“ಹುಷಾರಾಗಿ ಹೋಗಿ ಬಾ. ಹೋದ ತಕ್ಷಣ ಫೋನ್ ಮಾಡು. ನಿನ್ನ ಆರೋಗ್ಯದ ಕಡೆ
ಗಮನವಿರಲಿ. ಇಲ್ಲಿ ಅಪ್ಪ-ಅಮ್ಮನ ಬಗ್ಗೆ ಯೋಚನೆ ಮಾಡಬೇಡ. ನಾನೆಲ್ಲಾ ನೋಡ್ಕೋತೀನಿ. ನಿನಗೆ ರಜಾ
ಬೇಕೆನಿಸಿದರೆ ಫೋನ್ ಮಾಡು. ನಾನು ನಿಮ್ಮ ಬಾಸ್‍ಗೆ ಹೇಳ್ತೀನಿ” ರೈಲ್ವೆ ಪ್ಲಾಟ್‍ಫಾರಂನಲ್ಲಿ ಉಷಾಳ ಮಾತು ಸಾಗಿತ್ತು. ಅದೇಕೋ, ಏನೋ ಟ್ರೈನ್‍ನಲ್ಲಿ ಕುಳಿತಿದ್ದ
ಹುಡುಗಿ ಕೇವಲ ಹೂಂ, ಉಹೂಂ, ಎಂದು ಉತ್ತರಿಸುತ್ತಿದಳು. ಆಕೆಯ ಮುಖದಲ್ಲಿ ಗೆಲುವಿರಲಿಲ್ಲ. ಒಂದು ರೀತಿ ದುಃಖದ ಛಾಯೆ ಆವರಿಸಿತ್ತು.
“ನಾನೇನೋ, ಹೋಗುತ್ತಿದ್ದೇನೆ. ಅಮ್ಮಾ-ಅಪ್ಪಾ ಈ
ವಯಸ್ಸಿನಲ್ಲಿ...” ಮಧ್ಯದಲ್ಲಿ ಅವಳನ್ನು ತಡೆದ ಉಷಾ, “ಸುಮಾ, ನಾನಿದ್ದೀನಲ್ಲ. ಅವರಿಗೀಗ ಉಮಾಳನ್ನು
ಕಳೆದುಕೊಂಡದ್ದಕ್ಕಿಂತ, ನಿನ್ನನ್ನು ಈ ಸ್ಥಿತಿಯಲ್ಲಿ ನೋಡುವುದೇ ಕಷ್ಟವಾಗಿದೆ. ನೆನ್ನೆ ಚಿಕ್ಕಮ್ಮ ಏನು ಹೇಳಿದರು
ಗೊತ್ತಾ? ‘ಇರುವ ಒಬ್ಬಳನ್ನಾದರೂ ನೋಡಿಕೊಂಡು
ಬದುಕಿರೋಣವೆಂದುಕೊಂಡರೆ, ಅವಳೂ ಈ ರೀತಿ ಅನ್ನಾಹಾರ, ನಿದ್ರೆ ಬಿಟ್ಟರೆ ಏನು ಮಾಡೋಣ’ಎಂದು ಕೇಳಿದರು. ನೀನು ಸಂಧ್ಯಾಳ ಮನೆಯಿಂದ ಸಂತೋಷವಾಗಿ
ಹಿಂತಿರುಗಿದರೆ ಸಾಕು.” ಸುಮಾಳ ಕಣ್ಣಿಂದ ಕಂಬನಿ ಜಾರತೊಡಗಿತು.
“ಉಷಾ, ಅಕ್ಕ ನಮ್ಮ ಜೊತೆಗಿಲ್ಲ ಎಂದು ನಂಬಲು
ಸಾಧ್ಯವಾಗುತ್ತಿಲ್ಲ. ನಾನೇನು ಮಾಡಲಿ?”
“ಸಮಾಧಾನ ಮಾಡ್ಕೊ. ಚೀಯರ್‍ಅಪ್.” ಅಷ್ಟರಲ್ಲಿ ಮೊದಲ ವಿಷಲ್ ಕೇಳಿಸಿತು.
“ಎಲ್ಲಾ ಸರಿಯಾಗಿ ಇಟ್ಕೊಂಡಿದೀಯ ತಾನೇ?” ತಕ್ಷಣ ಉಷಾಳಿಗೆ ಊಟದ ಡಬ್ಬಿ ಸ್ಕೂಟರ್‍ನಲ್ಲಿ ಬಿಟ್ಟು ಬಂದದ್ದು ನೆನಪಾಯಿತು.
“ಒಂದ್ನಿಮಿಷ ಊಟದ ಪ್ಯಾಕೆಟ್ ತರ್ತೀನಿ” ಎಂದವಳನ್ನು ತಡೆದು, “ಬೇಡ ನೀನು ಬರುವಷ್ಟರಲ್ಲಿ ಟ್ರೈನ್ ಬಹಳ ದೂರ
ಹೋಗಿರುತ್ತೆ.” ಎಂದಳು.
“ಮತ್ತೆ, ಈಗ ಏನು ಮಾಡೋದು” ಅಲ್ಲೇ ಬಿಸ್ಕತ್ತು, ಹಣ್ಣು ತೆಗೆದುಕೊಟ್ಟರೂ, ತನ್ನ ಮರೆವಿಗೆ ಬೇಸರಿಸಿಕೊಂಡಳು.
“ಹೋಗ್ಲಿ ಬಿಡು, ಇಷ್ಟು ಚಿಕ್ಕ ವಿಷಯಕ್ಕೆ ಅಷ್ಟೊಂದು
ಬೇಜಾರು ಮಾಡಿಕೋಬೇಡ. ದಾರಿಯಲ್ಲಿ ಏನಾದರೂ ಕೊಂಡ್ಕೊತೀನಿ.”
“ಹಾಗೆ ಮಾಡು. ಟ್ರೈನ್‍ನಿಂದ
ಇಳೀಬೇಕಾದರೆ ಹುಷಾರು. . . . .” ಮಾತು ಮುಂದುವರೆಸಲು ಬಿಡೆನೆಂಬಂತೆ ಗಾಡಿ ಚಲಿಸಲಾರಂಭಿಸಿತು. ಉಷಾ ಮರೆಯಾಗುವವರೆಗೂ ಅವಳಿಗೆ
ಕೈ ಬೀಸಿ ಸುಮಾ ಹಾಗೆ ಸೀಟಿಗೊರಗಿ ಕುಳಿತಳು. ಕೆಲವೇ ನಿಮಿಷಗಳಲ್ಲಿ ಅವಳು ತನ್ನಿರುವನ್ನು ಮರೆತು
ಯಾವುದೋ ಲೋಕಕ್ಕೆ ಹೋದಳು. ಹಳೆಯ ನೆನಪುಗಳು, ಹಳೆಯ ಚಿತ್ರಗಳು.
ಶಾಲೆಗೆ
ಹೋಗುವಾಗ ತನ್ನ ಕೈ ಹಿಡಿದು ಕರೆದೊಯ್ಯುತ್ತಿದ್ದ ಅಕ್ಕ, ಪಾಠ ಹೇಳಿಕೊಡುತ್ತಿದ್ದ ಅಕ್ಕ, ತನ್ನ ತುಂಟತನ ತಡೆಯಲಾರದೆ ಕಿವಿ
ಹಿಂಡುತ್ತಿದ್ದ ಅಕ್ಕ, ನೋವು ತಾಳಲಾರದೆ ಅತ್ತರೆ ತಬ್ಬಿ ಸಂತೈಸುತ್ತಿದ್ದ ಅಕ್ಕ, ತನ್ನ ಬಾಳಿನುದ್ದಕ್ಕೂ ಜೊತೆಯಾಗಿ
ಇರುವಳೆಂದುಕೊಂಡಿದ್ದ ಅಕ್ಕ ಈಗ. . . . .
ಹದಿನೈದು
ದಿನಗಳ ಹಿಂದೆ ಸಣ್ಣ ಜ್ವರವೆಂದು ಹಾಸಿಗೆ ಹಿಡಿದವಳು ತನ್ನನ್ನು ಬಿಟ್ಟು ಶಾಶ್ವತವಾಗಿ ಹೊರಟೇ
ಹೋದಳು. ಅವಳಿಲ್ಲದೆ ತಾನು ಹೇಗೆ ಇರಬಲ್ಲೆ ಎಂಬ ಯೋಚನೆ ಅವಳಿಗೆ ಬರಲಿಲ್ಲವೆ? ಮುಂದೆ ಹೇಗೆ? ಏನೇನೋ ಹುಚ್ಚು ಆಲೋಚನೆಗಳು.
ರಾತ್ರಿಯಾಯ್ತು, ಮಲಗುವ ಸಮಯ. “ಏಳ್ತೀಯಾಮ್ಮ”ಯಾರೋ ಕರೆದಾಗಲೇ ಸುಮಾ ಈ ಲೋಕಕ್ಕೆ ಬಂದದ್ದು. “ಸ್ಟೇಷನ್ ಬಂದಿದೆ ಏನಾದರೂ ಕೊಂಡುಕೊಳ್ಳುವುದಿದ್ದರೆ
ಕೊಂಡುಕೊ.” ಸುಮಾ ಎದ್ದು ದುಡ್ಡು ತೆಗೆದುಕೊಂಡು
ಹೊರಡುವಷ್ಟರಲ್ಲಿ ಗಾಡಿ ಚಲಿಸಲಾರಂಭಿಸಿತು. “ತಿನ್ನೊ ತಂಟೆ ತಪ್ಪಿತು” ಎಂದುಕೊಂಡು ಮತ್ತೆ ಕುಳಿತುಕೊಂಡಳು.
“ಇದನ್ನು ತಗೊಮ್ಮ” ಎಲೆಯಲ್ಲಿ ಊಟವನ್ನು ಕೊಟ್ಟರು ಎದುರು ಸೀಟಿನಲ್ಲಿ
ಕುಳಿತಾಕೆ. ಆಗಲೇ ಅವಳು ತನ್ನ ಎದುರಿನಲ್ಲಿದ್ದಾಕೆಯನ್ನು ಗಮನಿಸಿದ್ದು. ಸುಮಾರು 30-35 ರ ವಯಸ್ಸಿನ ಹೆಂಗಸು.
ನೋಡಿದ
ತಕ್ಷಣ ಗೌರವ ಮೂಡುವಂತಿತ್ತು. ಆಕೆಯ ಜೊತೆಗೆ 7-8 ವರ್ಷದ ಹೆಣ್ಣು ಮಗುವಿತ್ತು.
“ಬೇಡ ಬಿಡಿ, ನನಗೇನೂ ಹಸಿವಿಲ್ಲ.”
“ತಗೊಳಮ್ಮ, ನಾಳೆ ಬೆಳಿಗ್ಗೆಯವರೆಗೂ ಏನೂ
ಸಿಗುವುದಿಲ್ಲ.”
“ಮತ್ತೆ ನಿಮಗೆ. . . .”
“ಹೆಚ್ಚಾಗಿಯೇ ತಂದಿದ್ದೆ. ತಗೊಮ್ಮ” ಆಕೆಯ ಒತ್ತಾಯಕ್ಕೆ ಮಣಿಯಲೇಬೇಕಾಯಿತು.
ಊಟವಾದ
ನಂತರ ಎಲ್ಲರೂ ಮಲಗಿದರೂ ಸುಮಾಳಿಗೆ ನಿದ್ರೆ ಬರಲಿಲ್ಲ. ಯೋಚನೆಗಳ ಮಧ್ಯದಲ್ಲಿ ಯಾವಾಗ ನಿದ್ರೆ
ಬಂದಿತೊ. ಎಚ್ಚರವಾದದ್ದು ಎದುರು ಸೀಟಿನಾಕೆಯ ದನಿ ಕೇಳಿದಾಗಲೇ.
“ಕಾಫಿ ಬಂದಿದೆ ತಗೋತೀಯೇನಮ್ಮ?” ಕೆಳಗಿಳಿದು ಮುಖ ತೊಳೆದುಕೊಂಡು ಬಂದು ಕಾಫಿ
ಕಪ್ಪನ್ನಿಡಿದಳು. ಹಾಗೆ ಮಾತುಕತೆ ಶುರುವಾಯಿತು. ಆಕೆಯ ಆತ್ಮೀಯತೆಗೆ ಸೋತು ತನ್ನ ಬಗ್ಗೆ, ತನ್ನಕ್ಕನ ಸಾವಿನ ಬಗ್ಗೆ, ಈಗ ಹೋಗುತ್ತಿರುವ ಗೆಳತಿಯ ಬಗ್ಗೆ
ಹೇಳಿದಳು. ಅವರಿಗೆ ತಾವಿಬ್ಬರೂ ಹೋಗುತ್ತಿರುವ ಸ್ಥಳ ಒಂದೇ ಎಂಬುದು ತಿಳಿಯಿತು.
ಸುಮಾಳಿಗೆ
ಆಕೆಯ ಬಗ್ಗೆ ಮಾತ್ರ ಸಂಪೂರ್ಣವಾಗಿ ತಿಳಿಯಲಾಗಲಿಲ್ಲ. ಆಕೆ ಹೇಳಿದ್ದಿಷ್ಟೆ. ತಾನು ಸ್ವಂತವಾಗಿ
ಯಾವುದೋ ಉದ್ಯೋಗ ಮಾಡುತ್ತಿರುವುದಾಗಿ, ಕೆಲಸದ ಕಾರಣದಿಂದಾಗಿ ಹೀಗೆ ಓಡಾಡುತ್ತಿರಬೇಕೆಂದು
ತಿಳಿಸಿದರು. ಆ ಮಗುವಿನ ತಂದೆಯ ಬಗ್ಗೆ ಕೇಳಿದಾಗ “ಆತನಿಲ್ಲ”ಎಂದಷ್ಟೇ ಹೇಳಿದರು. ಅದರ ಅರ್ಥವೇನೋ? ಸುಮಾ ಮತ್ತೇನೂ ಕೇಳಲೂ ಇಲ್ಲ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲೂ
ಇಲ್ಲ.
ತನ್ನ
ಯೋಚನೆಗಳಲ್ಲೇ ಮುಳುಗಿರುತ್ತಿದ್ದ ಸುಮಾಗೆ ಲಕ್ಷ್ಮಿ ತನ್ನ ಮಗುವಿನ ಬಗ್ಗೆ ವಹಿಸುತ್ತಿದ್ದ
ಕಾಳಜಿಯನ್ನು ಕಂಡು ತನ್ನಕ್ಕನ ನೆನಪೇ ಆಗುತ್ತಿತ್ತು. ಲಕ್ಷ್ಮಿ ಸುಮಾಳೊಡನೆ ಮಾತನಾಡುವಾಗಲೂ ಅದೇ
ವಾತ್ಸಲ್ಯ ಕಂಡುಬರುತ್ತಿತ್ತು. ಬಹಳ ಬೇಗ ಸುಮಾ ಲಕ್ಷ್ಮಿಯೊಡನೆ ಹೊಂದಿಕೊಂಡುಬಿಟ್ಟಳು, ಬಹುಶಃ ಲಕ್ಷ್ಮಿಯಲ್ಲಿ ತನ್ನಕ್ಕನನ್ನೇ
ಕಂಡಳೋ ಏನೋ!
ಮಧ್ಯಾಹ್ನ
ಮಲಗಿ ಎದ್ದಾಗ ಮೈ ಬಿಸಿಯಾಗಿದೆ ಎನಿಸಿತು ಸುಮಾಗೆ. ಅವಳ ಕಣ್ಣು ಕೆಂಪಗಿರುವುದನ್ನು ಗಮನಿಸಿ
ಲಕ್ಷ್ಮಿ ಅವಳ ಹಣೆಯ ಮೇಲೆ ಕೈ ಇಟ್ಟು, “ಅಯ್ಯೋ, ಜ್ವರ ಬಂದಿದೆಯಲ್ಲಾ” ಎಂದು ಎಲ್ಲಾ ಕಡೆ ಮಾತ್ರೆಗಾಗಿ
ಹುಡುಕಾಡಿ ಬಂದರು. ಕೊನೆಗೆ 2-3 ಸ್ಟೇಷನ್‍ಗಳಾದ ನಂತರ ಮಾತ್ರೆ ದೊರಕಿದ ಮೇಲೆ0iÉುೀ ಅವರಿಗೆ ತೃಪ್ತಿ.
ಸಂಜೆ ಸುಮಾ
ಮುಖ ತೊಳೆದುಕೊಂಡು ಬರಲು ಹೋದಾಗ ಪಕ್ಕದ ಕೂಪೆಯಲ್ಲಿದ್ದವರು ಕರೆದರು. “ಆಕೆ ನಿನಗೇನಾಗಬೇಕಮ್ಮಾ?”
“ಹೀಗೆ ಟ್ರೈನಿನಲ್ಲಿ ಪರಿಚಿತರಾದರು.”
“ಹಾಗಿದ್ದರೆ ಹುಷಾರಮ್ಮಾ. ಅವಳಿಂದ
ದೂರವಿರು.”
“ಏಕೆ?”
“ಅಯ್ಯೋ ಅವಳು ಅದೆಲ್ಲೋ ಇದ್ದು
ಬಂದವಳಂತಮ್ಮ. ನೀನು ಮರ್ಯಾದಸ್ಥರ ಮನೆಯವಳಂತೆ ಕಾಣ್ತೀಯಾ. ಅದಕ್ಕೇ, ಹೇಳ್ತಿದ್ದೀನಿ.”
ಸುಮಾಗೆ
ಎಲ್ಲಾ ಅಯೋಮಯವಾಗಿ ಕಂಡಿತು. “ನೀನು ಬಹಳ ಅಮಾಯಕಳಂತೆ ಕಾಣ್ತೀಯಾ.
ಅವಳು ನನಗೆ ಚೆನ್ನಾಗಿ ಗೊತ್ತು. ನಮ್ಮ ಊರೇ ಅವಳದು. ಬೊಂಬಾಯಲ್ಲಿ ಅದೇನೋ ರೆಡ್ ಲೈಟ್ ಏರಿಯ
ಅಂತಾರಲ್ಲ ಅಲ್ಲಿದ್ದು ಬಂದಿರೋಳು. ಹೋಗ್ಲಿ ಬಿಡು. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅಂತಾ
ನಮಗ್ಯಾಕೆ? ಆದ್ರೂ ನೀನು ಹುಷಾರಮ್ಮ.”
ಆಘಾತವಾಯಿತು
ಸುಮಾಗೆ. "ಛೇ, ಈಕೆಯನ್ನೇ ತಾನು ತನ್ನ ಅಕ್ಕನೆಂದು ಪರಿಗಣಿಸಿದ್ದು” ಅಸಹ್ಯವೆನಿಸಿತು. ಸೀಟಿನಲ್ಲಿ ಹೋಗಿ ಕೂರಲು ಇಷ್ಟವಾಗದೆ
ಬಾಗಿಲ ಬಳಿ ನಿಂತುಕೊಂಡಳು.
“ಎಂತೆಂಥವರು ಇರ್ತಾರೆ. ಎಷ್ಟು
ಹುಷಾರಾಗಿ ಇದ್ದರೂ ಸಾಲದು. ಬಹುಶಃ ಇದಕ್ಕೇ ಏನೋ ಆಕೆ ಆ ಮಗುವಿನ ತಂದೆಯ ಬಗ್ಗೆ ಹಾರಿಕೆ ಉತ್ತರ
ಕೊಟ್ಟಿದ್ದು” ಎಂದಿತು ಒಂದು ಮನಸ್ಸು. ಆದರೆ
ಇನ್ನೊಂದು ಮನಸ್ಸು, “ಏನು ಕಷ್ಟವಿತ್ತೋ ಏನೋ, ಯಾವ ಹೆಣ್ಣೂ ಸಹ ತಾನಾಗೇ ಆ ನರಕಕ್ಕೆ
ಹೋಗಲಾರಳು” ಎಂದಿತು. “ಏನೇ ಆಗಲಿ, ನೀನು ದೂರವಿರು” ಎಂದಿತು ಮತ್ತೊಂದು ಮನಸ್ಸು. ಈ ದ್ವಂದ್ವದಲ್ಲಿ ಅದೆಷ್ಟು ಸಮಯ ಕಳೆಯಿತೋ.
ಲಕ್ಷ್ಮಿಯ
ದನಿ ಕೇಳಿದಾಗಲೇ ಸುಮಾ ಈ ಲೋಕಕ್ಕೆ ಬಂದದ್ದು. “ಜ್ವರ ಇದೆ ಗಾಳಿಗೆ ನಿಂತಿದ್ದೀಯಲ್ಲಮ್ಮಾ?”
ಸ್ವಲ್ಪ
ಸಮಯದ ಮುಂಚೆ ಮಧುರವೆನಿಸಿದ್ದ ಆ ಸ್ವರ ಈಗ ಕರ್ಕಶವೆನಿಸಿತು. “ನೀವು ಹೋಗಿ, ಆಮೇಲೆ ಬರ್ತೀನಿ” ಎಂದಷ್ಟೇ ಹೇಳಿದಳು.
ಸ್ವಲ್ಪ
ಸಮಯದ ನಂತರ ಸುಮಾ ತನ್ನ ಕೂಪೆಗೆ ಹೋದಳು. “ತಗೋಮ್ಮಾ, ಊಟ ಮಾಡು. ಈ ಮಾತ್ರೆ ತೆಗೆದುಕೊ”
“ನನಗೆ ಬೇಡ” ಎಷ್ಟೇ ಮೃದುವಾಗಿ ಉತ್ತರ ನೀಡಬೇಕು ಎಂದುಕೊಂಡರೂ
ಅವಳಿಗೆ ಅದು ಸಾಧ್ಯವಾಗಲಿಲ್ಲ.
ಲಕ್ಷ್ಮಿ
ಸೂಕ್ಷ್ಮ ಸ್ವಭಾವದವರು. “ಏನಮ್ಮಾ? ಏಕೆ ಹೀಗಿದ್ದೀಯಾ?””
ಏನು
ಮಾಡುವುದೆಂದು ತಿಳಿಯದೆ ಪಕ್ಕದ ಕೂಪೆಯಾಕೆ ಹೇಳಿದ್ದನ್ನು ಹೇಳಿದಳು. ಮನದ ಮೂಲೆಯಲ್ಲಿ “ಆಕೆ ಇದನ್ನು ಸುಳ್ಳೆಂದು ಹೇಳಲಿ” ಎಂಬ ಭಾವನೆಯಿತ್ತು. ಆದರೆ ಲಕ್ಷ್ಮಿಯ ಉತ್ತರ ಕೇಳಿ
ದಂಗಾದಳು ಸುಮಾ.
“ಹೌದಮ್ಮಾ, ಆಕೆ ಹೇಳಿದ್ದು ನಿಜ. ಆದರೆ ಕಾರಣ
ಏನೆಂದರೆ. . . .. . . .”“ಸಾಕು ನಿಲ್ಲಿಸಿ ಪ್ಲೀಸ್.” ಸುಮಾ ಏನನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಇವಳ
ಪರಿಸ್ಥಿತಿ ಕಂಡು ಲಕ್ಷ್ಮಿ ಮೌನವಹಿಸಿದಳು.
ಸುಮಾಳ ಮನಸ್ಸು
ಕಠಿಣವಾಗಿ ಬಿಟ್ಟಿತ್ತು. “ಛೇ, ಇಷ್ಟು ಬಹಿರಂಗವಾಗಿ ಒಪ್ಪಿಕೊಳ್ಳುವ
ಈಕೆ ಎಂತಹ ಹೆಣ್ಣು?”
ಆ ರಾತ್ರಿ
ಸುಮಾ ಲಕ್ಷ್ಮಿಯಿಂದ ಊಟವನ್ನು ತೆಗೆದುಕೊಳ್ಳಲಿಲ್ಲ. ಎಷ್ಟೇ ಒತ್ತಾಯ ಮಾಡಿದರೂ ಔಷಧಿ
ತೆಗೆದುಕೊಳ್ಳಲಿಲ್ಲ. ಸುಮಾ ಲಕ್ಷ್ಮಿಯ ಎಲ್ಲ ನೆರವನ್ನು ತಿರಸ್ಕರಿಸಿದ್ದಳು.
ಆಕೆ ಕಂಬನಿ
ತುಂಬಿದ ಕಣ್ಣುಗಳಿಂದಲೇ ಸುಮಾಳನ್ನು ನೋಡುತ್ತಾ, “ಸುಮಾ, ದಯವಿಟ್ಟು ಈ ಔಷಧಿ ತೆಗೆದುಕೊ, ಇಲ್ಲದಿದ್ದರೆ ಕಷ್ಟವಾಗುತ್ತದೆ” ಎಂದರು.
“ಏನೇ ಆದರೂ ನಿಮ್ಮ ಸಹಾಯ ಬೇಡ. ನಿಮ್ಮ
ಕೈನಿಂದ ಏನೇ ತೆಗೆದುಕೊಂಡರೂ ಅದು ವಿಷವೇ.” ಚಾಟಿ ಏಟು ತಿಂದವರಂತೆ ಲಕ್ಷ್ಮಿ ಕುಳಿತುಬಿಟ್ಟರು. ಮುಂದೇನೂ ಮಾತಾಡಲಿಲ್ಲ.
ಸ್ಟೇಷನ್
ತಲುಪುವುದರಲ್ಲಿ ಸುಮಾ ಏರಿದ್ದ ಜ್ವರದಿಂದಾಗಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದಳು. ಪೂರ್ಣ
ಎಚ್ಚರವಾದಾಗ ಸಂಧ್ಯಾಳ ಮನೆಯಲ್ಲಿದ್ದಳು.
“ಸಂಧ್ಯಾ, ನಿನ್ನನ್ನು ಸ್ಟೇಷನ್ನಿಗೆ
ಬರಬೇಡವೆಂದಿದ್ದೆ. ಮತ್ತೆ ನಾನೇ ಇಲ್ಲಿಗೆ ಹೇಗೆ ಬಂದೆ?”
“ಅಬ್ಬಾ, ಈಗ ಬದುಕಿದೆ. ಈ ಹಾಲು ಕುಡಿದು ಮಾತ್ರೆ ತೆಗೆದುಕೊ. ನಿನ್ನನ್ನು
ಇಲ್ಲಿಗೆ ಲಕ್ಷ್ಮಿ ಎಂಬುವವರು ಬಿಟ್ಟು ಹೋದರು.”
“ಓಹ್ ಆಕೆನಾ?”
“ಬಹಳ ವಿಚಿತ್ರ ವ್ಯಕ್ತಿ. ನೆನ್ನೆಯಿಂದ
ಸುಮಾರು ಹತ್ತು ಬಾರಿಯಾದರೂ ಫೋನ್ ಮಾಡಿದ್ದರು.ಈಗ ಸ್ವಲ್ಪ ಹೊತ್ತಿನ ಮುಂಚೆ ಕೂಡ ಫೋನ್ ಮಾಡಿದ್ದರು. ಯಾರವರು?”
“ಟ್ರೈನಿನಲ್ಲಿ ಜೊತೆಗೆ ಬಂದವರು.”
“ಆದರೆ ಅವರ ಕಾಳಜಿ ನೋಡಿದರೆ ಕೇವಲ
ಪರಿಚಯದವರು ಅನಿಸಲ್ಲ. ಹಾ! ಮರೆತಿದ್ದೆ, ನಿನಗೊಂದು ಪತ್ರ ಕೊಟ್ಟು ಹೋಗಿದ್ದಾರೆ.”
ಪತ್ರ
ಓದದಿದ್ದರೆ ಇನ್ನು ಸಂಧ್ಯಾಗೆ ಉತ್ತರ ಕೊಡಬೇಕಲ್ಲ ಎಂದುಕೊಂಡು ಪತ್ರ ಓದಲಾರಂಭಿಸಿದಳು.
“ಪ್ರೀತಿಯ ತಂಗಿ, ತಂಗಿ ಎಂದರೆ ನಿನಗೆ ಬೇಸರ
ಬರಬಹುದೇನೊ! ಆದರೆ ನನಗೆ ನೀನು ತಂಗಿಯೇ. ಪೂರ್ತಿ ವಿಷಯ ತಿಳಿದುಕೊಳ್ಳದೆ ನೀನು ಆತುರದಲ್ಲಿ ನಿರ್ಧಾರ
ತೆಗೆದುಕೊಂಡಿದ್ದೀಯ. ದಯವಿಟ್ಟು ಈ ಪತ್ರವನ್ನು ಪೂರ್ತಿ ಓದಿ ನಂತರವೇ ನಿರ್ಧರಿಸು. ನೀನು
ಪ್ರಶ್ನೆ ಕೇಳಿದಾಗ ನಾನು ಸುಳ್ಳು ಹೇಳಬಹುದಿತ್ತು. ಆದರೆ ನಾನು ಕೇಳದೆಯೇ ನೀನು ನನ್ನನ್ನು ಅಕ್ಕಾ ಎಂದು ಕರೆದೆ. ಅದಕ್ಕೆ
ಕಟ್ಟುಬಿದ್ದು ನಿನ್ನ ಬಳಿ ಸತ್ಯ ಹೇಳಲು ಹೊರಟೆ.”
“ಪದವಿ ಮುಗಿಸಿದ ನಂತರ ಹಿರಿಯ ಮಗಳಾದ
ನಾನು, ಸಂಸಾರದ ಹೊಣೆ ಹೊತ್ತು ಕೆಲಸ ಹುಡುಕಿಕೊಂಡು ಹೋದಾಗ ಈ ಜಾಲದಲ್ಲಿ ಸಿಲುಕಿ ಬಿದ್ದೆ. ಹೊರಗೆ
ಬರಲೆತ್ನಿಸಿದೆ. ಯಾರಿಗಾದರೂ ಬಾಳಬೇಕೆಂಬ ಆಸೆ ಇರುತ್ತದಲ್ಲವೇ? ಆದರೆ ಸೋತೆ. ಆತ್ಮಹತ್ಯೆ
ಮಾಡಿಕೊಳ್ಳಲು ನಿರ್ಧರಿಸಿದೆ.”
“ಆದರೆ ನನ್ನಂತೆ ಈ ಜಾಲದಲ್ಲಿ
ಸಿಕ್ಕುಬಿದ್ದ ಹೆಣ್ಣುಮಗಳೊಬ್ಬಳು ಮಗುವೊಂದಕ್ಕೆ ಜನ್ಮ ನೀಡಿ ಸಾವನ್ನಪ್ಪಿದಳು. ಸಾಯುವ ಮುನ್ನ ಆ
ಮಗುವನ್ನು ನನಗೊಪ್ಪಿಸಿದಳು. ನಾನೇನು ಮಾಡಲಿ? ನನಗೇನೊ ನನ್ನ ಜೀವ ಕಳೆದುಕೊಳ್ಳುವ ಅಧಿಕಾರವಿತ್ತು.
ಆದರೆ ಆ ಮಗುವಿನ ಜೀವ. . . .. ಅದಕ್ಕಾಗಿ ದಿನಾ ಸಾಯುತ್ತಾ ಬದುಕುಳಿದೆ."
“ಒಂದು ದಿನ ರೈಡ್ ನಡೆಯಿತು. ನಮ್ಮನ್ನು
ಹಿಡಿದ ಇನ್ಸ್ಪೆಕ್ಟರ್ ಬಹಳ ಒಳ್ಳೆಯವರು. ನನ್ನ ಕಥೆ ಕೇಳಿ ಆ ಪುಣ್ಯಾತ್ಮ ನನ್ನನ್ನು ಆ ನರಕದಿಂದ
ಬಿಡಿಸಿ ಬದುಕಲೊಂದು ದಾರಿ ಮಾಡಿಕೊಟ್ಟರು.”
“ನೀವು ಬೆಳಕಿನಲ್ಲಿರುವವರು. ನಿಮಗೆ
ಕತ್ತಲ ಬಗ್ಗೆ ತಿಳಿಯದು. ನಮ್ಮಂತಹರಿಗೆ ನಿಮ್ಮ ಮಧ್ಯೆ ಇರಲು ಅವಕಾಶ ಕೊಡದಿದ್ದರೂ ಪರವಾಗಿಲ್ಲ, ಅಸಹ್ಯ ಪಡಬೇಡಿ. ಪ್ರತಿ ಜೀವಿಗೂ
ಗೌರವಯುತವಾಗಿ ಬದುಕುವ ಆಸೆ ಇರುತ್ತದೆ ಎಂಬುದನ್ನು ಮಾತ್ರ ಯಾವಾಗಲೂ ನೆನಪಿನಲ್ಲಿಟ್ಟುಕೊ. ನೀನು
ಎಲ್ಲೇ ಇದ್ದರೂ ನಿನಗೆ ಶುಭವನ್ನೇ ಕೋರುವೆ - ಲಕ್ಷ್ಮಿ.”
ಶಾಕ್‍ಗೆ
ಒಳಗಾದವಳಂತೆ ಕುಳಿತುಬಿಟ್ಟಳು ಸುಮಾ. “ಇನ್ನೊಬ್ಬ ವ್ಯಕ್ತಿಯ ಬಗ್ಗೆ ಸಂಪೂರ್ಣ ತಿಳಿಯದೆ ಅವರ ಬಗ್ಗೆ ತೀರ್ಪು ಕೊಡುವ ನೈತಿಕ
ಹಕ್ಕಿದೆಯೇ?”- ಪ್ರಶ್ನೆ ಸುಮಾಳ ಮನಸ್ಸಿನಲ್ಲಿ ಮತ್ತೆ
ಮತ್ತೆ ಕಾಡತೊಡಗಿತು.
ಒಂದು
ಘಂಟೆಯಾದ ನಂತರ ಸಂಧ್ಯಾ ಅಲ್ಲಿಗೆ ಬಂದಾಗಲೂ ಸುಮಾ ಗರಬಡಿದವಳಂತೆ ಹಾಗೆಯೇ ಕುಳಿತಿದ್ದಳು. “ಏ, ಸುಮಾ, ಏನಾಯ್ತು.” ಅಲುಗಾಡಿಸಿದಳು.
ಬೆಚ್ಚಿಬಿದ್ದವಳಂತೆ
ಎದ್ದು, “ಸಂಧ್ಯಾ, ಈ ಬಾರಿ ಫೋನ್ ಬಂದರೆ ನನಗೇ ಕೊಡು” ಎಂದಳು.
ಅಷ್ಟರಲ್ಲಿಯೇ ಹೊರಗಡೆ ಹಾಲ್‍ನಲ್ಲಿ ಫೋನ್ ಗಂಟೆ ಮೊಳಗಿತು. “ಸುಮಾ, ಇರು ನಾನೇ ತಂದುಕೊಡ್ತೀನಿ” ಸಂಧ್ಯಾ ಕೂಗುತ್ತಿದ್ದರೂ ಕೇಳಿಸಿಕೊಳ್ಳದೆ ಹಾಲ್‍ನತ್ತ
ಓಡಿದಳು ಸುಮಾ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ