Pages

ಪ್ರವಾಸ ಕಥನ

        ಪರಿಪೂರ್ಣತೆಗೆ ಮತ್ತೊಂದು ಹೆಸರಿನಂತಿರುವ ಅಮೇರಿಕಾ ಮಾದರಿ ರಾಷ್ಟ್ರವಾಗಬಲ್ಲದೆ?


ಅಭಿವೃದ್ಧಿ ಹೊಂದುತ್ತಿರುವ ಹಾಗು ಅಭಿವೃದ್ಧಿ ಹೊಂದಿರುವ ದೇಶಗಳ ನಡುವೆ ಅಗಾಧವಾದ ವ್ಯತ್ಯಾಸವಿದ್ದರೂ ಹೋಲಿಕೆ ಮಾಡುತ್ತೇವೆ. ಅಭಿವೃದ್ಧಿ ಹೊಂದಿರುವ ದೇಶಗಳು ಮಾದರಿಯಾಗಿವೆ. ಖಂಡಿತ ಅಲ್ಲಿನ ಕೆಲವು ಒಳ್ಳೆ ಅಂಶಗಳನ್ನು ನಾವು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಆದರೆ ಅಳವಡಿಸಿಕೊಳ್ಳಲು ಹೊರಟರೆ ನಮ್ಮ ಪರಿಸ್ಥಿತಿ ಹಾಗೂ ಅವರ ಪರಿಸ್ಥಿತಿ ಭಿನ್ನವಾಗಿರುವುದರಿಂದ ಅಳವಡಿಕೆ ಕಷ್ಟಸಾಧ್ಯವಾಗುತ್ತದೆ. ಕೆಲವು ಕಾರ್ಯಗಳನ್ನು ಕೈಗೊಳ್ಳಲು ಅಭಿವೃದ್ಧಿ ದೇಶಗಳನ್ನು ಮಾದರಿಯಾಗಿಟ್ಟುಕೊಂಡರೂ ನಮ್ಮ ಭೌಗೋಳಿಕ, ಆರ್ಥಿಕ, ರಾಜಕೀಯ, ಸಾಮಾಜಿಕ ಪರಿಸ್ಥಿತಿಗಳನ್ನು ಗಮನದಲ್ಲಿ  ಇಟ್ಟುಕೊಳ್ಳಬೇಕಾಗುತ್ತದೆ. ನಮ್ಮಲ್ಲಿ ಆಗುತ್ತಿರುವ ಬದಲಾವಣೆ ಸುಧಾರಣೆಗು ಅಭಿವೃದ್ಧಿ ದೇಶಗಳಲ್ಲಿ ಈಗಾಗಲೇ ಆಗಿರುವಂತದ್ದನ್ನು ಗಮನಿಸಲು ಆ ದೇಶಗಳಿಗೆ ಭೇಟಿ ನೀಡಿದಾಗ ಅರ್ಥಮಾಡಿಕೊಳ್ಳಬಹುದು.

ಕೆಲವು ತಿಂಗಳ ಹಿಂದೆ ಅಮೇರಿಕಾ ಪ್ರವಾಸ ಕೈಗೊಳ್ಳುವ ಅವಕಾಶ ದೊರಕಿತು. ಅತ್ಯಂತ ಕಡಿಮೆ ಅವಧಿಯಲ್ಲಿ ಕೆಲವೇ ರಾಜ್ಯ, ಸ್ಥಳಗಳನ್ನು ನೋಡಿ ಬರಲು ಸಾದ್ಯವಾಯಿತು. ನಾನು ನೋಡಿದ್ದನ್ನು, ಅನುಭವಿಸಿದ್ದನ್ನು ಭಾರತ ಮತ್ತು ಅಮೇರಿಕಾವನ್ನು ತುಲನಾತ್ಮಕವಾಗಿ ಗಮನಿಸಿದ್ದನ್ನು ಈ ಲೇಖನದ ಮುಲಕ ಓದುಗರೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಎಲ್ಲವನ್ನು ಇಲ್ಲಿ ವಿವರಿಸಲು ಸಾಧ್ಯವಿಲ್ಲ. ನನಗೆ ಪ್ರಮುಖ ಅನಿಸಿದ ಕೆಲವು ವಿಷಯಗಳನ್ನು ಮಾತ್ರ ಪ್ರಸ್ತಾಪಿಸಲು ಪ್ರಯತ್ನಿಸುತ್ತೇನೆ.
ಅಮೇರಿಕಾದಲ್ಲಿ ಕಂಡು ಬಂದ ಮೂಲಸೌಕರ್ಯ, ಸ್ವಚ್ಚತೆ, ಗುಣಮಟ್ಟ, ಆರ್ಥಿಕ ಪರಿಸ್ಥಿತಿ ಮತ್ತುರಾಜಕೀಯ ಚಟುವಟಿಕೆ ಇವುಗಳನ್ನು ನಾನು ಗಮನಿಸಿದಂತೆ ಭಾರತದ ಪರಿಸ್ಥಿತಿಗೆ ಹೋಲಿಸುತ್ತಾ ವಿವರಿಸಲು ಯತ್ನಿಸುತ್ತೇನೆ.
ನಾನು ನೋಡಿದ ಸ್ಥಳಗಳೆಂದರೆ ಲಾಂಗ್‍ಐಲ್ಯಾಂಡ್, ನ್ಯೂಯಾರ್ಕ್, ವಾಷಿಂಗ್‍ಟನ್ ಡಿ.ಸಿ. ಫೀಲಿಡಾಲ್ಫಿಯಾ, ಡೆಟ್ರಾಯಿಟ್, ಆ್ಯನ್‍ಆರ್ಬರ್, ನಯಾಗಾರ ಫಾಲ್ಸ್, ಮತ್ತು ಒಹಾಯೋ, ಹವಾಗುಣ ಬಿಟ್ಟರೆ ಉಳಿದಂತೆ ಈ ಸ್ಥಳಗಳು ಅಮೇರಿಕವನ್ನು ಪ್ರತಿನಿಧಿಸುತ್ತವೆ ಎಂದು ಹೇಳಬಹುದು. ಮೂಲಸೌಕರ್ಯಗಳಲ್ಲಿ ರಸ್ತೆ, ಅದರ ದಿಕ್ಸೂಚಿ, ಹುಲ್ಲುಹಾಸು ಹಾಗೂ ಉದ್ಯಾನವನ ಅವುಗಳ ನಿರ್ವಹಣೆಗೆ ತಂತ್ರಜ್ಞಾನದ ಬಳಕೆ ಪ್ರಮುಖವಾಗಿ ಕಂಡುಬರುತ್ತದೆ. 19ನೇ ಶತಮಾನಕ್ಕಿಂತ ಮೊದಲು ನೀರಿನ ಸಾರಿಗೆಯನ್ನು ಅವಲಂಬಿಸಿದ್ದ ಅಮೇರಿಕಾ 19 ಮತ್ತು 20ನೇ ಶತಮಾನದಲ್ಲಿ ಇಡೀ ದೇಶದಲ್ಲಿ ರಸ್ತೆ ಸಾರಿಗೆಯನ್ನು ಏಕರೂಪದಲ್ಲಿ ಅತ್ಯಂತ ಮುಂಜಾಗ್ರತೆ ಹಾಗೂ ಯೋಜನಾ ಬದ್ಧವಾಗಿ ಕಟ್ಟಿಕೊಂಡಿದೆ. ದೇಶ ತುಂಬ ವಿಶಾಲವಾಗಿರುವುದರಿಂದ  ಸಂಪತ್ತು  ಭರಿತವಾಗಿರುವುದರಿಂದ ಗುಣಮಟ್ಟದ  ರಸ್ತೆ ವ್ಯವಸ್ಥೆ ಮಾಡಿಕೊಂಡಿದೆ. ಆದರೆ ಇದಕ್ಕೆ ಬೇಕಾದದೈಹಿಕ  ಶ್ರಮದ ಕೆಲಸಕ್ಕೆ ಆಗ ಜಾರಿಯಲ್ಲಿದ್ದ ಗುಲಾಮ ಪದ್ಧತಿಯನ್ನು ಬಳಸಿಕೊಂಡಿರುವುದನ್ನು ಮರೆಯುವಂತಿಲ್ಲ. ಕೌಶಲ್ಯಭರಿತ ಕೆಲಸಗಾರರು ಹಾಗೂ ಶ್ರಮಜೀವಿಗಳು ಪ್ರಾಮಾಣಿಕವಾಗಿ ದುಡಿದುದ್ದರಿಂದ ಇವತ್ತೂ ಉತ್ಕ್ರಷ್ಟ ಗುಣಮಟ್ಟದ ರಸ್ತೆ ವ್ಯವಸ್ಥೆಯನ್ನು ಹೊಂದಿದೆ. ಈಗಿನ ನಿರ್ವಹಣೆಯ ಹಿಂದೆಯೂ ಶ್ರಮಿಕ ವರ್ಗದ ಕೊಡುಗೆ ಅಪಾರವಿದೆ. 
ಅಮೇರಿಕಾದಲ್ಲಿ ಕಂಡುಬಂದ ಅಂಶವೆಂದರೆ ಜನರ ಮತ್ತು ಪರಿಸ್ಥಿತಿಯ ಅವಶ್ಯಕತೆಗೆ ತಕ್ಕಂತೆ ಆಲೋಚನೆ ಮತ್ತು ಕ್ರಿಯೆಗಳನ್ನು ಕೈಗೊಳ್ಳುತ್ತಾರೆ. ಅದಕ್ಕೆ ವಿಜ್ಞಾನ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಹಾಗೆ ಇರುವುದರಲ್ಲೆ  ಮುಂದುವರೆಯುವುದು, ಈಗ ಕೆಲಸವಾದರೆ ಸಾಕು ಮುಂದೆ ನೋಡಿಕೊಳ್ಳೋಣ ಎಂದು ಹೊಂದಾಣಿಕೆ ಮಾಡಿಕೊಂಡು ಹೋಗುವುದಿಲ್ಲ. ಇಲ್ಲಿಯ ಸ್ವಚ್ಚತೆ ನಿಜಕ್ಕೂ ಅನುಕರಣೀಯ. ಹವಾಗುಣ, ಕಡಿಮೆ ಜನಸಂಖ್ಯೆ, ವಿಸ್ತಾರವಾದ ಜಾಗ, ನಾಗರೀಕ ಪ್ರಜ್ಞೆ ಸ್ವಚ್ಚತೆಯನ್ನು ಕಾಪಾಡಲು ಪೂರಕವಾಗಿವೆ. ನಮ್ಮಲ್ಲಿ ಸ್ವಚ್ಛತೆ ಕಾಪಾಡುವುದು ಕಷ್ಟವಾದರೂ ಅಸಾಧ್ಯವೇನಲ್ಲ. ಅದಕ್ಕೆ ಮುರು ಕ್ರಮಗಳನ್ನು ಕೈಗೊಳ್ಳಬಹುದೆಂದು ನನ್ನ ಅನಿಸಿಕೆ. 
1. ಸ್ವಚ್ಛತಾ ಕಾರ್ಯವನ್ನು ಉದ್ಯೋಗ ಆಂದೋಲನವಾಗಿ ರೂಪಿಸಬಹುದು. ಈಗ ದುಡಿಯುತ್ತಿರುವ ಪೌರಕಾರ್ಮಿಕರು ಹಾಗೂ ಯುವಜನಾಂಗಕ್ಕೆ ಉತ್ತಮ ವೇತನ, (ತಿಂಗಳಿಗೆ 25000 ರೂ ಕೊಟ್ಟರೂ ತಪ್ಪೇನು) ಈ ಕೆಲಸಕ್ಕು ವಿದ್ಯಾರ್ಹತೆ, ಕೌಶಲ್ಯ ತರಬೇತಿ ಕೊಟ್ಟು, ತಂತ್ರಜ್ಞಾನವನ್ನು ಬಳಸಿಕೊಂಡು ಮೂಲ ಸವಲತ್ತುಗಳನ್ನು ನೀಡುವುದರ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಒಂದು ಘನತೆಯನ್ನು ತಂದುಕೊಡಬಹುದು. 
2. ನಮ್ಮಲ್ಲಿ ಕಸ ಹಾಕಬಾರದು, ಗಲೀಜು ಮಾಡಬಾರದು ಅನ್ನುವ ಪ್ರಜ್ಞೆಯೇ ಕಡಿಮೆ. ಅದನ್ನು ಬರಿಸಬೇಕೆಂದರೆ ದಂಡ ಹಾಕುವುದೊಂದೆ ದಾರಿ. 
3. ಕಸ ಸೃಷ್ಟಿಮಾಡುವವರು ಅದರ ವಿಲೇವಾರಿ ಜವಾಬ್ದಾರಿಯನ್ನು ಹೊರುವಂತೆ ಮಾಡಬೇಕು. ಉದಾ: ಹಳೆ ಮನೆ ರಿಪೇರಿ ಅಥವಾ ಕೆಡವಿ ಕಟ್ಟುವವರು ಉಳಿಕೆಯನ್ನು ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುತ್ತಾರೆ. ಅದನ್ನು ರೀಸೈಕಲ್ ಮಾಡಬೇಕು ಇಲ್ಲವೆ ದಂಡ ಅಥವಾ ತೆರಿಗೆ ನೀಡುವಂತೆ ಮಾಡಬೇಕು. ಇವೆಲ್ಲವನ್ನು ಕಾರ್ಯರೂಪಕ್ಕೆ ತರುವುದು ಕಷ್ಟವಾದರು ನಿರಂತರ ಪ್ರಯತ್ನಗಳನ್ನು ಮಾಡುತ್ತಾ ಹೋಗಬೇಕು.


ಅಮೇರಿಕಾದಲ್ಲಿ ಗುಣಮತ್ತಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಗುಣಮಟ್ಟದ ವಸ್ತು ತಯಾರಿಕೆ ಖಂಡಿತಾ ಒಳ್ಳೆಯದು. ಆದರೆ ಅದಕ್ಕೆ ಹೆಚ್ಚಿನ ಬೆಲೆ ನೀಡಬೇಕಾಗುತ್ತದೆ. ಉನ್ನತ ಗುಣಮಟ್ಟದ ಕಚ್ಚಾ ಸಾಮಾಗ್ರಿ, ಕೌಶಲ್ಯ ಮತ್ತು ತಂತ್ರಜ್ಞಾನದಿಂದ ತಯಾರಿಸಿದ ವಸ್ತುಗಳ ಬೆಲೆ ಹೆಚ್ಚಿರುತ್ತದೆ. ನಮ್ಮಲ್ಲಿ ಎಲ್ಲರಿಗೂ ಹೆಚ್ಚಿನ ಬೆಲೆ ಕೊಟ್ಟು ವಸ್ತುಗಳನ್ನು ಕೊಂಡುಕೊಳ್ಳಲಾಗುವುದಿಲ್ಲ. ಅವರ ಸಾಮಥ್ರ್ಯಕ್ಕೆ ತಕ್ಕಂತೆ ಗುಣಮಟ್ಟವನ್ನು ನೀಡಬೇಕಾಗುತ್ತದೆ. ಆದರೆ ಸಾರ್ವಜಜಿಕ ನಿರ್ಮಾಣ ಕಾರ್ಯಗಳಲ್ಲಿ ಗುಣಮಟ್ಟ ಕಾಪಾಡಲು ಖಂಡಿತ ಸಾಧ್ಯವಿದೆ. ಅಧಿಕಾರದ ಸದ್ಬಳಕೆಯಾಗಿ ಭ್ರಷ್ಟಾಚಾರ ಕಡಿಮೆಯಾದರೆ ಮಾತ್ರ ಇದು ಸಾಧ್ಯ. ನನ್ನ ಪ್ರಕಾರ ಗುಣಮಟ್ಟ ಕಡಿಮೆಯಾಗಲು ಮೂಲ ಕಾರಣ ನಿಜವಾಗಲು ದೈಹಿಕ ಶ್ರಮ ನೀಡುವ ಕೆಲಸಗಾರರಿಗೆ ಅತ್ಯಂತ ಕಡಿಮೆ ವೇತನ ನೀಡುತ್ತಿರುವುದು, ಮೂಲ ಸೌಕರ್ಯ ಒದಗಿಸಿಕೊಡದಿರುವುದು. ಯೋಜನೆಯ ಹೆಚ್ಚಿನೆ ಭಾಗ ಮೇಲುಸ್ತರದ ಕೆಲವೇ ಮಂದಿಗೆ ಸೇರುವಂತಿರುವುದು ಅದರಲ್ಲೂ ಬಂಡವಾಳ ಹೂಡುವವರು ಯೋಜನೆಯ ಅತ್ಯದಿಕ ಪಾಲನ್ನು ಪಡೆಯುತ್ತಾರೆ. ಅಮೇರಿಕಾದಲ್ಲಿದೈಹಿಕ ಶ್ರಮದಕೆಲಸಕ್ಕೆ ಸೂಕ್ತ ಸಂಭಾವನೆ ನೀಡುವುದರಿಂದ ಶ್ರಮದಘನತೆ ಹೆಚ್ಚಾಗಿದೆ, ಮಾಡುವಎಲ್ಲಾ ಕೆಲಸದಲ್ಲೂಗುಣ ಮಟ್ಟಕಾಪಾಡಲು ಸಾದ್ಯವಾಗಿದೆ.

ಇಡೀ ದೇಶದಲ್ಲಿ ಏಕ ರೀತಿಯ ರಸ್ತೆ ಸಾರಿಗೆ, ಮಾಹಿತಿ ಲಭ್ಯತೆ, ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನ ಬಳಕೆ, ಉತ್ಕ್ರಷ್ಟ ಗುಣಮಟ್ಟ ಕಾಪಾಡುವಿಕೆ, ಸ್ವಚ್ಚತೆ, ಜನರ ಅವಶ್ಯಕತೆಗಳ ಪೂರೈಕೆಗೆ ಆದ್ಯತೆ ಮುಂತಾದವುಗಳನ್ನು ಪ್ರಶಂಸಿಸಲೇಬೇಕು. ಪ್ರತೀ ರಾಜ್ಯದ ಪ್ರವೇಶದಲ್ಲಿ ಮಾಹಿತಿ ಕೇಂದ್ರಗಳು ಇರುತ್ತವೆ. ಅಲ್ಲಿ ಶೌಚಾಲಯ, ತಿಂಡಿತಿನಿಸುಗಳ ಅಂಗಡಿ, ರಾಜ್ಯದ ನಕ್ಷೆ, ಹೆದ್ದಾರಿಗಳ ರೂಟ್, ನಾವೆಲ್ಲಿದ್ದೇವೆ ಮುಂದೆ ಹೇಗೆ ಹೋಗಬೇಕು, ನೋಡಬಹುದಾದ ಸ್ಥಳ, ಹೊಟೆಲ್, ಏರ್ ಪೋರ್ಟ್, ಹವಾಗುಣ, ರಾಜ್ಯದ ಚಿಹ್ನೆ, ಪಾಣಿ ಪಕ್ಷಿ, ಬಣ್ಣ ಮುಂತದವುಗಳ ಬಗ್ಗೆ ಮಾಹಿತಿ ಇಟ್ಟಿರುತ್ತಾರೆ. ಅಮೇರಿಕಾದಲ್ಲಿ ಎಲ್ಲದಕ್ಕೂ ಮಾಹಿತಿಯಿರುತ್ತದೆ ಅದನ್ನು ಹೇಗೆ ತಿಳಿಯಬೇಕು ಅನ್ನುವುದು ಪ್ರವಾಸಿಗರಿಗೆ ಸವಾಲು.
ಅಮೇರಿಕಾದ ಆರ್ಥಿಕ ಪರಿಸ್ಥಿಯನ್ನು  ಗಮನಿಸಿದರೆ ಭಾರತದಲ್ಲಿ ಉಂಟಾಗಿರುವಂತೆ ಒಂದು ವರ್ಗದ ಜನರ ಆರ್ಥಿಕ ಪರಿಸ್ಥಿತಿ ಅತಿ ವೇಗವಾಗಿ ಮೇಲೇರುತ್ತಿದ್ದರೆ, ಅಧಿಕ ಪ್ರಮಾಣದ ಮಧ್ಯಮ ವರ್ಗದವರು ಹೋರಾಟದ ಬದುಕನ್ನು ನಡೆಸಬೇಕಾಗಿದೆ. ಜೀವನ ವೆಚ್ಚ ಅಧಿಕವಾಗಿರುವುದರಿಂದ ದುಡಿಯುವ ವರ್ಗದವರು ಹೆಚ್ಚು ಶ್ರಮ ಪಡಬೇಕಾಗಿದೆ. ಒಂದು ಅನುಕೂಲವೆಂದರೆ ಶ್ರಮದ ಕೆಲಸಗಳು ಸುಲಭವಾಗಿ ದೊರಕುತ್ತವೆ. ಅದಕ್ಕೆ ಸೂಕ್ತ ಸಂಭಾವನೆಯು ದೊರೆಯುತ್ತದೆ. 
ತಂದೆತಾಯಿ ಹದಿನೆಂಟು ವರ್ಷದವರೆಗೆ ಮಾತ್ರ ಪಾಲನೆ ಮಾಡುವುದರಿಂದ ಮಕ್ಕಳು ಬೇಗ ದುಡಿಯಲು ಆರಂಭಿಸುತ್ತಾರೆ. ಉನ್ನತ ಶಿಕ್ಷಣವು ತುಂಬ ದುಬಾರಿಯಾಗಿರುವುದರಿಂದ ಹೆಚ್ಚು ಸಂಪಾದನೆ ಮಾಡಿಕೊಂಡವರು ತಂದೆತಾಯಿ ಹಣದ ಸಹಾಯ ನೀಡಿದವರು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಾರೆ. ಹೀಗಾಗಿ ಮೂಲ ಅಮೇರಿಕನ್ನರು ಉನ್ನತ, ಕೌಶಲ್ಯ, ತಾಂತ್ರಿಕ, ಸಂಶೋಧನೆ ಹಾಗೂ ಆಡಳಿತಾತ್ಮಕ ಹುದ್ದೆಗಳನ್ನು ಹೊಂದುವುದು ಕಡಿಮೆ. ಹೊರಗಿನಿಂದ ಬಂದವರು ಹೆಚ್ಚು ಅವಕಾಶ ಪಡೆಯುತ್ತಾರೆ. ಇದರಿಂದ ಮೂಲ ಅಮೇರಿಕನ್ನರಲ್ಲಿ ಅಸಹಿಷ್ಣುತೆ, ಜನಾಂಗೀಯ ಅಸಹನೆ ಉಂಟಾಗುತ್ತಿರುವಂತೆ ತೋರುತ್ತದೆ. ಇದನ್ನು ಟ್ರಂಪ್ ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ಕಂಡುಬರುತ್ತದೆ. ತಮ್ಮ ಜನರ ಕೌಶಲ್ಯ, ಶಿಕ್ಷಣ ಭೌದ್ದಿಕ ಮಟ್ಟವನ್ನು ಉತ್ತಮಪಡಿಸುವ  ಸೂಕ್ತ ಕಾರ್ಯನೀತಿ ರೂಪಿಸಿಕೊಳ್ಳದೆ ವಲಸೆ ಬಂದ ಜನರಲ್ಲಿ ಅಸಹನೆ ತೋರುವುದು ಸರಿಯಲ್ಲ.
ನಾನು ಗಮನಿಸಿದಂತೆ  ದೂರದ ಬೆಟ್ಟ ನುಣ್ಣಗೆ ಅನ್ನುವಂತೆ ಮೇಲು ನೋಟಕ್ಕೆ ಅಮೇರಿಕಾದಲ್ಲಿ ಎಲ್ಲವೂ ಚೆನ್ನಾಗಿರುವಂತೆ ಕಂಡಬಂದರೂ, ಎಲ್ಲವೂ ಸರಿಯಾಗಿಲ್ಲವೆಂದೆನಿಸುತ್ತದೆ. ಬೃಹತ್ ಕಟ್ಟಡಗಳು, ಮೂಲಸೌಕರ್ಯ, ಸ್ವಚ್ಛತೆ ಎಲ್ಲವೂ ಇದ್ದರೂ ಇದೆಲ್ಲ ಸಾಧ್ಯವಾಗಲು ಕಾರಣರಾದ ಶ್ರಮಿಕ ಜನರ ಪರಿಸ್ಥಿತಿ ಹೇಗಿದೆಯೆನ್ನುವುದನ್ನು ಹತ್ತಿರದಿಂದ ಗಮನಿಸಬೇಕಾಗುತ್ತದೆ. ಮೇಲು ವರ್ಗದ ಜನರ ದೃಷ್ಟಿಯಿಂದ ನೋಡಿದರೆ ಖಂಡಿತ ಅಮೇರಿಕ ಸ್ವರ್ಗದಂತೆ ತೋರಬಹುದು. ಆದರೆ ಮಧ್ಯಮ ಮತ್ತು ಕೆಳಸ್ತರದ ಸಾಮಾನ್ಯ ಜನರ ಪರಿಸ್ಥಿತಿ ತೃಪ್ತಿದಾಯಕವಾಗಿಲ್ಲವೆನಿಸುತ್ತದೆ. ಏನೆಂದರೆ, ಕೆಲವು ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವಷ್ಟು ಆದಾಯ ಬರುವುದರಿಂದ ಬಡತನದ ಬೇಗೆ ಇಲ್ಲ. ಆದರೂ ನ್ಯೂಯಾರ್ಕ್‍ನಲ್ಲಿ ಭಿಕ್ಷುಕರು ಅಧಿಕವಾಗಿ ಕಂಡು ಬಂದರು. ಅಲ್ಲಲ್ಲಿ ಗಲೀಜು ಮತ್ತು ನಿಯಮಗಳ ಮೀರುವಿಕೆ ಕಂಡು ಬರುತ್ತಿತ್ತು. ಮೇಲು ಸ್ತರದ ಜನರ ಮೇಲ್ಮುಖ ಚಲನೆ ಶೀಘ್ರವಾಗಿದ್ದರೆ ಶ್ರಮಿಕ ವರ್ಗದವರ ಪರಿಸ್ಥಿತಿ ಸ್ಥಗಿತಗೊಂಡಿದ್ದು, ಅದು ಅವರ ಮನೋಭಾವ, ನಡವಳಿಕೆಯಲ್ಲಿ ಎದ್ದು ಕಾಣುತ್ತಿತ್ತು. ಉದಾಹರಣೆಗೆ ಏರ್‍ಪೋರ್ಟಿನ ಕೆಲಸಗಾರರು, ಬಸ್ ಚಾಲಕರು ಹಾಗು ಇತರ ದೈಹಿಕ ಶ್ರಮದ ಕೆಲಸಗಾರರಲ್ಲಿ ಇದು ಕಂಡು ಬರುತ್ತಿತ್ತು. ಅಲ್ಲಿಯೂ ಆದಾಯ ಮತ್ತು ಸಂಪತ್ತು ಕೆಲವೇ ಜನರ ಕೈಯಲ್ಲಿ ಸಂಗ್ರಹವಾಗಿ ಅಧಿಕ ಜನರ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿರುವಂತೆ ತೋರಿತು. ಯಾವಾಗ ಮಧ್ಯಮ ವರ್ಗದವರ ಪರಿಸ್ಥಿತಿ ಅತ್ಯಂತ ನಿಧಾನಗತಿಯಲ್ಲಿ ಸುಧಾರಿಸುತ್ತಿದ್ದು  ಮೇಲು ವರ್ಗದ ಜನರ ಪರಿಸ್ಥಿತಿ ಅವರ ಕಣ್ಣೆದುರೆ ಮೇಲೇರುತ್ತಿದ್ದರೆ ಅದನ್ನು ಒಪ್ಪಿಕೊಳ್ಳಲು ಕಷ್ಟವಾಗಿ ಜನರು ಅಸಹನೆಯಿಂದ ಸೋತವರಂತೆ ಕಂಡು ಬಂದರು. ವರ್ಗಗಳ ನಡುವಿನ ಅಂತರವೂ ಹೆಚ್ಚಾಗುತ್ತಿದೆ.
ಬಹುಶಃ 30-40 ವರ್ಷಗಳ ಹಿಂದೆ ವಿವಿಧ ವರ್ಗಗಳ ನಡುವೆ ಅಂತರ ಕಡಿಮೆಯಿದ್ದಿದ್ದರಿಂದ ಎಲ್ಲಾ ಜನರೂ ದೇಶ ಕಟ್ಟುವ, ನಿರ್ವಹಿಸುವ ಕಾರ್ಯದಲ್ಲಿ ಸಂಶೋಷದಿಂದ ಪಾಲ್ಗೊಳುತ್ತಿದ್ದರು. ಆದರೆ ಜಾಗತೀಕರಣದ ನಂತರ ಬಂಡವಾಳಶಾಹಿ ವ್ಯವಸ್ಥೆಯ ಪ್ರಾಬಲ್ಯ ಮತು ್ತಜನರ ಆದ್ಯತೆಗಳು (ಫಾಸ್ಟ್‍ಫುಡ್, ಮನರಂಜನೆ, ಪ್ರವಾಸ, ತಂತ್ರಜ್ಞಾನ ಬಳಕೆ) ಬದಲಾದಂತೆ ಪ್ರಜಾಪ್ರಭುತ್ವ, ಸಮಾನತೆ, ಸ್ವಾತಂತ್ರದ ತತ್ವಗಳು ಹಾಗೂ ಮಾನವೀಯ ಮೌಲ್ಯಗಳ ಪ್ರಭಾವ ಕುಸಿಯುತ್ತಿರುಂತೆ ತೋರುತ್ತದೆ. ಅದೃಷ್ಟವಶಾತ್ ಸೂಕ್ತ ಮಟ್ಟದಲ್ಲಿ ಇನ್ನು ಲಂಚ, ಭ್ರಷ್ಟಾಚಾರ ತಲೆಯೆತ್ತದಿರುವುದರಿಂದ ದಿನನಿತ್ಯದ ಕಾರ್ಯಗಳು ಸುಲಲಿತವಾಗಿ ನಡೆದುಕೊಂಡು ಹೋಗುತ್ತಿವೆ. ಜನರಲ್ಲಿ ನೈತಿಕತೆಯಿನ್ನು ಉಳಿದಿರುವುದರಿಂದ ಇದೆಲ್ಲದರ ನಡುವೆ ಎಲ್ಲದರ ನಿರ್ವಹಣೆಯು ದಕ್ಷವಾಗಿ ನಡೆಯುತ್ತಿರುವುದನ್ನು ಶ್ಲಾಘಿಸಲೇಬೇಕು.
ಶಿಕ್ಷಣ ಮತ್ತು ಉದ್ಯೋಗಕ್ಕೆಂದು ಹೋದ ವಲಸಿಗರು ಪ್ರಾರಂಭದ ವರ್ಷಗಳಲ್ಲಿ ಕಷ್ಟಪಟ್ಟು ದುಡಿದು ಜೀವನ ಕಟ್ಟಿಕೊಂಡಿದ್ದಾರೆ. ಆದರೆ ಮೇಲು ಹಂತಕ್ಕೆ ಹೋದಂತೆ ಹೆಚ್ಚು ಮೆಟೀರಿಯಲಿಸ್ಟಿಕ್ ಆಗಿ ವೈಭವಯುಕ್ತವಾಗಿ ಮನೆ ಕಟ್ಟಿಸುವುದು , ದುಬಾರಿ ಸಾಮಾನುಗಳನ್ನು ಖರೀದಿಸುವುದು, ಮಕ್ಕಳಿಗೆ ಸವಲತ್ತುಗಳನ್ನು ಒದಗಿಸುವುದು, ಪಾರ್ಟಿ, ಪೂಜೆ, ಮದುವೆ, ಮುಂಜಿಗಳನ್ನು ನಡೆಸುವುದು, ಸ್ವದೇಶದಲ್ಲಿ ಆಸ್ತಿಮಾಡುವುದು ಮುಂತಾದವುಗಳಲ್ಲಿ ತೊಡಗಿರುವುದು ಕಂಡುಬಂದಿತು. ನಾವು ಕಷ್ಟಪಟ್ಟು ದುಡಿಯುತ್ತೇವೆ ನಮಿಷ್ಟದಂತೆ ಖರ್ಚು ಮಾಡುತ್ತೇವೆ ಎನ್ನಬಹುದು.  ಆದರೆ ಅವರ ಜೀವನ ಸುಲಲಿತವಾಗಿ ನಡೆಯುತ್ತಿರುವುದಕ್ಕೆ ಸಾವಿರಾರು ಜನ ಕೊಡುಗೆ ಸಲ್ಲಿಸುತ್ತಿದ್ದಾರೆ  ಅವರ ಬಗ್ಗೆ ನಮ್ಮ ಕಾಳಜಿ, ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕಿದೆ. ಅನಿವಾಸಿ ಭಾರತಿಯರ ಜೀವನ ಶೈಲಿ   ನಮ್ಮ ದೇಶದ ಮಧ್ಯಮ ವರ್ಗದವರಿಗೆ ಮಾದರಿಯಾದರೆ ಅಪಾಯ. 
ನಾನು ಹೋದ ಸಮಯದಲ್ಲಿ ಅಂತಿಮ ಚುನಾವಣೆ ಪ್ರಚಾರ ಭರದಿಂದ ಸಾಗಿತ್ತು. ಎರಡು ದಿನ ಡೋನಾಲ್ಡ್‍ಟ್ರಂಪ್ ಮತ್ತು ಹಿಲರಿ ಕ್ಲಿಂಟನ್ ಅವರ ಸಾರ್ವಜನಿಕ ಚರ್ಚೆ ಇತ್ತು. ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಇಬ್ಬರು ಉತ್ತರ ನೀಡಬೇಕಿತ್ತು. ಹಿಲರಿ ಕ್ಲಿಂಟನ್‍ಅವರ ವಿಷಯ ಮಂಡನೆ ಗಂಭೀರವಾಗಿತ್ತು, ಕೇಂದ್ರೀಕೃತವಾಗಿರುತ್ತಿತ್ತು, ಕೆಲವು ಹೇಳಿಕೆಗಳು ರಾಜಕೀಯ ಗಿಮಿಕ್‍ನಿಂದ ಕೂಡಿರುತ್ತಿದ್ದರೂ ಎಲ್ಲೆ ಮೀರುತ್ತಿರಲಿಲ್ಲ. ಆದರೆ ಟ್ರಂಪ್‍ನ ಮಾತುಗಳು ಅಕ್ರಮಣಕಾರಿ, ಬೋಗಸ್ ಆಗಿರುತ್ತಿತ್ತು ಹಾಗೂ ಖಚಿತ ನಿಲುವಿರುತ್ತಿರಲಿಲ್ಲ, ಉದ್ಘಟತನವಿತ್ತು. ಹಿಲರಿಯವರಿಗೆ ‘ಶೇಮ್ ಆನ್ ಯು’ ಎಂದು ಅನೇಕ ಬಾರಿ ಉಚ್ಚರಿಸಿದ್ದರು. ಅಲ್ಲಿಯ ಒಂದು ವಿಶ್ಲೇಷಣೆಯಂತೆ ಟ್ರಂಪ್ ಅಂತಿಮ ಸುತ್ತಿಗೆ ಬರಬಹುದೆಂದು ರಿಪಬ್ಲಿಕ್ ಪಕ್ಷದವರೆ ಊಹಿಸಿರಲಿಲ್ಲವಂತೆ. ಅಮೇರಿಕಾದ ಇತಿಹಾಸದಲ್ಲಿ ದಾಖಲೆ ಮಾಡಿಸುವಂತೆ ಹಿಲರಿ ಗೆದ್ದು ಬಂದರೆ ಸಾಮಾನ್ಯ ವರ್ಗದ ಜನರು, ವಲಸಿಗರು ಹಾಗೂ ವಿವಿಧ ಜನಾಂಗೀಯರು ತುಸು ನೆಮ್ಮದಿ ಪಡೆಯಬಹುದೆಂಬ ಆಶಯವಿತ್ತು. ಆದರೆ ಬಹುಜನರ ಆಸೆ ನಿರೀಕ್ಷೆಯನ್ನು ಮೀರಿ ಟ್ರಂಪ್ ಗೆದಿದ್ದಾರೆ. ಜಂಡರ್ ಸಮಾನತೆಯನ್ನು ಅಮೇರಿಕ ಇನ್ನೂ ಒಪ್ಪಿಕೊಂಡಿಲ್ಲ ಅನ್ನುವುದು ಸಾಬೀತಾಯಿತು. ಟ್ರಂಪ್‍ನಂತ ವ್ಯಕ್ತಿಯನ್ನು ಅಮೇರಿಕದ ಜನರು ಒಪ್ಪಿಕೊಳ್ಳುತ್ತಾರೆ ಅಂದರೆ ಅದು ಪ್ರಜಾಪ್ರಭುತ್ವ, ಸಮಾನತೆ  ಮಾನವೀಯ ಮೌಲ್ಯಗಳು ಅವನತಿ ಹೊಂದುತ್ತಿರುವುದರ ಸಂಕೇತವೆ ?
ವಾಂಷಿಂಗ್ಟನ್ ಡಿ ಸಿ ಮತ್ತು ಫಿಲಿಡಾಲ್ಫಿಯ ರಾಜ್ಯಗಳಿಗೆ ಪ್ಯಾಕೇಜ್‍ಟ್ರಿಪ್  ಹೋಗಿದ್ದೆವು. ನಮ್ಮ ದೇಶದ ಟ್ರಾವಲ್ ಏಜೆಂಟ್‍ಗಳಂತೆ ಕೆಲವೇ ಸ್ಥಳಗಳನ್ನು ದೂರದಿಂದ ತೋರಿಸಿ ತಮಗೆ ಲಾಭತರುವ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಾರೆ. ವೈಟ್ ಹೌಸ್‍ನ್ನು, ಲಿಬರ್ಟಿ ಗಂಟೆಯನ್ನು ಹತ್ತಿರದಿಂದ ತೋರಿಸಲಿಲ್ಲ. ಅಮೇರಿಕಾ ಮೂಲ ನಿವಾಸಿಗಳಾದ ‘ಅಮಿಷಾ’ ಜನಾಂಗದ ಬಗ್ಗೆ ಪರಿಚಯಿಸಿದರು. ಅವರ ಗ್ರಾಮಗಳಿಗೆ ಕರೆದೊಯ್ಯುತ್ತೇವೆ ಎಂದು 4 ಗಂಟೆ ಪ್ರಯಾಣ ಮಾಡಿಸಿ  ಬಸ್ಸಿನಿಂದಲೆ ತೋರಿಸಿದರು.  ಅವರ ಮಾರಾಟಕೇಂದ್ರದಲ್ಲಿ ವಸ್ತುಗಳನ್ನು ಕೊಳ್ಳಲು ಇಳಿಸಿದರು. ಅಮಿಷಾ ಜನ ವಿಶಿಷ್ಟವಾದವರು, ಆದುನಿಕರಣದ ಪ್ರಭಾವಕ್ಕೆ ಒಳಗಾದೆ ತಮ್ಮ ಸಂಪ್ರದಾಯವನ್ನೆ ಅನುಸರಿಸಿಕೊಂಡು ಜೀವನ ನಡೆಸುತಿದ್ದಾರೆ. ಕೃಷಿಕರಾದ ಇವರು ಮೂಲಭೂತ ಅವಶ್ಯ ವಸ್ತುಗಳನ್ನು ತಾವೆ ತಯಾರಿಸಿಕೊಳ್ಳುತ್ತಾರೆ. ವಿದ್ಯುತ್ ಬಳಸುವುದಿಲ್ಲ, ಟಿ ವಿ ಇಲ್ಲ, ಮನೆ ಒಳಗೆ ದೂರವಾಣಿ ಸಂಪರ್ಕ ಇಟ್ಟುಕೊಂಡಿಲ್ಲ. ಹೀಗೆ ಅಮೇರಿಕಾದಂತ ಅತ್ಯಾಧುನಿಕ ಜಗತ್ತಿನೊಳಗೆ ಇದ್ದುಕೊಂಡು ಸಾಂಪ್ರದಾಯಿಕ ಚೌಕಟ್ಟಿನಲ್ಲೆ ಬದುಕುತ್ತಿರುವ ಅಮಿಷಾ ಜನರು ವಿಶೇಷವಾಗಿದ್ದಾರೆ. 
ಪ್ಯಾಕೇಜ್ ಟೂರ್ ನಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯಕ್ಕೆ ಕರೆದುಕೊಂಡು ಹೋಗಿದ್ದರು. ನಮ್ಮಿಂದ ಹತ್ತು ಡಾಲರ್ ಹಣ ಸಂಗ್ರಹಿಸಿಕೊಂಡುರು.  ಆ ವಿಶ್ವವಿದ್ಯಾಲಯಕ್ಕೆ ಮುಕ್ತ ಪ್ರವೇಶವಿತ್ತು. ಗೈಡ್ ಮೂಲ ಒಳಗೆಲ್ಲ ತೋರಿಸಿದರು ಆದರೆ ಹಣ ಸಂಗ್ರಹಿಸಬೇಕಿತ್ತಾ? ಕಡಿಮೆ ವೆಚ್ಚದ ಪ್ರವಾಸ ಎಂದು ಕರೆದುಕೊಂಡು ಹೋಗಿ ತಮಗೆ ಲಾಭ ತರುವ ಸ್ಥಳಗಳನ್ನು ತೋರಿಸಿ ನಾವು ನೋಡಲೇಬೇಕಾದ ಸ್ಥಳಗಳನ್ನು ತೋರಿಸುವುದಿಲ್ಲ. 
ನಯಾಗಾರ ಫಾಲ್ಸ್ ಜಗತ್ತಿನ ಅತ್ಯುತ್ತಮ ಪ್ರವಾಸಿ ತಾಣ. ಇದು ಅಮೇರಿಕಾ ಮತ್ತು ಕೆನಡಾ ನಡುವೆ ಹಂಚಿಕೆಯಾದ ಸ್ಥಳವೆಂದು ಕೇಳಿದ ತಕ್ಷಣ ಒಂದು ವೇಳೆ ಅಂತಹ ಸ್ಥಳ ಭಾರತ ಮತ್ತು ಪಾಕಿಸ್ತಾನದ ನಡುವೆ ಇದಿದ್ದರೆ ಹೇಗಿರುತಿತ್ತು ಅನ್ನುವ ಆಲೋಚನೆ ಬಂದಿತು. ತುಂಬಾ ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ. ಭಾರತೀಯರು ಮತ್ತು ಚೀನಿಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಎಲ್ಲೊ ಒಂದು ಕಡೆ ಇಪ್ಪತ್ತು ಮುವತ್ತು ವರ್ಷಗಳ ಹಿಂದೆ ಇರಬಹುದಾಗಿದ್ದ ಅಚ್ಚುಕಟ್ಟುತನದಲ್ಲಿ ಸಣ್ಣ ಕೊರತೆ ಉಂಟಾಗಿದೆ ಅಂತ ಅನಿಸಿತು. 
ಅಮೇರಿಕಾದಲ್ಲಿ ವಸ್ತು ಸಂಗ್ರಹಾಲಯಗಳನ್ನು ತುಂಬಾ ಚನ್ನಾಗಿ ನಿರ್ವಹಣೆ ಮಾಡಿದ್ದಾರೆ. ಮಿಷಿಗನ್ ನ ಡಿಯರ್‍ಬಾರ್ನ್ ನಲ್ಲಿರುವ ಹೆನ್ರಿ ಫೋರ್ಡ್ ವಸ್ತು ಸಂಗ್ರಹಾಲಯವು, ಕಳೆದ 200 ವರ್ಷಗಳಲ್ಲಿ ಅಮೇರಿಕಾದಲ್ಲಿ ಕೃಷಿ, ಕೈಗಾರಿಕೆ, ಆಟೋಮೊಬೈಲ್, ವಿಮಾನಯಾನ, ಕಾರು ಉತ್ಪಾದನೆಗೊಂಡ ಇತಿಹಾಸವನ್ನು ತೋರಿಸುವ ಮತ್ತು ಹಿಂದೆ ಜನರು ಬಳಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ. ಇದು ಮಕ್ಕಳಿಗೆ ಮಾಹಿತಿ, ಜ್ಞಾನ ನೀಡುವ ಕೇಂದ್ರವಾಗಿದೆ. ಇನ್ನೊಂದು ವಿಶೇಷವೆಂದರೆ. ಮಾದರಿ ವಸ್ತುಗಳನ್ನು ತಯಾರಿಸುವ ಯಂತ್ರ ಇಟ್ಟಿರುತ್ತಾರೆ 2 ಡಾಲರ್ ಹಾಕಿದರೆ ನಾವು ಆಯ್ಕೆ ಮಾಡಿದ ವಸ್ತು ಪ್ಲಾಸ್ಟಿಕ್ ರೂಪದಲ್ಲಿ 2 ನಿಮಿಷದಲ್ಲಿ ಹೊರಬರುತ್ತದೆ.  
ಶಿಕಾಗೊದಲ್ಲಿ ವಿವೇಕಾನಂದರು ಭಾಷಣ ಮಾಡಿದ ಸ್ಥಳಕ್ಕೆ ಭೇಟಿ ನೀಡಿದೆವು ಪಾಠದಲ್ಲಿ ಕೇಳಿದ್ದನ್ನು ನೋಡಿದಾಗ ತುಂಬ ಸಂತೋಷವಾಯಿತು. ಕಟ್ಟದ ಮುಂದಿನ ರಸ್ತೆಗೆ ವಿವೇಕಾನಂದ ಮಾರ್ಗ ಎಂದು ಹೆಸರಿಟ್ಟಿದ್ದಾರೆ.
ಜಗತ್ತಿಗೆ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಸಾರುವ ಅಮೇರಿಕಾದಲ್ಲಿ ವರ್ಣಬೇಧದ ಬೇರಿದೆ. ಕಪ್ಪು ವರ್ಣದ ಜನರ ಎರಡು ಹೋರಾಟ ಪ್ರಕರಣಗಳನ್ನು ಕೇಳೀದೆ. ಒಂದು ಅಲಬಮಾದ ಕಪ್ಪು ಮಹಿಳೆ ರೋಸಾ ಪಾರ್ಕ್ ಬಸ್ಸನ ಮುಂದಿನ ಭಾಗದಲ್ಲಿ ಕುಳಿತಿದ್ದಾಗ ಬಿಳಿಜನರು ಹಿಂದೆ ಹೋಗಿ ಕುಳಿತುಕೊಳ್ಳಲು ಹೇಳುತ್ತಾರೆ. ಅವಳು ನಿರಾಕರಿಸುತ್ತಾಳೆ. ತುಂಬಾ ಒತ್ತಾಯ ಮಾಡಿದಾಗ ಪ್ರತಿಭಟನೆ ತೋರುತ್ತಾಳೆ. ಈ ಪ್ರಕರಣ ವರ್ಣಬೇಧ ನೀತಿಯನ್ನು ನಿಷೇಧಿಸುವ ಕಾಯಿದೆ ಜಾರಿಗೆ ಬರಲು ಕಾರಣವಾಗುತ್ತದೆ.  ಇದೇ ರೀತಿಯಲ್ಲಿ ಡೆತ್ರಾಯಿಟ್ನಲ್ಲಿ ಬಾಕ್ಸಿಂಗ್ ಆಟದಲ್ಲಿ ಭಾಗವಹಿಸಲು ಕಪ್ಪು ಪುರುಷನಿಗೆ ನಿರಾಕರಿಸಲಾಗುತ್ತದೆ. ಅವನೂ ಪ್ರತಿಭಟನೆ ಮಾಡಿ ಆಟದಲ್ಲಿ ಭಾಗವಹಿಸಿ ಗೆಲ್ಲುತ್ತಾನೆ. ಅದರ ನೆನಪಿಗೆ ಕಬ್ಬಿಣದ ಕೈಯನ್ನು ಊರಿನ ಮಧ್ಯಭಾಗದಲ್ಲಿ ನೇತುಹಾಕಿದ್ದಾರೆ.
ಡೆತ್ರಾಯಿಟ್ ನಲ್ಲಿರುವ ಜಮರಲ್ ಮೋಟಾರ್ಸ್ ನ ಮುಖ್ಯ ಕಛೇರಿಗೆ ಭೇಟಿ ನೀಡಿದೆವು. ಕಛೇರಿಯ ಶೋರೂಮ್ ನಲ್ಲಿ ಪಿಂಕ್ ಬಣ್ಣದ ಕಾರ್ ನ್ನು ಇಟ್ಟಿದ್ದರು. ಪಿಂಕ್ ಬಣ್ಣದ ಕಾರನ್ನು ಮಾರಾಟ ಮಾಡಿ ಬಂದ ಹಣವನ್ನು ಮಹಿಳೆಯರ ಕ್ಯಾನ್ಸರ್ ಚಿಕಿತ್ಸೆಗೆ ನೀಡುವ ಯೋಜನೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿದುಬಂತು.
ಮಿಷಿಗನ್ ವಿಶ್ವವಿದ್ಯಾಲಯದ ಮಹಿಳಾ ಶಿಕ್ಷಣ ಕೇಂದ್ರಕ್ಕೆ ಹೋಗಿದ್ದೆ. ಆ ಕೇಂದ್ರವು ಶಾಳೆ ಕಾಳೇಜು ಬಿಟ್ಟ ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಜನಾಂಗೀಯ ತಾರತಮ್ಯಕ್ಕೆ ಒಳಗಾದ, ಆರ್ಥಿಕವಾಗಿ ಹಿಂದುಳಿದ, ಅಲ್ಪಸಂಖ್ಯಾತ ಹೆಣ್ಣುಮಕ್ಕಳಿಗೆ ಅನುದಾನ, ವಿದ್ಯಾರ್ಥಿವೇತನ, ಆಪ್ತಸಮಾಲೋಚನೆ, ಉನ್ನತ ಶಿಕ್ಷಣದ ಬಗ್ಗೆ ಮಾಹಿತಿ ನೀಡುವ, ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ. 
ಭಾರತದಲ್ಲಿದ್ದಾಗ ನೇಮದಿಂದ ಪೂಜೆ, ವೃತ, ಹಬ್ಬಹರಿದಿನಗಳನ್ನು ಆಚರಿಸುತ್ತೇವೊ ಇಲ್ಲವೊ  ಆದರೆ ಹೊರ ದೇಶಗಳಿಗೆ ಹೋದಾಗ ಅವುಗಳಿಗೆ ಹೆಚ್ಚಿ ಮಹತ್ವವನ್ನು ಕೊಡುತ್ತೇವೆ. ಎರಡು ಧಾರ್ಮಿಕ ಸ್ಥಳಗಳಿಗೆ ಬೇಟಿ ನೀಡಿದೆವು. ಒಂದು  ಆ್ಯನ್ ಆರ್ಬರ್ ನಲ್ಲಿರುವ ಚಿನ್ಮಯ ಮಿಷನ್ ಕೇಂದ್ರ. ಇದನ್ನು ತಮಿಳು ದಂಪತಿಗಳು 35 ವರ್ಷಗಳಿಂದ ನಡೆಸಿಕೊಂಡು ಬರುತಿದ್ದಾರೆ. ಭಗವತ್‍ಗೀತೆ, ಉಪನಿಷತ್ ಹಾಗು ವೇದಗಳ ಪಠಣ, ಮಕ್ಕಳ ಕೂಟ ಅದರಲ್ಲಿ ಮಕ್ಕಳಿಗೆ ನಮ್ಮ ಸಂಸ್ಕøತಿ ಬಗ್ಗೆ ಪರಿಚಯ ಮಾಡಿಕೊಡುವ ತರಗತಿಗಳು ಹಾಗು ದೊಡ್ಡವರಿಗೆ ಅಧ್ಯಯನ ಗುಂಪುಗಳನ್ನು ನಡೆಸುತ್ತಾರೆ. ಎಲ್ಲಾ ಭಾರತೀಯ ಹಬ್ಬಗಳನ್ನು ಆಚರಿಸುತ್ತಾರಂತೆ. ನಾವು ನವರಾತ್ರಿ ಸಮಯದಲ್ಲಿ ಹೋಗಿದ್ದರಿಂದ ಎರಡು ದಿನ ಪೂಜೆಯನ್ನು ನೋಡಲು ಹೋಗಿದ್ದೆವು ಸಂಜೆ ಏಳು ಗಂಟೆಯಿಂದ ಒಂಭತ್ತುವರೆವರೆಗೆ ನಡೆಸಿದರು. ಇನ್ನೊಂದು ನೈಯಾರ್ಕ್‍ನ ಫ್ಲಷಿಂಗಟನ್ ನಲ್ಲಿರುವ ಗಣಪತಿ ದೇವಸ್ಥಾನ. ಒಂದೇ ಸ್ಥಳದಲ್ಲಿ ಎಲ್ಲಾ ದೇವರುಗಳ ಪ್ರತಿಷ್ಟಾಪನೆ ಮಾಡಿದ್ದಾರೆ. (ಬಹುಶ: ಇದೇ ಪರಿಕಲ್ಪನೆ ನಮ್ಮ ದೇಶದಲ್ಲೂ ಹೊಸ ದೇವಸ್ಥಾನಗಳನ್ನು ಕಟ್ಟುವಾಗ ಎಲ್ಲಾ ದೇವರುಗಳನ್ನು ಪ್ರತಿಷ್ಟಾಪಿಸುವ ಪದ್ದತಿ ಬೆಳೆದುಬಂದಿರಬೇಕು.) ಎಲ್ಲಾ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿತ್ತು. ನಂಬಿಕೆ ಆಚರಣೆಗಳು ಭೂಮಿ ಮೇಲಲ್ಲ ಆಕಾಶಕ್ಕೆ ಹೋದರು ನಮ್ಮನ್ನು ಬಿಡುವುದಿಲ್ಲವೆನಿಸುತ್ತದೆ.
ಎಲ್ಲವೂ ಚೆನ್ನಾಗಿದ್ದರೂ ಅದುವೆ ಅಂತಿಮವಲ್ಲ. ಎಲ್ಲರಿಗೂ ಮಾದರಿಯಾಗಲು ಸಾಧ್ಯವಿಲ್ಲ. ಒಳ್ಳೆಯದು ಅನಿಸಿದ್ದನ್ನು ನಮ್ಮ ಪರಿಸ್ಥಿತಿಗೆ ಅನುಗುಣವಾಗಿ ಅಳವಡಿಸಿಕೊಂಡರೆ ಸೂಕ್ತವೆನಿಸುತ್ತದೆ. 
ಅಮೇರಿಕಾದ ಬಗ್ಗೆ ಹೇಳಲು, ಚರ್ಚಿಸಲು ಇನ್ನೂ ಸಾಕಷ್ಟು ವಿಷಯಗಳಿದ್ದರು ನನ್ನ ಜ್ಞಾನ, ಮಾಹಿತಿಯ ಮಿತಿಯೊಳಗೆ ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ. ಇದು ಸಂಪೂರ್ಣವಾಗಿ ನನ್ನ ವೈಯಕ್ತಿಕ ಅನಿಸಿಕೆ ಅಭಿಪ್ರಾಯವಷ್ಟೆ.



ಡಾ|| ಹೇಮಲತಾ ಎಚ್.ಎಮ್

ಮಹಿಳಾ ಅಧ್ಯಯನ ವಿಭಾಗ
ಕರ್ನಾಟಕ  ರಾಜ್ಯ ಮಹಿಳಾ ವಿಶ್ವವಿದ್ಯಾಲಯ
ಸ್ನಾತಕೋತ್ರರ ಮತ್ತು ಸಂಶೋಧನಾ ಹೊರಾವರಣ ಕೇಂದ್ರ
ಮಂಡ್ಯ.

ಕಾಮೆಂಟ್‌ಗಳಿಲ್ಲ: