Pages

ನಾಟಕ ರೂಪಾಂತರ - ಕೊನೆ ಎಲೆ


ಓ ಹೆನ್ರಿಯವರ ಕಥೆ ‘ಕೊನೆ ಎಲೆ’ ಆಧಾರಿತ ನಾಟಕರೂಪ 

ಜಗದ್ವಿಖ್ಯಾತ ಸಣ್ಣಕಥೆಗಾರ ಓ ಹೆನ್ರಿಯವರ ‘ಕೊನೆ ಎಲೆ’ ಸಣ್ಣಕಥೆಯು ಅವರ ಅತ್ಯುತ್ತಮ ಕಥೆಗಳಲ್ಲಿ ಒಂದು. ಜೀವನದುತ್ಸಾಹ, ಕಲಾವಿದರ ಜೀವನ, ಕಲೆಯ ಸಾರ್ಥಕತೆ, ಹೀಗೆ ಹಲವು ಮೌಲ್ಯಪ್ರಜ್ಞೆಗಳನ್ನು ಒಟ್ಟಿಗೆ ತನ್ನೊಳಗೆ ತುಂಬಿಕೊಂಡಿರುವಂತಹ ಸಂಕೀರ್ಣ ಕಥೆ. ಇದು ಇಂದಿನ ನಮ್ಮ ಜನಜೀವನಕ್ಕೂ ಪ್ರಸ್ತುತವಾಗಿದೆ. ಈಗಾಗಲೇ ಇದನ್ನು ನಾಟಕರೂಪದಲ್ಲಿ ತಂದು ತುಮಕೂರಿನಲ್ಲಿ ಹಾಗೂ ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲೂ ಪ್ರದರ್ಶಿಸಲಾಗಿದೆ. ಈ ಕಥೆಯನ್ನು ನಾಟಕ ರೂಪಕ್ಕೆ ಇಳಿಸುವಾಗ ಅಗತ್ಯವಾದ ಸಣ್ಣಪುಟ್ಟ ಬದಲಾವಣೆಗಳನ್ನು ಮತ್ತು ಒಂದಷ್ಟು ಸಂಭಾಷಣೆಗಳನ್ನೂ ಸೇರಿಸಿಕೊಳ್ಳಲಾಗಿದೆ. ಇದು ಕೃತಿಯ ಮೂಲ ಆಶಯಕ್ಕೆ ಧಕ್ಕೆ ತಂದಿಲ್ಲವೆಂದು ನಂಬಿದ್ದೇನೆ. 


ದೃಶ್ಯ – ಒಂದು
(ರೈಲ್ವೆ ಸ್ಟೇಷನ್ ದೃಶ್ಯ. ಮೂರ್ನಾಲ್ಕು ಜನರ ಒಂದು ಗುಂಪು ಮಾತನಾಡುತ್ತಿದೆ. ಒಂದಿಬ್ಬರು ಬಂದು ಹೋಗುತ್ತಿದ್ದಾರೆ. ಒಂದಿಬ್ಬರು ಕುಳಿತುಕೊಂಡು ಯಾರಿಗೋ ಕಾಯುತ್ತಾ ಮೆಲುದನಿಯಲ್ಲಿ ಮಾತನಾಡುತ್ತಿದ್ದಾರೆ. ಗುಂಪಿನಲ್ಲಿ ಮಾತನಾಡುತ್ತಾ ನಿಂತಿದ್ದವರು ಇದ್ದಕ್ಕಿದ್ದಂತೆ ಜೋರಾಗಿ ಗಹಗಹಿಸಿ ನಗುತ್ತಾರೆ. ಮಾತನಾಡಿ ನಗುತ್ತಾರೆ. ನಗುತ್ತಾ ಮಾತನಾಡುತ್ತಾರೆ. ಅದೇ ಸಮಯದಲ್ಲಿ ಅವರನ್ನೆಲ್ಲಾ ಹಾದು ಹೋಗುತ್ತಿದ್ದ ಜೆನ್ನಿ ತಿರುಗುತ್ತಾಳೆ) 
ಜೇಮ್ಸ್ : ಹೊ ಜೆನ್ನಿ! ಬಾ ಇಲ್ಲಿ, ಬಾ ಇಲ್ಲಿ. (ಜೆನ್ನಿ ಹತ್ತಿರ ಬರುತ್ತಾಳೆ)
ಜೆನ್ನಿ : ಏನು ಜೇಮ್ಸ್? ಅಷ್ಟೊಂದು ನಗು.
ಟಾಮ್ : ನಿಮಗೆ.... ನಿಮ್ಮಂಥ ಕಲಾವಿದರಿಗೆ.... (ಮತ್ತೆ ಜೋರಾಗಿ ನಗುತ್ತಾನೆ)
ಜೆನ್ನಿ : ಏನದು? ನಮ್ಮಂಥ ಕಲಾವಿದರಿಗೆ?
ಟಾಮ್ : ಮ್ಯಾಕ್‍ವೆಲ್ ನನ್ನ ಕೈಲಿ ಆಗೋದಿಲ್ಲ. ನೀನೇ ಹೇಳು. (ನಗು)
ಮ್ಯಾಕ್‍ವೆಲ್ : ನೋಡು ಜೆನ್ನಿ, ಅದು ಹೀಗೆ. ಈ ಗ್ರೀನ್‍ವಿಚ್ ಹಳ್ಳಿ ಕಲಾವಿದರಿಗೆ ಎಷ್ಟು ಅನುಕೂಲ ಅನ್ನುವುದರ ಬಗ್ಗೆ ಮಾತಾಡ್ತಾ ಇದ್ವಿ. ಕಲಾವಿದರು ಬಣ್ಣ, ಬ್ರಷ್, ಕ್ಯಾನ್ವಾಸ್, ಏನೇನ್ ಬೇಕೊ ಎಲ್ಲಾನೂ ಸಾಲ ತಗೊಳ್ಳೋದು. ಈ ಹಳ್ಳಿಗೆ ಬನ್ನಿ ಕೊಡ್ತೀವಿ ಅಂತ ಹೇಳೋದು. ಅಂಗಡಿಯವನೇನಾದ್ರೂ ಅವನನ್ನ ಹುಡುಕಿಕೊಂಡು ಬಂದರೆ....
ಜೆನ್ನಿ : ಬಂದರೆ?
ಟಾಮ್ : ಬಂದಾಗ, ಈ ಚಕ್ರವ್ಯೂಹದ ರಸ್ತೆಗಳಲ್ಲಿ ಹುಡುಕಿಕೊಂಡು ಒಳಗೆ ಬರುತ್ತಾ ಇರ್ತಾನೆ. ಕೊನೇಲಿ ನೋಡಿದ್ರೆ ಊರ ಹೊರಗಡೆ ಹೊರಟೋಗಿರ್ತಾನೆ. (ಎಲ್ಲರೂ ನಗುತ್ತಾರೆ)
ಜೇಮ್ಸ್ : ಆಗ ನಮ್ಮ ಕಲಾವಿದರು ಆರಾಮವಾಗಿ ಚಿತ್ರ ಬಿಡಿಸ್ತಾ ಇರಬಹುದು. ಅಲ್ವಾ ಗೋವನ್?
ಗೋವನ್ : ಹೌದೌದು. ಅದಕ್ಕೇ ನಮ್ಮ ಬಹರ್ಮನ್ ಕೂಡ ಇಲ್ಲಿಗೇ ಬರ್ತಿದಾನೆ.
ಜೇಮ್ಸ್ : ಯಾರು ಆ ಮಹಾಕೃತಿ ಬಹರ್ಮನ್ನಾ?
ಗೋವನ್ : ಹೌದು.
ಜೇಮ್ಸ್ : (ವ್ಯಂಗ್ಯವಾಗಿ) ಎಲ್ಲಾ ಕಡೆ ಮಹಾಕೃತಿ ರಚಿಸಿದ್ದಾಯಿತು. ಈಗ ಇಲ್ಲಿಗೆ ಬರ್ತಿದಾನ?
ಟಾಮ್ : ಏನದು ಮಹಾಕೃತಿ?
ಜೇಮ್ಸ್ : ಅದೊಂದು ದೊಡ್ಡ ಕಥೆ ಟಾಮ್. ಈ ಬಹರ್ಮನ್ ಇದಾನಲ್ಲ, ಅವನು ಬಹಳ ಒಳ್ಳೇ ಕಲಾವಿದ. ಆದರೆ ಯಾವ ಕೃತಿನೂ ರಚಿಸ್ತಾ ಇಲ್ಲ. ಸುಮಾರು ವರ್ಷಗಳಿಂದ, ನಾನೊಂದು ಮಹಾಕೃತಿ ರಚಿಸ್ತೇನೆ ಅಂತಿದಾನೆ. ಕ್ಯಾನ್ವಾಸ್ ಅಂತೂ ಯಾವಾಗ್ಲೂ ರೆಡಿ ಇರುತ್ತೆ. ಬಣ್ಣ, ಬ್ರಷ್ ಜೊತೆಲಿದ್ರೂ ಮಹಾಕೃತಿ ಇರಲಿ, ಕ್ಯಾನ್ವಾಸ್ ಮೇಲೆ ಒಂದು ಗೆರೇನೂ ಬಿದ್ದಿಲ್ಲ. ಇಲ್ಲಾದ್ರೂ ಅವನ ಅದೃಷ್ಟ ಖುಲಾಯಿಸಬಹುದು.
ಜೆನ್ನಿ : ಪಾಪ, ನ್ಯುಮೋನಿಯಾದಿಂದ ನರಳಿ, ನರಳಿ ಒಣಗೋಗಿದಾನೆ. ಇಲ್ಲಿಗೆ ಬಂದು ಆರೋಗ್ಯ ಸುಧಾರಿಸಲೀ ಅಂತ ಹಾರೈಸೋಣ. ಹಾಂ! ಅವನು ಬರೋದ್ರಿಂದ ಇನ್ನೂ ಒಂದು ಅನುಕೂಲ ಇದೆ. ಅವನಿಗೆ ಸ್ವಲ್ಪ ಹಣ ಕೊಟ್ರೆ ಸಾಕು ಮಾಡೆಲ್ ಕೂತ್ಕೋತಾನೆ. ಇಲ್ಲಾಂದ್ರೆ ಅದಕ್ಕೊಂದಿಷ್ಟು ಹಣ ಸುರೀಬೇಕು. ಈಗಾಗಲೇ ಬಣ್ಣ, ಬ್ರಷ್ ತಗೊಂಡೇ ಬಡವರಾಗಿದೀವಿ.
ಜೇಮ್ಸ್ : ಅದೊ ಬಹರ್ಮನ್ ಬಂದ. ವೆಲ್‍ಕಮ್ ಟು ಆರ್ಟಿಸ್ಟ್ಸ್ ರಿಹ್ಯಾಬಿಲಿಟೇಶನ್ ಸೆಂಟರ್. (ಎಲ್ಲರೂ ನಗುತ್ತಾರೆ)
ಮ್ಯಾಕ್‍ವೆಲ್ : ಹೇಗಿದ್ದೀಯಾ ಬಹರ್ಮನ್?
ಬಹರ್ಮನ್ : ನಾನಾ, ಚೆನ್ನಾಗಿದ್ದೀನಿ. ನೀವೆಲ್ಲಾ ಹೇಗಿದ್ದೀರಾ?
ಎಲ್ಲರೂ : ಚೆನ್ನಾಗಿದೀವಿ. ಜೀವನ ನಡೀತಾ ಇದೆ. ಇದೀವಿ ಜೀವಂತವಾಗಿ.
ಜೆನ್ನಿ : ನೀನು ಬಂದಿದ್ದು ನಮಗೆಲ್ಲಾ ಸಂತೋಷ ಆಯ್ತು.
ಜೇಮ್ಸ್ : ಎಲ್ಲಿ ನಿನ್ನ ಮಹಾಕೃತಿ? ನಾವಂತೂ ಕಾಯ್ತಾ ಕಾಯ್ತಾ ಮುದುಕರಾದ್ವಿ. (ಎಲ್ಲರೂ ನಗುತ್ತಾರೆ)
ಬಹರ್ಮನ್ : ಬರುತ್ತೆ, ಬರುತ್ತೆ. ಯಾವುದೇ ಆದ್ರೂ, ಅದು ಬರಬೇಕಾದ ಗಳಿಗೆ ಬರಬೇಕು. ಆದ್ರೆ ಬಂದಾಗ ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳಬಾರದು. ಸುಮ್ನೆ ಬಾ ಅಂದ್ರೆ ಬರಲ್ಲ. ಜೀವನದಲ್ಲಿ ಬರೋ ಒಳ್ಳೇ ಕಾಲಕ್ಕೆ ಕಾಯಬೇಕು. ಅದಕ್ಕೋಸ್ಕರ ಮನಸ್ಸು, ಪ್ರಯತ್ನ - ಎರಡೂ ಕೆಲಸ ಮಾಡ್ತಾ ಇರಬೇಕು. ಬರಲೇಬೇಕಾದ ಸಮಯ ಬಂದಾಗ ಅದೇ ಕಿತ್ಕೊಂಡು ಬರುತ್ತೆ. ಆಗ ನನ್ನ ಮಹಾಕೃತಿ ರಚನೆಯಾಗುತ್ತೆ.
ಜೆನ್ನಿ : ಅಂಥ ದಿನ ಬೇಗ ಬರಲಿ. ಹೋ! ಡಾಕ್ಟರ್ ಬಂದರು. (ಎಲ್ಲರೂ ಆ ಕಡೆ ತಿರುಗುತ್ತಾರೆ) ಸಾರ್.... (ಜೆನ್ನಿ ಡಾಕ್ಟರ್ ಕಡೆ ಹೋಗುತ್ತಾಳೆ. ಎಲ್ಲರೂ ಡಾಕ್ಟರ್ ನಡೆ ನಡೆಯುತ್ತಾರೆ)
ಬಹರ್ಮನ್ : ಯಾರು ಆ ಡಾಕ್ಟರ್?
ಗೋವನ್ : ಅವರು ಡಾ.ಹೆನ್ರಿ. ಜೆನ್ನಿ ಸ್ನೇಹಿತೆ ಜಾನ್ಸಿಗೆ ಹುಷಾರಿಲ್ಲ. ಅವರೇ ನೋಡ್ತಾ ಇರೋದು.
ಬಹರ್ಮನ್ : ಅವಳಿಗೆ ಏನಾಗಿದೆ?
ಗೋವನ್ : ಯಾರಿಗ್ಗೊತ್ತು. ದಿನೇದಿನೇ ಸೊರಗಿ ಹೋಗ್ತಿದಾಳೆ. ಈ ಡಾಕ್ಟರಿಗೂ ಏನೂ ಅರ್ಥ ಆಗ್ತಿಲ್ಲ. ಇವತ್ತೇನೋ ರಿಪೋರ್ಟ್ ಬರುತ್ತೆ ನೋಡಿ ಹೇಳ್ತೀನಿ ಅಂದಿದಾರೆ. ನಡಿ ಕೇಳೋಣ.
ಜೆನ್ನಿ : (ಆತಂಕದಿಂದ) ಡಾಕ್ಟರ್ ಏನಾಯ್ತು?
ಡಾಕ್ಟರ್ : ಕುದುರೇನ ನೀರಿನವರೆಗೂ ಕರೆದುಕೊಂಡು ಹೋಗಬಹುದು ಆದರೆ ನೀರು ಕುಡಿಸೋದಕ್ಕೆ ಆಗಲ್ಲ.
ಟಾಮ್ : ನೀವು ಪ್ರಿಸ್‍ಕ್ರಿಪ್ಷನ್ ಬರೆಯೋ ಥರ ಮಾತಾಡಿದ್ರೆ, ನಮಗೆ ಹೇಗೆ ಅರ್ಥ ಆಗುತ್ತೆ. ಸ್ವಲ್ಪ ವಿವರವಾಗಿ ಹೇಳಿ.
ಡಾಕ್ಟರ್ : ಏನನ್ನ ವಿವರವಾಗಿ ಹೇಳಬೇಕು?
ಮ್ಯಾಕ್‍ವೆಲ್ : ಅದೇ, ರಿಪೋರ್ಟ್ ಏನು ಹೇಳುತ್ತೆ ಅಂತ.
ಡಾಕ್ಟರ್ : (ವಿಷಾದದ ಧ್ವನಿಯಲ್ಲಿ) ರಿಪೋರ್ಟ್ ಏನು ಹೇಳುತ್ತೆ.
ಟಾಮ್ : ಅದು ನಮಗೆ ಗೊತ್ತಿದ್ದರೆ ನಿಮಗ್ಯಾಕೆ ಕೇಳ್ತಿದ್ವಿ.
ಜೆನ್ನಿ : ಡಾಕ್ಟರ್ ಪ್ಲೀಸ್, ಅದೇನೂಂತ ಹೇಳಿ.
ಡಾಕ್ಟರ್ : ನೋಡು ಜೆನ್ನಿ, ಯಾವಾಗ ರೋಗಿ ‘ನನ್ನ ಚಟ್ಟ ಹೋರೇಕೆ ಎಷ್ಟು ಜನ ಬರ್ತಾರೆ’ ಅನ್ನೋ ಲೆಕ್ಕ ಹಾಕ್ತಾನೋ, ಆಗ ಅವನು ಹುಷಾರಾಗೋದು ಅರ್ಧಕರ್ಧ ಹೋಯ್ತು.
ಜೆನ್ನಿ : ಅಂದ್ರೆ, ಅವಳು ಬದುಕೋದಿಲ್ವಾ?
ಡಾಕ್ಟರ್ : ಅದು ಅವಳು ನಿರ್ಧಾರ ಮಾಡಬೇಕು.
ಗೋವನ್ : ಯಾಕೆ ಡಾಕ್ಟರಾಗಿ ನಿಮಗೆ ಆಗೋಲ್ವಾ?
ಡಾಕ್ಟರ್ : ನಾನು ದೇಹಕ್ಕೆ ಔಷಧ ಕೊಡಬಹುದು, ಮನಸಿಗಲ್ಲ. ಮನಸ್ಸು ಬದಲಾಯಿಸೋ ಔಷಧೀನಾ ಇನ್ನೂ ಯಾರೂ ಕಂಡುಹಿಡಿದಿಲ್ಲ.
ಗೋವನ್ : ನಿಮಗೆ ಸಾಧ್ಯವಾಗಲ್ಲ ಅನ್ನೋದಾದ್ರೆ ಹೇಳಿ, ಬೇರೆ ಯಾರನ್ನಾದರೂ ನೋಡ್ತೀವಿ.
ಡಾಕ್ಟರ್ : ನೋಡು, ನೋಡು ಹೋಗು. ಯಾವ ಡಾಕ್ಟರ್ ಬಂದ್ರೂ ಅಷ್ಟೇನೇ. ಬದುಕಬೇಕು ಅನ್ನೋ ಮನಸು ಅವಳಲ್ಲಿ ಬರದೇ ಇದ್ರೆ, ಪ್ರಪಂಚದ ಯಾವ ಡಾಕ್ಟರ್ ಬಂದರೂ ಅವಳನ್ನು ಉಳಿಸೋಕ್ಕಾಗಲ್ಲ. ಬ್ರಹ್ಮನ ಕೈಲೂ ಸಾಧ್ಯ ಇಲ್ಲ. ಯಮನೇ ಬೇಡ ಅಂತ ವಾಪಸ್ ಹೋದ್ರು, ಇವಳೇ ಹಿಂದೆ ಓಡಿಹೋಗ್ತಾಳೆ.
ಜೇಮ್ಸ್ : ಹಾಗಾದರೆ ಇದು ಮಾನಸಿಕ ಖಾಯಿಲೆ.
ಮ್ಯಾಕ್‍ವೆಲ್ : ಸೈಕಿಯಾಟ್ರಿಸ್ಟ್‍ಗೆ ತೋರಿಸಿದ್ರೆ.
ಡಾಕ್ಟರ್ : ಉಪಯೋಗ ಇಲ್ಲ. ಅವರೂ ಕೂಡ ಅಷ್ಟೇ. ದೇಹದಲ್ಲಿ ಆಗೋ ವೈಪರೀತ್ಯದಿಂದ ಬರೋ ಮಾನಸಿಕ ಖಾಯಿಲೆಗೆ ಔಷಧಿ ಕೊಡ್ತಾರೆ. ಮನಸ್ಸನ್ನು ತಹಬಂದಿಗೆ ತಂದುಕೊಳ್ಳೋದಿಕ್ಕೆ ಕೌನ್ಸಿಲಿಂಗ್ ಮೂಲಕ ಸಹಾಯ ಮಾಡ್ತಾರೆ. ತಾನು ಚೆನ್ನಾಗಿರಬೇಕು, ಬಾಳಬೇಕು, ಬದುಕಬೇಕು ಅನ್ನೋ ಆಶಾಭಾವನೆ ಇರೋ ವ್ಯಕ್ತಿಗೆ ಚಿಕಿತ್ಸೆ ಕೊಡಬಹುದು. ಆದ್ರೆ ಸಾಯೋ ದಿನಗಳನ್ನು ಎಣಿಸ್ತಾ ಕುಳಿತಿರೋವರಿಗಲ್ಲ.
ಜೆನ್ನಿ : ಹಾಗಂದ್ರೆ ಏನು ಡಾಕ್ಟರ್? ಅವಳಿಗೆ ಬದುಕೋ ಆಸೇನೇ ಇಲ್ವಾ?
ಡಾಕ್ಟರ್ : ಇಲ್ಲಾ ಜೆನ್ನಿ. ಬಹಳ ಬೇಸರವಾಗುತ್ತೆ. ಅವಳಿನ್ನೂ ಬದುಕಬೇಕಾದವಳು. ಜೀವನವನ್ನು ಅನುಭವಿಸಬೇಕಾದವಳು ಅದ್ಯಾಕೆ ಸ್ಮಶಾನದ ಕಡೆ ಮುಖ ಹಾಕಿ ಕುಳಿತಿದಾಳೋ ಅರ್ಥಾನೇ ಆಗ್ತಿಲ್ಲ.
ಜೆನ್ನಿ : ಅವಳ್ಯಾಕೆ ಹೀಗಾದ್ಲು? ನಾನು ಹೋಗಿ ನೋಡ್ತೀನಿ. 
(ಜೆನ್ನಿ ಹೊರಟುಹೋಗುತ್ತಾಳೆ. ಬಬ್ಬೊಬ್ಬರೂ ಒಂದೊಂದು ದಿಕ್ಕಿಗೆ ಹೋಗುತ್ತಾರೆ)

ದೃಶ್ಯ – ಎರಡು
(ಒಂದು ಸಣ್ಣ ರೂಮು. ಮೂಲೆಯಲ್ಲಿ ಮಂಚವಿದೆ. ಮಂಚದ ಮೇಲೆ ಮಲಗಿಕೊಂಡರೆ ಎದುರಿಗೆ ಕಾಣುವಂತೆ ಕಿಟಕಿಯಿದೆ. ಮೂಲೆಯಲ್ಲಿ ಈಸಲ್ ನಿಂತಿದೆ. ಒಂದೆರೆಡು ಕಲಾಕೃತಿಗಳು ಗೋಡೆಗಳನ್ನು ಅಲಂಕರಿಸಿದೆ. ಟೇಬಲ್ ಮೇಲೆ ಬ್ರಷ್, ಬಣ್ಣ, ಪೇಪರ್‍ಗಳು ಅಸ್ತವ್ಯಸ್ತವಾಗಿ ಬಿದ್ದಿವೆ. ಟೇಬಲ್ ಮೇಲೆ ಗೋಡೆಗೆ ಕನ್ನಡಿ ತೂಗುಹಾಕಲಾಗಿದೆ. ಜಾನ್ಸಿ ಕಿಟಕಿಗೆ ಒರಗಿಕೊಂಡು ಎಣಿಸ್ತಾ ನಿಂತಿದಾಳೆ) 
ಜಾನ್ಸಿ : ಐವತ್ತು. (ನಿಟ್ಟುಸಿರು ಬಿಡುತ್ತಾಳೆ) ನೋಡಿದವರನ್ನೆಲ್ಲಾ ತನ್ನ ಕಡೆಗೆ ಸೆಳೆಯುತ್ತಿದ್ದ ಬಳ್ಳಿ, ಲತೆ! ಈ ಲತೆಗಳನ್ನೆಲ್ಲಾ ಕಳೆದುಕೊಳ್ಳುತ್ತಾ ಇದೆ. ಬೋಳಾಗ್ತಾ ಇದೆ. ಎಲೆಗಳೆನ್ನೆಲ್ಲಾ ಕಳೆದುಕೊಂಡ ಮೇಲೆ ಕೇವಲ ನೆನಪಷ್ಟೇ ಉಳಿಯುತ್ತೆ. ಅದೂ ಮಾಸಿ ಹೋಗಬಹುದು. ಯಾವುದು ಶಾಶ್ವತ. ಎಲ್ಲವೂ ಹೋಗೋದೇನೆ. (ಭಾರವಾದ ಹೆಜ್ಜೆಯಿಡುತ್ತಾ ಕನ್ನಡಿ ಬಳಿ ಬರುತ್ತಾಳೆ) ಲತೆ! (ಒಮ್ಮೆ ಕನ್ನಡಿ, ಮತ್ತೊಮ್ಮೆ ಕಿಟಕಿ ನೋಡುತ್ತಾ) ಲತೆ! ಆ ಲತೆ ಎಲೆಗಳನ್ನು ಕಳಚಿಕೊಂಡು ಅಂತ್ಯದ ಕಡೆಗೆ ಹೋಗ್ತಾ ಇದೆ. ನಾನೂ ಕೂಡ ಅಷ್ಟೇ. ಜೀವನದ ಶಕ್ತಿಯ ಎಲೆಗಳನ್ನು ಕಳಚಿಕೊಂಡು ಸಾವಿನ ಸುಖದತ್ತ ಹೋಗ್ತಾ ಇದೀನಿ. (ಮತ್ತೆ ಕಿಟಕಿಯತ್ತ ಹೋಗುತ್ತಾಳೆ) ಎಷ್ಟು ಜೋರು ಗಾಳಿ. (ಶಾಲನ್ನು ಹೊದ್ದುಕೊಂಡು) ಈ ಗಾಳಿಗೆ ಇನ್ನೊಂದಷ್ಟು ಎಲೆಗಳು ಉದುರಿಹೋಗಿವೆ. ನನಗೆ ನಿಲ್ಲೋದಕ್ಕೂ ಕಷ್ಟವಾಗ್ತಿದೆ. (ಕಾಲನ್ನು ಎಳೆದುಕೊಂಡು ಹೋಗಿ ಮಂಚದ ಮೇಲೆ ಕುಳಿತುಕೊಳ್ಳುತ್ತಾಳೆ. ದಿಂಬನ್ನು ಸರಿಪಡಿಸಿಕೊಂಡು ಕಿಟಕಿ ಕಾಣುವಂತೆ ಒರಗಿಕೊಂಡು ಕುಳಿತುಕೊಳ್ಳುತ್ತಾಳೆ. ಮತ್ತೆ ಎಣಿಕೆ ಆರಂಭವಾಗುತ್ತದೆ) ಮಳೆ ಬೇರೆ ಬರೋ ಹಾಗಿದೆ. ಈ ಗಾಳಿ ಹೊಡೆತಕ್ಕೆ ಮತ್ತಷ್ಟು ಎಲೆಗಳು ಉದುರಿಹೋಗ್ತಿವೆ. (ಆಗ ಜೆನ್ನಿ ಬರುತ್ತಾಳೆ)
ಜೆನ್ನಿ : ಜಾನ್ಸಿ, ಜಾನ್ಸಿ ಈಗ ಹೇಗಿದ್ದೀಯಾ? ಡಾಕ್ಟರ್ ಹೇಳಿದ್ರು, ನೀನು ಬೇಗ ಹುಷಾರಾಗ್ತೀಯಂತೆ.
ಜಾನ್ಸಿ : (ತಣ್ಣಗೆ) ಸುಮ್ಮನೆ ಸುಳ್ಳು ಹೇಳೋದು ಯಾಕೆ ಜೆನ್ನಿ? ಯಾವ ಡಾಕ್ಟರ್ ಔಷಧಾನೂ ನನ್ನನ್ನ ಗುಣಪಡಿಸೋಲ್ಲ.
ಜೆನ್ನಿ : ಒಳ್ಳೆ ಮುದುಕಿ ಥರ ಮಾತಾಡ್ತೀಯಲ್ಲ.
ಜಾನ್ಸಿ : (ಕಿಟಕಿಯನ್ನೇ ನೋಡುತ್ತಾ) ಸೋಲು, ನೋವುಗಳ ಜೊತೆ ಜೀವನಾನ ಎಳೆದಾಡಿಕೊಂಡು ಹೋಗೋದಕ್ಕಿಂತ, ಸಾವಿನ ಕತ್ತಲೆಯಲ್ಲಿ ನೆಮ್ಮದಿಯಾಗಿ  ಇರೋದೇ ಉತ್ತಮ.
ಜೆನ್ನಿ : ಏನ್ ಮಾತಾಡ್ತೀಯ ಜಾನ್ಸಿ, ನೀನೊಬ್ಬ ಮೂರ್ಖಳು. ಸೋಲು, ನೋವುಗಳಿಲ್ಲದ ಜೀವನಾನೇ ಇಲ್ಲ. ಮಹಾನ್ ಕಲಾವಿದರನ್ನೇ ತಗೋ. ಅವರು ಅದ್ಭುತವಾದದ್ದನ್ನು ಸೃಷ್ಟಿ ಮಾಡೋದಕ್ಕೆ ಮುಂಚೆ, ಅದೆಷ್ಟು ಪೈಟಿಂಗ್‍ಗಳನ್ನು ಕಸದಬುಟ್ಟಿಗೆ ಹಾಕಿಲ್ಲ. ವಿಫಲರಾದಾಗ ಅದೆಷ್ಟು ನೋವು ಅನುಭವಿಸಿಲ್ಲ. ಸೋಲೇ ಇಲ್ಲದ ಜಯವಿಲ್ಲ. ನೋವೇ ಇಲ್ಲದ ನೆಮ್ಮದಿಯಿಲ್ಲ.
ಜಾನ್ಸಿ : (ತನ್ನ ಪಾಡಿಗೆ ತಾನು) ಇನ್ನು ಹತ್ತೇ ಹತ್ತು.
ಜೆನ್ನಿ : ಏನದು, ಹತ್ತೇ ಹತ್ತು?
ಜಾನ್ಸಿ : ಎಲೆಗಳು ಉದುರ್ತಾ ಇವೆ.
ಜೆನ್ನಿ : (ಅಸಹನೆಯಿಂದ) ಏನು ಎಲೆಗಳು?
ಜಾನ್ಸಿ : ಕಿಟಕಿಯಿಂದಾಚೆ ನೋಡು. ಎದುರುಗಡೆ ಗೋಡೆ ಮೇಲೆ ಬೆಳೆದ ಬಳ್ಳಿ, ನಾವು ಬಂದಾಗ ಮೈದುಂಬಿ ನಿಂತಿತ್ತು. ನನ್ನ ಹಾಗೇನೇ. ಈಗ ಎಲೆಗಳೆಲ್ಲಾ ಉದುರ್ತಾ ಇವೆ. ಅದೂ ನನ್ನ ಹಾಗೇನೆ.
ಜೆನ್ನಿ : ಹುಚ್ಚುಚ್ಚಾಗಿ ಏನೇನೋ ಮಾತಾಡ್ತಾ ಇದೀಯ. ಬಳ್ಳಿಯಂತೆ, ಎಲೆಗಳಂತೆ, ಉದುರ್ತಾ ಇವೆಯಂತೆ, ನನ್ನ ಹಾಗೇನೇ ಅಂತೆ. ಅದಕ್ಕೇನಾದರೂ ಅರ್ಥ ಇದೆಯಾ?
ಜಾನ್ಸಿ : ಹೌದು ತುಂಬಾ ಅರ್ಥ ಇದೆ. ಎಲೆಗಳು ಉದುರ್ತಾ ಹೋದ ಹಾಗೆ, ಕೊನೆ ಎಲೆ ಬಿದ್ದಾಗ, ಅದು ಬಳ್ಳಿಯ ಅಂತ್ಯ.
ಜೆನ್ನಿ : ಅದರಲ್ಲೇನಿದೆ ಮಹಾರಹಸ್ಯ. ಎಲೆಗಳು ಬೀಳ್ತಾ ಇವೆ ಅಂದ್ರೆ, ಬಳ್ಳಿ ಒಣಗ್ತಾ ಇದೆ ಅಂತ ಅರ್ಥ. ಅದು ಸಹಜ.
ಜಾನ್ಸಿ : ಹಾಗೆನೇ, ನನ್ನ ಜೀವದ ಶಕ್ತಿಯ ಎಲೆಗಳೂ ಅದರ ಜೊತೇನೇ ಬೀಳ್ತಾ ಇವೆ. ಕೊನೆ ಎಲೆ ಬಿದ್ದಾಗ....
ಜೆನ್ನಿ : ನಿನಗೆಲ್ಲೋ ತಲೆ ಕೆಟ್ಟಿದೆ ಅಷ್ಟೇ. ದೇಹದಲ್ಲಿ ಶಕ್ತಿ ಕಡಿಮೆಯಾದರೆ, ಕೆಲವರಿಗೆ ಹುಚ್ಚು ಕೆರಳುತ್ತೆ ಅಂತ ಕೇಳಿದ್ದೆ. ನಿನಗೂ ಹಾಗೇ ಅನ್ಸುತ್ತೆ. ಸ್ವಲ್ಪ ಹೊರಗೆ ಬಂದು ಒಳ್ಳೇ ಗಾಳಿ ಕುಡಿದ್ರೆ, ಜನರ ಜೊತೆ ಮಾತಾಡಿದ್ರೆ, ದೇಹಕ್ಕೂ, ಮೆದುಳಿಗೂ ಶಕ್ತಿ ಬರುತ್ತೆ. ಬಾ ಹೊರಗಡೆ ಹೋಗಿ ಬರೋಣ.
ಜಾನ್ಸಿ : ಇಲ್ಲ ಜೆನ್ನಿ. ನನಗೆ ಎದ್ದು ಓಡಾಡೋ ಅಷ್ಟೂ ಶಕ್ತಿಯಿಲ್ಲ.
ಜೆನ್ನಿ : (ಹತ್ತಿರ ಹೋಗಿ) ಸುಮ್ಮನೆ ಬಾ ಅಂದ್ರೆ ಬಾ.
ಜಾನ್ಸಿ : (ಸಿಟ್ಟಿನಿಂದ) ಬೇಡ ಜೆನ್ನಿ, ನನಗೆ ಆಗಲ್ಲ ಅಂದ್ರೆ ಆಗಲ್ಲ. ಒಂದು ಹೆಜ್ಜೆ ಇಡೋದಿಕ್ಕೂ ಆಗಲ್ಲ. ನೀನು ಎಲ್ಲಿಗೆ ಬೇಕಾದ್ರೂ ಹೋಗಿ ಬಾ. ಜೆನ್ನಿ ಅವಳ ಮಾತು ಕೇಳದೆ ಕೈ ಹಿಡಿದು ಎಳೆಯುತ್ತಾಳೆ. ಜಾನ್ಸಿ ನೆಲಕ್ಕೆ ಬೀಳುತ್ತಾಳೆ)
ಜಾನ್ಸಿ : ಹೇಳೆದಷ್ಟು ಕೇಳು. ನನ್ನನ್ನ ಮಂಚದ ಮೇಲೆ ಮಲಗ್ಸು.
ಜೆನ್ನಿ : ಸಾರಿ ಜಾನ್ಸಿ. (ಮಂಚದ ಮೇಲೆ ಮಲಗಿಸುತ್ತಾಳೆ) ಅವಳನ್ನು ಸಮಾಧಾನ ಪಡಿಸುತ್ತಾ) ಜಾನ್ಸಿ ಸ್ವಲ್ಪ ಸೂಪ್ ತರ್ತೀನಿ. (ಸೂಪ್ ತರಲು ಹೋಗುತ್ತಾಳೆ)
ಜಾನ್ಸಿ : ನನಗೇನೂ ಬೇಡ. ಯಾವುದೂ ಬೇಕಾಗಿಲ್ಲ.
ಜೆನ್ನಿ : (ಸೂಪ್ ಹಿಡಿದುಕೊಂಡು ಬಂದು) ಸ್ವಲ್ಪ ಸೂಪ್ ಕುಡಿದ್ರೆ ಜೀವ ಬಂದ ಹಾಗೆ ಆಗುತ್ತೆ. ಸ್ವಲ್ಪ ಕುಡಿ ಜಾನ್ಸಿ.
ಜಾನ್ಸಿ : (ಕಿಟಕಿಯತ್ತ ನೋಡುತ್ತಾ) ಜೆನ್ನಿ ಒಂದು ಕೆಲಸ ಮಾಡು. ಒಳ್ಳೆ ಗೊಬ್ಬರ ತಂದು ಬಳ್ಳಿಗೆ ಹಾಕು.
ಜೆನ್ನಿ : ಯಾಕೆ?
ಜಾನ್ಸಿ : ನಾಳೆ ಬಳ್ಳಿ ಚಿಗುರುತ್ತೆ. ಆಗ ನಾನೂ ಚಿಗುರ್ತೀನಿ. ಸಾಯೋ ಗಿಡಕ್ಕೆ ಎಷ್ಟು ಗೊಬ್ಬರ, ನೀರು ಹಾಕಿದ್ರೂ ಅಷ್ಟೇನೆ. (ಚಳಿಗೆ ಮೈ ಮುದುಡಿಕೊಂಡು) ಇನ್ನೊಂಎರೆಡು ಎಲೆ ಇದೆ.
ಜೆನ್ನಿ : ಈಗ ಸ್ವಲ್ಪ ಮಲಕ್ಕೋ, ಆಮೇಲೆ ಎಣಿಸುವಂತೆ. ಇಷ್ಟೊಂದು ಚಳಿ ಒಳ್ಳೇದಲ್ಲ.
ಜಾನ್ಸಿ : ಇರಲಿ ಬಿಡು.
ಜೆನ್ನಿ : ನೋಡು ಎಲ್ಲದಕ್ಕೂ ಹಠ ಮಾಡ್ಬೇಡ. ಶೀತಗಾಳಿ ಜೋರಾಗಿ ಬೀಸ್ತಾ ಇದೆ. ಮಳೆ ಸಣ್ಣಗೆ ಸುರೀತಿದೆ. ಕಿಟಕಿ ಮುಚ್ತೀನಿ.
ಜಾನ್ಸಿ : ಬೇಡ ಜೆನ್ನಿ, ಹಾಗೇ ಇರಲಿ. ಎಲೆ ಉದುರೋದನ್ನ ನೋಡ್ಬೇಕು.
ಜೆನ್ನಿ : (ಕಿಟಕಿಯನ್ನು ಮುಚ್ಚುತ್ತಾ) ನೋಡು ಸ್ವಲ್ಪ ನಿದ್ದೆ ಮಾಡು. ನಾನು ಗಣಿ ಕಾರ್ಮಿಕನ ಪೈಂಟಿಂಗ್ ಮಾಡ್ಬೇಕು. ಬಹರ್ಮನ್ ಮಾಡೆಲ್ ಆಗೋದಿಕ್ಕೆ ಕರೀಬೇಕು. ಸ್ವಲ್ಪ ನಿದ್ದೆ ಮಾಡಿ ಏಳು. ಆಮೇಲೆ ಎಣಿಸೋವಂತೆ. (ಜೆನ್ನಿ ಹೊರಡುತ್ತಾಳೆ)
ಜಾನ್ಸಿ : (ಜೆನ್ನಿ ಕೈ ಹಿಡಿದುಕೊಂಡು) ನಿನಗೆ ನನ್ನ ಮೇಲೆ ಎಷ್ಟೊಂದು ಪ್ರೀತಿ ಇದೆ. ಆದರೆ ನಾನೇನ್ ಮಾಡಲಿ, ನಾನು ಅಸಹಾಯಕಳು. ಹೋಗೋದಿಕ್ಕೆ ಮುಂಚೆ ಒಂದು ಸಲ ಕಿಟಕಿ ತೆಗೆ. (ಜೆನ್ನಿ ಕಿಟಕಿ ತೆರೆಯುತ್ತಾಳೆ. ಜಾನ್ಸಿ ಒಂದು ರೀತಿಯ ಉದ್ರೇಕ, ಅವ್ಯಕ್ತ ಸಂತೋಷದಿಂದ) ಒಂದೇ ಒಂದು ಎಲೆ ಉಳಿದುಕೊಂಡಿದೆ. (ಜೆನ್ನಿ ಬೇಸರ, ದುಃಖದಿಂದ ಕಿಟಕಿಯನ್ನು ಮುಚ್ಚಿ ಬಿರುಸಾಗಿ ಹೊರಗಡೆ ಹೋಗುತ್ತಾಳೆ) ಒಂದೇ ಒಂದು ಎಲೆ, ಕೊನೆ ಎಲೆ. ಅಲ್ಲಿಗೆ ಎಲ್ಲವೂ ಕೊನೆ. ಒಂದೇ ಎಲೆ, ಕೊನೆ ಎಲೆ.

ದೃಶ್ಯ - ಮೂರು

(ಜೆನ್ನಿ ಬಹರ್ಮನ್ ರೂಮಿಗೆ ಬರುತ್ತಾಳೆ. ಅಲ್ಲೊಂದು ಖಾಲಿ ಕ್ಯಾನ್ವಾಸ್ ಬಿದ್ದಿದೆ. ಬಹರ್ಮನ್ ಪೈಪ್ ಹಿಡಿದುಕೊಂಡು ಏನನ್ನೋ ಯೋಚಿಸುತ್ತಾ ಕುಳಿತಿದ್ದಾನೆ. ಸಣ್ಣಗೆ ಕೆಮ್ಮುತ್ತಿದ್ದಾನೆ. ಜೆನ್ನಿ ಪ್ರವೇಶ) 

ಜೆನ್ನಿ : ಬಹರ್ಮನ್, ನಾನು ಗಣಿ ಕಾರ್ಮಿಕರ ಬಗ್ಗೆ ಪೈಂಟಿಂಗ್ ಮಾಡಬೇಕು. ಮಾಡೆಲ್ ಕುಳಿತುಕೊಳ್ತೀಯಾ?
ಬಹರ್ಮನ್ : ಹುಂ. ನನಗೆ ಅದನ್ನು ಬಿಟ್ಟರೆ ಬೇರೆ ಕೆಲಸವೇನಿದೆ? ಅಂದ ಹಾಗೆ ನಿನ್ನ ಸ್ನೇಹಿತೆ, ಆಕೆ ಹೆಸರೇನೂ.... ಜ...
ಜೆನ್ನಿ : ಜಾನ್ಸಿ.
ಬಹರ್ಮನ್ : ಹಾಂ, ಜಾನ್ಸಿ, ಹೇಗಿದಾಳೆ?
ಜೆನ್ನಿ : ಅವಳ ಬಗ್ಗೆ ಎನು ಹೇಳಲಿ? ಬದುವುದರ ಬಗ್ಗೆ ಯೋಚನೆ ಬಿಟ್ಟು ಸಾಐಉವ ಸುಖಕ್ಕೆ ಕಾಯ್ತಾ ಇದಾಳೆ. ಬಹರ್ಮನ್, ಅವಳು ಅದೆಷ್ಟು ವಿಚಿತ್ರವಾಗಿ ಆಡ್ತಾ ಇದಾಳೆ ಗೊತ್ತಾ. ನಮ್ಮ ರೂಮಿನ ಕಿಟಕಿ ಎದುರಗಡೆ ಗೋಡೆ ಇದೆ. ಅಲ್ಲೊಂದು ಬಳ್ಳಿ ಇದೆ. ಅದರ ಎಲೆಗಳು ಉದುರ್ತಾ ಇವೆ. ಜಾನ್ಸಿ, ಆ ಬಳ್ಳಿ ಜೊತೆ ತನ್ನ ಜೀವನಾನೂ ಸುತ್ತಿಕೊಂಡಿದಾಳೆ. ಅದರಲ್ಲಿ ಈಗ ಒಂದೇ ಒಂದು ಎಲೆ ಉಳಿದಿದೆ. ಆ ಕೊನೆ ಎಲೆ ಬಿದ್ದಾಗ ತಾನೂ ಸತ್ಹೋಗ್ತೀನಿ ಅಂತ ಹೇಳ್ತಿದಾಳೆ.
ಬಹರ್ಮನ್ : ನಮ್ಮ ಜನ ಚಿಕ್ಕ ವಯಸ್ಸಿಗೇ ಮುದುಕರಾಗ್ತಾ ಇದಾರೆ. ನೋಡು, ಜೀವನದಲ್ಲಿ ಉತ್ಸಾಹ ಕಾಣದೆ ಇರೋನು ಕಲಾವಿದ ಆಗೋಲ್ಲ. ಒಳ್ಳೆಯ ಕಲಾವಿದನಾಗಿ ಬೆಳೆಯೋದಂತೂ ಅಸಾಧ್ಯ. ಹೊಸ ಹೊಸ ಸವಾಲು ಗಳನ್ನು ನಗ್ತಾ ಸ್ವೀಕರಿಸಬೇಕು. ಹೊಸದನ್ನು ಸೃಷ್ಟಿ ಮಾಡ್ತಾ ಇರ್ಬೇಕು. ಅವಳೆಂಥಾ ಕಲಾವಿದೆ? ಜೆನ್ನಿ, ಅವಳಿಗೆ ಜೀವನದಲ್ಲಿ ಏನನ್ನಾದರೂ ಮಾಡ್ಬೇಕು ಅನ್ನೋ ಆಸೇನೆ ಇಲ್ವಾ? ಏನಾದರು ಅದ್ಭುತವಾದದ್ದನ್ನ ಸಾಧಿಸೋದು. ಅದು ಮನುಷ್ಯನಲ್ಲಿ ಜೀವಂತಿಕೆ ತುಂಬುತ್ತೆ. ಮನುಷ್ಯನಿಗೆ ಒಂದು ಧ್ಯೇಯ ಇರ್ಬೇಕು. ಉದಾತ್ತವಾದ ಧ್ಯೇಯ.
ಜೆನ್ನಿ : ಅವಳಿಗೆ ನೇಪಲ್ಸ್‍ನ ಕಡಲ ತೀರವನ್ನು ಚಿತ್ರಿಸ್ಬೇಕು ಅಂತ ಆಸೆ ಇತ್ತು.
ಬಹರ್ಮನ್ : ಅವಳೇನಾದರೂ ನೇಪಲ್ಸ್ ಕಡಲತೀರದ ಪೈಂಟಿಂಗ್ ಮಾಡಿದ್ರೆ, ನೋಡಿದವರು ನೇರವಾಗಿ ಹೋಗಿ ಆತ್ಮಹತ್ಯೆ ಮಾಡ್ಕೋತಾರೆ.
ಜೆನ್ನಿ : ಯಾಕೆ?
ಬಹರ್ಮನ್ : ನೇಪಲ್ಸ್ ಕಡಲತೀರ ಬಹಳ ಮನೋಹರವಾದದ್ದು. ಕಣ್ಣು ಹಾಯಿಸಿದಷ್ಟು ಅಂತ್ಯವೇ ಕಾಣದ ಸಮುದ್ರದ ತೀರ. ಜೀವನದ ಅನಂತ ಸಾಧ್ಯತೆಗಳ ಪ್ರತೀಕ. ಜೀವನದ ಸೌಂದರ್ಯವನ್ನು ಸವಿಯಬೇಕು ಅನ್ನೋ ರಸಿಕತೆಯ ಸಂಕೇತವಾದ ನೀಲಿ ಬಣ್ಣ. ಎತ್ತರೆತ್ತೆ ಬೆಳೆದು ನಿಂತ ಕಲ್ಲುಬಂಡೆಗಳನ್ನೂ ಮೀರಿ ಚಿಮ್ಮುವ ಬೃಹದಾಕಾರದ ಅಲೆಗಳ ರುದ್ರಮನೋಹರ ನೆಗೆತ ಅದು ಒಂದು ಅದ್ಭುತ ದೃಶ್ಯ. ಅದೇನಾದ್ರೂ ನಿನ್ನ ಜಾನ್ಸಿ ಕೈಗೆ ಸಿಕ್ಕಿದ್ರೆ....
ಜೆನ್ನಿ : ಸಿಕ್ಕಿದ್ರೆ ಏನಾಗುತ್ತೆ?
ಬಹರ್ಮನ್ : ಇನ್ನೇನಾಗುತ್ತೆ. ಕಡಲ ನೀರಿಗೆಲ್ಲಾ ಕಪ್ಪು ಬಳೀತಾಳೆ. ಮರಳಿನ ಮೇಲೆ ಕುಳಿತಿರೋ ವ್ಯಕ್ತಿಗಳು ಶವಗಳ ರೀತಿ ಇರ್ತಾರೆ. ಕಪ್ಪು ಅಲೆಗಳು ಜನಗಳನ್ನು ತನ್ನ ಮಡಿಲಿಗೆ ಎಳೆದುಕೊಳ್ಳೋ ದೆವ್ವಗಳ ಥರ ಇರ್ತವೆ.
ಜೆನ್ನಿ : ಕಲಾವಿದರು ತಮ್ಮ ಮನಸ್ಸಿಗೆ ಏನು ಬರುತ್ತೋ ಅದನ್ನು ಚಿತ್ರಿಸ್ತಾರೆ.
ಬಹರ್ಮನ್ : ಅದೇನೋ ನಿಜ. ಒಂದು ವಸ್ತು ತನಗೆ ಹೇಗೆ ಕಾಣ್ಸುತ್ತೋ ಅದೇ ರೀತಿ ಕಲಾವಿದ ಚಿತ್ರಿಸ್ತಾನೆ. ಆದರೆ ಒಂದು ವಿಷಯ ನೆನಪಿಟ್ಕೊ. ಕಲಾವಿದ ಎಲ್ಲದಕ್ಕಿಂತ ಮೊದಲು ಜೀವನಾವ ಆಳವಾಗಿ ಅರ್ಥ ಮಾಡ್ಕೋಬೇಕು. ಜೀವನಕಿಂತ ದೊಡ್ಡದಾದ ಕಲೆ ಇಲ್ಲ. ನಮ್ಮ ಸುತ್ತಮುತ್ತ ಇರೋ ಸೌಂದರ್ಯ, ಕುರೂಪ - ಒಳ್ಳೆಯದು, ಕೆಟ್ಟದ್ದು - ನೋವು, ನಲಿವು, ಎಲ್ಲದರ ಬಗ್ಗೆ ತಿಳ್ಕೋಬೇಕು. ಜೀವನದಲ್ಲಿರೋ ಸೌಂದರ್ಯ, ಸಾಧ್ಯತೆ, ಭರವಸೆ, ಭವಿಷ್ಯಗಳ ಬಗ್ಗೆ ಚಿತ್ರಿಸ್ಬೇಕು. ಒಂದು ಪೈಂಟಿಂಗ್ ನೋಡಿದ ವ್ಯಕ್ತಿಯಲ್ಲಿ ಉತ್ಸಾಹ ಬರಬೇಕು. ಜೀವನ ಸುಂದರವಾಗಿದೆ ಅನಿಸಬೇಕು. ಇಲ್ಲಾಂದ್ರೆ ಸುಂದರಗೊಳಿಸಬೇಕು ಅನ್ನಿಸ್ಬೇಕು.
ಜೆನ್ನಿ : ಆದ್ರೆ ಅಂಥ ಪೈಂಟಿಂಗ್‍ನ ಯಾರು ತಗೋಳ್ತಾರೆ ಬಹರ್ಮನ್?
ಬಹರ್ಮನ್ : ಪೈಂಟಿಂಗ್‍ನ ಮಾರಲೇಬೇಕು ಅನ್ನೋದಾದ್ರೆ ಪೈಂಟಿಂಗ್ ಯಾಕೆ ಮಾಡ್ತೀರ. ಬೇರೆ ಏನಾದ್ರೂ ಕೆಲಸ ಮಾಡಬಹುದಲ್ಲ. ಬೇರೆ ಏನಾದ್ರೂ ಕೆಲಸ ಮಾಡಬಹುದಲ್ಲ. ಮಾರುವುದಕ್ಕೋಸ್ಕರ ಪೈಂಟಿಂಗ್ ಮಾಡೋರು ಕಲಾವಿದರಲ್ಲ, ಕೆಲಸಗಾರರು.
ಜೆನ್ನಿ : ಕಲಾವಿದ ಜೀವನ ಮಾಡೋದು ಬೇಡ್ವಾ? ಹಸಿವಿನಿಂದ ಸಾಯ್ಬೇಕಾ?
ಬಹರ್ಮನ್ : ಸರಿ, ಕಲಾವಿದರು ಹಸಿವಿನಿಂದ ನರಳೋದಕ್ಕೋಸ್ಕರಾನೆ ಬ್ರಷ್ ಹಿಡಿಯಲ್ಲ. ಅವರು ಮಾಡಿದ ಪೈಂಟಿಂಗ್‍ನಿಂದ ಹಣ ಬಂದರೆ ಒಳ್ಳೆಯದೆ. ಆದ್ರೆ ಅದೇ ಉದೇಶ ಆಗಬಾರದು.
ಜೆನ್ನಿ : ಅಂಥ ಪೈಂಟಿಂಗ್‍ನಿಂದ ಹಸಿವು ಹಿಂಗೋದಿಲ್ಲಾ?
ಬಹರ್ಮನ್ : ಅದೇ ವಿಪರ್ಯಾಸ. ಈ ಹಸಿವು ಅನ್ನೋದು ಕಲಾವಿದನ ಕಲ್ಪನೆ, ಸೃಷ್ಟಿ, ಸೃಜನಶೀಲತೆ, ಎಲ್ಲವನ್ನೂ ನುಂಗಿಬಿಡುತ್ತೆ. ಆದರೆ ಕಲಾವಿದ ಪರಿಸ್ಥಿತಿಯ ಗುಲಾಮನಾಗಬಾರದು. ಅದನ್ನೂ ಮೀರಿ ನಿಲ್ಲಬೇಕು. ಜೆನ್ನಿ ಭವಿಷ್ಯದ ಬದುಕಿನ ಬಗ್ಗೆ ಭರವಸೆ ಮೂಡಿಸೋದು, ಜನರ ಮನಸ್ಸನ್ನು ಅದಕ್ಕೆ ಸೆಳೆಯೋದು - ಅದೇ ಕಲೆಯ ಗುರಿ. ಅಂಥದೊಂದು ಕೃತಿಗೋಸ್ಕರ, ಬೇರೆಯವರ ಬದುಕಿಗೆ ಜೀವ ತುಂಬುವ ಕೃತಿಯ ರಚನೆಗೋಸ್ಕರ ಕಲಾವಿದ ಎಲ್ಲದಕ್ಕೂ ತಯಾರಾಗಿರಬೇಕು.
ಜೆನ್ನಿ : ನೀನು ಹೇಳೋದು ಸರಿ ಅನ್ಸುತ್ತೆ. ಆದ್ರೆ ಜೀವನದಲ್ಲಿ ಪಾಲಿಸೋದು ಭಾರಿ ಕಷ್ಟ. ನಡಿ, ಇನ್ನು ತುಂಬಾ ಲೇಟಾಗುತ್ತೆ.
ಬಹರ್ಮನ್ : ನಿಮ್ಮಂಥ ಕಲಾವಿದರಿಗೆ ನಾನು ಮಾಡೆಲ್ ಆಗಿ ಕುಳಿತುಕೊಳ್ಳಬೇಕು.
ಜೆನ್ನಿ : ನೋಡು ಬಹರ್ಮನ್, ನಿನಗೆ ಇಷ್ಟ ಇದ್ದರೆ ಬಾ, ಇಲ್ಲದಿದ್ದರೆ ಬಿಡು.
ಬಹರ್ಮನ್ : (ಹೋಗುತ್ತಿದ್ದವಳನ್ನು ತಡೆದು) ಅಯ್ಯೊ ಜೆನ್ನಿ, ನಿಲ್ಲು! ಸಿಗೊ ಸ್ವಲ್ಪ ಬ್ರೆಡ್ಡಿಗೂ ಯಾಕೆ ಕಲ್ಲು ಹಾಕ್ತೀಯಾ?

ದೃಶ್ಯ - ನಾಲ್ಕು

(ಜೆನ್ನಿ ಮತ್ತು ಬಹರ್ಮನ್ ಒಳಗೆ ಬರುತ್ತಾರೆ) 

ಜೆನ್ನಿ : ಬಾ, ಬಹರ್ಮನ್, ಒಳಗಡೆ ಬಾ.
ಬಹರ್ಮನ್ : (ಜಾನ್ಸಿಯತ್ತ ನೋಡುತ್ತಾ) ಇವಳೇನಾ ಜಾನ್ಸಿ?
ಜೆನ್ನಿ : ಹೌದು. ಸಧ್ಯ ನಿದ್ರೆ ಮಾಡ್ತಿದಾಳೆ. ನಿದ್ರೆ ಮಾಡಿದ ಮೇಲಾದ್ರೂ ಸಮಾಧಾನ ಆಗಬಹುದು.
ಬಹರ್ಮನ್ : (ನಿಟ್ಟುಸಿರು ಬಿಟ್ಟು) ಪ್ರಪಂಚವನ್ನೇ ಜಯಿಸ್ತೀನಿ ಅನ್ನೋ ವಯಸ್ಸು. ಒಂದು ಕಾಲದಲ್ಲಿ ಈ ಮುಖ ಕಾಂತಿಯಿಂದ ಹೊಳೀತಾ ಇತ್ತು ಅನ್ಸುತ್ತೆ. ಮನಸ್ಸಿಗೆ ಮುಪ್ಪಾದರೆ ದೇಹ ಬೇಗ ಶಿಥಿಲ ಆಗುತ್ತೆ.
ಜೆನ್ನಿ : ಎಷ್ಟು ಲವಲವಿಕೆಯಿಂದ ಇದ್ಲು. ನೋಡೋದಿಕ್ಕೆ ಸಂತೋಷವಾಗೋದು.
ಬಹರ್ಮನ್ : ಜಾನ್ಸಿ, ಮೊಗ್ಗು ಹೂವಾಗಿ ಅರಳಿದಾಗ, ಅದರ ಸುಗಂಧ ಎಲ್ಲಾ ಕಡೆ ಹರಡುತ್ತೆ. ಎಲ್ಲರ ಮನಸ್ಸನ್ನೂ ಮುದಗೊಳಿಸುತ್ತೆ. ಅದೇ ಬಳ್ಳಿಯ ಸೌಂದರ್ಯ, ಸಾರ್ಥಕತೆ ಎಲ್ಲಾ. ಮನುಷ್ಯನ ಜೀವನಾ ಕೂಡ ಹಾಗೇನೇ. ಅಂದ ಹಾಗೆ ಬಳ್ಳಿ ಎಲ್ಲಿ?
ಜೆನ್ನಿ : (ಕಿಟಕಿಯತ್ತ ಹೋಗಿ) ಬಾ. (ಕಿಟಕಿ ತೆಗೆಯುತ್ತಾಳೆ. ಜೋರಾಗಿ ಬೀಸಿದ ಗಾಳಿಗೆ ಮುಖ ಹಿಂದಕ್ಕೆಳೆದುಕೊಳ್ಳುತ್ತಾಳೆ) ಏನು ಗಾಳಿ. ಮಳೇ ಬೇರೆ ಸುರೀತಾ ಇದೆ. (ಬಹರ್ಮನ್ ಕಿಟಕಿಯ ಹತ್ತಿರ ಹೋಗುತ್ತಾನೆ) ಅಲ್ಲಿ ನೋಡು ಗೋಡೆಗೆ ಅಂಟಿಕೊಂಡು ನಿಂತಿದೆಯಲ್ಲ ಬಳ್ಳಿ.... 
(ಜೆನ್ನಿ ಮತ್ತು ಬಹರ್ಮನ್ ಪರಸ್ಪರ ಮುಖ ನೋಡಿಕೊಳ್ಳುತ್ತಾರೆ. ಬಹರ್ಮನ್ ಕಿಟಕಿಯ ಹೊರಗೆ ತಲೆಹಾಕಿ ನೋಡುತ್ತಾನೆ)
ಬಹರ್ಮನ್ : ಕೆಳಗಡೆ ಅಡುಗೆ ಮನೆ ಹಿಂದೆ ಇರುವ ಓಣಿಯಲ್ವಾ. (ಜೆನ್ನಿ ತಲೆಯಾಡಿಸುತ್ತಾಳೆ. ಕಿಟಕಿಯನ್ನು ಮುಚ್ಚುತ್ತಾ) ಹುಂ ನಡಿ. ಎಲ್ಲಿ ಕುಳಿತುಕೊಳ್ಳಲಿ. 
(ಜೆನ್ನಿ ಒಂದು ಸ್ಟೂಲನ್ನು ಮಧ್ಯದಲ್ಲಿಡುತ್ತಾಳೆ. ಈಸಲ್‍ನನ್ನು ತನ್ನ ಮುಂದೆ ಇಟ್ಟುಕೊಂಡು ಚಿತ್ರರಚನೆಗೆ ತೊಡಗುತ್ತಾಳೆ. ಒಂದೆರೆಡು ಗೆರೆ ಎಳೆಯುತ್ತಾಳೆ. ಜಾನ್ಸಿಯತ್ತ ನೋಡುತ್ತಾಳೆ. ಮತ್ತೆ ಚಿತ್ರರಚನೆಗೆ ಪ್ರಯತ್ನಪಡುತ್ತಾಳೆ. ಮತ್ತೆ ಜಾನ್ಸಿಯತ್ತ ನೋಡುತ್ತಾಳೆ)
ಜೆನ್ನಿ : ಇಲ್ಲ ಬಹರ್ಮನ್. ನನ್ನ ಕೈಲಿ ಆಗೋದಿಲ್ಲ. ನಾಳೆ ನೋಡೋಣ.
(ಜೆನ್ನಿ ಈಸಲ್ ಮೇಲೆ ತಲೆಯಿಟ್ಟು ಬಿಕ್ಕುತ್ತಾಳೆ. ರಂಗದ ಮೇಲೆ ಕತ್ತಲೆ)

ದೃಶ್ಯ – ಐದು

(ಬೆಳಿಗ್ಗೆ ತುಂಬಾ ಹೊತ್ತಾಗಿದೆ. ಜೆನ್ನಿ ಮಲಗಿದ್ದಾಳೆ. ಜಾನ್ಸಿ ಚಡಪಡಿಸುತ್ತಾ ಒದ್ದಾಡುತ್ತಿದ್ದಾಳೆ) 

ಜಾನ್ಸಿ : ಜೆನ್ನಿ. (ಸ್ವಲ್ಪ ಜೋರಾಗಿ) ಜೆನ್ನಿ, ತುಂಬಾ ಹೊತ್ತಾಗಿದ. ಎದ್ದೇಳು.
ಜೆನ್ನಿ : (ಎದ್ದೇಳುತ್ತಾ) ಏನು ಜಾನ್ಸಿ.
ಜಾನ್ಸಿ : ಎಷ್ಟೊತ್ತಿಂದ ಕಾಯ್ತಾ ಇದೀನಿ. ಕಿಟಕಿ ತೆಗಿ.
ಜೆನ್ನಿ : (ಯಾಂತ್ರಿಕವಾಗಿ ಕಿಟಕಿಯ ಬಳಿ ಹೋಗಿ ತಟ್ಟನೆ ನಿಲ್ಲುತ್ತಾಳೆ) ಇರಲಿ ಬಿಡು ಜಾನ್ಸಿ. ಚಳಿಯಿದೆ. ಆಮೇಲೆ ತೆಗೆದರಾಯ್ತು.
ಜಾನ್ಸಿ : (ಆತುರದಿಂದ) ಇಲ್ಲ ಜೆನ್ನಿ. ಈಗ್ಲೇ ತೆಗಿ. ನಾನು ಬೇಗ ನೋಡಬೇಕು.
ಜೆನ್ನಿ : (ಗಾಬರಿಯಿಂದ) ಬೇಡ ಜಾನ್ಸಿ ಬೇಡ. ಸುಮ್ಮನೆ ಹಠ ಹಿಡಿಬೇಡ. ಇನೂ ಸ್ವಲ್ಪ ಹೊತ್ತು ಆರಾಮವಾಗಿ ಮಲಗಿರು.
ಜಾನ್ಸಿ : ಹಠ ಹಡಿದಿರೋದು ನೀನು. ಸುಮ್ಮನೆ ಕಿಟಕಿ ತೆಗಿ.
ಜೆನ್ನಿ : ನಿನಗಂತೂ ಬುದ್ಧಿ ಬರಲ್ಲ. ಏನಾದ್ರೂ ಮಾಡ್ಕೊ.
(ಜೆನ್ನಿ ಕಿಟಕಿ ಬಾಗಿಲು ತೆಗೆದು, ತಲೆತಗ್ಗಿಸಿಕೊಂಡು ಹಿಂದೆ ಬರುತ್ತಾಳೆ. ಜಾನ್ಸಿ ಕಿಟಕಿಯ ಕಡೆ ಬಿರುಗಣ್ಣಿನಿಂದ ನೋಡುತ್ತಾಳೆ. ಮುಖದಲ್ಲಿ ಆಶ್ಚರ್ಯ)
ಜಾನ್ಸಿ : ಕೊನೆ ಎಲೆ ಬಿದ್ದೇ ಇಲ್ಲ. (ಮಂಚದ ಮೇಲೆ ಕುಳಿತುಕೊಳ್ಳುತ್ತಾಳೆ) ಜೆನ್ನಿ, ಜೆನ್ನಿ, ಅಲ್ಲಿ ನೋಡು, ಆ ಎಲೆ ಬಿದ್ದೇ ಇಲ್ಲ. (ಜೆನ್ನಿ ಕಿಟಕಿಯ ಕಡೆ ಆಶ್ಚರ್ಯದಿಂದ ನೋಡುತ್ತಾಳೆ) ಜೆನ್ನಿ, ಸ್ವಲ್ಪ ಕೈ ಹಿಡ್ಕೊ. (ಕಿಟಕಿಯ ಹತ್ತಿರ ಹೋಗುತ್ತಾಳೆ) ರಾತ್ರಿ ಗಾಳಿ ಜೋರಾಗಿ ಬೀಸ್ತಾ ಇತ್ತು. ಮಳೇನೂ ಸುರೀತಾ ಇತ್ತು. ಆದ್ರೂ ಆ ಕೊನೆ ಎಲೆ ಗೋಡೆಗೆ ಗಟ್ಟಿಯಾಗಿ ಅಂಟಿಕೊಂಡಿದೆ. ಜೆನ್ನಿ, ಯಾವ್ದೂ ಬೇಗ ಸಾಯೋದಿಕ್ಕೆ ಇಷ್ಟಪಡಲ್ವಾ?
ಜೆನ್ನಿ : ಸಣ್ಣ ಹುಳ ಕೂಡ ಬದುಕೋ ಪ್ರಯತ್ನ ಮಾಡುತ್ತೆ.
ಜಾನ್ಸಿ : ಗಾಳಿ, ಮಳೆ - ಸೋಲು, ದುಃಖ, ಇವುಗಳ ನಡುವೆ, ಅಲ್ಲ ಅವುಗಳನ್ನು ಮೀರಿ ಭದ್ರವಾಗಿ ನಿಲ್ಲಬೇಕು. ಆದ್ರೆ ಯಾಕೆ ನಿಲ್ಲಬೇಕು. ಜೀವಂತವಾಗಿ ಇರೋದಿಕ್ಕೆ ಬಯಸೋದೇನೆ ಅದರ ಗುಣ ಇರ್ಬೇಕು.
ಜೆನ್ನಿ : ಬಹರ್ಮನ್ ಹೇಳ್ತಿದ್ದ ಹಾಗೆ ಸೋಲಿಗೆ ಶರಣಾದ್ರೆ ಜಯ ಪಡೆಯೋದು ಅಸಾಧ್ಯ. ಸಾವನ್ನು ಇಷ್ಟಪಟ್ಟರೆ ಬದುಕೋದು ಅಸಾಧ್ಯ.
ಜಾನ್ಸಿ : ನಾನು ಬದುಕೋದ್ರಿಂದ ಏನಾದರೂ ಉಪಯೋಗ ಇದೆಯಾ?
ಜೆನ್ನಿ : ಏನು ಮಾತಾಡ್ತೀಯ ಜಾನ್ಸಿ. ಸರಿಯಾದ ರೀತಿಯಲ್ಲಿ ಬದುಕಿದ್ರೆ, ಪ್ರತಿಯೊಬ್ಬರ ಬದುಕು ಉಪಯೋಗಾನೆ; ಒಬ್ಬರಲ್ಲ, ಇನ್ನೊಬ್ಬರಿಗೆ. ಒಂದು ರೀತಿಯಲ್ಲದಿದ್ದರೆ ಇನ್ನೊಂದು ರೀತೀಲಿ. ಜಾನ್ಸಿ ನೀನು ನನಗೆ ಬೇಕು... ನಮ್ಮೆಲ್ಲರಿಗೂ ಬೇಕು. ನಿನ್ನನ್ನು ಒಳ್ಳೆಯ ಕಲಾವಿದೆಯಾಗಿ ನೋಡೋಕೆ ಎಲ್ಲರೂ ಇಷ್ಟಪಡ್ತಾರೆ.
ಜಾನ್ಸಿ : ಒಳ್ಳೆಯ ಕಲಾವಿದೆಯಾಗಿ ನೋಡೋದಿಕ್ಕೆ ಇಷ್ಟ ಪಡ್ತಾರೆ. ಶವವಾಗಿ ನೋಡೋದಿಕ್ಕೆ...
ಜೆನ್ನಿ : ಕಷ್ಟ ಪಡ್ತಾರೆ. ಹೆಚ್ಚು ದಿನ ಆದ್ರೆ ಮೂಗು ಮುಚ್ಕೋತಾರೆ.
ಜಾನ್ಸಿ : (ನಗುತ್ತಾ) ಹೌದು. ಹೌದು. ಜೆನ್ನಿ, ರಾತ್ರಿ ಸೂಪ್ ಕೊಡ್ತೀನಂತ ಹೇಳಿದ್ದೆಯಲ್ಲ ಈಗ ಕೊಡ್ತೀಯಾ. (ಜೆನ್ನಿ ತುಂಬಿದ ಕಣ್ಣುಗಳಿಂದ ತಲೆಯಾಡಿಸುತ್ತಾ ಹೋಗುತ್ತಾಳೆ) ನನ್ನ ಬದುಕಿಗೂ ಒಂದು ಅರ್ಥ ಇದೆ. ನಾನೂ ಬದುಕಬೇಕು. (ಕನಸಿನಲ್ಲಿರುವವಳಂತೆ) ನೇಪಲ್ಸ್‍ನ ಕಡಲತೀರ... ಮೈದುಂಬಿ ನಲಿಯತ್ತಾ, ಮುಗಿಲೆತ್ತರಕ್ಕೆ ಹಾರುವ ಅಲೆಗಳು. ಉದಯದ ಸೂರ್ಯನ ಹೊಂಗಿರಣಗಳನ್ನು ಮೈತುಂಬಾ ಹೊದ್ದು ಮಿಂಚುವ ಸಾಗರದ ನೀರು. ಅದನ್ನು ನೋಡುತ್ತಾ ಹೊಸ ಚೈತನ್ಯ ತುಂಬಿಕೊಳ್ಳುವ ಜನ. ಇದನ್ನೆಲ್ಲಾ ಚಿತ್ರಿಸ್ಬೇಕು.
(ಜಾನ್ಸಿ ಹಾಗೆ ನಿಂತಿರುತ್ತಾಳೆ. ಡಾಕ್ಟರ್ ಹೆನ್ರಿ ಒಳಗೆ ಬರುತ್ತಾರೆ. ಜಾನ್ಸಿಯನ್ನು ನೋಡಿ ದಿಗ್ಭ್ರಾಂತರಾಗಿ ನಿಲ್ಲುತ್ತಾರೆ)
ಡಾಕ್ಟರ್ : (ಆಶ್ಚರ್ಯದಿಂದ) ಜಾನ್ಸಿ!!
ಜಾನ್ಸಿ : (ಬೆಚ್ಚಿದವಳಂತೆ) ಹಾಂ! ಹೊ ಡಾಕ್ಞರ್, ಬನ್ನಿ. ಡಾಕ್ಟರ್, ನನಗೆ ಮೆಡಿಸನ್ ಕೊಡಿ. ಬೇಗ ಹುಷಾರಾಗ್ಬೇಕು. ನೇಪಲ್ಸ್ ಕಡಲತೀರದ ಪೈಂಟಿಂಗ್ ಮಾಡಬೇಕು.
ಡಾಕ್ಟರ್ : ನೀನು ಈಗಾಗಲೇ ಅರ್ಧ ಹುಷಾರಾಗಿದ್ದೀಯ. ಒಂದಷ್ಟು ಒಳ್ಳೆ ಆಹಾರ ತಗೊಂಡ್ರೆ ಪೂರ್ತಿ ಗುಣವಾಗ್ತೀಯ. (ಜೆನ್ನಿ ಬರುತ್ತಾಳೆ)
ಜೆನ್ನಿ : ಹಲೋ ಡಾಕ್ಟರ್.
ಡಾಕ್ಟರ್ : ಹಲೋ ಜೆನ್ನಿ. ಜಾನ್ಸಿಗೆ ಚೆನ್ನಾಗಿ ತಿನ್ನೋದಿಕ್ಕೆ ಕೊಡು. ಇನ್ನು ಸ್ವಲ್ಪ ದಿನದಲ್ಲೇ ರನ್ನಿಂಗ್ ರೇಸ್‍ಗೆ ಕಳುಹಿಸಬಹುದು. (ಅಲ್ಲಿ ಪೈಪ್ ಬಿದ್ದಿದ್ದನ್ನು ನೋಡಿ) ಹೋ! ಇದೇನಿದು ಪೈಪ್? ಇದನ್ಯಾವಾಗ ಶುರು ಮಾಡ್ದೆ.
ಜೆನ್ನಿ : ಇಲ್ಲ, ಇಲ್ಲ, ನನ್ನದಲ್ಲ. ನಿನ್ನೆ ಬಹರ್ಮನೆ ಮಾಡೆಲ್ ಆಗಿದ್ದ. ಮರೆತು ಬಿಟ್ಟು ಹೋಗಿರಬೇಕು.
ಡಾಕ್ಟರ್ : ಅಂದ ಹಾಗೆ, ಬಹರ್ಮನ್ ತುಂಬಾ ಹುಷಾರಿಲ್ಲ.
ಜೆನ್ನಿ : ಏನಾಯ್ತು?
ಡಾಕ್ಟರ್ : ನ್ಯೂಮೋನಿಯಾ ತುಂಬಾ ಹೆಚ್ಚಾಗಿದೆ. ಬೆಳಿಗ್ಗೆ ತುಂಬಾ ನರಳ್ತಾ ಇದಾನೆ ಅಂತ ಆಸ್ಪತ್ರೆಗೆ ಕರೆದುಕೊಂಡು ಬಂದ್ರು. ರೋಗ ತುಂಬಾ ಹೆಚ್ಚಾಗಿದೆ.
ಜೆನ್ನಿ : ಅಯ್ಯೋ, ಎಂಥ ಕೆಲಸ ಆಯ್ತಲ್ಲ.
(ಅಷ್ಟರಲ್ಲಿ ಟಾಮ್, ಜೇಮ್ಸ್, ಮ್ಯಾಕ್‍ವೆಲ್, ಗೋವನ್ ಬರುತ್ತಾರೆ)
ಜೇಮ್ಸ್ : ಜೆನ್ನಿ, ವಿಷಯ ಗೊತ್ತಾಯ್ತು ಅನ್ಸುತ್ತೆ.
ಜೆನ್ನಿ : ಏನು, ಬಹರ್ಮನ್ ವಿಷಯನಾ? ಈಗ ತಾನೆ ಡಾಕ್ಟರ್ ಹೇಳ್ತಾ ಇದ್ರು. ಬಹರ್ಮನ್‍ಗೆ ತುಂಬಾ ಹುಷಾರಿಲ್ಲಾಂತ.
ಜೇಮ್ಸ್ : ಅವನು ಉಳೀಲಿಲ್ಲ. (ತಲೆ ತಗ್ಗಿಸುತ್ತಾನೆ. ಹ್ಯಾಟ್ ತೆಗೆಯುತ್ತಾನೆ)
ಗೋವನ್ : ಬಹರ್ಮನ್ ನಮ್ಮನ್ನೆಲ್ಲಾ ತೊರೆದು ಹೋದ.
ಟಾಮ್ : ಇನ್ನೆಲ್ಲಿ ಆ ಬಹರ್ಮನ್!
ಜೆನ್ನಿ : (ಅಳುವ ಧ್ವನಿಯಲ್ಲಿ) ರಾತ್ರಿ ತಾನೇ ಮಾಡೆಲ್ ಆಗೋದಿಕ್ಕೆ ನಿಮ್ಮ ರೂಮಿಗೆ ಬಂದಿದ್ದೆ. ಆದ್ರೆ ಪರ್ವಾಗಿಲ್ಲ, ಚೆನ್ನಾಗೇ ಇದ್ದ.
ಗೋವನ್ : ಬೆಳಿಗ್ಗೆ ಅಷ್ಟೊತ್ತಿಗೆ ಎಚ್ಚರ ಆಯ್ತು. ಟೀ ಕುಡಿಯೋಣ ಅಂದುಕೊಂಡು ಹೊರಗೆ ಬಂದೆ. ಬಹರ್ಮನ್ ರೂಮಿನಲ್ಲಿ ತುಂಬಾ ನರಳೋ ಶಬ್ಧ ಬಂತು. ಬಾಗಿಲು ತೆಗೆದೇ ಇತ್ತು. ರೂಮೆಲ್ಲಾ ಕೆಸರಾಗಿತ್ತು.
ಜೆನ್ನಿ : ರೂಮೇಕೆ ಕೆಸರಾಗಿತ್ತು?
ಜೆಮ್ಸ್ : ಕೆಸರಿನ ಗುರುತು ಅಡುಗೆಮನೆ ಕಡೆಯಿಂದ ಬಂದಿತ್ತು. ಅಲ್ಲಿಗೇಕೆ ಹೋದ ಅಂತ ನೋಡ್ತಾ ಹೋದೆ. ಹಿಂದೆ ಓಣಿಯಲ್ಲಿ ಏಣಿ ಬಿದ್ದಿತ್ತು. ಹತ್ತಿರ ಹೋದಾಗ ಗೊತ್ತಾಯ್ತು. ರಾತ್ರಿ ಚಳಿಯಲ್ಲಿ ನಡುಗ್ತಾ, ಮಳೇಲಿ ನೆನೆಯುತ್ತಾ, ಎಲೆಗಳೆಲ್ಲಾ ಉದುರಿ ಹೋದ ಬಳ್ಳಿಗೆ ಒಂದು ಎಲೆ ಬಿಡಿಸಿದ್ದ.


ಮೂಲ ಕಥೆ : ಓ ಹೆನ್ರಿ (last leaf)
ನಾಟಕ ರೂಪಾಂತರ : ಎಸ್.ಎನ್.ಸ್ವಾಮಿ 




ಕಾಮೆಂಟ್‌ಗಳಿಲ್ಲ: