Pages

ಸರಣಿ ಲೇಖನ - 3 - ನಾನೇಕೆ ನಾಸ್ತಿಕ


(ಕಳೆದ ಸಂಚಿಕೆಯಿಂದ ಮುಂದುವರೆದಿದೆ)

[ಭಗತ್ ಸಿಂಗ್ ರವರ "ನಾನೇಕೆ ನಾಸ್ತಿಕ" ಪುಸ್ತಕದ ಅನುವಾದವಿದು]


[1930-31ರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಬಾಬಾ ರಣಧೀರ್ ಸಿಂಗ್‍ರವರು ಲಾಹೋರ್ ಸೆಂಟ್ರಲ್ ಜೈಲಿನಲ್ಲಿದ್ದರು. ಅವರು ದೇವರಲ್ಲಿ ನಂಬಿಕೆಯಿದ್ದ ಧರ್ಮನಿಷ್ಠ ವ್ಯಕ್ತಿ. ಭಗತ್‍ಸಿಂಗ್ ನಾಸ್ತಿಕರು ಎಂದು ತಿಳಿದಾಗ ಅವರಿಗೆ ತುಂಬಾ ನೋವಾಯಿತು. ಅವರು ಮರಣದಂಡನೆಯ ಸೆಲ್ (condemned cell) ನಲ್ಲಿ ಹೇಗೋ ಭಗತ್‍ಸಿಂಗ್‍ರನ್ನು ಭೇಟಿ ಮಾಡುವುದರಲ್ಲಿ ಯಶಸ್ವಿಯಾದರು. ದೇವರ ಅಸ್ತಿತ್ವದ ಬಗ್ಗೆ ನಂಬಿಕೆ ತರಲು ಪ್ರಯತ್ನಿಸಿ ವಿಫಲರಾದರು. ಬಾಬಾ ರಣಧೀರ್ ಸಿಂಗ್ ಕೋಪವನ್ನು ತಡೆದುಕೊಳ್ಳಲಾಗದೆ ಮೂದಲಿಸುತ್ತಾ ಹೇಳಿದರು: “ನಿಮಗೆ ಖ್ಯಾತಿಯಿಂದ ತಲೆ ತಿರುಗಿದೆ., ಅಹಂಕಾರ ಬಂದಿದೆ; ಅದು ನಿಮ್ಮ ಮತ್ತು ದೇವರ ನಡುವೆ ಕಪ್ಪು ತೆರೆಯನ್ನು ಎಳೆದಿದೆ.” ಆ ಮಾತಿಗೆ ಉತ್ತರಿಸುತ್ತಾ ಭಗತ್‍ಸಿಂಗ್ ಈ ಉತ್ತರವನ್ನು ಬರೆದರು.]

ನೀವು ಪ್ರಚಲಿತ ನಂಬಿಕೆಯನ್ನು ವಿರೋಧಿಸಲು ಹೋಗಿ, ಒಬ್ಬ ನಾಯಕನನ್ನು, ಸಾಮಾನ್ಯವಾಗಿ ಯಾರನ್ನು ವಿಮರ್ಶಾತೀತರೆಂದು ನಂಬುತ್ತಾರೋ – ಏಕೆಂದರೆ ಅವರು ಪತನಾತೀತರೆಂದು ತಿಳಿಯಲಾಗಿದೆ – ಆ ಮಹಾನಾಯಕನನ್ನು ಟೀಕಿಸಲು ಹೋಗಿ, ಆಗ ನಿಮ್ಮ ವಾದದ ಬಲವು, ಜನಸ್ತೋಮವು ನಿಮ್ಮನ್ನು ಜಂಬಗಾರನೆಂದು ಹೀಗಳೆಯುವಂತೆ ಮಾಡುತ್ತದೆ. ಇದು ಮಾನಸಿಕ ಜಡತೆಯಿಂದ ಬರುತ್ತದೆ. ವಿಮರ್ಶೆ ಮತ್ತು ಸ್ವತಂತ್ರ ವಿಚಾರಗಳು – ಇವೆರೆಡೂ ಕ್ರಾಂತಿಕಾರಿಯು ಪರಭಾರೆ ಮಾಡಲಾಗದ ಗುಣಗಳು. ಮಹಾತ್ಮಾಜೀ ಮಹಾನರಾದುದರಿಂದ ಯಾರೂ ಅವರನ್ನು ಟೀಕಿಸಬಾರದು. ಅವರು ಎತ್ತರಕ್ಕೇರಿರುವ ಕಾರಣ, ಅವರು ಹೇಳಿದುದೆಲ್ಲವೂ ಸರಿ – ಅದು ರಾಜಕೀಯ ಅಥವಾ ಧರ್ಮ, ಆರ್ಥಿಕತೆ ಅಥವಾ ನೈತಿಕತೆ, ಯಾವುದೇ ಕ್ಷೇತ್ರವಾಗಿರಬಹುದು. “ಹೌದು, ಅದೇ ಸರಿ” ಎನ್ನುವ ಮನೋಭಾವವು ಪ್ರಗತಿಯೆಡೆಗೆ ಕೊಂಡೊಯ್ಯಲಾರದು, ಬದಲಿಗೆ ಅದು ಖಡಾಖಂಡಿತವಾಗಿ ಪ್ರತಿಗಾಮಿ.
ನಮ್ಮ ಪೂರ್ವಜರು ಅತಿ ಮಾನುಷ ಶಕ್ತಿಗಳಲ್ಲಿ, ಸರ್ವಶಕ್ತ ದೇವರ ಬಗ್ಗೆ ನಮ್ಮಲ್ಲಿ ನಂಬಿಕೆಯನ್ನು ಬೆಳೆಸಿರುವ ಕಾರಣ, ಯಾರಾದರೂ ಆ ನಂಬಿಕೆಯ ಸತ್ಯಾಸತ್ಯತೆಯನ್ನು ಅಥವಾ ಆ ಸರ್ವಶಕ್ತನ ಅಸ್ತಿತ್ವವನ್ನೇ ಪ್ರಶ್ನಿಸುವ ದೈರ್ಯ ಮಾಡಿದರೆ, ಆತನನ್ನು ಮತಭ್ರಷ್ಟನೆಂದೋ ಅಥವಾ ತತ್ವಭ್ರಷ್ಟನೆಂದೋ ಕರೆಯಲಾಗುತ್ತದೆ. ಆತನ ವಾದಗಳು ಎದುರು ವಾದಗಳಿಂದ ಸೋಲಿಸಲಾಗದಷ್ಟು ಗಟ್ಟಿಯಾಗಿದ್ದರೆ, ಆತನ ಉತ್ಸಾಹವು ಸರ್ವಶಕ್ತನ ಕೋಪದಿಂದಾಗುವ ದುರಾದೃಷ್ಟಗಳ ಭಯದಿಂದ ಕುಗ್ಗಲಾಗದಷ್ಟು ಬಲವಾಗಿದ್ದರೆ, ಆತನನ್ನು ಜಂಬಗಾರನೆಂದು  ಬಣ್ಣಿಸುತ್ತಾರೆ. ಹಾಗಾದರೆ, ಈ ವ್ಯರ್ಥ ಚರ್ಚೆಗೋಸ್ಕರ ಸಮಯವನ್ನು ಹಾಳು ಮಾಡುವುದೇಕೆ? ಇಡೀ ವಿಷಯದ ಬಗ್ಗೆ ವಾದಿಸುವ ಪ್ರಯತ್ನವೇಕೆ? ಈ ಪ್ರಶ್ನೆ ಜನತೆಯ ಮುಂದೆ ಪ್ರಥಮ ಬಾರಿಗೆ ಬರುತ್ತಿದೆ ಮತ್ತು ಇದನ್ನು ಈ ಯಥಾರ್ಥ ಸಂಗತಿಯ ಶೈಲಿಯಲ್ಲಿ ಪ್ರಥಮ ಬಾರಿಗೆ ಚರ್ಚಿಸಲಾಗುತ್ತಿದೆ, ಆದುದರಿಂದಲೇ ಈ ಸುದೀರ್ಘ ಚರ್ಚೆ.
ಮೊದಲನೆ ಪ್ರಶ್ನೆಗೆ ಸಂಬಂಧಿಸಿದಂತೆ, ನನ್ನನ್ನು ನಾಸ್ತಿಕತೆಗೆ ಕೊಂಡೊಯ್ದಿರುವುದು ಜಂಬವಲ್ಲವೆಂಬುದನ್ನು ಸ್ಪಷ್ಟಪಡಿಸಿದ್ದೇನೆಂದು ನನ್ನ ಭಾವನೆ. ನನ್ನ ವಾದದ ಶೈಲಿಯು ಮನವರಿಕೆಯಾಗುವಂತಿದೆಯೋ ಅಥವಾ ಇಲ್ಲವೋ ಎಂಬುದನ್ನು ತೀರ್ಮಾನಿಸುವುದು ಓದುಗರು, ನಾನಲ್ಲ. ಪ್ರಸ್ತುತ ಸಂದರ್ಭದಲ್ಲಿ ದೇವರಲ್ಲಿನ ನನ್ನ ನಂಬಿಕೆಯು ನನ್ನ ಜೀವನವನ್ನು ಸುಲಭಗೊಳಿಸಬಹುದಿತ್ತು. ನನ್ನ ಭಾರವನ್ನು ಹಗುರಗೊಳಿಸಬಹುದಿತ್ತು ಮತ್ತು ದೇವರಲ್ಲಿನ ನನ್ನ ಅಪನಂಬಿಕೆಯು ಇಡೀ ವಾತಾವರಣವನ್ನು ನಿಸ್ಸಾರಗೊಳಿಸಿದೆ; ಮತ್ತು ಪರಿಸ್ಥಿತಿಯು ಇನ್ನೂ ಭೀಕರ ರೂಪವನ್ನು ಪಡೆಯಬಹುದೆಂದು ನನಗೆ ಗೊತ್ತು. ಸ್ವಲ್ಪ ಆಧ್ಯಾತ್ಮಿಕತೆಯು ಅದನ್ನು ಕಾವ್ಯಮಯಗೊಳಿಸಬಹುದು. ಆದರೆ ನನ್ನ ಭವಿಷ್ಯನ್ನು ಎದುರಿಸಲು ನನಗೆ ಯಾವ ಉತ್ತೇಜಕದ ಸಹಾಯವೂ ಬೇಡ. ನಾನೊಬ್ಬ ವಾಸ್ತವವಾದಿ. ವೈಚಾರಿಕತೆಯ ಸಹಾಯದಿಂದ ನನ್ನಲ್ಲಿರುವ ಸಹಜ ಪ್ರವೃತ್ತಿಯ ಮೇಲೆ ಹತೋಟಿ ಸಾಧಿಸಲು ಪ್ರಯತ್ನಿಸುತ್ತಾ ಬಂದಿದ್ದೇನೆ. ಈ ಗುರಿಯನ್ನು ಮುಟ್ಟುವಲ್ಲಿ ನಾನು ಪ್ರತಿಸಲವೂ ಸಫಲನಾಗಿಲ್ಲ. ಆದರೆ ಪ್ರಯತ್ನಿಸುವುದು ಮತ್ತು ಹೋರಾಡುವುದು ಮನುಷ್ಯನ ಕರ್ತವ್ಯ. ಯಶಸ್ಸು ನಿಂತಿರುವುದು ಅವಕಾಶ ಮತ್ತು ಪರಿಸ್ಥಿತಿಯ ಮೇಲೆ.
ಎರಡನೇ ಪ್ರಶ್ನೆಯ ಬಗ್ಗೆ: ದೇವರ ಅಸ್ತಿತ್ವದ ಹಿಂದೆಯಿದ್ದ ಮತ್ತು ಈಗಲೂ ಪ್ರಚಲಿತವಿರುವ ನಂಬಿಕೆಗಳ ಬಗ್ಗೆ ಅಪನಂಬಿಕೆಯಿರಲು ಜಂಬವಲ್ಲದಿದ್ದರೆ, ಬೇರಾವುದಾದರೂ ಕಾರಣವಿರಲೇಬೇಕು. ಈಗ ಅದೇ ವಿಷಯಕ್ಕೆ ಬರುತ್ತೇನೆ. ಅದಕ್ಕೆ ಕಾರಣವಿದೆ. ನನ್ನ ಪ್ರಕಾರ, ಸ್ವಲ್ಪ ವಿಚಾರಶಕ್ತಿಯನ್ನು ಹೊಂದಿರುವ ಯಾವುದೇ ವ್ಯಕ್ತಿ ತನ್ನ ಸುತ್ತಮುತ್ತಲಿನ ಪರಿಸ್ಥಿತಿಯ ಬಗ್ಗೆ ವಿಚಾರ ಮಾಡಲು ಪ್ರಯತ್ನಿಸುತ್ತಾನೆ. ಎಲ್ಲಿ ನೇರವಾದ ಸಾಕ್ಷಿ-ಪ್ರಮಾಣಗಳು ದೊರಕುವುದಿಲ್ಲವೋ, ಅಲ್ಲಿ ತತ್ವಶಾಸ್ತ್ರವು ಪ್ರಮುಖ ಸ್ಥಾನವನ್ನು ಪಡೆಯುತ್ತದೆ. ನಾನು ಹಿಂದೆಯೇ ತಿಳಿಸಿದ ಹಾಗೆ, ತತ್ವಶಾಸ್ತ್ರವು ಮಾನವ ದೌರ್ಬಲ್ಯದ ಪ್ರತಿಫಲವೆಂದು ಕ್ರಾಂತಿಕಾರಿ ಸ್ನೇಹಿತರೊಬ್ಬರು ಹೇಳುತ್ತಿದ್ದರು. ಈ ಪ್ರಪಂಚದ ರಹಸ್ಯ, ಅದರ ಭೂತಕಾಲ, ವರ್ತಮಾನ ಮತ್ತು ಭವಿಷ್ಯತ್, ಅದರ ‘ಏಕೆ’ ಮತ್ತು ‘ಏತಕ್ಕಾಗಿ’ ಎಂಬ ಪ್ರಶ್ನೆಗಳು, ಇವುಗಳನ್ನು ಬಗೆಹರಿಸಲು ಪ್ರಯತ್ನಿಸುವುದಕ್ಕೆ ನಮ್ಮ ಪೂರ್ವಜರಿಗೆ ಸಾಕಷ್ಟು ವಿರಾಮವಿದ್ದಾಗ, ಅವರಿಗೆ ನೇರ ಸಾಕ್ಷ್ಯಗಳ ಭಯಂಕರ ಕೊರತೆಯಿದ್ದುದರಿಂದ ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದರು. ಅದರಿಂದಾಗಿಯೇ ಕೆಲವೊಮ್ಮೆ ವೈರುಧ್ಯದ ಮತ್ತು ಘರ್ಷಣೆಯ ರೂಪಗಳನ್ನು ಪಡೆಯುವಂತಹ ವಿವಿಧ ಧಾರ್ಮಿಕ ಪಂಥಗಳ ಮೂಲತತ್ವಗಳಲ್ಲೇ ಅಗಾಧ ವ್ಯತ್ಯಾಸಗಳನ್ನು ಕಾಣಬಹುದು. ಕೇವಲ ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ತತ್ವಶಾಸ್ತ್ರಗಳಷ್ಟೇ ಭಿನ್ನವಾದುದಲ್ಲ. ಪ್ರತಿಯೊಂದು ಭೂಖಂಡದಲ್ಲೂ ವಿವಿಧ ಚಿಂತನಾ ಪಂಥಗಳಲ್ಲೂ (School of Thoughts) ಸಹ ಭಿನ್ನತೆಗಳಿವೆ. ಪೌರ್ವಾತ್ಯ ಧರ್ಮಗಳನ್ನು ತೆಗೆದುಕೊಂಡರೆ,  ಮುಸಲ್ಮಾನರ ನಂಬಿಕೆಯು ಹಿಂದೂಗಳ ನಂಬಿಕೆಗೆ ಸರಿಹೊಂದುವುದಿಲ್ಲ. ಭಾರತ ಒಂದರಲ್ಲೇ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ವೈದಿಕ ಧರ್ಮಕ್ಕಿಂತ (Brahminism) ಸಾಕಷ್ಟು ಬೇರೆಯದೇ ಆಗಿವೆ; ಮತ್ತೆ ವೈದಿಕ ಧರ್ಮದಲ್ಲೂ ಆರ್ಯಸಮಾಜ ಮತ್ತು ಸನಾತನ ಧರ್ಮಗಳಂತಹ ವೈರುಧ್ಯದ ನಂಬಿಕೆಗಳಿವೆ. ಚಾರ್ವಾಕ ಪ್ರಾಚೀನ ಕಾಲದ ಮತ್ತೊಬ್ಬ ಸ್ವತಂತ್ರ ಚಿಂತಕ. ಹಿಂದಿನ ಕಾಲದಲ್ಲಿಯೇ ಅವನು ದೇವರ ಅಧಿಕಾರತ್ವವನ್ನು (ಅಥಾರಿಟಿಯನ್ನು) ಪ್ರಶ್ನಿಸಿದರು. ಮೂಲತತ್ವದ ಪ್ರಶ್ನೆಗಳಲ್ಲಿ ಈ ಎಲ್ಲಾ ಪಂಥಗಳೂ ವಿಭಿನ್ನವಾಗಿವೆ; ಮತ್ತೆ ಎಲ್ಲರೂ ತಾವೇ ಸರಿದಾರಿಯಲ್ಲಿದ್ದೇವೆಂದು ಭಾವಿಸುತ್ತಾರೆ. ಇಲ್ಲೇ ದುರದೃಷ್ಟವಿರುವುದು. ಪ್ರಾಚೀನ ವಿದ್ವಾಂಸರ ಮತ್ತು ಚಿಂತಕರ ಪ್ರಯೋಗಗಳನ್ನು ಹಾಗೂ ಅಭಿವ್ಯಕ್ತಿಗಳನ್ನು ಅಜ್ಞಾನದ ವಿರುದ್ಧದ, ನಮ್ಮ ಭವಿಷ್ಯದ ಹೋರಾಟಕ್ಕೆ ಮತ್ತು ಈ ನಿಗೂಢ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿಯುವುದಕ್ಕೆ ಅಡಿಪಾಯವಾಗಿ ಉಪಯೋಗಿಸಿಕೊಳ್ಳುವ ಬದಲಿಗೆ, ಈಗಾಗಲೇ ಸಾಬೀತಾಗಿರುವಂತೆ, ನಾವು ಸೋಮಾರಿತನದಿಂದ ಅವರ ಹೇಳಿಕೆಗಳ ಬಗ್ಗೆ ಹಿಂಜರಿಕೆಯಿಲ್ಲದ, ಅವಿಚಲಿತ ನಂಬಿಕೆಯ ಬಗ್ಗೆ ಹುಯಿಲೆಬ್ಬಿಸುತ್ತೇವೆ. ಈ ರೀತಿಯಲ್ಲಿ ಮಾನವನ ಪ್ರಗತಿಯಲ್ಲಿ ಜಡತೆಗೆ ಕಾರಣಕರ್ತರಾಗಿದ್ದೇವೆ.
ಪ್ರಗತಿಯ ಪರವಾಗಿ ನಿಲ್ಲುವ ಪ್ರತಿಯೊಬ್ಬ ವ್ಯಕ್ತಿಯೂ ಹಳೆಯ ನಂಬಿಕೆಯ ಪ್ರತಿಯೊಂದು ಅಂಶವನ್ನೂ ಟೀಕಿಸಬೇಕು, ಸುಮ್ಮನೆ ನಂಬಬಾರದು ಮತ್ತು ಪ್ರಶ್ನಿಸಬೇಕು. ಪ್ರಚಲಿತ ನಂಬಿಕೆಯ ಆಳ ಅಗಲಗಳನ್ನು ಹೊಕ್ಕು, ಒಂದೊಂದು ಅಂಶವನ್ನೂ ವಿಚಾರಪರತೆಯಿಂದ ನೋಡಬೇಕು. ಬಹಳ ಗಣನೀಯವಾದ ವಿಚಾರ ಮಂಥನದ ನಂತರ ಯಾರಾದರೂ ಯಾವುದೇ ಸಿದ್ಧಾಂತ ಅಥವಾ ತತ್ವಶಾಸ್ತ್ರದಲ್ಲಿ ನಂಬಿಕೆಯಿಡುವಂತಾದರೆ, ಆತನ ನಂಬಿಕೆಯು ಸ್ವಾಗತಾರ್ಹ. ಆತನ ವಿವೇಚನೆಯು ತಪ್ಪುಗ್ರಹಿಕೆಯಾಗಿರಬಹುದು, ತಪ್ಪಾಗಿರಬಹುದು, ತಪ್ಪು ದಾರಿಗೆ ಎಳೆಯಬಹುದು ಅಥವಾ ದೋಷಪೂರಿತವಾಗಿರಬಹುದು. ಆದರೆ ಆತ ಅದನ್ನು ತಿದ್ದಿಕೊಳ್ಳಬಹುದು; ಏಕೆಂದರೆ ವೈಚಾರಿಕತೆಯು ಅವನ ಜೀವನದ ಮಾರ್ಗದರ್ಶಕ ಬೆಳಕು. ಆದರೆ ಬರಿಯ ನಂಬಿಕೆ ಮತ್ತು ಕುರುಡು ನಂಬಿಕೆ ಅಪಾಯಕಾರಿ. ಅದು ಮೆದುಳನ್ನು ಮಂಕಾಗಿಸುತ್ತದೆ ಮತ್ತು ಮನುಷ್ಯನನ್ನು ಪ್ರತಿಗಾಮಿಯನ್ನಾಗಿ ಮಾಡುತ್ತದೆ. ತನ್ನನ್ನು ವಾಸ್ತವವಾದಿಯೆಂದು ಕರೆದುಕೊಳ್ಳುವವನು, ಪ್ರಾಚೀನ ನಂಬಿಕೆಯ ಸರ್ವಸ್ವವನ್ನೂ ಪ್ರಶ್ನಿಸಬೇಕು. ಅದಕ್ಕೆ ವೈಚಾರಿಕತೆಯ ದಾಳಿಯನ್ನು ಎದುರಿಸಲಾಗದಿದ್ದರೆ, ಅದು ಕುಸಿದು ಬೀಳುತ್ತದೆ. ಆಗ ಆತನ ಮೊದಲ ಕೆಲಸವೆಂದರೆ, ಎಲ್ಲವನ್ನೂ ಕಿತ್ತು ಬಿಸಾಕಿ, ಹೊಸ ತತ್ವಶಾಸ್ತ್ರ ನಿರ್ಮಾಣಕ್ಕೆ ಸ್ಥಳವನ್ನು ತೆರವು ಮಾಡಿಕೊಡಬೇಕು. ಇದು ನಕಾರಾತ್ಮಕ ಮುಖ. ಇದಾದ ನಂತರ ಕ್ರಿಯಾತ್ಮಕ ಕೆಲಸ ಆರಂಭವಾಗುತ್ತದೆ; ಅದರಲ್ಲಿ ಮರುನಿರ್ಮಾಣದ ಉದ್ದೇಶಕ್ಕಾಗಿ ಕೆಲವೊಮ್ಮೆ ಕೆಲವು ಹಳೆಯ ನಂಬಿಕೆಯ ವಸ್ತುಗಳನ್ನು ಉಪಯೋಗಿಸಬಹುದು. ನನ್ನ ವಿಷಯದಲ್ಲಾದರೆ, ಮೊದಲಿಗೆ ಈ ವಿಷಯದ ಬಗ್ಗೆ ನಾನು ಹೆಚ್ಚು ಅಧ್ಯಯನ ಮಾಡಿಲ್ಲವೆಂದು ಒಪ್ಪಿಕೊಳ್ಳುತ್ತೇನೆ. 

ನನಗೆ ಪೌರ್ವಾತ್ಯ ತತ್ವಶಾಸ್ತ್ರವನ್ನು ಅಧ್ಯಯನ ಮಾಡಬೇಕೆಂದು ಆಸೆಯಿತ್ತು; ಆದರೆ ಅದಕ್ಕೆ ಸಂದರ್ಭ ಅಥವಾ ಅವಕಾಶಗಳೇ ಸಿಗಲಿಲ್ಲ. ಆದರೆ ಚರ್ಚೆಯಲ್ಲಿ ನಕಾರಾತ್ಮಕ ಅಧ್ಯಯನವಿರುವವರೆಗೂ, ಹಳೆಯ ನಂಬಿಕೆಯ ಸತ್ಯಾಸತ್ಯತೆಯನ್ನು ಪ್ರಶ್ನಿಸುವಷ್ಟರ ಮಟ್ಟಿಗೆ ನನಗೆ ಮನವರಿಕೆಯಾಗಿದೆ ಎಂದು ನನಗನ್ನಿಸುತ್ತದೆ. ಪ್ರಕೃತಿಯ ಚಲನವಲನಗಳನ್ನು ನಿಯಂತ್ರಿಸುವ ಮತ್ತು ನಿರ್ದೇಶಿಸುವ ಪ್ರಜ್ಞಾವಂತ ಸರ್ವಶಕ್ತನ ಅಸ್ತಿತ್ವವಿಲ್ಲದಿರುವುದು ನನಗೆ ಮನವರಿಕೆಯಾಗಿದೆ. ನಾವು ಪ್ರಕೃತಿಯಲ್ಲಿ ನಂಬಿಕೆಯಿಟ್ಟಿದ್ದೇವೆ ಮತ್ತು ಇಡೀ ಪ್ರಗತಿಪರ ಚಳುವಳಿಯು ಮಾನವನು ತನ್ನ ಸೇವೆಗಾಗಿ ಪ್ರಕೃತಿಯ ಮೇಲೆ ಪ್ರಾಬಲ್ಯವನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಅದನ್ನು ನಿರ್ದೇಶಿಸಲು ಅದರ ಹಿಂದೆ ಪ್ರಜ್ಞಾವಂತ ಶಕ್ತಿಯಿಲ್ಲ. ಇದೇ ನಮ್ಮ ತತ್ವಶಾಸ್ತ್ರ.
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)


- ಎಸ್.ಎನ್.ಸ್ವಾಮಿ

ಕಾಮೆಂಟ್‌ಗಳಿಲ್ಲ: