Pages

ವ್ಯಕ್ತಿ ಪರಿಚಯ - ಮೇರಿ ಕ್ಯೂರಿ


ಮಹಿಳಾ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು ಮೇರಿ ಕ್ಯೂರಿ. ಸ್ತ್ರೀಯರು ಪುರುಷರಿಗಿಂತ ಎಲ್ಲದರಲ್ಲೂ ಕೀಳು, ಎರಡನೆಯ ದರ್ಜೆ ಪ್ರಜೆಗಳು ಮುಂತಾದ ನಂಬಿಕೆ ಇರುವಂತಹ ಜಗತ್ತಿನಲ್ಲಿ ಮೇರಿ ಕ್ಯೂರಿ ‘ಅದೆಲ್ಲವೂ ಸುಳ್ಳು, ಸ್ತ್ರೀಯರು ಪುರುಷರಿಗಿಂತ ಯಾವುದರಲ್ಲೂ ಕೀಳಲ್ಲ’ ಎಂಬುದನ್ನು ಸಾಬೀತು ಪಡಿಸಿದರು. ಅಷ್ಟೇ ಅಲ್ಲದೆ ಎರಡು ವಿಜ್ಞಾನ  ಕ್ಷೇತ್ರಗಳಲ್ಲಿ ನೊಬೆಲ್ ಪಾರಿತೋಷಕವನ್ನು ಗಳಿಸಿದ ಪ್ರಥಮ ವ್ಯಕ್ತಿಯಾಗಿ ಮಹಾನತೆಯನ್ನು ಮೆರೆದರು.
ಇಂತಹ ಅಪರೂಪದ ವ್ಯಕ್ತಿ ಜನಿಸಿದ್ದು, ಪೋಲೆಂಡಿನ ಒಂದು ಚಿಕ್ಕ  ಹಳ್ಳಿಯಲ್ಲಿ ನವೆಂಬರ್ 7, 1867 ರಲ್ಲಿ. ಚಿಕ್ಕಂದಿನಿಂದಲೂ ಆಕೆ ಮಿತಭಾಷಿಣಿ, ಮೃದುಹೃದಯಿ. ಬಹಳ ಕಷ್ಟಗಳನ್ನು ಅನುಭವಿಸಿಯೇ ಆಕೆ ಓದಿದಳು. ಹೆಚ್ಚಿನ ಓದಿಗಾಗಿ ಪ್ಯಾರಿಸ್ಸಿಗೆ ತೆರಳಿದ ಆಕೆ ಒಂದು ಚಿಕ್ಕ ಕೋಣೆಯಲ್ಲಿ ಯಾವುದೇ ಕನಿಷ್ಟ ಸೌಕರ್ಯಗಳೂ ಇರದೆ, ಒಣ ಬ್ರೆಡ್ಡನ್ನು ತಿಂದು, ಕೆಲವೊಮ್ಮೆ ಅದೂ ಇಲ್ಲದೆ ನೀರು ಕುಡಿದು ಮಲಗುತ್ತಿದ್ದರು. ಆದರೆ ಓದಿನ ಬಗ್ಗೆ ಮಾತ್ರ ಆಕೆಗೆ ಅತ್ಯಂತ ಆಸಕ್ತಿ. ಆಕೆ ನಿದ್ರಾಹಾರಗಳ ಬಗ್ಗೆ, ಉಡುಗೆ-ತೊಡುಗೆಗಳ ಬಗ್ಗೆ ಆಸಕ್ತಿ ವಹಿಸಲೇ ಇಲ್ಲ. ನೊಬೆಲ್ ಪಾರಿತೋಷಕವನ್ನು ಸ್ವೀಕರಿಸಲು ಹೋಗಬೇಕಾದ ಸಂದರ್ಭದಲ್ಲಿ ಅಲ್ಲಿ ಹಾಕಿಕೊಳ್ಳಲು ಒಂದು ಗೌನೂ ಇರಲಿಲ್ಲ ಎಂದರೆ ಆಕೆಯ ಸರಳ ಜೀವನದ ಬಗ್ಗೆ ಅರಿಯಬಹುದು.
ಪ್ಯಾರಿಸ್‍ನಲ್ಲಿ ಆಕೆಗೆ ಪರಿಚಯವಾದ ವ್ಯಕ್ತಿ ಪಿಯರಿ ಕ್ಯೂರಿ. ಆತ ಕೂಡ  ವಿಜ್ಞಾನಿ. ಮೇರಿಯ ಉತ್ತಮ ಸ್ನೇಹಿತ. ಸ್ನೇಹ ಪ್ರೇಮಕ್ಕೆ ತಿರುಗಿ ಇಬ್ಬರ ವಿವಾಹವಾಯಿತು. ವಿವಾಹವಾದ ಸಂಜೆಯೇ ಇಬ್ಬರೂ ಪ್ರಯೋಗಾಲಯಕ್ಕೆ ಮರಳಿದರು ಎಂದರೆ ಅವರ ಸಂಶೋಧನೆಯ ತೀವ್ರತೆ ಎಷ್ಟಿತ್ತೆಂದು ಊಹಿಸಬಹುದು.
ರೇಡಿಯಂ ಅನ್ನು ಕಂಡುಹಿಡಿದಾಗ ಅತ್ಯಂತ ಸಂತೋಷವನ್ನು ಅನುಭವಿಸಿದ ಅವರು ಅದನ್ನು ಪೇಟೆಂಟ್ ಮಾಡಲು (ಅಂದರೆ ಅದರ ಹಕ್ಕುಸ್ವಾಮ್ಯ ಪಡೆಯಲು) ಹೋಗಲಿಲ್ಲ. ಮೇರಿ ಕ್ಯೂರಿ ಆ ಬಗ್ಗೆ ಹೇಳಿದ್ದು ಹೀಗೆ, “ರೇಡಿಯಂ ವಿಜ್ಞಾನದ ಆವಿಷ್ಕಾರ. ಅದನ್ನು ನಾನು ಕಂಡುಹಿಡಿದೆ ಎಂಬುದು ಆಕಸ್ಮಿಕ. ಅದನ್ನು  ಪೇಟೆಂಟ್ ಮಾಡಿಕೊಳ್ಳಲಾರೆ.”
ನಂತರದ ದಿನಗಳಲ್ಲಿ ಹೆಚ್ಚಿನ ಪ್ರಯೋಗಕ್ಕೆ ರೇಡಿಯಂ ಅನ್ನು ಕೊಳ್ಳಲು ಮೇರಿಯವರ ಬಳಿ ಹಣವಿರಲಿಲ್ಲ ಎಂದಾಗ ಆಕೆಯ ಮಹಾನತೆಯ ಅರಿವಾಗುತ್ತದೆ. ಏಕೆಂದರೆ ಹಕ್ಕುಸ್ವಾಮ್ಯ ಪಡೆದಿದ್ದರೆ ಆಕೆಗೆ ಮಿಲಿಯಾಂತರ ಡಾಲರ್‍ಗಳು ಸಿಗುತ್ತಿದ್ದವು.
ಒಂದು ಸಣ್ಣ ಪ್ರಯೋಗಾಲಯದಲ್ಲಿ ಆಕೆ ತನ್ನ ಪ್ರಯೋಗಗಳನ್ನು ಮುಂದುವರೆಸಿದರು. 1911 ರಲ್ಲಿ ಆಕೆಗೆ ಮತ್ತೊಂದು ನೊಬೆಲ್ ಪ್ರಶಸ್ತಿ ಸಿಕ್ಕಿತು. ಅಂದಿನ ದಿನವನ್ನು ಮಹಿಳೆಯರು ತಮ್ಮ ವಿಜಯದ ದಿನ ಎಂದು ಆಚರಿಸಿಕೊಳ್ಳಬಹುದು. ಏಕೆಂದರೆ ಇಡೀ ವಿಶ್ವದಲ್ಲಿ ಯಾರೂ ಮಾಡದ ಸಾಧನೆಯನ್ನು ಆಕೆ ಮಾಡಿದ್ದರು. ಇಷ್ಟಾದರೂ ಆಕೆ ಎಲ್ಲೂ ಪ್ರಚಾರಕ್ಕೆ ಸಿಗುತ್ತಿರಲಿಲ್ಲ.
ಪತಿ ಅಪಘಾತಕ್ಕೀಡಾಗಿ ಮರಣ ಹೊಂದಿದಾಗ ಮೇರಿ ತೀವ್ರ ಆಘಾತಕ್ಕೆ ಒಳಗಾದರು. ಪತಿ ಅವರಿಗೆ ಜೀವನದ ಸಂಗಾತಿಯೂ ಹೌದು, ವಿಜ್ಞಾನದ ಸಂಗಾತಿಯೂ ಹೌದು.ಆದರೂ ಧೃತಿಗೆಡದ ಮೇರಿ ಪ್ರಯೋಗ, ಕುಟುಂಬ, ಮಕ್ಕಳು, ಎಲ್ಲವನ್ನೂ ನಿಭಾಯಿಸಿದರು.
ಹೆಚ್ಚು ಸೌಲಭ್ಯಗಳಿಲ್ಲದ ಪ್ರಯೋಗಾಲಯ, ವಿಕಿರಣಗಳ ದಾಳಿ ಅವರ ಆರೋಗ್ಯವನ್ನು ಹದಗೆಡಿಸಿತ್ತು. ಅಂತಿಮವಾಗಿ ಅದೇ ಅವರ ಸಾವಿಗೆ ಕೂಡ ಕಾರಣವಾಯಿತು. ಜುಲೈ 4, 1934ರಂದು ಮರಣಹೊಂದಿದರು.
ಅವರಿಗೆ ದೊರೆತ ಬಹುಮಾನಗಳು, ಬಿರುದುಗಳು ಅಪಾರ. ಮೇರಿಯವರು ಇದ್ದ ಕಾಲದಲ್ಲಿ ಫ್ರಾನ್ಸ್ ಬಲಿಷ್ಟ ಪುರುಷ ಪ್ರಧಾನ ಸಮಾಜವನ್ನು ಹೊಂದಿತ್ತು ಅಂದರೆ ಸ್ತ್ರೀಯರಿಗೆ ಗೌರವ, ಸ್ಥಾನಮಾನ ಇರಲಿಲ್ಲ. ಅಂತಹ ಸಮಾಜಕ್ಕೆ ಸೆಡ್ಡು ಹೊಡೆದು ತನ್ನನ್ನೇ ತಾನು ಸ್ಥಾಪಿಸಿಕೊಂಡ ಮೇರಿ ಕ್ಯೂರಿಯವರ ಹೆಸರು ಅಜರಾಮರ. ಅವರ ಹೆಸರು ಸಾಧನೆಗೊಂದು ಪರ್ಯಾಯ ಪದ.
   -  ದೀಪಶ್ರೀ ಜೆ         

ಕಾಮೆಂಟ್‌ಗಳಿಲ್ಲ: