Pages

ಕಥೆ - ರಸ್ತೆ ತಡೆ


ಹೇಮಾ ನನ್ನ ಆಪ್ತ ಗೆಳತಿ. ಅವಳ ಕರೆಯ ಮೇರೆಗೆ ರಜಾ ಹಾಕಿ ಮೈಸೂರಿಗೆ ಹೊರಟ್ಟಿದ್ದೆ. ಸಾಮಾನ್ಯವಾಗಿ ಬಸ್ ಹತ್ತಿದ ಮೇಲೆ ಟಿಕೆಟ್ ಕೊಂಡ ನಂತರ ನಾನು ಪುಸ್ತಕದಲ್ಲಿ ಮುಳುಗಿ ಹೋಗುತ್ತಿದ್ದೆ. ಆದರೆ, ಅಂದು ಆ ಕೆಲಸ ಮಾಡಲಾಗಲಿಲ್ಲ. ಆ ಡ್ರೈವರ್ ಸ್ವಲ್ಪ ವಿಚಿತ್ರದ ವ್ಯಕ್ತಿ, ಯದ್ವಾತದ್ವಾ ಗಾಡಿ ಓಡಿಸುತ್ತಿದ್ದ. ಎರಡು ಮೂರು ಬಾರಿ ಜೋರಾಗಿ ಬ್ರೇಕ್ ಹಾಕಿ ಜನರನ್ನು ಗಾಬರಿಪಡಿಸಿದ್ದ. ಒಮ್ಮೆಯಂತೂ ಇನ್ನೇನು ಎದುರಿಗೆ ಬರುತ್ತಿದ್ದ ಲಾರಿಯನ್ನು ಹೊಡೆದೇ ಬಿಡುತ್ತಾನೇನೋ ಎಂಬಂತೆ ಹೋದ. ಜನರೆಲ್ಲಾ ಬೈದ ಮೇಲೆ ನಿಧಾನವಾಗಿ ಹೋಗಲಾರಂಭಿಸಿದ. 
ಈ ಎಲ್ಲ ಗಲಾಟೆಯ ನಡುವೆ ಓದುವುದು ಹೇಗೆ? ನಿದ್ರೆ ಮಾಡಲು ಪ್ರಯತ್ನಿಸಿದೆ. ಜೋಂಪು ಹತ್ತಿತ್ತು. ಇದ್ದಕ್ಕಿದ್ದಂತೆ ಗಾಡಿ ನಿಂತಂತಾಯಿತು. ಮತ್ತೆ ‘ಏನಾಯ್ತಪ್ಪಾ ಇವನಿಗೆ’ ಎಂದುಕೊಂಡು ಕಣ್ಣು ಬಿಟ್ಟು ನೋಡಿದೆ. ಏನೂ ಗೊತ್ತಾಗಲಿಲ್ಲ. ಮುಂದೆ ಸಾಲಾಗಿ ವಾಹನಗಳು ನಿಂತಿದ್ದವು. ಡ್ರೈವರ್ ಕೆಳಗೆ ಇಳಿದು ಹೋದ. ‘ಏನಾಯ್ತು, ಏನಾಯ್ತು?’ ಎಲ್ಲಾ ಕಡೆಗಳಿಂದಲೂ ಪ್ರಶ್ನೆಗಳೇ. ಕೆಲವು ಪ್ರಯಾಣಿಕರು ಕೆಳಗಿಳಿದು ಹೋದರು.
ಸ್ವಲ್ಪ ಸಮಯದ ನಂತರ ಒಬ್ಬಾತ ಬಸ್ ಒಳಗೆ ಬಂದು, “ಏನೊ, ವಿದ್ಯಾರ್ಥಿಗಳ ಸ್ಟ್ರೈಕ್ ಅಂತೆ. ಅರ್ಧ ಘಂಟೆಯಿಂದಲೂ ರಸ್ತೆಯ ಮೇಲೆ ಕುಳಿತಿದ್ದಾರಂತೆ” ಎಂದ.
“ಏನಂತೆ ಸಮಾಚಾರ? ಎಷ್ಟೊತ್ತಾಗುತ್ತಂತೆ?” ಯಾರದೊ ಪ್ರಶ್ನೆ.
“ಈ ಹುಡುಗ್ರಿಗೆ ಮಾಡೋಕೆ ಬೇರೆ ಕೆಲಸವಿಲ್ಲ. ಮನೇಲಿ ಚೆನ್ನಾಗಿ ಹಾಕಿ ಕಳಿಸಿ ಬಿಡ್ತಾರೆ” ಮಧ್ಯ ವಯಸ್ಸಿನ ಮಹಿಳೆಯೊಬ್ಬಳ ಉವಾಚ.
“ಹೇಳೋರೊ ಕೇಳೋರು ಯಾರೂ ಇಲ್ಲ ಇವರಿಗೆ. ನಮ್ಮ ಕಾಲದಲ್ಲಿ ಹೇಗಿತ್ತು?” ಮುದುಕರೊಬ್ಬರ ದನಿ.
ಸುಮಾರು 60 ವರ್ಷದ ಮಹಿಳೆಯೊಬ್ಬರು, “ಅಯ್ಯೊ, ಇದಕ್ಕೆ ನಮ್ಮೆಜಮಾನ್ರು ಹೇಳಿದ್ದು ನೀನೊಬ್ಬಳೇ ಹೋಗಬೇಡಾಂತ. ದೇವ್ರೆ ಈಗೇನು ಮಾಡೋದು” ಆಕಾಶಾನೇ ಕಳಚಿಬಿದ್ದಂತೆ ಅಳಲಾರಂಭಿಸಿದರು.
ನಗುನಗುತ್ತಾ ಆಟವಾಡುತ್ತಿದ್ದ ಮಗುವನ್ನು ತೋರಿಸಿ, “ಇದು ಹಾಲು ಬೇಕೂಂತ ಹಠ ಮಾಡಿದ್ರೆ ಏನು ಮಾಡ್ಲಪ್ಪಾ?” ನಿಟ್ಟುಸಿರು ಇನ್ನೊಬ್ಬ ಮಹಿಳೆಯದು.
“ಇಂದು ಆಫೀಸಿಗೆ ಗೋವಿಂದಾ. ಇವಕ್ಕಂತು ಬೇರೆಯವರ ಕಷ್ಟ ಅರ್ಥವೇ ಆಗೋದಿಲ್ಲ. ಇವನ್ನಂದು ಏನು ಪ್ರಯೋಜನ? ಏನು ಅಪ್ಪ-ಅಮ್ಮಂದಿರೋ, ಮಕ್ಕಳಿಗೆ ಸರಿಯಾಗಿ ಬುದ್ಧಿ ಕಲಿಸಲಿಲ್ಲ” ಠಾಕುಠೀಕಾಗಿದ್ದ ವ್ಯಕ್ತಿಯೊಬ್ಬರ ಹೇಳಿಕೆ.
ಎಲ್ಲಾ ಕಡೆಗಳಿಂದಲೂ ಇಂತಹುದೆ ಮಾತುಗಳು, ಹಲವರ ಶಾಪಗಳು. ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದ ನನಗೆ ವಿದ್ಯಾರ್ಥಿಗಳ ಬಗ್ಗೆ ಅವರೆಲ್ಲ ಹೇಳುತ್ತಿದ್ದ ಮಾತುಗಳನ್ನು ಒಪ್ಪಿಕೊಳ್ಳಲು ಕಷ್ಟವಾಯಿತು. ಎಲ್ಲಾ ಸಮಯದಲ್ಲೂ, ವಿನಾಕಾರಣ ವಿದ್ಯಾರ್ಥಿಗಳು ಇತರರಿಗೆ ತೊಂದರೆ ಕೊಡುತ್ತಾರೆ ಎಂಬ ತೀರ್ಮಾನಕ್ಕಂತೂ ನಾನು ಬರಲು ಸಾಧ್ಯವಿರಲಿಲ್ಲ. ಏನೋ ಕಾರಣವಿರಲೇಬೇಕು. ಆದರೆ ಈಗಂತೂ ಅದರ ಬಗ್ಗೆ ಯಾರನ್ನು ಕೇಳುವುದು. ಹೋಗಲಿ ಕಾಲ ಕಳೆಯಲು ಪುಸ್ತಕವನ್ನಾದರೂ ಓದೋಣ ಎಂದುಕೊಂಡು ಪುಸ್ತಕ ತೆರೆದೆ.
ಇದ್ದಕ್ಕಿದ್ದಂತೆ ಬಸ್‍ನಲ್ಲಿ ಮೌನ ಆವರಿಸಿತು. ಇದ್ದಕ್ಕಿದ್ದಂತೆ ಏನಾಯ್ತಪ್ಪಾ ಎಂದುಕೊಂಡು ಪುಸ್ತಕದಿಂದ ತಲೆ ಎತ್ತಿದೆ. ಎಲ್ಲರೂ ಭಯಭೀತರಂತೆ ಕಾಣಿಸುತ್ತಿದ್ದರು.
“ಅಯ್ಯೋ ಆ ಹುಡುಗ್ರು ಈ ಕಡೆ ಬರ್ತಾ ಇದ್ದಾರೆ. ಕಲ್ಲೇನಾದ್ರೂ ತೂರ್ತಾರೇನೊ.” ಆ ಕಡೆ ತಿರುಗಿದೆ. ಸಮಾರು 7-8 ಹುಡುಗರು ಬರ್ತಿದ್ರು. ಅವರ ಜೊತೆಗೆ 7-8 ಹುಡುಗಿಯರು. ಬಸ್ ಹತ್ತಿ ಒಳಗೆ ಬಂದರು. ಎರಡು ಮೂರು ದಿನಗಳಿಂದ ಸರಿಯಾದ ನಿದ್ರಾಹಾರಗಳು ಇಲ್ಲದಂತೆ ಕಂಡಂತಹ ಓರ್ವ ವಿದ್ಯಾರ್ಥಿ ಮುಂದೆ ಬಂದ. ಉಳಿದವರೆಲ್ಲಾ ಅಲ್ಲಲ್ಲೇ ನಿಂತರು.
“ನಾಗರಿಕರೇ” ಒಡೆದ ಕಂಠದಿಂದ ಮಾತನಾಡಲಾರಂಭಿಸಿದ. ಅದೆಷ್ಟು ಜನರೊಂದಿಗೆ ಮಾತನಾಡಿದ್ದನೊ? “ನಾವು ಬಸ್ ತಡೆದಿರುವುದರಿಂದ ನಿಮಗೆಲ್ಲಾ ಬೇಸರವಾಗಿದೆ, ಕಷ್ಟವಾಗಿದೆ ಎಂಬುದು ನಮಗೆ ಗೊತ್ತು. ಆದರೆ ನಮಗೆ ಈ ದಾರಿ ಬಿಟ್ಟು ಬೇರೆ ಮಾರ್ಗವೇ ಇರಲಿಲ್ಲ.”
“ಈಗಾಗಲೇ ನಿಮ್ಮ ಈ ರೀತಿಯಿಂದ ನಮಗೆ ಬೇಸರವಾಗಿದೆ. ಈಗ ಮಾತನಾಡಿ ಬೋರ್ ಹೊಡೆಸಬೇಡಯ್ಯಾ.” ಯಾರೊ ಹಿಂದಿನಿಂದ ಕಿರುಚಿದರು.
“ನೋಡಿ” ಬೇಸರ ಮಾಡಿಕೊಳ್ಳದೆ ಆತ ಮುಂದುವರೆಸಿದ, “ನಮ್ಮ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಕೇವಲ ಆರು ತಿಂಗಳ ಹಿಂದೆ ಮದುವೆಯಾಗಿದ್ದಳು.”
“ಅದಕ್ಕೆ ನಾವೇನು ಮಾಡಬೇಕಯ್ಯಾ?” ಯಾರದೋ ಅಣಕ.
“ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಳ್ತೀರಾ.” ಹಿಂದೆ ನಿಂತಿದ್ದ ವಿದ್ಯಾರ್ಥಿಯೊಬ್ಬನ ಗದರಿಕೆ. ಎಲ್ಲಾ ಗಪ್‍ಚಿಪ್.
ಆ ವಿದ್ಯಾರ್ಥಿ ಮಾತನ್ನು ಮುಂದುವರೆಸಿದ, “ಮೂರು ದಿನಗಳ ಹಿಂದೆ ಅವಳ ಗಂಡನ ಮನೆಯವರು ಅವಳನ್ನು ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾರೆ. ಆದ್ರೆ
ಪೋಲೀಸ್ನೋರು ಆ ಕೊಲೆಪಾತಕರನ್ನು ಅರೆಸ್ಟ್ ಮಾಡಿಲ್ಲ. ಅದಕ್ಕೆ ಈ ಮುಷ್ಕರ.”
“ಅವಳೇನು ನಿನ್ನ ತಂಗಿಯೇನಯ್ಯಾ?” ಆ ಘಳಿಗೆಯಲ್ಲೂ ಯಾರದೊ ಕುಹಕ.
“ಹೌದು ಸರ್, ಆದರೆ ಒಡಹುಟ್ಟಿದವಳಲ್ಲ” ಆ ವಿದ್ಯಾರ್ಥಿಯ ಶಾಂತ ಉತ್ತರ.
“ಈ ಘಟನೆ ಯಾರ ಮನೆಯಲ್ಲಿ ಬೇಕಾದರೂ ನಡೆಯಬಹುದು. ಮಾನವೀಯತೆ ಇರುವ ಯಾರೂ ಇಂತಹುದನ್ನು ಸಹಿಸಬಾರದು. ಅದಕ್ಕೆ ಈ ಪ್ರತಿಭಟನೆ. ದಯವಿಟ್ಟು ಇದನ್ನು ಅರಿತು ನಮ್ಮೊಂದಿಗೆ ಸಹಕರಿಸಿ” ಎನ್ನುತ್ತಾ ಆ ವಿದ್ಯಾರ್ಥಿ ಕೆಳಗಿಳಿದು ಹೋದ.
ಇತರರೂ ಆತನನ್ನು ಅನುಸರಿಸಿದರು.
ಎರಡು ಘಂಟೆಯಾದ ನಂತರ ಡ್ರೈವರ್ ಗಾಡಿ ಹತ್ತಿ ಸ್ಟಾರ್ಟ್ ಮಾಡಿದ.
“ಏನಾಯ್ತು?” ಯಾರೊ ಕೇಳಿದರು.
“ಎಂಎಲ್‍ಎ ಬಂದಿದ್ದ. ಪೋಲಿಸ್ನೋರು ಬಂದಿದ್ರು. ಅವರನ್ನು ಅರೆಸ್ಟ್ ಮಾಡ್ತೀವಿ ಎಂದ್ರು. ಆದರೆ ಆ ಹುಡುಗ್ರು ಭಾಳಾ ಗಟ್ಟಿಗರು. ಅರೆಸ್ಟ್ ಮಾಡೋವರೆಗೂ ಬಿಡಲಿಲ್ಲ. ಜೊತೆಗೆ ಇಲ್ಲಿ ಮಾತನಾಡಿದನಲ್ಲ ಆ ಹುಡ್ಗ, ಅವನೇ ನಾಯಕ ಇರಬಹುದು, ಅವನು ಈ ಹೋರಾಟ ಕೇಸ್ ಮುಗಿಯುವವರೆಗೂ ಮುಂದುವರೆಯಬೇಕು, ಮುಂದಿಟ್ಟ ಹೆಜ್ಜೆ ಹಿಂದಿಡಬಾರದು ಎಂದು ಹೇಳುತ್ತಿದ್ದ.” ಡ್ರೈವರ್ ವರ್ಣಿಸಿದ.
ತಮ್ಮ ಓದಿಗಾಗಿ, ತಮಗಾಗಿಯಲ್ಲದೆ ಇನ್ನಾರಿಗಾಗೊ ಬೀದಿಗಿಳಿದ ಆ ಹುಡುಗರನ್ನು ನೆನೆಸಿಕೊಂಡು ಹೃದಯ ತುಂಬಿ ಬಂತು.
“ನಿಮ್ಮ ಪೀಳಿಗೆ ಹೆಚ್ಚಾಗಲಿ, ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಪ್ಪ” ಹರಸಿದರು ಹಿರಿಯರೊಬ್ಬರು.
ಮೈಸೂರು ತಲುಪುವವರೆಗೂ ಡ್ರೈವರ್ ಆ ಹುಡುಗರನ್ನು ಹೊಗಳುತ್ತಾ ಬಾಯಿಗೆ ಒಂದು ಕ್ಷಣವೂ ಬಿಡುವು ಕೊಡದಂತೆ ಕೆಲಸ ಕೊಟ್ಟಿದ್ದ.

- ಸುಧಾ ಜಿ   

1 ಕಾಮೆಂಟ್‌:

ರಾಜೀವ್ ಮಾಗಲ್ ಹೇಳಿದರು...

ದಿನವಿಡೀ ಪತ್ರಿಕೆಗಳಲ್ಲಿ ಕಾಣಬಹುದಾದ, ಓದಬಹುದಾದ ಸುದ್ದಿಯನ್ನೇ ಒ೦ದು ಕಥೆಯಾಗಿ ಬ್ಲಾಗ್ ನಲ್ಲಿ ಮೂಡಿದೆ. ಬಹುಶ: ಮು೦ದಿನ ಸ೦ಚಿಕೆಗಳಲ್ಲಿ ವರದಕ್ಷಿಣೆಗೆ ಬಲಿಯಾಗದ೦ತೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ, ಕಥೆಯ ರೂಪದಲ್ಲಿ ಸಲಹೆಗಳು ಮೂಡಿಬ೦ದರೆ ಒಳಿತಲ್ಲವೇ? ಇವೆಲ್ಲದರ ನಡುವೆ ಮನದಲ್ಲಿ ಮೂಡುವ ಮೊಟ್ಟ ಮೊದಲ ಪ್ರಶ್ನೆ "ಓರ್ವ ವಿದ್ಯಾರ್ಥಿನಿ ಕಾಲೇಜು ವ್ಯಾಸ೦ಗದ ನಡುವೆ ಮದುವೆಯಾಗುವುದು ಅನಿವಾರ್ಯವಾಗಿತ್ತೇ?" ಪ್ರೀತಿ-ಪ್ರೇಮದ ಕಹಾನಿ ಹೊಸದೇನಲ್ಲ. ಪ್ರತಿಯೊ೦ದು ಕೆಲಸಕ್ಕೂ ಘಳಿಗೆ ಅಥವಾ ಸಮಯದ ನಿರ್ಣಯ ಅತೀ ಮುಖ್ಯ. ಮದುವೆಯ ವಯಸ್ಸಿನಲ್ಲಿ ಮದುವೆ, ವ್ಯಾಸ೦ಗದ ವಯಸ್ಸಿನಲ್ಲಿ ಶಿಕ್ಷಣ-ವ್ಯಾಸ೦ಗ ಸೂಕ್ತವಲ್ಲವೇ? ಎ೦ಬ ಸೂಕ್ಷ್ಮತೆಯ ಬಗ್ಗೆ ಕಥೆಗಳು ಮೂಡಿಬರಲಿ. "ಮದುವೆಯಾಗುವುದು ನಮ್ಮಿಷ್ಟ ಕಣ್ರೀ" "ವಯ್ಯಸ್ಸಿನ ನಿರ್ಧಾರ ನಮ್ಮ ನಿರ್ಧಾರ ಕಣ್ರೀ" "ನಮ್ಮ ವಯ್ಯಕ್ತಿಕ ನಿರ್ಧಾರಗಳ ಬಗ್ಗೆ ನೀವ್ಯಾರು ಹೇಳಕ್ಕೆ" ಎ೦ಬ ವಾದಗಳಿಗೆ ಉತ್ತರ ಸಿಗದು. ಪಾಸಿಟಿವ್ ಆಗಿ ಥಿ೦ಕ್ ಮಾಡಿ...... ನೆಗಟಿವ್ ಅನಿವಾರ್ಯ... ಎದುರಿಸಲೇಬೇಕಾದ ಅನಿವಾರ್ಯ ಕಣ್ರೀ!