(ಕಳೆದ ಸಂಚಿಕೆಯಿಂದ ಮುಂದುವರೆದಿದೆ)
ಕೊನೆಯ ಆಸೆ
1931ರ ಮಾರ್ಚ್ 24ರಂದು ಭಗತ್‍ಸಿಂಗ್, ಸುಖದೇವ್, ರಾಜಗುರುರವರನ್ನು ಗಲ್ಲಿಗೇರಿಸಬೇಕೆಂದು ತೀರ್ಮಾನಿಸಲಾಗಿತ್ತು. 23 ರಂದೇ ಅವರ ಕುಟುಂಬದವರು ಮತ್ತು ಲಾಹೋರಿನ ಸಹಸ್ರಾರು ಜನ ದುಃಖದಲ್ಲಿ ಮುಳುಗಿದ್ದರು. ಲಾಹೋರಿನ ಜೈಲಿನ ಹೊರಗಡೆ ಎಲ್ಲರೂ ಕಾಯುತ್ತಿದ್ದರು. ಭಗತ್‍ಸಿಂಗ್‍ರ ವಕೀಲರಾದ ಪ್ರಾಣನಾಥ್ ಮೆಹ್ತಾರವರಿಗೆ ಅವರನ್ನು ಭೇಟಿ ಮಾಡಲು ಅವಕಾಶ ದೊರೆಯಿತು. ಲೆನಿನ್‍ರ ಜೀವನ ಚರಿತ್ರೆಯ ಪುಸ್ತಕವನ್ನು ಭಗತ್‍ಸಿಂಗ್‍ರ ಕೈಗಿತ್ತು “ಇಂದು ಹೇಗಿದ್ದೀರಿ?” ಎಂದು ಕೇಳಿದರು.
ಭಗತ್‍ಸಿಂಗ್‍ರು “ಸಂತೋಷವಾಗಿದ್ದೇನೆ ಎಂದಿನಂತೆ,” ಎಂದು ಉತ್ತರಿಸಿದರು.
“ದೇಶಕ್ಕಾಗಿ ನಿಮ್ಮ ಸಂದೇಶ ಏನು?” ಮೆಹ್ತಾ ಕೇಳಿದರು.
“ಸಾಮ್ರಾಜ್ಯಶಾಹಿಗೆ ದಿಕ್ಕಾರ, ಕ್ರಾಂತಿ ಚಿರಾಯುವಾಗಲಿ, ಈ ಎರಡೂ ಘೋಷಣೆಗಳನ್ನು ದೇಶದ ಜನತೆಗೆ ನೀಡಿದ್ದೇನೆ.”
“ನಿಮ್ಮ ಕೊನೆಯ ಆಸೆ ಏನು?”
“ಈ ದೇಶದಲ್ಲಿ ಪುನಃ ಹುಟ್ಟಬೇಕೆಂದು, ಈ ದೇಶದ ಸೇವೆಯನ್ನು ಮಾಡಬೇಕೆಂದು.”
ರಾಜಗುರು, ಸುಖದೇವ್‍ರು ಸಹ ಅಂತಹುದೇ ಆಸೆಯನ್ನು ವ್ಯಕ್ತಪಡಿಸಿದರು. ಮೆಹ್ತಾರವರು ಹೊರಟು ಹೋದ ಮೇಲೆ ಆ ಮೂವರಿಗೆ ಶಿಕ್ಷೆಯನ್ನು 24ರ ಮುಂಜಾವಿನ ಬದಲಿಗೆ 23 ರ ಸಂಜೆ ಏಳಕ್ಕೆ ನಿಗಧಿ ಪಡಿಸಲಾಗಿದೆ ಎಂದು ಹೇಳಲಾಯಿತು. ಮೂವರಲ್ಲೂ ಯಾವುದೇ ರೀತಿಯ ನೋವಿನ ಛಾಯೆ ಇರಲಿಲ್ಲ. ಎಲ್ಲಕ್ಕೂ ಸಜ್ಜಾಗಿದ್ದೇವೆ ಎಂಬ ಮುಖಭಾವವಿತ್ತು. ಅಂದು ಇತರ ಖೈದಿಗಳಿಗೆ ವಿಚಿತ್ರ ವಾತಾವರಣವಿದ್ದಂತೆ ಭಾಸವಾಗುತ್ತಿತ್ತು. ಅಂದು ಬಹಳ ಬೇಗನೆ ಅವರವರ ಸೆಲ್‍ಗಳಿಗೆ ಕಳಿಸಲಾಗಿತ್ತು. ಅಲ್ಲಿಗೆ ಬಂದ ಕ್ಷೌರಿಕ ವಿಷಯವೇನೆಂಬುದನ್ನು ಬಾಯಿಬಿಟ್ಟ. ಖೈದಿಗಳೆಲ್ಲರೂ ಅತೀವವಾದ ವೇದನೆಗೆ ಒಳಗಾದರು. ಆ ಕ್ರಾಂತಿಕಾರಿಗಳ ಸಾವು ಖಚಿತ ಎಂದು ತಿಳಿದಿದ್ದರೂ, ಅವರಾರೂ ಇದನ್ನು ಅಂಗೀಕರಿಸಲು ಸಿದ್ಧರಿರಲಿಲ್ಲ.
ಭಗತ್‍ಸಿಂಗ್‍ರು “ಸಂತೋಷವಾಗಿದ್ದೇನೆ ಎಂದಿನಂತೆ,” ಎಂದು ಉತ್ತರಿಸಿದರು.
“ದೇಶಕ್ಕಾಗಿ ನಿಮ್ಮ ಸಂದೇಶ ಏನು?” ಮೆಹ್ತಾ ಕೇಳಿದರು.
“ಸಾಮ್ರಾಜ್ಯಶಾಹಿಗೆ ದಿಕ್ಕಾರ, ಕ್ರಾಂತಿ ಚಿರಾಯುವಾಗಲಿ, ಈ ಎರಡೂ ಘೋಷಣೆಗಳನ್ನು ದೇಶದ ಜನತೆಗೆ ನೀಡಿದ್ದೇನೆ.”
“ನಿಮ್ಮ ಕೊನೆಯ ಆಸೆ ಏನು?”
“ಈ ದೇಶದಲ್ಲಿ ಪುನಃ ಹುಟ್ಟಬೇಕೆಂದು, ಈ ದೇಶದ ಸೇವೆಯನ್ನು ಮಾಡಬೇಕೆಂದು.”
ರಾಜಗುರು, ಸುಖದೇವ್‍ರು ಸಹ ಅಂತಹುದೇ ಆಸೆಯನ್ನು ವ್ಯಕ್ತಪಡಿಸಿದರು. ಮೆಹ್ತಾರವರು ಹೊರಟು ಹೋದ ಮೇಲೆ ಆ ಮೂವರಿಗೆ ಶಿಕ್ಷೆಯನ್ನು 24ರ ಮುಂಜಾವಿನ ಬದಲಿಗೆ 23 ರ ಸಂಜೆ ಏಳಕ್ಕೆ ನಿಗಧಿ ಪಡಿಸಲಾಗಿದೆ ಎಂದು ಹೇಳಲಾಯಿತು. ಮೂವರಲ್ಲೂ ಯಾವುದೇ ರೀತಿಯ ನೋವಿನ ಛಾಯೆ ಇರಲಿಲ್ಲ. ಎಲ್ಲಕ್ಕೂ ಸಜ್ಜಾಗಿದ್ದೇವೆ ಎಂಬ ಮುಖಭಾವವಿತ್ತು. ಅಂದು ಇತರ ಖೈದಿಗಳಿಗೆ ವಿಚಿತ್ರ ವಾತಾವರಣವಿದ್ದಂತೆ ಭಾಸವಾಗುತ್ತಿತ್ತು. ಅಂದು ಬಹಳ ಬೇಗನೆ ಅವರವರ ಸೆಲ್‍ಗಳಿಗೆ ಕಳಿಸಲಾಗಿತ್ತು. ಅಲ್ಲಿಗೆ ಬಂದ ಕ್ಷೌರಿಕ ವಿಷಯವೇನೆಂಬುದನ್ನು ಬಾಯಿಬಿಟ್ಟ. ಖೈದಿಗಳೆಲ್ಲರೂ ಅತೀವವಾದ ವೇದನೆಗೆ ಒಳಗಾದರು. ಆ ಕ್ರಾಂತಿಕಾರಿಗಳ ಸಾವು ಖಚಿತ ಎಂದು ತಿಳಿದಿದ್ದರೂ, ಅವರಾರೂ ಇದನ್ನು ಅಂಗೀಕರಿಸಲು ಸಿದ್ಧರಿರಲಿಲ್ಲ.
ಸಾವಿನತ್ತ ಹಸನ್ಮುಖರಾಗಿ
ಮೂವರೂ ಸ್ನಾನವನ್ನು ಮಾಡಿ ಕಪ್ಪು ಬಟ್ಟೆಗಳನ್ನು ಧರಿಸಿದರು. ಮೂವರ ತೂಕಗಳನ್ನು ನೋಡಲಾಯಿತು. ಎಲ್ಲರೂ ತಂತಮ್ಮ ತೂಕಗಳನ್ನು ಹೆಚ್ಚಿಸಿಕೊಂಡಿದ್ದರು. ಸಾವು ಹತ್ತಿರವಿದೆ ಎಂದಾಗ ಸಾಮಾನ್ಯವಾಗಿ ಮನುಷ್ಯರು ಚಿಂತಾಕ್ರಾಂತರಾಗುತ್ತಾರೆ ಮತ್ತು ತೂಕವನ್ನು ಕಳೆದುಕೊಳ್ಳುತ್ತಾರೆ. ಆದರೆ ಈ ಮೂವರೂ ಸಾವನ್ನೂ ಸಹ ನಗುನಗುತ್ತಲೇ ಆಹ್ವಾನಿಸಿದ್ದರೆಂಬುದಕ್ಕೆ ಇದೇ ಸಾಕ್ಷಿ. ಮೂವರೂ ಕೈ-ಕೈ ಹಿಡಿದು ತಮ್ಮ ಪ್ರೀತಿಪಾತ್ರ ಕ್ರಾಂತಿಗೀತೆಯನ್ನು ಹಾಡುತ್ತಾ ನೇಣ್ಗಂಬದತ್ತ ನಡೆದರು. ಖೈದಿಗಳೆಲ್ಲರೂ ಅವರ ಹೆಜ್ಜೆಯ ಸಪ್ಪಳಕ್ಕಾಗಿಯೇ ಕಾತುರದಿಂದ ಕಾಯುತ್ತಿದ್ದರು. ಸಂಜೆ 6 ಘಂಟೆಗೆ ಸರಿಯಾಗಿ ಅವರಿಗೆ “ಕ್ರಾಂತಿ ಚಿರಾಯುವಾಗಲಿ”, “ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಧಿಕ್ಕಾರ” ಎಂಬ ಘೋಷಣೆಗಳು ಕೇಳಿ ಬಂದವು. ಖೈದಿಗಳು ತಾವೂ ಸಹ ಜೈಲಿನ ಗೋಡೆ ಬಿರಿಯುವವೇನೋ ಎಂಬಂತೆ ಘೋಷಣೆ ಕೂಗಲಾರಂಭಿಸಿದರು. ಅವರು “ಸರಫರೋಶಿ ಕೀ ತಮನ್ನಾ” ಗೀತೆ ಹಾಡಿದರೆ, ಇವರು “ರಂಗ್ ದೇ ಬಸಂತಿ” ಗೀತೆ ಹಾಡಿ ಪ್ರತಿಸ್ಪಂದಿಸಿದರು.
‘ನಿರುತ್ಸಾಹಗೊಳ್ಳದಿರಿ, ಜಯವು ನಿಮ್ಮದೆ’
ಭಗತ್‍ಸಿಂಗ್ ಜೈಲಿನ ಸೆಲ್‍ನಲ್ಲಿದ್ದ ಖೈದಿಗಳೆಲ್ಲರಿಗೆ ಕೇಳಿಸುವಂತೆ ಭಾಷಣ ಮಾಡಿದರು. “ಸಂಗಾತಿಗಳೇ, ನಿಜವಾದ ಸೈನ್ಯವಿರುವುದು ಹಳ್ಳಿಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ-ರೈತರು ಮತ್ತು ಕಾರ್ಮಿಕರು. ಆದರೆ ನಮ್ಮ ಕಾಂಗ್ರೆಸ್ ನಾಯಕರು ಅವರನ್ನು ಜಾಗೃತಗೊಳಿಸಲು ಇಚ್ಛಿಸುವುದಿಲ್ಲ. ಏಕೆಂದರೆ ಮಲಗಿರುವ ಸಿಂಹವನ್ನು ಒಮ್ಮೆ ಎಚ್ಚರಿಸಿ ಬಿಟ್ಟರೆ, ನಂತರ ನಮ್ಮ ಈ ನಾಯಕರಿಗೆ ಬೇಕಾದದ್ದನ್ನು ಸಾಧಿಸಿದ ಮೇಲೆಯೂ ಅವರನ್ನು ಯಾರೂ ತಡೆ ಹಿಡಿಯಲಾರರು. ಕಾರ್ಮಿಕರು-ರೈತರು ಕ್ರಾಂತಿಯತ್ತ ಚಲಿಸುತ್ತಾರೆ. ಕ್ರಾಂತಿ ಎಂದರೆ ಅಸ್ತಿತ್ವದಲ್ಲಿರುವ ಸಾಮಾಜಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಿತ್ತೊಗೆಯುವುದು ಮತ್ತು ಅದರ ಬದಲಿಗೆ ಸಮಾಜವಾದಿ ವ್ಯವಸ್ಥೆಯನ್ನು ತರುವುದು. ಈ ಬಗ್ಗೆ ನಾವು ಜನತೆಯಲ್ಲಿ ಅರಿವನ್ನು ಮೂಡಿಸಬೇಕು. . . . . ನಿಮ್ಮ ವೈಯಕ್ತಿಕ ಸೌಕರ್ಯಗಳ ಬಗ್ಗೆ ಮರೆತು ಬಿಡಿ. ಕೆಲಸ ಮಾಡಲು ಆರಂಭಿಸಿ. ಹಂತ-ಹಂತವಾಗಿ ನೀವು ಮುನ್ನಡೆಯಬೇಕು. ಅದಕ್ಕೆ ನಿಮಗೆ ಧೈರ್ಯ, ಸಹನೆ ಮತ್ತು ದೃಢ ನಂಬಿಕೆ ಇರಬೇಕು. ಯಾವ ಸಂಕಷ್ಟಗಳು ನಿಮ್ಮನ್ನು ನಿರುತ್ಸಾಹಗೊಳಿಸದಿರಲಿ. ಯಾವ ವಿಫಲತೆ ಮತ್ತು ದ್ರೋಹವೂ ಸಹ ನಿಮ್ಮನ್ನು ವಿಚಲಿತರನ್ನಾಗಿಸದಿರಲಿ. ತ್ಯಾಗ-ಬಲಿದಾನಗಳ ಮೂಲಕ ನೀವು ಜಯಶಾಲಿಯಾಗುವಿರಿ.”
ಪ್ರಜ್ವಲ ಜ್ಯೋತಿಗಳು
ಧೀರರಂತೆ ಗಲ್ಗಂಬದತ್ತ ಸಾಗಿದ ಭಗತ್‍ಸಿಂಗ್, ಸುಖದೇವ್, ರಾಜಗುರು, ಒಬ್ಬರನ್ನೊಬ್ಬರು ಅಪ್ಪಿಕೊಂಡರು. ನಂತರ ನೇಣಿನ ಕುಣಿಕೆಗೆ ಮುತ್ತಿಟ್ಟು ತಾವೇ ಆ ಕುಣಿಕೆಯನ್ನು ಹಾಕಿಕೊಂಡರು. ಮುಖಕ್ಕೆ ಬಟ್ಟೆಯನ್ನು ಹಾಕಿಸಿಕೊಳ್ಳಲಿಲ್ಲ. ‘ಕ್ರಾಂತಿ ಚಿರಾಯುವಾಗಲಿ’ ‘ಬ್ರಿಟಿಷ್ ಸಾಮ್ರಾಜ್ಯವಾದಕ್ಕೆ ಧಿಕ್ಕಾರ’ ಎಂದು ಕಂಠ ಬಿರಿಯುವಂತೆ ಘೋಷಣೆಗಳನ್ನು ಕೂಗುತ್ತಲೇ ಇದ್ದರು. ಸಿಂಹಾಸನವನ್ನು ಏರುತ್ತಿದ್ದಾರೇನೋ ಎಂಬಂತೆ ಗಲ್ಗಂಬಕ್ಕೆ ಏರುತ್ತಿದ್ದ ಆ ಯುವಕರನ್ನು ಕಂಡು ಬ್ರಿಟಿಷ್ ಮತ್ತು ಭಾರತೀಯ ಅಧಿಕಾರಿಗಳು ಸ್ಥಂಭೀಭೂತರಾಗಿದ್ದರು. ಬಾಳಿ ಬದುಕಬೇಕಿದ್ದ ಯುವಕರು ಸಾವನ್ನು ಸಂತೋಷದಿಂದ ಸ್ವಾಗತಿಸಿದ್ದನ್ನು ಕಂಡು, ಜೈಲರ್ ಚರತ್‍ಸಿಂಗ್ ಕಣ್ಣೀರನ್ನೊರೆಸಿಕೊಂಡರು. ನೇಣು ಹಾಕುವವ ಹಗ್ಗವನ್ನು ಎಳೆದ. ಎಲ್ಲೆಡೆ ನಿಶ್ಶಬ್ದ. ಆ ಮೂವರ ಪ್ರಾಣಪಕ್ಷಿ ಹಾರಿಹೋಗಿತ್ತು. ಭಾರತದ ಮಹಾನ್ ಮೂವರು ಸುಪುತ್ರರು ದೇಶಕ್ಕಾಗಿ ಬಲಿದಾನವಾಗಿದ್ದರು. ಸ್ವಾತಂತ್ರ್ಯದ ದೀವಿಗೆ ಸತತವಾಗಿ ಉರಿಯುವಂತೆ ಮಾಡಿ ಆ ಜ್ಯೋತಿಗಳು ನಂದಿ ಹೋದವು. ಸಾಯುವವರೆಗೂ ತಮ್ಮ ಧ್ಯೇಯಗಳನ್ನು ಪ್ರತಿಪಾದಿಸುತ್ತಾ ಯುವಜನತೆಯನ್ನು, ಕಾರ್ಮಿಕ, ರೈತರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ, ಕ್ರಾಂತಿಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿದ್ದ ಕಂಠಗಳು ಸ್ತಬ್ಧವಾಗಿ ಹೋದವು.
ಆದರೆ ಸಾವಿರಾರು, ಲಕ್ಷಾಂತರ ಕಂಠಗಳು ಆ ಘೋಷಣೆಗಳನ್ನು ಪುನರುಚ್ಛರಿಸಲು ಸಜ್ಜಾದವು. ಆ ಮೂವರೂ ಸತ್ತಿರಲಿಲ್ಲ. ಸಾವಿರಾರು ಯುವಜನರಲ್ಲಿ ಮತ್ತೆ ಹುಟ್ಟಿಕೊಂಡರು. ತಮ್ಮ ಬಲಿದಾನ ವ್ಯರ್ಥವಾಗುವುದಿಲ್ಲ, ಅದು ಬ್ರಿಟಿಷ್ ಸಾಮ್ರಾಜ್ಯದ ಅಂತ್ಯ ಬರೆಯುತ್ತದೆಂಬುದು ಅವರ ದೃಢವಾದ ನಂಬಿಕೆಯಾಗಿತ್ತು. ಅವರ ಸಾವಿನ ನಂತರ ಹೋರಾಟ ತೀವ್ರವಾಯಿತು. ಅವರ ಬಲಿದಾನ ಬ್ರಿಟಿಷರ ಹೊಡೆದೋಡಿಸುವಿಕೆಗೆ ಕಾರಣವಾಯಿತು ಎಂಬುದು ನಿಸ್ಸಂದೇಹ.
ಪೋಲಿಸರ ಬರ್ಬರತೆ
ಜೈಲಿನ ಹೊರಗಡೆ ಸಾವಿರಾರು ಜನ ಕಾಯುತ್ತಿದ್ದರು. ಅವರಾರಿಗೂ ಭಗತ್‍ಸಿಂಗ್, ಸುಖದೇವ್, ರಾಜಗುರುರವರನ್ನು ಗಲ್ಲಿಗೇರಿಸಿಬಿಟ್ಟಿದ್ದಾರೆ ಎಂಬ ಸುದ್ದಿ ತಿಳಿದಿರಲಿಲ್ಲ. ಮರುದಿನ ಬೆಳೆಗ್ಗೆ 6 ಘಂಟೆಗೆ ಎಂದುಕೊಂಡೇ ರಾತ್ರಿಯಿಡೀ ಕಾಯಲು ನಿರ್ಧರಿಸಿದ್ದರು. ಆ ಮೂರೂ ಶವಗಳನ್ನು ಕಾನೂನಿನ ಪ್ರಕಾರ ಅವರ ಬಂಧುಗಳಿಗೆ ನೀಡಬೇಕಿತ್ತು. ಆದರೆ ಬ್ರಿಟಿಷ್ ಬರ್ಬರತೆಯನ್ನು ಹೇಳಲಸಾಧ್ಯ. ಜೈಲಿನ ಇನ್ನೊಂದು ಭಾಗದ ಗೋಡೆಯನ್ನು ಒಡೆದು ಅಲ್ಲಿ ಟ್ರಕ್ ಒಂದರಲ್ಲಿ ಅವರ ದೇಹಗಳನ್ನು ಹಾಕಿಕೊಂಡು, ಫಿರೋಜ್‍ಪುರದತ್ತ (ಸಟ್ಲೆಜ್ ನದಿಯ ಬಳಿ) ಹೊರಟರು. ಅಲ್ಲಿ ನದೀ ತೀರದಲ್ಲಿ ಶವಗಳಿಗೆ ಬೆಂಕಿ ಹಾಕಿ, ಅರ್ಧಂಬರ್ಧ ಬೆಂದ ಶವಗಳನ್ನು ನದಿಗೆ ಎಸೆಯುತ್ತಿದ್ದರು. ನದಿ ತೀರದಲ್ಲಿ ಹೊಗೆಯನ್ನು ಕಂಡು ಹತ್ತಿರದ ಗ್ರಾಮದ ಜನರು ಅಲ್ಲಿಗೆ ಓಡಿ ಬಂದರು. ಅವರನ್ನು ಕಂಡು ಸೈನಿಕರು ಪರಾರಿಯಾದರು. ಗ್ರಾಮಸ್ಥರು ಶವದ ಅಳಿದುಳಿದ ಭಾಗಗಳನ್ನು ಗೌರವದಿಂದ ಸಂಗ್ರಹಿಸಿದರು.
ಜನತೆಯ ಶೋಕ-ಆಕ್ರೋಶ
ನೇಣು ಶಿಕ್ಷೆ ಜಾರಿಯಾದ ಬಗ್ಗೆ ಲಾಹೋರ್ ಮತ್ತು ಪಂಜಾಬಿನ ಇತರ ನಗರಗಳಲ್ಲಿ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ರಾತ್ರಿಯಿಡೀ ಯುವಜನರು ಘೋಷಣೆಗಳನ್ನು ಕೂಗುತ್ತಾ, ಮೆರವಣೆಗೆ ಮಾಡಿದರು. ಭಗತ್‍ಸಿಂಗ್‍ರ ಕನಸು ನನಸಾಗಿತ್ತು. ಜನ ಮತ್ತೆ ಸಾವಿರಸಾವಿರ ಸಂಖ್ಯೆಯಲ್ಲಿ ಬೀದಿಗಿಳಿದಿದ್ದರು. “ಇಂಕ್ವಿಲಾಬ್ ಜಿಂದಾಬಾದ್” ಎಂದು ಘೋಷಿಸುತ್ತಿದ್ದ ಅವರ ಕಂಠಗಳನ್ನು ಬ್ರಿಟಿಷರು ಸ್ತಬ್ಧಗೊಳಿಸಿದ್ದರು. ಆದರೆ ಅದೇ ಘೋಷಣೆಯೀಗ ಸಾವಿರಾರು ಕಂಠಗಳಲ್ಲಿ ಘೋಷಿತವಾಗುತ್ತಿತ್ತು. ಲಾಹೋರಿನಲ್ಲಿ ಹರತಾಳವಿತ್ತು. ಇಡೀ ನಗರದ ಶಾಲಾಕಾಲೇಜು, ಅಂಗಡಿ, ಎಲ್ಲವೂ ಮುಚ್ಚಿದ್ದವು. ಮಧ್ಯಾಹ್ನವಾಗುವಷ್ಟರಲ್ಲಿ ಬ್ರಿಟಿಷರು ಇನ್ನೊಂದು ಸುಳ್ಳನ್ನು ಹೇಳಿದರು. ಜಿಲ್ಲಾ ಮ್ಯಾಜಿಸ್ಟ್ರೇಟ್ ಆ ಮೂವರ ಅಂತ್ಯಕ್ರಿಯೆಯನ್ನು ಸಟ್ಲೆಜ್ ನದಿಯ ತೀರದಲ್ಲಿ ಹಿಂದೂ ಮತ್ತು ಸಿಖ್ ವಿಧಗಳಿಗನುಗುಣವಾಗಿ ನಡೆಸಲಾಯಿತು ಎಂದು ಘೋಷಿಸಿದ. ಜನ ಸಿಟ್ಟಿಗೆದ್ದರು.
ನೀಲಾಗೋಮ್‍ಬಾದ್‍ನಿಂದ ಮೆರವಣಿಗೆ ಹೊರಟಿತು. ಸಾವಿರಾರು ಹಿಂದು-ಮುಸ್ಲಿಮ್-ಸಿಖ್ಖರು ಮೂರು ಮೈಲಿ ಉದ್ದದ ಮೆರವಣಿಗೆಯಲ್ಲಿ ಭಾಗವಹಿಸಿದರು. ಬಹಳಷ್ಟು ಪುರುಷರು ಕಪ್ಪು ಪಟ್ಟಿಗಳನ್ನು, ಮಹಿಳೆಯರು ಕಪ್ಪು ಸೀರೆಗಳನ್ನು ಉಟ್ಟಿದ್ದರು. ಇಡೀ ಪ್ರದೇಶ ಕಪ್ಪು ಬಾವುಟಗಳಿಂದ ತುಂಬಿ ಹೋಗಿತ್ತು. ಅನಾರ್ಕಲಿ ಬಜಾರ್‍ಗೆ ಭಗತ್‍ಸಿಂಗ್‍ರ ಸೋದರಿಯರು ಆ ಮೂವರ ದೇಹಗಳ ಉಳಿದ ಭಾಗಗಳನ್ನು ತಂದಿದ್ದರು. 3 ಘಂಟೆಗಳ ನಂತರ ಹೂವಿನಿಂದ ಅಲಂಕೃತಗೊಂಡ ಮೂರು ಶವ ಪೆಟ್ಟಿಗೆಗಳನ್ನು ಹೊತ್ತ ಮೆರವಣಿಗೆ ಮುಂದೆ ಸಾಗಿತು. ಜನತೆ ಬಹಿರಂಗವಾಗಿ ಅತ್ತರು. “ಭಗತ್‍ಸಿಂಗ್, ಸುಖದೇವ್ ರಾಜಗುರು ಅಮರರಾಗಲಿ” ಎಂದು ಘೋಷಣೆಗಳನ್ನು ಕೂಗುತ್ತಲೇ ರಾವಿ ನದಿ ತೀರದಲ್ಲಿ ಆ ಮೂವರು ಯೋಧರಿಗೆ ಅಂತಿಮ ನಮನಗಳನ್ನು ಸಲ್ಲಿಸಿದರು. ಭಗತ್‍ಸಿಂಗ್, ಸುಖದೇವ್ ರಾಜಗುರು ತಮ್ಮ ಮನೆಯ ಮಕ್ಕಳೇನೋ, ತಮ್ಮ ಅಣ್ಣನೊ, ತಮ್ಮನೋ ಎಂಬಂತೆ ಜನ ರೋಧಿಸಿದರು. ಬ್ರಿಟಿಷ್ ಸರ್ಕಾರ ಇವರನ್ನು ಗಲ್ಗಂಬಕ್ಕೆ ಕಾನೂನುಬಾಹಿರವಾಗಿ ಏರಿಸಿದೆ ಮತ್ತು ಅವರ ಅಂತ್ಯಕ್ರಿಯೆ ನಡೆಸಿದೆ ಎಂಬುದನ್ನು ಖಂಡಿಸಿ ಲಾಹೋರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಇಡೀ ರಾಷ್ಟ್ರವೇ ಶೋಕಾಚರಣೆ ಕೈಗೊಂಡಿತು. ಬ್ರಿಟಿಷರು ತಮ್ಮ ಮನೆಯೊಳಗೇ ಉಳಿದರು. ಹೊರಗೆ ಬಂದರೆ ಶೋಕತಪ್ತ ಆಕ್ರೋಶಗೊಂಡ ಜನತೆಯಿಂದ ತಮಗೆ ಉಳಿಗಾಲವಿಲ್ಲವೆಂದು ಅವರು ಅರಿತುಕೊಂಡಿದ್ದರು. ಗಾಂಧೀಜಿಯವರ ಬಗ್ಗೆಯೂ ಜನ ಆಕ್ರೋಶಗೊಂಡಿದ್ದರು.
ಕಾಂಗ್ರೆಸ್‍ನ ಅಧಿವೇಶನದಲ್ಲೂ ಮಡುಗಟ್ಟಿದ ಶೋಕ
1931ರ ಮಾರ್ಚ್ 31 ರಂದು ಕರಾಚಿಯಲ್ಲಿ ನಡೆದ ಅಧಿವೇಶನದಲ್ಲಿ ದುಃಖ ಮಡುಗಟ್ಟಿತ್ತು, ಮುಖ್ಯವಾಗಿ ಯುವ ಕಾಂಗ್ರೆಸಿಗರಲ್ಲಿ. ಒಂದೆಡೆ ಶೋಕ, ಇನ್ನೊಂದೆಡೆ ಅಸಮಾಧಾನ ಕಾಣಿಸಿಕೊಂಡಿತ್ತು. ನೇತಾಜಿಯವರೂ ಸಹ ‘ಈ ಮೂವರನ್ನು ಉಳಿಸಲು ಅವಶ್ಯವಿದ್ದರೆ ಒಪ್ಪಂದವನ್ನು ಮುರಿಯಿರಿ,” ಎಂದು ಮನವಿ ಮಾಡಿಕೊಂಡಿದ್ದರು. ಕಾಂಗ್ರೆಸ್‍ನ ಕೆಲವು ನಾಯಕರು ಸುಳ್ಳು ವಿವರಣೆ ನೀಡಿ ಸದಸ್ಯರನ್ನು ಒಪ್ಪಿಸಲು ಪ್ರಯತ್ನಿಸಿದರು. “ಗಾಂಧೀಜಿ ಏಕೆ ಆ ಮೂವರನ್ನು ಉಳಿಸಲು ಪ್ರಯತ್ನಿಸಲಿಲ್ಲ,” ಎಂಬುದು ಯುವಕಾಂಗ್ರೆಸ್ಸಿಗರಲ್ಲಿ ಮುಖ್ಯ ಪ್ರಶ್ನೆಯಾಗಿತ್ತು. ಅಲ್ಲಿ “ಭಗತ್‍ಸಿಂಗ್ ಅಮರವಾಗಲಿ”, “ಇಂಕ್ವಿಲಾಬ್ ಜಿಂದಾಬಾದ್” ಎಂಬ ಘೋಷಣೆಗಳು ಕೇಳಿಬಂದರೆ ಆಶ್ಚರ್ಯವೇನು! ಭಗತ್‍ಸಿಂಗ್‍ರ ಬಲಿದಾನದ ಉದ್ದೇಶ ಇದೇ ಆಗಿತ್ತಲವೇ? ಸಾಮಾನ್ಯವಾಗಿ ಗಾಂಧೀಜಿಯವರ ಬಗೆಗಿನ ಅಭಿಮಾನದಿಂದಾಗಿ ಇಷ್ಟವಿಲ್ಲದಿದ್ದರೂ ಅವರ ಕಾರ್ಯಗಳಿಗೆ ಬೆಂಬಲ ನೀಡುವಂತಹವರೂ ಸಹ ಅಂದು ಅವರ ವಾದವನ್ನು ಧಿಕ್ಕರಿಸುವ ಮನಃಸ್ಥಿಯಲ್ಲಿದ್ದರು. ಭಗತ್‍ಸಿಂಗ್‍ರವರು ಏನೇ ಮಾಡಿದ್ದರೂ, ಯಾವುದೇ ವಿಧಾನ ಬಳಸಿದ್ದರೂ ಅದು ದೇಶದ ವಿಮೋಚನೆಗಾಗಿಯೆ ಹೊರತು ಇನ್ನಾವುದೇ ಸ್ವಂತ ಹಿತಾಸಕ್ತಿಯಿಂದಲ್ಲ ಎಂಬುದು ಬಹುತೇಕ ಜನರ ಅಭಿಪ್ರಾಯವಾಗಿತ್ತು. ಲಾಲ್‍ಬಹದ್ದೂರ್‍ಶಾಸ್ತ್ರಿಯವರೇ, “ಗಾಂಧೀಜಿಯವರ ಅಹಿಂಸಾವಾದವನ್ನು ಮೊದಲಿನಿಂದಲೂ ಅನುಸರಿಸಿದ ನನಗೇ ‘ನಾವೆಲ್ಲಾ ಯಾವುದೇ ಸ್ವರೂಪದ ಹಿಂಸೆಗೆ ವಿರುದ್ಧವೆಂದು ಗೊತ್ತುವಳಿಯಲ್ಲಿ ಮಂಡಿಸಿರುವುದು’ ಸದನದ ಘನತೆ ಮತ್ತು ಉದಾತ್ತತೆಗೆ ಕುಂದುಂಟು ಮಾಡುವಂತಹದ್ದು ಎನಿಸಿದೆ,” ಎಂದರು.
ದೇಶವಿಡೀ ವ್ಯಾಪಿಸಿದ ಸ್ಫೂರ್ತಿಯ ಸಂಕೇತ
ನೇತಾಜಿಯವರು ಹೇಳಿದಂತೆ ಭಗತ್‍ಸಿಂಗ್‍ರು ಇಡೀ ದೇಶದ ಯುವಜನತೆಯ ಸ್ಫೂರ್ತಿಯ ಸಂಕೇತವಾಗಿಬಿಟ್ಟಿದ್ದರು. ಆ ಸ್ಫೂರ್ತಿ ಹೊತ್ತಿಸಿದ ಜ್ವಾಲೆ ಎಂದಿಗೂ ಆರಿಹೋಗದಂತಹ ಘಟ್ಟವನ್ನು ತಲುಪಿತ್ತು. ಜನತೆ ಭಗತ್‍ಸಿಂಗ್‍ರ ಹಾದಿಯನ್ನು ತುಳಿಯಲು ನಿರ್ಧರಿಸಿದ್ದರು. ನಂತರದ ದಿನಗಳಲ್ಲಿ ನಡೆದ ರೈತ-ಕಾರ್ಮಿಕರ ಹೋರಾಟಗಳು, ವಿದ್ಯಾರ್ಥಿ-ಯುವಜನರ ಚಳುವಳಿಗಳು, ಎಲ್ಲಕ್ಕೂ ಮಿಗಿಲಾಗಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬ್ರಿಟಿಷರ ವಿರುದ್ಧ ಬಳಸಲಾದ ವಿಧಾನಗಳು, ಅಷ್ಟೇ ಏಕೆ ನೇತಾಜಿಯವರು ಭಾರತ ಬಿಟ್ಟು ಐ ಎನ್ ಎ ಬೆಳೆಸಿ, ಬಲಿಷ್ಟಗೊಳಿಸಿ, ಬ್ರಿಟಿಷರ ಮೇಲೆ ದಂಡೆತ್ತಿ ಬಂದದ್ದು – ಇವೆಲ್ಲವೂ ಆ ಬಲಿದಾನದ ಪರಿಣಾಮವೇ ಎಂದರೆ ತಪ್ಪಾಗಲಾರದೇನೋ! ಭಗತ್‍ಸಿಂಗ್‍ರ ಬಲಿದಾನದ ನಂತರ ಅವರೇ ಆಶಿಸಿದಂತೆ ಜನತೆ ನೂರ್ಮಡಿಯಾಗಿ ಹೋರಾಟಕ್ಕೆ ಧುಮುಕಿತು. ಅವರ ತ್ಯಾಗದಿಂದಾಗಿ ಭಾರತ ಸ್ವಾತಂತ್ರ್ಯ ಸಂಗ್ರಾಮ ತ್ವರಿತಗೊಂಡಿತು ಎಂಬುದು ನಿರ್ವಿವಾದ. ಆದ್ದರಿಂದಲೇ ಬ್ರಿಟಿಷರು ಭಾರತವನ್ನು ಬಿಟ್ಟು ಓಡಿಹೋಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಯಿತು ಎಂಬುದು ನಿಸ್ಸಂದೇಹ.
ಧೀರ ಯೋಧನಿಗೆ ನಮ್ಮ ನಮನ
ಆದರೆ ಭಗತ್‍ಸಿಂಗ್‍ರ ಕನಸಿನ್ನೂ ನನಸಾಗಿಲ್ಲ. ಎಲ್ಲರಿಗೂ ಶಿಕ್ಷಣ, ಉದ್ಯೋಗ, ಆರೋಗ್ಯ, ವಸತಿ, ಗೌರವಯುತವಾದ ಜೀವನ ಇನ್ನೂ ಜಾರಿಯಾಗಿಲ್ಲ. ಸೋದರತಾ ಭಾವನೆಯಿಂದ ದೇಶಬಾಂಧವರೆಲ್ಲಾ ಅನ್ಯೋನ್ಯವಾಗಿ ಬದುಕಬೇಕು ಎಂಬುದು ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಈ ದೇಶ ಸಮೃದ್ಧಿ- ಪ್ರಗತಿಯನ್ನು ಕಾಣಬೇಕು, ನಿಜವಾದ ಸ್ವಾತಂತ್ರ್ಯ, ಸಮಾನತೆ ಮೂಡಬೇಕು, ಮಹಿಳಾ ವಿಮೋಚನೆಯಾಗಬೇಕು, ಜನತೆ ವೈಜ್ಞಾನಿಕವಾಗಿ, ವಿಶಾಲ ಮನಸ್ಸಿನಿಂದ ಆಲೋಚಿಸಬೇಕು ಎನ್ನುವುದೆಲ್ಲಾ ಇನ್ನೂ ವಾಸ್ತವವಾಗಿಲ್ಲ. ಇವೆಲ್ಲವನ್ನೂ ಸಾಧಿಸಲು ದೇಶದಲ್ಲಿ ಕಾರ್ಮಿಕರ-ರೈತರ-ದುಡಿಯುವ ಜನರ ಕೈಯಲ್ಲಿ ಅಧಿಕಾರವಿರಬೇಕು, ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳುವ ಜನತೆಯ ಸರ್ಕಾರವಿರಬೇಕು ಎನ್ನುವ ಕನಸು ಕನಸಾಗಿಯೇ ಉಳಿದಿದೆ. ಈ ಕನಸನ್ನು ಸಾಕಾರಗೊಳಿಸಲು ನಮ್ಮ ಪ್ರಯತ್ನವನ್ನು ನಾವು ಮಾಡುತ್ತೇವೆಂದು ಕಂಕಣ ತೊಟ್ಟಾಗಲೇ ಭಗತ್‍ಸಿಂಗ್‍ರವರಿಗೆ ನಿಜವಾದ ನಮನ ಸಲ್ಲಿಸಿದಂತೆ.
ನಾವು ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳದಿರುವಂತೆ ಜಾಗರೂಕರಾಗಿರಲು, ಅವರ ಕನಸನ್ನು, ವಿಚಾರಗಳನ್ನು ಎಲ್ಲೆಡೆ ಹರಡಲು, ಅನುಸರಿಸಲು, ಅವರು ಯಾವಾಗಲೂ ನಮ್ಮ ಮನಃಪಟಲದಲ್ಲಿ ಮಾಸದ ಅದ್ಭುತ ಚಿತ್ರವಾಗಿ ನಿಲ್ಲಲಿ. ನಮ್ಮ ನಿದ್ರಿಸುವ ಮನಗಳನ್ನು ಬಡಿದೆಬ್ಬಿಸುವ ಚಿರಂತನ ಚೇತನವಾಗಲಿ!!
- ಸುಧಾ ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ