Pages

ಕವನ : ಮೌನ - ಮಾತು



ಚಿನ್ನದಂತಹ ಮೌನ ಚಿಂತೆ ಹೇರುವ ಮೌನ
ಮುತ್ತಲು ಮುಳುಗುವುದು ಅಂತರಂಗದ ಗಾನ ||

ಮಿಡಿಮಿಡಿವ ಭಾವರಾಗಕೆ ನಿರ್ಭಾವ ಮೌನ ತಾಳವಲ್ಲ
ಎದೆಎದೆಯ ಬಯಕೆಗೆ ನಿಸ್ಸಾರ ಮೌನ ಉತ್ತರವಲ್ಲ
ಕುದಿಕುದಿವ ನೋವಿಗೆ ಒಣ ರಣಮೌನ ಮಳೆಯಲ್ಲ
ಮನಮನದ ಮಾತಿಗೆ ತೆಪ್ಪನೆ ಮೌನ ಭಾಷೆಯಲ್ಲ ||

ಬಾಳಕಡಲಿನ ಜೋಡಿಪಯಣಕೆ ಮೌನ ದೋಣಿಯಲ್ಲ
ಕಷ್ಟದಲೆಗೆ ಚದುರಿದ ದೋಣಿಗೆ ಮೌನ ಹರಿಗೋಲಲ್ಲ
ಕಿತ್ತು ಕೋಡಿ ಹರಿವ ನೋವಿಗೆ ಮೌನ ಕಟ್ಟೆಯಲ್ಲ
ಚಿನ್ನದಂತಹ ಮೌನ ಕುಡಿಯೆ ವಿಷವು ತಾನಾಗುವುದಲ್ಲ ||

ಬಾಯಿ ಮುಚ್ಚಿಸಿ ಮೌನ ತುಂಬುವ ಮಾತಿಗರ್ಥವಿಲ್ಲ
ಉರಿವ ಚಿಂತೆಗೆ ತುಪ್ಪ ಸುರಿವ ಮಾತದೆಂದೂ ಮಾತಲ್ಲ
ಮುರಿದು ಮೌನ ತಣಿಸೆ ಮನವ ಮಾತು ಮುತ್ತಾಗುವುದಲ್ಲ
ಒಡೆದ ಹೃದಯ ಬೆಸೆವ ಮಾತು ಚಿನ್ನವೆಂಬುದು ಸುಳ್ಳಲ್ಲ ||



  - ಎಸ್.ಎನ್.ಸ್ವಾಮಿ       

2 ಕಾಮೆಂಟ್‌ಗಳು:

ಸಂಧ್ಯಾ ಹೇಳಿದರು...

ತುಂಬಾ ಚನ್ನಗಿದೆ

ಸಂಧ್ಯಾ ಹೇಳಿದರು...

ತುಂಬಾ ಚನ್ನಗಿದೆ,ಮನಸ್ಸಿಗೆ ತಟ್ಟಿತು