ ಮೃತ್ಯು ಬಹಳವೇ ಆಘಾತವನ್ನು ತಂದೊಡ್ಡಿತ್ತು, ಅವರು  ಆಸ್ಪತ್ರೆಗೆ ಹೋಗುವುದನ್ನು ನಿಲ್ಲಿಸಿ ಬಿಟ್ಟಿದ್ದರು. 
ಅದೇ ಸಮಯವನ್ನು ಊರ್ಮಿಳಾ ಬಳಸಿಕೊಂಡಿದ್ದು. ಗಂಡನಿಗೆ ನೆರವಾಗುವ ನೆಪದಲ್ಲಿ ಆಸ್ಪತ್ರೆಯ ಆಡಳಿತವನ್ನು ಅವಳು ಕೈಗೆತ್ತಿಕೊಂಡಿದ್ದಳು. ದೊಡ್ಡಪ್ಪನ ಸಾವು, ಅವ್ವನ ಖಿನ್ನತೆಯ ಕಾರಣದಿಂದ ಸ್ವತ: ದುಖದಲ್ಲಿ ಮುಳುಗಿದ್ದ ಕೇಶವ ಮಡದಿ ತನಗೆ ನೆರವು ನೀಡಲೆಂದೇ ಬಂದಿದ್ದಾಳೆ ಎಂದುಕೊಂಡು ಅವಳಿಗೆ ಎಲ್ಲಾ ಜವಾಬ್ದಾರಿ ಬಿಟ್ಟುಕೊಟ್ಟಿದ್ದ. ಆಸ್ಪತ್ರೆಯನ್ನು ನವೀಕರಿಸಬೇಕಾದರೆ, ಅದಕ್ಕೆ ಅವಶ್ಯವಾದ ಸಾಲ ಪಡೆಯಲು, ಅದು ತಮ್ಮ ಹೆಸರಿನಲ್ಲಿ ಇರಬೇಕಾಗುತ್ತದೆ ಎಂದು ಗಂಡನನ್ನೂ, ಅತ್ತೆಯನ್ನೂ ನಂಬಿಸಿ, ಒಪ್ಪಿಸಿದ್ದಳು. ಹೀಗೆ, ಅವಳು ರೇಣುಕಾ ದಂಪತಿಯ ಹೆಸರಿನಲ್ಲಿ ಇದ್ದ ಆಸ್ಪತ್ರೆಯನ್ನು ತನ್ನ ಹಾಗೂ ಗಂಡನ ಹೆಸರಿಗೆ ಮಾಡಿಕೊಂಡಿದ್ದಳು. ಅಲ್ಲಿಗೆ ಬರುತ್ತಿದ್ದ ಸಾಮಾಜಿಕ ಕಾಳಜಿಯುಳ್ಳ ವಿಶೇಷಜ್ಞರ ಬದಲಿಗೆ ಹೇಗಾದರೂ ಮಾಡಿ ಹಣ ಸಂಪಾದಿಸುವವರನ್ನು ನೇಮಕ ಮಾಡಿದ್ದಳು. ರಿಸೆಪ್ಷೆನಿಸ್ಟ್ಟ್‍ಗೂ ಸಹ ತನಗೆ ಅನುಕೂಲವಾಗಿ ನಡೆಯದಿದ್ದರೆ, ಅಲ್ಲಿರಲಾಗದು ಎಂದು ತಾಕೀತು ಮಾಡಿದ ಕಾರಣ, ಅವಳೂ ಹಾಗೆಯೇ ನಡೆದುಕೊಳ್ಳುವಂತಾಗಿತ್ತು. ಹಿಂದೆ ಇದ್ದ ಕೆಲ ವೈದ್ಯರು ರೇಣುಕಾ ಅಥವಾ ಕೇಶವನನ್ನು ಭೇಟಿಮಾಡದ ಹಾಗೆ ಊರ್ಮಿಳಾ ಚೆನ್ನಾಗಿಯೇ ಬಂದೋಬಸ್ತ್ ಮಾಡಿದ್ದಳು. ಬಹುಶ: ಕೇಶವ ಸ್ವಲ್ಪ ನಿಗಾ ವಹಿಸಿದ್ದರೆ, ಇವೆಲ್ಲಾ ಅವನ ಅರಿವಿಗೆ ಬರುವುದು ಕಷ್ಟವೇನಿರಲಿಲ್ಲ. ಆದರೆ, ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂದು ಅವಳು ಅವನ ತಲೆ ತಿಕ್ಕಿದ್ದು ತನ್ನ ಪ್ರಭಾವ ಬೀರಿತ್ತು. ರೋಗಿಗಳಿಗೆ ಬೇಕಾದ ಅನುಕೂಲತೆಗಳನ್ನು ಮಾಡಿಕೊಡುತ್ತಾ ತಾವೂ ಆರಾಮದ ಜೀವನ ಬಯಸಿದರೆ ತಪ್ಪೇನು? ಅಷ್ಟಕ್ಕೂ ಬಡವರಿಗಾಗಿ ಸರ್ಕಾರಿ ಆಸ್ಪತ್ರೆಗಳು ಇದ್ದೇ ಇವೆ. ಖಾಸಗಿ ಆಸ್ಪತ್ರೆಯನ್ನು ಯಾವುದೇ ಲಾಭವಿಲ್ಲದೆ ನಡೆಸುವುದು ಮೂರ್ಖತನ! ಅವ್ವ ಹಳೆಯ ಕಾಲದವರು. ಇದೆಲ್ಲಾ ಅವರಿಗೆ ಅರ್ಥವಾಗುವುದಲ್ಲ. ಹೇಗೂ ವಯಸ್ಸಾಗಿದೆ. ಅವರಿಗೆ ಇವೆಲ್ಲಾ ಜಂಜಾಟ ಏಕೆ ಎಂದು ಊರ್ಮಿಳಾ ಹೇಳಿದಾಗ ಕೇಶವನೂ ಅದಕ್ಕೆ ಸಹಿ ಹಾಕಿದ್ದ. ಹಾಗಾಗಿ ನಂತರ ಜರುಗಿದ ದುರಂತಕ್ಕೆ ಅವನೂ ಕಾರಣನೇ.
ಹಳ್ಳಿಯ ರೈತನೊಬ್ಬನ ಮಡದಿ ರೇಣುಕಾರ ಹಳೆಯ ರೋಗಿ. ಆತ ತನ್ನ ಮಗಳನ್ನು ಹೆರಿಗೆಗಾಗಿ ಬಹಳ ನಂಬಿಕೆಯಿಂದ ಇವರ ಆಸ್ಪತ್ರೆಗೆ ಕರೆ ತಂದಿದ್ದ. ಈಗ ಮೊದಲಿನ ಪರಿಸ್ಥಿತಿ ಇಲ್ಲ ಎಂದು ಅವ ಅರಿಯ. ಮೊದಲಾದರೆ, ರೋಗಿಗಳು ಮನೆಗೆ ಹೋಗುವಾಗ ಬಿಲ್‍ಅನ್ನು ಚುಕ್ತಾ ಮಾಡುವುದು ರೂಢಿ. ಹಣ ಕಮ್ಮಿ ಬಿದ್ದರೆ, ರೇಣುಕಾ ಮಾಫಿ ಮಾಡಿಬಿಡುತ್ತಿದ್ದರು. ಮತ್ತೆ ಸಾಧ್ಯವಾದಾಗ ಅವರು ಉಳಿದ ಹಣ ಕೊಡುವುದೋ ಅಥವಾ ಬೇಳೆ, ಕಾಳು ಕೊಡುವುದೋ ನಡೆಯುವುದು. ಆದರೆ, ಈಗ, ಆಸ್ಪತ್ರೆಗೆ ದಾಖಲಾಗುವಾಗಲೇ ಹಣ ಕಟ್ಟಬೇಕು.  ರೈತನ ಬಳಿ ಅಷ್ಟು ಹಣವಿರಲಿಲ್ಲ. ನಂತರ ಕೊಡುವೆನೆಂದು ಅವನು ಅಂಗಲಾಚಿ ಬೇಡಿಕೊಂಡರೂ ಅವನ ಮಗಳ ದಾಖಲಾತಿಯಾಗಲಿಲ್ಲ. ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿನ ನಿಧಾನ ಕ್ರಮ, ಲಂಚ, ಇತ್ಯಾದಿಗಳ ಮಧ್ಯೆ ತಾಯಿ-ಮಗು ಇಬ್ಬರೂ ಪ್ರಾಣ ಕಳೆದುಕೊಂಡುಬಿಟ್ಟರು. ರೈತ ಹೆಣವನ್ನು ನರ್ಸಿಂಗ್‍ಹೋಂ ಮುಂದೆ ಇಟ್ಟು ಗೋಳಾಡಿದ. ಜನ ಸೇರಿದರು. ಹೆದರಿದ ಕೇಶವ, ಸ್ವಲ್ಪ ಹಣ ಕೊಟ್ಟು ಅವನನ್ನು ಸಾಗಹಾಕಿದ. 
ರಿಸೆಪ್ಷೆನಿಸ್ಟ್, ಇದನ್ನು ತಡೆದುಕೊಳ್ಳಲಾಗದೆ ಹೋಗಿ, ರೇಣುಕಾ ಒಬ್ಬರೇ ಇದ್ದ ಸಮಯ ನೋಡಿ ಅವರಿಗೆ ಇದನ್ನು ಹೇಳಿದಳು, ಇಡೀ ಅಸ್ಪತ್ರೆ ಹೇಗಾಗಿದೆ ಎಂದೂ ವಿವರಿಸಿದಳು. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ರೇಣುಕಾಗೆ ಇದು ಒಂದು ದೊಡ್ಡ ಶಾಕ್! ತಾವೇ ಸಂಪೂರ್ಣ ಆಡಳಿತವನ್ನು ವಹಿಸಿಕೊಳ್ಳಲು ಬಯಸಿದರೆ, ನಿಮಗೆ ವಿಶ್ರಾಂತಿ ಬೇಕು, ಇದೆಲ್ಲಾ ಸಧ್ಯಕ್ಕೆ ಬೇಡ ಎಂದು ಮಗ ಹೇಳಿದ. ಅವರು ಪಟ್ಟು ಹಿಡಿದಾಗ, ಆಸ್ಪತ್ರೆ ತಮ್ಮ ಹೆಸರಿನಲ್ಲಿ ಇಲ್ಲ, ಹಾಗಾಗಿ, ತಮಗೆ ಯಾವ ಅಧಿಕಾರವೂ ಇಲ್ಲ ಎಂದುಬಿಟ್ಟಳು ಸೊಸೆ. ಪೂರ್ತಿ ಕುಸಿದುಹೋದರು ರೇಣುಕಾ. ಖಿನ್ನತೆಯಲ್ಲಿ ಮುಳುಗಿಹೋದರು. ಊಟ ತಿಂಡಿಯ ಪರಿವೆ ಇಲ್ಲ, ಕಾಲ-ಸ್ಥಳದ ಅರಿವೂ ಇಲ್ಲ. ಮುಖ ತೊಳೆಯದೆ, ಸ್ನಾನ ಮಾಡದೆ ಹಾಗೆಯೇ ಇದ್ದು ಬಿಡುತ್ತಿದ್ದರು. ಕೇಶವ ಈ ಬಗ್ಗೆ ಆತಂಕ ಪಟ್ಟಲ್ಲಿ, ಎರಡು ದಿನ ಅಷ್ಟೇ, ಸರಿ ಹೋಗುತ್ತಾರೆ ಬಿಡಿ ಎಂದು ಊರ್ಮಿಳಾ ಹೇಳಿದ್ದನ್ನು ನಂಬಿ ಅವನು ಮತ್ತೆ ಆಸ್ಪತ್ರೆಯ ಕೆಲಸದಲ್ಲಿ ಮುಳುಗಿಹೋದ. ಇದಾದ ಎರಡನೇ ವಾರಕ್ಕೇ ಅವರು ನಾಪತ್ತೆಯಾದುದು. ಕೇಶವನಿಗೆ, ತಾನು ಎಂಥಾ ಘೋರ ಅಪರಾಧ ಮಾಡಿದ್ದೇನೆ ಎಂದು ಅರಿವಿಗೆ ಬಂದು ಅವರಿಗಾಗಿ ಬಹಳವೇ ಹುಡುಕಾಟ ನಡೆಸಿದ. ಪೊಲೀಸ್ ಕಂಪ್ಲೇಟ್, ಪತ್ರಿಕೆಗಳಲ್ಲಿ ಸುದ್ದಿ, ಎಲ್ಲಾ ಆಸ್ಪತ್ರೆಗಳಲ್ಲಿ, ಹೆಣದ ಮನೆಗಳಲ್ಲಿ, ನೆಂಟರಿಷ್ಟರಿಷ್ಟರಲ್ಲಿ ಹುಡುಕಾಟ. ಏನು ಮಾಡಿದರೂ ರೇಣುಕಾರ ಪತ್ತೆ ಸಿಕ್ಕಿಲ್ಲ. ಅವ್ವ ಬದುಕಿದ್ದಾರೋ ಇಲ್ಲವೋ ತಿಳಿಯದು, ಇದ್ದರೂ ಅವರಿರುವ ಮರೆವಿನ ಸ್ಥಿತಿಯಲ್ಲಿ ಹೇಗಿದ್ದಾರೋ ಎಂದು ಬಹಳ ಪರಿತಪಿಸಿದ್ದ ಕೇಶವ.
ನಂದಿತಾಗೆ ವಿಷಯ ತಿಳಿಸಿ ಸಂಕಟ ಪಟ್ಟ ಅಶೋಕ. ಒಮ್ಮೆ ಹೋಗಿ ಕೇಶವನನ್ನು ಭೇಟಿ ಮಾಡಬೇಕು ಅಂದುಕೊಂಡ. ಇವರು ಕುಳಿತು ಮಾತನಾಡುತ್ತಿದ್ದ ಹಾಗೇ, ಮಾ ಕಾಫಿ ತೆಗೆದುಕೊಂಡು ಬಂದರು. ಮಾ, ಇವರ್ಯಾರ ತಾಯಿಯೂ ಅಲ್ಲ. ಅಶೋಕನ ಗೆಳೆಯ ತಮ್ಮ ಮನೆಯಲ್ಲಿ, ತಮ್ಮ ನೆರವಿಗೆ ಇದ್ದ ಅವರನ್ನು, ತಾವು ಊರಿಗೆ ಹೋಗುವಾಗ ಒಂದು ವಾರದ ಮಟ್ಟಿಗೆ ಇಲ್ಲಿ ಬಿಟ್ಟು ಹೋಗಿದ್ದ. ಬಹಳ ಸಭ್ಯ ಮಹಿಳೆ. ನಂದಿತಾ ಎಷ್ಟು ಬೇಡವೆಂದರೂ, ಅಡಿಗೆಗೆ, ಮಗುವನ್ನು ನೋಡಿಕೊಳ್ಳಲು ನೆರವಿಗೆ ಬರುತಿದ್ದರು. ನೇಹಾಳಂತೂ ಈ ಅಜ್ಜಿಯನ್ನು ತುಂಬಾನೇ ಹಚ್ಚಿಕೊಂಡು ಬಿಟ್ಟಿದ್ದಳು. 
ಆ ದಿನ ಸಂಜೆ ಯಾವುದೋ ಮದುವೆಗೆ ಹೋಗಬೇಕಿತ್ತು. ಮಾ ಇದ್ದುದರಿಂದ ನೇಹಾಳನ್ನು ಬಿಟ್ಟುಹೋಗುವ ಸಮಸ್ಯೆ ಕಾಡಲಿಲ್ಲ. ಸೀರೆ ಎಲ್ಲಾ ರೆಡಿ ಮಾಡಿಕೊಂಡು ಬಂದ ನಂದಿನಿ ಉಟ್ಟುಕೊಳ್ಳುವಾಗಲಷ್ಟೇ ಗಮನಿಸಿದ್ದು, ಅದರ ಫಾಲ್ ಕಿತ್ತು ಹೋಗಿದ್ದು. ಸಾಮಾನ್ಯವಾಗಿ ಚೂಡಿದಾರ್ ಧರಿಸುತ್ತಿದ್ದ ಕಾರಣ, ಬೇರೆ ಸೀರೆ ರೆಡಿ ಇರಲಿಲ್ಲ. ಆಗ ನೆರವಿಗೆ ಬಂದದ್ದು ಮತ್ತೆ ಮಾ. ನಂದಿತಾಳ ಬಳಿ ಸೂಜಿ ದಾರ ತೆಗೆದುಕೊಂಡು ಹೊಲಿಯಲು ಶುರು ಮಾಡಿದರಾಕೆ. ಅಲ್ಲೇ ಎದುರಿಗೆ ನಂದಿತಾಳಿಗೆ ಕಾಯುತ್ತಾ ಕುಳಿತ್ತಿದ್ದ ಅಶೋಕ ಆಕೆ ಬಹಳ ಚಾಕಚಕ್ಯತೆಯಿಂದ ಹೊಲಿಯುವುದನ್ನೇ ನೋಡುತ್ತಿದ್ದ. ನಂತರ ಆಕೆ ಕತ್ತರಿ ಕೊಡಿ ಎಂದು ಅಶೋಕನನ್ನು ಕೇಳಿ ಅದರಿಂದ ದಾರ ಕತ್ತರಿಸಿದರು. ಮಗುವಿನ ಕೈಗೆ ಕತ್ತರಿ ಸಿಗುವುದು ಬೇಡ ಎಂದು ಅಶೋಕ ಕತ್ತರಿ ಹಿಂದೆ ಪಡೆದು ಒಳಗಿಟ್ಟ. ಮದುವೆ ಮನೆಯಿಂದ ಬಂದ ಮೇಲೂ ಅವನು ಬಹಳ ಹೊತ್ತು ಏನೋ ಯೋಚಿಸುತ್ತಿದ್ದುದನ್ನು ನೋಡಿ, ನಂದಿತಾ ಕೇಳಿದರೂ ಅವಳಿಗೆ ಉತ್ತರ ಸಿಗಲಿಲ್ಲ.
ಎರಡು ದಿನ ಕಳೆದ ಮೇಲೆ, ಅಶೋಕ, ನಾಳೆ ಮನೆಗೆ ಯಾರೋ ಬರುತ್ತಾರೆ, ನಾನು ರಜ, ನೀನು ರಜಹಾಕು ಎಂದಾಗ ನಂದಿತಾಗೆ ಪರಮಾಶ್ಚರ್ಯ. ಅವನು ಈ ತರ ರಜಾ ಹಾಕಿದ್ದೇ ಇಲ್ಲ, ತನ್ನ ತಂದೆತಾಯಿ ಬಂದಾಗಲೂ. ಎಷ್ಟು ಕೇಳಿದರೂ ಅಶೋಕ ಯಾರು ಬರುತ್ತಾರೆಂಬ ಗುಟ್ಟು ಬಿಟ್ಟುಕೊಡಲೊಲ್ಲ. ಮರುದಿನ ಬೆಳಿಗ್ಗೆ ಎದ್ದವನೇ ಏರ್‍ಪೋರ್ಟಿಗೆ ಹೋದ. ಬಂದಾಗ ಕೇಶವ ಜೊತೆಯಲ್ಲಿದ್ದ. ಆಶ್ಚರ್ಯದಿಂದ ಅವನನ್ನು ಸ್ವಾಗತಿಸಿ ಮಾತನಾಡುವಷ್ಟರಲ್ಲಿ, ಅಶೋಕ, ಮಾ ಅವರನ್ನು ಕರಿ ಎಂದ. ಏನಪ್ಪಾ ಎಂದು ಅವರು ಕೇಳುತ್ತಾ ಈಚೆ ಬಂದರೋ ಇಲ್ಲವೋ, ಕೇಶವ ಅವರನ್ನು ದಿಟ್ಟಿಸಿ ನೋಡುತ್ತಾ, ಅವ್ವಾ ಎನ್ನುತ್ತಾ ಅವರ ಕಾಲಿಗೆ ಬಿದ್ದಾಗಿತ್ತು. ರೇಣುಕಾ ಮಗನನ್ನು ಅಪ್ಪಿಕೊಂಡರು, ಹೇಗಿದ್ದೀ ಮಗ ಎಂದು ಕಕ್ಕುಲಾತಿಯಿಂದ ಕೇಳಿದಾಗ ಕೇಶವ ಅತ್ತೇ ಬಿಟ್ಟ. ಎಲ್ಲರೂ ಸ್ವಲ್ಪ ಸುಧಾರಿಸಿಕೊಂಡ ನಂತರ, “ಅವ್ವ ಇಲ್ಲಿರಬಹುದು ಎಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ. ಎಂಥಾ ಕಾಕತಾಳೀಯ” ಎಂದ ಕೇಶವ. 
“ನಿಮಗೆ ಮಾ, ಅವ್ವಾ ಎಂದು ತಿಳಿದದ್ದು ಹೇಗೆ?” ಎಂದು ನಂದಿತಾ ಕೇಳಿದಳು. 
It is elementary my dear Watson” ಎಂದು ಶರ್ಲಾಕ್ ಹೋಮ್ಸ್ ಶೈಲಿಯಲ್ಲಿ ವಿವರಿಸಿದ ಪತ್ತೇದಾರಿ ಕತೆಗಳ ಪ್ರೇಮಿ ಅಶೋಕ. 
“ಅವ್ವ, ಫಾಲ್ಸ್ ಹೊಲೀಬೇಕಾದರೆ, ಸುಮ್ಮನೆ ಹಾಗೇ ನೋಡುತ್ತಿದ್ದೆ ಅಷ್ಟೇ. ನಂದಿತಾಳಿಗೆ ಕಾಯಬೇಕಾಗಿತ್ತಲ್ಲ. ಆದರೆ, ಆಕೆ ದರ್ಜಿಯಂತೆ ಹೊಲಿಯದೆ, ನುರಿತ ಸರ್ಜನ್ ಥರಾ ಹೊಲಿಯುತ್ತಿದ್ದರು. ಮತ್ತೆ ಕೊನೆಯಲ್ಲಿ ಹಾಕಿದ ಗಂಟೂ ಸರ್ಜನ್ ಗಂಟೇ, ಸರ್ಜನ್ಸ್ ನಾಟ್. ಕತ್ತರಿ ತೆಗೆದುಕೊಂಡಾಗಲೂ ಸರ್ಜನ್ ತರವೇ, ಕೈಗೆ ಏಟಾಗದಂತೆ. ಇದನ್ನು ನೋಡುತ್ತಾ ನನ್ನ ತಲೆಯಲ್ಲಿ ಫಳಕ್ಕನೆ ಮಿಂಚೊಂದು ಹೊಳೆಯಿತು. ಹಾಗಾಗಿ, ನೇಹಾಳಿಗೆ ಕತ್ತರಿ ಸಿಗಬಾರದು ಎಂಬ ನೆಪ ಹೇಳಿ ಕತ್ತರಿ ನಾನೇ ತೆಗೆದುಕೊಂಡೆ. ಕೊಡುವಾಗಲೂ ಅವರು ಸರ್ಜನ್‍ರೇ. ಅವರ ಕೈ ಗಮನಿಸಿದಾಗ, ಸರ್ಜರಿಯ ಶಸ್ತ್ರ ಬಳಸೀ, ಬಳಸೀ ಅವರ ಬೆರಳುಗಳಲ್ಲಿ ಚರ್ಮ ದಪ್ಪ ಆಗಿರುವುದನ್ನು ಗಮನಿಸಿದೆ. ನಂದಿತಾ, ನೋಡು ಕೇಶವ ಮತ್ತು ನನ್ನ ಕೈಗಳು ಹೀಗೆಯೇ ಇವೆ. ಆದರೆ, ಅವರಷ್ಟಲ್ಲ. ಅಷ್ಟು ಆಪರೇಶನ್ ಮಾಡಿದ ಬಳಿಕ ಹಾಗೆಯೇ ಆಗುತ್ತವೆ” ಎಂದ ಅಶೋಕ ತನ್ನ ಕೈಗಳನ್ನು ತೋರಿಸುತ್ತಾ.
“ಈ ಸಂದೇಹ ಬಂದ ಕೂಡಲೇ ಅಶೋಕ, ಅವ್ವಳನ್ನು ಹುಡುಕುವ ಪ್ರಯತ್ನ ತಾನೂ ಮಾಡುತ್ತೇನೆ ಎಂದು ನನಗೆ, ಅವ್ವನ ಫೋಟೋ ಕಳಿಸಲು ಫೋನು ಮಾಡಿದ. ಕುರಿಯರ್‍ನಲ್ಲಿ ಕಳುಹಿಸಿದೆ. ಅದು ಅಲ್ಲಿ ತಲುಪಿದ ತಕ್ಷಣ ಫೋನು ಬಂತು. ಕೂಡಲೇ ಹೊರಟು ಬಾ ಎಂದು. ಇನ್ನೇನೂ ಹೇಳಲೊಲ್ಲ. ನನಗಂತೂ ಅವ್ವ ಇಲ್ಲಿ ಸಿಗುವ ಯಾವ ಸೂಚನೆಯೂ ಇರಲಿಲ್ಲವಲ್ಲ, ಹಾಗಾಗಿ ಇದೆಂಥಾ ತುರ್ತು ಅನ್ನಿಸಿತು. ಆದರೂ ಸ್ಥಳ ಬದಲಾವಣೆ ಆದ ಹಾಗೂ ಆಯಿತು, ನಿಮ್ಮನ್ನೆಲ್ಲಾ ನೋಡಿದ ಹಾಗೂ ಆಯಿತು ಎಂದೇ ನಾನು ಬಂದಿದ್ದು. ಆದರೆ, ಇಲ್ಲಿ ಅಶೋಕ ನನ್ನ ಜೀವವನ್ನೇ ವಾಪಸು ಕೊಟ್ಟ” ಎಂದು ಮತ್ತೆ ಕಣ್ಣೀರು ಮಿಡಿದ. 
“ಗೆಳೆಯ ಸುನಿಲ್ ಅಗರ್‍ವಾಲ್, ತಮಗೆ ಮಾ ಸಿಕ್ಕಿದ ಕುರಿತು ಕ್ಲುಪ್ತವಾಗಿ ಒಮ್ಮೆ ಹೇಳಿದ್ದ. ಆತನ ಪತ್ನಿ ಬೆಂಗಳೂರಿನವರು. ಅಲ್ಲಿಂದ ಸಂಸಾರ ಸಮೇತ ರೈಲಿನಲ್ಲಿ ಹಿಂದಿರುಗುವಾಗ ಈಕೆ ಸಿಕ್ಕರು. ಎಲ್ಲಿ ಹತ್ತಿಕೊಂಡರೋ ಆತ ಗಮನಿಸಿರಲಿಲ್ಲ. ಬಹುಶ: ಗುಲ್ಬರ್ಗದಲ್ಲಿಯೇ ಇರಬೇಕು. ನಿಮ್ಮ ಮನೇ ಹತ್ತಿರವೇ ಸ್ಟೇಷನ್ ಅಂತಾ ನೀನು ಹೇಳಿದ ನೆನಪು ನನಗೆ” ಎಂದು ಅಶೋಕ ಹೇಳುತ್ತಿರುವಾಗ ಕೇಶವ ತಲೆಯಾಡಿಸಿದ. “ಮಾಸಿದ ಬಟ್ಟೆ, ಕೆದರಿದ ತಲೆಗೂದಲು, ಆದರೂ ಅವರನ್ನು ನೋಡಿದಾಗ ಸುನಿಲನಿಗೆ ಗೌರವ ಭಾವ ಬಂತಂತೆ. ಹೆಸರು ಕೇಳಿದರೆ, ಗೊತ್ತಿಲ್ಲ. ಎಲ್ಲಿಗೆ ಹೋಗಬೇಕು, ಗೊತ್ತಿಲ್ಲ. ಹಸಿದಂತೆ ಕಂಡಿತು. ಉಣ್ಣಲು ಕೊಟ್ಟರೆ ತೆಗೆದುಕೊಳ್ಳಲಿಲ್ಲ. ಡಾಕ್ಟರನಲ್ಲವೇ, ಇದು ಅಮ್ನೀಸಿಯಾ ಕೇಸು ಅನಿಸಿದೆ. ಟೀಸಿ ಬಂದಾಗ, ಟಿಕೇಟಿಲ್ಲ ಎಂದು ಇಳಿಸಲು ಹೋಗಿದ್ದಾರೆ. ಇವನೇ ಹಣ ಕೊಟ್ಟು ತನ್ನ ಜೊತೆಗೆ ಕರೆದುಕೊಂಡು ಬಂದಿದ್ದಾನೆ. ಗಂಡ ಹೆಂಡತಿ ಇಬ್ಬರಿಗೂ ತಾಯಿಯಿಲ್ಲ. ಇವರನ್ನೇ ತಾಯಿಯೆಂದು ತಿಳಿದುಕೊಂಡಿದ್ದಾರೆ, ಮಾ ಎಂದು ಕರೆಯುತ್ತಾರೆ. ಅವ್ವನೂ ಅಷ್ಟೇ ಇವರೊಂದಿಗೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ನ್ಯುರಾಲಜಿಸ್ಟ್‍ಗೆ ತೋರಿಸಲು ಪ್ರಯತ್ನಿಸಿದಾಗ ಅವ್ವ ಒಪ್ಪಿಲ್ಲ. ಅವರು ಊರಿಗೆ ಹೋಗುವಾಗ, ಇಲ್ಲಿ ಬಿಟ್ಟು ಹೋಗಿದ್ದಾರಷ್ಟೇ” ಎಂದು ವಿವರಿಸಿದ ಅಶೋಕ, “ಇವೆಲ್ಲಾ ಎಳೆಗಳನ್ನು ಜೋಡಿಸಿದಾಗ, ಇವರೇ ನಿನ್ನ ಅವ್ವ ಎಂದೆನಿಸಿತು. ಫೋಟೋ ನೋಡಿದ ಮೇಲಂತೂ ದೃಢವಾಯಿತು. ನಿನಗೆ ಸರ್‍ಪ್ರೈಸ್ ಕೊಡಲೆಂದು ಹೇಳಲಿಲ್ಲ” ಎಂದ. 
 “ನಿಮಗೇ ಏನು? ನನಗೂ ಹೇಳಿಲ್ಲ. ಎನಿ ವೇ ಅ ಪ್ಲೆಸೆಂಟ್ ಸರ್‍ಪ್ರೈಸ್” ಎಂದು ಸಂತೋಷದಿಂದ ಹೇಳಿದಳು ನಂದಿತಾ. 
ಇಷ್ಟೆಲ್ಲಾ ಮಾತುಕತೆಗಳನ್ನು ಅವ್ವ ಕೇಳಿಸಿಕೊಂಡು ಸುಮ್ಮನಿದ್ದರು. “ಅವ್ವಾ ನಿಮಗೆ ತುಂಬಾ ಕಷ್ಟಕೊಟ್ಟು ಬಿಟ್ಟೆ ಅಲ್ವಾ? ಕ್ಷಮೆ ಕೇಳಲೂ ಯೋಗ್ಯತೆ ಇಲ್ಲ ನನಗೆ” ಎಂದು ನೊಂದುಕೊಂಡು ಹೇಳಿದ ಕೇಶವ. 
“ಮಗ, ಕಷ್ಟ ಆಗಿದ್ದು ನಿಜ. ನಮ್ಮ ಕನಸಿನ ಆಸ್ಪತ್ರೆ ಬಿಸೆನೆಸ್ ಸೆಂಟರ್ ಆದಾಗ ನೋವಾಗದೆ ಇರುತ್ತದೆಯೇ? ಆ ಖಿನ್ನತೆಯಲ್ಲಿ ಏನಾಯಿತೋ, ಇಲ್ಲಿ ದಿಲ್ಲಿಗೆ ಹೇಗೆ ಬಂದೆನೋ ಗೊತ್ತಿಲ್ಲ. ಸುನಿಲ್ ಹೇಳಿದಷ್ಟೇ ಗೊತ್ತು. ನಂತರ ನಿಧಾನವಾಗಿ ಎಲ್ಲ ನೆನಪಿಗೆ ಬಂತು. ನಾನು ಏನೂ ಹೇಳ ಹೋಗಲಿಲ್ಲ. ಹೀಗೆಯೇ ಇದ್ದು ಬಿಡೋಣ ಅನಿಸಿತು.  ಹಿಂದಿಯಂತೂ ಚೆನ್ನಾಗಿ ಬರುತ್ತಿತ್ತು. ನಾನು ಕನ್ನಡದವಳು ಅಂತಾ ಯಾರಿಗೂ ತಿಳಿಯಲಿಲ್ಲ. ಈ ನಿನ್ನ ಸ್ನೇಹಿತ, ಅಶೋಕ ಪತ್ತೇದಾರಿ ಮಾಡಿರದಿದ್ದರೆ, ಮುಂದೆಯೂ ಗೊತ್ತಾಗುತ್ತಿರಲಿಲ್ಲ” ಅಂದರು ರೇಣುಕಾ.
“ ಅವ್ವಾ ಊರಿಗೆ ಯಾವಾಗ ಹೋಗೋಣ?” ಎಂದು ಕೇಳಿದ ಕೇಶವ. 
“ ಬೇಡ ಕೇಶವ. ಇಲ್ಲೇ ನನ್ನ ಈ ಇಬ್ಬರು ಮಕ್ಕಳ ಮನೆಯಲ್ಲಿ ಇದ್ದು ಬಿಡುತ್ತೇನೆ. ವಯಸ್ಸಾದ ಮುದುಕಿ. ಎಲ್ಲಿದ್ದರೇನಂತೆ?” ತಾಯಿಯ ಮಾತು ಕೇಳಿ ಕೇಶವನ ಕಣ್ಣಲ್ಲಿ ಮತ್ತೆ ಅಶ್ರುಧಾರೆ. “ನನಗೆ ಕ್ಷಮೆಯೇ ಇಲ್ಲವೆನ್ನು ಹಾಗಾದರೆ” ಎಂದು ನೊಂದು ಕೇಳಿದ.
“ನಿನ್ನನ್ನು ಎಂದೋ ಕ್ಷಮಿಸಿಬಿಟ್ಟಿದ್ದೇನೆ ಕೇಶವಾ. ಆದರೆ, ಅಲ್ಲಿ ನಡೆದ ಜೋಡಿ ಸಾವಿನ ಘಟನೆಯನ್ನು ಮರೆಯಲಾರೆ. ನೆನೆದಾಗ ಮನಸ್ಸು ತಲ್ಲಣಗೊಳ್ಳುತ್ತದೆ. ಮನಸ್ಸು ಸ್ಥಿಮಿತಕ್ಕೆ ಬರುವವರೆಗೂ ಬರುವ ಯೋಚನೆ ಮಾಡಲಾರೆ” ಎಂದು ಅವ್ವ ಹೇಳಿದಾಗ ಕೇಶವ ಒಪ್ಪಲೇ ಬೇಕಾಯಿತು. 


- ಡಾ. ಸುಧಾ ಕಾಮತ್        

ಕಾಮೆಂಟ್‌ಗಳಿಲ್ಲ: