ಈ ಮಧ್ಯೆ ದಿನಪತ್ರಿಕೆಗಳ ‘ಆರ್ಥಿಕ ಹಿಂಜರಿತ’, ‘ಮಾರುಕಟ್ಟೆ ಭೀತಿ’ ಮುಂತಾಗಿ ಮುಖಪುಟಗಳಲ್ಲಿ ಮೂಡುತ್ತಿರುವ ಸುದ್ದಿ ಹಾಗೂ ಅದರೊಂದಿಗೆ ಏರಿಳಿತಗಳಿಂದ ಕೂಡಿದ ಸೂಚ್ಯಂಕಗಳ ನಕ್ಷೆಗಳು ನಮ್ಮ ಮಕ್ಕಳಿಗೆ ಸುಲಭವಾಗಿ ಅರ್ಥವಾಗಲಾರವು. ಅವರಿಗೆಲ್ಲಾ ಇದರ ಅರ್ಥ ಏನೆಂದು ಸರಳವಾಗಿ ಹೇಳಬೇಕೆಂದರೆ, ಅದನ್ನು ಈ ರೀತಿಯಾಗಿ ತಿಳಿಸಬಹುದು :
ಮಗು, ಇನ್ನು ಮುಂದೆ ಶಾಪಿಂಗ್‍ಗೆ ಮಾಲ್‍ಗಳಿಗೆ, ಜಾವಾಸಿಟಿಯಲ್ಲಿ ಕಾಫಿಗೆ, ಮಲ್ಟಿಪ್ಲೆಕ್‍ನಲ್ಲಿ ಸಿನಿಮಾಗೆ ಹೋಗುವುದೆಂದರೆ ಕನಸಿನ ಮಾತೆಂದೇ ತಿಳಿದುಕೋ. ಖಾಲಿ ಬಾಟಲಿ ತುಂಬಿಸಿಕೊಂಡು ಗತಕಾಲ ವೈಭವ ಮೆರೆಸುತ್ತಿರುವ ಮೂಲೆ ಅಂಗಡಿಯನ್ನು ಯಾವ ರಿಯಲ್ ಎಸ್ಟೇಟ್ ಏಜಂಟ್ ಕೂಡ ಕೊಂಡುಕೊಳ್ಳಲು ಉತ್ಸಾಹ ತೋರಿಸುತ್ತಿಲ್ಲ. ಆ ಜಾಗವನ್ನು ಆಕ್ರಮಿಸಿಕೊಂಡು ಮತ್ತೊಂದು ಮೊಬೈಲ್ ಶೋ ರೂಮೋ, ಬೈಕ್ ಕಾರುಗಳ ಮಾರಾಟ ಮಳಿಗೆಯೋ, ಚಿನ್ನದ ಮಳಿಗೆಯೋ ಎದ್ದು ನಿಲ್ಲುವುದಿಲ್ಲ. ಗಾಜಿನ ಹಿಂದೆ ಕಣ್ಣು ಕೋರೈಸುವಂತೆ ಸರಕುಗಳನ್ನು ಪ್ರದರ್ಶಿಸಿ ಗ್ರಾಹಕರನ್ನು ಆಕರ್ಷಿಸುವುದಿಲ್ಲ. ಬದಲಿಗೆ ಅದೇ ಧೂಳು ತುಂಬಿದ, ಹಳೇ ಡಬ್ಬಿ, ಗಾಜಿನ ಬಾಟಲಿ ತುಂಬಿದ ಅಂಗಡಿಯೇ ಅಲ್ಲಿ ನಿಂತಿರುತ್ತದೆ.
ಇದುವರೆಗೂ ನಿನ್ನ ಮೊಬೈಲಿಗೆ ಉಚಿತ ಎಸ್‍ಎಂಎಸ್‍ನಲ್ಲಿ ಬರುತ್ತಿದ್ದ ಜೋಕ್ಸ್ ಹಾಗೂ ಜಾಹೀರಾತು ಸಂದೇಶಗಳು ಬರುವುದು ಕಡಿಮೆಯಾಗುತ್ತವೆ ಅಥವಾ ಸಂಪೂರ್ಣ ನಿಂತುಹೋಗುತ್ತವೆ. ಇದೆಂತಹ ಸಪ್ಪೆ ಬದುಕು ಎಂದು ನಿನಗನ್ನಿಸಲಾರಂಭಿಸುತ್ತದೆ. ‘ಮಿಂಚು’ ಸೀರಿಯಲ್ಲಿನ ಜಗದೀಶನಂತಿದ್ದ ನಿನ್ನ ಬಾಸ್ ಇದ್ದಕ್ಕಿದ್ದಂತೆ ರಾಜೀವ್ ಶರ್ಮನಂತೆ ಕಾಣಲಾರಂಭಿಸುತ್ತಾನೆ. ‘ಮಿ. . . . ದಯವಿಟ್ಟು ನನ್ನ ಚೇಂಬರಿಗೆ ಬನ್ನಿ, ನಿಮ್ಮ ಬಳಿ ಸ್ವಲ್ಪ ಮಾತನಾಡುವುದಿದೆ’ ಎಂದು ಹೇಳಿ ಎಲ್ಲಿ ಸಾರಂಗಪಾಣಿಗಾದ ಗತಿ ನಿನಗೂ ಬರುತ್ತದೋ ಎಂಬ ಆತಂಕದಲ್ಲಿ ನಿನ್ನ ಎದೆ ಸದಾ ಡವಡವಗುಟ್ಟುತ್ತಿರುತ್ತದೆ.
ಟಿವಿಯಲ್ಲಿ, ಕ್ರಿಕೆಟ್, ಸೀರಿಯಲ್, ಸಿನಿಮಾಗಳ ಮಧ್ಯೆ ಕಿರಿಕಿರಿಯುಂಟುಮಾಡುತ್ತಿದ್ದ ‘ಈ ಕಾರ್ಯಕ್ರಮದ ಪ್ರಾಯೋಜಕರು’ ಇದ್ದಕ್ಕಿದ್ದಂತೆ ಮಾಯವಾಗಲಾರಂಭಿಸುತ್ತಾರೆ. ದಿನಪತ್ರಿಕೆಗಳ ಭಾರ ಕಡಿಮೆಯಾಗುತ್ತಾ ಹೋಗುತ್ತದೆ. ಮೊನ್ನೆವರೆಗೂ ‘ಫೆಂಗ್ ಶುಯಿಯಿಂದ ಮನೆಯನ್ನು ಅಲಂಕರಿಸುವ’ ತಿಳುವಳಿಕೆ ನೀಡುತ್ತಿದ್ದ ದೊಡ್ಡ ವರ್ಣರಂಜಿತ ಪುಟದ ಬದಲಿಗೆ ‘ಅಡುಗೆಯಲ್ಲಿ ಸೊಪ್ಪಿನ ಮಹತ್ವ’ದ ಕುರಿತು ಯಾರೋ ಕಿರಿಯ ಸಹಾಯಕ ಸಂಪಾದಕ ಬರೆದ ಒಂದು ಸಣ್ಣ ಲೇಖನ ಕಂಡು ಬರುತ್ತದೆ.
ನಮ್ಮ ಬಳಿಯಿರುವ ಆಸ್ತಿ, ಅದರಲ್ಲೂ ಕಂತಿನಲ್ಲಿ ಕೊಂಡುಕೊಂಡ ಪ್ರತಿಯೊಂದು ವಸ್ತುವೂ ಹೊರೆ ಎನ್ನಿಸಲಾರಂಭಿಸುತ್ತದೆ. ಮನೆಯಲ್ಲಿ ‘ಸ್ವಲ್ಪ ದಿನದ ಮಟ್ಟಿಗೆ’ ಬಂದು ಉಳಿದುಕೊಳ್ಳುವವರ ಜನಸಂಖ್ಯೆ ಹಾಗೂ ಮನೆ ಖರ್ಚು ಎರಡೂ ಹೆಚ್ಚುತ್ತಾ ಹೋಗುತ್ತವೆ. ಮೊನ್ನೆವರೆಗೂ ಇವೆಂಟ್ ಮ್ಯಾನೇಜರ್ ಆಗಿ ಮೆರೆಯುತ್ತಿದ್ದ ನಿನ್ನ ಸ್ನೇಹಿತ ಇದ್ದಕ್ಕಿದ್ದಂತೆ ಶಾಲಾ ಮಾಸ್ತರನಾಗಬಯಸುತ್ತಾನೆ.
ನಿನ್ನ ಮತ್ತೊಬ್ಬ ಸ್ನೇಹಿತನ ತಂದೆ ಕೇವಲ ‘ಇಂಪೋರ್ಟಡ್’ ವಸ್ತುಗಳನ್ನೇ ಬಳಸಿ ಕಟ್ಟಿಸಿದ ತನ್ನ ಬಂಗಲೆಯ ಬಗ್ಗೆ ಎಲ್ಲರ ಮುಂದೆ ಕೊಚ್ಚಿಕೊಳ್ಳುವ ಉತ್ಸಾಹ ತೋರುವುದಿಲ್ಲ. ಅವರ ಮಗ ನಿನ್ನನ್ನು ಪಕ್ಕಕ್ಕೆ ಕರೆದು ಹೇಳುತ್ತಾನೆ ‘ಈಗ ಅದರ ಬೆಲೆಯೆಲ್ಲಾ ಪೂರ್ತಿ ಡೌನ್ ಆಗಿದೆಯೋ!’
ಆರ್ಥಿಕ ಹಿಂಜರಿಕೆಯಾದಾಗ ನಿನ್ನ ಸ್ನೇಹಿತರೂ ಕೂಡ ಬದಲಾಗುತ್ತಾರೆ. ಅವರೆಲ್ಲ ಇತ್ತೀಚೆಗೆ ಮಾರುಕಟ್ಟೆಗೆ ಬಂದ ಮೊಬೈಲ್, ಬೈಕ್, ಕಂಪ್ಯೂಟರ್, ಲ್ಯಾಪ್ ಟಾಪ್‍ಗಳ ಕುರಿತು ಮಾತನಾಡುವ ಬದಲಿಗೆ ಮನೆಯಲ್ಲೇ ಬೆಳೆಸಬಹುದಾದ ತರಕಾರಿಯ ಕುರಿತು ಮಾತನಾಡಲಿಚ್ಛಿಸುತ್ತಾರೆ. ತಂಗಳನ್ನದಿಂದ ಅಕ್ಕಿರೊಟ್ಟಿ ಮಾಡುವುದು ಹೇಗೆಂದೂ, ಹಳೇ ರುಬ್ಬುವ ಕಲ್ಲಿನ ಉಪಯೋಗ, ಮನೆಯಲ್ಲೇ ಮಿಕ್ಸಿ ರಿಪೇರಿ ಮುಂತಾದ ಕುರಿತು ಚರ್ಚೆಗಳು ಹೆಚ್ಚಾಗುತ್ತವೆ. ಅತ್ಯಂತ ದುಬಾರಿ ವಸ್ತುಗಳನ್ನು ಕೊಂಡುಕೊಂಡು ಬೀಗುತ್ತಿದ್ದವರಿಗಿಂತ ಮಿತವಾಗಿ ಖರ್ಚು ಮಾಡುವವರ ಬದುಕೇ ಹೆಚ್ಚು ಅರ್ಥಪೂರ್ಣ ಎನ್ನಿಸಲಾರಂಭಿಸುತ್ತದೆ.
ಟಿವಿ ಚಾನೆಲ್‍ಗಳಿಗೆ ಐಶ್ವರ್ಯ ರೈ ಇತ್ತೀಚಿನ ಸಿನಿಮಾದಲ್ಲಿ ತೊಟ್ಟ ದಿರಿಸಿನ ವಿನ್ಯಾಸಕಾರರು ಯಾರು ಎಂಬುದಕ್ಕಿಂತ ಚಾಗನೂರಿನ ರೈತರು ಕೃಷಿ ಭೂಮಿ ಕೊಡಲು ಏಕೆ ಒಪ್ಪುತ್ತಿಲ್ಲವೆಂದೂ, ಬೇಳೆಯ ಬೆಲೆ ಏರುವುದಕ್ಕೂ ಇಂತಹ ವಿಷಯಗಳಿಗೂ ಸಂಬಂಧವಿದೆಯೆಂದೂ ತಿಳಿದುಕೊಳ್ಳುವುದು ಹೆಚ್ಚು ಪ್ರಸ್ತುತವೆಂದೆನಿಸುತ್ತದೆ. ಮೇಧಾ ಪಾಟ್ಕರ್ ನೀರಿನ ಖಾಸಗೀಕರಣದ ಕುರಿತು ಮಾತನಾಡಬೇಕೆಂದು ಅವರನ್ನು ಸ್ಟುಡಿಯೋಗೆ ಕರೆಯುತ್ತಾರೆ.
ಆದರೆ, ಮಗು ಆರ್ಥಿಕತೆಯಲ್ಲಿ ಹಿಂಜರಿತ ಕಾಣಿಸಿಕೊಳ್ಳುವುದರಿಂದ ಜನರಿಗೆ ಸಾಹಿತ್ಯ, ಮಾನವೀಯತೆ, ಭಾವನೆಗಳು - ಇವೆಲ್ಲ ಜೀವನಾವಶ್ಯಕ ಮೌಲ್ಯಗಳೆನಿಸಲಾರಂಭಿಸುತ್ತದೆ. ಟಿವಿಯ ನೂರಾರು ಚಾನೆಲ್‍ಗಳಿಗಿಂತ ದಿನಪತ್ರಿಕೆಗಳಲ್ಲಿ ಬರುವ ಸುದ್ದಿಯೇ ಸಾಕೆನಿಸುತ್ತದೆ. ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ನೋಡುವುದಕ್ಕಿಂತ ಮನೆಯಲ್ಲಿ ಕುಳಿತು ಪುಸ್ತಕ ಓದುವುದೇ ಹೆಚ್ಚು ಹಿತವೆನಿಸುತ್ತದೆ. ‘ಹಳೇ ಪಾತ್ರೆ, ಹಳೇ ಸಾಮಾನ್’ನ ಬೀಟ್ಸ್ಗಿಂತ ಲತಾ ಮಂಗೇಶ್ಕರ್, ರಫಿಯವರ ಹಳೇ ಹಾಡುಗಳೇ ಇಂಪೆನಿಸುತ್ತದೆ.
ಮಗು, ಭಯ ಪಡಬೇಡ. ನಿನ್ನ ಹೊಸ ಮೊಬೈಲ್, ಬೈಕು, ಕ್ರೆಡಿಟ್‍ಕಾರ್ಡುಗಳನ್ನು ಬಿಟ್ಟರೆ, ನೀನು ಕಳೆದುಕೊಳ್ಳುವುದೇನೂ ಇಲ್ಲ. ಬದಲಿಗೆ, ಆರ್ಥಿಕತೆಯ ಹಿಂಜರಿತ ಅಥವಾ ಅದರಲ್ಲಿ ಕುಸಿತವಾದಾಗ ನಿನಗಾಗುವ, ನಿನ್ನ ಸ್ನೇಹಿತರಿಗಾಗುವ ಲಾಭವೇ ಹೆಚ್ಚು.
(ಆಧಾರ : ದಿ ಗಾರ್ಡಿಯನ್ ಪತ್ರಿಕೆ)
- ಸುಚೇತಾ ಪೈ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ