ದೈಹಿಕವಾಗಿ ಕಣ್ಮರೆಯಾದರೂ ಜನಮಾನಸದಲ್ಲಿ ಸದಾ ಹಸಿರಾಗಿ ನೆನಪಿನಲ್ಲಿರುವ ಮತ್ತು ಆ ನೆನಪಿನೊಳಗೆ ಇದ್ದು ಮತ್ತೆ ಮತ್ತೆ ಕಾಡುವ ಕೆಲವೇ ಅಪರೂಪದ ವ್ಯಕ್ತಿಗಳಲ್ಲಿ ಕಾಳಿಂಗರಾಯರು ಒಬ್ಬರು. ಸುಗಮ ಸಂಗೀತವೆಂದ ಕೂಡಲೇ ನೆನಪಾಗುವುದು ಕಾಳಿಂಗರಾಯರು. ಅವರು ಕನ್ನಡ ಸಾಹಿತ್ಯದ ಶ್ರೇಷ್ಠ ಕವಿಗಳ ಅತ್ಯುತ್ತಮ ಕಾವ್ಯವನ್ನು ಮನೆಮಂದಿಗೆ ತಲುಪಿಸಿದರು; ಸಾಹಿತ್ಯದ ಸವಿಯನ್ನು ಸಂಗೀತದ ಬಟ್ಟಲಲ್ಲಿ ಹೊತ್ತು ತಂದವರು. ಕಾವ್ಯದೊಂದಿಗೆ ಗಾನಸುಧೆಯನ್ನು ಜನಸಾಮಾನ್ಯರಿಗೂ ಹರಿಸಿದವರು. ಸಂಗೀತದ ಬಗ್ಗೆ ಆಳವಾದ ಜ್ಞಾನವಿಲ್ಲದವನೂ ಅವರ ಹಾಡುಗಳನ್ನು ಗುನುಗಬಹುದು. ಕಾಳಿಂಗರಾಯರ ಹೆಸರಿಲ್ಲದೆ ಕರ್ನಾಟಕದಲ್ಲಿ ಸುಗಮ ಸಂಗೀತದ ಕುರಿತು ಮಾತು ಅಪೂರ್ಣ; ಅವರನ್ನು ನೆನೆಯದೆ ಭಾವಗೀತೆ ಗಾಯನ ಅಸಾಧ್ಯ. ಈ ವರ್ಷ 2014, ಅವರ ಜನ್ಮ ಶತಮಾನೋತ್ಸವದ ವರ್ಷ. ಹಾಗಾಗಿ ಅವರನ್ನು ನೆನಪಿಸಿಕೊಳ್ಳುವ ಸುಸಂದರ್ಭ.
ಕಾಳಿಂಗರಾಯರಂತೆ ಅನೇಕರು ಕನ್ನಡ ಗೀತೆಗಳನ್ನು, ಭಾವಗೀತೆಗಳನ್ನು ಹಾಡಿದ್ದಾರೆ, ಹಾಡುತ್ತಲೂ ಇದ್ದಾರೆ. ಅವರ ಕಾಲದಲ್ಲೇ ಕನ್ನಡ ಹಾಡುಗಳನ್ನು – ಅದು ಜಾನಪದ, ವಚನ, ಭಾವಗೀತೆ, ದಾಸರ ಪದಗಳು ಯಾವುದೇ ಆಗಿರಬಹುದು – ಎಲ್ಲ ಜನರಿಗೂ ಒಗ್ಗುವಂತೆ, ಎಲ್ಲರಿಗೂ ಕೇಳಲು ಇಷ್ಟವಾಗುವಂತೆ ಮತ್ತು ಎಲ್ಲದ್ದಕ್ಕಿಂತ ಹೆಚ್ಚಾಗಿ ಅದರ ಭಾವವು ಕೇಳುಗರ ಹೃದಯದಾಳಕ್ಕೆ ಇಳಿಯುವಂತೆ ಹಾಡುವ ಪ್ರಯತ್ನಗಳು ನಡೆದಿದ್ದವು.
ಆದರೆ ಆ ಕಾಲದಲ್ಲಿ, ಅಂದರೆ ಸುಮಾರು 20ನೇ ಶತಮಾನದ 30ರ ದಶಕದಲ್ಲಿ ಎಂದುಕೊಳ್ಳಬಹುದೇನೋ, ಶುದ್ಧ ಶಾಸ್ತ್ರೀಯ ಸಂಗೀತ ಬಿಟ್ಟರೆ ಜಾನಪದ ಚಾಲ್ತಿಯಲ್ಲಿತ್ತು. ಜಾನಪದವನ್ನು ಎಲ್ಲರೂ ಕೇಳಲು ಸಾಧ್ಯವಾಗುತ್ತಿತ್ತು; ಆದರೆ ಶಾಸ್ತ್ರೀಯ ಸಂಗೀತವನ್ನು ಸಂಗೀತದ ವ್ಯಾಕರಣ ಬಲ್ಲವರಿಗೆ ಮಾತ್ರ ಆಸ್ವಾದಿಸಲು ಸಾಧ್ಯವಿತ್ತು. ಶ್ರೀಯುತ ಸಿ.ಎನ್.ಕೃಷ್ಣಮಾಚಾರ್ ಭಾಷೆಯಲ್ಲಿ ಹೇಳುವುದಾದರೆ: “ಆ ಕಾಲದಲ್ಲಿ ದಾಸರ ಪದಗಳನ್ನು ಶರಣರ ಪದಗಳನ್ನು ಹಾಡುವುದೆಂದರೆ ಸೂತಕದ ಮನೆ ಹೊಕ್ಕಂತೆ”
ಸಾಹಿತ್ಯ ಕ್ಷೇತ್ರವು ಮಾತ್ರ ನವೋದಯ ಚಳುವಳಿಯ ಕಾವಿನಲ್ಲಿ ಮಾನವತಾವಾದಿ ಮೌಲ್ಯಗಳನ್ನು ಪ್ರತಿಬಿಂಬಿಸುವ ಸಾಹಿತ್ಯ ಸೃಷ್ಟಿಯಲ್ಲಿ ದಾಪುಗಾಲು ಹಾಕುತ್ತಿತ್ತು. ಬಿ.ಎಂ.ಶ್ರೀ, ಬೇಂದ್ರೆ, ಕುವೆಂಪು, ಇನ್ನಿತರರ ಕಾವ್ಯಗಳು ಹಳೆಯ ಊಳಿಗಮಾನ್ಯ ಪದ್ಧತಿಯ ಮೌಲ್ಯಗಳನ್ನು ಧಿಕ್ಕರಿಸಿ ಮಾನವತಾವಾದಿ ಮೌಲ್ಯಪ್ರಜ್ಞೆಯನ್ನು ಪ್ರತಿಬಿಂಬಿಸುತ್ತಿದ್ದವು. ಆದರೆ ಆ ಸಾಹಿತ್ಯ ಕೇವಲ ಸಾಹಿತ್ಯಾಸಕರು, ವಿದ್ಯಾವಂತರು ಮಾತ್ರ ಆಸ್ವಾದಿಸಲು ಸಾಧ್ಯವಿತ್ತು. ಅದು ಜನರ ನಡುವೆ ಚಿರಪರಿಚಿತವಾಗಿರಲಿಲ್ಲ; ಹಾಗೆ ಆಗಬೇಕಾದದ್ದು ಅವಶ್ಯಕವಾಗಿತ್ತು.
ಇಂಥ ಹಿನ್ನೆಲೆಯಲ್ಲಿ, ಕೆಲವು ಸಂಗೀತಗಾರರು ಸಂಗೀತದ ಸವಿಯನ್ನೂ, ಸಾಹಿತ್ಯದ ಹೂರಣವನ್ನೂ ಎಲ್ಲ ಜನರಿಗೂ ಬಡಿಸುವ ಪ್ರಯತ್ನ ಮಾಡಿದರು. ಗಾನಸುಧಾಕರ ಎ.ಸುಬ್ಬರಾಯರು ದಾಸರ ಪದಗಳನ್ನು ಹಾಡುತ್ತಿದ್ದರಂತೆ. ಭಾವಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿ ಹಾಡಿದ ಶಾಸ್ತ್ರೀಯ ಸಂಗೀತಗಾರರಾದ ಆರ್.ಕೆ.ಶ್ರೀಕಂಠನ್ ಶರಣರ ಪದಗಳನ್ನು ಹಾಡುತ್ತಿದ್ದರಂತೆ. ಆ ಕಡೆ ಉತ್ತರ ಕರ್ನಾಟಕದಲ್ಲಿ ಬಾಳಪ್ಪ ಹುಕ್ಕೇರಿಯವರು ಹಿಂದುಸ್ಥಾನಿಯನ್ನು ಶಾಸ್ತ್ರಬದ್ಧವಾಗಿ ಕಲಿತಿದ್ದರೂ, ಲಘು ಸಂಗೀತದ ಮೂಲಕ ವಚನಗಳನ್ನು, ಜಾನಪದ ಗೀತೆಗಳನ್ನು ಜನಸಾಮಾನ್ಯರಿಗೆ ಹಾಡುತ್ತಿದ್ದರು. ಬಹುಶಃ ಅವರು 30ರ ದಶಕದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರಿಂದ - ಅದಕ್ಕಾಗಿ ಅವರು ಜೈಲುವಾಸವನ್ನೂ ಅನುಭವಿಸಿದ್ದರು – ಮತ್ತು ದೇಶಭಕ್ತಿಯ ಭಾವನೆಗಳನ್ನು ಬಿತ್ತಲು ಹಾಡುತ್ತಿದ್ದರಿಂದಲೇ ಜನರಿಗೆ ತಲುಪುವ ಸಂಗೀತ ಅವರಿಗೆ ಸಿದ್ಧಿಸಿತ್ತು. ಸ್ವಾತಂತ್ರ್ಯಾನಂತರ ಬೇಂದ್ರೆ, ಕಾವ್ಯಾನಂದ ಮುಂತಾದವರ ಭಾವಗೀತೆಗಳನ್ನು ಭಾವಪೂರ್ಣವಾಗಿ ಸಂಗೀತದ ಸೌಂದರ್ಯದೊಂದಿಗೆ ಧ್ವನಿ ಮಾಧುರ್ಯದೊಂದಿಗೆ ಹಾಡಲು ಆರಂಭಿಸಿದರು. ಆದರೆ ಇದು ಇಂದು ನಾವು ಸುಗಮ ಸಂಗೀತವೆಂದು ಕರೆಯುವ ರೀತಿಯಲ್ಲಿ ಬೆಳೆದಿರಲಿಲ್ಲ. ಅದಕ್ಕಾಗಿ ಕಾಳಿಂಗರಾಯರಿಗೆ ಕಾಯಬೇಕಿತ್ತು.
ಇಂಥದೊಂದು ಹಿನ್ನೆಲೆಯಲ್ಲಿ ಕಾಳಿಂಗರಾಯರ ಪ್ರವೇಶವಾಯಿತು. ಸುಮಾರು ಐವತ್ತರ ದಶಕದಲ್ಲಿ ಆರಂಭವಾದ ರಾಯರ ಸುಗಮ ಸಂಗೀತದ ಹೊಳೆ ಅವರು ನಿಧನವಾಗುವವರೆಗೂ ನಿರಂತರವಾಗಿ ಹರಿಯುತ್ತಲೇ ಇತ್ತು. ಅವರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ನಾಡಪ್ರೇಮವನ್ನು ಹಚ್ಚಿದರೆ, ಬೇಂದ್ರೆ, ಕುವೆಂಪು, ಅಡಿಗ, ಜಿ.ಪಿ.ರಾಜತ್ನಂ, ಮುಂತಾದವರ ಕಾವ್ಯಗಳ ಭಾವಧಾರೆಯನ್ನು ಹರಿಸಿತು. ಭಾವಗೀತೆ, ವಚನ, ಜಾನಪದ ಗೀತೆ, ದಾಸರ ಪದಗಳನ್ನು ಶಾಸ್ತ್ರೀಯ ಸಂಗೀತದ ತಳಹದಿಯ ಮೇಲೆ ಸಾಹಿತ್ಯ ಮತ್ತು ಭಾವಕ್ಕೆ ಒತ್ತುಕೊಟ್ಟು ಹಾಡುವ ಶೈಲಿಯು ಸುಗಮ ಸಂಗೀತವಾಯಿತು. ಆ ಪ್ರಕಾರವಾಗಿ ಬೆಳೆಸಿ, ಪ್ರಚಾರ ಮಾಡಿ, ಅದಕ್ಕೊಂದು ಸ್ಥಾನಮಾನವನ್ನು ಕೊಟ್ಟವರೆಂದರೆ ಕಾಳಿಂಗರಾಯರೇ. ವಿದುಷಿ ಶ್ಯಾಮಲಾ ಜಿ. ಭಾವೆ ಹೇಳುತ್ತಾರೆ: “ಕನ್ನಡ ಸುಗಮ ಸಂಗೀತಕ್ಕೆ ನಾಂದಿಯಿಟ್ಟವರು ಅಮೀರಾಬಾಯಿ ಕರ್ನಾಟಕಿ ಮತ್ತು ಬಾಳಪ್ಪ ಹುಕ್ಕೇರಿಯವರಂತಹ ಮೇಧಾವಿಗಳಾಗಿದ್ದರೂ ಸಹ, ಅವರ ಹಾದಿಯಲ್ಲೇ ಬೆಳೆದು ಬಂದ ಕಾಳಿಂಗರಾಯರು ಈ ಕ್ಷೇತ್ರಕ್ಕೆ ಮೆರುಗುಕೊಟ್ಟ ಸುಗಮ ಸಂಗೀತರವನ್ನು ಸಂಗೀತ ಸಿಂಹಾಸನದ ಮೇಲೆ ಕುಳ್ಳಿರಿಸಿದ ವ್ಯಕ್ತಿ.” ಆದರೆ ಅವರ ಕ್ಷೇತ್ರ ಕೇವಲ ಸುಗಮ ಸಂಗೀತವಲ್ಲ. ಅದರಲ್ಲಿ ಅವರು ಮೇರು ಪರ್ವತದಂತೆ. ಹಾಗಾಗಿಯೇ ಅವರ ಇತರ ಕ್ಷೇತ್ರಗಳ ಕೆಲಸಗಳು, ಅದರಲ್ಲಿ ಅವರು ಮಾಡಿದ ಸಾಧನೆ, ಅವುಗಳಲ್ಲಿದ್ದ ಅವರ ಪ್ರತಿಭೆ ಹಿಂದೆ ಸರಿದಿವೆ. ಅವರು ಯಕ್ಷಗಾನ ನಟರು, ನಾಟಕ ಸಂಗೀತ ಸಂಯೋಜಕರು ಮತ್ತು ನಟರು, ಸಿನಿಮಾ ಸಂಗೀತ ನಿರ್ದೇಶಕರು ಮತ್ತು ನಟರು, ಹೀಗೆ ಎಲ್ಲವು. ಅವರು ಸುಗಮ ಸಂಗೀತವನ್ನು ಹುಟ್ಟುಹಾಕುವ ದೈತ್ಯಕೆಲಸಕ್ಕೆ ಇವೆಲ್ಲವೂ ಹಿನ್ನೆಲೆಯಾಗಿ, ತಯಾರಿಯಾಗಿ, ಪ್ರಯೋಗವಾಗಿ ಕೆಲಸ ಮಾಡಿವೆ. ಅದನ್ನು ಅವಲೋಕಿಸಬೇಕು.
ಶಾಲೆಗೆ ಚಕ್ಕರ್ ಯಕ್ಷಗಾನಕ್ಕೆ ಹಾಜರ್:
ದಕ್ಷಿಣ ಕನ್ನಡದ ಆರೂರು ಗ್ರಾಮದಲ್ಲಿ 1914ನೇ ಆಗಸ್ಟ್ 31ರಂದು ಜನಿಸಿದ ಕಾಳಿಂಗರಾಯರಿಗೆ ಶಾಲೆಯಲ್ಲಿ ಯಾವ ಆಕರ್ಷಣೆಯೂ ಕಾಣಲಿಲ್ಲ. ಬದಲಿಗೆ ಯಕ್ಷಗಾನದ ಬಣ್ಣದ ವೇಷ, ಕುಣ ತ, ಮದ್ದಳೆಯ ಬಡಿತ ಮನೋಹರವಾಗಿ, ಅತ್ಯಂತ ಆಕರ್ಷಣ ೀಯವಾಗಿ ಕಂಡಿರಬೇಕು. ಜೊತೆಗೆ ತಂದೆ ‘ಗೆಜ್ಜೆ ಪುಟ್ಟಯ್ಯ’ ಎಂದೇ ಪ್ರಖ್ಯಾತರಾಗಿದ್ದ ಪಾಂಡೇಶ್ವರ ನಾರಾಯಣರಾವ್ ಸ್ವತಃ ಯಕ್ಷಗಾನ ಕಲಾವಿದರು. ಸುತ್ತಮುತ್ತ ಯಕ್ಷಗಾನದ ವಾತಾವರಣ. ಯಕ್ಷಗಾನವನ್ನೇ ಉಸಿರಾಡುತ್ತಿದ್ದ ಕಾಳಿಂಗರಾಯರು ಯಕ್ಷಗಾನದ ಸೆಳೆತಕ್ಕೆ ಸೋತರು. ಅವರು ಯಕ್ಷಗಾನದಲ್ಲಿ ಅಭಿನಯಿಸಲು ಆರಂಭಿಸಿದರು. ಏಳೆಂಟು ವರ್ಷಗಳ ಕಾಲ ಸಂಗೀತವನ್ನು ಅಭ್ಯಾಸ ಮಾಡಿದರು. ಮುಂಡಾಜೆ ರಂಗನಾಥ ಭಟ್ಟರ ‘ಅಂಬಾ ಪ್ರಸಾದಿತ ನಾಟಕ ಮಂಡಳಿ’ ರಾಯರನ್ನು ಸೆಳೆದುಕೊಂಡಿತ್ತು. ಅಲ್ಲಿ ಏಳೆಂಟು ವರ್ಷಗಳ ಕಾಲ ಯಕ್ಷಗಾನದಲ್ಲೇ ರಂಗದ ಹಿನ್ನೆಲೆಯಲ್ಲೇ ಹಾಡುತ್ತಾ ಕಾಲ ಕಳೆದರು. ಆನಂತರವೇ ಅವರಿಗೆ ಸ್ತ್ರೀ ಪಾತ್ರಗಳನ್ನು ಮಾಡುವುದಕ್ಕೆ ಅವಕಾಶ ಸಿಕ್ಕಿತು.
ಅವರು ಯಕ್ಷಗಾನದಿಂದ ಸಂಗೀತ ಕ್ಷೇತ್ರಕ್ಕೆ ಪೂರ್ಣವಾಗಿ ತೊಡಗಿಕೊಳ್ಳಲು ಶಿವಮೊಗ್ಗದಲ್ಲಿ ನಡೆದ ಘಟನೆಯೇ ದೊಡ್ಡ ತಿರುವು. ಸುಮಾರು ಹದಿನಾರರ ಹರೆಯದ ಯುವಕ, 1944ರಲ್ಲಿ ಶಿವಮೊಗ್ಗದಲ್ಲಿ ಸಂಗೀತ ಕಛೇರಿಯನ್ನು ನಡೆಸಿ ಜೈ ಎನಿಸಿಕೊಂಡರು. ಆಗಿನ ಜಿಲ್ಲಾಧಿಕಾರಿಗಳಾಗಿದ್ದ ಬಿ.ಟಿ.ಕೇಶವ ಅಯ್ಯಂಗಾರ್ಯರು ರಾಯರಿಗೆ ಶಾಲು ಹೊದಿಸಿ, ಚಿನ್ನದ ಕಡಗ ತೊಡಿಸಿ ಅಭಿನಂದಿಸಿದರು. ಇದರಿಂದ ರಾಯರು ಉತ್ತೇಜಿತರಾದರು; ಸಂಗೀತದ ಆಕರ್ಷಣೆ ಬಲವಾಯಿತು. ಅವರಿಗೆ ರಾಮಚಂದ್ರ ಬುವಾ ಮತ್ತು ರಾಮದುರ್ಗದ ವೆಂಕಟರಾವ್ ಬಳಿ ಹಿಂದೂಸ್ತಾನಿ ಸಂಗೀತವನ್ನು ಆಳವಾಗಿ ಅಭ್ಯಾಸವಾಯಿತು.
ಸಂಗೀತ, ಸಿನಿಮಾ ಮತ್ತು ರಂಗಭೂಮಿ
ಕಾಳಿಂಗರಾಯರು ರಂಗಭೂಮಿಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಒಂದು ರೀತಿಯಲ್ಲಿ ಅದು ಜೀವನೋಪಾಯವೂ ಆಗಿತ್ತು. ತಾವು ನಟಿಸುತ್ತಿದ್ದ ನಾಟಕ ಕಂಪೆನಿ ಮುಚ್ಚುವ ಹಂತದಲ್ಲಿದ್ದಾಗ, ಅದರ ಜವಾಬ್ದಾರಿಯನ್ನು ಹೊತ್ತುಕೊಂಡು ತಾವೇ ನಾಯಕರಾಗಿದ್ದ ‘ರಾಯರ ಸೊಸೆ’ಯನ್ನು 1947ರಲ್ಲಿ ರಂಗಕ್ಕೆ ತಂದರು. ಈ ಸಾಹಸ ಬಹಳ ಕಾಲ ನಡೆಯಲಿಲ್ಲ. ನಂತರ ತಮ್ಮನ್ನು ನಾಟಕಕ್ಕೆ ಸಂಗೀತ ನೀಡುವುದಕ್ಕೆ ಸೀಮಿತಗೊಳಿಸಿಕೊಂಡರು. ಇದು ಮುಂದೆ ಕಾಳಿಂಗರಾಯರು ಸಂಗೀತದ, ಸುಗಮ ಸಂಗೀತದ ಪ್ರವರ್ತಕನಾಗಲು ಅವಕಾಶವನ್ನು ತೆರೆದಿಟ್ಟಿತು. 1955ರಲ್ಲಿ ಗುಬ್ಬಿ ವೀರಣ್ಣನವರ ‘ದಶಾವತಾರ’ ನಾಟಕಕ್ಕೆ ಕಾಳಿಂಗರಾಯರು ಸಂಗೀತ ಸಂಯೋಜನೆ ಮಾಡಿದರು. ಅದು ಅದ್ಭುತ ಯಶಸ್ಸು ಕಂಡಿತು. ಕಾಳಿಂಗರಾಯರು ಸಂಗೀತಗಾರರಾಗಿ ಮುಂದೆ ಬಂದರು.
ಕಾಳಿಂಗರಾಯರಲ್ಲಿದ್ದ ಪ್ರತಿಭೆ ಸಿ.ರಾಜಗೋಪಾಲಾಚಾರ್ಯರ ಕಣ ್ಣಗೆ ಹೇಗೆ ಬಿತ್ತೊ ಗೊತ್ತಿಲ್ಲ. ಅವರು ಕಾಳಿಂಗರಾಯರನ್ನು ಮದರಾಸಿನ ‘ಹಿಂದಿ ಪ್ರಚಾರ ಸಭಾ’ದ ಪ್ರಾಂಶುಪಾಲರಾಗಲು ಆಹ್ವಾನಿಸಿದರು. ಆಹ್ವಾನವನ್ನು ಮನ್ನಿಸಿ ಕಾಳಿಂಗರಾಯರು ಮದರಾಸಿಗೆ ಪಯಣ ಬೆಳೆಸಿದರು. ಅಲ್ಲಿ ಅವರ ಸಂಗೀತ ಅಭ್ಯಾಸ ಚೆನ್ನಾಗಿ ಸಾಗಿತು ಎನ್ನುತ್ತಾರೆ. ಅವರಿಗೆ ಮೋಹನ್ ಕುಮಾರಿ ಮತ್ತು ಸೋಹನ್ ಕುಮಾರಿ ಸೋದರಿಯರು ದಿಕ್ಕುಕಾಣದೆ ಮದರಾಸಿಗೆ ಬಂದಿಳಿದಾಗ ಅವರ ಪರಿಚಯವಾಯಿತು. ಅಲ್ಲಿಂದಾಚೆಗೆ ಅವರಿಬ್ಬರೂ ಕಾಳಿಂಗರಾಯರ ಶಿಷ್ಯೆಯರು ಮತ್ತು ಸಂಗೀತದ ಒಂದು ಭಾಗವೇ ಆಗಿಬಿಟ್ಟರು. ಕನ್ನಡ ಕಲಿತು, ಕನ್ನಡಿಗರಿಗಿಂತ ಹೆಚ್ಚಾಗಿ ಕನ್ನಡ ಕೆಲಸ ಮಾಡಿದರು. ಒಂದು ರೀತಿಯಲ್ಲಿ ಅವರು ಇಲ್ಲದೆ ಕಾಳಿಂಗರಾಯರ ಸಂಗೀತ, ಹಾಡುಗಾರಿಕೆ ಅಪೂರ್ಣವೇನೋ!
ಆಗಿನ ಕಾಲದಲ್ಲಿ ಕನ್ನಡ ಸಿನಿಮಾದ ಧ್ವನಿಮುದ್ರಣ, ಸಂಕಲನಗಳು ಮದರಾಸಿನಲ್ಲೇ ನಡೆಯುತ್ತಿದ್ದವು. ಬಹುಶಃ ಆ ಕಾರಣದಿಂದಲೇ ಕಾಳಿಂಗರಾಯರಿಗೂ ಸಿನಿಮಾಗೂ ನಂಟು ಬೆಳೆದಿರಬಹುದು. ಜೊತೆಗೆ ಕಾಳಿಂಗರಾಯರು ರಂಗಭೂಮಿಯಲ್ಲಿ ಕೆಲಸ ಮಾಡಿದ್ದರಿಂದ ಸಿನಿಮಾದಲ್ಲೂ ರಂಗಭೂಮಿ ಕಲಾವಿದರೇ ಇದ್ದಿದ್ದರಿಂದ, ಅವರು ಸಿನಿಮಾ ರಂಗಕ್ಕೆ ಪ್ರವೇಶಿಸಲು ಕಾರಣವಾಯಿತು ಎಂದುಕೊಳ್ಳಬಹುದು.
ಚಿತ್ರರಂಗದಲ್ಲಿ ಕಾಳಿಂಗರಾಯರ ಸಂಗೀತ ನಿರ್ದೇಶನ ಅದ್ಭುತ ಯಶಸ್ಸು ಕಂಡಿತು. ಅವರಲ್ಲಿದ್ದ ದೈತ್ಯ ಪ್ರತಿಭೆಯ ಕಿರುನೋಟವನ್ನು ಕಾಣಬಹುದು. ತಮ್ಮ ಆರಂಭದ ಸಿನಿಮಾಗಳಲ್ಲಿ ನುರಿತ ಸಂಗೀತಗಾರನಂತೆ ಸಂಗೀತ ಅಳವಡಿಸಿದ್ದಾರೆ. ಭಾವನೆಗಳಿಗೆ ತಕ್ಕಂತೆ ಹಿನ್ನೆಲೆ ಸಂಗೀತ; ಹಾಡುಗಳಿಗೆ ಅವುಗಳ ಭಾವಗಳಿಗೆ ತಕ್ಕಂತೆ ಸಂಗೀತದ ಅಳವಡಿಕೆ; ಇದೆಲ್ಲವೂ ಬಹಳ ಅದ್ಭುತವಾಗಿದೆ. ಅವರು ಸಿನಿಮಾದಲ್ಲೇ ಶಾಸ್ತ್ರೀಯ ಸಂಗೀತದ ಜ್ಞಾನವನ್ನು, ಜಾನಪದ ಮತ್ತು ಪಾಶ್ಚಾತ್ಯ ಸಂಗೀತಗಳೊಂದಿಗೆ ಮೇಳೈಸಿ ಪರಿಣಾಮಕಾರಿಯಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರು ‘ಪ್ರೇಮಸಾಗರ’, ‘ವಸಂತಸೇನಾ’ (1941), ‘ಶ್ರೀಕೃಷ್ಣಲೀಲಾ’ (1947), ‘ಕೈವಾರ ಮಹಾತ್ಮೆ’, ‘ಭಕ್ತ ರಾಮದಾಸ’ (1948), ‘ಕಲಾವಿದ’ (1949), ‘ನಟಶೇಖರ’ (1954), ‘ಅಬ್ಬಾ ಆ ಹುಡುಗಿ’ (1959), ‘ಬ್ಲಾಕ್ ಮಾರ್ಕೆಟ್’, ‘ಮಹಾಶಿಲ್ಪಿ’ (1960), ‘ಹೃದಯ ವೀಣೆ’, ‘ಕಲ್ಪನಾ’, ‘ತುಂಬಿದ ಕೊಡ’, ಇನ್ನಿತರ ಕನ್ನಡ ಸಿನಿಮಾಗಳಿಗೆ ಮತ್ತು ‘ಶಶಿಧರನ್’, ‘ಚೇಚಿ’ ಮಲಯಾಳಂ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡಿದರು ಮತ್ತು ಕೆಲವು ಸಿನಿಮಾಗಳಲ್ಲಿ ನಟಿಸಿ, ಹಾಡಿದ್ದಾರೆ.
ಇದೆಲ್ಲವೂ ಮುಂದೆ ಬರಲಿರುವ, ಬರಬೇಕಾಗಿದ್ದ ಸುಗಮ ಸಂಗೀತದ ಮಹಾಪ್ರದರ್ಶನಕ್ಕೆ ತಾಲೀಮಿನಂತಾಗಿತ್ತು. ಕಾಳಿಂಗರಾಯರಿಗೆ ಕಛೇರಿ ಕೊಡುವಷ್ಟು ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜ್ಞಾನವಿತ್ತು. ಜಾನಪದ ಮತ್ತು ಪಾಶ್ಚಾತ್ಯ ಸಂಗೀತಗಳ ಪರಿಚಯವಿತ್ತು. ಸಂಗೀತದ ಗಂಧಗಾಳಿ ತಿಳಿಯದವರಿಂದ ಹಿಡಿದು ಸಂಗೀತಗಾರರವರೆಗೂ, ಎಲ್ಲರೂ ತಲೆತೂಗುವಂತಹ ಸಂಗೀತ ಸಂಯೋಜನೆಯ ಗುಟ್ಟು ತಿಳಿದಿತ್ತು. ಆದರೆ ಅದಕ್ಕೊಂದು ಸರಿಯಾದ ಗುರಿ, ಸ್ಪಷ್ಟದಾರಿಗಳನು ಕಂಡುಕೊಳ್ಳುವ ಅಗತ್ಯವಿತ್ತು. ಅಲ್ಲಿ ಕನ್ನಡದ ಭಾವಗೀತೆಗಳು ಅವರಿಗೆ ದಾರಿತೋರಿದವು.
ಸುಗಮ ಸಂಗೀತದ ಆದ್ಯ ಪ್ರವರ್ತಕ
ಕಾಳಿಂಗರಾಯರಿಗೆ ಅನಕೃ ‘ಶಾಸ್ತ್ರೀಯ ಸಂಗೀತ ಕೆಲವೇ ಜನಕ್ಕೆ ತಲುಪುವಂಥಾದ್ದು, ಆದರೆ ಭಾವಗೀತೆ ಮತ್ತು ಜನಪದ ಗೀತೆ ಎಲ್ಲಾ ವರ್ಗದ ಜನತೆಯನ್ನು ತಲುಪುತ್ತದೆ’ ಎಂದು ಹೇಳುತ್ತಿದ್ದರೆಂದು ಶ್ರೀ ಗಣೇಶ ಕಾಸರಗೋಡು ಬರೆಯುತ್ತಾರೆ. ಬಹುಶಃ ಸಿನಿಮಾ ಹಾಡುಗಳು ಕಾಳಿಂಗರಾಯರನ್ನು ತೃಪ್ತಿಪಡಿಸಲು ಸಾಧ್ಯವಾಗಿಲ್ಲ. ಅವರ ಅಭಿರುಚಿ ಬಹಳ ಉತ್ತಮವಾದದ್ದು ಮತ್ತು ಅವರ ಸೃಜನಶೀಲತೆಗೆ ಸಿನಿಮಾ ಸಂಗೀತ ಸಕಾಗಲಿಲ್ಲವೇನೋ! ಶ್ರೀಮತಿ ಎಚ್.ಆರ್.ಲೀಲಾವತಿಯವರ ಅಭಿಪ್ರಾಯದಂತೆ ಕಾಳಿಂಗರಾಯರು, “ಚಿತ್ರಬಹ್ಮರ ಅಪ್ಪಣೆಯ ಮೇರೆಗೆ ಟ್ಯೂನ್‍ಗಳನ್ನು ಸಿದ್ಧಪಡಿಸುವ ಕಾಯಕದಿಂದ ಬೇಸರಗೊಂಡರು. ಕಾಡಹಕ್ಕಿ ಸ್ವಾತಂತ್ರ್ಯ ಕಳೆದುಕೊಂಡು, ಪಂಜರದಲ್ಲಿ ಎಷ್ಟು ದಿನ ತಾನೆ ಬದುಕಲು ಸಾಧ್ಯ?” ಆದ್ದರಿಂದ ಅವರು ಕನ್ನಡ ಕಾವ್ಯದತ್ತ ಕಣ್ಣು ಹಾಯಿಸಿರಬಹುದು. ಜೊತೆಗೆ ಅಂದಿನ ಸಮಾಜದ ಸಾಂಸ್ಕøತಿಕ ಅಗತ್ಯಕ್ಕೆ ತಕ್ಕಂತೆ ಅವರ ಕಾವ್ಯಗಳ ಆಯ್ಕೆಯಿದೆ. ಅದು ದಾಸರ ಪದವಾಗಿರಬಹುದು, ಭಾವಗೀತೆಯಾಗಿರಬಹುದು, ಜಾನಪದ ಗೀತೆಯಾಗಿರಬಹುದು. ಅದೆಲ್ಲವೂ ಜನಜೀವನಕ್ಕೆ ಸಂಬಂಧಪಟ್ಟಿದ್ದು ಮತ್ತು ಸದ್ಭಾವವನ್ನು ಬೆಳೆಸುವಂತದ್ದು ಆಗಿದ್ದವು.
ಅವರನ್ನು ಖ್ಯಾತಿಯ ತುತ್ತತುದಿಗೇರಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಕರ್ನಾಟಕ ಏಕೀಕರಣದ ಚಳುವಳಿಯ ಭಾವವನ್ನು ಅಭಿವ್ಯಕ್ತಗೊಳಿಸುತ್ತದೆ. ಕಾಳಿಂಗರಾಯರು ಅಡಿಗರ ‘ಕಟ್ಟುವೆವು ನಾವು’ ಕವನದಲ್ಲಿರುವ ಸಾಮಾಜಿಕ ಸಮಾನತೆಯನ್ನು, ಬೇಂದ್ರೆಯವರ ‘ಮುಗಿಲ ಮಾರಿಗೆ’ಯಲ್ಲಿರುವ ಪ್ರೇಮಾನುಭವನ್ನು, ‘ಇಳಿದು ಬಾ ತಾಯಿ’ಯು ಕನ್ನಡ ತಾಯಿಗೆ ನೀಡುವ ಆಹ್ವಾನವನ್ನು, ಜಿ.ಪಿ.ರಾಜರತ್ನಂ ಕವಿತೆಗಳಲ್ಲಿ ಕಾಣುವ ತಳಮಟ್ಟದಲ್ಲಿರುವ ಜನರಲ್ಲೂ ಇರುವ ಉತ್ತಮ ಗುಣಗಳು, ಹಾಸ್ಯ ಪ್ರವೃತ್ತಿಗಳು, ಇದೆಲ್ಲವನ್ನೂ ತುಂಬಾ ಚೆನ್ನಾಗಿ ಸಂಗೀತದ ಮೂಲಕ ಅಭಿವ್ಯಕ್ತಿಗೊಳಿಸಿದ್ದಾರೆ.
ಅವರಿಗೆ ತಮ್ಮ ಶಾಸ್ತ್ರೀಯ ಸಂಗೀತದ ಪಾಂಡಿತ್ಯವನ್ನು ಪ್ರದರ್ಶಿಸುವ ಖಯ್ಯಾಲಿ ಇರಲಿಲ್ಲ. ಹಾಗೆಯೇ ಜನರನ್ನು ಹೇಗೋ ಒಂದು ರಂಜಿಸುವಂತಹ ಅಗ್ಗದ ಪ್ರಚಾರಪ್ರಿಯತೆಯೂ ಇರಲಿಲ್ಲ. ಈ ವಿಷಯದಲ್ಲಿ ಅವರ ನಿಲುವು ಬಹಳ ಸ್ಪಷ್ಟವಾಗಿದೆ. ಶ್ರೀಯುತ ಶಿವಮೊಗ್ಗ ಸುಬ್ಬಣ್ಣ ನೆನಪಿಸಿಕೊಳ್ಳುವಂತೆ ಕಾಳಿಂಗರಾಯರು, “ನೋಡಯ್ಯ, ನಾನು ಭೀಮಸೇನ ಜೋಶಿ ಅಥವಾ ಚಂಬೈ ವೈದ್ಯನಾಥ ಭಾಗವತರ ಕೆಲಸ ಮಾಡಬೇಕಿಲ್ಲ. ನನ್ನ ಕೆಲಸ ಕುವೆಂಪು, ಬೇಂದ್ರೆ, ಅಡಿಗ ಅವರ ಕಾವ್ಯವನ್ನು ಜನರಿಗೆ ಮುಟ್ಟಿಸುವುದೇ ಆಗಿದೆ. ನನ್ನದು ಕಛೇರಿಯಲ್ಲ” ಎನ್ನುತ್ತಿದ್ದರಂತೆ.
ಎಸ್.ಕೃಷ್ಣಮೂರ್ತಿಯವರು ತಮ್ಮ ನೆನಪಿನಾಳದಿಂದ ಕಾಳಿಂಗರಾಯರ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ: “ಕಾಳಿಂಗರಾಯರು ‘ನನ್ನ ಸಂಗೀತರ ಗಗನಕುಸುಮವಾದರೆ ಏನು ಪ್ರಯೋಜನ? ನೆಲದ ಮಟ್ಟ ಮುಟ್ಟಿ ಮಣ ್ಣನ ಮಗ ಕುಣ ಯುವಂತಾಗಬೇಕು’ ಎನ್ನುತ್ತಿದ್ದರು. ಬರಬರುತ್ತ ಈ ಬಯಕೆ ಅವರಲ್ಲಿ ಆಳವಾಗಿ ಬೇರೂರಿಬಿಟ್ಟಿತು. ಅವರ ದೃಷ್ಟಿ ಶಾಸ್ತ್ರೀಯ ಸಂಗೀತದಿಂದ ‘ಲುಘು ಸಂಗೀತ’ದತ್ತ ವಾಲಿತು. ಆಗಿನ ದಿನಗಳಲ್ಲಿ ಈಗಿನ ಸುಗಮ ಸಂಗೀತವನ್ನು ‘ಲಘು ಸಂಗೀತ’ ಎಂದೇ ಕರೆಯುವುದು ರೂಢಿಯಲ್ಲಿತ್ತು. ಜಾನಪದ ಸಂಗೀತದ ಮೋಹಕ ಧಾಟಿಗಳು ಅವರ ಮನಸೆಳೆದವು. ಶಾಸ್ತ್ರೀಯ ಸಂಗೀತದ ಬುನಾದಿಯ ಮೇಲೆ ಜಾನಪದ ಸಂಗೀತದ ಸೌಧವನ್ನು ನಿರ್ಮಿಸಿದಾಗ ರಾಯರ ಹೆಸರು ಕನ್ನಡ ನಾಡಿನ ಮೂಲೆಮೂಲೆಯಲ್ಲಿಯೂ ಮನೆಮಾತಾಯಿತು.”
ಹಾಗಾಗಿ ಕವನಗಳ ಭಾವಾರ್ಥವನ್ನು ಅಭಿವ್ಯಕ್ತಿಗೊಳಿಸಲು ಸಂಗೀತವನ್ನು ಬಳಸಿಕೊಂಡರು. ಅವರಿಗೆ ಮುಖ್ಯವಾಗಿ ಬೇಕಾಗಿದ್ದು ಎಂದರೆ, ಕವನದ ಭಾವ ಕೇಳುಗನಿಗೆ ಮುಟ್ಟಬೇಕಾದದ್ದು. ಬೇಂದ್ರೆಯವರು ‘ಹುಟ್ಟುವ ಸಾಹಿತ್ಯ ಮುಟ್ಟುವುದರಲ್ಲಿದೆ’ ಎನ್ನುತ್ತಾರೆ. ಕಾಳಿಂಗರಾಯರಿಗೆ ‘ಕಟ್ಟುವ ಹಾಡು ಕೇಳುಗನನ್ನು ಮುಟ್ಟುವುದರಲ್ಲಿ’ ಇತ್ತು. ಕುವೆಂಪು ಒಮ್ಮೆ ಹೇಳಿದ್ದರಂತೆ: “ಸಂಗೀತ ಸಾಹಿತ್ಯವನ್ನು ಹೊತ್ತುಕೊಂಡು ಹೋಗಬೇಕೇ ಹೊರತು ಹತ್ತಿಕೊಂಡಲ್ಲ” ಎಂದು. ಈ ವಿಷಯದಲ್ಲಿ ಕಾಳಿಂಗರಾಯರನ್ನು ತುಂಬಾ ಮೆಚ್ಚಿಕೊಂಡು ಹೊಗಳಿದ್ದರಂತೆ.
ಕಾಳಿಂಗರಾಯರು ಸ್ವರ ಸಂಯೋಜನೆಯಲ್ಲಿ ಯಾವುದಕ್ಕೂ ಅಂಟಿಕೊಂಡವರಲ್ಲ; ಎಲ್ಲದಕ್ಕೂ ತೆರೆದುಕೊಂಡವರು. ಹಾಗಾಗಿ ಅವರ ಹಾಡುಗಳಲ್ಲಿ ವೈವಿಧ್ಯತೆ ಅಪಾರವಾಗಿದೆ. ಸಾಹಿತ್ಯಾರ್ಥಕ್ಕೆ ತಕ್ಕಂತೆ ಸಂಗೀತ. ಇದನ್ನು ಶ್ರೀಮತಿ ಎಚ್.ಆರ್.ಲೀಲಾವತಿ ಹೀಗೆ ವಿವರಿಸುತ್ತಾರೆ: “ರಾಗವೂ ವೈವಿಧ್ಯವೇ, ಸಾಹಿತ್ಯವೂ ವೈವಿಧ್ಯವೇ. ಕಾಳಿಂಗರಾಯರು ಕರ್ನಾಟಕ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜೊತೆಗೆ ಪಾಶ್ಚಾತ್ಯ ಸಂಗೀತದ ಪರಿಚಯವನ್ನೂ ಮಾಡಿಕೊಂಡಿದ್ದರು. ಆದ್ದರಿಂದ ಅವರು ಆಯ್ಕೆ ಮಾಡಿ ಹಾಡುತ್ತಿದ್ದ ಸಾಹಿತ್ಯಗಳಿಗೆ ಉತ್ತರಾದಿ, ದಕ್ಷಿಣ, ಪೌರ್ವಾತ್ಯ, ಪಾಶ್ಚಿಮಾತ್ಯ, ಜಾನಪದ ಹಾಗೂ ಶಾಸ್ತ್ರೀಯ ಸಂಗೀತದ ಉಡಿಗೆ ತೊಡಿಗೆಗಳಿಂದಲಂಕರಿಸಿ ಹಾಡಿದರು. ಜನರ ಹೃದಯ ವೀಣೆಯನ್ನು ಮೀಟಿದರು. ರಾಗ, ಅರ್ಥ, ರಸಬಂಧಗಳೊಂದಿಗೆ ಜನರÀ ಹೃದಯಗಳನ್ನು ಗೆದ್ದರು. ...ಆಯಾಯ ಸಾಹಿತ್ಯದ ಸೊಗಡು, ಸೊಬಗು, ಧ್ವನಿಯನ್ನನುಸರಿಸಿ ಅದಕ್ಕೆ ರಾಗದ ಕವಚ. ಹಾಗಾಗಿ ಸಾಹಿತ್ಯದಲ್ಲಿ ಇರುವ ತನ್ನತನವನ್ನು ಕಾಪಾಡಿಕೊಂಡು ಬಂದಿದ್ದಾರೆ.”
ಇದು ಸಂಗೀತ ಸಂಯೋಜನೆ ಸಂಬಂಧಪಟ್ಟಿದ್ದು. ಅದನ್ನು ಹಾಡುವುದರಲ್ಲೂ ಕಾಳಿಂಗರಾಯರದ್ದು ವಿಶಿಷ್ಟ ಮತ್ತು ಅದ್ವತೀಯ. ಸಾಹಿತ್ಯಕ್ಕೆ ತಕ್ಕಂತೆ ಸಂಗೀತ ಹಾಕಿದರಷ್ಟೇ ಸಾಲದು. ಅದರ ಸರಿಯಾಗಿ ಅಭಿವ್ಯಕ್ತಿಯಾಗುವಂತೆ ಹಾಡಬೇಕು. ಅಲ್ಲಿ ಗಾಯಕನ ಪಾತ್ರ ಮತ್ತು ಪ್ರತಿಭೆ ಇದೆ. ಎಲ್ಲಿ ಸಂಗೀತದ ಏರಿಳಿತಗಳು ಭಾವಕ್ಕೆ ತಕ್ಕಂತೆ ಹೋಗಬೇಕು - ಅತಿ ಸಂಗೀತವೂ ಆಗಬಾರದು ಮತ್ತು ಅತಿ ಸರಳವೂ ಆಗಬಾರದು - ಎಲ್ಲಿ ಒತ್ತುಕೊಟ್ಟು ಹಾಡಬೇಕು ಮತ್ತು ಹೇಗೆ ಭಾವಪೂರ್ಣವಾಗಿ ಹಾಡಬೇಕು, ಇದೆಲ್ಲವೂ ಮುಖ್ಯವಾಗುತ್ತದೆ. ಶ್ರೀಯುತ ಶಿವಮೊಗ್ಗ ಸುಬ್ಬಣ್ಣ ಗಮನಿಸದಂತೆ: “ರಾಗಗಳ ಮೇಲೆ ಅತ್ಯಂತ ಪ್ರಭುತ್ವವಿದ್ದರೂ, ಕವನಗಳ ಅಭಿವ್ಯಕ್ತಿಗೇ ಹೆಚ್ಚಿನ ಮಹತ್ವ ಕೊಡತ್ತಿದ್ದುದರಿಂದ, ಅವರ ಗಾಯನ ಶೈಲಿಯಲ್ಲಿ ಕವಿಯ ಸಾಲುಗಳೇ ಪ್ರಧಾನವಾಗಿರುತ್ತಿದ್ದವೆ ಹೊರತು ಸಂಗೀತವಾಗಿರಲಿಲ್ಲ.”
ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರಾದ್ದರಿಂದ, ಸ್ವತಃ ನಟರೂ ಆಗಿದ್ದರಿಂದ ಹಾಡುಗಳನ್ನು ಅನುಭವಿಸಿ ಹಾಡುವುದಷ್ಟೇ ಅಲ್ಲದೆ ನಟಿಸಿ ಹಾಡುತ್ತಿದ್ದರು. ‘ವಸಂತಸೇನಾ’ದಲ್ಲಿ ಬೌದ್ಧಬಿಕ್ಷುವಾಗಿ ಮತ್ತು ‘ತುಂಬಿದಕೊಡ’ದಲ್ಲಿ ಗಾಯಕರಾಗೇ ನಟಿಸಿ ಹಾಡುವ ಹಾಡುಗಳನ್ನು ನೋಡಿದರೇ ಗೊತ್ತಾಗುತ್ತದೆ ಅವರ ಅಭಿನಯ-ಹಾಡುಗಾರಿಕೆ. ಅದನ್ನು ಎನ್ಕೆಯವರು ಹೀಗೆ ವಣ ್ಸುತ್ತಾರೆ: “...ಭಾವಗೀತೆಗಳನ್ನು, ಜಾನಪದ ಗೀತಗಳನ್ನು ಪ್ರಸ್ತುತಪಡಿಸುವಾಗಿನ ಅವರ ಆ ಅಭಿನಯ, ತಾಳಗತ್ತು, ಹೆಜ್ಜೆ ಹಾಕುತ್ತ, ಸಹಜವಾಗಿ ಧ್ವನಿಯ ಏರಿಳಿತಗಳನ್ನೂ ತಾನಗಳನ್ನೂ ತೆಗೆದುಕೊಳ್ಳುತ್ತಿರುವಾಗ, ಕಾವ್ಯದ ರಾಗ-ಭಾವಗಳು ಎದ್ದು ಬಂದು ಅಂತರಂಗವನ್ನು ಸ್ಪರ್ಶಿಸುತ್ತಿದ್ದವು.”
ಹೀಗೆ ಅವರು ಕನ್ನಡದ ಉತ್ತಮ ಕಾವ್ಯಗಳನ್ನು, ಜಾನಪದ ಗೀತೆಗಳನ್ನು ದಾಸರ ಪದಗಳನ್ನು, ವಚನಗಳನ್ನು ಜನರ ಮನ-ಮನೆಗಳಿಗೆ ಹೊತ್ತುಕೊಂಡು ಹೋದರು. ಅವರು, ಮೋಹನ್ ಕುಮಾರಿ, ಸೋಹನ್ ಕುಮಾರಿ ಜೊತೆಯಾಗಿ ನಾಡಿನಾದ್ಯಂತ ಹಾಡಿದರು. ಸುಗಮ ಸಂಗೀತ ಕಛೇರಿಗಳನ್ನು ನಡೆಸಿದರು. ಸಾಹಿತ್ಯದ ಕಾರ್ಯಕ್ರಮ, ಯಾವುದಾದರೂ ಆಚರಣೆಗಳಿಂದ ಹಿಡಿದು ಮದುವೆ ಮನೆಯವರೆಗೂ ಎಲ್ಲೆಡೆ ಹಾಡಿದರು. ಆತ್ಮೀಯರೊಂದಿಗೆ ಆ ಕ್ಷಣದಲ್ಲೇ ಹಾಡಿದರು. ಹಾಡುವುದು ಅವರ ಉಸಿರಾಯಿತು; ಅವರ ಬದುಕಾಯಿತು. ಅದರಿಂದ ಕನ್ನಡ ಸಾಹಿತ್ಯ ಜನರ ನಾಲಗೆಯಲ್ಲಿ ನಲಿದಾಡಿತು. ಸಂಗೀತ ಕಂಠದಲ್ಲಿ ಹರಿದಾಡಿತು. ಕಾಳಿಂಗರಾಯರು ಈ ದಿಕ್ಕಿನಲ್ಲಿ ಸುಗಮ ಸಂಗೀತವನ್ನು ಹುಟ್ಟುಹಾಕಿ, ಬೆಳೆಸಿದರು; ಅದಕ್ಕೆ ಅವರ ವ್ಯಕ್ತಿತ್ವ, ಅವರ ಬದುಕು, ಅವರ ಜನಾನುರಾಗ, ಸಾಹಿತ್ಯ ಪ್ರೇಮ, ಎಲ್ಲಕ್ಕಿಂತ ಮುಖ್ಯವಾಗಿ ಮಾನವತಾವಾದಿ ಧೋರಣೆಗಳು ಮುಖ್ಯ ಕಾರಣ.
ಉದಾರ ವ್ಯಕ್ತಿತ್ವದ ಸಂಗೀತ ಜಂಗಮ
ಕಾಳಿಂಗರಾಯರಿಗೆ ಸಂಗೀತವೇ ಬದುಕಾಗಿತ್ತೇ ಹೊರತು, ಸಂಗೀತದಿಂದ ಬದುಕಾಗಿರಲಿಲ್ಲ. ಅದರಿಂದಾಗಿಯೇ ಅವರು ಆಸ್ತಿ ಮಾಡಲಿಲ್ಲ. ಅವರೇ ಕನ್ನಡ ನಾಡಿಗೆ ಆಸ್ತಿಯಾದರು. ಅವರಿಗೆ ಹಣ ಬರಲೇ ಇಲ್ಲವೆಂದಲ್ಲ. ಆದರೆ ಅದು ಅವರ ಕೈಯಲ್ಲಿ ಉಳಿಯಲೇ ಇಲ್ಲ. ಅಥವಾ ಹಣಕ್ಕಾಗಿ ಅವರು ಹಾಡಲೂ ಇಲ್ಲ. ಒಂದು ರೀತಿಯ ಜಂಗಮ ಜೀವನ. ಹೋದಲ್ಲಿ ಊಟ, ಮಲಗಿದಲ್ಲಿ ಮನೆ. ಬೇಕಾಗಿದ್ದದ್ದು ಹಾಡಲು ಜಾಗ, ಕೇಳಲು ಜನ. ಅವರಿಗೆ ಹಾಡಲು ಇಂಥದೇ ವ್ಯವಸ್ಥೆ ಎಂತಿಲ್ಲ. ಅದಕ್ಕೆ ಬಹುಶಃ ಎರಡು ಕಾರಣಗಳು. ಒಂದು, ಅವರಿಗೆ ತಮ್ಮ ಹಾಡು ಜನರನ್ನು ತಲುಪಬೇಕು ಎನ್ನುವ ಕಾರಣಕ್ಕಾಗಿ ಪಕ್ಕಾ ಪಕ್ಕವಾದ್ಯವಿಲ್ಲದಿದ್ದರೂ, ಉತ್ತಮ ವ್ಯವಸ್ಥೆಯಿಲ್ಲದಿದ್ದರೂ ಅದೊಂದು ಕೊರತೆ ಎಂದು ಅವರಿಗೆ ಅನಿಸುತ್ತಿರಲಿಲ್ಲ. ಎರಡು, ತಮ್ಮ (ಮೋಹನ್ ಕುಮಾರಿ ಹಾಗೂ ಸೋಹನ್ ಕುಮಾರಿ ಸೇರಿದಂತೆ) ಧ್ವನಿಗಳ ಬಗ್ಗೆ ವಿಶ್ವಾಸವಿತ್ತು. ಅವರು ತಮ್ಮ ಹಾಡುಗಳಲ್ಲಿ ಎಂದೂ ಸಂಗೀತದ ಅಬ್ಬರ ಮಾಡಲೇ ಇಲ್ಲ. ಅದೊಂದು ಹಿನ್ನೆಲೆಯಾಗಿದ್ದು, ಮನುಷ್ಯನ ಧ್ವನಿ ಮುನ್ನೆಲೆಯಲ್ಲಿ ಇರುತ್ತಿತ್ತು.
ಅವರೊಮ್ಮೆ ಒಂದು ಹಳ್ಳಿಗೆ ಹೋಗಿದ್ದಾಗ, ಪಕ್ಕವಾದ್ಯದವರು ಇಲ್ಲದೆ ಭಜನೆಯವರನ್ನೇ ವ್ಯವಸ್ಥೆ ಮಾಡಿದ್ದರಂತೆ. ಕಾಳಿಂಗರಾಯರು ಏನನ್ನೇ ಹಾಡಿದರೂ ಅವರು ಭಜನೆಯಂತೆ ವಾದ್ಯಗಳನ್ನು ನುಡಿಸುತ್ತಿದ್ದರಂತೆ. ಕೊನೆಗೆ ಕಾಳಿಂಗರಾಯರು ನಗುತ್ತಾ ಹಾಡನ್ನೇ ಭಜನೆಯಂತೆ ಹಾಡಿದರು. ಇಲ್ಲಿ ಅವರ ಹೃದಯ ವೈಶಾಲ್ಯತೆಯ ಜೊತೆಗೆ ಅವರ ಪ್ರಾವೀಣ್ಯತೆಯೂ ಕಾಣುತ್ತದೆ. ಯಾವ ಸಂದರ್ಭಕ್ಕಾದರೂ ಹಾಡಬಹುದು.
ಕಾಳಿಂಗರಾಯರಿಗೆ ತಾವು ಹೆಸರು ಮಾಡಬೇಕು ಎನ್ನುವುದು ಮನಸ್ಸಿಗೆ ಬರಲೇ ಇಲ್ಲ. ಹಾಗಾಗಿಯೇ ಅವರು ಎಲ್ಲರನ್ನೂ ಬೆಳೆಸಲು ಪ್ರಯತ್ನಿಸಿದರು. ಅಲ್ಲಿ ಅವರ ನಿಸ್ವಾರ್ಥ ಮನೋಭಾವ ಅನುಕರಣ ೀಯ. ಕಾಳಿಂಗರಾಯರ ಗಾಯನಕ್ಕೆ ಮೈಸೂರು ಅನಂತಸ್ವಾಮಿ ಮ್ಯಾಂಡೊಲಿನ್ ನುಡಿಸುತ್ತಿದ್ದರು. ಮೈಸೂರು ಅನಂತಸ್ವಾಮಿಯವರು ಬೇಂದ್ರೆಯವರ ‘ಇಳಿದು ಬಾ ತಾಯಿ’ ಹಾಡಿಗೆ ತಾವೇ ಸ್ವರ ಸಂಯೋಜನೆ ಮಾಡಿ ಹಾಡುತ್ತಿದ್ದಾಗ, ಅದನ್ನು ಕೇಳಿದ ಕಾಳಿಂಗರಾಯರು ‘ಇದನ್ನು ನಮ್ಮ ಅನಂತು ಮಾಡಿದ್ದು’ ಎನ್ನುತ್ತಾ ತಮ್ಮ ಕಛೇರಿಗಳಲ್ಲಿ ಹಾಡುತ್ತಿದ್ದರು ಎಂದು ಶ್ರೀ ಲಕ್ಷ್ಮಿನಾರಾಯಣ ಭಟ್ಟರು ನೆನಪಿಸಿಕೊಂಡಿದ್ದಾರೆ. ಮುಂದೆ ಕಾಳಿಂಗರಾಯರು ಆ ಹಾಡನ್ನು ಅದೇ ರಾಗದಲ್ಲಿ ಹಾಡುತ್ತಿದ್ದರೇ ಹೊರತು ಮತ್ತೊಂದು ರಾಗ ಸಂಯೋಜನೆ ಮಾಡಲಿಲ್ಲ.
ಅವರ ಈ ಬಗೆಯ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುವಂಥ ಒಂದೆರೆಡು ಘಟನೆಗಳನ್ನು ಶ್ರೀಮತಿ ಎಚ್.ಆರ್.ಲೀಲಾವತಿ ನೆನಪಿಸಿಕೊಳ್ಳುತ್ತಾರೆ: “ಇನ್ನೊಮ್ಮೆ ‘ಉಪಾಸನೆ’ ಚಿತ್ರದಲ್ಲಿ ಒಂದು ಪುಟಾಣ ಹುಡುಗಿ (ಮೈಸೂರು ಎಸ್.ರಾಜಲಕ್ಷ್ಮಿ ಈಗ ಮೈಸೂರು ಆಕಾಶವಾಣ ಯ ನಿಲಯದ ಕಲಾವಿದೆ) ವೀಣೆ ನುಡಿಸಿದಳು. ಅವರ ಮನೆಗೆ ಸದಾ ಕಾಳಿಂಗರಾಯರು ಹೋಗುತ್ತಿದ್ದರು. ಹಾಗಾಗಿ ಆ ಪುಟಾಣ ಹುಡುಗಿಯನ್ನು “ನನ್ನ ಕಾರ್ಯಕ್ರಮ ಟೌನ್‍ಹಾಲಿನಲ್ಲಿದೆ. ನೀನು ನನಗೆ ಬ್ಯಾಕ್‍ಗ್ರೌಂಡ್ ಮ್ಯೂಸಿಕ್ ನುಡಿಸಬೇಕು” ಎಂದು ಹೇಳಿಬಿಟ್ಟರು. ಹುಡುಗಿ ಭಯದಿಂದಲೇ ವೇದಿಕೆಗೆ ಹೋದಳು. ಮೋಹನ ರಾಗದಲ್ಲಿ ಒಂದು ಗೀತೆಯನ್ನು ಹಾಡುತ್ತಾ ಮಧ್ಯೆ ಹುಡುಗಿಯ ಕಡೆ ನೋಡಿದರಂತೆ ರಾಯರು. ಹುಡುಗಿ ಮಧ್ಯೆ ಬಂದ ಅಂತರವನ್ನು ಅಚ್ಚುಕಟ್ಟಾಗಿ, ಧೈರ್ಯದಿಂದ ನುಡಿಸಿದಾಗ ರಾಯರಿಗೆ ವಿಪರೀತ ಸಂತೋಷವಾಗಿ ಹಾಡುವುದನ್ನು ನಿಲ್ಲಿಸಿ, ಆ ಹುಡುಗಿಯ ಕೈಗೆ ನೂರೊಂದು ರೂಪಾಯಿ ಕೊಟ್ಟು ಹುಡುಗಿಯನ್ನು ಎತ್ತಿ ಹಿಡಿದು ಸಭಿಕರಿಗೆ ತೋರಿಸಿದರಂತೆ.
ಮತ್ತೊಂದು ಸಾರಿ ಬೆಂಗಳೂರು ಟೌನ್‍ಹಾಲ್‍ನಲ್ಲಿ ರಾಯರು ಹಾಡುತ್ತಿದ್ದ ಸಮಯ ಅವರ ಅಭಿಮಾನಿ ಕಾಲೇಜು ಹುಡುಗನೊಬ್ಬ, ಅವರ ಹಾಡು ಕೇಳುತ್ತ ಸ್ಟೇಜ್ ಹತ್ತಿರವೇ ನಿಂತಿದ್ದ. ಅವನು ಹಾಡುತ್ತಿದ್ದುದನ್ನೂ ರಾಯರು ಕೇಳಿದ್ದರು. ಹಾಗಾಗಿ ರಾಯರು ಅರ್ಧ ಹಾಡಿದ ಮೇ¯, “ಈಗ ನೀನೊಂದೆರೆಡು ಹಾಡು ಹಾಡೆಂದು” ಹೇಳಿ ಬೆನ್ನು ತಟ್ಟಿ, ಹುಡುಗನನ್ನು ಸ್ಟೇಜಿಗೆ ಕಳುಹಿಸಿದರಂತೆ. ಆ ಹುಡುಗ ಬೇರೆ ಯಾರೂ ಅಲ್ಲ, ನನ್ನ ಪತಿ ಎಸ್.ಜಿ.ರಘುರಾಂ.” ಇನ್ನೂ ಅಪರೂಪವಾದ ಘಟನೆಯೆಂದರೆ, ಭಿಕ್ಷುಕಿಯೊಬ್ಬಳು ತುಂಬಾ ಚೆನ್ನಾಗಿ ಹಾಡುತ್ತಿದ್ದುದನ್ನು ಕೇಳಿದ ರಾಯರು ಆಕೆಯಿಂದು ‘ಭಕ್ತ ರಾಮದಾಸ’ ಸಿನಿಮಾದಲ್ಲಿ ಒಂದು ಹಾಡನ್ನು ಹಾಡಿಸಿದರಂತೆ.
ಹೀಗೆ ಎಲ್ಲಿ ಪ್ರತಿಭೆಗಳು ಕಾಣಲಿ ಅದನ್ನು ಗುರುತಿಸಿ ಅದಕ್ಕೆ ಸೂಕ್ತ ಬೆಲೆಯನ್ನು ಕೊಡುತ್ತಿದ್ದವರು ರಾಯರು. ಹಾಗಾಗಿಯೇ ಅವರ ನಂತರ, ಅವರ ನೆರಳಿನಂತಿದ್ದ, ಅವರಿಂದ ಪ್ರಭಾವಿತಗೊಂಡ ದೊಡ್ಡ ಸುಗಮ ಸಂಗೀತಗಾರರ ತಂಡವೇ ಬೆಳೆದಿದೆ. ಮೈಸೂರು ಅನಂತಸ್ವಾಮಿಯವರನ್ನು ಮದರಾಸಿನಿಂದ ಕರ್ನಾಟಕಕ್ಕೆ ಸಂಗೀತ ಸಂಯೋಜನೆಯನ್ನು ಸ್ವಂತವಾಗಿ ಮಾಡೆಂದು ಕಳುಹಿಸಿದವರೇ ಕಾಳಿಂಗರಾಯರು ಎನ್ನುತ್ತಾರೆ.
ಅವರಂತೆ ಇನ್ನೊಬ್ಬರಿಲ್ಲ
ಹೀಗೆ, ಸಂಗೀತವನ್ನೇ ತನ್ನ ಕಾಯಕವನ್ನಾಗಿ, ಕಾಯದುಸಿರನ್ನಾಗಿ ಮಾಡಿಕೊಂಡ ಕಾಳಿಂಗರಾಯರು ಬಹಳ ಎತ್ತರಕ್ಕೆ ಬೆಳೆದರು. ಅವರಿಗೆ ಮಧ್ಯಸೇವನೆಯ ಅಭ್ಯಾಸವೊಂದು ಅವರ ಆರೋಗ್ಯವನ್ನು ಹಾಳು ಮಾಡಿತು ನಿಜ. ಆದರೆ ಅದೆಂದೂ ಅವರ ವ್ಯಕ್ತಿತ್ವವನ್ನು ಹಾಳು ಮಾಡಲಿಲ್ಲ. ಈಗ ಸಾಕಷ್ಟು ಸಂಖ್ಯೆಯಲ್ಲಿ ಭಾವಗೀತೆಗಳನ್ನು ಹಾಡುವವರೂ, ಕೇಳುವವರೂ ಇದ್ದಾರೆ. ಆದರೆ ಒಂದು ಕಾಲದಲ್ಲಿ ಅದರ ಸ್ಪಷ್ಟ ಕಲ್ಪನೆಯೇ ಇಲ್ಲದಿದ್ದಾಗ, ಅದರ ದಾರಿಯೊಂದು ಅರಿಯದೇ ಇದ್ದಾಗ, ಕಾಳಿಂಗರಾಯರ ಸೃಷ್ಟಿಸಿದ ಸುಗಮ ಸಂಗೀತ ಶ್ರೇಷ್ಠವಾದದ್ದು. ಜೊತೆಗೆ ಸುಗಮ ಸಂಗೀತದ ನಿಜವಾದ ಅರ್ಥದಲ್ಲಿ ತೆಗೆದುಕೊಂಡರೆ ಅವರೇ ಇಂದಿಗೂ ಶ್ರೇಷ್ಠ.
ಅವರ ನಂತರದಲ್ಲಿ ಮೈಸೂರು ಅನಂತಸ್ವಾಮಿಯವರು ಅದೇ ದಾರಿಯಲ್ಲಿ ಸಾಗಿ ಬಲುದೂರ ಹೋದವರು. ಅಶ್ವತ್ಥ್ ಭಾವಗೀತೆಗೆ ಮತ್ತಷ್ಟು ಪ್ರಖ್ಯಾತಿಯನ್ನು ತಂದುಕೊಟ್ಟರು. ಇತ್ತೀಚಿನ ಸುಗಮ ಸಂಗೀತದಲ್ಲಿ ಸಂಗೀತ ಮತ್ತು ಸಾಹಿತ್ಯಗಳೆರೆಡೂ ಕಳೆಗುಂದುತ್ತಿವೆ. ಅಬ್ಬರದ ಪಕ್ಕವಾದ್ಯಗಳು ಸರ್ವವ್ಯಾಪಿಯಾಗಿ ಮನುಷ್ಯ ಧ್ವನಿ ಮತ್ತು ಸಾಹಿತ್ಯ ಪಕ್ಕಕ್ಕೆ ತಳ್ಳಲ್ಪಟ್ಟಿವೆ. ಇನ್ನೂ ಭಾವವೋ, ಅದರ ಅಭಾವವೇ ಜಾಸ್ತಿ. ಹಾಡಿಗಾಗಿ ಆರಿಸಿಕೊಳ್ಳುವ ಸಾಹಿತ್ಯದಲ್ಲೂ ಹುರಳಿಲ್ಲ. ಇಲ್ಲವೆಂದಲ್ಲೆ ಮತ್ತೆ ಬೇಂದ್ರೆ, ಕುವೆಂಪು, ಆ ಹಿಂದಿನ ತಲೆಮಾರಿಗೇ ಹೋಗಬೇಕು. ಇನ್ನು ಇತ್ತೀಚಿನ ಸಿನಿಮಾಗಳಲ್ಲಂತೂ ಜಾನಪದ ಗೀತೆಗಳನ್ನು ಮತ್ತು ಭಾವಗೀತೆಗಳನ್ನು ಬಲುಘೋರವಾಗಿ ಬಳಸಿಕೊಂಡಿದ್ದಾರೆ. ಪಾಪ್ ಸಂಗೀತಕ್ಕೂ ಆ ಹಾಡಿಗೂ ತುಂಬಾ ವ್ಯತ್ಯಾಸವಿಲ್ಲ.
ಇಂದು ಸಿನಿಮಾ ಸಂಗೀತವಾಗಲಿ, ಸುಗಮ ಸಂಗೀತವಾಗಲಿ ಆ ಮಟ್ಟದಿಂದ ಕೆಳಗೆ ಕುಸಿದುಬಿಟ್ಟಿದೆ. ಒಂದು, ಹಣದ ಲೆಕ್ಕಾಚಾರದಲ್ಲಿ ಗುಣಮಟ್ಟಕ್ಕೆ ಬೆಲೆಯಿಲ್ಲವಾಗಿದೆ. ಅಭಿರುಚಿಯೂ ಹಾಳಾಗಿ ಹೋಗಿದೆ. ಸಂಗೀತವನ್ನು ಆಳವಾಗಿ ಅರಿಯದೇ ನಿರ್ದೇಶಕರಾಗಿ ಹೊರಟವರು ಸಂಗೀತವನ್ನು ಕೊಂದರೆ, ಸಾಹಿತ್ಯ ಅರ್ಥವಾಗದವರು ಕಾವ್ಯವನ್ನು ಕೊಲ್ಲುತ್ತಿದ್ದಾರೆ. ಎಲ್ಲೋ ಕೆಲವು ಅಪವಾದಗಳಿರಬಹುದು ಅಷ್ಟೇ!
ಕಾಳಿಂಗರಾಯರ ವೈಶಿಷ್ಟ್ಯತೆ, ಪ್ರಾಮುಖ್ಯತೆ, ಮಹತ್ವಗಳಿರುವುದೇ ಇಲ್ಲಿ. ಸಂಗೀತದ ಸೌಂದರ್ಯವನ್ನು - ಸ್ವರ, ರಾಗ, ತಾಳ ಹಾಗೂ ಪಕ್ಕವಾದ್ಯಗಳ ಸೌಂದರ್ಯವನ್ನು ಬಿಡಲಿಲ್ಲ ಅಥವಾ ಲಘುವಾಗಿಸಲೂ ಇಲ್ಲ. ಅಥವಾ ಶಾಸ್ತ್ರೀಯ ಸಂಗೀತವನ್ನು ಹೇರಿ ಸಾಹಿತ್ಯದ ಸಾರವನ್ನೂ ಬಿಡಲಿಲ್ಲ. ಹಾಡುಗಾರಿಕೆ ಯಾಂತ್ರಿಕವಾಗಿರಲಿಲ್ಲ. ಅವರು ತನು ತುಂಬಿ, ಮನ ತುಂಬಿ, ಎದೆ ತುಂಬಿ ಹಾಡುತ್ತಿದ್ದರು.
ಕಾಳಿಂಗರಾಯರು ಬಾಳಿನುದ್ದಕ್ಕೂ ಸಂಗೀತಕ್ಕಲ್ಲದೆ ಬೇರೆಯದಕ್ಕೆ - ಹಣ, ಅಂತಸ್ತು, ಪದವಿ, ಪ್ರಶಸ್ತಿಗಳಿಗೆ ತಲೆಬಾಗದೆ, ಕೈಯೊಡ್ಡದೆ, ಸಂಗೀತ ಸಾಮ್ರಾಟನಾಗಿ ಮರೆದರು. ಭಾವುಕ ಪ್ರೇಕ್ಷಕರು, ಸಾಹಿತಿಗಳು, ಸದಭಿರುಚಿಯ ರಾಜಕೀಯ ಕಾರ್ಯಕರ್ತರು, ಎಲ್ಲರೂ ಅವರಲ್ಲಿಗೆ ಸಂಗೀತದ ಸವಿಗಾಗಿ ಬೊಗಸೆಯೊಡ್ಡಿ ಬಂದರು. ಎಲ್ಲರಿಗೂ ಬೇಕೆನಿಸುವಷ್ಟೂ ಉಣಬಡಿಸಿದರು; ಎತ್ತರದ ಸ್ಥಾನದಲ್ಲೇ ನಿಂತರು. ಇಂತಹ ಸಂದರ್ಭದಲ್ಲೇ ಕಾಳಿಂಗರಾಯರಂತಹವರು ಮತ್ತೆ ಮತ್ತೆ ಕಾಡುತ್ತಾರೆ.
ಶ್ರೀ ಲಕ್ಷ್ಮಿನಾರಾಯಣ ಭಟ್ಟರ ಈ ಮಾತುಗಳು ಇಂದಿಗೆ ಬಹಳ ಪ್ರಸ್ತುತವೆನಿಸುತ್ತದೆ: “ಸುಗಮ ಸಂಗೀತಕ್ಕೆ ಇಂದು ಸುಲಭ ಪ್ರಸಿದ್ಧಿ, ಹಣ, ಮಾಧ್ಯಮಗಳ ಬಲ ಎಲ್ಲವೂ ಸಿಗುತ್ತಿದೆ. ತಕ್ಕಮಟ್ಟಿನ ಸಾಧನೆ ಮಾಡಿದವರಿಗೂ ಏನಾದರೊಂದು ಸನ್ಮಾನ ಪ್ರಶಸ್ತಿಗಳ ಮನ್ನಣೆ ಇದೆ. ಆದರೆ ಅಂಥದೊಂದು ಜನಪ್ರಿಯ ಸಂಗೀತ ಶಾಖೆಯನ್ನು ಬಿತ್ತು ಬೆಳೆದದ್ದಲ್ಲದೆ ಅದರ ಸಮಸ್ತಾಂಶಗಳನ್ನು ಎತ್ತರದ ನೆಲೆಯಲ್ಲಿ ಮೈಗೂಡಿಸಿಕೊಂಡು ಕವಿತಾ ಸಂಗೀತವೇ ಮೈದಾಳಿ ಬಂದಂತಿದ್ದ ಕಾಳಿಂಗರಾಯರಿಗೆ ಸಮವೆನ್ನಿಸಬಹುದಾದ ಕಲಾಭಿಜ್ಞರು ಯಾರೂ ಕಾಣುತ್ತಿಲ್ಲ. ಈ ಮಾತು ಈಗಿನ ಅನೇಕ ಗಾಯಕಿ, ಗಾಯಕರಿಗೆ ಪ್ರಿಯವೆನಿಸದಿದ್ದರೂ ಅದು ಸತ್ಯ. ಉತ್ತಮ ಕವಿತೆಗಳ ಆಯ್ಕೆ, ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತಗಳ ಗಾಢ ತಿಳುವಳಿಕೆ, ಅತಿ ಸಂಗೀತವನ್ನು ಬಳಸದೆ ಕವಿತೆಯನ್ನೇ ಮುಂದೆ ಮಾಡಿಕೊಂಡು ನಡೆಯುವ ಮೋಹಕ ಸ್ವರ ಸಂಯೋಜನೆ, ಹಾಡುವಾಗಿನ ಸಾಭಿನಯ ಠೀವಿ, ಇವುಗಳಿಂದಾಗಿ ಕಾಳಿಂಗರಾವ್ ಅಪ್ರತಿಮ ಗಾಯಕರಾಗಿಬಿಟ್ಟರು. ನವ್ಯ ಕಾವ್ಯವನ್ನು ಹುಟ್ಟು ಹಾಕಿದ ಅಡಿಗರೇ ಈ ತನದ ಆ ಕಾವ್ಯದ ಅತ್ಯುತ್ತಮ ಪ್ರತಿನಿಧಿಯಾಗಿ ಉಳಿದಂತೆ, ಸುಗಮ ಸಂಗೀತದ ಪ್ರವರ್ತಕರಾದ ಕಾಳಿಂಗರಾಯರೇ ಕವಿತಾಗಾಯನದ ಅತ್ಯುತ್ತಮ ಮಾದರಿಯಾಗಿ ಉಳಿದಿದ್ದಾರೆ. ಕಳೆದ ಶತಮಾನದ ಐದು ಆರನೆಯ ದಶಕಗಳಲ್ಲಿ ನಾಡಿನಗಲ ತಂಗಾಳಿಯಾಗಿ ಬೀಸಿ ಸದಭಿರುಚಿಯ ಸಾಮಾನ್ಯ ಜನರನ್ನು ಸುಗಮ ಸಂಗೀತದ ಮಲ್ಲಿಗೆ ವನದಲ್ಲಿ ಅವರಂತೆ ವಿಹಾರ ಮಾಡಿಸಿದವರು ಬೇರೆ ಯಾರಿದ್ದಾರೆ?”
- ಎಸ್.ಎನ್.ಸ್ವಾಮಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ