ರಷ್ಯನ್ ಗುಣ! ಬಹುಶಃ ಅಷ್ಟೇನೂ ದೊಡ್ಡದಲ್ಲದ ಕಥೆಗೆ ತುಂಬಾ ದೊಡ್ಡ ಹೆಸರು. ಆದರೆ ನೋಡಿ, ನಾನು ಹೇಳಬೇಕೆಂದಿರುವ ರಷ್ಯನ್ ಗುಣ ಅಡಗಿರುವುದೇ ಅಲ್ಲಿ.
ಹೌದು, ರಷ್ಯನ್ ಗುಣ-ನಿಮಗೆ ಸಾಧ್ಯವಾದರೆ ವಿವರಿಸಿ ನೋಡೋಣ! ನಾನು ದೇಶಪ್ರೇಮಿ ಯುದ್ಧದಲ್ಲಿ, ಅಂದರೆ ಎರಡನೆ ವಿಶ್ವಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ರಷ್ಯನ್ನರ ಅನೇಕ ಸಾಹಸಕಾರ್ಯಗಳ ಬಗ್ಗೆ ಹೇಳಬಲ್ಲೆ; ಆದರೆ ಅವುಗಳು ಅದೆಷ್ಟಿವೆಯೆಂದರೆ, ಅದರಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಅನ್ನುವುದರಲ್ಲಿ ಸೋತು ಹೋಗುತ್ತೇನೆ. ನನ್ನ ಅದೃಷ್ಟ. ನನ್ನ ಗೆಳೆಯ ನೆರವಿಗೆ ಬಂದ; ತನ್ನ ಸ್ವಂತ ಕಥೆಯೊಂದಿಗೆ. ಅವನ ಎದೆಯ ಮೇಲೆ ಚಿನ್ನದ ನಕ್ಷತ್ರ ಮತ್ತು ಪದಕಗಳ ಸರಮಾಲೆಯೇ ಇದ್ದರೂ ಸಹ ಅವನ ಮಹಾಸಾಹಸದ ಕೆಲಸಗಳ ಬಗ್ಗೆ ಹೇಳುವುದಿಲ್ಲ. ನಿಜ ಹೇಳಬೇಕೆಂದರೆ, ಅವನೊಬ್ಬ ಸರಳ, ಶಾಂತ ಸ್ವಭಾವದ ಸಾಮಾನ್ಯ ಮನುಷ್ಯ; ಸರತೊವ್ ಪ್ರದೇಶದ ವೋಲ್ಗಾ ನದಿದಂಡೆಯ ಮೇಲಿರುವ ಹಳ್ಳಿಯ ಸಾಮೂಹಿಕ ಕೃಷಿಕ್ಷೇತ್ರದ ರೈತ. ಆದರೆ ಆಜಾನುಬಾಹು ವ್ಯಕ್ತಿ ಮತ್ತು ನೋಡಲು ಸುಂದರ ಕೂಡ; ಹಾಗಾಗಿ ನಮ್ಮ ಜೊತೆ ಇದ್ದಾಗ ಎದ್ದುಕಾಣುತ್ತಿದ್ದನು. ಅವನು ಸೈನ್ಯದ ಟ್ಯಾಂಕ್‍ನ ಬುರುಜಿನಿಂದು ಇಳಿದು ಬರುವುದನ್ನು ನೋಡುವುದೇ ಚಂದ; ಅವನಿಂದ ಕಣ್ಣು ಕೀಳಲು ಸಾಧ್ಯವೇ ಇಲ್ಲ. ಅವನು ಟ್ಯಾಂಕಿನಿಂದ ನೆಲಕ್ಕೆ ಜಿಗಿದು, ಹೆಲ್ಮೆಟ್ ತೆಗೆದು ಬೆವರಿನಿಂದ ಒದ್ದೆಯಾದ ಕೂದಲನ್ನು ಸ್ವತಂತ್ರಗೊಳಿಸುತ್ತಾ, ಚಿಂದಿಬಟ್ಟೆ ತೆಗೆದುಕೊಂಡು ಮಸಿಯಾದ ಮುಖವನ್ನು ಒರೆಸುಕೊಳ್ಳುವನು; ಮತ್ತೆ, ಆತ ಯಾವಾಗಲೂ ಮಾಡುತ್ತಿದ್ದಂತೆ, ಕೇವಲ ಜೀವಂತವಾಗಿರುವ ಸಂತೋಷಕ್ಕೇ ನಗುತ್ತಿದ್ದನು.
ಯಾರೇ ಆಗಲಿ, ಯುದ್ಧದಲ್ಲಿರುವಾಗ, ಸದಾ ಸಾವನ್ನು ಎದುರಿಸುತ್ತಿರುವಾಗ ಸಾಧಾರಣ ವ್ಯಕ್ತಿತ್ವಕ್ಕಿಂತ ಮೇಲೇರುತ್ತಾನೆ. ಬಿಸಿಲಿಗೆ ಬೆಂದ ಚರ್ಮದಿಂದ ಒಣಚರ್ಮ ಉದುರಿಹೋಗುವಂತೆ, ಅವನಲ್ಲಿದ್ದ ಬೇಡವಾದದ್ದೆಲ್ಲಾ ಹೋಗಿ ತಿರುಳು ಮಾತ್ರ, ನಿಜವಾದ ಮನುಷ್ಯ ಮಾತ್ರ ಉಳಿಯುತ್ತಾನೆ. ನಿಜ, ಆ ತಿರುಳು ಕೆಲವರಲ್ಲಿ ಇತರರಿಗಿಂತ ಹೆಚ್ಚು ಗಟ್ಟಿಯಾಗಿರುತ್ತದೆ; ಆದರೆ ಕೆಲವು ದೋಷಗಳಿಂದ ಕೂಡಿದ ವ್ಯಕ್ತಿಯೂ ಸಹ ಗಟ್ಟಿ ವ್ಯಕ್ತಿತ್ವ ಗಳಿಸಿಕೊಳ್ಳಲು ಕಷ್ಟಪಡುತ್ತಾನೆ; ಏಕೆಂದರೆ ಎಲ್ಲರಿಗೂ ತಾನೊಬ್ಬ ಒಳ್ಳೆಯ ಮತ್ತು ನಿಷ್ಠಾವಂತ ಕಾಮ್ರೇಡ್ ಆಗಬೇಕೆಂಬ ಬಯಕೆಯಿರುತ್ತದೆ. ಆದರೆ ನನ್ನ ಗೆಳೆಯ ಯೆಗೊರ್ ದ್ರೊಮೊವ್ ಯುದ್ಧಕ್ಕೆ ಮುಂಚಿನಿಂದಲೂ ತನ್ನ ನೀತಿ, ನಡೆಗಳಲ್ಲಿ ಬಹಳ ಕಟ್ಟುನಿಟ್ಟು; ಆತನಿಗೆ ತನ್ನ ತಾಯಿ ಮರಿಯಾ ಪೊಲಿಕರ್ಪೊವ್ನಾ ಮತ್ತು ತಂದೆ ಯೆಗೊರ್ ಯೆಗೊರೊವಿಚ್ ಬಗ್ಗೆ ಅಪಾರವಾದ ಗೌರವ. ಆತ ಯಾವಾಗಲೂ ಹೇಳುತ್ತಿದ್ದ, ‘ನನ್ನ ತಂದೆ ಬಹಳ ಗೌರವಸ್ಥ. ಅವರನ್ನು ನೋಡಿದರೆ ನಿಮಗೆ ಮೊದಲು ಬರುವ ಅನಿಸಿಕೆಯೆಂದರೆ, ಅವರು ತುಂಬಾ ಸ್ವಾಭಿಮಾನಿ.’ ಯೆಗೊರ್‍ಗೆ ಅವರು ಹೇಳುತ್ತಿದ್ದರಂತೆ, ‘ನೋಡು ಮಗು, ನೀನು ಪ್ರಪಂಚದಲ್ಲಿ ಸಾಕಷ್ಟು ವಿಷಯಗಳನ್ನು ನೋಡುವೆ. ನೀನು ವಿದೇಶಕ್ಕೂ ಹೋಗಬಹುದು. ಆದರೆ ನೀನು ರಷ್ಯನ್ ಆಗಿರುವುದಕ್ಕೆ ಹೆಮ್ಮ ಪಡು, ಆ ಹೆಮ್ಮೆ ಸದಾ ನಿನ್ನಲ್ಲಿರಲಿ.’
ನಮ್ಮ ಯೆಗೊರ್ ವೊಲ್ಗಾ ನದಿದಂಡೆಯ ಮೇಲಿರುವ ಅದೇ ಹಳ್ಳಿಯ ಹುಡುಗಿಯನ್ನು ಮದುವೆಯಾಗಲಿದ್ದ. ನಮ್ಮ ಹುಡುಗರು ತಮ್ಮ ಹುಡುಗಿಯರ ಬಗ್ಗೆ, ಹೆಂಡತಿಯರ ಬಗ್ಗೆ ಮಾತನಾಡುತ್ತಿರುತ್ತಾರೆ; ಅದರಲ್ಲೂ ರಣರಂಗ ಶಾಂತವಾಗಿದ್ದಾಗ, ಚಳಿಯಿದ್ದು ಊಟ ಮಾಡಿದ ಮೇಲೆ ಬೆಂಕಿ ಕಾಯಿಸುತ್ತಾ ಕುಳಿತಿದ್ದಾಗ ಅಂತಹ ಮಾತುಕತೆ ನಡೆಯುತ್ತಿರುತ್ತದೆ. ಕೆಲವೊಮ್ಮೆ ಅವರಾಡುವ ಮಾತುಗಳು ನಿಮ್ಮ ಕಿವಿಗಳನ್ನು ಚುರುಕುಗೊಳಿಸುತ್ತವೆ. ಉದಾಹರಣೆಗೆ: ಅವರಲ್ಲೊಬ್ಬ ಶುರು ಮಾಡುತ್ತಾನೆ; “ಪ್ರೀತಿಯೆಂದರೇನು?” “ಪ್ರೀತಿಯೆನ್ನುವುದು ಗೌರವದಿಂದ ಹುಟ್ಟುವಂತಹುದು” ಎನ್ನುತ್ತಾನೆ ಇನ್ನೊಬ್ಬ. ಮತ್ತೊಬ್ಬನ ಮಾತು: “ಆ ಥರ ಏನೂ ಇಲ್ಲ. ಪ್ರೀತಿ ಅನ್ನೋದು ಒಂದು ಅಭ್ಯಾಸ, ಅಷ್ಟೆ. ಒಬ್ಬ ಮನುಷ್ಯ ತನ್ನ ಹೆಂಡತೀನ ಮಾತ್ರ ಪ್ರೀತಿ ಮಾಡಲ್ಲ. ತನ್ನ ತಂದೆ ತಾಯೀನೂ ಪ್ರೀತಿಸ್ತಾನೆ. ಪ್ರಾಣಿಗಳನ್ನೂ ಸಹ ಪ್ರೀತಿಸ್ತಾನೆ.” ಮೂರನೆಯವನು ಹೇಳುತ್ತಾನೆ: “ನಾನು ಹೇಳಿದ್ದು ಕೇಳಿ ಸಿಟ್ಟು ಬಂದರೆ, ಬೇಕಾದ್ರೆ ನನಗೆ ಒದ್ದುಬಿಡಿ, ನಾನೊಬ್ಬ ಮುಠ್ಠಾಳ. ನೋಡಿ, ಒಬ್ಬ ಮನುಷ್ಯ ಪ್ರೀತಿಯಲ್ಲಿ ಬಿದ್ದಾ ಅಂದ್ರೆ, ಅವನ ಎದೆ ಡವಡವ ಹೊಡೆದುಕೊಳ್ಳುತ್ತೆ. ಒಳ್ಳೆ ಕುಡಿದವರ ಥರ ಆಡ್ತಾನೆ.” ಅವರು ಒಂದೆರೆಡು ಗಂಟೆಗಳವರೆಗೂ ಅಥವಾ ಸಾರ್ಜೆಂಟ್ ಮೇಜರ್ ಬಂದು ತನ್ನ ಅಧಿಕಾರಯುತವಾದ ವಾಣಿಯಿಂದ ವಿಷಯಗಳ ಒಳಹೊಕ್ಕು ಚರ್ಚೆ ಮಾಡುವವರೆಗೂ ಮಾತುಕತೆಯನ್ನು ನಡೆಸುತ್ತಿರುತ್ತಾರೆ.
ಯೆಗೊರ್ ದ್ರೊಮೊವ್‍ಗೆ ಇಂತಹ ಮಾತುಕತೆಗಳಿಂದ ಇರುಸುಮುರುಸಾಗುತ್ತಿತ್ತು; ಅದಕ್ಕೇ ತನ್ನ ಹುಡುಗಿಯ ಬಗ್ಗೆ ಕೆಲವು ಸೂಚನೆಗಳನ್ನು ಮಾತ್ರ ನೀಡಿದ್ದನು. ‘ಅವಳು ತುಂಬಾ ಒಳ್ಳೆಯ ಹುಡುಗಿ; ಅವಳು ನನಗಾಗಿ ಕಾಯುತ್ತೇನೆ ಎಂದರೆ, ನಾನು ಒಂಟಿ ಕಾಲಲ್ಲಿ ಬಂದರೂ ನನಗಾಗೇ ಕಾಯುತ್ತಿರುತ್ತೇನೆ ಎಂದರ್ಥ’ ಎಂದು ಹೇಳುತ್ತಿದ್ದನು.
ಅವನಿಗೆ ತನ್ನ ಯುದ್ಧ ಸಾಹಸಗಳ ಬಗ್ಗೆಯೂ ಮಾತನಾಡಲು ಅಷ್ಟೇನೂ ಆಸಕ್ತಿಯಿರಲಿಲ್ಲ. “ಅವುಗಳನ್ನು ನೆನಪಿಸಿಕೊಳ್ಳಲು ಇಷ್ಟವಾಗುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸುತ್ತಾ, ಸಿಗರೇಟನ್ನು ಜೋರಾಗಿ ಎಳೆಯುತ್ತಿದ್ದನು. ನಮಗೆ ಅವನ ಟ್ಯಾಂಕ್ ನಡೆಸಿದ ದಾಳಿಗಳ ಕಥೆಯನ್ನು ಅವನ ಪಡೆಯವರಿಂದ ಕೇಳಿ ತಿಳಿದುಕೊಂಡೆವು. ಟ್ಯಾಂಕ್ ಚಾಲಕ ಚುವಿಲೊವ್ ಅಂತೂ ಒಂದು ಹೃದಯಸ್ಪರ್ಶಿ ಕಥೆಯೊಂದನ್ನು ಹೇಳಿದನು.
“...ನಾವು ಆಗ ತಾನೇ ತಿರುಗುತ್ತಿದ್ದೆವು. ನಾನು ಬೆಟ್ಟದ ಮೇಲೆ ಕಂಡಿದ್ದೇನು... ‘ಕಾಮ್ರೇಡ್ ಲೆಫ್ಟಿನೆಂಟ್’, ನಾನು ಕೂಗಿಕೊಂಡೆ ‘ಟ್ಯಾಂಕ್’ ಬರುತ್ತಿದೆ.’ ‘ತಡೆಯಿರಿ’ ಎಂದು ಕೂಗಿ ಹೇಳಿದರು. ನಾನು ಫರ್ ಮರಗಳ ಮಧ್ಯೆ ಮರೆಯನ್ನು ಬಳಸಿಕೊಂಡು ನುಸುಳಿಕೊಂಡು ಓಡಿದೆ. ವೈರಿಯ ಟ್ಯಾಂಕ್ ಕುರುಡನಂತೆ ತಡಕಾಡುತ್ತಾ ಬಂದು ಗುಂಡು ಹಾರಿಸಿತು, ಆದರೆ ಗುರಿ ತಪ್ಪಿತು. ಆದರೆ ನಮ್ಮ ಲೆಫ್ಟಿನೆಂಟ್ ಗುಂಡು ಹಾರಿಸಿದರು, ಆಹಾ ಅದೆಂತಹ ಹೊಡೆತ! ಫಿರಂಗಿಯ ಗೋಪುರಕ್ಕೆ ಮತ್ತೊಂದು ಹೊಡೆತ ಬಿತ್ತು ನೋಡಿ, ಟ್ಯಾಂಕ್ ತನ್ನ ಮೂತಿಯನ್ನು ಆಕಾಶಕ್ಕೆ ತಿರುಗಿಸಿಕೊಂಡು ಕೆಳಗೆ ಬಿತ್ತು. ಮೂರನೇ ಹೊಡೆತಕ್ಕೆ ಎಲ್ಲಾ ಸಂದುಗಳಿಂದಲೂ ಹೊಗೆ ಬರುವುದಕ್ಕೆ ಶುರುವಾಯಿತು. ಆಮೇಲೆ ಸುಮಾರು ಬಹಳ ಎತ್ತರಕ್ಕೆ ಬೆಂಕಿಯ ಜ್ವಾಲೆ ಎಬ್ಬಿತು. ಒಳಗಡೆಯಿದ್ದ ಪಡೆಯವರು ತಪ್ಪಿಸಿಕೊಳ್ಳಲು ಹೊರಬಂದರು. ಅವರನ್ನೆಲ್ಲಾ ನಮ್ಮ ಇವಾನ್ ಲ್ಯಾಪ್‍ಶಿನ್‍ನ ಮೆಶೀನ್‍ಗನ್ ಹೊಡೆದುರುಳಿಸಿತು... ಸರಿ ಅದು ನಮ್ಮ ದಾರಿಯನ್ನು ಸುಗಮಗೊಳಿಸಿತು. ಐದೇ ನಿಮಿಷದಲ್ಲಿ ನಾಜಿಗಳಿದ್ದ ಹಳ್ಳಿಗೆ ನುಗ್ಗಿದೆವು. ಎಂಥಾ ತಮಾಷೆ! ಅಲ್ಲಿ ನಾಜಿಗಳೆಲ್ಲಾ ದಿಕ್ಕಾಪಾಲಾಗಿ ಓಡಿದರು. ಅಲ್ಲೆಲ್ಲಾ ಕೆಸರಿತ್ತು. ಅವರ ಬೂಟುಗಳು ಸಿಕ್ಕಿಕೊಂಡವು. ಅವರು ಬರಿ ಸಾಕ್ಸ್‍ನಲ್ಲಿ ಕುಂಟುತ್ತಾ ಕಣಜದ ಕಡೆಗೆ ಓಡಿದರು. ಮತ್ತೆ, ಕಾಮ್ರೇಡ್ ಲೆಫ್ಟಿನೆಂಟ್ ಆಜ್ಞೆ ನೀಡಿದರು: “ಕಣಜವನ್ನು ಉಡಾಯಿಸಿ.” ನಾವು ಗನ್‍ಗಳನ್ನು ತಿರುಗಿಸಿಕೊಂಡು ಅದರೊಳಗೆ ನುಗ್ಗಿದೆವು. ಗುರ್ರ್! ಅಲ್ಲಿದ್ದ ತೊಲೆಗಳು, ಇಟ್ಟಿಗೆಗಳು, ಹಲಗೆಗಳು ನಮ್ಮ ಮೇಲೆ ಕುಸಿದು ಬೀಳುತ್ತಿದ್ದವು; ಜೊತೆಗೆ ಮಹಡಿಯೇರುತ್ತಿದ್ದ ನಾಜಿಗಳೂ ಸಹ. ನಾನು ಅಲ್ಲೆಲ್ಲಾ ಸುತ್ತಾಡಿಕೊಂಡು ಇಡೀ ಸ್ಥಳವನ್ನು ತೊಳೆಯಲು ಒಳಗಡೆ ಹೋದೆ. ಉಳಿದವರೆಲ್ಲಾ ಕೈಯನ್ನು ಮೇಲಕ್ಕೆತ್ತಿ ಕೂಗಿದರು, “ಹಿಟ್ಲರ್ ಸತ್ತ.”
ಲೆಫ್ಟಿನೆಂಟ್ ಯೆಗೊರ್ ದ್ರೊಮೊವ್ ಹೀಗೆಯೇ ಹೋರಾಡುತ್ತಿದ್ದುದು, ದುರದೃಷ್ಟದ ಹೊಡೆತ ಬೀಳುವವರೆಗೂ. ಸ್ವಲ್ಪ ಕಾಲವಾದ ಮೇಲೆ ಕಸ್ರ್ಕ್ ಯುದ್ಧದ ಸಮಯದಲ್ಲಿ, ಜರ್ಮನ್ನರನ್ನು ಮೂಲೆಗೆ ಒತ್ತರಿಸಲಾಗಿತ್ತು. ಅವರು ಹಿಂದೆ ಹಿಂದೆ ಸರಿಯುತ್ತಿದ್ದರು. ಆಗ ಗುಡ್ಡದ ಮೇಲೆ ನಿಲ್ಲಿಸಿದ್ದ ದ್ರೊಮೊವ್‍ನ ಟ್ಯಾಂಕ್‍ಗೆ ಶೆಲ್ ಬಡಿಯಿತು; ಇಬ್ಬರು ಸೈನಿಕರು ಸ್ಥಳದಲ್ಲೇ ಸತ್ತರು. ಇನ್ನೊಂದು ಶೆಲ್ ಬೆಂಕಿ ಹತ್ತಿಸಿತು. ಮುಂದಿನ ಸಂದಿಯಿಂದ ತಪ್ಪಿಸಿಕೊಂಡ ಡ್ರೈವರ್ ಚುವಿಲೊವ್, ತಕ್ಷಣವೇ ಟ್ಯಾಂಕ್ ಮೇಲುಗಡೆ ಹತ್ತಿ, ಲೆಫ್ಟಿನೆಂಟ್ ಅನ್ನು ಹೇಗೋ ಹೊರತರುವಲ್ಲಿ ಯಶಸ್ವಿಯಾದ. ಲೆಫ್ಟಿನೆಂಟ್‍ಗೆ ಜ್ಞಾನ ತಪ್ಪಿತ್ತು; ಬಟ್ಟೆಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಒಂದು ಸಿಡಿತ ಟ್ಯಾಂಕ್ ಅನ್ನು ನುಚ್ಚುನೂರಾಗಿಸಿತು ಮತ್ತು ಅದರ ಮೇಲ್ಭಾಗವನ್ನು ಸುಮಾರು ಐವತ್ತು ಅಡಿಗಳಷ್ಟು ದೂರ ಎಸೆದಿತ್ತು; ಅಷ್ಟರೊಳಗೆ ಚುವಿಲೊವ್ ಲೆಫ್ಟಿನೆಂಟ್ ಅನ್ನು ದೂರ ಎಳೆದುಕೊಂಡು ಬಂದಿದ್ದ. ಅವನ ಮುಖದ ಮೇಲೆ ಮಣ್ಣನ್ನು ಸುರಿದ ಮತ್ತು ಬಟ್ಟೆಯಿಂದ ಬೆಂಕಿಯನ್ನು ನಂದಿಸಿದ; ಪ್ರಥಮ ಚಿಕಿತ್ಸೆಯ ಕೇಂದ್ರ ಸಿಗುವವರೆಗೂ ಅವನನ್ನು ಎಳೆದುಕೊಂಡು ಹೋದ. ಆಮೇಲೆ ಚುವಿಲೊವ್ ಹೇಳುತ್ತಿದ್ದ: “ನಾನೇಕೆ ಹಾಗೆ ಮಾಡಿದೆ? ಬಹುಶಃ ಅವನ ಹೃದಯ ಬಡಿದುಕೊಳ್ಳುತ್ತಿದ್ದುದನ್ನು ಕೇಳಿದೆ ಅನ್ಸುತ್ತೆ.”
ಯೆಗೊರ್ ದ್ರೊಮೊವ್ ಬದುಕಿಕೊಂಡನು; ಅವನ ಮುಖ ಅದೆಷ್ಟು ಕೆಟ್ಟದಾಗಿ ಬೆಂದುಹೋಗಿತ್ತೆಂದರೆ ಅಲ್ಲಲ್ಲಿ ಮೂಳೆಗಳು ಎದ್ದು ಕಾಣುತ್ತಿದ್ದವು. ಅದರೂ ದೃಷ್ಟಿ ಮಾತ್ರ ಹೋಗಿರಲಿಲ್ಲ. ಅವನು ಎಂಟು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದನು. ಪ್ಲಾಸ್ಟಿಕ್ ಸರ್ಜರಿಯಿಂದ ಅವನಿಗೆ ಮೂಗು, ತುಟಿಗಳು ಹುಬ್ಬು ಮತ್ತು ಕಿವಿಗಳು ಬಂದವು. ಎಂಟು ತಿಂಗಳು ಕಳೆದ ಮೇಲೆ ಬ್ಯಾಂಡೇಜುಗಳನ್ನು ತೆಗೆದಾಗ, ಅವನು ತನ್ನ ಮುಖವನ್ನು, ಈಗ ತನ್ನದಲ್ಲದ ಮುಖವನ್ನು ಕನ್ನಡಿಯಲ್ಲಿ ನೋಡಿದನು. ಅವನಿಗೆ ಕೈಗನ್ನಡಿಯನ್ನು ಕೊಟ್ಟ ನರ್ಸ್ ಮುಖ ತಿರುಗಿಸಿಕೊಂಡು ಅತ್ತಳು. ಅವನು ಕೈಗನ್ನಡಿಯನ್ನು ವಾಪಾಸ್ ಅವಳ ಕೈಗಿಟ್ಟು ಹೇಳಿದ:
“ನನಗೆ ಇದಕ್ಕಿಂತ ಘೋರವಾದದ್ದು ಗೊತ್ತಿದೆ. ಮುಂದೆ ಸರಿ ಹೋಗುತ್ತೆ.”
ಅದರೆ ಅವನು ಮತ್ತೆಂದೂ ನರ್ಸ್‍ನನ್ನು ಕೈಗನ್ನಡಿ ಕೊಡೆಂದು ಕೇಳಲಿಲ್ಲ. ಬದಲಿಗೆ, ತನ್ನ ಮುಖಕ್ಕೆ ಹೊಂದಿಕೊಳ್ಳುತ್ತಿರುವನೇನೋ ಎನ್ನುವಂತೆ, ಮುಖವನ್ನು ಪದೆಪದೆ ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಿದ್ದ. ಆಸ್ಪತ್ರೆಯನ್ನು ಬಿಡುವಾಗ ಅವನು ಸೇನೆಗೆ ಹೊರತಾದ ಸೇವೆಗೆ ತಕ್ಕವನೆಂದು ಹೇಳಿದರು. ಅವನು ಸೀದಾ ಜನರಲ್ ಬಳಿಗೆ ಹೋಗಿ ರೆಜಿಮೆಂಟಿಗೆ ವಾಪಾಸ್ ಬರಲು ಅನುಮತಿ ಕೇಳಿದ. “ಆದರೆ ನಿನಗೆ ಸೈನ್ಯದ ಕೆಲಸ ಆಗಲ್ಲ” ಎಂದು ಜನರಲ್ ಹೇಳಿದರು. ಅದಕ್ಕೆ ಯೊಗೊರ್ ಕೊಟ್ಟ ಉತ್ತರ: “ಇಲ್ಲ, ನಾನು ಕೈಲಾದವನಲ್ಲ. ಕುರೂಪಿ ಆಗಿದ್ದೇನೆ ನಿಜ. ಅದೇನೂ ಸಮಸ್ಯೆಯಿಲ್ಲ. ಬಹಳ ಬೇಗ ಮೊದಲಿನಂತೆ ಯುದ್ಧ ಮಾಡೋದಿಕ್ಕೆ ಆಗುತ್ತೆ.” (ಈ ಮಾತುಕತೆಯ ಸಮಯದಲ್ಲಿ ಜನರಲ್ ಮುಖ ಕೊಟ್ಟು ಮಾತನಾಡುತ್ತಿಲ್ಲ ಎನ್ನುವುದನ್ನು ಯೆಗೊರ್ ಗಮನಿಸಿದ. ಅದರಿಂದ ಕೇವಲ ನೀಲಿ ಸೀಳಿನಂತಿದ್ದ ಅವನ ಬಾಯಿಯಿಂದ ಕ್ರೂರ ನಗೆಯೊಂದು ಮೂಡಿ ಮಾಯವಾಯಿತು) ಅವನಿಗೆ ಚೇತರಿಸಿಕೊಳ್ಳಲೆಂದು ಇಪ್ಪತ್ತು ದಿನಗಳ ರಜೆ ನೀಡಿದರು. ಅವನು ತಂದೆತಾಯಿಯನ್ನು ನೋಡಲೆಂದು ಊರಿಗೆ ಹೊರಟನು. ಅದು ಕಳೆದ ಮಾರ್ಚ್‍ನಲ್ಲಿ.
ಅವನು ಊರಿಗೆ ಬಂದಿಳಿದಾಗ ಸ್ಟೇಷನ್‍ನಲ್ಲಿ ಯಾವುದಾದರೂ ಬಂಡಿ ಸಿಗಬಹುದೆಂದು ಎಣಿಸಿದ್ದ. ಮಂಜು ನೆಲವನ್ನೆಲ್ಲಾ ಆವರಿಸಿತ್ತು. ವಾತಾವರಣದಲ್ಲಿ ತೇವಾಂಶವಿತ್ತು. ರಸ್ತೆಗಳು ನಿರ್ಜನವಾಗಿದ್ದವು. ತಣ್ಣಗೆ ಕೊರೆಯುವ ಚಳಿಗಾಳಿಯು ಅವನ ಕೋಟುಗಳ ಪಟ್ಟಿಯನ್ನು ಹಾರಿಸುತ್ತಿತ್ತು; ಗಾಳಿ ಕಿವಿಯಲ್ಲಿ ಸುಯ್ಯಲಿಡುತ್ತಿತ್ತು. ಅವನು ಊರನ್ನು ತಲುಪಿದಾಗ ಕತ್ತಲು ಕವಿಯುತ್ತಿತ್ತು. ಅಲ್ಲಿ ಗಾಳಿಯಲ್ಲಿ ತೂಗಾಡುತ್ತಿದ್ದ ರಾಟೆಯಿದ್ದ ಬಾವಿಯಿತ್ತು. ಆ ಬೀದಿಯ ಕೆಳಗೆ ಹೋದರೆ ಸಿಗುವ ಆರನೇ ಮನೆಯೇ ಅವನ ತಂದೆಯ ಮನೆ. ಅವನು ಮನೆಯ ಬಾಗಿಲಿಗೆ ಬರುತ್ತಿದ್ದಂತೆಯೇ ಚಕ್ಕನೆ ನಿಂತನು. ತನ್ನ ಕೈಗಳನ್ನು ಜೇಬಿನೊಳಗೆ ತೂರಿಸಿ ತಲೆಯಲ್ಲಾಡಿಸಿದನು. ಮುಂಬಾಲಿಗೆ ಹೋಗುವ ಬದಲು ಹಿತ್ತಲ ಕಡೆಗೆ ಬಂದನು. ಮಂಜಿನೊಳಗೆ ಮೊಣಕಾಲುದ್ದ ಹೂತುಕೊಂಡ ಕಾಲುಗಳನ್ನು ಎಳದುಕೊಂಡು ಮನೆಯ ಹಿಂದಿನ ಕಿಟಕಿಯಲ್ಲಿ ಬಗ್ಗೆ ನೋಡಿದನು. ಅಲ್ಲಿ ತಾಯಿ ಕಂಡಳು. ಎಣ್ಣೆದೀಪದ ಮಂಕು ಬೆಳಕಿನಲ್ಲಿ ರಾತ್ರಿಯೂಟಕ್ಕೆ ಅಣಿಗೊಳಿಸುತ್ತಿದ್ದಳು. ಆಕೆ ಇನ್ನೂ ಅದೇ ಕಡುಬಣ್ಣದ ಶಾಲನ್ನು ತಲೆಯ ಮೇಲೆ ಹೊದ್ದಿದ್ದಳು. ಎಂದಿನಂತೆಯೇ ಶಾಂತವಾಗಿದ್ದಳು, ಆತುರವಿರಲಿಲ್ಲ ಮತ್ತು ಕರುಣಾಮಯಿಯಾಗಿದ್ದಳು. ಆದರೆ ವಯಸ್ಸಾಗಿತ್ತು. ಭುಜಗಳು ತೆಳುವಾಗಿದ್ದವು. ಇದು ಮೊದಲೇ ಗೊತ್ತಿದ್ದರೆ, ಕೆಲವೇ ಪದಗಳಾಗಿದ್ದರೂ ಸಹ ಪ್ರತಿದಿನವೂ ಪತ್ರ ಬರೆಯುತ್ತಿದ್ದೆ ಎಂದುಕೊಂಡನು. ಅವಳು ತುಂಬಾ ಸರಳವಾದ ಊಟವನ್ನು ಸಿದ್ದಪಡಿಸಿದ್ದಳು - ಒಂದು ಬೌಲ್ ಹಾಲು, ಒಂದು ತುಂಡು ಬ್ರೆಡ್ಡು, ಎರಡು ಸ್ಪೂನು ಮತ್ತು ಉಪ್ಪು. ತನ್ನ ತೆಳುವಾದ ಕೈಗಳನ್ನು ಎದೆಯ ಕೆಳಗೆ ಮಡಚಿ ಟೇಬಲ್ಲಿಗೆ ಒರಗಿಕೊಂಡು ಯಾವುದೋ ಯೋಚನೆಯಲ್ಲಿ ಮಗ್ನಳಾಗಿದ್ದಂತೆ ಕಂಡಳು. ತನ್ನ ತಾಯಿಯನ್ನು ಕಿಟಕಿಯಿಂದ ನೋಡಿದ ಮೇಲೆ ಯೆಗೊರ್‍ಗೆ ತನ್ನ ಕುರೂಪಿ ಮುಖವನ್ನು ತಾಯಿಗೆ ತೋರಿಸಿ ಹೆದರಿಸಲು ಸಾಧ್ಯವಿಲ್ಲ ಎನಿಸಿತು. ಆಕೆಯ ಮುದ್ದುಮುಖದಲ್ಲಿ ಹತಾಶೆ ಮೂಡಬಾರದೆಂದು ಅರ್ಥವಾಯಿತು.
ಅವನು ಗೇಟನ್ನು ದಾಟಿ ಅಂಗಳಕ್ಕೆ ಹೋಗಿ ಬಾಗಿಲನ್ನು ಬಡಿದ. ‘ಯಾರು’ ಎಂದು ಕೇಳಿದ ತಾಯಿಯ ಧ್ವನಿಯನ್ನು ಗುರುತಿಸಿದ. “ಲೆಫ್ಟಿನೆಂಟ್ ಗ್ರೊಮೊವ್, ಸೋವಿಯತ್ ಯೂನಿಯನ್ ಧೀರ” ಎಂದು ಉತ್ತರ ಕೊಟ್ಟ.
ಅವನ ಹೃದಯ ಅದೆಷ್ಟು ವೇಗವಾಗಿ ಬಡಿದುಕೊಳ್ಳುತ್ತಿತ್ತೆಂದರೆ, ಅವನು ಗೋಡೆಗೆ ಒರಗಿಕೊಳ್ಳಬೇಕಾಯಿತು. ಇಲ್ಲ, ಅವನ ತಾಯಿಗೆ ಇವನ ಧ್ವನಿಯ ಗುರುತು ಸಿಕ್ಕಲಿಲ್ಲ. ಆಸ್ಪತ್ರೆಯಲ್ಲಿದ್ದಾಗ ನಡೆದ ಆಪರೇಷನ್‍ಗಳಿಂದ ಅವನ ಧ್ವನಿ ಅದೆಷ್ಟು ಬದಲಾಗಿತ್ತೆಂದರೆ, ಅವನಿಗೇ ತನ್ನ ಧ್ವನಿಯನ್ನು ಮೊದಲ ಸಲ ಕೇಳಿದ ಅನುಭವವಾಯಿತು. ಅದು ಅಷ್ಟು ಗಡಸು ಮತ್ತು ಕರ್ಕಶವಾಗಿತ್ತು.
“ಏನು ಮಗೂ, ಏನು ಬೇಕು?” ಎಂದು ಕೇಳಿದಳು.
“ಅಮ್ಮಾ, ನಿಮ್ಮ ಮಗ ಸೀನಿಯರ್ ಲೆಫ್ಟಿನೆಂಟ್ ದ್ರೊಮೊವ್ ನಿಮ್ಮನ್ನು ನೋಡಿಕೊಂಡು ಬರಲು ಹೇಳಿದ್ದಾನೆ.”
ಆಗ ಆಕೆ ಬಾಗಿಲು ತೆಗೆದು ಹೋರಗೋಡಿ ಆತನ ಕೈಗಳನ್ನು ಹಿಡಿದುಕೊಂಡಳು.
“ಅವನು ನಿಜವಾಗಿಯೂ ಬದುಕಿದ್ದಾನ, ನನ್ನ ಮಗ ದ್ರೊಮೊವ್? ಎಲ್ಲವೂ ಸರಿಯಾಗಿದೆಯಾ? ಬಾ ಒಳಗೆ, ಬಾ.”
ಯೆಗೊರ್ ದ್ರೊಮೊವ್ ಟೇಬಲ್ ಬಳಿಯಿದ್ದ ಬೆಂಚಿನ ಮೇಲೆ ಕುಳಿತುಕೊಂಡ. ಅವನು ಚಿಕ್ಕವನಿದ್ದಾಗ ಅದೇ ಬೆಂಚಿನ ಮೇಲೆ ಕುಳಿತುಕೊಳ್ಳುತ್ತಿದ್ದ. ಆಗ ಕಾಲು ನೆಲಕ್ಕೆ ಸೋಕುತ್ತಿರಲಿಲ್ಲ. ಯಾವಾಗಲಾದರೊಮ್ಮೆ ಅವನ ತಾಯಿ ಗುಂಗುರು ಕೂದಲಿನಲ್ಲಿ ಬೆರಳಾಡಿಸುತ್ತಾ, “ಗುಬ್ಬಿ ಮರಿ, ಬೇಗ ತಿನ್ನು” ಎನ್ನುತ್ತಿದ್ದಳು. ಅವನು ಆಕೆಯ ಮಗನ ಬಗ್ಗೆ, ಅಂದರೆ ತನ್ನ ಬಗ್ಗೆಯೇ ಹೇಳಲಾರಂಭಿಸಿದ. ತನ್ನ ತಾಯಿಗೆ ಮಗನು ಏನನ್ನು ತಿಂದ, ಕುಡಿದ, ಕಷ್ಟಗಳಿಲ್ಲದೆ ಅದೆಷ್ಟು ಸುಖವಾಗಿದ್ದ ಎಂದು ವಿವರವಾಗಿ ಹೇಳಿದ. ಆದರೆ ತನ್ನ ಟ್ಯಾಂಕ್ ಕದನಗಳ ಬಗ್ಗೆ ಬಹಳ ಸಂಕ್ಷಿಪ್ತವಾಗಿ ಹೇಳಿ ಮುಗಿಸಿದ.
ಆಕೆ ಮಧ್ಯದಲ್ಲಿ ತಡೆದು, “ನಿಜ ಹೇಳು, ಯುದ್ಧ ಭಯಾನಕ ಅಲ್ವಾ” ಎನ್ನುತ್ತಾ ಎತ್ತಲೋ ದೃಷ್ಟಿಯಿದ್ದ ಕಣ್ಣುಗಳಿಂದ ಅವನ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದಳು.
“ಹೌದಮ್ಮ, ಅದೇನೋ ನಿಜ, ಯುದ್ಧ ಭಯಾನಕವೇ. ಆದರೆ ದಿನ ಕಳೆದಂತೆಲ್ಲಾÉ ಅಭ್ಯಾಸವಾಗಿ ಹೋಗುತ್ತೆ.”
ಅಷ್ಟರಲ್ಲಿ ಅವನ ತಂದೆ ಯೆಗೊರ್ ಯೆಗೊರೊವಿಚ್ ಬಂದರು. ಅವರಿಗೂ ವಯಸ್ಸಾಗಿತ್ತು. ಅವರ ಗಡ್ಡದ ಮೇಲೆ ಹಿಟ್ಟನ್ನು ಉದುರಿಸಿದ ಹಾಗಿತ್ತು. ಅವರು ಅತಿಥಿಯನ್ನು ನೋಡುತ್ತಾ ಜೀರ್ಣವಾಗಿದ್ದ ಫೆಲ್ಟ್ ಬೂಟನ್ನು ಹೊಸಲಿಗೆ ಒಡೆದು ಮಂಜನ್ನು ಉದುರಿಸಿದರು. ನಿಧಾನವಾಗಿ ಸ್ಕಾರ್ಫ್, ಓವರ್‍ಕೋಟ್ ತೆಗೆದು, ಟೇಬಲ್ ಬಳಿ ಬಂದು ದ್ರೊಮೊವ್‍ನ ಕೈಕುಲುಕಿದರು. ಆಹಾ! ಆ ವಿಶಾಲವಾದ, ತನ್ನ ತಂದೆಯದ್ದೇ ಆದ ಕೈಗಳನ್ನು ಎಷ್ಟು ಚೆನ್ನಾಗಿ ಬಲ್ಲ! ಅವರು ಯಾವ ಪ್ರಶ್ನೆಯನ್ನು ಕೇಳಿಲಿಲ್ಲ. ಏಕೆಂದರೆ ಪದಕಗಳ ಸಾಲನ್ನೇ ಧರಿಸಿದ ಈ ವ್ಯಕ್ತಿ ಇಲ್ಲಿಗೇಕೆ ಬಂದ ಎನ್ನುವ ಪ್ರಶ್ನೆ ಕೇಳದೆಯೇ ಸ್ಪಷ್ಟವಾಗಿತ್ತು; ಕಣ್ಣನ್ನು ಅರೆಮುಚ್ಚಿ ತಾಯಿ ಮಗನ ಮಾತುಗಳನ್ನು ಕೇಳತೊಡಗಿದರು.
ತನ್ನನ್ನು ಯಾರೆಂದು ಗುರುತಿಸದೆ ಕುಳಿತುಕೊಂಡು, ಬೇರೆಯವನ ಬಗ್ಗೆಯೇನೋ ಎನ್ನುವಂತೆ ತನ್ನ ಬಗ್ಗೆ ಮಾತನಾಡುವುದು ಹೆಚ್ಚಾದಂತೆ, ನಟನೆಯನ್ನು ಬಿಟ್ಟು ಎದ್ದು ನಿಂತು, “ಅಪ್ಪಾ, ಅಮ್ಮಾ, ನನ್ನ ಮುಖ ಕುರೂಪವಾಗಿರಬಹುದು, ಆದರೆ ನನ್ನ ಗುರುತು ಹಿಡಿಯಲು ಸಾಧ್ಯವಾಗಲಿಲ್ಲವೇ” ಎಂದು ಹೇಳುವುದು ಮತ್ತಷ್ಟು ಅಸಾಧ್ಯವಾಗತೊಡಗಿತು. ತನ್ನ ತಂದೆತಾಯಿಯ ಬಳಿ ಕುಳಿತುಕೊಂಡು, ಅವನು ಸಂತೋಷ ಹಾಗೂ ನೋವು ಎರಡನ್ನೂ ಅನುಭವಿಸಿದ.
“ತಾಯಿ ಊಟ ಮಾಡೋಣ. ನಮ್ಮ ಅತಿಥಿಗೆ ಏನಾದರೂ ತಗೊಂಡು ಬಾ” ಎನ್ನುತ್ತಾ ಯೆಗೊರ್ ಯೆಗೊರೊವಿಚ್ ಕಪಾಟಿನ ಬಾಗಿಲನ್ನು ತೆರೆದರು. ಹೌದು, ಕಡ್ಡಿಪೆಟ್ಟಿಗೆಗಳಲ್ಲಿ ತುಂಬಿದ್ದ ಮೀನು ಹಿಡಿಯುವ ಹುಕ್ಕುಗಳು ಅಲ್ಲೇ ಇದ್ದವು. ಹಾಗೇ ಹಿಡಿಮುರಿದ ಟೀಪಾಟ್ ಕೂಡ ಅಲ್ಲೇ ಇತ್ತು. ಕಪಾಟಿನಿಂದ ಬ್ರೆಡ್ಡಿನ ತುಂಡುಗಳ ಮತ್ತು ಸುಲಿದ ಈರುಳ್ಳಿಯ ವಾಸನೆ ಬರುತ್ತಿತ್ತು. ಯೆಗೊರ್ ಯೆಗೊರೊವಿಚ್ ವೋಡ್ಕಾ ಇದ್ದ ಸಣ್ಣ ಬಾಟಲನ್ನು ತೆಗೆದುಕೊಂಡರು. ಅದು ಎರಡು ಗ್ಲಾಸಿಗೆ ಮಾತ್ರ ಸಾಲುವಷ್ಟಿತ್ತು. ಅವರು ನಿಟ್ಟುಸಿರು ಬಿಟ್ಟರು. ಏಕೆಂದರೆ ಅವರಿಗೆ ಕೊಡಲು ಅದಕ್ಕಿಂತ ಹೆಚ್ಚು ಇರಲಿಲ್ಲ. ಅವರೆಲ್ಲರೂ ಹಿಂದಿನ ದಿನಗಳಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ರಾತ್ರಿಯೂಟಕ್ಕೆ ಕುಳಿತರು. ತಾಯಿ ಸ್ಪೂನು ಹಿಡಿದುಕೊಂಡ ತನ್ನ ಕೈಗಳ ಚಲನೆಯನ್ನೇ ಗಮನಿಸುತ್ತಿದ್ದಾಳೆಂದು ದ್ರೊಮೊವ್‍ಗೆ ಗೊತ್ತಾದದ್ದು ಸ್ವಲ್ಪ ಹೊತ್ತಾದ ಮೇಲೆಯೇ. ಅವನು ಸಣ್ಣಗೆ ನಕ್ಕ; ಅವನ ತಾಯಿ ಕಣ್ಣುಗಳನ್ನು ಮೆಲಕ್ಕೆತ್ತಿದಳು; ಮುಖ ನೋವಿನಿಂದ ಕಂಪಿಸುತ್ತಿತ್ತು.
ಅವರು ಒಂದಲ್ಲ ಒಂದು ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಮುಂದಿನ ವರ್ಷ ವಸಂತ ಹೇಗಿರುತ್ತೆ; ರೈತರಿಗೆ ಸರಿಯಾದ ಸಮಯಕ್ಕೆ ಬಿತ್ತನೆ ಮಾಡಲು ಸಾಧ್ಯವೇ, ಹೀಗೆ. ಈ ಬೇಸಿಗೆಯೊಳಗೆ ಯುದ್ಧ ಮುಗಿಯಬಹುದೆಂದು ಯೆಗೊರ್ ಯೆಗೊರೊವಿಚ್ ತಮ್ಮ ಅಭಿಪ್ರಾಯ ತಿಳಿಸಿದರು.
“ಯೆಗೊರ್ ಯೆಗೊರೊವಿಚ್, ಈ ಬೇಸಿಗೆಯಲ್ಲೇ ಯುದ್ಧ ಮುಗಿಯಬಹುದೆಂದು ಹೇಗೆ ಹೇಳುತ್ತೀರಿ?”
“ಜನರಿಗೆ ತುಂಬಾ ರೇಗಿಹೋಗಿದೆ” ಯೆಗೊರ್ ಯೆಗೊರೊವಿಚ್ ಉತ್ತರ ಕೊಟ್ಟರು. “ಅವರು ಸಾವಿನ ಬಳಿ ಹೋಗಿ ಬಂದಿದ್ದಾರೆ. ಈಗ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಫ್ಯಾಸಿಸ್ಟರ ಕಥೆ ಮುಗಿಯಿತು.”
ಮಾರಿಯಾ ಪೊಲಿಕಾರ್ಪೊವ್ನಾ ಕೇಳಿದಳು: “ಅವನಿಗೆ ರಜೆ ಯಾವಾಗ ಕೊಡ್ತಾರೆ. ನಮ್ಮನ್ನ ನೋಡೋಕೆ ಯಾವಾಗ ಬರ್ತಾನೆ. ಇದರ ಬಗ್ಗೆ ನೀನು ಹೇಳಲೇ ಇಲ್ಲ. ಅವನನ್ನ ನೋಡಿ ಸುಮಾರು ವರ್ಷ ಆಯ್ತು. ಬಹುಶಃ ಈಗ ಅವನು ತುಂಬಾ ದೊಡ್ಡವನಾಗಿರಬೇಕು. ದಪ್ಪ ಮೀಸೆ ಬಂದಿರಬೇಕು. ಪ್ರತಿಕ್ಷಣವೂ ಸಾವಿನ ಹತ್ತಿರಾನೇ ಇದ್ದೂ ಇದ್ದು ಧ್ವನಿ ಗಡಸಾಗಿರಬೇಕು.”
“ಹೌದು. ಅವನೇನಾದರು ಬಂದರೆ, ನಿಮಗೆ ಅವನ ಗುರುತೇ ಸಿಗೊಲ್ಲ” ಎಂದು ಹೇಳಿದ ಲೆಫ್ಟಿನೆಂಟ್.
ಅವನಿಗೆ ಅಗ್ಗಷ್ಟಿಕೆ ಮೇಲಿನ ಅಟ್ಟಣಿಗೆಯಲ್ಲಿ ಹಾಸಿಗೆಯನ್ನು ಹಾಸಿದರು. ಅದರ ಒಂದೊಂದು ಇಟ್ಟಿಗೆ, ಮರದ ಗೋಡೆಯ ಪ್ರತಿಯೊಂದು ಬಿರುಕು, ಮೇಲ್ಚಾವಣಿಯ ಒಂದೊಂದು ಗಂಟೂ ಅವನಿಗೆ ಚಿರಪರಿಚಿತ. ಅಲ್ಲೇ ಕುರಿಚರ್ಮದ ಮತ್ತು ಬ್ರೆಡ್ಡಿನ ವಾಸನೆ ಮತ್ತು ಒಬ್ಬ ವ್ಯಕ್ತಿ ಸಾಯುವಾಗಲು ಮರೆಯದೇ ನೆನಪಿಸಿಕೊಳ್ಳುವ ಗೃಹಸೌಖ್ಯವಿತ್ತು. ಗಾಳಿಕಾಲದ ಗಾಳಿಯು ಶಿಳ್ಳೆ ಹೊಡೆಯುತ್ತಿತ್ತು; ಮತ್ತೆ ಸೂರಿನಡಿ ಮರ್ಮರ ಶಬ್ಧ ಮಾಡುತ್ತಿತ್ತು. ಮರದ ಗೋಡೆಯ ಆ ಕಡೆ ಅವನ ತಂದೆ ಮೆಲುವಾಗಿ ಗೊರಕೆ ಹೊಡೆಯುತ್ತಿದ್ದರು. ಆದರೆ ಅವನ ತಾಯಿ ಮಾತ್ರ ನಿಟ್ಟುಸಿರು ಬಿಡುತ್ತಿದ್ದಳು. ಹಾಸಿಗೆಯಲ್ಲಿ ಒದ್ದಾಡುತ್ತಿದ್ದಳು; ನಿದ್ದೆ ಬಂದಿರಲಿಲ್ಲ. ಲೆಫ್ಟಿನೆಂಟ್ ತನ್ನ ಮುಖವನ್ನು ಕೈಗಳಲ್ಲಿ ಹುದುಗಿಸಿಕೊಂಡು ಬಿದ್ದಿದ್ದನು. ‘ಇಲ್ಲ, ಅವಳು ಗುರುತು ಹಿಡೀಲಿಲ್ಲ, ಅವಳಿಗೆ ಗುರುತು ಸಿಕ್ಕಲಿಲ್ಲ’ ಎಂದು ಯೋಚಿಸುತ್ತಿದ್ದನು.
ಬೆಳಿಗ್ಗೆ ಉರಿಯುತ್ತಿದ್ದ ಸೌದೆಯ ಚಿಟಚಿಟ ಶಬ್ಧಕ್ಕೆ ಅವನಿಗೆ ಎಚ್ಚರವಾಯಿತು; ಅವನ ತಾಯಿ ನಿಶ್ಯಬ್ಧವಾಗಿ ಒಲೆ ಉರಿಸುತ್ತಿದ್ದಳು. ಅವಳು ಒಗೆದಿದ್ದ ಅವನ ಕಾಲ್ಚೀಲಗಳು ಗೋಡೆಯಿಂದ ಗೋಡೆಗೆ ಕಟ್ಟಿದ್ದ ದಾರದಲ್ಲಿ ನೇತಾಡುತ್ತಿದ್ದವು. ಸ್ವಚ್ಛಗೊಳಿಸಿದ ಬೂಟನ್ನು ಹೊಸಲಿಗೆ ಒರಗಿಸಲಾಗಿತ್ತು.
“ನಿನಗೆ ಪ್ಯಾನ್‍ಕೇಕ್ ಇಷ್ಟವಾಗುತ್ತಾ?” ತಾಯಿ ಕೇಳಿದಳು.
ಅವನು ಕೂಡಲೇ ಉತ್ತರಿಸಲಿಲ್ಲ. ಅವನು ಬೆಲ್ಟನ್ನು ಹಾಕಿಕೊಂಡು ಬೆಂಚಿನ ಮೇಲೆ ಬರಿಗಾಲಲ್ಲಿ ಕುಳಿತ.
“ನಿಮ್ಮೂರಿನಲ್ಲಿ ಕಾತ್ಯಾ ಮಾಲಿಶೆವಾ ಇದ್ದಾಳ? ಆಂದ್ರೆಯ್ ಮಾಲಿಶೆವಾ ಅವರ ಮಗಳು?”
“ಅವಳು ಹೋದ ವರ್ಷ ಓದು ಮುಗಿಸಿದಳು. ಈಗ ನಮ್ಮೂರ ಸ್ಕೂಲಿನಲ್ಲಿ ಟೀಚರ್ ಆಗಿದ್ದಾಳೆ. ಅವಳನ್ನ ನೋಡ್ಬೇಕಾ?”
“ಅವಳನ್ನು ಕಾಣಲೇಬೇಕೆಂದು ನಿಮ್ಮ ಮಗ ಹೇಳಿದ್ದಾನೆ.”
ಅವನ ತಾಯಿ ಪಕ್ಕದ ಮನೆಯ ಹುಡುಗಿಯನ್ನು ಕಳುಹಿಸಿದಳು. ಲೆಫ್ಟಿನೆಂಟ್‍ಗೆ ಬೂಟು ಹಾಕಿಕೊಳ್ಳುವಷ್ಟೂ ಸಮಯ ಸಿಗಲಿಲ್ಲ; ಅಷ್ಟರಲ್ಲಿ ಕಾತ್ಯಾ ಮಾಲಿಶೆವಾ ಅಲ್ಲಿದ್ದಳು. ಅವಳ ಕಂದುಬಣ್ಣದ ಕಣ್ಣುಗಳು ಹೊಳೆಯುತ್ತಿದ್ದವು; ಆಶ್ಚರ್ಯದಿಂದ ಹುಬ್ಬುಗಳು ಮೇಲಕ್ಕೆದ್ದಿದ್ದವು; ಸಂತಸ ತುಂಬಿದ ಕೆನ್ನೆಗಳು ಗುಲಾಬಿ ವರ್ಣಕ್ಕೆ ತಿರುಗಿದ್ದವು. ಅವಳು ಶಾಲನ್ನು ತನ್ನ ವಿಶಾಲವಾದ ಭುಜಗಳ ಮೇಲೆ ಎಳೆದುಕೊಂಡಾಗ ಲೆಫ್ಟಿನೆಂಟ್ ಸಣ್ಣಗೆ ನರಳಿದ. ಆ ಸುಂದರವಾದ, ಬೆಚ್ಚಗಿನ ಕೂದಲನ್ನು ಒಮ್ಮೆ ಚುಂಬಿಸುವಂತಿದ್ದರೆ! ಅವನು ತನ್ನ ಮನಸ್ಸಿನಲ್ಲಿ ಕಲ್ಪಿಸಿಕೊಂಡ ಅವಳ ಚಿತ್ರವೇ ಅದು - ನಿರ್ಮಲ, ಕೋಮಲ, ಸೊಗಸು, ಮೃದು ಹೃದಯ, ಸುಂದರ ಹುಡುಗಿ – ಅದೆಷ್ಟು ಸುಂದರವೆಂದರೆ, ಅವಳು ಒಳಗೆ ಕಾಲಿಡುತ್ತಿದ್ದಂತೆಯೇ ಇಡೀ ಮನೆ ಬಂಗಾರದ ಬೆಳಕಿನಲ್ಲಿ ಬೆಳಗುವಂತಿತ್ತು.
“ಯೆಗೊರ್ ಏನಾದರೂ ಹೇಳಿದನಾ” (ಅವನು ಬೆಳಕಿಗೆ ಬೆನ್ನು ಹಾಕಿ ನಿಂತಿದ್ದರಿಂದ ಅವನ ಮುಖ ಸರಿಯಾಗಿ ಕಾಣಲಿಲ್ಲ. ಅವನಿಗೆ ಮಾತನಾಡಲು ಅಸಾಧ್ಯವಾಗಿ ಸುಮ್ಮನೆ ತಲೆಯಾಡಿಸಿದ). “ಅವನಿಗೋಸ್ಕರ ಹಗಲು, ರಾತ್ರಿ ಕಾಯ್ತಾ ಇದೀನಿ ಅಂತ ತಿಳಿಸಿ.”
ಅವಳು ಹತ್ತಿರ ಬಂದಳು. ಅವರಿಬ್ಬರ ಕಣ್ಣು ಸಂಧಿಸಿದವು. ಆಕೆಗೆ ಎದೆಗೆ ಏನೋ ನಾಟಿದಂತೆ ಸರಕ್ಕನೆ ಒಂದೆಜ್ಜೆ ಹಿಂದಕ್ಕೆ ಸರಿದಳು; ಬೆಚ್ಚಿಬಿದ್ದಳು. ಇದನ್ನು ನೋಡಿದ ಯೆಗೊರ್ ಇನ್ನೊಂದು ದಿನವೂ ಅಲ್ಲಿರುವುದಿಲ್ಲ ಎಂಬ ನಿರ್ಧಾರಕ್ಕೆ ಬಂದ.
ಅವನ ತಾಯಿಯು ಹಾಲಿನಲ್ಲಿ ಕುದಿಸಿದ ಪ್ಯಾನ್‍ಕೇಕ್‍ಗಳನ್ನು ಮಾಡಿಕೊಟ್ಟಳು. ಅವನು ಮತ್ತೆ ಲೆಫ್ಟಿನೆಂಟ್ ದ್ರೊಮೊವ್ ಬಗ್ಗೆ ಮಾತನಾಡಿದ. ಈ ಬಾರಿ ಅವನ ಸಾಹಸಕಾರ್ಯಗಳ ಬಗ್ಗೆ. ಅವನು ಕರ್ಕಶವಾಗಿ ಮಾತನಾಡುತ್ತಿದ್ದ, ಅವಳ ಕಡೆ ನೋಡದೆಯೇ. ಏಕೆಂದರೆ ಅವಳ ಮುದ್ದುಮುಖದಲ್ಲಿ ಅವನ ಕುರೂಪಿ ಮುಖದ ಪ್ರತಿಬಿಂಬ ನೋಡಲು ಇಷ್ಟಪಡಲಿಲ್ಲ. ಯೆಗೊರ್ ಯೆಗೊರೊವಿಚ್‍ಗೆ ಸಾಮೂಹಿಕ ಕೃಷಿಕ್ಷೇತ್ರಕ್ಕೆ ಹೋಗಿ ಕುದುರೆಗಳನ್ನು ತರುವ ಆಸೆಯಿತ್ತು. ಆದರೆ ಲೆಫ್ಟಿನೆಂಟ್ ಅಲ್ಲಿಗೆ ಬಂದ ರೀತಿಯಲ್ಲೇ ಸ್ಟೇಷನ್‍ಗೆ ನಡೆದುಕೊಂಡ ಹೋದ. ಆದರೆ ಅಲ್ಲಿ ನಡೆದ ಘಟನೆಗಳಿಂದ ಅವನ ಚಿತ್ತ ಕದಡಿತ್ತು. ದಾರಿಯುದ್ದಕ್ಕೂ ಅಲ್ಲಲ್ಲಿ ನಿಲ್ಲುತ್ತಿದ್ದ. ಮುಖವನ್ನು ಕೈಗೊತ್ತಿಕೊಂಡು ಕರ್ಕಶವಾಗಿ ತನಗೆ ತಾನೇ ಹೇಳಿಕೊಳ್ಳುತ್ತಿದ್ದ:
“ನಾನೇನು ಮಾಡಲಿ, ಈಗ?”
ಅವನು ಬಲವರ್ಧನೆಗೆಂದು ರಣರಂಗದಿಂದ ಹಿಂದಕ್ಕೆ ಕರೆತಂದಿದ್ದ ರೆಜಿಮೆಂಟ್ ಅನ್ನು ಸೇರಿಕೊಂಡನು. ಅಲ್ಲಿ ಅವನಿಗೆ ಸ್ನೇಹಿತರಿಂದ ಅದೆಂತಹ ಸ್ವಾಗತ ದೊರಕಿತೆಂದರೆ, ಹೃದಯದ ಭಾರವೆಲ್ಲಾ ಇಳಿದುಹೋಯಿತು. ಅವನ ತಾಯಿಗೆ ಇನ್ನೂ ಸ್ವಲ್ಪ ದಿನ ಅವನ ದುರದೃಷ್ಟವನ್ನು ತಿಳಿಸಬಾರದೆಂದು ನಿರ್ಧರಿಸಿದ. ಇನ್ನು ಕಾತ್ಯಾಳ ವಿಷಯ – ಅದನ್ನು ಕಾಲಿಗೆ ಚುಚ್ಚಿದ ಮುಳ್ಳಿನಂತೆ ಕಿತ್ತು ಬಿಸಾಕಬಹುದು ಎಂದುಕೊಂಡ.
ಸುಮಾರು ಎರಡು ವಾರಗಳ ನಂತರ ಅವನ ತಾಯಿಯಿಂದ ಪತ್ರ ಬಂದಿತು:
“ನನ್ನ ಮುದ್ದು ಮಗನೆ! ನಿನಗೆ ಕಾಗದ ಬರೆಯೋದಿಕ್ಕೆ ಭಯವಾಗುತ್ತೆ. ನೀನು ಏನಾದ್ರೂ ತಿಳಿದುಕೊಳ್ತೀಯಾ ಅಂತ. ನೀನು ಕಳುಹಿಸಿದೆ ಅಂತ ಒಬ್ಬ ವ್ಯಕ್ತಿ ನಮ್ಮ ಮನೆಗೆ ಬಂದಿದ್ದ. ಅವನು ಬಹಳ ಒಳ್ಳೆಯ ಮನುಷ್ಯ. ಆದರೆ ಮುಖ ಮಾತ್ರ ವಿರೂಪವಾಗಿತ್ತು. ಅವನು ಸ್ವಲ್ಪ ದಿನ ನಮ್ಮ ಜೊತೆ ಇರ್ತಾನೆ ಅನಿಸಿತ್ತು. ಆದರೆ ಯಾಕೋ ಇದ್ದಕ್ಕಿದ್ದಂತೆ ಮನಸ್ಸು ಬದಲಾಯಿಸಿ ಚಕ್ಕಂತ ಹೊರಟುಹೋದ. ಮಗು, ಅಲ್ಲಿಂದಾಚೆಗೆ ನನಗೆ ಕಣ್ ರೆಪ್ಪೆ ಮುಚ್ಚೋದಕ್ಕೂ ಆಗಿಲ್ಲ. ಯಾಕೆಂದರೆ, ಆ ವ್ಯಕ್ತಿ ನೀನೆ ಅಂತ ನನಗನ್ನಿಸುತ್ತೆ. ಯೆಗೊರ್ ಯೆಗೊರೊವಿಚ್ ಬಯ್ತಾರೆ. ‘ನಿನಗೆಲ್ಲೋ ತಲೆ ಕೆಟ್ಟಿದೆ, ಮುದುಕಿ. ಅವನೇನಾದರೂ ನಮ್ಮ ಮಗನೇ ಆಗಿದ್ದರೆ ಅವನು ಹೇಳ್ತಾ ಇರಲಿಲ್ಲ ಅಂತೀಯಾ? ಅವನ್ಯಾಕೆ ನಾಟಕ ಮಾಡಬೇಕಿತ್ತು? ಅವನಿಗಿದ್ದಂಥ ಮುಖ ಇರೋದಿಕ್ಕೆ ಯಾರಿಗಾದರೂ ಹೆಮ್ಮೆ ಆಗಬೇಕು’ ಅಂತ. ನಿನ್ನ ತಂದೆ ಇನ್ನೂ ಬೇರೇನೇನೋ ಮಾತಾಡ್ತಾರೆ. ಆದರೆ ನನ್ನ ತಾಯಿ ಹೃದಯ ಬೇರೇನೆ ಹೇಳುತ್ತೆ. ಅದು ‘ನನ್ನ ಮಗನೇ, ನನ್ನ ಮಗನೇ’ ಎಂದು ಕೂಗುತ್ತೆ. ಆತ ನಮ್ಮ ಅಟ್ಟಣಿಗೆಯ ಮೇಲೆ ಮಲಗಿದ್ದ. ಅವನ ಓವರ್‍ಕೋಟನ್ನು ತೊಳೆಯಲೆಂದು ತೆಗೆದುಕೊಂಡಿದ್ದೆ. ಅದನ್ನು ಎದೆಗೆ ಒತ್ತಿಕೊಂಡು ಅತ್ತುಬಿಟ್ಟೆ. ಯಾಕೆಂದರೆ ಅವನು ನೀನೇ ಅಂತ ಗೊತ್ತಿತ್ತು. ಪ್ರೀತಿಯ ದ್ರೊಮೊವ್, ದೇವರಾಣೆ, ದಯವಿಟ್ಟು ನಿಜ ಹೇಳು. ಏನಾಯಿತು ಅಂತ ಎಲ್ಲಾನೂ ತಿಳಿಸು. ಇಲ್ಲಾಂದ್ರೆ, ನನಗೆ ನಿಜವಾಗ್ಲೂ ಹುಚ್ಚೇ ಹಿಡಿಯುತ್ತೆ.”
ಸರಿ, ಯೆಗೊರ್ ದ್ರೊಮೊವ್ ನನಗೆ, ಇವಾನ್ ಸುದರೆವ್‍ಗೆ ಪತ್ರವನ್ನು ತೋರಿಸಿದ. ಅವನ ಕಥೆ ಹೇಳುತ್ತಾ ತೋಳಿನಿಂದ ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದ. ಅವನಿಗೆ ಹೇಳಿದೆ: “ಇದು ನಿನ್ನೊಳಗೇ ನಡೆಯುತ್ತಿರುವ ವ್ಯಕ್ತಿತ್ವದ ಸಂಘರ್ಷ! ನಿನಂತೂ ಮೂರ್ಖ ಕಣಯ್ಯಾ, ಸತ್ಯವಾಗ್ಲೂ ಮೂರ್ಖ. ಮೊದಲು ನಿನ್ನ ತಾಯಿಗೆ ಕಾಗದ ಬರೆದು ತಪ್ಪಾಯ್ತು ಅಂತ ಹೇಳು. ಅವಳನ್ನ ಹುಚ್ಚಿಯನ್ನಾಗಿ ಮಾಡಬೇಡ. ನಿನ್ನ ರೂಪಕ್ಕೆ ತುಂಬಾ ಮರುಗ್ತಾಳೆ ಅಂದುಕೊಂಡಿದ್ದೀಯಾ! ನೀನು ಈಗಿರುವಂತೆಯೇ ಅವಳು ನಿನ್ನನ್ನು ಹೆಚ್ಚು ಪ್ರೀತಿಸ್ತಾಳೆ.”
ಅವನು ಆ ದಿನವೇ ಪತ್ರ ಬರೆದ. “ಪ್ರೀತಿಯ ಅಪ್ಪಾ, ಅಮ್ಮಾ, ನನ್ನ ಮೂರ್ಖತನಕ್ಕೆ ಕ್ಷಮಿಸಿ. ಹೌದು ನಿಮ್ಮನ್ನು ನೋಡಲು ಬಂದವನು ನಾನೇ... ನಿಮ್ಮ ಮಗ...” ಹೀಗೆ, ಸಣ್ಣ ಅಕ್ಷರದಲ್ಲಿ ನಾಲ್ಕು ಪುಟಗಳಷ್ಟು ಬರೆದ. ಅವನಿಗೇನಾದರೂ ಸಮಯ ಇದ್ದಿದ್ದರೆ ಇಪ್ಪತ್ತು ಪುಟಗಳನ್ನಾದರೂ ಬರೆಯುತ್ತಿದ್ದ.
ಕೆಲವು ವಾರಗಳು ಕಳೆದವು. ನಾವಿಬ್ಬರೂ ಪರೀಕ್ಷಾ ನೆಲೆಯಲ್ಲಿ ಕೆಲಸ ಮಾಡುತ್ತಿದ್ದೆವು. ಸೈನಿಕನೊಬ್ಬ ಓಡಿಬಂದು, “ಕ್ಯಾಪ್ಟನ್ ದ್ರೊಮೊವ್, ನಿಮ್ಮನ್ನು ನೋಡಲು ಯಾರೋ ಬಂದಿದ್ದಾರೆ” ಎಂದು ಹೇಳಿದ. ಅವನು ಇನ್ನೂ ಅಟೆನ್ಷನ್ ಪೊಸಿಷನ್‍ನಲ್ಲೇ ನಿಂತುಕೊಂಡು ನಮ್ಮನ್ನು ನೋಡುತ್ತಿದ್ದ ರೀತಿ ಹೇಗಿತ್ತೆದೆಂದರೆ, ಅವನಿಗೆ ಪಾರಿತೋಷಕ ಕೊಡುತ್ತೇವೆಂದು ಕಾಯುತ್ತಿದ್ದಾನೇನೋ ಎನ್ನುವಂತಿತ್ತು. ದ್ರೊಮೊವ್ ಮತ್ತು ನಾನು ನಾವು ಉಳಿದುಕೊಂಡಿದ್ದ ಮನೆಯ ಕಡೆ ಹೋದೆವು. ಅವನು ತಳಮಳಗೊಂಡಿದ್ದು ಗೋಚರವಾಗುತ್ತಿತ್ತು – ಕೆಮ್ಮುತ್ತಾ ಗಂಟಲನ್ನು ಸರಿಪಡಿಸಿಕೊಳ್ಳುತ್ತಿದ್ದನು. ಅವನು ಟ್ಯಾಂಕ್ ನಡೆಸುವ ಸೈನಿಕನೇ ಆಗಿರಬಹುದು, ಆದರೆ ಅವನಿಗೂ ಭಾವನೆಗಳ ಏರಿಳಿತಗಳಿರುತ್ತವೆ. ಅವನು ನನಗೂ ಮುಂಚೆ ಮನೆಯೊಳಗೆ ಹೋದ. ಅಲ್ಲಿಂದಲೇ ಅವನ ಧ್ವನಿ ಕೇಳಿಸುತ್ತಿತ್ತು:
“ಅಮ್ಮಾ, ಹೇಗಿದ್ದೀಯಾ? ಅಮ್ಮಾ. ಅದು ನಾನೇ.” ನಾನು ಒಳಗೆ ಹೋದಾಗ, ವಯಸ್ಸಾದ ಹೆಂಗಸು ಅವನ ಎದೆಗೆ ಒರಗಿಕೊಂಡಿದ್ದನ್ನು ಕಂಡೆ. ನಾನು ಸುತ್ತಲೂ ಕಣ್ಣಾಯಿಸಿದಾಗ, ಇನ್ನೊಬ್ಬ ಹೆಣ್ಣುಮಗಳು ಇರುವುದನ್ನು ಗಮನಿಸಿದೆ. ಅವಳಿಗಿಂತ ಹೆಚ್ಚು ಸುಂದರವಾಗಿರುವ ಹೆಣ್ಣುಮಕ್ಕಳು ಇರಲೇಬೇಕು. ಅವಳೊಬ್ಬಳೇ ಚೆಲುವೆಯೇನಲ್ಲ. ಆದರೆ, ಅವಳಂತಹ ಇನ್ನೊಬ್ಬ ಹೆಣ್ಣುಮಗಳನ್ನು ನೋಡಿಲ್ಲ.
ಅವನು ತಾಯಿಯಿಂದ ಬಿಡಿಸಿಕೊಂಡು ಈ ಹೆಣ್ಣುಮಗಳತ್ತ ತಿರುಗಿದ. ನಾನು ಮೊದಲೇ ಹೇಳಿದಂತೆ, ಅವನ ಭವ್ಯವಾದ ಶರೀರವು ಅವನನ್ನು ಸಾಕ್ಷಾತ್ ಯುದ್ಧದೇವತೆಯನ್ನಾಗಿ ಮಾಡಿತ್ತು. “ಕಾತ್ಯಾ, ನೀನೇಕೆ ಬಂದೆ? ನೀನು ಕಾಯುತ್ತಿರುವೆನೆಂದು ಮಾತು ಕೊಟ್ಟಿದ್ದು ನನಗಲ್ಲ, ಬೇರೆಯನರಿಗೆ” ಎಂದು ಹೇಳಿದ.
ನಾನು ಹೊರಗಡೆ ಹೋಗುವಷ್ಟರಲ್ಲಿ ಅವಳ ಧ್ವನಿ ಕೇಳಿತು: “ಯೆಗೊರ್, ನಾನು ನಿನ್ನ ಜೊತೇನೇ ಇರೋದು. ಇನ್ನು ಯಾವತ್ತೂ ನಿನ್ನ ಜೊತೇನೇ ಜೀವನ ಮಾಡೋದು. ನಾನು ನಿಜವಾಗಿಯೂ ನಿನ್ನನ್ನು ಪ್ರೀತಿಸ್ತೀನಿ. ಹೃದಯಪೂರ್ವಕವಾಗಿ ಹೇಳ್ತಾ ಇದೀನಿ. ನನ್ನನ್ನು ವಾಪಾಸ್ ಕಳುಹಿಸಬೇಡ.”
ಹೌದು, ಇದೇ ರಷ್ಯನ್ ಗುಣ! ಒಬ್ಬ ವ್ಯಕ್ತಿ ಸಾಮಾನ್ಯವಾದ ಸಂದರ್ಭಗಳಲ್ಲಿ ಸಾಧಾರಣ ವ್ಯಕ್ತಿ ಎನಿಸಬಹುದು, ಆದರೆ ಕಷ್ಟಗಳು ಬಂದಾಗ ಅವನಿಗೆ ಮಹಾಶಕ್ತಿ – ಮಾನವ ಹೃದಯದ ಸೌಂದರ್ಯದ ಶಕ್ತಿ ದೊರಕುತ್ತದೆ.
ಮೂಲ ಕಥೆ: ಅಲೆಕ್ಸಿ ಟಾಲ್‍ಸ್ಟಾಯ್
ಅನುವಾದ: ಎಸ್.ಎನ್.ಸ್ವಾಮಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ