Pages

ಪುಸ್ತಕ ಪ್ರೀತಿ - ಟೊಳ್ಳುಗಟ್ಟಿ


[ಟಿ ಪಿ  ಕೈಲಾಸಂರವರ  ನಾಟಕ  "ಟೊಳ್ಳುಗಟ್ಟಿ" ಅಥವಾ 

"ಮಕ್ಕಳಿಸ್ಕೂಲ್ ಮನೇಲಲ್ವೇ"]



"ನನ್ನ ಮಟ್ಟಿಗೆ ನನಗೆ ಹಾಸ್ಯದ ಮುಖವಾಡವೇ ಬೇಕು ಎನಿಸುತ್ತದೆ. ನನಗೆ ಅದು ಸಹಜ ನನಗೊಂದು ವಕ್ರದೃಷ್ಟಿಯಿದೆ ಐರಾವತಕ್ಕೂ ಅಡಿಜಾರುತ್ತೇ...ಹಾಸ್ಯದೃಷ್ಟಿಯ ಭೂತಕನ್ನಡಿಯಲ್ಲಿ ಜನರು ನಿಸ್ಸಂಕೋಚವಾಗಿ ತಮ್ಮನ್ನು ತಾವೇ ನೋಡಿಕೊಳ್ಳಲು ಬಹಳ ಸುಲಭ. ತಮ್ಮನ್ನು ನೋಡಿ ತಾವೇ ನಗುತ್ತಾರೆ. ಹಾಸ್ಯದ ಗಮ್ಯ ಉಲ್ಲಾಸ, ರೋಗಿಗೆ ಪಥ್ಯವಿದ್ದಂತೆ. ಜನಕ್ಕೆ ಮನಸ್ಸು ಕುಗ್ಗಿದಾಗ ಹಾಸ್ಯ ಅದನ್ನು ಅರಳಿಸುತ್ತದೆ. ಲೋಕ ಜಡವಾದಾಗ ಹಾಸ್ಯ ಅದನ್ನು ಚೇತರಿಸುತ್ತದೆ.... ಹಾಸ್ಯ ನಿರ್ಮಲವಾಗದಿದ್ದರೆ ಹಾಸ್ಯ ಅಪಹಾಸ್ಯವಾಗಿ ವಿಘಾತವಾಗಿ ಪರಿಣಮಿಸುತ್ತದೆ. ಶಸ್ತ್ರವೈದ್ಯನ ಶಸ್ತ್ರದಂತೆ ಹಾಸ್ಯ ಅನನ್ಯ ಚಿತ್ರವಾಗಿರಬೇಕು." ಹೀಗೆಂದವರು ಪ್ರಸಿದ್ಧ "ಪ್ರಹಸನ ಪಿತಾಮಹ" ಟಿ.ಪಿ.ಕೈಲಾಸಂ ರವರು. ಇವರು ಅಂದಿನ ಸಮಾಜದ ರೀತಿನೀತಿಗಳನ್ನು ತಿಳಿಸಲೋಸಗ ಹೊಸ ಪ್ರಯತ್ನವನ್ನು ಮಾಡಿದರು.ಅದುವೇ ಇಂಗ್ಲಿಷ್ ಭಾಷೆ ಮಿಶ್ರಿತ ವಿಶಿಷ್ಟ ಶೈಲಿಯ ನಾಟಕಗಳು. ಅವುಗಳಲ್ಲಿ " ಟೊಳ್ಳುಗಟ್ಟಿ "ಎನ್ನುವ ನಾಟಕವನ್ನು ನಿಮಗೆ ಪರಿಚಯಿಸುತ್ತೇನೆ.

  ಇದರಲ್ಲಿ ಒಬ್ಬೊಬ್ಬರ ಮೂಲಕ ಒಂದೊಂದು ಸಂದೇಶವನ್ನು ನೀಡಿದ್ದಾರೆ. ತಂದೆ ಹಿರಿಯಣ್ಣ.  ತಾಯಿ ಭಾಗೀರಥಮ್ಮ, ಹಿರಿಮಗ ಪುಟ್ಟು ಜಾಣ ಓದಿನಲ್ಲಿ ಮುಂದು,ಇನ್ನೊಬ್ಬ ಮಾಧವ ಓದಿನಲ್ಲಿ ಹಿಂದಾದರೂ ಎಲ್ಲರಿಗೂ ಸಹಾಯಹಸ್ತ ನೀಡುತ್ತಿದ್ದ.  ತಂಗಿ ನಾಗಮ್ಮ ವಿಧವೆ. ಇಬ್ಬರು ಸೊಸೆಯಂದಿರು ಪಾತು ಮತ್ತು ಸಾತು.
ಹಿರಿಯಣ್ಣಯ್ಯ ತನ್ನ ಮಕ್ಕಳ ಬಗ್ಗೆ  ಗುಮಾಸ್ತ ಶಾಸ್ತ್ರಿಯೊಂದಿಗೆ ಮಾತನಾಡುತ್ತಾ "ನನ್ನ ಹಿರಿ ಮಗ ಪುಟ್ಟು ಪ್ಯಾಸ್ಗೀಸ್ಮಾಡಿ ಮುಂದಕ್ಬಂದ್ರೆ ಆಗ ನನ್ನೊಟ್ಟೆ ಉರಿ ತಣ್ಣಗಾದೀತು ... ದೇವರು...ನನ್ನೆಷ್ಟು ಕಷ್ಟ ಪಡಿಸಿದ್ರೂನೂ ಒಬ್ಬೊಳ್ಳೆ ಮಗನ್ನಾದ್ರೂ ಕೊಟ್ಟಿದ್ದಾನಲ್ಲ!" ಎಂದನು.
ಶಾಸ್ತ್ರಿ "ಅದ್ಯಾಕ್ಸಾಮಿ ಗುಡಿ ಬಾವಿಯಲ್ಲಿ ಬಿದ್ದ ಮಗುವನ್ನು  ಮೇಲೆತ್ತಿದ ಮಗನನ್ನು  ಮರೆತಿರಾ, 'ಇಂಥ ಧೈರ್ಯಶಾಲಿಯಾದ ಪುತ್ರರತ್ನಕ್ಕಿಂತಲೂ ಒಬ್ಬ ತಂದೆಗೆ ಶ್ರೇಷ್ಠತರವಾದ ಆಭರಣವೇ ಇಲ್ಲ' ಎನಿಸಿಕೊಂಡ ಮಗನನ್ನೇ ಮರೆತಿರಲ್ಲ?" ಎಂದನು.
ಹಿರಿಯಣ್ಣಯ್ಯ ಉದಾಸೀನದಿಂದ "ಅಂತಹ ಹೊಗಳಿಕೆಯಿಂದ ನನಗೇನು ಲಾಭ?" ಎನ್ನುತ್ತಾನೆ. 
ಮಕ್ಕಳ ರಿಸಲ್ಟ್ ಬಂದಿತು. ಎಂದಿನಂತೆ ಪುಟ್ಟು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದ. ಮಾಧವ ಅನುತ್ತೀರ್ಣನಾಗಿದ್ದನು. ಇದರಿಂದ ಕೋಪಗೊಂಡ ಅಪ್ಪ ಮಾಧವನಿಗೆ ಊಟದಲ್ಲಿ ತುಪ್ಪ, 

ಸಾರು, ಮಲಗಲು ತಲೆಗೆ ದಿಂಬು
 ಮತ್ತು ಧಾವಳಿಯನ್ನ ಕೊಡಬೇಡವೆಂದು ತಂಗಿಗೆ
ಹೇಳಿದನು. ಪುಟ್ಟುವಿನೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ ಮುಂದೆ ಓದು ಎಂದನು. "ಹಣವನ್ನು ಹೇಗೆ ಹೊಂದಿಸುತ್ತೀರ" ಪುಟ್ಟು ಕೇಳಿದಾಗ "ಮಾಧವನ ಮಾವ ಕೊಟ್ಟಿರುವ ಆಭರಣವನ್ನು ಮಾರಿ ನಿನ್ನನ್ನು ಓದಿಸುತ್ತೇನೆ" ಎಂದನು. ಹೀಗೆ ಸ್ವತಃ ತಂದೆಯೇ ತನ್ನ ಇಬ್ಬರು ಮಕ್ಕಳಲ್ಲಿ ತಾರತಮ್ಯ ತೋರಿ ಮಾನವೀಯತೆಯನ್ನು ಮರೆಯುತ್ತಾನೆ. 
ಮಾವನ ಈ ನಡತೆಯಿಂದ ನೊಂದ ಮಾಧವನ ಪತ್ನಿ ಸಾತು "ಪ್ಯಾಸಾದ್ರೇನು ಸ್ವರ್ಗಸಾಧನವೇ? ಫೇಲಾದ್ರೇನು ನರಕಪ್ರಾಪ್ತಿಯೇ? ಹೀಗೆ ಅನ್ನಾ ನೀರಿಲ್ದೆ ಚಿತ್ರಹಿಂಸೆ ಮಾಡೋದೇ ? ಮನುಷ್ಯನಿಗೆ ಗುಣ ಮುಖ್ಯವಲ್ಲವೇ? ಬರೀ ಹಣ ಅಂತಸ್ತುಗಳೇ ಮುಖ್ಯಾನಾ?" ಎಂದು ನೊಂದು ಹೇಳುವುದರ ಮೂಲಕ ಸಮಾಜದ ಅಂದಿನ ಚಿತ್ರಣವನ್ನು  ನೀಡಿದ್ದಾರೆ.
ಇನ್ನೊಬ್ಬ ಸೊಸೆ ಪಾತು ಶ್ರೀಮಂತ ಮನೆಯ ಮಗಳು. ಇಂಗ್ಲಿಷ್, ಪಿಟೀಲು, ಹಾರ್ಮೋನಿಯಂ ಎಲ್ಲವನ್ನೂ ಕಲಿತ ಧೈರ್ಯವಂತಳು. ಮನೆಯಲ್ಲಿ ಹೆಣ್ಣುಮಕ್ಕಳು ಬರೆಯಬಾರದು, ಸಾಬೂನು ಉಪಯೋಗಿಸಬಾರದು ಎನ್ನುವುದನ್ನೆಲ್ಲಾ ವಿರೋಧಿಸುತ್ತಿದ್ದಳು. ನಾಗಮ್ಮ ತನ್ನ ವೈಧವ್ಯಕ್ಕೆ ಹಾಗೂ ಮಾಧವನು ಫೇಲಾದುದಕ್ಕೆ ಸಾತುವಿನ ಕಾಲ್ಗುಣವೇ ಕಾರಣ ಎಂದು ಸಾತುವನ್ನು ಬೈಯ್ದಾಗ "ಅವರ ಸ್ಥಿತಿಗೆ ನೀ ಹೇಗೆ ಕಾರಣ?" ಅಳಬೇಡ ಎಂದು ಸಮಾಧಾನ ಹೇಳುತ್ತಿದ್ದಳು. ಇಲ್ಲಿ ನಾಗಮ್ಮನ ಮೂಢನಂಬಿಕೆ ಹಾಗೂ ಪಾತುವಿನ ಮೂಲಕ ಅದು ತಪ್ಪು ಎಂದು ತಿಳಿಸಿದ್ದಾರೆ. 
ತಾಯಿ ಜ್ವರದಿಂದ ಮಲಗಿ ನರಳುತ್ತಿದ್ದರು ಹಾಗೂ ಪುಟ್ಟಮಗು ಹಸಿವಿನಿಂದ ಹಾಲಿಲ್ಲದೆ ಆಳುತ್ತಿದ್ದರು ಯಾವುದನ್ನು ಗಮನಿಸದೇ ತನ್ನಷ್ಟಕ್ಕೆ ತಾನೇ ಓದುತ್ತಿದ್ದನು ಪುಟ್ಟ. ಹೊರಗೆ ಔಷಧ ತರಲು ಹೋಗಿದ್ದ ಮಾಧವ ಬಂದು ತಾಯಿಗೆ ಔಷಧಿ ಕೊಟ್ಟುನು.  ಮನೆಯಲ್ಲಿ ಹಾಲಿಲ್ಲ ಎಂದಾಗ ಮತ್ತೊಮ್ಮೆ ಹೊರಹೋಗಿ ಹಾಲು ತರುವುದನ್ನು ನೋಡಿದ ಪುಟ್ಟು "ನೀನು ಈ ಪ್ಯೂನ್ ಕೆಲಸಕ್ಕೆ ಫಿಟ್ಟು ಈ ಕೆಲಸಗಳನ್ನು ಮಾಡ್ತಾಯಿದ್ದರೆ ಫ್ಯೂಚರ್ ಕೆರಿಯರ್ ಎಲ್ಲಿಂದ ಬರುತ್ತೆ?" ಎಂದು ಹೇಳುತ್ತಿದ್ದನು. ತಾಯಿಯ ನರಳಾಟ ಮಗುವಿನ ಅಳುವಿನಿಂದ "ನನಗೆ ಓದಲು ಆಗ್ತಾಯಿಲ್ಲ" ಎಂದ ಪುಟ್ಟವಿನ ಮಾತಿನಿಂದ ಕೋಪಗೊಂಡ ಮಾಧವ "ನಿನಗೆ ಓದೇ ಹೆಚ್ಚಾ, 'ನಾವು ಈ ಭೂಮಿಯಲ್ಲಿ ವಾಸಿಸೋಕೆ ದೇವರಿಗೆ ಕೊಡಬೇಕಾದ ಬಾಡ್ಗೆ ಏನೆಂದರೆ ನಮ್ಮ ಸುತ್ತಮುತ್ತಲೂ ವಾಸಿಸುವ ಜನರಿಗೆ ಉಪಯೋಗವಾಗಿರುವುದು' ಎಂದು ಅಮ್ಮ ಹೇಳಿದ ಮಾತುಗಳು ನಿನಗೆ ನೆನಪಿಲ್ಲವೇ?" ಎಂದು ಕೇಳಿದನು. ಇದರಿಂದ ಮನೆಯಲ್ಲಿ ತಾಯಿ ಮಕ್ಕಳಿಗೆ ವಿದ್ಯೆಯ ಜೊತೆ ಸಂಸ್ಕೃತಿಯ ಅರಿವನ್ನು ಮೂಡಿಸಿದ್ದರು ಎಂಬುದನ್ನು ತೋರಿಸಿದ್ದಾರೆ. 
ಒಮ್ಮೆ ಮನೆಯ ಹಿಂಭಾಗಕ್ಕೆ ಬೆಂಕಿ ಬಿದ್ದಿತು. ಎಚ್ಚರಗೊಂಡ ಪುಟ್ಟು ತನ್ನ ಪುಸ್ತಕಗಳನ್ನೆಲ್ಲಾ ಹೊರಗೆ ತೆಗೆದುಕೊಂಡು ತಾನು ಮನೆಯ ಹೊರ ಬಂದು ಕೂರುತ್ತಾನೆ. ಆದರೆ ಎಚ್ಚರಗೊಂಡ ಮಾಧವ ಮೊದಲು ತಾಯಿ ಮಗುವನ್ನು ಹೊರಗೆ ಕರೆದುಕೊಂಡು ಬರುತ್ತಾನೆ. ಹಿಂದೆ ತಂದೆ ಮಲಗಿರುವುದನ್ನು ತಿಳಿದು ಬೆಂಕಿಯನ್ನು ಲೆಕ್ಕಿಸದೆ ಒಳ ನುಗ್ಗಿ ತಂದೆಯನ್ನು ಹೊರ ತರುತ್ತಾನೆ. ಪುಟ್ಟುವನ್ನು ಕಾಣದೆ ತಾಯಿ ಪುಟ್ಟು ಒಳಗಿರಬಹುದು ಎಂದಳು. ಪುನಃ ಒಳ ನುಗ್ಗಿ ಪುಟ್ಟುವನ್ನು ಹುಡುಕುತ್ತಿರಬೇಕಾದರೆ ಹೊರ ಬಂದ ತಾಯಿ ಪುಟ್ಟುವನ್ನು ಕಂಡು " ಮಾಧು ಪುಟ್ಟು ಇಲ್ಲೇ ಇದ್ದಾನೆ ನೀನು ಹೊರಗೆ ಬಾ" ಎಂದು ಕೂಗಿದಳು. ಅಷ್ಟರಲ್ಲಿ ಗದ್ದಲದಿಂದ ಅಕ್ಕಪಕ್ಕದವರು ಹೊರ ಬಂದು ಮೂರ್ಛಿತನಾಗಿದ್ದ ಮಾಧವನನ್ನು ಹೊರ ತಂದು ಉಪಚರಿಸಿದರು. 
  ಶಾಸ್ತ್ರಿ "ನೋಡಿ ನಿಮ್ಹುಡುಗನ ಧೈರ್ಯ, ಅವನೊಬ್ಬನಿಲ್ಲದಿದ್ದರೆ ನಿಮ್ಮ ಕುಟುಂಬ ನಾಶವಾಗುತ್ತಿತ್ತು. ಆದ್ದರಿಂದಲೇ ಸ್ವಾಮಿ 'ಟೊಳ್ಳು ಟೊಳ್ಳೇ, ಗಟ್ಟಿ ಗಟ್ಟಿನೇ' ಎಂದು ಈಗಲಾದರೂ ತಿಳಿಯಿತಾ?" ಎಂದರು.
ಒಟ್ಟಾರೆ ಓದು ವಿದ್ಯೆಯೇ ಮುಖ್ಯವಲ್ಲ ಮನುಜರಲ್ಲಿ ಮಾನವೀಯತೆ, ಸಹಾಯ ಮಾಡುವ ಗುಣವಿರಬೇಕು. ಒಂದೇ ಮನೆಯಲ್ಲಿ ಹಿರಿಯಣ್ಣಯ್ಯನಿಂದ ಕಲಿತ ಪುಟ್ಟುವಿನ ಹಾಗು ಭಾಗೀರಥಮ್ಮ ಬೆಳೆಸಿದ ಮಾಧವನ ಸ್ವಭಾವದಲ್ಲಿ  ಎಷ್ಟು ವ್ಯತ್ಯಾಸವಿದೆ. ಸ್ವಾರ್ಥಿಯಾದ ಪುಟ್ಟು ಬೆಂಕಿಯ ಘಟನೆಯಲ್ಲಿ ತನ್ನೊಬ್ಬನನ್ನೇ ರಕ್ಷಿಸಿಕೊಂಡನು. ಆದರೆ ಮಾಧು ತನ್ನ ಕುಟುಂಬವನ್ನು  ಉಳಿಸಿಕೊಂಡನು. ಹೀಗೆ "ಮನೆಯೇ ಮೊದಲ ಪಾಠಶಾಲೆ ಜನನಿಯೇ ಮೊದಲ ಗುರು" ಎಂಬಂತೆ ಅಮ್ಮನಿಂದ ಕಲಿತ ಮಾಧು ನಿಸ್ವಾರ್ಥಿಯಾಗಿ ಮಾನವೀಯತೆ ಮೊದಲಾದ ಜೀವನಮೌಲ್ಯಗಳನ್ನು ಕಲಿತನು. ಹೀಗೆ ಭಾಗೀರಥಮ್ಮನಂತೆ ಶಾಲೆಗಳಲ್ಲೂ ಸಹ ಕೇವಲ ಅಂಕಗಳಿಗೋಸ್ಕರ ಮಕ್ಕಳಿಗೆ ಶಿಕ್ಷಣ ನೀಡದೆ ಅವರಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿ ಸರ್ವಾಂಗೀಣ ಅಭಿವೃದ್ಧಿಯ ಕಡೆ ಗಮನ ಹರಿಸಿದರೆ ನಮ್ಮ ದೇಶದ ಅಭಿವೃದ್ಧಿ ಸಾಧ್ಯ ಎಂಬ ಸಂದೇಶವನ್ನು "ಟೊಳ್ಳು ಗಟ್ಟಿ  ಅಥವಾ ಮಕ್ಕಳಿಸ್ಕೂಲ್ ಮನೇಲಲ್ವೇ" ಎಂಬ ಈ ನಾಟಕದ ಮೂಲಕ ನೀಡಿದ್ದಾರೆ ಟಿ.ಪಿ.ಕೈಲಾಸಂರವರು.
- ಎಂ.ಎಸ್.ವಿಜಯಲಕ್ಷ್ಮಿ 

3 ಕಾಮೆಂಟ್‌ಗಳು:

Navee ಹೇಳಿದರು...

ರಾಗಿ.ಬತ್ತ. ಸತ್ತ್ವದಂತೆ ... ವಿದ್ಯಾಭ್ಯಾಸ ಕಲಿತ ಮಕ್ಕಳು ಅನ್ನದ ಅಗುಳಿನ ರಾಗಿಯಸತ್ತ್ವ ಅಂತರಂಗದಲ್ಲಿ ಇರಬೇಕು.

Vani Bhandari ಹೇಳಿದರು...

ಟಿ.ಪಿ. ಯುವ ನಾಟಕ ಬರಹಗಾರರಿಗೆ ಮೇಟಿ ಅತ್ಯದ್ಭುತ ಬರಹಗಾರರು

Vani Bhandari ಹೇಳಿದರು...

ಟಿ.ಪಿ ಅವರ ಸಾಹಿತ್ಯ ಓದುವುದೆ ಒಂದು ಹಬ್ಬ
ಮನಸ್ಸಿಗೆ ಆನಂದ ನೀಡುತ್ತದೆ.