Pages

ಲೇಖನ - ಅಮೆರಿಕದ ವೇಷ ಧರಿಸುವ ಮುನ್ನ.....



ನದಿಯಲ್ಲಿ ವಾಸವಿದ್ದ ಬೃಹತ್ ಮೊಸಳೆಯು ಸಿಂಹದ ಜೊತೆ ಗೆಳೆತನ ಮಾಡಿಕೊಂಡು ನಿಧಾನವಾಗಿ ಸಲಿಗೆ ಬೆಳೆಸಿಕೊಂಡಿತು. ನದಿಯಲ್ಲಿ ಏನೆಲ್ಲ ಇರುತ್ತೆ? ಹೇಗೆಲ್ಲ ಬದುಕಬಹುದು? ಯಾವುದೆಲ್ಲ ಪ್ರಾಣಿ ತಿನ್ನಬಹುದು ಎಂದೆಲ್ಲ ಅದಕ್ಕೆ ಕುತೂಹಲ ಮೂಡಿಸಿತು.'ನೀನು ಕೂಡ ಮೊಸಳೆಯಾಗಿದ್ದರೆ, ಎಷ್ಟು ಚೆನ್ನಾಗಿರುತಿತ್ತು. ನನ್ನಂತೆಯೇ ನದಿ ಪೂರ್ತಿ ಈಜಾಡಿ, ಮನಸ್ಸಿಗೆ ಬಂದದ್ದು ತಿಂದು, ಸತ್ತಂತೆ ಗಾಢನಿದ್ರೆಗೆ ಜಾರುತ್ತಿದ್ದೆ' ಎಂದು ಪ್ರಚೋದಿಸಿತು. "ಏನೂ ಮಾಡೋದು ನನಗೆ ಅಂತಹ ಅದೃಷ್ಟ ಇಲ್ಲವೇ' ಎಂದು ಹೇಳಿು ಸುಮ್ಮನಾಯಿತು. ಇದಕ್ಕೆ ಫಕ್ಕನೇ ಉತ್ತರಿಸಿದ ಮೊಸಳೆ, "ನೀನು ಮೊಸಳೆಯಾಗಿ ಹುಟ್ಟದಿದ್ದರೇನಂತೆ, ಮೊಸಳೆಯ ವೇಷ ಧರಿಸಿಕೊಂಡು ನದಿಗೆ ಇಳಿ. ನನ್ನೊಂದಿಗೆ ವಿಹರಿಸು. ನನ್ನಂತೆಯೇ ಬದುಕು" ಎಂದು ಹುರಿದುಂಬಿಸಿತು. ಬಾಹ್ಯ ವೇಷ ಮೊಸಳೆಯದ್ದಾಗಿದ್ದರೂ ಆಂತಕರಿವಾಗಿ ಅದು ಸಿಂಹ. ನೀರಿನಲ್ಲಿ ಈಜಾಡಿತಾದರೂ ಹೆಚ್ಚು ಹೊತ್ತು ಅಲ್ಲಿ ಇರಲು ಆಗಲಿಲ್ಲ. ಮೀನು ಸೇರಿದಂತೆ ಜಲಚರಗಳನ್ನು ತಿಂದಿತಾದರೂ ಅದಕ್ಕೆ ಪಚನವಾಗಲಿಲ್ಲ. ನೀರಿನಲ್ಲಿ ಉಸಿರುಗಟ್ಟಿತು. ಬದುಕು ಅಸಹನೀಯ ಅನ್ನಿಸಿತು. ಇತರೆ ಮೊಸಳೆಗಳು ಯಾವುದೇ ಕ್ಷಣ ದಾಳಿ ಮಾಡುವಂತೆ ಗೋಚರಿಸಿದವು. ಅಪಾಯದ ಮುನ್ಸೂಚನೆಗಳು ಸಿಕ್ಕವು. ಮೊಸಳೆ ಸಹವಾಸ ಸಾಕು ಅನ್ನಿಸಿತು. ನನ್ನ ಪಾಡಿಗೆ ನಾನು ಇರುತ್ತೀನಿ-ನಿನ್ನ ಪಾಡಿಗೆ ನೀನಿರು. ನಾನು ಇಲ್ಲೇ ಚೆಂದ-ನೀನು ಅಲ್ಲೇ ಚೆಂದ. ಸ್ನೇಹ-ಸಂಪರ್ಕವಿರಲಿ ಎನ್ನುತ್ತ ಸಿಂಹ ತನ್ನ ಹಾದಿ ಹಿಡಿಯಿತು.

ಕೆಲ ವರ್ಷಗಳ ಹಿಂದೆ ಹೊಳೆದಿದ್ದ ಈ ಕತೆ ಯಾಕೋ ಇತ್ತೀಚಿನ ದಿನಗಳಲ್ಲಿ ಮತ್ತೆ ಕಾಡತೊಡಗಿದೆ. ಅದರಲ್ಲೂ ಭಾರತ ತನ್ನ ನೈಜತೆ, ಜೀವಸತ್ವ ಮತ್ತು ಜೀವನಶೈಲಿ ಕಳೆದುಕೊಂಡು ಬೇರೆಯದ್ದೇ ಸ್ವರೂಪ ಪಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಈ ಕತೆ ಹೆಚ್ಚು ಪ್ರಸ್ತುತ ಅನ್ನಿಸತೊಡಗಿದೆ. ಸ್ವಾತಂತ್ರ್ಯ ಗಳಿಸಿ 70 ವರ್ಷಗಳಾದರೂ ಇನ್ನೂ ಸರಿಯಾಗಿ ಕಣ್ತೆರೆಯದೇ ಒಂದೊಂದೇ ಅಂಬೆಗಾಲಿಡುತ್ತಿರುವ ಭಾರತದ ಅಂತಃಸತ್ವವನ್ನೇ ಬದಲಿಸಿ ದಿಢೀರ್‍ನೇ ಅಮೆರಿಕದ ವೇಷ ಹಾಕುವ ಯತ್ನ ನಡೆದಿರುವಾಗ, ಮೊಸಳೆ ಮತ್ತು ಸಿಂಹ ನೆನಪಾಗುತ್ತಿವೆ. ತನ್ನ ಪಾಡಿಗೆ ತಾನಿದ್ದ ಸಿಂಹನನ್ನು ಪ್ರಚೋದಿಸಿದ್ದು ಅಲ್ಲದೇ ತನ್ನ ವೇಷವನ್ನು ಧರಿಸುವಂತೆ ಮಾಡಿದ ಮೊಸಳೆಯ ಉದ್ದೇಶವೇನಿತ್ತೋ ಗೊತ್ತಿಲ್ಲ. ಆದರೆ ಅಪಾಯವನ್ನರಿತ ಸಿಂಹ ಎಚ್ಚೆತ್ತುಕೊಂಡು ಹೊರಬಂತು. ಇಲ್ಲಿ ನನಗೆ ಮೊಸಳೆ ಅಮೆರಿಕದಂತೆ ಕಂಡರೆ, ಸಿಂಹ ಭಾರತದ ಪ್ರತಿರೂಪ.

ದೇಶದ ಇಂದಿನ ಪರಿಸ್ಥಿತಿಗೂ ಮತ್ತು ಈ ಕತೆಗೂ ಹೆಚ್ಚಿನ ವ್ಯತ್ಯಾಸವಿಲ್ಲ. ತನ್ನ ಪಾಡಿಗೆ ತಾನೂ ತನ್ನ ವ್ಯಾಪ್ತಿಯ ಕಾಡಿನಲ್ಲಿ ಸ್ನೇಹಿತರೊಂದಿಗೆ ಓಡಾಡಿಕೊಂಡು ಇದ್ದ ಸಿಂಹನಿಗೆ ದಿಢೀರ್‍ನೇ ಬದಲಾಗಲು ಸೂಚಿಸಿದರೆ, ಪರಿಸ್ಥಿತಿ ಏನಾಗಬೇಡ. ಇಲ್ಲಸಲ್ಲದ ಕಡಿವಾಣಗಳು ಹಾಕಿದರೆ, ಅದಕ್ಕೆ ಹೊಂದಾಣಿಕೆ ಮಾಡಿಕೊಳ್ಳುವುದಾದರೂ ಹೇಗೆ? ಮೊಸಳೆಯೇ ಶ್ರೇಷ್ಠ ಪ್ರಾಣಿ, ಅದರಂತೆಯೇ ಬದುಕಬೇಕೆಂದು ಒತ್ತಡ ಹೇರಿದರೆ, ಇದು ಮತ್ತೊಂದು ಜೀವನಶೈಲಿ ಮತ್ತ ಆಹಾರ ಪದ್ಧತಿಗೆ ಮಾಡುವ ಅಪಚಾರ ಅಲ್ಲವೇ?  ಮೊಸಳೆಯೇ ಆ ರೀತಿ ಬದುಕುವಾಗ, ವೇಷ ಧರಿಸಿಕೊಂಡು ಯಾಕೆ ಪ್ರಯತ್ನಿಸಬಾರದು ಎಂದು ಬಲವಂತ ಹೇರಿದರೆ, ಅದನ್ನು ಸಹಿಸಲು ಆದೀತೆ? ಈವರೆಗಿನ ಜೀವನ ಮಾಡಿದ್ದೆಲ್ಲವೂ ವ್ಯರ್ಥ. ಇನ್ಮೇಲಿನ ಜೀವನವೇ ಶ್ರೇಷ್ಠ ಎಂದು ಸರ್ವಾಧಿಕಾರಿಯಂತೆ ವರ್ತಿಸಿದರೆ, ಅದನ್ನು ಅನುಸರಿಸಲಾದೀತೆ?

ಶೇ 80ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಬಡವರು ಕ್ರೆಡಿಟ್ ಕಾರ್ಡು ಇರಲಿ, ಸರಿಯಾಗಿ ಒಂದು ಐಡಿ ಕಾರ್ಡು ಕೂಡ ಹೊಂದಿಲ್ಲ. ಕಾಯಂ ವಿಳಾಸವುಳ್ಳವರಿಗೆ ಮಾತ್ರವೇ ಚುನಾವಣೆ ಗುರುತಿನ ಚೀಟಿ ಸಿಗುತ್ತದೆ. ಆದರೆ ಅಲೆಮಾರಿಗಳಂತೆ ರಸ್ತೆ ಬದಿ, ರೈಲು-ಬಸ್ ನಿಲ್ದಾಣ, ಫ್ಲೈಓವರ್ ಕೆಳಗೆ, ಜೋಪಡಿಪಟ್ಟಿಯಲ್ಲಿ ಬದುಕುತ್ತಿರುವ ಲಕ್ಷಾಂತರ ಮಂದಿಗೆ ಐಡಿ ಕಾರ್ಡು ಹೋಗಲಿ, ನಾಳೆ ತಾವು ಎಲ್ಲಿರುತ್ತೇವೆ ಎಂಬುದು ಕೂಡ ನಿಖರವಾಗಿ ಗೊತ್ತಿರುವುದಿಲ್ಲ. ಒಂದು ಹೊತ್ತಿನ ಊಟ ಸಿಕ್ಕರೆ, 
ಇನ್ನೊಂದೆರಡು ದಿನ ಬದುಕುವ ಆಶಾಭಾವನೆ ಅವರ ಕಂಗಳಲ್ಲಿ ಮೊಳಕೆಯೊಡೆಯುತ್ತದೆ. ಇನ್ನೂ ಅವರ ಬಳಿ ಆಧಾರ್ ಕಾರ್ಡು ನಿರೀಕ್ಷಿಸುವುದಾದರೂ ಸಾಧ್ಯವೇ? ಆಧಾರ್ ಕಾರ್ಡು ಇಲ್ಲವೇ ಒಂದು ಹಿಡಿಯಷ್ಟು ಅಕ್ಕಿಯೂ ಸಿಗದ ಇಂದಿನ ಸಂದರ್ಭದಲ್ಲಿ ಅವರು ಎಂತಹ ಸ್ಥಿತಿಯಲ್ಲಿರಬಹುದು.

ಭಾರತಕ್ಕೆ ಹೋಲಿಸಿದರೆ, ಅಮೆರಿಕದ ಜನಸಂಖ್ಯೆ ಕಡಿಮೆ. ಅಲ್ಲಿ ಒಬ್ಬೊಬ್ಬ ನಟ, ನಟಿ ಮತ್ತು ಪ್ರಮುಖ ವ್ಯಕ್ತಿಗಳ ಬಂಗಲೆಗಳು ಮತ್ತು ಆವರಣ ಒಂದೆರಡು ಎಕರೆಗೂ ಕಡಿಮೆಯಿಲ್ಲ. ಶ್ರೀಮಂತರಲ್ಲದೇ ಅಲ್ಲಿಯೂ ಜನಸಾಮಾನ್ಯರು ಇದ್ದಾರೆಯಾದರೂ ಕಾರ್ಡು ಬಳಕೆ ಅಲ್ಲಿ ಅನಿವಾರ್ಯ. ಕೌಟಂಬಿಕ ಅಥವಾ ಆರ್ಥಿಕ ಸಮಸ್ಯೆಗಳು ನೂರು ಇದ್ದರೂ ಅಲ್ಲಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯ. ಯಾವುದೇ ಸಣ್ಣಪುಟ್ಟ ಅಪರಾಧ ಜರುಗಿದರೂ ಅಥವಾ ಅನಾಹುತ ಸಂಭವಿಸಿದರೂ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಬೇಗನೇ ಸ್ಪಂದಿಸುತ್ತದೆ. ಅಲ್ಲಿನ ಅತ್ಯಾಧುನಿಕ ಸೌಕರ್ಯಗಳ ನೆರವಿನಿಂದ ಮತ್ತು ಬೇರೆ ಬೇರೆ ಸ್ವರೂಪದ ಕಾರ್ಯಾಚರಣೆಯಿಂದ ಜನರನ್ನು ರಕ್ಷಿಸುವ, ಪರಿಸ್ಥಿತಿ ಸುಧಾರಿಸುವ ಪ್ರಯತ್ನ ನಡೆಯುತ್ತದೆ. ಅಲ್ಲಿನ ಹವಾಮಾನಕ್ಕೆ ಅನುಸಾರವಾಗಿ ಮಿತ ಮತ್ತು ಹಿತ ಆಹಾರ ಸವಿದು ಅವರು ಜೀವನ ಕಳೆಯುತ್ತಾರೆ. ಇಷ್ಟೆಲ್ಲ ಇದ್ದರೂ ಅಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕೊಂಚ ಹೆಚ್ಚೇ ಇದೆ. ಅದು ಕೂಡ ಗಮನಾರ್ಹ ಸಂಗತಿ.

ಭಾರತದ 125 ಕೋಟಿಗೂ ಮೀರಿರುವ ಜನಸಂಖ್ಯೆಯಲ್ಲಿ ಎಷ್ಟು ಜನರ ಬಳಿ ಚುನಾವಣೆ ಗುರುತಿನ ಚೀಟಿ ಲೆಕ್ಕ ಹಾಕಲಾಗಿದೆಯೇ? ಒಂದು ಸೆಕೆಂಡಿಗೆ ಸುಲಭವಾಗಿ ಲೆಕ್ಕವಿಡದಷ್ಟು ಮಕ್ಕಳಿಗೆಲ್ಲ ಆಧಾರ್ ಕಾರ್ಡು ಸಿಗುವದೇ? ಹೋಗಲಿ, ಸಂವಿಧಾನದ ಪ್ರಕಾರ, ಅವರಿಗೆ ಉಚಿತ ಶಿಕ್ಷಣ ಸಿಗುವುದು ಖಾತ್ರಿಯಿದೆಯೇ? ಒಂದು ವೇಳೆ ಖಾತ್ರಿಯಿದ್ದಿದರೆ, ಬಾಲಕಾರ್ಮಿಕ ಪದ್ಧತಿ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ. ಕಾನೂನು ಪ್ರಕಾರ, ನಿಷೇಧವಾಗಿದ್ದರೂ ಅದು ಅಕ್ರಮವಾಗಿ ಜಾರಿಯಲ್ಲಿ ಇರುತ್ತಿರಲಿಲ್ಲ. ಚಿಕ್ಕದಾದ ಗುಡಿಸಲು ಅಥವಾ ಕೋಣೆ ಸಿಕ್ಕರೆ ಸಾಕು, ಅಷ್ಟರಲ್ಲೇ ಮೂರು-ನಾಲ್ಕು ಕುಂಟುಂಬಗಳು ವಾಸಿಸುತ್ತವೆ. ಅಮೆರಿಕದ ನಟ,ನಟಿಯರು ವಾಸಿಸುವಂತೆ ಎಕರೆಗಟ್ಟಲೇ ಜಾಗ ಸಿಕ್ಕಬಿಟ್ಟರಂತೂ ಅಲ್ಲೊಂದು ಕೊಳಚೆ ಪ್ರದೇಶ ನಿರ್ಮಾಣವಾಗಿ ಬಿಡುತ್ತದೆ. ಇಲ್ಲಿ ಅನಾಹುತ ಸಂಭವಿಸಿದರೆ ಅಥವಾ ಪ್ರಾಣಾಪಾಯವಾದರೆ, ಪರಿಹಾರ ಧನಕ್ಕಾಗಿ ವರ್ಷಗಟ್ಟಲೇ ಕಾಯಬೇಕು. ಒಂದು ವೇಳೆ ಸಿಕ್ಕರೂ ಕಮಿಷನ್ ನೀಡಬೇಕು ಇಲ್ಲವೇ ಅದನ್ನೇ ಕಾಳಧನವೆಂದು ಕಾರ್ಯಾಚರಣೆ ನಡೆದಲ್ಲಿ, ಪುನಃ ಸಂಕಷ್ಟಕ್ಕೀಡಾಗಬೇಕು. ಇಲ್ಲಿ ಹಿತ, ಮಿತ ಆಹಾರವೆಲ್ಲಿ? ಒಂದು ತುತ್ತಿನ ಆಹಾರ ಮತ್ತು ಲೋಟದಷ್ಟು ಅಶುದ್ಧ ನೀರು ಸಿಕ್ಕರೆ ಸಾಕು ಜನರು ಬದುಕಿಬಿಡುತ್ತಾರೆ.

ಭಾರತವನ್ನು ಅಮೆರಿಕೀಕರಣ ಮಾಡುವ ಭರದಲ್ಲಿ ಈ ಬಡವರು ಕಾಣಸಿಗುತ್ತಿಲ್ಲ. ಕಾಣಸಿಕ್ಕರೂ ಅವರನ್ನು ಲೆಕ್ಕಕ್ಕೆ ಹಿಡಿಯುವುದಿಲ್ಲ. ಈಗ ಇರುವ ಮುಂದಿನ ಗುರಿ ಮಧ್ಯಮ ವರ್ಗ-ಮೇಲುಮಧ್ಯಮ ವರ್ಗ ಮತ್ತು ಶ್ರೀಮಂತರು. ಮಧ್ಯಮ ವರ್ಗದವರನ್ನು ಹೇಗೆ ಬೇಕಾದರೂ ಮಣಿಸಬಹುದು ಮತ್ತು ನಂಬಿಸಬಹುದು. ದೇಶಪ್ರೇಮದ ಹೆಸರಿನಲ್ಲಿ ತ್ಯಾಗ ಮಾಡುವಂತೆ ಪುಸಲಾಯಿಸಲೂಬಹುದು. ಅವರು ಅದಕ್ಕೆ ಸಿದ್ಧರಾಗಿಬಿಡುತ್ತಾರೆ. ಇನ್ನು ಶ್ರೀಮಂತರಂತೂ ಅವರಿಗೆ ಯಾವುದೇ ಗಡಿ ರೇಖೆಗಳೇ ಇಲ್ಲ. ಅವರ ಶಾಪಿಂಗ್, ವೆಕೇಷನ್, ಹನಿಮೂನ್ ಎಲ್ಲವೂ ವಿದೇಶದಲ್ಲೇ. ಅವರಿಗೆ ಅಮೆರಿಕ ಇನ್ನೂ ಆಪ್ತ.

ಬಡವರನ್ನು ಸುಧಾರಿಸಲು ಮತ್ತು ಬಡತನ ಹೋಗಲಾಡಿಸಲು ಹಲವಾರು ಉಪಾಯಗಳಿವೆ. ಅವುಗಳನ್ನು ಅನುಸರಿಸಿದರೆ, ಅಮೆರಿಕ ಮೀರಿ ಬೆಳೆಯಲು ದೇಶಕ್ಕೆ ಸಾಧ್ಯವಿದೆ. ಅದಕ್ಕೆ ಸಾಕಷ್ಟು ಅವಕಾಶವೂ ಇದೆ. ಸ್ವಾವಲಂಬಿ ದೇಶವಾಗಿ ಹೊರಹೊಮ್ಮಲು ಸಾಧ್ಯವಿದೆ. ಆದರೆ ಅದ್ಯಾವುದೂ ನಡೆಯುತ್ತಿಲ್ಲ.

ಮತ್ತೆ ಮೊಸಳೆ ಮತ್ತು ಸಿಂಹದ ಕತೆಗೆ ಬರುವುದಾದರೆ, ವೇಷ ಧರಿಸಿದ ಸಿಂಹ ಬೇಗನೇ ಎಚ್ಚೆತ್ತುಕೊಂಡು ಹೊರಬಂತು. ಒಂದು ವೇಳೆ ಸಿಂಹ ಹೊರಬಾರದಿದ್ದರೆ, ಪರಿಸ್ಥಿತಿ ಏನಾಗಬಹುದು? ಸಿಂಹ ಸಿಂಹವಾಗಿದ್ದರೆ, ಮೊಸಳೆಯಾಗುವುದು ಬೇಡ! 

   - ವಿಸ್ಮಯ್ 

ಕಾಮೆಂಟ್‌ಗಳಿಲ್ಲ: